ಮಧುರವಾದ ಹಾಡುಗಳು ಕ್ರಮೇಣ ಕಡಿಮೆಯಾಗುತ್ತಿರುವ ದಿನಗಳಲ್ಲಿ ‘ಕಡಲತೀರದ ಭಾರ್ಗವ’ ಚಿತ್ರದಿಂದ ಸುಮಧುರವಾದ ಹಾಡೊಂದು ಬಂದಿದೆ. ‘ಮಧುರ ಮಧುರ’ ಎಂದೇ ಶುರುವಾಗುವ ಈ ಹಾಡು, ಇದೀಗ ಎಆರ್ಸಿ ಚಾನಲ್ನಲ್ಲಿ ಬಿಡುಗಡೆಯಾಗಿದೆ.
ನಿರ್ದೇಶಕ ಚೇತನ್ ಕುಮಾರ್ ರಚಿಸಿರುವ ಮಧುರ ಮಧುರ ಹಾಡನ್ನು ಅನಿಲ್ ಸಿ.ಜೆ ಮತ್ತು ವಾರಿಜಾಶ್ರೀ ವೇಣುಗೋಪಾಲ್ ಹಾಡಿದ್ದಾರೆ. ಮಾಧುರ್ಯ ತುಂಬಿದ ಈ ಹಾಡನ್ನು ವಿಶೇಷವಾಗಿ ನಿರ್ಮಿಸಲಾಗಿರುವ ಸೆಟ್ನಲ್ಲಿ ಚಿತ್ರೀಕರಣ ಮಾಡುವುದರ ಜೊತೆಗೆ, ಕುಮಟದ ಸುಂದರ ಪರಿಸರದಲ್ಲಿ ಸೆರೆ ಹಿಡಿಯಲಾಗಿದೆ.
ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಪಡೆದು ಬಿಡುಗಡೆಗೆ ಸಜ್ಜಾಗುತ್ತಿರುವ ‘ಕಡಲ ತೀರದ ಭಾರ್ಗವ’ ಚಿತ್ರದ ಪ್ರಮೋಷನ್ ಇದೀಗ ಈ ಹಾಡಿನಿಂದ ಪ್ರಾರಂಭವಾಗಿದೆ. ಕಳೆದ ವರ್ಷ ಚಿತ್ರದ ‘ಸಮಯವೇ’ ಎಂಬ ಲಿರಿಕಲ್ ವೀಡಿಯೋ ಬಿಡುಗಡೆಯಾಗಿತ್ತು. ಈಗ ‘ಮಧುರ ಮಧುರ’ ಚಿತ್ರದ ವೀಡಿಯೋ ಹಾಡು ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯಾಗಲಿದೆ.
‘ಕಡಲತೀರದ ಭಾರ್ಗವ’ ಚಿತ್ರದ ಹಿಂದೆ ಉತ್ಸಾಹಿ ಯುವಕರ ತಂಡವಿದ್ದು, ಈ ಚಿತ್ರವನ್ನು ಎವ ಕಲಾ ಸ್ಟುಡಿಯೋಸ್ನಡಿ ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಭರತ್ ಗೌಡ, ಶ್ರುತಿ ಪ್ರಕಾಶ್, ವರುಣ್ ರಾಜು, ರಾಘವ್ ನಾಗ್, ಕೆ.ಎಸ್. ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ. ಅವರ ಸಂಗೀತ ಮತ್ತು ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.