Categories
ಸಿನಿ ಸುದ್ದಿ

ಬಿರಾದಾರ್ 90ಗೆ ಸೆನ್ಸಾರ್ ತಕರಾರು? 90 ಹೊಡಿಬೇಡಿ ಬಿಡಿ ಅನ್ನುತ್ತಿದೆ ತಂಡ…

ಅಮ್ಮ ಟಾಕೀಸ್ ಬ್ಯಾನರಿನಡಿ ಇತ್ತೀಚೆಗೆ ಸುದ್ದಿಯಲ್ಲಿದ್ದ, ಹಾಸ್ಯ ನಟ ಬಿರಾದಾರ್ ಅಭಿನಯದ “90 ಹೊಡಿ ಮನೀಗ್ ನಡಿ” ಚಿತ್ರ ಸೆನ್ಸಾರ್ ಮೆಟ್ಟಿಲೇರಿದ್ದು, ಟೈಟಲ್ ಗೆ ಸಂಬಂಧಿಸಿದಂತೆ ತಗಾದೆ ಎದ್ದಿದೆ. ಅಸಲಿಗೆ, “90 ಹೊಡಿ ಮನೀಗ್ ನಡಿ” ಎಂದರೆ, ಜನರನ್ನು ನೇರವಾಗಿ ಕುಡಿತಕ್ಕೆ ಪ್ರಚೋದಿಸಿದಂತಾಗುತ್ತದೆ” ಎಂಬುದು ಮಂಡಳಿಯವರ ವಾದವಂತೆ. ಹಾಗಾಗಿ ಚಿತ್ರದ ಶೀರ್ಷಿಕೆ ಬದಲಾಯಿಸಲು ಸೂಚನೆ ನೀಡಿದೆ. ಈ ಬದಲಾವಣೆಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಸಿನಿ ತಂಡ, ತಮ್ಮ ಶೀರ್ಷಿಕೆಯನ್ನ ” 90 ಬಿಡಿ ಮನೀಗ್ ನಡಿ” ಎಂದು ಬದಲಾಯಿಸಿಕೊಂಡಿದೆ. ‘ಹೊಡಿ’ ಬದಲು ‘ಬಿಡಿ’ ಎಂದಾಗಿದೆ ಅಷ್ಟೆ.

ಏನೇ ಆದರೂ ’90’ಯೇ ಸಿನಿಮಾದ ಹೈಲೈಟ್ ಆಗಿದ್ದರಿಂದ, ಅಷ್ಟೇನು ಬೇಜಾರಿಲ್ಲ ಎನ್ನುವ ನಿರ್ಮಾಪಕಿ ರತ್ನಮಾಲಾ ಬಾದರದಿನ್ನಿ, ನಮಗೆ ಟೈಟಲ್ ಬದಲಾಯಿಸಲು ಸೂಚಿಸಿದ ಮಂಡಳಿಯವರು, ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ನಮ್ಮ ಹೆಗ್ಗಳಿಕೆ ಎನ್ನುತ್ತಾರೆ.
ಕಾಮಿಡಿ, ಕ್ರೈಮ್ ಥ್ರಿಲ್ಲರ್ ಕಥೆ ಆಧರಿಸಿದ ಈ ಚಿತ್ರಕ್ಕೆ, ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದ್ದು, ಇನ್ನಷ್ಟೆ ಚಿತ್ರದ ಪ್ರಚಾರ ಶುರುವಿಟ್ಟು, ಮೇ ತಿಂಗಳ ಹೊತ್ತಿಗೆ ಚಿತ್ರವನ್ನು ಅದ್ಧೂರಿಯಾಗಿ ತೆರೆ ಕಾಣಿಸುವ ಯೋಜನೆ ಹಾಕಿಕೊಂಡಿದ್ದೇವೆ ಎನ್ನುತ್ತಾರೆ.

ಉಳಿದಂತೆ ಡಾ. ನಾಗೇಂದ್ರ ಪ್ರಸಾದ್ ಮತ್ತು ಶಿವು ಬೇರಗಿಯವರ ಸಾಹಿತ್ಯಕ್ಕೆ ಕಿರಣ್ ಶಂಕರ್ ಸಂಗೀತ ನೀಡಿದ್ದು, ವೀರ್ ಸಮರ್ಥ್ ಹಿನ್ನೆಲೆ ಸಂಗೀತದಲ್ಲಿ ಸಾಥ್ ನೀಡಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಟೇಶ್ ಸಂಕಲನ, ರಾಕಿ ರಮೇಶ್ ಸಾಹಸ, ಚುಟು- ಚುಟು ಖ್ಯಾತಿಯ ಭೂಷಣ್ ಕೊರಿಯೋಗ್ರಫಿ ಈ ಚಿತ್ರಕ್ಕಿದ್ದು, ತಾರಾಗಣದಲ್ಲಿ ಬಿರಾದಾರ್ ಜೊತೆ ನೀತಾ ಮೈಂದರ್ಗಿ, ಪ್ರೀತು ಪೂಜಾ, ಹಿರಿಯ ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ದಿ, ಅಭಯ್ ವೀರ್, ಆರ್ ಡಿ ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಮುರುಳಿ ಹೊಸಕೋಟೆ, ರಾಜೇಂದ್ರ ಗುಗ್ವಾಡ, ರವಿದೀಪ್, ಸಂತು ಸೊಕನಾದಗಿ, ಎಲ್ಐಸಿ ಲೋಕೇಶ್ ಇದ್ದಾರೆ.

ವಿಶೇಷವಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ವೈಜನಾಥ ಬಿರಾದಾರ್ ಅವರ ಅಭಿನಯದ ಐನೂರನೇ ಚಿತ್ರ ಆಗಿರುವ ಕಾರಣಕ್ಕೆ ಈ ಸಿನಿಮಾ ಸಣ್ಣದಾಗಿ ಸದ್ದು ಮಾಡತೊಡಗಿದೆ. ಚಿತ್ರದ ಬಹುಭಾಗ ಉತ್ತರ ಕರ್ನಾಟದ ಭಾಗಗಳಲ್ಲೇ ಹೆಚ್ಚಾಗಿ ಚಿತ್ರೀಕರಣಗೊಂಡು, ಆ ಭಾಷಾ ಶೈಲಿಯಲ್ಲೇ ಚಿತ್ರ ಮೂಡಿ ಬಂದಿದ್ದು, ಅಲ್ಲಿಯ ದೇಸೀ ಸೊಗಡನ್ನೇ ಹೊತ್ತು ತಂದಿದ್ದರಿಂದ, ಸಹಜವಾಗಿಯೇ ಆ ಭಾಗದ ಜನರ ನಿರೀಕ್ಷೆ ತುಸು ಹೆಚ್ಚಾಗಿದೆ.


“ಒಂದೊಳ್ಳೆ ಪ್ರಯತ್ನವಂತೂ ಪಟ್ಟಿದ್ದೇವೆ, ಮಿಕ್ಕಿದ್ದು ಪ್ರೇಕ್ಷಕರಿಗೆ ಬಿಟ್ಟದ್ದು ಎನ್ನುವ ಚಿತ್ರತಂಡ, ಅಂದುಕೊಂಡಂತೆಯೇ ಎಲ್ಲವೂ ಆಗಿಬಿಟ್ಟರೆ, ಮೇ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬುದು ಚಿತ್ರತಂಡದ ಮಾತು.

Categories
ಸಿನಿ ಸುದ್ದಿ

ನಡೆದಾಡೋ ದೇವರ ಬಸವ ಭಾರತ; ಹಂಸಲೇಖರ ಸಿದ್ಧಗಂಗಾ ಶ್ರೀಗಳ ಮಿನಿ ಸಿನಿ ಸೀರೀಸ್…

ಈ ಸಮಾಜಕ್ಕೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ನೀಡಿದ ಕೊಡುಗೆ ಅಪಾರ. ಅಸಂಖ್ಯಾತ ಮಕ್ಕಳಿಗೆ ಅವರು ಅಕ್ಷರ, ಆಶ್ರಯ, ಅನ್ನ ನೀಡಿ ಜೀವನದ ದಾರಿ ತೋರಿಸಿದ್ದಾರೆ. ಎಂದೆಂದಿಗೂ ಅವರೊಂದು ಸ್ಫೂರ್ತಿಯ ಶಿಖರ. ಅವರ ಜೀವನದ ವಿವರಗಳನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಒಂದು ಮಹಾನ್ ಕಾರ್ಯ ನೆರವೇರಿಸಲು ಈಗ ಯೋಜನೆ ಸಿದ್ಧವಾಗಿದೆ. ಅದಕ್ಕೆ ‘ನಾದಬ್ರಹ್ಮ’ ಹಂಸಲೇಖ ಅವರು ಸಾರಥ್ಯ ವಹಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ಕುರಿತು 52 ಎಪಿಸೋಡ್‌ಗಳ ಮಿನಿ ಸಿನಿ ಸೀರಿಸ್ ನಿರ್ಮಾಣ ಮಾಡಲಾಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನ ಆಗುತ್ತಿರುವುದು ಇದೇ ಮೊದಲು. ಸಿದ್ದಗಂಗಾ ಶ್ರೀಗಳು ಮತ್ತು ಬಸವಣ್ಣನವರ ಕುರಿತು ನಿರ್ಮಾಣ ಆಗಲಿರುವ ಈ ಮಿನಿ ಸಿನಿ ಸೀರಿಸ್ ಗೆ ‘ನಡೆದಾಡೋ ದೇವರ ಬಸವ ಭಾರತ’ ಎಂದು ಶೀರ್ಷಿಕೆ ಇಡಲಾಗಿದೆ. ಇದನ್ನು ರುದ್ರೇಶ್ ಅವರು ‘ರುದ್ರ ಕಿರುಚಿತ್ರ’ ಸಂಸ್ಥೆ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಐದನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಏ.1ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜರುಗುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವದಂದು ‘ನಡೆದಾಡೋ ದೇವರ ಬಸವ ಭಾರತ’ ಮಿನಿ ಸಿನಿ ಸೀರಿಸ್ ಉದ್ಘಾಟನೆ ಆಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದನ್ನು ಉದ್ಘಾಟನೆ ಮಾಡಲಿರುವುದು ವಿಶೇಷ.

ಈ ಕುರಿತು ಮಾಹಿತಿ ನೀಡಲು ಸಂಗೀತ ನಿರ್ದೇಶಕ ಹಂಸಲೇಖ, ಶಾಸಕ ರೇಣುಕಾಚಾರ್ಯ, ‘ರುದ್ರ ಕಿರುಚಿತ್ರ’ ಸಂಸ್ಥೆಯ ರುದ್ರೇಶ್, ವಚನ ಕಾವ್ಯದಲ್ಲಿ ಪಿಎಚ್‌ಡಿ ಪಡೆದಿರುವ ಮಾಜಿ ಐಎಎಸ್ ಅಧಿಕಾರಿ ಸೋಮಶೇಖರ್ ಮುಂತಾದವರು ಭಾಗವಹಿಸಿದ್ದರು. ಈ ಮಿನಿ ಸಿನಿ ಸೀರಿಸ್ 7 ಭಾಷೆಗಳಲ್ಲಿ ಮೂಡಿಬರಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ನಿರ್ಮಾಣ ಆಗಲಿದೆ. ಅದಕ್ಕಾಗಿ 7 ತಂಡಗಳಲ್ಲಿ ಸುಮಾರು 300ಕ್ಕೂ ಅಧಿಕ ತಂತ್ರಜ್ಞರು ಕೆಲಸ ಮಾಡಲಿದ್ದಾರೆ.

‘ರುದ್ರೇಶ್ ಅವರು ನನಗೆ ಇತ್ತೀಚೆಗೆ ಪರಿಚಯ ಆದವರು. ಶಿವಕುಮಾರ ಸ್ವಾಮಿಗಳ ಕುರಿತಾಗಿ ಧಾರಾವಾಹಿ ಮಾಡಬೇಕು, ಅದಕ್ಕೆ ಸಹಾಯ ಮಾಡಿ ಅಂತ ಕೇಳಿಕೊಂಡರು. ಧಾರಾವಾಹಿ ಆದರೆ ನಾನು ಯಾಕೆ? ಅದಕ್ಕೆ ಬೇಕಾದಷ್ಟು ಜನರು ಇದ್ದಾರೆ ಅಂತ ಹೇಳಿದೆ. ನಂತರ ಅದರ ಬಗ್ಗೆ ಆಲೋಚನೆ ಮಾಡಿದೆ. ಧಾರಾವಾಹಿ ಬದಲು ಮಿನಿ ಸಿನಿ ಸೀರಿಸ್ ಮಾಡಲು ನಿರ್ಧರಿಸಿದೆವು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹಂಸಲೇಖ ಹೇಳಿದ್ದಾರೆ.

ಶಿವಕುಮಾರ ಸ್ವಾಮೀಜಿ ಅವರ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದರೆ ಸೂಕ್ತ ಎಂಬುದು ತಂಡದ ಆಶಯ. ಹಾಗಾಗಿ ಅವರಿಗೆ ಈಗಾಗಲೇ ಕಥೆಯನ್ನು ಹೇಳಲಾಗಿದೆ. ಸದ್ಯ ಅಮಿತಾಭ್ ಅವರ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಆಗಿದ್ದು, ಅವರು ಚೇತರಿಸಿಕೊಂಡ ನಂತರ ಅಂತಿಮ ನಿರ್ಧಾರ ಗೊತ್ತಾಗಲಿದೆ.

Categories
ಸಿನಿ ಸುದ್ದಿ

ನಾಡಗೀತೆಗೆ ಮನಸೋತ ರಾಜಸ್ಥಾನದ ಕನ್ನಡ ಪ್ರೇಮಿ! ಕನ್ನಡ ನನ್ನ ಬದುಕಿನ ಭಾಷೆ ಎಂದ ಮಹೇಂದ್ರ ಮುನ್ನೋತ್…


ರಾಷ್ಟ್ರಕವಿ ಕುವೆಂಪು ರಚನೆಯ ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಈ ನಮ್ಮ ನಾಡಗೀತೆ ಎಲ್ಲರ ಬಾಯಲ್ಲೂ ಗುನುಗುತ್ತದೆ. ಈಗ ಈ ಗೀತೆಗೆ ಹೊಸ ರೂಪ ನೀಡುವ ಪ್ರಯತ್ನವಾಗಿದೆ. ಈ ನಾಡ ಗೀತೆಗೆ ಈಗ ಹಲವು ಗಾಯಕರು ತಮ್ಮದೇ ಆದ ಶೈಲಿಯಲ್ಲಿ ಹಾಡಿದ್ದಾರೆ.

ಆರಂಭದಿಂದಲೂ ಕನ್ನಡ ನಾಡು ನುಡಿ ಬಗ್ಗೆ ಅಪಾರ ಗೌರವ, ಅಭಿಮಾನ ಇಟ್ಟುಕೊಂಡಿರುವ ನಟ, ನಿರ್ಮಾಪಕ, ಉದ್ಯಮಿ ಹಾಗೂ ಗೋಪ್ರೇಮಿ ಮಹೇಂದ್ರ ಮುನ್ನೋತ್ ರವರು
ನಮ್ಮ ನಾಡಗೀತೆಗೆ ಹೊಸರಾಗದ ಜೊತೆಗೆ ಹೊಸ ದೃಶ್ಯರೂಪ ನೀಡಿದ್ದಾರೆ.

ಬಿ.ಪಿ.ಹರಿಹರನ್ ಈ ಹಾಡಿನ ನಿರ್ದೇಶನ ಮಾಡಿದ್ದು, ವಿಜಯಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಪವನ್ ನೃತ್ಯ ನಿರ್ದೇಶನ ಹಾಗೂ ಕಲಾ ನಿರ್ದೇಶನ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹೇಂದ್ರ ಮುನ್ನೋತ್, ಇತ್ತೀಚೆಗೆ ನಮ್ಮ ನಾಡಗೀತೆಯನ್ನು ಮೊಟಕುಗೊಳಿಸಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿತು. ಕುವೆಂಪು ಅವರಂತಹ ಮಹಾನ್ ಕವಿ ರಚಿಸಿದ ಸಾಹಿತ್ಯವನ್ನು ಕಡಿತ ಮಾಡಿರುವುದು ಸರಿಯಲ್ಲ. ಹಾಗಾಗಿ ಈ ಗೀತೆಗೆ ಹೊಸರಾಗ ಜೋಡಿಸಿ ಚಿತ್ರೀಕರಣ ಮಾಡಿದ್ದೇವೆ. ನಾನು ರಾಜಸ್ಥಾನದಲ್ಲಿ ಜನಿಸಿದವನಾದರೂ ಕನ್ನಡವೇ ನನ್ನ ಉಸಿರು, ಈ ನೆಲ ನನಗೆ ಎಲ್ಲವನ್ನೂ ಕೊಟ್ಟಿದೆ. ಈ ಹಾಡನ್ನು ಎಲ್ಲರೂ ವೀಕ್ಷಿಸಿ ಕನ್ನಡವನ್ನು ಬೆಳೆಸಿ ಎಂದರು.

ಸಂಗೀತ ನಿರ್ದೇಶಕ ವಿಜಯಕೃಷ್ಣ ಮಾತನಾಡಿ, ಇದನ್ನು ಎಸ್ ಪಿ ಬಿ ಅವರು ಹಾಡಬೇಕಿತ್ತು. ಹಾಡುಕೇಳಿ ಒಪ್ಪಿದ್ದರು. ಹೊಸ ಟ್ಯೂನ್ ಎಲ್ಲರಿಗೂ ಇಷ್ಟವಾಗುತ್ತೆ ಎಂಬ ನಂಬಿಕೆಯಿದೆ ಎಂದರು. ನಿರ್ದೇಶಕ ಹರಿಹರನ್ ಮಾತನಾಡಿ, ಈ ಗೀತೆಯನ್ನು ಕೊಡಚಾದ್ರಿಯಲ್ಲಿ ಚಿತ್ರೀಕರಿಸಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ ಚಿಕ್ಕಮಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಿದ್ದೇವೆ.


ನಮ್ಮ ಈ ಗೀತೆಯನ್ನು ಎರಡು ಶೈಲಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ ಎಂದರು.
ಒಟ್ಟಿನಲ್ಲಿ ನಾಡಪ್ರೇಮಿಗಳಿಗೆ ಮಹಾನ್ ಕವಿ ಕುವೆಂಪು ರವರು ರಚಿಸಿರುವ ನಾಡಗೀತೆ ಮತ್ತೊಂದು ಶೈಲಿಯಲ್ಲಿ ನೋಡಲು ಆಸ್ವಾದಿಸಲು ಲಭ್ಯವಾಗಿದೆ.

Categories
ಸಿನಿ ಸುದ್ದಿ

ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಚಿತ್ರ ಫಿಕ್ಸ್; ಆಗಸ್ಟ್ 3- 2023ಕ್ಕೆ ಜೆಜಿಎಂ ರಿಲೀಸ್…

ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟ ವಿಜಯ್ ದೇವರಕೊಂಡ ಕಾಂಬೋದಲ್ಲಿ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಲೈಗರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ ಜೆಜಿಎಂ ಎಂಬ ಆಕ್ಷನ್ ಡ್ರಾಮಾ ಸಿನಿಮಾ ಉಣಬಡಿಸಲು ತಯಾರಾಗುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಮಂಗಳವಾರ ಮುಂಬೈನಲ್ಲಿ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಜನಗಣಮನ ಸಿನಿಮಾಗೆ ಮುನ್ನುಡಿ ಬರೆಯಲಾಯಿತು.

ಜೆಜಿಎಂ ಸಿನಿಮಾಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದು, ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡುತ್ತಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ.

ನಮ್ಮ ಮುಂದಿನ ಸಿನಿಮಾ ಜೆಜಿಎಂ ಬಗ್ಗೆ ಮಾಹಿತಿ ಹಂಚಿಕೊಂಡಿರುವುದು ಖುಷಿಯಾಗುತ್ತಿದೆ. ವಿಜಯ್ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಪಕ್ಕಾ ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಮಾಹಿತಿ ಹಂಚಿಕೊಂಡರು.

ವಿಜಯ್ ದೇವರಕೊಂಡ, ಪುರಿ ಪ್ರಾಜೆಕ್ಟ್ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದರು.

ವಂಶಿ ಪಡಿಪೆಲ್ಲಿ, ಜೆಜಿಎಂ ಅದ್ಭುತ ಕಥೆಯಾಗಿದ್ದು, ಇದು ಭಾರತೀಯರ ಮನ ತಟ್ಟುತ್ತದೆ. ವಿಜಯ್, ಪುರಿ, ಚಾರ್ಮಿ ಜೊತೆ ಪ್ರಾಜೆಕ್ಟ್ ಕೆಲಸ‌ ಮಾಡುತ್ತಿರುವುದು ಖುಷಿಕೊಟ್ಟಿದೆ ಎಂದರು.

ವಿದೇಶದ ನಾನಾ ಭಾಗಳಲ್ಲಿ ಶೂಟಿಂಗ್ ನಡೆಸಲು ಪ್ಲ್ಯಾನ್ ಹಾಕಿದ್ದು, ಏಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಕ್ಷನ್ ಎಂಟರ್ ಟೈನರ್ ಕಥಾನಕ ಹೊಂದಿರುವ ಜೆಜಿಎಂ ಸಿನಿಮಾ ಆಗಸ್ಟ್ 3, 2023 ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

Categories
ಸಿನಿ ಸುದ್ದಿ

ಭಟ್ಟರ ಗರಡಿಯಲ್ಲಿ ದಚ್ಚು ನಟನೆ! ವರ್ಷಗಳ ಬಳಿಕ ಕೌರವ ಪಾಟೀಲ್‌ ಕೂಡ ಬಣ್ಣ…

ಸೂರ್ಯ – ಸೋನಾಲ್ ಮಾಂತೆರೊ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ಗರಡಿ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕೌರವ ಬಿ.ಸಿ.ಪಾಟೀಲ್ ಕಾಣಿಸಿಕೊಳ್ಳುತ್ತಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ “ಗರಡಿ” ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ ತಾಣ ಬಾದಾಮಿಯಲ್ಲಿ ನಡೆದಿದೆ. ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಈ ಸುಂದರ ತಾಣದಲ್ಲಿ “ಗರಡಿ” ಚಿತ್ರದ ಟೈಟಲ್ ಸಾಂಗ್ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ. ಸಚಿವ, ನಟ ಮತ್ತು ನಿರ್ಮಾಪಕರೂ ಆಗಿರುವ ಕೌರವ ಬಿ.ಸಿ.ಪಾಟೀಲ್, ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಗರಡಿ ಮನೆಯಲ್ಲಿ ತರಬೇತಿ ಪಡೆದಿರುವ ಸಾಕಷ್ಟು ಕುಸ್ತಿ ಪಟುಗಳು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಬರೀ ಹಾಡಿನ ಚಿತ್ರೀಕರಣವಷ್ಟೇ ಅಲ್ಲದೇ ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂತೆರೊ, ಕೌರವ ಬಿ‌.ಸಿ.ಪಾಟೀಲ್ ಮುಂತಾದವರ ಅಭಿನಯದಲ್ಲಿ ಮಾತಿನ ಭಾಗದ ಚಿತ್ರೀಕರಣ ಸಹ ನಡೆದಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಈ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿ.ಹರಿಕೃಷ್ಣ ಅವರ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸೂರ್ಯ, ಸೋನಾಲ್ ಮಾಂತೆರೊ, ಕೌರವ ಬಿ.ಸಿ.ಪಾಟೀಲ್, ರವಿಶಂಕರ್, ಎಸ್.ಟಿ.ಸೋಮಶೇಖರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ (ಟಗರು), ರವಿಚೇತನ್, ತೇಜಸ್ವಿನಿ ಪ್ರಕಾಶ್ ಮುಂತಾದವರು “ಗರಡಿ” ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಅಂತು ಇಂತು ದಿಗಂತ್ ಸಿನಿಮಾ ಶುರುವಾಯ್ತು

ದಿಗಂತ್ ಹೊಸ ಸಿನಿಮಾ ಶುರುವಾಗಿದೆ. ಆ ಚಿತ್ರಕ್ಕೆ ಅಂತು ಇಂತು ಎಂದು ಹೆಸರಿಡಲಾಗಿದೆ. ಕನ್ನಡದಿಂದ ಕೆನಡಾಕ್ಕೆ ಬಾಂಧವ್ಯ ಬೆಸೆಯುವ ಚಿತ್ರವಿದು…

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಎಂಬ ಮಾತು ದೂರವಾಗುವ ಸಮಯ ಬಂದಿದೆ. ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕಿಯರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.

ಕೆನಡಾ ನಿವಾಸಿ ಬೃಂದಾ ಮುರಳೀಧರ್ “ಅಂತು ಇಂತು” ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಿರುತೆರೆ, ಹಿರಿತೆರೆ ನಟಿ ಹಾಗೂ ನಿರ್ಮಾಪಕಿ‌ ಜಯಶ್ರೀ ರಾಜ್, ಬೃಂದಾ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ. ದಿಗಂತ್ ಈ ಚಿತ್ರದ ನಾಯಕ.

ನಾನು ಮೂಲತಃ ಮೈಸೂರಿವಳು. ರಂಗ ಕಲಾವಿದೆ. ಇಪ್ಪತ್ತೈದು ವರ್ಷಗಳಿಂದ ಕೆನಡಾದಲ್ಲಿದ್ದೀನಿ. ಅಲ್ಲೇ ನಾನು ಹಾಗೂ ನನ್ನ ಪತಿ ಮುರಳಿಧರ್ ನಾಟಕ ಸೇರಿದಂತೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಾನು ಈ ಹಿಂದೆ ನಾಟ್ ನಾಟ್ ಎಂಬ ಇಂಗ್ಲಿಷ್ ಚಿತ್ರ ನಿರ್ದೇಶಿಸಿದ್ದೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇದು ಸ್ವದೇಶದಿಂದ ವಿದೇಶಕ್ಕೆ ಹೋಗಿ ನೆಲೆಸಿರುವವರ ಕಥೆ‌. ನಾವು ಎಲ್ಲೇ ಇದ್ದರೂ ನಮ್ಮ ಹುಟ್ಟಿದ ಊರಿನ ಮಮತೆ ಸದಾ ಸೆಳೆಯುತ್ತಿರುತ್ತದೆ. ಈ ರೀತಿ ಭಾವನಾತ್ಮಕ ಕಥೆಯುಳ್ಳ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ದಿಗಂತ್ ನಾಯಕನಾಗಿ ನಟಿಸುತ್ತಿದ್ದಾರೆ ‌. ಗಿರಿಜಾ ಲೋಕೇಶ್, ರವಿಶಂಕರ್ ಗೌಡ ಪ್ರಮುಖಪಾತ್ರದಲ್ಲಿರಲಿದ್ದಾರೆ‌. ಕೆನಡಾದ ಸ್ಥಳೀಯ ತಂತ್ರಜ್ಞರು ಇದರಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ‌. ಜಯಶ್ರೀ ರಾಜ್ ನನ್ನೊಂದಿಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎಂದು ಬೃಂದಾ ಮುರಳಿಧರ್ ಮಾಹಿತಿ ನೀಡಿದರು.

ನಾನು 25 ವರ್ಷಗಳಿಂದ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಾಣ ಕೂಡ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನಿರ್ದೇಶಕಿ ಬೃಂದಾ ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು ಎಂದರು ನಿರ್ಮಾಪಕಿ ಜಯಶ್ರೀ ರಾಜ್.

ನಾನು‌ ಭಾರತದಿಂದ ಕೆನಡಾಕ್ಕೆ ಬಂದ ಹುಡುಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ‌ಜಾಸ್ತಿ ಹೇಳುವ ಹಾಗಿಲ್ಲ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ದಿಗಂತ್.

ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಗಿರಿಜಾ ಲೋಕೇಶ್ ಹಾಗೂ ರವಿಶಂಕರ್ ಗೌಡ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ‌

ಕರ್ನಾಟಕ ರಾಜ್ಯದ ಮಂತ್ರಿಗಳಾದ ಶ್ರೀ ಶಂಕರ್ ಪಾಟೀಲ್ ಅವರು ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಮೇ 13ಕ್ಕೆ ಕಸ್ತೂರಿ ಮಹಲ್‌ ಪ್ರವೇಶ! ಶಾನ್ವಿ ಶ್ರೀವಾತ್ಸವ್‌ ಎಂಟ್ರಿಗೆ ದಿನಗಣನೆ…

ನಿರ್ದೇಶಕ ದಿನೇಶ್ ಬಾಬು ಕಸ್ತೂರಿ ಮಹಲ್‌ ಸಿನಿಮಾ ನಿರ್ದೇಶಿಸಿದ್ದು, ಆ ಸಿನಿಮಾ ಈಗ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾ ದಿನೇಶ್‌ ಬಾಬು ಅವರ ನಿರ್ದೇಶನದ 50ನೇ ಚಿತ್ರ ಅನ್ನೋದು ವಿಶೇಷ. ಇಲ್ಲಿ ಸಾಕಷ್ಟು ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಬಹುಭಾಷ ನಟಿ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿರುವ ಈ ಚಿತ್ರ ಮೇ 13 ರಂದು ಬಿಡುಗಡೆಯಾಗಲಿದೆ…

ಕನ್ನಡದಲ್ಲಿ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ. ಚಿತ್ರೀಕರಣವಾದ ಕೊಟ್ಟಿಗೆ ಹಾರದ ಪರಿಸರವಂತೂ ಅದ್ಭುತ. ಉತ್ತಮ ಪಾತ್ರ ನೀಡಿರುವ ದಿನೇಶ್ ಬಾಬು ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರುತ್ತಿದೆ. ನೋಡಿ ಹರಸಿ ಎಂದು ಹೇಳಿಕೊಂಡರು ಶಾನ್ವಿ ಶ್ರೀವಾತ್ಸವ್.

ರಂಗಾಯಣ ರಘು ಅವರಿಗೆ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ. ಆ ಕುರಿತು ಹೇಳಿಕೊಂಡ ಅವರು, ನಿರ್ದೇಶನದಲ್ಲಿ ಐವತ್ತು ಚಿತ್ರಗಳನ್ನು ಪೂರೈಸಿರುವ ದಿನೇಶ್ ಬಾಬು ಅವರನ್ನು ಅಭಿನಂದಿಸುತ್ತೇನೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾರರ್ ಚಿತ್ರಗಳು ಬಂದಿವೆ. ಪ್ರೇಕ್ಷಕರ ಮನ ಗೆದ್ದಿದೆ. ಆದರೆ ಇದು ವಿಭಿನ್ನ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ರಂಗಾಯಣ ರಘು.

ಇದೊಂದು ಉತ್ತಮ ಚಿತ್ರ. ನನ್ನದು ಒಳ್ಳೆಯ ಪಾತ್ರ. ಕೊಟ್ಟಿಗೆ ಹಾರದ ನಮ್ಮ ಪೂರ್ವಜರ ಮನೆಯಲ್ಲಿ(200 ವರ್ಷ ಹಳೆಯದು) ಚಿತ್ರೀಕರಣವಾಗಿದ್ದು ನಿಜಕ್ಕೂ ಸಂತೋಷ. ಅವಕಾಶ ನೀಡಿದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಅಭಿನಂದನೆ ಎಂದರು ನಾಯಕ ಸ್ಕಂದ.

ದಿನೇಶ್ ಬಾಬು ಅವರ ಹತ್ತಿರ ಹಾರರ್ ಸಿನಿಮಾ ಮಾಡೋಣ ಅಂತ ಹೇಳಿದ್ದೆ. ಉತ್ತಮ ಕಥೆ ಸಿದ್ದ ಮಾಡಿಕೊಂಡು ಸಿನಿಮಾ ಶುರು ಮಾಡಿದರು. ಇದೇ ಮೇ 13 ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ಮಾಪಕ ರವೀಶ್.

ಶೃತಿ ಪ್ರಕಾಶ್, ವತ್ಸಲಾ ಮೋಹನ್, ಕಾಶಿಮಾ, ನೀನಾಸಂ ಅಶ್ವಥ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಿನ್ನೆಲೆ ಸಂಗೀತ ನೀಡಿರುವ ರಮೇಶ್ ಕೃಷ್ಣ ಸಂಗೀತ ಬಗ್ಗೆ ಮಾಹಿತಿ ನೀಡಿದರು.

Categories
ಸಿನಿ ಸುದ್ದಿ

ನನ್ನ ಸಿನಿ ಜರ್ನಿಯಲ್ಲಿ ಕೆಜಿಎಫ್ 2 ವಿಶೇಷ ಚಿತ್ರ; ಸಂಜಯ್ ದತ್ ಮನದಾಳದ ಮಾತು…

ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಮತ್ತು ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಪ್ 2 ಚಿತ್ರ ಏಪ್ರಿಲ್ 14ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಐದು ಭಾಷೆಯಲ್ಲಿ ತಯಾರಾಗಿದೆ. ಐದು ಭಾಷೆಯಲ್ಲಿ ಟ್ರೇಲರ್ ಕೂಡ ರಿಲೀಸ್ ಆಗಿದ್ದು ಆ ಬಗ್ಗೆ ನಟ ಯಶ್, ಸಂಜಯ್ ದತ್, ರವೀನಾ ತಂಡನ್, ಶ್ರೀನಿಧಿ ಶೆಟ್ಟಿ, ಪ್ರಶಾಂತ್ ನೀಲ್ ಹೇಳಿದ್ದು ಹೀಗೆ

ಅಧೀರನಾಗಿ ಕಾಣಿಸಿಕೊಂಡಿರುವ ಸಂಜಯ್ ದತ್ ಮಾತನಾಡಿ, ಚಾಪ್ಟರ್ 2 ಒಂದೊಳ್ಳೆಯ ಅನುಭವ ಕೊಟ್ಟಿದೆ. ನನ್ನ ಈ 45 ವರ್ಷದ ಜರ್ನಿಯಲ್ಲಿ ಒಳ್ಳೆಯ ಸಿನಿಮಾ ಇದು. ಪ್ರಶಾಂತ್ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಯಶ್ ಯಂಗ್ ಬ್ರದರ್ ಇದ್ದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಪ್ರಶಾಂತ್ ನೀಲ್ ಮಾತನಾಡಿ, ಇದು ತುಂಬಾ ಮುಖ್ಯವಾದ ದಿನ. ನನ್ನ ಕನಸು ಕೂಡ ಕೆಜಿಎಫ್ ಏಪ್ರಿಲ್ 14 ರಿಲೀಸ್ ಆಗಲಿದೆ. ನಿಮ್ಮೆಲ್ಲರಿಗೂ ಇಷ್ಟವಾಗಲಿದೆ. ಕೆಜಿಎಫ್ ಇಡೀ ಇಂಡಿಯಾದಲ್ಲೇ ಜಾಗ ಮಾಡಿಕೊಂಡಿದೆ. ಅದಕ್ಕೆ ಮಾಧ್ಯಮ ಕಾರಣವೆಂದ ಅವರು, ಭುವನ್, ರವಿ ಬಸ್ರೂರು ಹಾಗು ಅವರ ತಂಡವನ್ನು ಪರಿಚಯಿಸಿ ಅವರ ಕೆಲಸ ಹೊಗಳಿದರು.
ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಅವರ ಬಗ್ಗೆ ಗುಣಗಾನ ಮಾಡಿದರು.

ಯಶ್ ಬಗ್ಗೆ ಹೇಳಿದ ಅವರು ಅವರನ್ನು ಯಾಕೆ ರಾಕಿಂಗ್ ಅಂತೀವಿ ಅಂತ ಈ ಚಿತ್ರ ನೋಡಬೇಕು. ಸಾಕಷ್ಟು ಸಂಭಾಷಣೆಯಲ್ಲಿ ಅವರು ತೊಡಗಿದ್ದರು ಅಂದರು.
ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಎಂದು ಹೇಳಿದರು.

ನಿರ್ಮಾಪಕ ವಿಜಯ್ ಕಿರಗಂದೂರು ಮಾತನಾಡಿ, ಕೆಜಿಎಫ್ ಫ್ಯಾಮಿಲಿಗೆ ಥ್ಯಾಂಕ್ಸ್ ಹೇಳಿದ ಅವರು, ಎಲ್ಲರಿಗೂ ಧನ್ಯವಾದ ಹೇಳಿದರು. ಎಂಟು ವರ್ಷದ ಹಿಂದೆ ಶುರುವಾದ ಜರ್ನಿ ಇದು. ಇಷ್ಟು ವರ್ಷದಲ್ಲಿ ಯಶ್ ಮದುವೆಯಾಗಿ, ಇಬ್ಬರು ಮಕ್ಕಳಾದವು. ಈಗ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ ನೋಡಿ ಹರಸಿ ಅಂದರು.

ಯಶ್ ಮಾತನಾಡಿ, ನಾನು ನರ್ವಸ್ ಆಗಲ್ಲ. ಆದರೆ ಗೊತ್ತಿಲ್ಲ. ವೀ ಮಿಸ್ ಯು ಅಪ್ಪು ಸರ್. ನಿನ್ನಿಂದಲೇ ಸಿನಿಮಾ ಮೂಲಕ ಹೊಂಬಾಳೆ ಫಿಲಂಸ್ ಬಂದಿದೆ. ಅಪ್ಪು ಸರ್ ಜೀವಂತ. ಶಿವಣ್ಣ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೀತೀವಿ.
ನನ್ನ ಇಂಡಸ್ಟ್ರಿ ಮೇಲೆ ನನಗೆ ಗೌರವ. ವಿಜಯ್ ಕಿರಗಂದೂರು ಇರದಿದ್ದರೆ ಆಗುತ್ತಿರಲಿಲ್ಲ. ಪ್ರಶಾಂತ್ ನೀಲ್ ಅವರಿಗೆ ಕ್ರೆಡಿಟ್ ಹೋಗಬೇಕು. ಹೊಸಬರಿದ್ದರೂ ಇಲ್ಲಿ ಕೆಲಸ ತಗೊಂಡಿದ್ದಾರೆ. ನಿರ್ದೇಶಕರು ಸಿನಿಮಾ ಪ್ರೀತಿಸುತ್ತಾರೆ. ಹೆಮ್ಮೆಯಿಂದ ಹೇಳ್ತೀನಿ ಇಲ್ಲಿದ್ದ ತಾಂತ್ರಿಕ ವರ್ಗದವರು ಬೇರೆಲ್ಲೂ ಇಲ್ಲ. ಎಲ್ಲ ಕಲಾವಿದರಿಗೂ ಥ್ಯಾಂಕ್ಸ್ ಹೇಳಿದರು.

ಶ್ರೀನಿಧಿ ಶೆಟ್ಟಿ ಮಾತನಾಡಿ, ಶಿವಣ್ಣ ಟ್ರೇಲರ್ ಲಾಂಚ್ ಮಾಡಿದ್ದು ಖುಷಿ ಕೊಟ್ಟಿದೆ 2015 ರಲ್ಲಿ ಈ ಚಿತ್ರಕ್ಕೆಚಸಹಿ ಮಾಡಿದ್ದೆ. ಇಂತಹ ಟೀಮ್ ಇದ್ದರೆ ಸಕ್ಸಸ್ ಗ್ಯಾರಂಟಿ. ದೊಡ್ಡ ಕಲಾವಿದರ ಜೊತೆ ನಾನಿದ್ದೇನೆ ಅನ್ನೋದೇ ಹೆಮ್ಮೆ ಎಂದರು.

ರವೀನಾ ಟಂಡನ್ ಸಿನಿಮಾ ಕುರಿತು ಮಾತಾಡಿದರು. ಪ್ರಶಾಂತ್ ಸ್ವೀಟೆಸ್ಟ್ ಟಫೆಸ್ಟ್ ಡೈರೆಕ್ಟರ್. ಯಶ್ ರಾಕಿಂಗ್ ಸುಪರ್ ಸೆಟ್ಸ್ ನಲ್ಲಿ ಕಂಫರ್ಟ್ ಆಗಿತ್ತು. ವಿಜಯ್ ಕಿರಗಂದೂರು ಒಳ್ಳೆಯ ಅವಕಾಶ ಕೊಟ್ಟಿದ್ದಾರೆ . ನಾನು ಸಿನಿಮಾ ನೋಡೋಕೆ ಕಾದಿದ್ದೇನೆ ಎಂದರು.

ಶಿವಣ್ಣ ಯಶ್ ಬ್ಯೂಟಿಫುಲ್ ಅಂದ್ರು. ಸಂಜಯ್ ದತ್ ಅವರ ಲುಕ್ ಬಗ್ಗೆಯೂ ಹೇಳಿದರು. ಯಶ್ ನನ್ನ ಜೊತೆ ತಮಸ್ಸು ಮಾಡಿದ್ದರು. ಈ ಚಿತ್ರವನ್ನು ನಾನು ಏಪ್ರಿಲ್ 14ರಂದು ನೋಡಲು ಕಾತುರನಾಗಿದ್ದೇನೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ ಅಂದರು.

ಸಚಿವ ಅಶ್ವತ್ಥ್ ನಾರಾಯಣ್ ಕೂಡ ಮಾತನಾಡಿ, ಕೆಜಿಎಫ್ 2 ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡುವ ಆತುರ ಹೆಚ್ಚಿಸುತ್ತೆ. ಹಾಲಿವುಡ್ ರೇಂಜ್ ಗೆ ಸಿನಿಮಾ ಇದೆ ಅನ್ನೋದು ಈ ಟ್ರೇಲರ್ ನೋಡಿದವರಿಗೆ ಗೊತ್ತಾಗುತ್ತೆ. ಎಲ್ಲರಿಗೂ ಒಳ್ಳೆಯದಾಗಲಿ. ನಾನು ಸಚಿವನಾಗಿ ಇಲ್ಲಿ ಬಂದಿಲ್ಲ. ಒಬ್ಬ ಅಭಿಮಾನಿಯಾಗಿ ಬಂದಿದ್ದೇನೆ ಎಂದರು.

ಪೃಥ್ವಿ ರಾಜ್ ಸುಕುಮಾರ್ ಕೇರಳ ಭಾಷೆಯ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ. ಈ ಬಗ್ಗೆ ಅವರು ಹೇಳಿದ್ದು, ಕೆಜಿಎಫ್ ಮತ್ತು ಬಾಹುಬಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಭರವಸೆ ಮೂಡಿಸಿದ್ದಷ್ಟೇ ಅಲ್ಲ. ರಾಜಮೌಳಿ ಮತ್ತು ಪ್ರಶಾಂತ್ ನೀಲ್ ಗುಡ್ ಮೇಕರ್. ಯಶ್ ಒಳ್ಳೇ ನಟ. ಎಕ್ಸೈಟ್ವಾಗಿದ್ದೇನೆ.
ಪೃಥ್ವಿರಾಜ್ ಪ್ರೊಡಕ್ಷನ್ ಈ ಸಿನಿಮಾಗೆ ಕೈ ಜೋಡಿಸಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ತೆಲುಗಿನಲ್ಲಿ ಈ ಚಿತ್ರವನ್ನು ಸಾಯಿ ಪ್ರೆಸೆಂಟ್ ಮಾಡಿದರೆ, ಹಿಂದಿಯಲ್ಲಿ ಫರಾನ್ ಅಖ್ತರ್ ಪ್ರೆಸೆಂಟ್ ಮಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಕೆಜಿಎಫ್ 2 ಟ್ರೇಲರ್ ರಿಲೀಸ್ ಮಾಡಿದ ಶಿವಣ್ಣ : ಐ ಲವ್ ಯು ಯು ಶುಡ್ ಲವ್ ಅಂದ್ರು ಸೆಂಚುರಿ ಸ್ಟಾರ್…

ಕೆಜಿಎಫ್ 2 ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷೆಯ ಚಿತ್ರ. ಚಿತ್ರದ ಮೊದಲ ಚಾಪ್ಟರ್ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದು ಗೊತ್ತೇ ಇದೆ. ಈಗ ಚಾಪ್ಟರ್ 2 ಸಮಯ. ಏಪ್ರಿಲ್ 14ರಂದು ವಿಶ್ವಾದ್ಯಂತ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಈಗಾಗಲೇ ಚಿತ್ರದ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಕುತೂಹಲ ಮೂಡಿಸಿವೆ. ಚಿತ್ರದ ಟೀಸರ್ವಮತ್ತು ಸಾಂಗ್ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿದ್ದು,ಗೊತ್ತು. ಈಗ ಟ್ರೇಲರ್ ರಿಲೀಸ್ ಆಗಿದೆ. ಎಲ್ಲೆಡೆ ದೊಡ್ಡ ಹವಾ ಎಬ್ಬಿಸಿದೆ.

ಹೌದು, ಕೆಜಿಎಫ್ 2 ಈಗ ಬಿಡುಗಡೆಯ ದಿನಗಳನ್ನು ಎಣಿಸುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಮಾರ್ಚ್ 27 ರಂದು ಚಿತ್ರದ ಟ್ರೇಲರ್ ಜೊತೆ ಈವೆಂಟ್ ಕೂಡ ನಡೆಯಿತು. ಇದರ ವಿಶೇಷ ಅಂದರೆ, ಈವೆಂಟ್ ನ ಹೋಸ್ಟ್ ಆಗಿ, ಬಾಲಿವುಡ್ ನ ನಿರ್ದೇಶಕ , ನಿರೂಪಕ ಕರಣ್ ಜೋಹರ್ ಕಾರ್ಯ ನಿರ್ವಹಿಸಿದ್ದು. ಅವರೊಂದಿಗೆ ಕನ್ನಡದ ನಿರೂಪಕಿ ಅನುಶ್ರೀ ಸಾಥ್ ನೀಡಿದರು.

ಕೆಜಿಎಫ್ 2 ಚಿತ್ರದಲ್ಲಿ ಕಾಣಿಸಿಕೊಂಡಿರುವ ಬಹುತೇಕ ತಾರಾಬಳಗ ಒರಾಯನ್ ಮಾಲ್ ನಲ್ಲಿ ಜಮಾಯಿಸಿತ್ತು. ವಿಶೇಷವೆಂದರೆ, ಟ್ರೇಲರ್ ಮತ್ತು ಈವೆಂಟ್ ಗೆ ಬಾಲಿವುಡ್‌, ಟಾಲಿವುಡ್, ಕಾಲಿವುಡ್ ಸಿನಿಮಾ ಪತ್ರಕರ್ತರು ಆಗಮಿಸಿದ್ದರು.

ಚಿವರಾದ ಅಶ್ವತ್ಥನಾರಾಯಣ, ಶಿವರಾಜಕುಮಾರ್ ಆಕರ್ಷಣೆಯಾಗಿದ್ದರು. ನಾಗಾಭರಣ, ಮಾಳವಿಕ, ಅಯ್ಯಪ್ಪ, ವಸಿಷ್ಠ ಸಿಂಹ, ಗರುಡ ಖ್ಯಾತಿಯ ರಾಮ್ ಸೇರಿದಂತೆ ಹಲವರು ಟ್ರೇಲರ್ ಬಿಡುಗಡೆಗೆ ಸಾಕ್ಷಿಯಾದರು.

ಶಿವಣ್ಣ ಟ್ರೇಲರ್ ರಿಲೀಸ್ ಮಾಡಿ ಶುಭ ಕೋರಿದರು. ಐ ಲವ್ ಯೂವಯು ಯು ಶುಡ್ ಲವ್ ಯು… ಎಂದು ಸಿನಿಮಾಗೆ ಹಾರೈಸಿದರು.

Categories
ಸಿನಿ ಸುದ್ದಿ

ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್ ಬಾಚಿಕೊಂಡ ರಾಜ್ ಬಿ ಶೆಟ್ಟಿ; ಮೊದಲ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಗಾನವಿ

ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು 3ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2022 ರಲ್ಲಿ ತಮ್ಮ “ಗರುಡ ಗಮನ ವೃಷಭ ವಾಹನ ” ಚಿತ್ರಕ್ಕಾಗಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಚಿತ್ರಕಥೆಗಾಗಿ ಮೂರು ವೈಯಕ್ತಿಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಹೀರೋ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿಸಿದ ಮೊದಲ ಚಿತ್ರಕ್ಕೆ ನಟಿ ಗಾನವಿ ಲಕ್ಷ್ಮಣ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯುವುದರ ಮೂಲಕ ಸಂಭ್ರಮಿಸಿದ್ದಾರೆ. ಮೂರು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದ “ಪುಗ್ಸಟ್ಟೆ ಲೈಫ್” ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದ್ದು, ಮೊದಲ ಸಿನಿಮಾದ ನಿರ್ದೇಶನಕ್ಕಾಗಿ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರು ಪುಕ್ಸಟ್ಟೆ ಲೈಫು ಚಿತ್ರಕ್ಕಾಗಿ ಪ್ರಶಸ್ತಿ ಪಡೆದದ್ದು ವಿಶೇಷ.
ಪ್ರವೀಣ್ ಶ್ರೀಯಾನ್ ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು ಗೆಲ್ಲುವ ಮೂಲಕ GGVV ಗಾಗಿ ನಾಲ್ಕನೇ ಪ್ರಶಸ್ತಿ ಗಳಿಸಿದರು. ತರುಣ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ. (ಅತ್ಯುತ್ತಮ ಸಂಗೀತ ಸಂಯೋಜಕ – ಅರ್ಜುನ್ ಜನ್ಯ, ಅತ್ಯುತ್ತಮ ಗೀತರಚನೆಕಾರ – ಕಣ್ಣು ಹೊಡೆಯಾಕೆ ಹಾಡಿಗೆ ಯೋಗರಾಜ್ ಭಟ್, ಸುಧಾಕರ್ ಎಸ್ ರಾಜ್ ಅತ್ಯುತ್ತಮ ಛಾಯಾಗ್ರಹಣ ಮತ್ತು ಭೂಷಣ್ ಅತ್ಯುತ್ತಮ ನೃತ್ಯ ಸಂಯೋಜನೆ)ಈ ನಾಲ್ಕು ಪ್ರಶಸ್ತಿಗಳು ರಾಬರ್ಟ್ ಚಿತ್ರಕ್ಕಾಗಿ ಬಂದಿದ್ದು ಮತ್ತೊಂದು ವಿಶೇಷ.

ಎ.ಹರ್ಷ ನಿರ್ದೇಶನದ ಭಜರಂಗಿ 2 ಮತ್ತು ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲು ಸಿನಿಮಾ ಸಲಗ ಮತ್ತು ಧನಂಜಯ್ ನಟನೆಯ ಬಡವ ರಾಸ್ಕಲ್ ತಲಾ ಮೂರು ಪ್ರಶಸ್ತಿ ಗಳಿಸಿವೆ. ಭಜರಂಗಿ 2 ಸಿನಿಮಾ ತಾಂತ್ರಿಕ ವಿಭಾಗಗಳಲ್ಲಿ ಅತ್ಯುತ್ತಮ VFX (ಶಿಬೀಶ್ ಮತ್ತು ಇಳಂಗೋವ್), ಅತ್ಯುತ್ತಮ ಸಾಹಸ ನಿರ್ದೇಶಕ (ರವಿ ವರ್ಮ) ಮತ್ತು ಅತ್ಯುತ್ತಮ ಕಲಾ ನಿರ್ದೇಶನ (ರವಿ ಸಂತೆಹೈಕ್ಲು) ಪ್ರಶಸ್ತಿ ಪಡೆದಿದೆ.
ಬಡವ ರಾಸ್ಕಲ್ ಚಿತ್ರವು ಅತ್ಯುತ್ತಮ ಪೋಷಕ ನಟಿ ಸ್ಪರ್ಶ ರೇಖಾ ಮತ್ತು ಅತ್ಯತ್ತಮ ಪೋಷಕ ನಟ ರಂಗಾಯಣ ರಘು ಹಾಗೂ ಇದೇ ಚಿತ್ರಕ್ಕಾಗಿ ವಾಸುಕಿ ವೈಭವ್ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಪಡೆದರು.

ನಟ ದುನಿಯಾ ವಿಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣೆ (ಮಾಸ್ತಿ), ಅತ್ಯುತ್ತಮ ಬಿಜಿಎಂ (ಚರಣ್ ರಾಜ್) ಮತ್ತು ಅತ್ಯುತ್ತಮ ಗಾಯಕಿಯಾಗಿ ಗಿರಿಜಾ ಅವರಿಗೆ ಪ್ರಶಸ್ತಿ ಬಂದಿವೆ.
ಡಾ.ರಾಘವೇಂದ್ರ ಬಿಎಸ್ ಅವರು ಪ್ರೇಮಂ ಪೂಜ್ಯಂ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದರೆ, ಅರ್ಜುನ್ ಗೌಡ ಚಿತ್ರದ ಹಾಡಿಗೆ ರಾಘವೇಂದ್ರ ಕಾಮತ್ ಅವರು ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಯನ್ನು ಯೋಗರಾಜ್ ಭಟ್ ಜತೆ ಹಂಚಿಕೊಂಡಿದ್ದಾರೆ. ಅತ್ಯುತ್ತಮ ಬಾಲ ನಟ ಪ್ರಶಸ್ತಿ ಅಕ್ಷಿ ಸಿನಿಮಾ ನಟನೆಗಾಗಿ ಮಾಸ್ಟರ್ ಮಿಥುನ್ ಪಡೆದುಕೊಂಡಿದ್ದಾರೆ.

ಶನಿವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 2021 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗಾಗಿ ಒಟ್ಟು 23 ಸಿನಿಮಾ ತಾರೆಯರು 21 ವಿಭಾಗಗಳಲ್ಲಿದ್ದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಜನನಕನ್ನಡ ಚಲನಚಿತ್ರ ವಿಮರ್ಶಕರು ಮತ್ತು ಪತ್ರಕರ್ತರು ನಾಮ ನಿರ್ದೇಶನ ಮೂಲಕ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದರೆ, ಬಿಬಿಎಂಪಿಯ ಸ್ವಚ್ಛ ಬೆಂಗಳೂರು ಅಭಿಯಾನವನ್ನು ಪ್ರಶಸ್ತಿ ಸಮಾರಂಭದ ವಿಷಯವಾಗಿ ಅಳವಡಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸಿನಿಮಾ ರಂಗದ ಸಾಕಷ್ಟು ತಾರೆಯರು, ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

3ನೇ ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ವಿಜೇತರು ಪಟ್ಟಿ – 2022

  1. ಅತ್ಯುತ್ತಮ ಚಿತ್ರ
    ಪುಗ್ಸಟ್ಟೆ ಲೈಫ್
  2. ಅತ್ಯುತ್ತಮ ನಿರ್ದೇಶಕ
    ರಾಜ್ .ಬಿ. ಶೆಟ್ಟಿ (ಗರುಡ ಗಮನ ವೃಷಭ ವಾಹನ)
  3. ಅತ್ಯುತ್ತಮ ನಟ
    ರಾಜ್. ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
  4. ಅತ್ಯುತ್ತಮ ನಟಿ
    ಗಾನವಿ ಲಕ್ಷ್ಮಣ್ (ಹೀರೋ)
  5. ಅತ್ಯುತ್ತಮ ಚಿತ್ರಕಥೆ
    ಗರುಡ ಗಮನ ವೃಷಭ ವಾಹನ
  6. ಅತ್ಯುತ್ತಮ ಪೋಷಕ ನಟ
    ರಂಗಾಯಣ ರಘು (ಬಡವ ರಾಸ್ಕಲ್)
  7. ಅತ್ಯುತ್ತಮ ಪೋಷಕ ನಟಿ
    ಸ್ಪರ್ಷ ರೇಖಾ (ಬಡವ ರಾಸ್ಕಲ್)
  8. ಅತ್ಯುತ್ತಮ ಬಾಲ ಕಲಾವಿದ
    ಮಾಸ್ಟರ್ ಮಿಥುನ್ (ಅಕ್ಷಿ)
  9. ಅತ್ಯುತ್ತಮ ಸಂಗೀತ ನಿರ್ದೇಶಕ
    ಅರ್ಜುನ್ ಜನ್ಯ (ರಾಬರ್ಟ್)
  10. ಅತ್ಯುತ್ತಮ ಹಿನ್ನೆಲೆ ಸಂಗೀತ
    ಚರಣ್ ರಾಜ್ (ಸಲಗ)
  11. ಅತ್ಯುತ್ತಮ ಗೀತ ಸಾಹಿತ್ಯ
    ಯೋಗರಾಜ್ ಭಟ್ (ಕಣ್ಣು ಹೊಡಿಯಾಕೆ, ರಾಬರ್ಟ್) and ರಾಘವೇಂದ್ರ ಕಾಮತ್ (ಕನವರಿಕೆ.. ಅರ್ಜುನ್ ಗೌಡ)
  12. ಅತ್ಯುತ್ತಮ ಗಾಯಕ
    ವಾಸುಕಿ ವೈಭವ್ (ಆಗಾಗ ನೆನಪಾಗುತ್ತಿದೆ, ಬಡವ ರಾಸ್ಕಲ್)
  13. ಅತ್ಯುತ್ತಮ ಗಾಯಕಿ
    ಗಿರಿಜಾ ಸಿದ್ದಿ (ಟಿನಿಂಗ್ ಮಿನಿಂಗ್, ಸಲಗ)
  14. ಅತ್ಯುತ್ತಮ ಛಾಯಾಗ್ರಹಣ
    ಸುಧಾಕರ್ ರಾಜ್ (ರಾಬರ್ಟ್)
  15. ಅತ್ಯುತ್ತಮ ಸಂಭಾಷಣೆ
    ಮಾಸ್ತಿ (ಸಲಗ)
  16. ಅತ್ಯುತ್ತಮ ಸಂಕಲನ
    ಪ್ರವೀಣ್ ಶ್ರೀಯಾನ್ (ಗರುಡ ಗಮನ ವೃಷಭ ವಾಹನ)
  17. ಅತ್ಯುತ್ತಮ ಕಲಾ ನಿರ್ದೇಶನ
    ರವಿ ಸಂತೆಹೈಕ್ಳು (ಭಜರಂಗಿ 2)
  18. ಅತ್ಯುತ್ತಮ ನೃತ್ಯ ನಿರ್ದೇಶಕ
    ಭೂಷಣ್ (ರಾಬರ್ಟ್)
  19. ಅತ್ಯುತ್ತಮ ಸಾಹಸ ನಿರ್ದೇಶಕ
    ರವಿ ವರ್ಮಾ (ಭಜರಂಗಿ 2)
  20. ಅತ್ಯುತ್ತಮ ವಿಎಫ್ಎಕ್ಸ್
    ಶಿಬೀಶ್ and ಏಲಂಗೋ
    ಭಜರಂಗಿ 2
  21. ಅತ್ಯುತ್ತಮ ಚೊಚ್ಚಲ ಚಿತ್ರ
    ಪ್ರೇಮಮ್ ಪೂಜ್ಯಮ್
error: Content is protected !!