Categories
ಸಿನಿ ಸುದ್ದಿ

ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಹನ್ನೊಂದು ತಿಂಗಳಲ್ಲಿ ನಾಲ್ಕನೇ ಮರು ಮುದ್ರಣ ಕಂಡಿದ್ದು, ಈ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಾಲ್ಕನೇ ಆವೃತ್ತಿಯನ್ನು ಶುಕ್ರವಾರ ಬೆಂಗಳೂರಿನ ಪಿ.ಆರ್.ಕೆ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಈ ವೇಳೆ ಪುಸ್ತಕದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಲೇಖಕ ಡಾ.ಶರಣು ಹುಲ್ಲೂರು, ಪ್ರಕಾಶಕ ಜಮೀಲ್ ಸಾವಣ್ಣ ಮತ್ತು ಪಿ.ಆರ್.ಕೆಯ ಸತೀಶ್ ಅವರು ಕೂಡ ಹಾಜರಿದ್ದರು.


15 ಮಾರ್ಚ್ 2022ರಂದು ಮೊದಲ ಬಾರಿಗೆ ಈ ಪುಸ್ತಕವನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಆನಂತರ ಈ ಪುಸ್ತಕವು ಅಮೆಜಾನ್, ಸಪ್ನಾ ಸೇರಿದಂತೆ ಹಲವು ಕಡೆ ಟಾಪ್ ಪಟ್ಟಿಯಲ್ಲಿ ದಾಖಲಾಗಿತ್ತು. ಅಲ್ಲಿಂದ ಈವರೆಗೂ ಸತತ ನಾಲ್ಕು ಮುದ್ರಣಗಳನ್ನು ಕಂಡು ಇನ್ನೂ ದಾಖಲೆ ರೀತಿಯಲ್ಲೇ ಮಾರಾಟವಾಗುತ್ತಿದೆ. ಅಲ್ಲದೇ, ಈ ಪುಸ್ತಕದೊಂದಿಗೆ ಪುನೀತ್ ಅವರ ಸಹಿ ಇರುವಂತಹ ಫೋಟೋ ಮತ್ತು ಬುಕ್ ಮಾರ್ಕ್ ಕೂಡ ಉಚಿತವಾಗಿ ಕೊಡಲಾಗುತ್ತಿದೆ.


ಈ ವರ್ಷದಲ್ಲಿ ಕನ್ನಡದಲ್ಲಿ ಬಂದ ಬಯೋಗ್ರಫಿಯಲ್ಲಿ ಹೆಚ್ಚು ಮಾರಾಟ ಕಂಡ ಪುಸ್ತಕ ಎನ್ನುವ ಹೆಗ್ಗಳಿಕೆ ‘ನೀನೇ ರಾಜಕುಮಾರ’ ಪುಸ್ತಕದ್ದು. ಪುನೀತ್ ಅವರ ಬಾಲ್ಯದಿಂದ ಅವರ ನಿಧನದವರೆಗೂ ಅವರ ಬದುಕನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪುನೀತ್ ಅವರ ಸಿನಿಮಾ, ಅವರ ಸಮಾಜಸೇವೆ, ಅವರ ಜೀವನದಲ್ಲಿ ನಡೆದ ಘಟನೆಗಳು ಮತ್ತು ಪುನೀತ್ ಅವರ ಜೀವನದ ಜೊತೆಗೆ ಕನ್ನಡ ಸಿನಿಮಾ ರಂಗದ ಸಂಕ್ಷಿಪ್ತ ಚರಿತ್ರೆ ಕೂಡ ಈ ಪುಸ್ತಕದಲ್ಲಿದೆ. ಅಲ್ಲದೇ, ಅಪರೂಪದ ಫೋಟೋಗಳನ್ನು ನೋಡಬಹುದಾಗಿದೆ.
ಪುನೀತ್ ಅವರ ಸಾಕಷ್ಟು ಸಂದರ್ಶನಗಳನ್ನು ಮಾಡಿದ್ದ ಪತ್ರಕರ್ತ ಶರಣು ಹುಲ್ಲೂರು, ಪುನೀತ್ ಅವರ ಕುರಿತಾಗಿ ಅನೇಕ ಅಪರೂಪದ ಸಂಗತಿಗಳನ್ನು ಈ ಪುಸ್ತಕದಲ್ಲಿ ಬರೆಯುತ್ತಾ ಹೋಗಿದ್ದಾರೆ.

ಖ್ಯಾತ ಪತ್ರಕರ್ತರಾದ ಮುರಳಿಧರ ಖಜಾನೆ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರೆ, ಜೋಗಿ ಅವರು ಹಿನ್ನುಡಿ ಬರೆದಿದ್ದಾರೆ.

Categories
ಸಿನಿ ಸುದ್ದಿ

ಇವರೆಲ್ಲ ಮೂಲತಃ ನಮ್ಮವರೇ! ಇದು ನವೀನ ಚಿತ್ರ…

“ಗುಲ್ಟು” ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ನವೀನ್ ಶಂಕರ್ ನಾಯಕನಾಗಿ ನಟಿಸಿರುವ ಚಿತ್ರ “ಮೂಲತಃ ನಮ್ಮವರೇ”.

ಕಿರಣ್ ಗೋವಿಂದರಾಜ್ ನಿರ್ಮಿಸಿ, ಚೇತನ್ ಭಾಸ್ಕರಯ್ಯ ನಿರ್ದೇಶಿಸಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಇತ್ತೀಚಿಗೆ ನಡೆಯಿತು.

ರಂಗಭೂಮಿ ನಂಟಿರುವ ನನಗೆ ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ. ಹಿಂದೆ ಕೆಲವು ಕಿರುಚಿತ್ರಗಳ ನಿರ್ದೇಶಿಸಿದ್ದೇನೆ‌‌. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ಕಥೆ ಸಿದ್ದವಾದ ನಂತರ, ನಾಯಕನ‌ ಹುಡುಕಾಟದಲ್ಲಿದ್ದಾಗ ನವೀನ್ ಸಿಕ್ಕರು. ಆಗಷ್ಟೇ ಅವರ ” ಗುಲ್ಟು” ಚಿತ್ರ ಬಿಡುಗಡೆಯಾಗಿತ್ತು. “ಮೂಲತ: ನಮ್ಮವರೇ” ಇದೊಂದು ಕೌಟುಂಬಿಕ ಚಿತ್ರ. ಅಪ್ಪ – ಮಗನ ಬಾಂಧವ್ಯದ ಸನ್ನಿವೇಶಗಳೇ ಚಿತ್ರದ ಹೈಲೆಟ್. ಬೆಂಗಳೂರು ಹಾಗೂ ಕರಾವಳಿಯಲ್ಲಿ ಚಿತ್ರೀಕರಣ ಮಾಡಿದ್ದೇವೆ‌. ನವೀನ್ ಶಂಕರ್ ಬಿಟ್ಟರೆ ಬಹುತೇಕರಿಗೆ ಇದು ಮೊದಲ ಸಿನಿಮಾ ಎಂದ ನಿರ್ದೇಶಕ ಚೇತನ್ ಭಾಸ್ಕರಯ್ಯ, ತಾವು ಕೂಡ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದರು.

ಈ ತಂಡದವರು ಎಲ್ಲವನ್ನೂ ಸಿದ್ದಮಾಡಿಕೊಂಡು, ನಾಯಕನ ಹುಡುಕಾಟದಲ್ಲಿದ್ದರು. ಕೆಲವು ನಾಯಕರನ್ನು ಸಂಪರ್ಕ ಕೂಡ ಮಾಡಿದ್ದರು. ಆನಂತರ ಇವರಿಗೆ ನಾನು ಸಿಕ್ಕಿದೆ‌. ಕಥೆ ತುಂಬಾ ಚೆನ್ನಾಗಿದೆ. ನಾನು ಇಲ್ಲಿಯವರೆಗೂ ಮಾಡಿರದ ಕಥೆ ಎನ್ನಬಹುದು. ಅಪ್ಪ – ಮಗನ ಸೆಂಟಿಮೆಂಟ್ ಸನ್ನಿವೇಶಗಳು ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ. ಶೋಭ್ ರಾಜ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮುಂಬೈನ ತಾನ್ಯ ಈ ಚಿತ್ರದ ನಾಯಕಿ. ಅವಿನಾಶ್, ಮಾಳವಿಕ ಅವಿನಾಶ್, ತೆಲುಗಿನ ಸತ್ಯಪ್ರಕಾಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನನ್ನ ಈ ಹಿಂದಿನ ಚಿತ್ರಗಳಲ್ಲಿ ಆಕ್ಷನ್, ಡ್ಯಾನ್ಸ್ ಗಳಿಗೆ ಅಷ್ಟು ಅವಕಾಶವಿರಲಿಲ್ಲ. ಈ ಚಿತ್ರದಲ್ಲಿ ಎಲ್ಲವೂ ಇದೆ ಎಂದು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ನಟ ನವೀನ್ ಶಂಕರ್ ಹೇಳಿದರು.

ನಾನು ಹಾಗೂ ನಿರ್ದೇಶಕ ಚೇತನ ಸ್ನೇಹಿತರು. ನಟನಾಗಬೇಕೆಂದು ಆಸೆಯಿತ್ತು. ಆದರೆ ನಿರ್ಮಾಪಕನಾದೆ. ನಮ್ಮ ಚಿತ್ರ ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಕಿರಣ್ ಗೋವಿಂದರಾಜ್.

ಚಿತ್ರದಲ್ಲಿ ಅಭಿನಯಿಸಿರುವ ಕಾವ್ಯ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಕೇರಳದ ಚಂತು ಛಾಯಾಗ್ರಹಣ, ಏಕ್ ಕ್ಯಾಬ್ ದಿ ಬ್ಯಾಂಡ್ ಸಂಗೀತ ನಿರ್ದೇಶನ ಹಾಗೂ ಜುವೀನ್ ಸಿಂಗ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಜಸ್ಟ್ ಪಾಸ್ ಆಗೋಕೆ ರಘು ಟೀಮ್ ರೆಡಿ: ಯೂತ್ಸ್ ಸ್ಟೋರಿಗೆ ಪೂಜೆ ಶುರು…

‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ.ಎಂ.ರಘು ನಟ ಶ್ರೀ ಜೊತೆ ‘ಜಸ್ಟ್ ಪಾಸ್’ ಕಥೆ ಹೇಳಲು ಸಜ್ಜಾಗಿದ್ದಾರೆ. ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಮುಹೂರ್ತ ನೆರವೇರಿದೆ.

ನಿರ್ದೇಶಕ ಕೆ.ಎಂ.ರಘು ಮಾತನಾಡಿ, ‘ಜಸ್ಟ್ ಪಾಸ್’ ಕಾಲೇಜ್ ಬ್ಯಾಕ್ ಡ್ರಾಪ್ ನಲ್ಲಿ ನಡೆಯೋ ಸಿನಿಮಾ. ಈಗಾಗಲೇ ಕಾಲೇಜ್ ಸಬ್ಜೆಕ್ಟ್ ಇರುವ ಹಲವಾರು ಸಿನಿಮಾಗಳು ಬಂದಿವೆ ನಾವೇನು ಹೊಸತು ಹೇಳ್ತೀವಿ ಅನ್ನೋದು ಮುಖ್ಯ. ಒಂದೇ ಲೈನ್ ನಲ್ಲಿ ಸಿನಿಮಾ ಬಗ್ಗೆ ಹೇಳಬೇಕು ಅಂದ್ರೆ ಈ ಚಿತ್ರದಲ್ಲಿ ಜಸ್ಟ್ ಪಾಸ್ ಆದವರಿಗಾಗಿಯೇ ಕಾಲೇಜ್ ತೆರೆಯಲಾಗಿರುತ್ತೆ. ಅವರಿಗಾಗಿಯೇ ಹಾಸ್ಟೆಲ್ ವ್ಯವಸ್ಥೆ ಕೂಡ ಇರುತ್ತೆ. ಜಸ್ಟ್ ಪಾಸ್ ಆದವರ ಮೆಂಟಾಲಿಟಿ ಬೇರೆ ಇರುತ್ತೆ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿರುತ್ತಾರೆ. ತುಂಬಾ ತರ್ಲೆ ಇರ್ತಾರೆ. ಅವರನ್ನು ಇಟ್ಟುಕೊಂಡು ಯಾವ ರೀತಿ ಎಜುಕೇಶನ್ ನೀಡಲಾಗುತ್ತೆ ಅನ್ನೋದನ್ನ ಕಾಮಿಡಿ, ಸೆಂಟಿಮೆಂಟ್ ಎಲಿಮೆಂಟ್ ಜೊತೆಗೆ ಕಟ್ಟಿಕೊಡಲಾಗಿದೆ. ಕಾಲೇಜ್ ಸಬ್ಜೆಕ್ಟ್ ಎಂದಾಕ್ಷಣ ಎಷ್ಟು ಎಂಟಟೈನ್ಮೆಂಟ್ ಇರುತ್ತೋ ಅಷ್ಟೇ ಒಳ್ಳೆ ಮೆಸೇಜ್ ಕೂಡ ಈ ಚಿತ್ರದಲ್ಲಿದೆ. ಮೈಸೂರು, ಸಕಲೇಶಪುರ, ಮಡಿಕೇರಿಯಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಕೆ.ಎಂ.ರಘು ಮಾಹಿತಿ ಹಂಚಿಕೊಂಡರು.

ನಾಯಕ ನಟ ಶ್ರೀ ಮಾತನಾಡಿ, ನಿರ್ದೇಶಕರು ಸಿನಿಮಾ ಕಾನ್ಸೆಪ್ಟ್ ಬಗ್ಗೆ ಹೇಳಿದಾಗ ಇಂಟ್ರಸ್ಟಿಂಗ್ ಅನಿಸ್ತು. ಚಿತ್ರದಲ್ಲಿ ‘ಜಸ್ಟ್ ಪಾಸ್’ ಆದವರಿಗಾಗಿಯೇ ಒಂದು ಕಾಲೇಜ್ ತೆರೆಯಲಾಗಿರುತ್ತೆ. ಪ್ರಿನ್ಸಿಪಾಲ್ ಜಸ್ಟ್ ಪಾಸ್ ಆದವರಿಗಾಗಿ ಯಾಕೆ ಕಾಲೇಜ್ ತೆರೆದಿರುತ್ತಾರೆ. ಹೇಗೆ ಎಜುಕೇಶನ್ ನೀಡುತ್ತಾರೆ ಎನ್ನುವ ಸ್ಟೋರಿ ಚಿತ್ರದಲ್ಲಿದೆ. ಚಿತ್ರದಲ್ಲಿ ಅರ್ಜುನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾಯಕ ನಟನಾಗಿ ಇದು ನನ್ನ ನಾಲ್ಕನೇ ಸಿನಿಮಾ. ಬಹಳ ತರ್ಲೆ, ಚೇಷ್ಟೆ ಮಾಡುವಂತ ಕ್ಯಾರೆಕ್ಟರ್ ನನ್ನದು. ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರೋ ಪಾತ್ರ. ಜಸ್ಟ್ ಪಾಸ್ ಸಿನಿಮಾ ಫಸ್ಟ್ ಕ್ಲಾಸ್ ಆಗಿ ಮಾಡಲು ಎಲ್ಲರೂ ತಯಾರಾಗಿದ್ದೇವೆ ಎಲ್ಲರ ಆಶೀರ್ವಾದ ಬೇಕು ಎಂದು ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು.

ನಿರ್ಮಾಪಕ ಶಶಿಧರ್.ಕೆ.ವಿ ಮಾತನಾಡಿ ನಮ್ಮ ಬ್ಯಾನರ್ ಆರಂಭ ಮಾಡಿ ಒಳ್ಳೆ ಸ್ಟೋರಿ ಸಿಕ್ಕರೆ ಸಿನಿಮಾ ಮಾಡೋಣ ಎಂದು ಯೋಜನೆಯಲ್ಲಿದ್ದೆವು. ಆದ್ರೆ ಅದೇ ಸಮಯದಲ್ಲಿ ಕೊರೋನ ಆರಂಭವಾಯ್ತು. ಅದಾದ ನಂತರ ಕೆ.ಎಂ.ರಘು ಪರಿಚಯ ಆಯ್ತು. ಅವರು ಮಾಡಿಕೊಂಡಿರೋ ಸಬ್ಜೆಕ್ಟ್ ಇಷ್ಟವಾಯ್ತು. ಸಿನಿಮಾ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ವಿ. ಈ ಚಿತ್ರದಲ್ಲಿ ಕಾಮಿಡಿ, ಸೆಂಟಿಮೆಂಟ್, ಮೋಟಿವೇಶನ್ ಎಲ್ಲವೂ ಇದೆ. ಜನವರಿ 2ರಿಂದ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾ ಗ್ಯಾರಂಟಿ ಫಸ್ಟ್ ಕ್ಲಾಸ್ ಆಗಿ ಮೂಡಿ ಬರಲಿದೆ ಎಂಬ ನಂಬಿಕೆ ಇದೆ ಎಂದರು.

ನಾಯಕ ನಟಿ ಪ್ರಣತಿ ಮಾತನಾಡಿ ಬ್ರಹ್ಮಗಂಟು ಧಾರಾವಾಹಿಯಲ್ಲಿ ತಂಗಿ ಪಾತ್ರವನ್ನು ನಿರ್ವಹಿಸಿದ್ದೇನೆ. ನಟನೆಗೆ ನಾನು ಆಕಸ್ಮಿಕವಾಗಿ ಬಂದಿದ್ದು, ಶೃತಿ ನಾಯ್ಡು ಮೇಡಂ ನನ್ನ ಫೋಟೋ ನೋಡಿ ಸೀರಿಯಲ್ ನಲ್ಲಿ ನಟಿಸಲು ಅವಕಾಶ ನೀಡಿದ್ರು. ಅಲ್ಲಿಂದ ನನ್ನ ಜರ್ನಿ ಆರಂಭವಾಯ್ತು. ಕಿರುತೆರೆಯಾದ ನಂತರ ಬೆಳ್ಳಿತೆರೆಗೆ ಮೊದಲ ಹೆಜ್ಜೆ ಇಟ್ಟಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಕಿರುತೆರೆಯಲ್ಲಿ ಹೇಗೆ ಸಹಕಾರ ನೀಡಿದ್ರೋ ಅದೇ ರೀತಿ ಸಿನಿಮಾಗೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.

‘ಜಸ್ಟ್ ಪಾಸ್’ ಸಿನಿಮಾವನ್ನು ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಅರ್ಪಿತಾ, ಬಿಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ಅಭಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಪ್ರಜಾರಾಜ್ಯಕ್ಕೆ ಜೈ ಅಂದ್ರು ದೇವರಾಜ್; ಸಿನಿಮಾ ಟೀಸರ್ ರಿಲೀಸ್…

ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ” ಪ್ರಜಾರಾಜ್ಯ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟ ದೇವರಾಜ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ಇಲ್ಲಿ ದೇವರಾಜ್ ಚಿತ್ರದ ಮುಖ್ಯಪಾತ್ರದಲ್ಲೂ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ರಾಜಕೀಯ ಮುಖಂಡನ ಪಾತ್ರ ಮಾಡಿದ್ದೇನೆ. ಈಗಿನ ರಾಜಕೀಯದ ಲೋಪದೋಷಗಳನ್ನು ತೋರಿಸಿ, ಅದಕ್ಕೆ ಪರಿಹಾರವನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ. ಟೀಸರ್ ಚೆನ್ನಾಗಿದೆ. ಇನ್ನು, ಈ ಚಿತ್ರದ ನಿರ್ಮಾಪಕರಾದ ವರದರಾಜು ಅವರು ವೈದ್ಯರಾಗಿದ್ದು, ಸಾಮಾಜಿಕ ಕಾಳಜಿಯಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ದೇವರಾಜ್ ಹಾರೈಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ನಮ್ಮ ತಾತಂದಿರ ಕಾಲದಲ್ಲಿ ಸ್ವಾತಂತ್ರ್ಯ ಬಂದ ರಜತ ಮಹೋತ್ಸವ ಆಚರಿಸಿದರು. ನಮ್ಮ ತಂದೆಯ ಕಾಲದವರು ಸುವರ್ಣ ಮಹೋತ್ಸವ ಆಚರಣೆ ಮಾಡಿದರು. ನಾವು ಈಗ ‍ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಇಷ್ಟು ವರ್ಷವಾದರೂ ನಾವು ಯೋಚಿಸುವುದು ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಅಂತ? ಆದರೆ ನಮಗೆ ಬೇಕಾದ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ನಾವು ಯೋಚಿಸಿಯೇ ಇಲ್ಲ.

ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹೇಳಿರುವುದು ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಯೋಚಿಸಿ ಎಂದು. ನಾವು ಅದರ ಬಗ್ಗೆ ಯೋಚಸುತ್ತಲೇ ಇಲ್ಲ. ಎಂಬ ಪ್ರಧಾನ ಅಂಶದೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಚಿತ್ರವನ್ನು ನೋಡಿ, ದೇಶದ ಪ್ರಜೆಗಳಾಗಿ ನಮ್ಮ ಕರ್ತವ್ಯವೇನು? ಎಂದು ಎಲ್ಲರೂ ತಿಳಿಯಬಹುದು ಎಂದು ನಿರ್ಮಾಪಕ ಹಾಗು ನಟ ಡಾ.ವರದರಾಜು ಚಿತ್ರದ ಕುರಿತು ಮಾಹಿತಿ ನೀಡಿದರು.

ಉತ್ತಮ ಕಥೆಯುಳ್ಳ ಚಿತ್ರ, ಎಲ್ಲರ ಸಹಕಾರದಿಂದ ಉತ್ತಮವಾಗಿ ಬಂದಿದೆ. ನಾನು ಈ ಚಿತ್ರದಲ್ಲಿ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ – ನಾಯಕ ವಿಜಯ್ ಭಾರ್ಗವ.

ಚಿತ್ರದಲ್ಲಿ ಐದು ಹಾಡುಗಳಿದೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ವಿಜಯ್ ಭಾರ್ಗವ ಬರೆದಿರುವ ಹಾಡುಗಳನ್ನು ರಿಯಲ್ ಸ್ಟಾರ್ ಉಪೇಂದ್ರ, ವಿಜಯ್ ಪ್ರಕಾಶ್ ಮುಂತಾದ ಖ್ಯಾತ ಗಾಯಕರು ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹೇಳಿದರು.

ಚಿತ್ರದಲ್ಲಿ ನಟಿಸಿರುವ ದಿವ್ಯ, ಮೀಸೆ ಪ್ರಕಾಶ್, ಎಸ್ಕಾರ್ಟ್ ಶ್ರೀನಿವಾಸ್ ಶ್ರೀನಿವಾಸ್, ಚಿಕ್ಕ ಹೆಜ್ಜಾಜಿ‌ ಮಹದೇವ್, ಅಮೂಲ್ಯ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.

ನಿರ್ದೇಶಕ ಮಹೇಶ್ ಕುಮಾರ್, ಒಕ್ಕಲಿಗ ಸಂಘದ ನಿರ್ದೇಶಕರಾದ ಡಿ.ಕೆ.ರಮೇಶ್, ನಿರ್ಮಾಣ ನಿರ್ವಾಹಕ ರವಿಶಂಕರ್ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ, ಚಿತ್ರಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಹೀಗೊಂದು ಲಿಪ್ ಸ್ಟಿಕ್ ಸ್ಟೋರಿ! ಕೊಲೆಯ ತನಿಖೆ ಜಾಡಿನ ಹಿಂದೆ ರಿವೇಂಜ್ ಕಥೆ…

ಕೊರೋನಾ ನಂತರ ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಅಭಿರುಚಿಯೇ ಬದಲಾಗಿದೆ. ಇದೇ ಭಾಷೆಯ ಚಿತ್ರ ನೋಡಬೇಕೆನ್ನುವುದೂ ಹೊರಟು ಹೋಗಿದೆ. ಓಟಿಟಿಯಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ನೋಡಿದ ಮೇಲೆ ಕಂಟೆಂಟ್ ಆಧಾರಿತ ಚಿತ್ರಗಳ ಮೇಲೇ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಅದನ್ನು ಮನಗಂಡ ನಿರ್ದೇಶಕ ರಾಜೇಶ್ ಮೂರ್ತಿ ಅವರು ಉತ್ತಮ ಕಂಟೆಂಟ್ ಆಧಾರಿತ ಚಿತ್ರವೊಂದನ್ನು ಲಿಪ್ ಸ್ಟಿಕ್ ಮರ್ಡರ್ ಮೂಲಕ ಹೇಳ ಹೊರಟಿದ್ದಾರೆ. ಕನ್ನಡದಲ್ಲಿ ನಿರ್ಮಾಣವಾದ ಈ ಚಿತ್ರವನ್ನು ನೋಡಿದ ಬಾಲಿವುಡ್ ನ ಹೆಸರಾಂತ ಸಂಸ್ಥೆಯೊಂದು ಅತಿ ಹೆಚ್ಚು ಮೊತ್ತ ಕೊಟ್ಟು ಡಬ್ಬಿಂಗ್ ರೈಟ್ಸ್ ಖರೀದಿಸಿದ್ದು ತಮಿಳು,ತೆಲುಗು, ಮಲಯಾಳಂ ನಲ್ಲೂ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ.

ಇವರ ತಂದೆ ವಿಕೆ.ಮೂರ್ತಿ ಅವರು ಪ್ರಾದೇಶಿಕ ಭಾಷೆಯಲ್ಲಿ ಮೊಟ್ಟ ಮೊದಲ ಧಾರಾವಾಹಿ ನಿರ್ಮಿಸಿದವರು. ತಂದೆಯಂತೆಯೇ ತಮ್ಮ ಎಲ್ಲಾ ಚಿತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡಿ ಬೆಳೆಸುವ ಪರಿಪಾಠ ಬೆಳೆಸಿಕೊಂಡು ಬಂದಿರುವ ರಾಜೇಶ್ ಮೂರ್ತಿ, ಅವರ ನಿರ್ದೇಶನದ ಏಳನೇ ಚಿತ್ರ ‘ಲಿಪ್ ಸ್ಟಿಕ್ ಮರ್ಡರ್’ ಈ ಸಿನಿಮಾ ಡಿ.16ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಒಬ್ಬ ಅಬ್ ನಾರ್ಮಲ್ ಯುವತಿಯ ಕಥೆ ಇಟ್ಟುಕೊಂಡು ರಿವೇಂಜ್ ಸ್ಟೋರಿಯನ್ನು ತೆರೆಮೇಲೆ ತಂದಿದ್ದಾರೆ.

ನಮಗೆ ಗೊತ್ತಿಲ್ಲದ ಅಪರಿಚಿತರು ಕರೆದ ಜಾಗಕ್ಕೆ ಯಾವತ್ತೂ ಹೋಗಬಾರದು. ಅದು ತುಂಬಾ ಡೇಂಜರ್ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ನಟ, ರೂಪದರ್ಶಿ ಆರ್ಯನ್‌ರಾಜ್ ಈ ಚಿತ್ರದ ನಾಯಕನಾಗಿದ್ದು, ಕಥೆಯಲ್ಲಿ ನಡೆಯುವ ಸರಣಿ ಕೊಲೆಗಳನ್ನು ಪತ್ತೆಹಚ್ಚುವ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.


ಇನ್ವೆಸ್ಟಿಗೇಶನ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದ ಲಿಪ್‌ಸ್ಟಿಕ್ ಮರ್ಡರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.
ಸಿನಿವ್ಯಾಲಿ ಕ್ರಿಯೇಶನ್ಸ್ ಮೂಲಕ ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್‌ಮೂರ್ತಿ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ಆನ್‌ಲೈನ್ ಡೇಟಿಂಗ್ ಆಪ್ ಮೂಲಕ ಯುವತಿಯರು, ಯುವಕರನ್ನು ಯಾವರೀತಿ ತಮ್ಮ ಬಲೆಗೆ ಬೀಳಿಸಿಕೊಂಡು ಮೋಸ ಮಾಡುತ್ತಾರೆ ಎಂಬುದನ್ನು ಹೇಳಲಾಗಿದೆ.
ಡೇಟಿಂಗ್ ಆಪ್ ಮೂಲಕ ಮಹಿಳೆಯರು ಕರೆಯುವ ಜಾಗಕ್ಕೆ ಹೋಗುವ ಯುವಕರು ಯಾವರೀತಿ ಕೊಲೆಯಾಗುತ್ತಾರೆ, ನಾಯಕಿ ಏಕೆ ಇಂಥ ಯುವಕರನ್ನು ಟಾರ್ಗೆಟ್ ಮಾಡುತ್ತಾಳೆ ಎನ್ನುವುದೇ ಈ ಚಿತ್ರದ ಕಥೆ.

ಸರಣಿ ಕೊಲೆಗಳ ಹಿಂದಿರುವ ರಹಸ್ಯವನ್ನು ಇನ್ವೆಸ್ಟಿಗೇಶನ್ ಆಫೀಸರ್ ಪತ್ತೆ ಹಚ್ಚಿ ಆ ಕೊಲೆಗಾರ್ತಿ ಯಾರು, ಕೊಲೆಯಾದವರಿಗೂ ಆಕೆಗೂ ಏನಾದರೂ ಸಂಬಂಧವಿತ್ತೇ, ಆಕೆಯೇನು ಕಿಲ್ಲರಾ, ಒಬ್ಬ ಸೈಕೋನಾ ? ಹೀಗೆ ಏಳುವ ಹಲವಾರು ಸಂದೇಹಗಳಿಗೆ ಚಿತ್ರದಲ್ಲಿ ಉತ್ತರವಿದೆ.


ಹೈದರಾಬಾದ್ ಮೂಲದ ಅಲೈಕಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿತೀಶ್‌ಕುಮಾರ್ ಅವರ ಸಂಗೀತ ಸಂಯೋಜನೆ, ಆರ್.ವಿನೋದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಶ್ರೀ ಬಾಲಾಜಿ ಫೋಟೋ ಸ್ಟುಡಿಯೋಗೆ ಬಂದ ವಿಜಯರಾಘವೇಂದ್ರ! ಸಿನಿಮಾ ಹಾಡು ಬಿಡುಗಡೆ

ಕನ್ನಡದಲ್ಲಿ ಈಗಾಗಲೇ ತರಹವೇವಾರಿ ಶೀರ್ಷಿಕೆ ಇರುವ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಕೂಡ ಸೇರಿದೆ.
ಈಗಾಗಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಅದ್ಧೂರಿಯಾಗಿ ರಿಲೀಸ್ ಆಗಿವೆ.

ಆಡಿಯೋ ರಿಲೀಸ್ ವೇಳೆ ಅತಿಥಿಯಾಗಿ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ರವರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರು ಹಾಗೂ ಕನ್ನಡ ಚಲನಚಿತ್ರದ ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಆಗಮಿಸಿ ಹಾಡು ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದರು.

ಹಿರಿಯ ಛಾಯಾಗ್ರಾಹ ಅಶೋಕ್ ಕಶ್ಯಪ್ ಮಾತನಾಡಿ, ” ಮಲೆನಾಡಿನ ಸೌಂದರ್ಯಕ್ಕೆ ತಾನು ಬೆರಗಾಗಿ, ಅಲ್ಲೇ ಹಲವು ವರ್ಷಗಳ ಕಾಲ ಅಲ್ಲೇ ಇದ್ದು ಅಲ್ಲಿಯ ಭಾಷೆ – ಸಂಸ್ಕೃತಿಯ ಬಗ್ಗೆ ಮಾರು ಹೋಗಿದ್ದೆ, ಈಗ ಈ ಸಿನೆಮಾ ಮತ್ತೆ ತನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದೆ, ಒಬ್ಬ ಫೋಟೋಗ್ರಾಫರ್ ಜೀವನದ ಬಗ್ಗೆ ಇದುವರೆಗೆ ಬರದ ಕಥೆ ಇಲ್ಲಿದೆ. ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ, ಚಿತ್ರಕ್ಕೆ ಗೆಲುವು ಸಿಗಲಿ ಎಂದು ಶುಭ ಹಾರೈಸಿದರು.

ವಿಜಯ ರಾಘವೇಂದ್ರ ಮಾತನಾಡಿ, “ಊರು ಕಥೆಯ ಬೇರು, ಒಂದು ಊರಿನಲ್ಲಿ ಹಲವು ತರಹದ ಕಥೆ ಇರೋದು ಸಹಜ. ಅದು ಹೃದಯದಿಂದ ಹುಟ್ಟೋ ಕಥೆಯಾಗಿ ಹೊರಬರುತ್ತೆ, ಅಂತಹ ಕಥೆಗಳು ಸೋತಿರೋ ಉದಾರಹಣೆ ತುಂಬಾ ಕಡಿಮೆ, ಇಂತಹ ಸಿನಿಮಾವನ್ನು ಜನರು ಇಷ್ಟ ಪಡುತ್ತಾರೆ, ಈಗಿನ ಸಿನೆಮಾ ನೋಡೋ ಮಂದಿ ಇದನ್ನೇ ಎದುರು ನೋಡುತ್ತಿದ್ದಾರೆ, ಈ ತಂಡದ ಜೊತೆ ನಾನು ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ, ನಾನೊಬ್ಬ ಕಲಾವಿದನಾಗಿ ಈ ಸಿನೆಮಾ ನೋಡಿ ಅಂತ ಹೇಳಲ್ಲ ಒಬ್ಬ ಪ್ರೇಕ್ಷಕನಾಗಿ ಈ ಸಿನಿಮಾ ನಾನು ನೋಡ್ತೀನಿ ನೀವು ನೋಡಿ ” ಎಂದರು.

ನಿರ್ಮಾಪಕ ವೆಂಕಟೇಶ್ವರ ರಾವ್, ಬಳ್ಳಾರಿ ಮೊದಲ ಸಲ ಸೃಜನ ಪ್ರೊಡಕ್ಷನ್ ಅಡಿ ಸಿನಿಮಾ ನಿರ್ಮಿಸಿದ್ದಾರೆ. ಅವರು,
“ಹಲವಾರು ಜನ ಸಿನಿಮಾ ಮಾಡಲು ಹೊರಟಾಗ ಬೇಡ ಎಂದು ತಲೆಕೆಡಿಸಲು ಪ್ರಯತ್ನ ಪಟ್ಟರು., ಆದರೆ ಈ ಸಿನೆಮಾ ಎಲ್ಲರ ಮನಸ್ಸನ್ನು ಗೆಲ್ಲೋದರಲ್ಲಿ ಯಾವುದೇ ಸಂಶಯ ಇಲ್ಲ,ಈ ಸಿನಿಮಾ ಮಾಡಿದಕ್ಕೆ ನನಗೆ ತೃಪ್ತಿ ಇದೆ ಎಂದು ತಿಳಿಸಿದರು,
ಈ ವೇಳೆ ಚಿತ್ರತಂಡ ಚಿತ್ರೀಕರಣದ ಅನುಭವ ಹಂಚಿಕೊಂಡಿತು.

ನಿರ್ದೇಶಕ ರಾಜೇಶ್ ಧ್ರುವ ಮಾತನಾಡಿ, “23 ದಿನ ಮಳೆಯಲ್ಲೇ ಈ ಸಿನೆಮಾ ಚಿತ್ರೀಕರಣ ಮಾಡಲಾಗಿದ್ದು, ಕೇವಲ 5 ತಿಂಗಳಲ್ಲಿ ತೆರೆಗೆ ತರಲು ಸಜ್ಜು ಮಾಡಿದ್ದೇವೆ, ಯಾವುದೇ ಸಿನಿಮಾ ಇಟ್ಟುಕೊಂಡು ಹಳೆಯದಾದಷ್ಟು ಅದರ ಸಾರ ಹೊರಟು ಹೋಗುತ್ತೆ, ನನ್ನ ಊರಿನಲ್ಲಿ ಅನುಭವಕ್ಕೆ ಬಂದ ಹಲವು ಅನುಭವನ್ನು, ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡು ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂಗೆ ತಯಾರು ಮಾಡಲಾಗಿದ್ದು, ಎಲ್ಲ ಕಲಾವಿದರು ಹೊಸಬರೇ. ಆದರೆ ಎಲ್ಲಿಯೂ ಕೂಡ ನೋಡುಗರಿಗೆ ಅದರ ಅರಿವೇ ಆಗದಂತೆ ನೈಜವಾಗಿ ಅಭಿನಯ ಮಾಡಿಸಲಾಗಿದೆ ” ಎಂದರು.

ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು ಈ ವೇಳೆ ಅನುಭವನ್ನು ಹಂಚಿಕೊಂಡರು,
ಈ ಸಿನೆಮಾ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಕಿರುತೆರೆ ಟು ಬೆಳ್ಳಿತೆರೆ…

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗತ್ಮಕ ಚಿತ್ರದ ಕಡೆ ಮುಖ ಮಾಡಿದೆ, ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿ, ಆ ಸಾಲಿಗ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಚಿತ್ರ ಕೂಡ ಸೇರಿದೆ.
ಇಡೀ ಚಿತ್ರ ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣ ವಾಗಿದೆ. ಅಲ್ಲಿಯ ಸ್ಥಳೀಯ ಪ್ರತಿಭೆಗಳು ಕಾಣಿಸಿಕೊಂಡಿವೆ.

ಈ ಚಿತ್ರದ ವಿಶೇಷತೆ ಅಂದರೆ, ಬಳಸಿರುವ ಉತ್ತರ ಕನ್ನಡ ಭಾಷೆ.
ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಜೊತೆಗೊಂದು ನವಿರಾದ ಲವ್ ಸ್ಟೋರಿ.

ನಿರ್ದೇಶಕರಾಗಿ ಹಾಗೂ ಮುಖ್ಯ ಪಾತ್ರದಲ್ಲಿ ಕಿರುತೆರೆಯ 6 ವರ್ಷಗಳ ಕಾಲ ಸಂಚಲನ ಮೂಡಿಸಿದ್ದ ನಟ ರಾಜೇಶ್ ಧ್ರುವ ಇಲ್ಲಿದ್ದಾರೆ. ಉಳಿದಂತೆ ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಹಾಗೂ ಹಲವಾರು ಹೊಸ ಕಲಾವಿದರು ಕಾಣಿಸಿಕೊಂಡಿದ್ದಾರೆ.

ಕಥೆ – ಚಿತ್ರಕಥೆಗೆ ಅಭಿಷೇಕ್ ಶಿರಸಿ ಪಲ ಹಾಗೂ ಪೃಥ್ವಿಕಾಂತ ಪೆನ್ನು ಹಿಡಿದಿದ್ದಾರೆ. ಅಜಿತ್ ಬೊಪ್ಪನಳ್ಳಿ ಸಂಭಾಷಣೆ ಬರೆದಿದ್ದಾರೆ.

ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣವಿದೆ. ಗಣಪತಿ ಭಟ್ ಸಂಕಲನ ಮಾಡಿದ್ದಾರೆ.
ಚಿತ್ರದಲ್ಲಿ 2 ಹಾಡುಗಳಿಗೆ
ಶ್ರೀರಾಮ್ ಗಂಧರ್ವ ಸಂಗೀತ ನೀಡಿದ್ದಾರೆ‌ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಇದೆ, ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕಿಶೋರ್ ಜೊತೆ ಪದ್ಮನಾಭ್! ನಿರ್ಮಾಪಕರ ಬರ್ತ್ ಡೇಗೆ ಸೆಲ್ವ ಸಿನಿಮಾ ಶೀರ್ಷಿಕೆ ಅನಾವರಣ…

ಜಾನ್ ಜಾನಿ ಜನಾರ್ದನ, ಕಾಲೇಜ್ ಕುಮಾರ್ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಎಲ್. ಪದ್ಮನಾಭ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಪದ್ಮನಾಭ ಅವರು ತನ್ವಿ ಮೀಡಿಯಾ ಕಾರ್ಪ್ ಸಂಸ್ಥೆ ಲಾಂಛನದಲ್ಲಿ ನಿರ್ಮಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಬಹುಭಾಷಾ ನಟ ಕಿಶೋರ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ “ಸೆಲ್ವ” ಎಂದು ಹೆಸರಿಡಲಾಗಿದೆ.

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದು.
ನಂದು ಮಲೇಲ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಸದ್ಯದಲ್ಲೇ ಅನಾವರಣವಾಗಲಿದೆ.
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸಜಾದ್ ಕಾಕ್ಕು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ.

Categories
ಸಿನಿ ಸುದ್ದಿ

ಕೊರಗಜ್ಜ ದೈವ ಬಳಿ ಶಿವಣ್ಣ ಭೇಟಿ: ಕರಿ ಹೈದ ಕರಿ ಅಜ್ಜ ತಂಡ ಖುಷಿ…

ಕನ್ನಡದಲ್ಲಿ “ಕೊರಗಜ್ಜ” ಸಿನಿಮಾ ಆಗುತ್ತಿರುವ ಹಿನ್ನೆಲೆ ಯಲ್ಲೇ ಹಿರಿಯ ನಟ ಶಿವರಾಜ್ ಕುಮಾರ್ ಅವರು ಮಂಗಳೂರು ಸಮೀಪದ ಕುತ್ತಾರುವಿನ ಕೊರಗಜ್ಜ ದೈವ ಸ್ಥಾನಕ್ಕೆ ಭೇಟಿ ನೀಡಿ ಚಕ್ಕುಲಿ-ವೀಳ್ಯ ಸಮರ್ಪಿಸಿರುವುದು “ಕರಿ ಹೈದ ಕರಿ ಅಜ್ಜ” ಚಿತ್ರ ತಂಡಕ್ಕೆ ಇನ್ನಿಲ್ಲದ ಖುಷಿ ನೀಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ನಟ ಕಬೀರ್ ಬೇಡಿ ಜೊತೆ ಕನ್ನಡದ ಖ್ಯಾತ ಕಲಾವಿದರಾದ ಭವ್ಯ ಮತ್ತು ಶ್ರುತಿ ಕೂಡಾ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಭರತ್ ಸೂರ್ಯ ಎನ್ನುವ ಹೊಸ ನಟನ ಪರಿಚಯವಾಗುತ್ತಿದೆ.


ತಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದು , ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವ ಇದೇ ಸಮಯದಲ್ಲಿ ಶಿವರಾಜ್ ಕುಮಾರ್ ರವರಂತಹ ಹಿರಿಯ ನಟರು ಕೊರಗಜ್ಜನ ದೈವಸ್ಥಾನಕ್ಕೆ ಭೇಟಿ ನೀಡಿರುವುದು ನಮ್ಮ ಚಿತ್ರಕ್ಕೆ ಆಶಿರ್ವಾದ ರೀತಿಯಲ್ಲಿ ಪರಿಣಮಿಸಲಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ.

ಚಿತ್ರೀಕರಣ ಸಂಪೂರ್ಣ ಮುಗಿದಿರುವ ಈ ಸಮಯದಲ್ಲಿ ಕೊರಗಜ್ಜನ ದೈವಸ್ಥಾನದ ದರ್ಶನ ಪಡೆದಿರುವ ನಮ್ಮ ಹಿರಿಯ ಕಲಾವಿದ ಶಿವರಾಜ್ ಕುಮಾರ್ ರವರ ಪ್ರಾರ್ಥನೆಯಿಂದಾಗಿ ಖಂಡಿತಾ ನಮ್ಮ ಚಿತ್ರ ಯಶಸ್ವಿಗೊಳ್ಳಲ್ಲಿದೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಎಲ್ರೂನ ಲಾಕ್ ಮಾಡೋಕೆ ನಾಗೇಂದ್ರ ಅರಸ್ ರೆಡಿ! ಅರಸರ ಹೀಗೊಂದು ಪ್ರಯೋಗಾತ್ಮಕ ಚಿತ್ರ ಕಣ್ರೀ…

ಕನ್ನಡದಲ್ಲಿ ಈಗಾಗಲೇ ಹಲವಾರು ಪ್ರಯೋಗಾತ್ಮಕ ಸಿನಿಮಾಗಳು ಬಂದಿವೆ. ಆ ಸಾಲಿಗೆ ‘ಲಾಕ್’ ಸಿನಿಮಾ ಕೂಡ ಒಂದು. ಇಂಥದ್ದೊಂದು ಪ್ರಯೋಗಕ್ಕೆ ಇಳಿದಿರೋದು ನಟ, ನಿರ್ದೇಶಕ, ನಿರ್ಮಾಪಕ, ಸಂಕಲನಕಾರ ನಾಗೇಂದ್ರ ಅರಸ್. ಇದೊಂದು ವಿಭಿನ್ನ ಕಥೆಯ ಚಿತ್ರ. ಅವರದೇ ನಿರ್ದೇಶನ, ನಟನೆ, ನಿರ್ಮಾಣ, ಸಂಕಲನ ಇರುವ ಅಪರೂಪದ ಸಿನಿಮಾ. ಪ್ರೇಕ್ಷಕರ ಮನವನ್ನು ‘ಲಾಕ್’ ಮಾಡೋಕೆ ಸಜ್ಜಾಗಿದ್ದಾರೆ ನಾಗೇಂದ್ರ ಅರಸ್. ಆ ಕುರಿತ ಒಂದಷ್ಟು ಮಾಹಿತಿ

ಹೌದು, ನಾಗೇಂದ್ರ ಅರಸ್, ಸದಾ ಏನಾದರೊಂದು ಸಿನಿಮಾ ಚಟುವಟಿಕೆಯಲ್ಲಿರುವ ಅಪರೂಪದ ನಟ ಕಮ್ ನಿರ್ದೇಶಕ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಯಾವಾಗಲೂ ಉತ್ಸಾಹದಿಂದಲೇ ಚಿತ್ರ ತಂಡದ ಜೊತೆ ಕೆಲಸ ಮಾಡುವ ಮತ್ತು ಅವರನ್ನು ಪ್ರೋತ್ಸಾಹಿಸುವ ನಟ ಅಂದರೆ ತಪ್ಪಿಲ್ಲ. ಹೊಸಬರಿರಲಿ, ಹಳಬರೇ ಇರಲಿ ಅವರ ಜೊತೆ ನಗುತ್ತಲೇ ಕೆಲಸ ಮಾಡಿ ಮನಸ್ಸಿಗೆ ಹತ್ತಿರವಾಗುವ ನಟ.

ನಟನೆ, ನಿರ್ದೇಶನ, ಸಂಕಲನ, ನಿರ್ಮಾಣ, ಜೊತೆಗೆ ಮುಖಪುಟದಲ್ಲೂ ಸದಾ ತಮ್ಮ ‘ಫೇಸ್’ ವ್ಯಾಲ್ಯು ಹೆಚ್ಚಿಸಿಕೊಳ್ಳುತ್ತಲೇ, ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡ ನಟ ಕಮ್ ನಿರ್ದೇಶಕ. ಈಗ ಅವರೊಂದು ಸ್ಪೆಷಲ್ ಕಥೆ ಹೆಣೆದು, ನಿರ್ದೇಶನದ ಜೊತೆ ಅವರೊಬ್ಬರೇ ನಟಿಸಿರುವ ಲಾಕ್ ಇನ್ನೇನು ಪ್ರೇಕ್ಷಕರ ಮುಂದೆ ಓಪನ್ ಆಗೋಕೆ ಸಜ್ಜಾಗುತ್ತಿದೆ.

ಈ ಲಾಕ್ ಅಂದಾಕ್ಷಣ, ನೆನಪಾಗೋದೇ ಲಾಕ್ಡೌನ್. ಕೊರೊನಾ ತಂದಿಟ್ಟ ಅವಾಂತರವೆ ಈ ‘ಲಾಕ್’. ಈ ಸಮಯದಲ್ಲೇ ಹೊಳೆದಂತಹ ಕಥೆಯೊಂದು ಈಗ ಸಿನಿಮಾ ರೂಪ ತಾಳಿದೆ ಅನ್ನೋದು ವಿಶೇಷ.

ಇದೊಂದು ಪ್ರಯೋಗಾತ್ಮಕ ಚಿತ್ರವಷ್ಟೇ ಅಲ್ಲ, ಒಂದೇ ಒಂದು ಪಾತ್ರ ಇರುವ ಅಪರೂಪದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಆ ಕಾರಣಕ್ಕೆ ‘ಲಾಕ್’ ವಿಶೇಷವೆನಿಸುತ್ತೆ. ಸಿನಿಮಾಗೆ ಈಗಾಗಲೇ ಸೆನ್ಸಾರ್ ಅಗಿದೆ. ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

ಒಂದೇ ಮನೆ, ಒಂದೇ ಪಾತ್ರ!

ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. “ಲಾಕ್” ಮೊದಲೇ ಹೇಳಿದಂತೆ, ಪ್ರಯೋಗಾತ್ಮಕ ಸಿನಿಮಾ.
ನಾಗೇಂದ್ರ ಅರಸ್ ಅವರೇ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಟಿಸಿ, ನಿರ್ಮಾಣ ಮಾಡಿ ಸಂಕಲನದ ಜೊತೆ ನಿರ್ದೇಶನ ಮಾಡಿದ್ದಾರೆ.

ಹಾಗಾದರೆ ಈ ಸಿನಿಮಾದ ಒನ್ ಲೈನ್ ಏನು? ಇದಕ್ಕೆ ಉತ್ತರ, ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ. ಇಡೀ ದೇಶವೇ ಲಾಕ್ಡೌನ್ ಆದಾಗ ಮನೆಯೊಂದರಲ್ಲಿ ನಡೆಯೋ ಘಟನೆಯೊಂದು ವಿಚಿತ್ರ ತಿರುವು ಪಡೆದುಕೊಳ್ಳುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆ.

ಭರವಸೆಯ ಲಾಕ್

ಸಾಮಾನ್ಯವಾಗಿ, ಕಮರ್ಷಿಯಲ್ ಕಥೆಗಳನ್ನು ಹೇಗೆ ಬೇಕಾದರೂ ಚಿತ್ರೀಕರಿಸಬಹುದು. ಆದರೆ, ಒಂದೇ ಪಾತ್ರ ಇಟ್ಟುಕೊಂಡು, ಒಂದೇ ಮನೆಯಲ್ಲಿ ಕುತೂಹಲ ಎನಿಸುವ ರೀತಿ ಕಟ್ಟಿಕೊಡುವುದಿದೆಯಲ್ಲ ಅದು ಚಾಲೆಂಜ್. ಅಂತಹ ಚಾಲೆಂಜಿಂಗ್ ಸಿನಿಮಾ ಮಾಡಿರುವ ನಾಗೇಂದ್ರ ಅರಸ್, ಇದರ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.

ತೆರೆ ಮೇಲೆ ಅವರೊಬ್ಬರೇ ರಾರಾಜಿಸಬಹುದು. ಆದರೆ, ತೆರೆಯ ಹಿಂದೆ ಒಂದಷ್ಟು ಒಳ್ಳೆಯ ಮನಸ್ಸುಗಳು ಸಾಥ್ ಕೊಟ್ಟಿವೆ. ಸತೀಶ್ ಬಾಬು ಸಂಗೀತ ನೀಡಿದರೆ, ಎಂ.ಬಿ.ಅಳ್ಳಿಕಟ್ಟಿ ಕ್ಯಾಮೆರಾ ಹಿಡಿದಿದ್ದಾರೆ. ಅದೇನೆ ಇರಲಿ, ನಾಗೇಂದ್ರ ಅರಸ್ ಅವರ ಈ ಪ್ರಯತ್ನಕ್ಕೆ ಗೆಲುವು ಸಿಗಲಿ ಅನ್ನೋದೇ ‘ ಸಿನಿ ಲಹರಿ‘ ಆಶಯ.

Categories
ಸಿನಿ ಸುದ್ದಿ

ಶ್ರೀ ಜೊತೆ ಪ್ರಣತಿ! ಜಸ್ಟ್ ಪಾಸ್ ಆಗೋಕೆ ಜೋಡಿ ರೆಡಿ…

‘ತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಹೊಸ ಸಬ್ಜೆಕ್ಟ್ ಹೊತ್ತು ಬಂದಿದ್ದಾರೆ. ಈ ಬಾರಿ ಯೂತ್ ಫುಲ್ ಸಬ್ಜೆಕ್ಟ್ ಕಥೆ ಹೇಳಲು ರೆಡಿಯಾಗಿದ್ದಾರೆ. ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದ್ದು, ಚಿತ್ರಕ್ಕೆ ‘ಜಸ್ಟ್ ಪಾಸ್’ ಎಂದು ಶೀರ್ಷಿಕೆ ಇಡಲಾಗಿದೆ.

ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಇರುವುದೆಲ್ಲವ ಬಿಟ್ಟು, ಗಜಾನನ ಗ್ಯಾಂಗ್ ಖ್ಯಾತಿಯ ನಟ ಶ್ರೀ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಸ್ಕ್ರಿಪ್ಟ್ ಕೆಲಸಗಳೆಲ್ಲ ಮುಗಿಸಿ ಶೂಟಿಂಗ್ ಹೊರಡಲು ಸಿನಿಮಾ ತಂಡ ಸಕಲ ತಯಾರಿ ನಡೆಸಿಕೊಂಡಿದೆ. ಚಿತ್ರಕ್ಕೆ ಹೀರೋಯಿನ್ ಹುಡುಕಾಟಲ್ಲಿದ್ದ ಚಿತ್ರತಂಡಕ್ಕೆ ಹೊಸ ಪ್ರತಿಭೆ ಪ್ರಣತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್, ಫ್ಯಾಮಿಲಿ ವಾರ್ ಸೀಸನ್ 2 ರನ್ನರ್ ಅಪ್ ಆಗಿರುವ ಪ್ರಣತಿ ಬ್ರಹ್ಮಗಂಟು ಸೀರಿಯಲ್ ನಲ್ಲೂ ನಟಿಸಿದ್ದಾರೆ. ಈಗ ಜಸ್ಟ್ ಪಾಸ್ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಕೆ.ಎಂ ರಘು. ನಿರ್ದೇಶನದ ದೊಡ್ಡಹಟ್ಟಿ ಬೋರೇಗೌಡ ಸಿನಿಮಾ ಬೆಂಗಳೂರು ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ ಅತ್ಯುತ್ತಮ ಮೊದಲ ಸಿನಿಮಾ ಎಂಬ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿತ್ತು. ಮೊಲದ ಬಾರಿ ನಿರ್ದೇಶಕರು ಯೂತ್ ಫುಲ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದು, ಇದೇ ಡಿಸೆಂಬರ್ 14ರಂದು ಸಿನಿಮಾ ಸೆಟ್ಟೇರಲಿದೆ.

ರಾಯ್ಸ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ಜಸ್ಟ್ ಪಾಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಅರ್ಪಿತಾ, ಚಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ಅಭಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

error: Content is protected !!