ತಮ್ಮ ಅಮೋಘ ನಟನೆಯ ಮೂಲಕ ಜನಪ್ರಿಯರಾಗಿರುವ ನಟ ಕೋಮಲ್ ಕುಮಾರ್, ಐದು ವರ್ಷಗಳ ನಂತರ ನಾಯಕರಾಗಿ ನಟಿಸುತ್ತಿರುವ ಚಿತ್ರ “ಕಾಲಾಯಾ ನಮಃ”.
ಚಿತ್ರಕ್ಕೆ ಈಗ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗ ಮತ್ತೊಂದು ಖುಷಿಯ ವಿಚಾರವೆಂದರೆ, ತಮ್ಮ ನಟನೆಯ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ಬಹುಭಾಷಾ ನಟ ಪ್ರಕಾಶ್ ರೈ ” ಕಾಲಾಯಾ ನಮಃ” ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಪ್ರಕಾಶ್ ರೈ ಅವರ ಅಭಿನಯದ ಸನ್ನಿವೇಶಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.
ಅನುಸೂಯ ಕೋಮಲ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮತಿವಣನ್ ನಿರ್ದೇಶಿಸುತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಕೋಮಲ್ ಕುಮಾರ್, ಆಸಿಯಾ ಫಿರ್ದೋಸ್, ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಪಾದರಾಯ ಸಿನಿಮಾ ಕೈಗೆತ್ತಿಕೊಂಡಿದ್ದು ಗೊತ್ತೇ ಇದೆ. ಆಗ ಸಿನಿಮಾಗೆ ಜಾಕ್ ಮಂಜು ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪಾದರಾಯ ಸಿನಿಮಾದಿಂದ ಜಾಕ್ ಮಂಜು ಹಿಂದೆ ಸರಿದಿದ್ದಾರೆ. ಈಗ ಆರ್.ಚಂದ್ರು ಈ ಸಿನಿಮಾ ನಿರ್ಮಾಪಕರು. ಕಬ್ಜ ಜೊತೆಗೆ ಈ ಸಿನಿಮಾಗೂ ಚಂದ್ರು ಹಣ ಹಾಕಲಿದ್ದಾರೆ
ಚಕ್ರವರ್ತಿ ಚಂದ್ರಚೂಡ್ ಹಾಗೂ ನಿರ್ದೇಶಕ ನಾಗಶೇಖರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಪಾದರಾಯ’. ಹನುಮ ಜಯಂತಿಯಂದು ಟೈಟಲ್ ರಿವೀಲ್ ಮಾಡಿ ಸಂಚಲನ ಸೃಷ್ಟಿಸಿದ್ದ ಚಿತ್ರತಂಡ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದೆ, ಸದ್ಯ ಲೇಟೆಸ್ಟ್ ಅಪ್ಡೇಟ್ ಒಂದು ಚಿತ್ರತಂಡದಿಂದ ಹೊರಬಿದ್ದಿದೆ. ‘ಪಾದರಾಯ’ ಚಿತ್ರದ ಮೂಲಕ ಸೆನ್ಸೇಷನಲ್ ಸಿಂಗರ್ ಮಂಗ್ಲಿ ನಾಯಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.
‘ಕಣ್ಣೇ ಅದಿರಿಂದಿ’ ಹಾಡಿನ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ, ಅಪಾರ ಖ್ಯಾತಿ ಗಳಿಸಿಕೊಂಡ ತೆಲುಗಿನ ಗಾಯಕಿ ಮಂಗ್ಲಿ. ಆ ನಂತರ ಕನ್ನಡದಲ್ಲೂ ಹಲವು ಹಾಡುಗಳಿಗೆ ದನಿಯಾಗಿರುವ ಮಂಗ್ಲಿ ಕನ್ನಡಿಗರ ಪ್ರೀತಿಗೂ ಪಾತ್ರರಾಗಿದ್ದಾರೆ. ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಮಂಗ್ಲಿ ಪಾದರ್ಪಣೆ ಮಾಡುತ್ತಿದ್ದಾರೆ. ಅದು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಮುಖಾಂತರ ಅನ್ನೋದು ವಿಶೇಷ.
ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ‘ಪಾದರಾಯ’ ಚಿತ್ರಕ್ಕೆ ಮಂಗ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಗಾಯಕಿ, ನಿರೂಪಕಿಯಾಗಿ ಸೈ ಎನಿಸಿಕೊಂಡ ಮಂಗ್ಲಿ ನಾಯಕಿಯಾಗಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿರುವ ‘ಪಾದರಾಯ’ ಚಿತ್ರದಲ್ಲಿ ಮೈನಾ ಖ್ಯಾತಿಯ ನಿರ್ದೇಶಕ ನಾಗಶೇಖರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ.
ಆರ್.ಚಂದ್ರು ನಿರ್ಮಾಪಕ
ಚಿತ್ರೀಕರಣಕ್ಕೆ ಹೊರಡುವ ಮುನ್ನ ನಾಯಕ ನಟ ನಾಗಶೇಖರ್ 42 ದಿನಗಳ ಕಟ್ಟುನಿಟ್ಟಿನ ವ್ರತ ಆಚರಣೆ ಮಾಡುತ್ತಿದ್ದಾರೆ. ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ರಿಂದ ಹನುಮ ಮಾಲೆ ಹಾಕಿಸಿಕೊಂಡಿರುವ ನಾಗಶೇಖರ್ 42 ದಿನಗಳ ಕಾಲ ಅಂಜನಾದ್ರಿ ಬೆಟ್ಟದಲ್ಲಿ ವ್ರತವನ್ನು ಆಚರಿಸುತ್ತಿದ್ದಾರೆ.
‘ಪಾದರಾಯ’ ಚಿತ್ರ 2013-14ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ. ಆರು ರಾಜ್ಯಕ್ಕೆ ಸಂಬಂಧಿಸಿದ ಘಟನೆ ಇದಾಗಿದ್ದು, ಯೂನಿವರ್ಸಲ್ ಸಬ್ಜೆಕ್ಟ್ಗ. ಹಾಗಾಗಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರುತ್ತಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ.
ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ನಡಿ ಆರ್.ಚಂದ್ರು ‘ಪಾದರಾಯ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ, ಈ ಹಿಂದೆ ಈ ಸಿನಿಮಾಗೆ ಜಾಕ್ ಮಂಜು ನಿರ್ಮಾಣ ಮಾಡಲಿದ್ದಾರೆ ಎಂದು ಸ್ವತಃ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದರು. ಆದರೆ ಈಗ ನಿರ್ಮಾಪಕರಾಗಿ ಆರ್.ಚಂದ್ರು ಎಂಟ್ರಿಯಾಗಿದ್ದಾರೆ. ಇನ್ನು, ನಾಗಶೇಖರ್ ಸಹ ನಿರ್ಮಾಣವಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ತಮಿಳು ಚಿತ್ರರಂಗದ ಹೆಸರಾಂತ ಸಂಕಲನಕಾರ ಆಂಟೋನಿ ಚಿತ್ರದ ಸಂಕಲನವಿದೆ.
ಕೆಲ ಸಿನಿಮಾಗಳೇ ಹಾಗೆ. ಶೀರ್ಷಿಕೆಯಿಂದಲೇ ಕುತೂಹಲ ಹುಟ್ಟಿಸಿ ಬಿಡುತ್ತವೆ. ಅಂತಹ ಸಿನಿಮಾಗಳ ಸಾಲಿಗೆ ಕಬ್ಜ ಕೂಡ ಸೇರಿದೆ. ಹೌದು, ಕಬ್ಜ ಬಹು ನಿರೀಕ್ಷಿತ ಸಿನಿಮಾ. ಕಾರಣ, ಉಪೇಂದ್ರ ಅಭಿನಯದ ಈ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ಆರ್.ಚಂದ್ರು ನಿರ್ದೇಶನವಿದೆ. ಅದ್ಧೂರಿ ಬಜೆಟ್ ನಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್, ಟೀಸರ್ ಮೂಲಕವೇ ಕ್ರೇಜ್ ಹೆಚ್ಚಿಸಿರುವ ಸಿನಿಮಾ ಈಗ ಭಾರತೀಯ ಇಪ್ಪತ್ತು ಸಿನಿಮಾಗಳ ಪೈಕಿ ಕನ್ನಡದ ಕಬ್ಜ ಏಳನೇ ಸ್ಥಾನದಲ್ಲಿದ್ದು, ಕ್ರೇಜ್ ಹೆಚ್ಚಿಸಿದೆ.
ಸಿನಿಮಾ, ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ತಾಣವೆನಿಸಿಕೊಂಡಿರುವ ಇಂಟರ್ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 20 ಚಿತ್ರಗಳ ಈ ಪಟ್ಟಿಯಲ್ಲಿ ಕನ್ನಡದಿಂದ ಉಪೇಂದ್ರ ಹಾಗೂ ಸುದೀಪ್ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ಮಾತ್ರ ಇರುವುದು ವಿಶೇಷ.
‘ಕಬ್ಜ’ ಚಿತ್ರವು ಈ ಪಟ್ಟಿಯ ಏಳನೇ ಸ್ಥಾನದಲ್ಲಿದ್ದು, ಮಿಕ್ಕಂತೆ ಶಾರುಖ್ ಖಾನ್ ಅಭಿನಯದ ‘ಪಠಾಣ್’, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ – ದಿ ರೂಲ್’, ಪ್ರಭಾಸ್ ಅಭಿನಯದ ‘ಸಲಾರ್’ ಮತ್ತು ‘ಆದಿಪುರುಷ್’, ವಿಜಯ್ ಅಭಿನಯದ ‘ವಾರಿಸು’, ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’, ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಮುಂತಾದ ಚಿತ್ರಗಳಿವೆ. ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳೇ ಹೆಚ್ಚಿರುವ ಈ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಏಕೈಕ ಚಿತ್ರವಾಗಿ ‘ಕಬ್ಜ’ ಹೊರಹೊಮ್ಮಿದೆ.
ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ನಡಿ ಆರ್. ಚಂದ್ರು ಕಥೆ ಬರೆದು, ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರವು ಶುರುವಾದಾಗಿನಿಂದ ಇಲ್ಲಿಯವರೆಗೂ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಅದರಲ್ಲೂ ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾದ ಮೇಲೆ ಆ ನಿರೀಕ್ಷೆಗಳು ನೂರ್ಮಡಿಯಾಗಿವೆ ಎಂದರೆ ತಪ್ಪಿಲ್ಲ.
ಬರೀ ಕರ್ನಾಟಕವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಈ ಚಿತ್ರಕ್ಕಾಗಿ ಬೇಡಿಕೆ ಹೆಚ್ಚಿದ್ದು, ಈಗಾಗಲೇ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಜನಪ್ರಿಯ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಹಿಂದಿಯಷ್ಟೇ ಅಲ್ಲ, ಬೇರೆ ಅವತರಣಿಕೆಗಳ ಹಕ್ಕುಗಳಿಗೂ ಬೇಡಿಕೆ ಹೆಚ್ಚಿದೆ. ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.
ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇರುವ ಈ ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.
ಮಧುರವಾದ ಹಾಡುಗಳು ಕ್ರಮೇಣ ಕಡಿಮೆಯಾಗುತ್ತಿರುವ ದಿನಗಳಲ್ಲಿ ‘ಕಡಲತೀರದ ಭಾರ್ಗವ’ ಚಿತ್ರದಿಂದ ಸುಮಧುರವಾದ ಹಾಡೊಂದು ಬಂದಿದೆ. ‘ಮಧುರ ಮಧುರ’ ಎಂದೇ ಶುರುವಾಗುವ ಈ ಹಾಡು, ಇದೀಗ ಎಆರ್ಸಿ ಚಾನಲ್ನಲ್ಲಿ ಬಿಡುಗಡೆಯಾಗಿದೆ.
ನಿರ್ದೇಶಕ ಚೇತನ್ ಕುಮಾರ್ ರಚಿಸಿರುವ ಮಧುರ ಮಧುರ ಹಾಡನ್ನು ಅನಿಲ್ ಸಿ.ಜೆ ಮತ್ತು ವಾರಿಜಾಶ್ರೀ ವೇಣುಗೋಪಾಲ್ ಹಾಡಿದ್ದಾರೆ. ಮಾಧುರ್ಯ ತುಂಬಿದ ಈ ಹಾಡನ್ನು ವಿಶೇಷವಾಗಿ ನಿರ್ಮಿಸಲಾಗಿರುವ ಸೆಟ್ನಲ್ಲಿ ಚಿತ್ರೀಕರಣ ಮಾಡುವುದರ ಜೊತೆಗೆ, ಕುಮಟದ ಸುಂದರ ಪರಿಸರದಲ್ಲಿ ಸೆರೆ ಹಿಡಿಯಲಾಗಿದೆ.
ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಪಡೆದು ಬಿಡುಗಡೆಗೆ ಸಜ್ಜಾಗುತ್ತಿರುವ ‘ಕಡಲ ತೀರದ ಭಾರ್ಗವ’ ಚಿತ್ರದ ಪ್ರಮೋಷನ್ ಇದೀಗ ಈ ಹಾಡಿನಿಂದ ಪ್ರಾರಂಭವಾಗಿದೆ. ಕಳೆದ ವರ್ಷ ಚಿತ್ರದ ‘ಸಮಯವೇ’ ಎಂಬ ಲಿರಿಕಲ್ ವೀಡಿಯೋ ಬಿಡುಗಡೆಯಾಗಿತ್ತು. ಈಗ ‘ಮಧುರ ಮಧುರ’ ಚಿತ್ರದ ವೀಡಿಯೋ ಹಾಡು ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯಾಗಲಿದೆ.
‘ಕಡಲತೀರದ ಭಾರ್ಗವ’ ಚಿತ್ರದ ಹಿಂದೆ ಉತ್ಸಾಹಿ ಯುವಕರ ತಂಡವಿದ್ದು, ಈ ಚಿತ್ರವನ್ನು ಎವ ಕಲಾ ಸ್ಟುಡಿಯೋಸ್ನಡಿ ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಭರತ್ ಗೌಡ, ಶ್ರುತಿ ಪ್ರಕಾಶ್, ವರುಣ್ ರಾಜು, ರಾಘವ್ ನಾಗ್, ಕೆ.ಎಸ್. ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ. ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.
‘ಕಡೆಮನೆ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ವಿನಯ್ ಹೊಸದೊಂದು ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಚಿತ್ರಕ್ಕೆ ‘ದಿ’ ಎಂದು ಟೈಟಲ್ ಇಡಲಾಗಿದೆ. ನಿರ್ದೇಶಕ ಸಿಂಪಲ್ ಸುನಿ ‘ದಿ’ ಟೈಟಲ್ ರಿವೀಲ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
‘ದಿ’ ವಿನಯ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಎರಡನೇ ಸಿನಿಮಾ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ದಿಲದೇ ಸೆಟ್ಟೇರಿ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಅದರ ಮೊದಲ ಭಾಗವಾಗಿ ಚಿತ್ರದ ವಿಭಿನ್ನ ಟೈಟಲ್ ನ್ನು ನಿರ್ದೇಶಕ ಸಿಂಪಲ್ ಸುನಿ ಮೂಲಕ ರಿವೀಲ್ ಮಾಡಿಸಿದೆ. ಟೈಟಲ್ ರಿವೀಲ್ ಮಾಡಿ ನಿರ್ದೇಶಕ ವಿನಯ್ ಹಾಗೂ ಇಡೀ ಚಿತ್ರತಂಡಕ್ಕೆ ಸಿಂಪಲ್ ಸುನಿ ಶುಭ ಕೋರಿದ್ದಾರೆ. ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರದ ನಾಯಕ ನಾಯಕಿ ಯಾರೆಂಬುದನ್ನು ಚಿತ್ರತಂಡ ರಿವೀಲ್ ಮಾಡಲಿದೆ.
ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೊನೆ ಹಂತದಲ್ಲಿರುವ ಚಿತ್ರತಂಡ ಫೆಬ್ರವರಿ ಕೊನೆಯ ವಾರ ಸಿನಿಮಾ ತೆರೆಗೆ ತರುವ ತಯಾರಿಯಲ್ಲಿದೆ.
‘ವಿಡಿಕೆ’ ಸಿನಿಮಾಸ್ ಬ್ಯಾನರ್ ನಡಿ ‘ವಿಡಿಕೆ’ ಗ್ರೂಪ್ ‘ದಿ’ ಚಿತ್ರವನ್ನು ನಿರ್ಮಾಣ ಮಾಡಿದೆ. ತುಮಕೂರು, ಮೈಸೂರು, ಮೂಡುಗೆರೆ, ಚಿಕ್ಕಮಗಳೂರು, ಹೊನ್ನಾವರ, ಉತ್ತರ ಕನ್ನಡ, ಬೆಂಗಳೂರು, ಕೇರಳದಲ್ಲಿ ‘ದಿ’ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಆಲನ್ ಭರತ್ ಕ್ಯಾಮೆರಾ ವರ್ಕ್, ಯುಎಂ ಸ್ಟೀವನ್ ಸತೀಶ್ ಸಂಗೀತ ನಿರ್ದೇಶನ, ಕವಿರಾಜ್ ಹಾಗೂ ವಿನಯ್ ಸಾಹಿತ್ಯ, ಸಿದ್ದಾರ್ಥ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ನಮ್ಮ ಸುತ್ತಮುತ್ತಲಿನಲಿನ ಪರಿಸರವನ್ನು ನಾವು ಯಾವರೀತಿ ಇಟ್ಟುಕೊಳ್ಳಬೇಕು, ಅದನ್ನು ಹೇಗೆ ಶುದ್ದವಾಗಿರುವಂತೆ ನೋಡಿಕೊಳ್ಳಬೇಕು ಎನ್ನುವ ಸಾಮಾಜಿಕ ಸಂದೇಶ ಒಳಗೊಂಡಿರುವ, ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂಥ ಕಥಾಹಂದರ ಹೊಂದಿರುವ ವಿಶೇಷ ಚಿತ್ರ ‘ನಿಸರ್ಗ’ ಇನ್ನೇನು ಬಿಡುಗಡೆಗೆ ಸಿದ್ದವಾಗಿದೆ.
ಈಗಾಗಲೇ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದೆ.
ಭೂಮಿಕಾ ಸಿನಿ ಕ್ರೀಯೇಷನ್ಸ್ ಬ್ಯಾನರ್ ನಲ್ಲಿ ಶಿವಕುಮಾರ್.ಬಿ.ಕೆ, ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಚಿತ್ರಕ್ಕೆ ನಿರ್ದೇಶನ ಸಹ ಮಾಡಿದ್ದಾರೆ. ಎಸ್,ಬಾಲು ಅವರ ಛಾಯಾಗ್ರಹಣ, ವಿಜಯ್ ರೈ ಅವರ ಸಂಗೀತ ನಿರ್ದೇಶನ, ರಮೇಶ್ ಜಂಗಮರಹಟ್ಟಿ ಅವರ ಸಂಕಲನ ಈ ಚಿತ್ರಕ್ಕಿದ್ದು, ಕಥೆ-ಸಂಭಾಷಣೆಯನ್ನು ಮೈಸೂರು ರಮಾನಂದ್ ರಚಿಸಿದ್ದಾರೆ. ಹಿನ್ನೆಲೆ ದ್ವನಿಯನ್ನು ಪ್ರಶು ನೀಡಿದ್ದಾರೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.
ಇನ್ನು ಚಿತ್ರದ ಪ್ರಮುಖ ತಾರಾಗಣದಲ್ಲಿ ಮೈಸೂರು ರಮಾನಂದ್, ಸ್ಮೈಲ್ ಶಿವು, ಶಶಿಧರ್ ಕೋಟೆ, ರೇಖಾದಾಸ್, ಶಂಕರ್ ಭಟ್, ಮೀಸೆ ಆಂಜನಪ್ಪ, ಕವಿತ, ಶಿಲ್ಪ ನಿತ್ಯ ದೀಕ್ಷಿತ್, ಮೀನಾ ಪೋರ್ಚುಗಲ್, ಮಂಜು, ಪರಿಸರ ಮಂಜು, ನಾರಾಯಣ ಗೌಡ, ಗೋವರ್ದನ್ ದೇವಿಲಾಲ್ ಮುಂತಾದವರು ಅಭಿನಯಿಸಿದ್ದಾರೆ.
ಇದೇ ಸಂಸ್ಥೆಯ ವತಿಯಿಂದ ‘ಮಹಾಗುರು’ ಎಂಬ ಮಾತಿಲ್ಲದ ಮತೊಂದು ಪ್ರಾಯೋಗಾತ್ಮಕ ಚಿತ್ರವನ್ನು ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದೆ. ಈ ಚಿತ್ರದಲ್ಲಿ ಸ್ಮೈಲ್ ಶಿವು, ಜನಾರ್ಧನ್, ಮೈಸೂರು ರಮಾನಂದ್, ಕವಿತಾ, ಅನು, ಶಶಿಧರ್ ಕೋಟೆ, ಸಂದೀಪ್, ವಿಲ್ಸನ್ ಜೋಸೆಪ್, ಆಪೆನ್.ಜೆ, ಇನ್ನೂ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ.
ಈ ಚಿತ್ರವನ್ನು ಕಸ್ತೂರಿ ಜಗನ್ನಾಥ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಬೆಂಗಳೂರು, ಮಲೇಶಿಯಾ, ಬ್ಯಾಂಕಾಕ್ನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆ.
ಈ ಚಿತ್ರದ ಸಹಾಯಕ ನಿದೇಶಕರಾಗಿ ಪೀಟರ್ ಜಾನ್, ಕಾರ್ಯಕಾರಿ ನಿರ್ಮಾಪಕರಾಗಿ ಟಿ.ಸಿ.ಶಾಜೀ ಕೆಲಸ ಮಾಡುತ್ತಿದ್ದು, ಆನಂದ್ ಅವರ ಛಾಯಾಗ್ರಹಣವಿದೆ.
ಕಲಾನಿರ್ದೇಶಕ-ಎಸ್. ಸಿಲ್ವಸ್ಟಾರ್, ಸಂಕಲನ-ರಮೇಶ್ ಜಂಗಮರಹಟ್ಟಿ, ಲೆಜನಿಂಗ್ ಆಪೀಸರ್-ಪ್ಲೇಮಿಂಗ್.ಜೆ, ಪ್ರೋಡಕ್ಷನ್ ಕನ್ಟ್ರೋಲರ್ ಆಗಿ ಜೆಸ್ಟೀನ್ಜೊಸೆಪ್ ಕೆಲಸ ಮಾಡುತ್ತಿದ್ದಾರೆ.
ನಟ ಹಾಗೂ ಶಾಸಕ ಬಿ.ಸಿ.ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ರಾಮುಹಳ್ಳಿಯ ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ಗರಡಿಮನೆ ಸೆಟ್ ಹಾಕಲಾಗಿತ್ತು. ಅಲ್ಲಿ ಕೆಲವು ದಿನಗಳ ಚಿತ್ರೀಕರಣ ನಡೆಸುವುದರೊಂದಿಗೆ “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಸುಮಾರು ಎಪ್ಪತ್ತು ದಿನಗಳ ಚಿತ್ರೀಕರಣದ ನಂತರ ಇಂದು “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ “ಗರಡಿ” ಮನೆ ಸೆಟ್ ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಹಂತದ ವಿಶೇಷವೆಂದರೆ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ ಸೂರ್ಯ, ಸೋನಾಲ್ ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ನಿರ್ಮಾಪಕರಾದ ಬಿ.ಸಿ.ಪಾಟೀಲ್ ಅವರಿಗೆ ವಿಶೇಷ ಧನ್ಯವಾದ. “ಗರಡಿ” ಹಳೇ ಮೈಸೂರು ಭಾಗದಲ್ಲಿ ನಡೆಯುವ ಕಥೆ. ದೇಸಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಯೋಗರಾಜ್ ಭಟ್.
ಇಂದು “ಗರಡಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಚೆನ್ನಾಗಿ ಬಂದಿದೆ. ಚಿತ್ರದ ಆಡಿಯೋ ಹಕ್ಕು ಸರಿಗಮಪ ಸಂಸ್ಥೆಗೆ ಒಂದು ಕೋಟಿಗೆ ಮಾರಾಟವಾಗಿದೆ. ಡಬ್ಬಿಂಗ್, ರಿಮೇಕ್ ರೈಟ್ಸ್ ಗೂ ಸಾಕಷ್ಟು ಬೇಡಿಕೆ ಇದೆ. ನಮ್ಮ ಸಂಸ್ಥೆಯ ನಿರ್ಮಾಣದ ಹದಿನಾರನೇ ಚಿತ್ರ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದ ಬಿ.ಸಿ.ಪಾಟೀಲ್ ಅವರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.
ನಾನು ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಅನುಭವಿ ಕಲಾವಿದರೊಂದಿಗೆ ನಟಿಸಿರುವ ಖುಷಿಯಿದೆ. ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ವಂದನೆಗಳು ಎಂದರು ನಾಯಕ ಯಶಸ್ ಸೂರ್ಯ.
ನಾಯಕಿ ಸೋನಾಲ್ ಮೊಂತೆರೊ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ನಟ “ಆರ್ಮುಗಂ” ರವಿಶಂಕರ್ ಮಾತನಾಡಿ, ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಯೋಗರಾಜ್ ಭಟ್ ಹಾಗೂ ಬಿ.ಸಿ.ಪಾಟೀಲ್ ಅವರ ಜೊತೆ ಇದು ನನ್ನ ಮೊದಲ ಚಿತ್ರ ಎಂದರು.
ನಟ ಸುಜಯ್ ಬೇಲೂರ್ ಸಹ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಕಲಾವಿದರಾದ ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಹಾಗೂ ಕಥೆ ಬರೆದಿರುವ ವಿಕಾಸ್ “ಗರಡಿ” ಚಿತ್ರದ ಕುರಿತು ಮಾತನಾಡಿದರು.
ನಿರ್ಮಪಕಿ ಸೃಷ್ಟಿ ಪಾಟೀಲ್ ಚಿತ್ರೀಕರಣ ಸರಾಗವಾಗಿ ಮುಗಿಯಲು ಸಹಕಾರ ನೀಡಿದ ಸಮಸ್ತ ತಂಡಕ್ಕೂ ಧನ್ಯವಾದ ತಿಳಿಸಿದರು.
ಚಿತ್ರದ ವಿಶೇಷಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸಿದ್ದಾರೆ. ನಿರ್ಮಾಪಕ ಬಿ.ಸಿ.ಪಾಟೀಲ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಾಯಕ ಯಶಸ್ ಸೂರ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ದರ್ಶನ್ ಅವರಿಗೆ ಧನ್ಯವಾದ ತಿಳಿಸಿದರು.
ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ “ವೇದ” ಚಿತ್ರ ಎಲ್ಲಾ ಕಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಸಮಯದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿರುವ ಹೊಸ ಚಿತ್ರದ ಬಗ್ಗೆ ಮಾಹಿತಿ ಬಂದಿದೆ.
ನಿಶ್ಚಿತ ಕಂಬೈನ್ಸ್ ಬ್ಯಾನರ್ ನಲ್ಲಿ ಮಂಜುಳಾ ಶಿವಾರ್ಜುನ್ ನಿರ್ಮಾಣ ಮಾಡುತ್ತಿರುವ ಈ ನೂತನ ಚಿತ್ರದ ನಾಯಕರಾಗಿ ಅಭಿನಯಿಸಲಿದ್ದಾರೆ. ನಿತಿನ್ ಶಿವಾರ್ಜುನ್ ಈ ಚಿತ್ರದ ಸಹ ನಿರ್ಮಾಪಕರು. ಈ ಸಂಸ್ಥೆಯಿಂದ ಹಿಂದೆ “ಶಿವಾರ್ಜುನ” ಚಿತ್ರ ನಿರ್ಮಾಣವಾಗಿತ್ತು.
ಕನ್ನಡದ ರಿಯಾಲಿಟಿ ಶೋ “ಮಜಾ ಟಾಕೀಸ್” ಹಾಗೂ ಸೃಜನ್ ಲೋಕೇಶ್ ಅಭಿನಯದ “ಎಲ್ಲಿದೆ ಇಲ್ಲಿತನಕ” ಚಿತ್ರದ ನಿರ್ದೇಶಕ ತೇಜಸ್ವಿ ಕೆ ನಾಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಶಿವಣ್ಣ ಈ ಚಿತ್ರದ ಕಥೆ ಕೇಳಿ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ. ಶಿವರಾಜಕುಮಾರ್ ಅವರು ಈ ತನಕ ಮಾಡದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಉಳಿದ ವಿಷಯಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ನಿರ್ದೇಶಕ ತೇಜಸ್ವಿ ಕೆ ನಾಗ್ ತಿಳಿಸಿದ್ದಾರೆ.
ಚಿತ್ರ : ಮಿಸ್ಟರ್ ಬ್ಯಾಚ್ಯುಲರ್ ನಿರ್ದೇಶನ : ನಾಯ್ಡು ನಿರ್ಮಾಣ : ಶ್ರೀನಿವಾಸ್, ಹನುಮಂತ ರಾವ್, ಸ್ವರ್ಣಲತ ತಾರಾಗಣ: ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ನಿಮಿಕಾ ರತ್ನಾಕರ್, ಚಿಕ್ಕಣ್ಣ, ಗಿರಿ, ಅಯ್ಯಪ್ಪ, ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ ಇತರರು.
ಇದೊಂದು ಮದುವೆ ಆಗಬೇಕು ಅಂತ ಚಿಕ್ಕಂದಿನಿಂದಲೂ ಮೂರು ಹೊತ್ತು ಹಪಹಪಿಸುವ ಹುಡುಗನ ಕಥೆ ಮತ್ತು ವ್ಯಥೆ. ಮದುವೆ ಅಂದರೆ ಬದುಕಿನ ದೊಡ್ಡ ಹಬ್ಬ ಅಂದುಕೊಂಡ ಅವನು ವಯಸ್ಸಿಗೆ ಬಂದಮೇಲೆ, ಹುಡುಗಿ ನೋಡಿ ಮದ್ವೆ ಆಗೋ ಕನಸು ಕಾಣ್ತಾನೆ , ಒಂದಲ್ಲ, ಎರಡಲ್ಲ, ಬರೋಬ್ಬರಿ ಮುವತ್ತು ಹುಡುಗಿಯರೂ ಅವನನ್ನು ರಿಜೆಕ್ಟ್ ಮಾಡ್ತಾರೆ! ಮುವತ್ತೊಂದನೇ ಹುಡುಗಿ ಕೈ ಹಿಡಿಯದೇ ಹೋದರೆ, ಲೈಫಲ್ಲಿ ‘ಮದುವೆ ಭಾಗ್ಯ’ವೇ ಇಲ್ಲ. ಅಂಥಾ ಹೊತ್ತಲ್ಲಿ ಏನೆಲ್ಲಾ ಪ್ರಯಾಸ ಪಡುತ್ತಾನೆ ಅನ್ನೋದು ಕಥೆ ಮತ್ತು ವ್ಯಥೆ.
ಒಂದೇ ಮಾತಲ್ಲಿ ಹೇಳೋದಾದರೆ, ಮೊದಲರ್ಧ ಜಾಲಿ ಜಾಲಿ. ದ್ವಿತಿಯಾರ್ಧ ಖಾಲಿ ಖಾಲಿ! ಕಥೆಯ ಎಳೆ ಚೆನ್ನಾಗಿದೆ. ನಿರ್ದೇಶಕರ ಯೋಚನಾಲಹರಿಯೂ ಸಖತ್. ಜಾಲಿಯಾಗಿಯೇ ಸಾಗುವ ಬ್ಯಾಚ್ಯುಲರ್ ಸ್ಟೋರಿ ದ್ವಿತಿಯಾರ್ಧ ಬಳಿಕ ಕೊಂಚ ವೇಗ ಕಳೆದುಕೊಳ್ಳುತ್ತದೆ. ಆರಂಭದಿಂದ ಮಧ್ಯಂತರವರೆಗೆ ಬ್ಯಾಚ್ಯುಲರ್ ಪಡುವ ಪರಿಪಾಟಿಲು ನೋಡುಗನಿಗೆ ನಗು ಎಬ್ಬಿಸುತ್ತಾದರೂ, ದ್ವಿತಿಯಾರ್ಧ ತಕ್ಕಮಟ್ಟಿಗೆ ಸೀಟಿಗೆ ಒರಗುವಂತೆ ಮಾಡುತ್ತೆ. ಮೊದಲರ್ಧದ ಬಿಗಿ ಹಿಡಿತ ಕೊನೆಯವರೆಗೂ ಇದ್ದಿದ್ದರೆ, ಬ್ಯಾಚ್ಯುಲರ್ ಗೆ ಜೈ ಎನ್ನಬಹುದಿತ್ತು. ಜಾಲಿಯಾಗಿ ಸಾಗುವ ಮಿಸ್ಟರ್ ಬ್ಯಾಚ್ಯುಲರ್ ಗೆ ನಿರ್ದೇಶಕರು ‘ರಾ’ ಫೀಲ್ ಕೊಡುವ ನೆಪದಲ್ಲಿ ಸ್ವಾದ ಹದಗೆಡಿಸಿದ್ದಾರೆ. ಕಥೆ ತೀರಾ ಹೊಸದೇನಲ್ಲ. ಈಗಾಗಲೇ ಬಾಲಿವುಡ್ ನಲ್ಲಿ ಈ ಬಗೆಯ ಸಿನಿಮಾಗಳು ಬಂದಿವೆ. ಆದರೂ ಕನ್ನಡಕ್ಕೆ ಫ್ರೆಶ್ ಥಾಟ್ ಎನಿಸುವಂತೆ ನಿರ್ದೇಶಕರ ಪ್ರಯತ್ನ ಅಷ್ಟಾಗಿ ರುಚಿಸಿಲ್ಲ.
ಮೊದಲರ್ಧದ ಸಿನಿಮಾದಲ್ಲಿ ಯಾವುದೇ ತಪ್ಪು ಕಾಣಸಿಗಲ್ಲ. ಕಥೆ ಸಾಗುವ ಪರಿ, ಘಟಿಸುವ ಹಾಸ್ಯ ಸನ್ನಿವೇಶ, ಮಾತು, ಹಾಡು, ಕುಣಿತ ಬರುವ ಪಾತ್ರಗಳ ತೊಳಲಾಟ, ಪೀಕಲಾಟವನ್ನು ತುಂಬಾ ಚೆನ್ನಾಗಿಯೇ ಕಟ್ಟಿಕೊಡಲಾಗಿದೆ. ಅದರೆ, ಅದೇ ವೇಗ ಕೊನೆಯವರೆಗೂ ಇದ್ದಿದ್ದರೆ ಬ್ಯಾಚ್ಯುಲರ್ ಕಷ್ಟವಾಗುವ ಬದಲು ಇಷ್ಟವಾಗುತ್ತಿದ್ದ. ಸರಾಗವಾಗಿ ಸಾಗುವ ಕಥೆ, ದ್ವಿತಿಯಾರ್ಧ ಟ್ರ್ಯಾಕ್ ಚೇಂಜ್ ಆಗಿ ಎಲ್ಲೆಲ್ಲೋ ಹೋಗಿರುವುದರಿಂದ ನಗಾಡಿಕೊಂಡಿದ್ದ ನೋಡುಗ ಆ ನಗುವ ಗುಂಗಿಂದ ಹೊರಬಂದು ಕೊಂಚ ಗೊಂದಲಕ್ಕೀಡಾಗುತ್ತಾನೆ. ಯಾಕೆ, ಏನು ಅಂತ ಸಿನಿಮಾದಲ್ಲೇ ನೋಡಬೇಕು.
ಕಥೆ ಇಷ್ಟು…
ಆ ಹುಡುಗ ಚಿಕ್ಕ ವಯಸ್ಸಲ್ಲಿ ಮದುವೆ ಅಂದ್ರೆ ಏನು ಅಂತ ತನ್ನ ತಾಯಿ ಬಳಿ ಕೇಳ್ತಾನೆ. ಅದೊಂದು ಹಬ್ಬ ಅಂತಾಳೆ ಅಮ್ಮ. ಯುಗಾದಿ, ದೀಪಾವಳಿ ರೀತಿಯ ಹಬ್ಬವೇ ಅಂತಾನೆ ಮಗ. ಅವು ವರ್ಷಕ್ಕೊಮ್ಮೆ ಬರುವ ಹಬ್ಬ.ಮದ್ವೆ ಬದುಕಿನದ್ದಕ್ಕೂ ಇರುವ ಹಬ್ಬ ಅಂತಾಳೆ ಅಮ್ಮ. ಇಷ್ಟು ಹೇಳಿದ್ದೇ ತಡ, ಅವನು ಮನೆಯಲ್ಲಿ ಮದ್ವೆ ಮಾಡಿಸಿ ಅಂತ ಸದಾ ಗಂಟು ಬೀಳ್ತಾನೆ. ಮದ್ವೆ ಅಗಬೇಕು ಅನ್ನೋದೇ ಅವನ ಕನಸು. ದೊಡ್ಡವನಾದ ಮೇಲೂ ಮದ್ವೆ ಕನಸು ಹೆಚ್ಚಾಗುತ್ತೆ. ಮನೇಲೂ ಹುಡುಗಿ ನೋಡಲು ಶುರು ಮಾಡ್ತಾರೆ. ಅವನನ್ನು ನೋಡಿದವರೆಲ್ಲ ರಿಜೆಕ್ಟ್ ಮಾಡ್ತಾರೆ. ಈ ನಡುವೆ ಒಬ್ಬ ಹುಡುಗಿ ಮದ್ವೆಗೂ ಮುನ್ನ ‘ಅನುಭವ’ ಪಡೆದು ಬಂದರೆ ಮದ್ವೆ ಆಗ್ತೀನಿ. ನಿನ್ನ ವರ್ಜಿನಿಟಿ ಕಳ್ಕೊಂಡ್ ಬಾ ಅಂತ ಸವಾಲು ಹಾಕ್ತಾಳೆ. ಅವಳು ಹಾಗೆ ಹೇಳೋದೇಕೆ, ಮುಂದೆ ಅವನು ವರ್ಜಿನಿಟಿ ಕಳ್ಕೋತ್ತಾನಾ, ಮದ್ವೆ ಆಗುತ್ತೋ ಇಲ್ವೋ ಅನ್ನೋದೇ ಸಸ್ಪೆನ್ಸ್.
ಯಾರು ಹೇಗೆ?
ಡಾರ್ಲಿಂಗ್ ಕೃಷ್ಣ, ಇಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ. ಮದ್ವೆ ಗೂ ಮುನ್ನ ತಾನು ವರ್ಜಿನಿಟಿ ಕಳ್ಕೊಳ್ಳಲು ಪರದಾಡುವ ಹುಡುಗನಾಗಿ ಗಮನಸೆಳೆಯುತ್ತಾರೆ. ನಗಿಸುವಲ್ಲಿ ಸಫಲ. ಡ್ಯಾನ್ಸ್, ಫೈಟ್ ನಲ್ಲೂ ಓಕೆ. ಮಿಲನ ನಾಗರಾಜ್ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ನಿಮಿಕಾ ರತ್ನಾಕರ್ ಅವರ ಅಂದವಷ್ಟೇ ಇಲ್ಲಿ ಹೈಲೆಟ್. ಚಿಕ್ಕಣ್ಣ, ಗಿರಿ ಇರುವ ಸಮಯದಲ್ಲಿ ಒಳ್ಳೇ ಸ್ಕೋರ್ ಮಾಡಿದ್ದಾರೆ. ಅಯ್ಯಪ್ಪ ರಗಡ್ ಲುಕ್ ಮೂಲಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಯಶ್ ಶೆಟ್ಟಿ, ವಜ್ರಾಂಗ್ ಶೆಟ್ಟಿ ಅಲ್ಪ ಸಮಯದಲ್ಲೂ ಅಬ್ಬರಿಸಿದ್ದಾರೆ. ಪವಿತ್ರಾ ಲೋಕೇಶ್ ಕೊಟ್ಟ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಬರುವ ಪಾತ್ರಗಳೂ ಸೈ ಎನಿಸಿವೆ.
ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಒಂದು ಹಾಡು ಗಮನ ಸೆಳೆಯುತ್ತೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಕ್ರೇಜಿಮೈಂಡ್ಸ್ ಕತ್ತರಿ ಕೆಲಸ ಚಿತ್ರದ ವೇಗ ಹೆಚ್ಚಿಸಿದೆ. ಅವರ ಕ್ಯಾಮೆರಾ ಕೈಚಳಕ ಬ್ಯಾಚ್ಯಲರ್ ಲೈಫ್ ಗೆ ಸಾಥ್ ಕೊಟ್ಟಿದೆ.
ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಸೆಟ್ಟೇರಿದ ದಿನದಿಂದಲೂ ಸಖತ್ ಸುದ್ದಿಯಲ್ಲಿರುವ, ಕ್ರಿಯೇಟಿವ್ ಕಂಟೆಂಟ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರದ ಮೊದಲ ಸಾಂಗ್ ರಿಲೀಸ್ ಆಗಿದೆ. ಸ್ಯಾಂಡಲ್ ವುಡ್ ಸ್ಟಾರ್ ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧನಂಜಯ, ಧ್ರುವ ಸರ್ಜಾ ಚಿತ್ರದ ಮೊದಲ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಹಾಸ್ಟೆಲ್ ಹುಡುಗರು ಸಿನಿಮಾ ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರ ಹಾಡುಗಳ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ಹೊರಟಿದೆ. ಇಂದು ಚಿತ್ರದ ‘ಪ್ರೊಟೆಸ್ಟ್ ಸಾಂಗ್’ ಚಿತ್ರತಂಡ ಬಿಡುಗಡೆ ಮಾಡಿದೆ. ಹಾಸ್ಟೆಲ್ ನಲ್ಲಿರುವ ಹುಡುಗರ ಕಥೆ, ವ್ಯಥೆ ಇರುವ ಈ ಹಾಡನ್ನು ಸಖತ್ ಮಜವಾಗಿ ಕಟ್ಟಿಕೊಡಲಾಗಿದ್ದು, ಅದಕ್ಕೆ ತಕ್ಕಂತೆ ಯೋಗರಾಜ್ ಭಟ್ ಸಾಹಿತ್ಯ, ಅಜನೀಶ್ ಲೋಕನಾಥ್ ಮ್ಯೂಸಿಕ್ ಹಾಗೂ ಹಾಡು ಕಿಕ್ ನೀಡುತ್ತಿದೆ.
ಯೂತ್ ಸಬ್ಜೆಕ್ಟ್ ಒಳಗೊಂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರ ಗೆಸ್ಟ್ ಅಪಿಯರೆನ್ಸ್ ಕೂಡ ಇರಲಿದೆ. ಪುನೀತ್ ರಾಜ್ ಕುಮಾರ್, ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ಹೀಗೆ ಸ್ಟಾರ್ ನಟ ನಟಿಯರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ.
ಪ್ರತಿ ಬಾರಿ ಯೂನೀಕ್ ಕಾನ್ಸೆಪ್ಟ್ ಮೂಲಕ ಚಿತ್ರದ ಪ್ರಚಾರ ಕಾರ್ಯ ಮಾಡಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೆಚ್ಚಿಕೊಂಡು ಪರಂವಃ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ಪ್ರಸ್ತುತ ಪಡಿಸುತ್ತಿದ್ದಾರೆ.
ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ.