ಹೀಗೊಂದು ಲಿಪ್ ಸ್ಟಿಕ್ ಸ್ಟೋರಿ! ಕೊಲೆಯ ತನಿಖೆ ಜಾಡಿನ ಹಿಂದೆ ರಿವೇಂಜ್ ಕಥೆ…

ಕೊರೋನಾ ನಂತರ ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಅಭಿರುಚಿಯೇ ಬದಲಾಗಿದೆ. ಇದೇ ಭಾಷೆಯ ಚಿತ್ರ ನೋಡಬೇಕೆನ್ನುವುದೂ ಹೊರಟು ಹೋಗಿದೆ. ಓಟಿಟಿಯಲ್ಲಿ ಎಲ್ಲಾ ಭಾಷೆಯ ಚಿತ್ರಗಳನ್ನು ನೋಡಿದ ಮೇಲೆ ಕಂಟೆಂಟ್ ಆಧಾರಿತ ಚಿತ್ರಗಳ ಮೇಲೇ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಅದನ್ನು ಮನಗಂಡ ನಿರ್ದೇಶಕ ರಾಜೇಶ್ ಮೂರ್ತಿ ಅವರು ಉತ್ತಮ ಕಂಟೆಂಟ್ ಆಧಾರಿತ ಚಿತ್ರವೊಂದನ್ನು ಲಿಪ್ ಸ್ಟಿಕ್ ಮರ್ಡರ್ ಮೂಲಕ ಹೇಳ ಹೊರಟಿದ್ದಾರೆ. ಕನ್ನಡದಲ್ಲಿ ನಿರ್ಮಾಣವಾದ ಈ ಚಿತ್ರವನ್ನು ನೋಡಿದ ಬಾಲಿವುಡ್ ನ ಹೆಸರಾಂತ ಸಂಸ್ಥೆಯೊಂದು ಅತಿ ಹೆಚ್ಚು ಮೊತ್ತ ಕೊಟ್ಟು ಡಬ್ಬಿಂಗ್ ರೈಟ್ಸ್ ಖರೀದಿಸಿದ್ದು ತಮಿಳು,ತೆಲುಗು, ಮಲಯಾಳಂ ನಲ್ಲೂ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ.

ಇವರ ತಂದೆ ವಿಕೆ.ಮೂರ್ತಿ ಅವರು ಪ್ರಾದೇಶಿಕ ಭಾಷೆಯಲ್ಲಿ ಮೊಟ್ಟ ಮೊದಲ ಧಾರಾವಾಹಿ ನಿರ್ಮಿಸಿದವರು. ತಂದೆಯಂತೆಯೇ ತಮ್ಮ ಎಲ್ಲಾ ಚಿತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡಿ ಬೆಳೆಸುವ ಪರಿಪಾಠ ಬೆಳೆಸಿಕೊಂಡು ಬಂದಿರುವ ರಾಜೇಶ್ ಮೂರ್ತಿ, ಅವರ ನಿರ್ದೇಶನದ ಏಳನೇ ಚಿತ್ರ ‘ಲಿಪ್ ಸ್ಟಿಕ್ ಮರ್ಡರ್’ ಈ ಸಿನಿಮಾ ಡಿ.16ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಒಬ್ಬ ಅಬ್ ನಾರ್ಮಲ್ ಯುವತಿಯ ಕಥೆ ಇಟ್ಟುಕೊಂಡು ರಿವೇಂಜ್ ಸ್ಟೋರಿಯನ್ನು ತೆರೆಮೇಲೆ ತಂದಿದ್ದಾರೆ.

ನಮಗೆ ಗೊತ್ತಿಲ್ಲದ ಅಪರಿಚಿತರು ಕರೆದ ಜಾಗಕ್ಕೆ ಯಾವತ್ತೂ ಹೋಗಬಾರದು. ಅದು ತುಂಬಾ ಡೇಂಜರ್ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ. ನಟ, ರೂಪದರ್ಶಿ ಆರ್ಯನ್‌ರಾಜ್ ಈ ಚಿತ್ರದ ನಾಯಕನಾಗಿದ್ದು, ಕಥೆಯಲ್ಲಿ ನಡೆಯುವ ಸರಣಿ ಕೊಲೆಗಳನ್ನು ಪತ್ತೆಹಚ್ಚುವ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.


ಇನ್ವೆಸ್ಟಿಗೇಶನ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದ ಲಿಪ್‌ಸ್ಟಿಕ್ ಮರ್ಡರ್ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.
ಸಿನಿವ್ಯಾಲಿ ಕ್ರಿಯೇಶನ್ಸ್ ಮೂಲಕ ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್‌ಮೂರ್ತಿ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ಆನ್‌ಲೈನ್ ಡೇಟಿಂಗ್ ಆಪ್ ಮೂಲಕ ಯುವತಿಯರು, ಯುವಕರನ್ನು ಯಾವರೀತಿ ತಮ್ಮ ಬಲೆಗೆ ಬೀಳಿಸಿಕೊಂಡು ಮೋಸ ಮಾಡುತ್ತಾರೆ ಎಂಬುದನ್ನು ಹೇಳಲಾಗಿದೆ.
ಡೇಟಿಂಗ್ ಆಪ್ ಮೂಲಕ ಮಹಿಳೆಯರು ಕರೆಯುವ ಜಾಗಕ್ಕೆ ಹೋಗುವ ಯುವಕರು ಯಾವರೀತಿ ಕೊಲೆಯಾಗುತ್ತಾರೆ, ನಾಯಕಿ ಏಕೆ ಇಂಥ ಯುವಕರನ್ನು ಟಾರ್ಗೆಟ್ ಮಾಡುತ್ತಾಳೆ ಎನ್ನುವುದೇ ಈ ಚಿತ್ರದ ಕಥೆ.

ಸರಣಿ ಕೊಲೆಗಳ ಹಿಂದಿರುವ ರಹಸ್ಯವನ್ನು ಇನ್ವೆಸ್ಟಿಗೇಶನ್ ಆಫೀಸರ್ ಪತ್ತೆ ಹಚ್ಚಿ ಆ ಕೊಲೆಗಾರ್ತಿ ಯಾರು, ಕೊಲೆಯಾದವರಿಗೂ ಆಕೆಗೂ ಏನಾದರೂ ಸಂಬಂಧವಿತ್ತೇ, ಆಕೆಯೇನು ಕಿಲ್ಲರಾ, ಒಬ್ಬ ಸೈಕೋನಾ ? ಹೀಗೆ ಏಳುವ ಹಲವಾರು ಸಂದೇಹಗಳಿಗೆ ಚಿತ್ರದಲ್ಲಿ ಉತ್ತರವಿದೆ.


ಹೈದರಾಬಾದ್ ಮೂಲದ ಅಲೈಕಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿತೀಶ್‌ಕುಮಾರ್ ಅವರ ಸಂಗೀತ ಸಂಯೋಜನೆ, ಆರ್.ವಿನೋದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Related Posts

error: Content is protected !!