ನಿರ್ದೇಶಕ ದಿನೇಶ್ ಬಾಬು ಕಸ್ತೂರಿ ಮಹಲ್ ಸಿನಿಮಾ ನಿರ್ದೇಶಿಸಿದ್ದು, ಆ ಸಿನಿಮಾ ಈಗ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾ ದಿನೇಶ್ ಬಾಬು ಅವರ ನಿರ್ದೇಶನದ 50ನೇ ಚಿತ್ರ ಅನ್ನೋದು ವಿಶೇಷ. ಇಲ್ಲಿ ಸಾಕಷ್ಟು ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಬಹುಭಾಷ ನಟಿ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿರುವ ಈ ಚಿತ್ರ ಮೇ 13 ರಂದು ಬಿಡುಗಡೆಯಾಗಲಿದೆ…
ಕನ್ನಡದಲ್ಲಿ ಸಾಕಷ್ಟು ಹಾರರ್ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ. ಚಿತ್ರೀಕರಣವಾದ ಕೊಟ್ಟಿಗೆ ಹಾರದ ಪರಿಸರವಂತೂ ಅದ್ಭುತ. ಉತ್ತಮ ಪಾತ್ರ ನೀಡಿರುವ ದಿನೇಶ್ ಬಾಬು ಅವರ ನಿರ್ದೇಶನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರುತ್ತಿದೆ. ನೋಡಿ ಹರಸಿ ಎಂದು ಹೇಳಿಕೊಂಡರು ಶಾನ್ವಿ ಶ್ರೀವಾತ್ಸವ್.
ರಂಗಾಯಣ ರಘು ಅವರಿಗೆ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ. ಆ ಕುರಿತು ಹೇಳಿಕೊಂಡ ಅವರು, ನಿರ್ದೇಶನದಲ್ಲಿ ಐವತ್ತು ಚಿತ್ರಗಳನ್ನು ಪೂರೈಸಿರುವ ದಿನೇಶ್ ಬಾಬು ಅವರನ್ನು ಅಭಿನಂದಿಸುತ್ತೇನೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾರರ್ ಚಿತ್ರಗಳು ಬಂದಿವೆ. ಪ್ರೇಕ್ಷಕರ ಮನ ಗೆದ್ದಿದೆ. ಆದರೆ ಇದು ವಿಭಿನ್ನ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ರಂಗಾಯಣ ರಘು.
ಇದೊಂದು ಉತ್ತಮ ಚಿತ್ರ. ನನ್ನದು ಒಳ್ಳೆಯ ಪಾತ್ರ. ಕೊಟ್ಟಿಗೆ ಹಾರದ ನಮ್ಮ ಪೂರ್ವಜರ ಮನೆಯಲ್ಲಿ(200 ವರ್ಷ ಹಳೆಯದು) ಚಿತ್ರೀಕರಣವಾಗಿದ್ದು ನಿಜಕ್ಕೂ ಸಂತೋಷ. ಅವಕಾಶ ನೀಡಿದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಅಭಿನಂದನೆ ಎಂದರು ನಾಯಕ ಸ್ಕಂದ.
ದಿನೇಶ್ ಬಾಬು ಅವರ ಹತ್ತಿರ ಹಾರರ್ ಸಿನಿಮಾ ಮಾಡೋಣ ಅಂತ ಹೇಳಿದ್ದೆ. ಉತ್ತಮ ಕಥೆ ಸಿದ್ದ ಮಾಡಿಕೊಂಡು ಸಿನಿಮಾ ಶುರು ಮಾಡಿದರು. ಇದೇ ಮೇ 13 ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ಮಾಪಕ ರವೀಶ್.
ಶೃತಿ ಪ್ರಕಾಶ್, ವತ್ಸಲಾ ಮೋಹನ್, ಕಾಶಿಮಾ, ನೀನಾಸಂ ಅಶ್ವಥ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಿನ್ನೆಲೆ ಸಂಗೀತ ನೀಡಿರುವ ರಮೇಶ್ ಕೃಷ್ಣ ಸಂಗೀತ ಬಗ್ಗೆ ಮಾಹಿತಿ ನೀಡಿದರು.