ನಡೆದಾಡೋ ದೇವರ ಬಸವ ಭಾರತ; ಹಂಸಲೇಖರ ಸಿದ್ಧಗಂಗಾ ಶ್ರೀಗಳ ಮಿನಿ ಸಿನಿ ಸೀರೀಸ್…

ಈ ಸಮಾಜಕ್ಕೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ನೀಡಿದ ಕೊಡುಗೆ ಅಪಾರ. ಅಸಂಖ್ಯಾತ ಮಕ್ಕಳಿಗೆ ಅವರು ಅಕ್ಷರ, ಆಶ್ರಯ, ಅನ್ನ ನೀಡಿ ಜೀವನದ ದಾರಿ ತೋರಿಸಿದ್ದಾರೆ. ಎಂದೆಂದಿಗೂ ಅವರೊಂದು ಸ್ಫೂರ್ತಿಯ ಶಿಖರ. ಅವರ ಜೀವನದ ವಿವರಗಳನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಒಂದು ಮಹಾನ್ ಕಾರ್ಯ ನೆರವೇರಿಸಲು ಈಗ ಯೋಜನೆ ಸಿದ್ಧವಾಗಿದೆ. ಅದಕ್ಕೆ ‘ನಾದಬ್ರಹ್ಮ’ ಹಂಸಲೇಖ ಅವರು ಸಾರಥ್ಯ ವಹಿಸಿದ್ದಾರೆ. ಸಿದ್ದಗಂಗಾ ಶ್ರೀಗಳ ಕುರಿತು 52 ಎಪಿಸೋಡ್‌ಗಳ ಮಿನಿ ಸಿನಿ ಸೀರಿಸ್ ನಿರ್ಮಾಣ ಮಾಡಲಾಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನ ಆಗುತ್ತಿರುವುದು ಇದೇ ಮೊದಲು. ಸಿದ್ದಗಂಗಾ ಶ್ರೀಗಳು ಮತ್ತು ಬಸವಣ್ಣನವರ ಕುರಿತು ನಿರ್ಮಾಣ ಆಗಲಿರುವ ಈ ಮಿನಿ ಸಿನಿ ಸೀರಿಸ್ ಗೆ ‘ನಡೆದಾಡೋ ದೇವರ ಬಸವ ಭಾರತ’ ಎಂದು ಶೀರ್ಷಿಕೆ ಇಡಲಾಗಿದೆ. ಇದನ್ನು ರುದ್ರೇಶ್ ಅವರು ‘ರುದ್ರ ಕಿರುಚಿತ್ರ’ ಸಂಸ್ಥೆ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಐದನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಏ.1ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜರುಗುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯೋತ್ಸವದಂದು ‘ನಡೆದಾಡೋ ದೇವರ ಬಸವ ಭಾರತ’ ಮಿನಿ ಸಿನಿ ಸೀರಿಸ್ ಉದ್ಘಾಟನೆ ಆಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದನ್ನು ಉದ್ಘಾಟನೆ ಮಾಡಲಿರುವುದು ವಿಶೇಷ.

ಈ ಕುರಿತು ಮಾಹಿತಿ ನೀಡಲು ಸಂಗೀತ ನಿರ್ದೇಶಕ ಹಂಸಲೇಖ, ಶಾಸಕ ರೇಣುಕಾಚಾರ್ಯ, ‘ರುದ್ರ ಕಿರುಚಿತ್ರ’ ಸಂಸ್ಥೆಯ ರುದ್ರೇಶ್, ವಚನ ಕಾವ್ಯದಲ್ಲಿ ಪಿಎಚ್‌ಡಿ ಪಡೆದಿರುವ ಮಾಜಿ ಐಎಎಸ್ ಅಧಿಕಾರಿ ಸೋಮಶೇಖರ್ ಮುಂತಾದವರು ಭಾಗವಹಿಸಿದ್ದರು. ಈ ಮಿನಿ ಸಿನಿ ಸೀರಿಸ್ 7 ಭಾಷೆಗಳಲ್ಲಿ ಮೂಡಿಬರಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ನಿರ್ಮಾಣ ಆಗಲಿದೆ. ಅದಕ್ಕಾಗಿ 7 ತಂಡಗಳಲ್ಲಿ ಸುಮಾರು 300ಕ್ಕೂ ಅಧಿಕ ತಂತ್ರಜ್ಞರು ಕೆಲಸ ಮಾಡಲಿದ್ದಾರೆ.

‘ರುದ್ರೇಶ್ ಅವರು ನನಗೆ ಇತ್ತೀಚೆಗೆ ಪರಿಚಯ ಆದವರು. ಶಿವಕುಮಾರ ಸ್ವಾಮಿಗಳ ಕುರಿತಾಗಿ ಧಾರಾವಾಹಿ ಮಾಡಬೇಕು, ಅದಕ್ಕೆ ಸಹಾಯ ಮಾಡಿ ಅಂತ ಕೇಳಿಕೊಂಡರು. ಧಾರಾವಾಹಿ ಆದರೆ ನಾನು ಯಾಕೆ? ಅದಕ್ಕೆ ಬೇಕಾದಷ್ಟು ಜನರು ಇದ್ದಾರೆ ಅಂತ ಹೇಳಿದೆ. ನಂತರ ಅದರ ಬಗ್ಗೆ ಆಲೋಚನೆ ಮಾಡಿದೆ. ಧಾರಾವಾಹಿ ಬದಲು ಮಿನಿ ಸಿನಿ ಸೀರಿಸ್ ಮಾಡಲು ನಿರ್ಧರಿಸಿದೆವು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹಂಸಲೇಖ ಹೇಳಿದ್ದಾರೆ.

ಶಿವಕುಮಾರ ಸ್ವಾಮೀಜಿ ಅವರ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ನಟಿಸಿದರೆ ಸೂಕ್ತ ಎಂಬುದು ತಂಡದ ಆಶಯ. ಹಾಗಾಗಿ ಅವರಿಗೆ ಈಗಾಗಲೇ ಕಥೆಯನ್ನು ಹೇಳಲಾಗಿದೆ. ಸದ್ಯ ಅಮಿತಾಭ್ ಅವರ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಆಗಿದ್ದು, ಅವರು ಚೇತರಿಸಿಕೊಂಡ ನಂತರ ಅಂತಿಮ ನಿರ್ಧಾರ ಗೊತ್ತಾಗಲಿದೆ.

Related Posts

error: Content is protected !!