Categories
ಸಿನಿ ಸುದ್ದಿ

ಪ್ರಭುತ್ವ ಟ್ರೇಲರ್ ಗೆ ಮೆಚ್ಚುಗೆ: ಶೀಘ್ರ ಬಿಡುಗಡೆ

ಇತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೇ ಹೆಚ್ಚು ಗೆಲುತ್ತಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥಾಹಂದರ ಹೊಂದಿರುವ “ಪ್ರಭುತ್ವ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚೇತನ್ ಚಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರನ್ನು ರಾಜಕೀಯ ಮುಖಂಡರಾದ ರವೀಂದ್ರ ಅನಾವರಣ ಮಾಡಿದರು.
ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವ ಸಾರುವ ಈ ಸಿನಿಮಾಗೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಮೇಘಡಹಳ್ಳಿ ಡಾ.ಶಿವಕುಮಾರ್.

ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ಚುನಾವಣೆ ಮುಂಚೆಯೇ ಚಿತ್ರವನ್ನು ಬಿಡುಗಡೆ ‌ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಾಪಕ ರವಿರಾಜ್ ಎಸ್ ಕುಮಾರ್ ತಿಳಿಸಿದರು.

ಚಿತ್ರದ ಕಥಾಹಂದರದ ಬಗ್ಗೆ ಹೇಳಿದ ನಿರ್ದೇಶಕ ಆರ್ ರಂಗನಾಥ್, ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ತಮ್ಮ ತಂಡಕ್ಕೆ ಧನ್ಯವಾದ ಹೇಳಿದರು.

ಇದು ನನ್ನ ಹನ್ನೆರಡನೇ ಸಿನಿಮಾ. ಮೇಘಡಹಳ್ಳಿ ಡಾ. ಶಿವಕುಮಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ರಂಗನಾಥ್ ಅಷ್ಟೇ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಹಾಗೂ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ ಎಂದರು ನಾಯಕ ಚೇತನ್ ಚಂದ್ರ.

ಅನು ಎಂಬ ಪಾತ್ರದಲ್ಲಿ ನಟಿಸಿರುವುದಾಗಿ ನಾಯಕಿ ಪಾವನ ತಿಳಿಸಿದರು. ಚಿತ್ರದಲ್ಲಿ ಅಭಿನಯಿಸಿರುವ ಅರವಿಂದ್ ರಾವ್, ಹರೀಶ್ ರಾಯ್, ಆದಿ ಲೋಕೇಶ್, ವಿಜಯ್ ಚೆಂಡೂರ್, ವೀಣಾ ಸುಂದರ್, ಅನಿತಾ‌ ಭಟ್ ಮುಂತಾದ ಕಲಾವಿದರು ಹಾಗೂ ಸಂಭಾಷಣೆ ಬರೆದಿರುವ ವಿನಯ್ “ಪ್ರಭುತ್ವ” ಚಿತ್ರದ ಕುರಿತು ‌ಮಾತನಾಡಿದರು.

ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಚೇತನ್ ಚಂದ್ರ, ಪಾವನ, ನಾಸರ್, ಶರತ್ ಲೋಹಿತಾಶ್ವ, ಆದಿ ಲೋಕೇಶ್, ಅರವಿಂದ್ ರಾವ್, ಹರೀಶ್ ರಾಯ್, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಜೇಶ್ ನಟರಂಗ, ಅನಿತಾ ಭಟ್ ಮುಂತಾದವರಿದ್ದಾರೆ.

Categories
ಸಿನಿ ಸುದ್ದಿ

ಎಂ.ಜೆ ಅವ್ಯಾನಾ ರೆಸಾರ್ಟ್ ನಲ್ಲಿ ಅನಿಲ್ ಕುಮಾರ್ ಸಾರಥ್ಯದ ಎಂ ಜೆ ಪ್ರೊಡಕ್ಷನ್ ಗೆ ಚಾಲನೆ: ಸಿನಿಮಾ ಗಣ್ಯರು ಭಾಗಿ

ಜಿಗಣಿ-ಆನೇಕಲ್ ರಸ್ತೆಯಲ್ಲಿ ಎಂ.ಜೆ ಅವ್ಯಾನಾ ಎಂಬ ಅದ್ಭುತ ರೆಸಾರ್ಟ್ ಇದೆ. ಈ ಸುಂದರ ರೆಸಾರ್ಟ್ ನಲ್ಲಿ ಅನಿಲ್ ಕುಮಾರ್ ಅವರ ಸಾರಥ್ಯದ ಎಂ ಜೆ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಆರಂಭವಾಗಿದೆ. ನಟ ಶರಣ್, “ಕಾಂತಾರ” ಖ್ಯಾತಿಯ ನಟಿ ಸಪ್ತಮಿ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎನ್.ಸುಬ್ರಹ್ಮಣ್ಯ, ನಿರ್ದೇಶಕ ಹರಿ ಸಂತು,‌ ಮುಖೇಶ್ ಕುಮಾರ್, ಸತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಇದ್ದರು.

ನಾನು ಮೂಲತಃ ಕೇರಳದವನು. ಮಲೆಯಾಳಂ ನಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈಗ ಎಂ.ಜೆ.ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇನೆ. ಈ ಮೂಲಕ ಕನ್ನಡದಲ್ಲೂ ಸದಭಿರುಚಿಯ ಚಿತ್ರಗಳನ್ನು ಸದ್ಯದಲ್ಲೇ ನಿರ್ಮಾಣ ಮಾಡುತ್ತೇನೆ. ಬೆಂಗಳೂರಿನ ಆನೇಕಲ್ ಸಮೀಪ “ಅವ್ಯಾನಾ” ಎಂಬ ಈ ಸುಸ್ಸಜಿತ ರೆಸಾರ್ಟ್ ನಿರ್ಮಾಣವಾಗಿದೆ. ಎಲ್ಲಾ ಅನುಕೂಲವಿರುವ ರೆಸಾರ್ಟ್ ಇದು. ನಮ್ಮ “ಅವ್ಯಾನಾ” ರೆಸಾರ್ಟ್ ನಲ್ಲಿ “ಆಡಂಬರ”, “ಅತುಲ್ಯಂ” ಎಂಬ ಸಭಾಂಗಣವಿದೆ. “ಸ್ವಾದಂ” ಹೆಸರಿನ ರೆಸ್ಟೋರೆಂಟ್ ಇದೆ.

ಏಷ್ಯಾದಲ್ಲೇ ಅತೀ ಉದ್ದವಾದ ವಾಟರ್ ಫಾಲ್ಸ್ ನಿರ್ಮಿಸಲಾಗಿದೆ. ಇಂಡಿಯಾದಲ್ಲೇ ದೊಡ್ಡದಾದ ಫುಟ್ಬಾಲ್ ಹಾಗೂ ಕ್ರಿಕೆಟ್ ಟರ್ಫ್ ಸೇರಿದಂತೆ ಎಲ್ಲಾ ಸೌಲಭ್ಯಗಳಿರುವ ನಮ್ಮ “ಅವ್ಯಾನಾ” ರೆಸಾರ್ಟ್ ನಲ್ಲಿ ಮದುವೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿಕೊಳ್ಳಬಹುದು. ವಿಶೇಷವಾಗಿ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ಅನುಕೂಲವಿದ್ದು, ಚಿತ್ರರಂಗದವರು ಬಳಸಿಕೊಳ್ಳಬಹುದು ಎಂದು ಎಂ.ಜೆ .ಪ್ರೊಡಕ್ಷನ್ ಹಾಗೂ “ಅವ್ಯಾನಾ” ರೆಸಾರ್ಟ್ ಬಗ್ಗೆ ಮಾಹಿತಿ ನೀಡಿದರು.

ನನ್ನನ್ನು ಆಹ್ವಾನಿಸಲು ಎರಡು ಗಂಟೆ ಪ್ರಯಾಣ ಮಾಡಿಕೊಂಡು ಬರುವುದು ಬೇಡ ಎಂದೆ. ಆದರೂ ಅನಿಲ್ ಕುಮಾರ್ ಅವರು ಖುದ್ದಾಗಿ ಬಂದು ಸಮಾರಂಭಕ್ಕೆ ಆಹ್ವಾನಿಸಿದರು. ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ ಎಂದು ತಿಳಿದು ಸಂತೋಷವಾಯಿತು. “ಅವ್ಯಾನಾ” ರೆಸಾರ್ಟ್ ತುಂಬಾ ಚೆನ್ನಾಗಿದೆ. “ಎಂ.ಜೆ ಪ್ರೊಡಕ್ಣನ್” ಮೂಲಕ ಕನ್ನಡ ಚಿತ್ರ‌ ನಿರ್ಮಾಣಕ್ಕೆ ಕೂಡ ಮುಂದಾಗಿದ್ದಾರೆ ಒಳ್ಳೆಯದಾಗಲಿ ಎಂದು ನಟ ಶರಣ್ ಹಾರೈಸಿದರು.

“ಅವ್ಯಾನಾ” ರೆಸಾರ್ಟ್ ನೋಡಿ ಖುಷಿಯಾಯಿತು. ಅದರಲ್ಲೂ ನಾನು ಈಜುಗಾರ್ತಿ ಆಗಿರುವುದರಿಂದ, ಇಲ್ಲಿ ನಿರ್ಮಾಣವಾಗಿರುವ ಅತೀ ಉದ್ದದ ವಾಟರ್ ಫಾಲ್ಸ್ ಬಹಳ ಹಿಡಿಸಿತು. ಚಿತ್ರೀಕರಣಕ್ಕೆ ಇದೊಂದು ಸೂಕ್ತ ಜಾಗ ಎಂದರು “ಕಾಂತಾರ” ಖ್ಯಾತಿಯ ಸಪ್ತಮಿ ಗೌಡ.

ಅನಿಲ್ ಕುಮಾರ್ ಅವರ ಎಲ್ಲಾ ಉತ್ತಮ ಕೆಲಸಗಳಿಗೂ‌ ನಮ್ಮ‌ ಬೆಂಬಲವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ತಿಳಿಸಿದರು.

ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ, ನಿರ್ದೇಶಕ ಹರಿ ಸಂತೋಷ್, ಸತೀಶ್ ಕುಮಾರ್, ಮುಖೇಶ್ ಕುಮಾರ್ ಮುಂತಾದ ಗಣ್ಯರು “ಅವ್ಯಾನಾ” ಹಾಗೂ “ಎಂ.ಜೆ.ಪ್ರೊಡಕ್ಷನ್ ” ಗೆ ಶುಭ ಕೋರಿದರು.

Categories
ಸಿನಿ ಸುದ್ದಿ

ಶಾರ್ಟ್ ಫಿಲ್ಮ್ ಮೇಕರ್ಸ್ ಗೆ ಸತ್ಯ ಹೆಗಡೆ ಸ್ಟುಡಿಯೋಸ್ ವರದಾನ…

ಸದ್ಯ ಚಂದನವನದಲ್ಲಿ ಯುವ ಪ್ರತಿಭೆಗಳ ಅದೃಷ್ಟ ಪರೀಕ್ಷೆಗೆ ‘ಸತ್ಯ ಹೆಗಡೆ ಸ್ಟುಡಿಯೋಸ್’ ವರದಾನವಾಗುತ್ತಿದೆ. ಹೌದು, ಛಾಯಾಗ್ರಾಹಕನಾಗಿ ಹೆಸರು ಮಾಡಿರುವ ಸತ್ಯ ಹೆಗಡೆ ‘ಸತ್ಯ ಹೆಗಡೆ ಸ್ಟುಡಿಯೋ’ ಹುಟ್ಟು ಹಾಕಿ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತಿದ್ದು, ಈ ಸಂಸ್ಥೆಯ ಮೂಲಕ ಶಾರ್ಟ್ ಫಿಲ್ಮಗಳನ್ನು ನಿರ್ಮಾಣ ಮಾಡುವ ಜೊತೆಗೆ ಸತ್ಯ ಹೆಗಡೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಯುವಕರು ತಮ್ಮ ನಿರ್ದೇಶಕನಾಗುವ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದು, ಈಗಾಗಲೇ ಈ ಯೂಟ್ಯೂಬ್ ಚಾನಲ್ ಮೂಲಕ 11 ಕಿರು ಚಿತ್ರಗಳು ಬಿಡುಗಡೆ ಆಗಿವೆ.‌

ಇದೀಗ ಮೂರು ಫಿಲ್ಮ್ ಗಳು ಈ ಚಾನಲ್ ನಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಆ ಪೈಕಿ ಕಳೆದ ಶನಿವಾರ ‘ಗ್ರಾಚಾರ’ ಎಂಬ ಕಿರುಚಿತ್ರ ರಿಲೀಸ್ ಆಗಿದ್ದು ಮುಂದಿನ ದಿನಗಳಲ್ಲಿ ‘ಕಥೆಗಾರನ ಕತೆ’ ಹಾಗೂ ‘ಅಹಂ ಪರಂ’ ಶಾರ್ಟ್ ಫಿಲಂ ಗಳು ಈ ಸತ್ಯ ಹೆಗಡೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿವೆ. ಹಾಗಾಗಿ ಇತ್ತೀಚಿಗಷ್ಟೇ ಸತ್ಯ ಹೆಗಡೆ ಹಾಗೂ ಅವರ ತಂಡ ಆ ಮೂರು ಕಿರು ಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಒಂಬತ್ತು ನಿಮಿಷಗಳ ‘ಕತೆಗಾರನ ಕಥೆ’ ಕಿರು ಚಿತ್ರವನ್ನು ಯುವ ಬರಹಗಾರ ಹಾಗೂ ನಿರ್ದೇಶಕ ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ.

ಹಾಸನ ಮೂಲದವರಾದ ಕೌಶಿಕ ‘ಹೃದಯದ ಮಾತು’ ಸೇರಿದಂತೆ 8 ಕಾದಂಬರಿಗಳನ್ನು ಬರೆದಿದ್ದು ಕೆಲವೊಂದು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಕೂಡ ಮಾಡಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡಿರುವ ಕೌಶಿಕಗೆ ಇದು ಮೊದಲ ಪ್ರಯತ್ನ. ಈಗಷ್ಟೇ ಬಿಡುಗಡೆ ಆಗಿರುವ ‘ಗ್ರಾಚಾರ’ ಕಿರು ಚಿತ್ರವನ್ನು ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದು, ಇವರು ಮೂಲತಃ ಸಾಗರನವರು. ಇವರು ಕೂಡ ಸಾಫ್ಟ್ ವೇರ್ ಇಂಜಿನಿಯರಿಂಗ್ ಓದಿಕೊಂಡಿದ್ದಾರೆ. ಇನ್ನು ವಿಭಿನ್ನ ಪ್ರಯತ್ನದಂತೆ ‘ಅಹಂ ಪರಂ’ ಕಿರುಚಿತ್ರ ಸಿದ್ಧವಾಗಿದ್ದು ಇದನ್ನು ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ.

ಈ ಕಿರುಚಿತ್ರಗಳ ವೀಕ್ಷಣೆಗೆ ಅಥಿತಿಗಳಾಗಿ ನಿರ್ದೇಶಕರಾದ ಗಿರಿರಾಜ್, ಚೇತನ ಕುಮಾರ್, ನಟ ‘ಗುಲ್ಟು’ ನವೀನ ಮುಂತಾದವರು ಬಂದಿದ್ದರು. ಆ ಪೈಕಿ ನಿರ್ದೇಶಕ ಗಿರಿರಾಜ್ ಮಾತನಾಡಿ, ‘ಇಂದಿನ ಯುವಕರಿಗೆ ಶಾರ್ಟ್ ಫಿಲಂಗಳು ಒಂದು ಒಳ್ಳೆ ಅವಕಾಶ ಆಗುತ್ತಿವೆ. ಯುವಕರ ಪ್ರಯತ್ನಗಳಿಗೆ ಸತ್ಯ ಹೆಗಡೆ ಸ್ಟುಡಿಯೋಸ್ ಸಾಕಷ್ಟು ಸಹಾಯ ಮಾಡುತ್ತಿದೆ. ನಮ್ಮಗಳ ಕಾಲದಲ್ಲಿ ಇಂತಹ ಅವಕಾಶ ಇರಲಿಲ್ಲ. ಈಗಿನ ಯುವಕರಿಗೆ ಒಳ್ಳೆಯ ಅವಕಾಶವನ್ನು ಸತ್ಯ ಹೆಗಡೆ ಮಾಡಿಕೊಡುತ್ತಿದ್ದಾರೆ. ಮೂರು ಚಿತ್ರಗಳು ಚೆನ್ನಾಗಿ ಬಂದಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಯುವ ಪ್ರತಿಭೆಗಳಿಗೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

ನವೀನ್ ಮಾತನಾಡಿ, ‘ನಾನು ಕೂಡ ಶಾರ್ಟ್ ಫಿಲಂಗಳಲ್ಲಿ ಅಭಿನಯಿಸುತ್ತಾ ಬಂದವನು. ನಾವು ಶಾರ್ಟ್ ಫಿಲಂ ತಯಾರಿಸುವಾಗ ಸತ್ಯ ಹೆಗಡೆಯಂತವರು ನಮಗೆ ಯಾರು ಸಾಥ್ ನೀಡಿರಲಿಲ್ಲ.

ಈಗಿನವರೆಗೆ ಒಳ್ಳೆಯ ಅವಕಾಶ ಸಿಗುತ್ತದೆ ಕಿರುಚಿತ್ರಗಳನ್ನು ಬಿಡುಗಡೆ ಮಾಡಲು. ಇಂತಹ ಅವಕಾಶವನ್ನು ಇನ್ನಷ್ಟು ಯುವ ಜನರಿಗೆ ಸಿಕ್ಕು ಒಳ್ಳೆಯ ಚಿತ್ರಗಳನ್ನು ತರಬೇಕು. ಈ ಶಾರ್ಟ್ ಫಿಲಂ ವೇದಿಕೆ ಯುವ ಪ್ರತಿಭೆಗಳಿಗೆ ತುಂಬಾ ಅನುಕೂಲವಾಗುತ್ತದೆ’ ಎಂದರು.

Categories
ಸಿನಿ ಸುದ್ದಿ

ಯಲಾ ಕುನ್ನಿ ಅಂದ್ರು ಕೋಮಲ್! ಮೇರಾ ನಾಮ್ ವಜ್ರಮುನಿ: ಇದು ಸೆನ್ಸೇಷನ್ ಸ್ಟಾರ್ ಸಿನಿಮಾ

ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಅಭಿನಯದ ನೂತನ ಚಿತ್ರ “ಯಲಾ ಕುನ್ನಿ” ಮೇರಾ ನಾಮ್ ವಜ್ರಮುನಿ ! ಎಂಬ ಅಡಿಬರಹ ಇರುವ ಶೀರ್ಷಿಕೆ ಇತ್ತೀಚೆಗೆ ಅನಾವರಣವಾಗಿದೆ.

ಸೌಭಾಗ್ಯ ಸಿನಿಮಾಸ್ ಲಾಂಛನದಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ ಈ ಚಿತ್ರವನ್ನು ಎನ್. ಆರ್ ಪ್ರದೀಪ ನಿರ್ದೇಶಿಸುತ್ತಿದ್ದಾರೆ.

ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಗರಡಿಯಲ್ಲಿ ಪಳಗಿರುವ ಪ್ರದೀಪ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

1981 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನಲ್ಲಿ ಹಳ್ಳಿ ಮತ್ತು ದೇವಸ್ಥಾನದ ಸೆಟ್ ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಯಲಿದೆ.

ಕನ್ನಡದ ಖ್ಯಾತ ನಟ ವಜ್ರಮುನಿ ತಮ್ಮ ಚಿತ್ರಗಳಲ್ಲಿ ಹೆಚ್ಚು ಬಯ್ಯಲು ಬಳಸುತ್ತಿದ್ಡ ಸಂಭಾಷಣೆ “ಯಲಾ ಕುನ್ನಿ”. ಈ ಪದವನ್ನೆ ಚಿತ್ರದ ಶೀರ್ಷಿಕೆಯಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ “ವಜ್ರಮುನಿ”ಯಾಗಿ ಕೋಮಲ್ ರೆಟ್ರೂ ಲುಕ್ ನಲ್ಲಿ ಕಮಾಲ್ ಮಾಡಲಿದ್ದಾರೆ. ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಮಗ ಜಯಸಿಂಹ ಮುಸುರಿ, ನವರಸ ನಾಯಕ ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಹಾಗೂ “ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಾಂತೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಕುಟುಂಬ ಸಮೇತ ನೋಡಬಹುದಾದ ಪರಿಶುದ್ಧ ಹಾಸ್ಯ ಕಥಾಹಂದರದ ಜೊತೆಗೆ ಎಮೋಶನ್ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರದೀಪ ಅವರೆ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ,ಗೀತ ರಚನೆ ಸಹ ಮಾಡಿದ್ದಾರೆ ಧರ್ಮ ವಿಶ್ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.

Categories
ಸಿನಿ ಸುದ್ದಿ

ಮೈಸೂರಲ್ಲಿ ರಾಜ್ ಮೊಮ್ಮಗನ ಹೊಸ ಲವ್ ಸ್ಟೋರಿ! ಒಂದು ಸರಳ ಪ್ರೇಮಕಥೆ ಹೇಳೋಕ್ ಬಂದ್ರು ಸಿಂಪಲ್ ಸುನಿ…

ಸಿಂಪಲ್ ಸುನಿ ನಿರ್ದೇಶನದಲ್ಲಿ ವಿನಯ್ ರಾಜ್ ಕುಮಾರ್ ನಟಿಸುತ್ತಿರುವ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಒಂದು ಸರಳ ಪ್ರೇಮಕಥೆ’. ಚಿತ್ರದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್, ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣದಲ್ಲಿ ನಿರತವಾಗಿದ್ದು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ.

ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ. ನನಗೆ ಮೊದಲಿನಿಂದಲೂ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ತುಂಬಾ ಇಷ್ಟ ಜೊತೆಗೆ ಸುನಿ ಅವರ ನಿರ್ದೇಶನದ ಶೈಲಿ ಕೂಡ ತುಂಬಾ ಇಷ್ಟ. ಸುನಿ ಅವರು ಈ ಸಿನಿಮಾ ಕಥೆ ಹೇಳಲು ಬಂದಾಗ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದೀನಿ ಅನ್ನೋದೇ ತುಂಬಾ ಖುಷಿ ಕೊಟ್ಟಿತ್ತು.

ಈ ಚಿತ್ರದಲ್ಲಿ ಅತಿಶಯ್ ಪಾತ್ರದಲ್ಲಿ ನಟಿಸಿದ್ದೇನೆ. ಸಂಗೀತ ನಿರ್ದೇಶಕನ ಪಾತ್ರ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಅನ್ನೋದು ಅವನ ಕನಸು. ಆತನ ಮನಸ್ಸಲ್ಲಿ ಒಂದು ಹುಡುಗಿಯ ಹುಡುಕಾಟ ಯಾವಾಗಲೂ ಇರುತ್ತೆ ಇದು ಸಿನಿಮಾದ ಒಂದು ಎಳೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಗೆ ಇಟ್ಟ ಮೊದಲ ಟೈಟಲ್ ‘ಒಂದು ಸರಳ ಪ್ರೇಮಕಥೆ’. ಯಾವುದಾದರೂ ಸಿನಿಮಾಗೆ ಈ ಟೈಟಲ್ ಇಡೋಣ ಎಂದು ಹತ್ತು ವರ್ಷದಿಂದ ಟೈಟಲ್ ರಿನಿವಲ್ ಮಾಡಿಕೊಂಡು ಬಂದಿದ್ದೆ. ಈ ಚಿತ್ರದ ಕಥೆ ಕೇಳಿ ವಿನಯ್ ರಾಜ್ ಕುಮಾರ್ ಓಕೆ ಮಾಡಿದರು. ಚಿತ್ರಕ್ಕೆ ಪ್ರಸನ್ನ ಅವರು ಕಥೆ ಬರೆದಿದ್ದಾರೆ.

ಜನವರಿ 23ರಂದು ಸಿನಿಮಾ ಮುಹೂರ್ತ ಆಗಿತ್ತು, ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಮೈಸೂರಿನಲ್ಲಿ ಇವತ್ತು ಕೊನೆಯ ದಿನದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಶೇಕಡಾ 50ರಷ್ಟು ಚಿತ್ರೀಕರಣ ಮುಗಿದಿದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಮಲ್ಲಿಕಾ ಸಿಂಗ್ ಮೊದಲ ಕನ್ನಡ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು.

ಸಾಧುಕೋಕಿಲ, ರಾಜೇಶ್ ನಟರಂಗ, ಅರುಣ ಬಾಲರಾಜ್ ಒಳಗೊಂಡ ಕಲಾವಿದರು ಒಂದು ಸರಳ ಪ್ರೇಮಕಥೆ ಚಿತ್ರದಲ್ಲಿದ್ದು, ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅವಾರ್ಡ್ ಗೆ ಹಾರ್ಸ್ ಫ್ಯಾಷನ್ಸ್ ಕಂಪನಿ ಸಾಥ್: ಬ್ರ್ಯಾಂಡ್ ಲಾಂಚ್ ಮಾಡಿದ ಯೋಗರಾಜ ಭಟ್

ಕನ್ನಡ ಚಿತ್ರರಂಗದ ಸಿನಿಮಾ ಪತ್ರಕರ್ತರು ನಡೆಸುವ ನಾಲ್ಕನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಈ ಬಾರಿಯೂ ಯಶಸ್ವಿಯಾಗಿದೆ. ಕಳೆದ ಮೂರು ವರ್ಷಗಳಿಂದಲೂ ಸಿನಿಮಾರಂಗದ ದಿಗ್ಗಜರು ಕೊಟ್ಟ ಸಹಕಾರ ಮತ್ತು ಪ್ರೋತ್ಸಾಹದಿಂದ ಅವಾರ್ಡ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುವ ಮೂಲಕ ಕನ್ನಡದ ಸ್ಟಾರ್ ನಟ, ನಟಿಯರು ಹಾಗು ತಂತ್ರಜ್ಞರು, ನಿರ್ದೇಶಕ, ನಿರ್ಮಾಪಕರು ಸಿನಿಮಾ ಪತ್ರಕರ್ತರ ಕಾರ್ಯವನ್ನು ಶ್ಲಾಘಿಸುತ್ತ ಬಂದಿದ್ದಾರೆ.

ಈ ಬಾರಿಯೂ ಕೂಡ ಲಲಿತ್ ಅಶೋಕ ಹೋಟೆಲ್‌ನಲ್ಲಿ ನಡೆದ ಕಲರ್ ಪುಲ್ ಕಾರ್ಯಕ್ರಮಕ್ಕೆ ಅಇನಿಮಾ ಗಣ್ಯರು ಭಾಗಿಯಾಗುವ ಮೂಲಕ ಸಿನಿಮಾ ಪತ್ರಕರ್ತರ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕು ಅಥವಾ ಅರ್ಥಪೂರ್ಣವಾಗಿ ನಡೆಯಬೇಕಾದರೆ, ಕಾರ್ಯಕ್ರಮಕ್ಕೆ ಸಹಕಾರ ನೀಡುವ ಮನಸ್ಸುಗಳೂ ಮುಖ್ಯ. ಹಾಗಾಗಿ ಈ ಸಲವೂ ಸಹ, ನಿಮ್ಮ ಹಿಂದೆ ನಾವಿದ್ದೇವೆ. ಎಂದಿಗಿಂತಲೂ ಚೆನ್ನಾಗಿ ಕಾರ್ಯಕ್ರಮ ಮಾಡಬೇಕು ಎಂದು ಪ್ರೋತ್ಸಾಹಿಸುವ ಮೂಲಕ ಹಲವು ಕಂಪೆನಿಗಳು, ಉದ್ಯಮಿಗಳು ಕಾರ್ಯಕ್ರಮಕ್ಕೆ ತನು,ಮನ, ಧನ ನೀಡಿ ಬೆನ್ನು ತಟ್ಟಿದ್ದಾರೆ.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಲ್ಲಿ ಉದ್ಯಮಿ ನರಸಿಂಹನ್ ಕೂಡ ಒಬ್ಬರು. ಅವರು ತಮ್ಮ ಹಾರ್ಸ್ ಫ್ಯಾಷನ್ಸ್ ಎಂಬ ಕಂಪೆನಿ‌ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸ್ಪಂದಿಸಿದ್ದಾರೆ. ಅವರ ಹಾರ್ಸ್ ಫ್ಯಾಷನ್ಸ್ ಕಂಪೆನಿಯಲ್ಲಿ ಬ್ರ್ಯಾಂಡ್ ಟೀ ಶರ್ಟ್ಸ್ ಗಳು ತಯಾರಾಗುತ್ತವೆ. ಗುಣಮಟ್ಟದಿಂದ ತಯಾರಾಗುವ ಈ ಕಂಪೆನಿಯ ಟೀ ಶರ್ಟ್ಸ್ ಗಳಿಗೆ ಸದ್ಯ ಬೇಡಿಕೆ ಇದೆ.

ಹಾರ್ಸ್ ಫ್ಯಾಷನ್ಸ್ ಕಂಪೆನಿ ಮಾಲೀಕರಾದ ಉದ್ಯಮಿ ನರಸಿಂಹನ್, ಕೊಯಮತ್ತೂರು ಬಳಿ ಇರುವ ತ್ರಿಪುರ್ ನಲ್ಲಿ ಕಂಪೆನಿಯ ಫ್ಯಾಕ್ಟರಿ ಇಟ್ಟಿದ್ದಾರೆ. ಅಲ್ಲಿ ನೂರಾರು ಯುವ ಉದ್ಯೋಗಿಗಳಿಗೆ ಕೆಲಸ ನೀಡಿ ಉತ್ಸಾಹ ತುಂಬಿದ್ದಾರೆ.
ಇತ್ತೀಚೆಗೆ ನಡೆದ ಚಂದನವನ ಕ್ರಿಟಿಕ್ಸ್ ಫಿಲ್ಮ್ ಅವಾರ್ಡ್ ವೇಳೆ ನರಸಿಂಹನ್ ಅವರು ತಮ್ಮ, ಹಾರ್ಸ್ ಫ್ಯಾಷನ್ಸ್ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ಕನ್ನಡ ನಿರ್ದೇಶಕ ಯೋಗರಾಜ ಭಟ್ ಅವರು ಈ ಬ್ರ್ಯಾಂಡ್ ಲಾಂಚ್ ಮಾಡಿ ಶುಭ ಕೋರಿದ್ದಾರೆ.

Categories
ಸಿನಿ ಸುದ್ದಿ

ಅರಣ್ಯ ಸಮಸ್ಯೆ ಪರಿಹಾರಕ್ಕೆ ಸಿಎಂಗೆ ಮನವಿ ಸಲ್ಲಿಸಿದ ರಿಷಬ್ ಶೆಟ್ಟಿ : ಕಾಡ್ಗಿಚ್ಚು ನಿವಾರಣೆ, ಕಾಡಾನೆ ತೊಂದರೆ ಪರಿಹಾರಕ್ಕೆ ಮುಂದಾದ ಕಾಂತಾರ ಹೀರೋ…

ಕಾಡಂಚಿನ ಜನರು ಮತ್ತು ಅರಣ್ಯ ರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಮಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ರಿಷಬ್ ಶೆಟ್ಟಿ ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆದೇಶಿಸುವ ಭರಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕಾಂತಾರ ಸಿನಿಮಾದ ಬಳಿಕ ನಾನು ಹೆಚ್ಚೆಚ್ಚು ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಸುತ್ತಾಡಿದೆ. ಅರಣ್ಯ ಇಲಾಖೆಯ ಜೊತೆ ಕೆಲಸ ಮಾಡುತ್ತಾ ಅರಣ್ಯ ರಕ್ಷಣೆಯ ವೇಳೆ ಇಲಾಖೆಯ ಮಂದಿ ಮತ್ತು ಕಾಡಂಚಿನ ಪ್ರದೇಶಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅರಿತುಕೊಂಡೆ. ಉದಾಹರಣೆಗೆ ಕೃಷಿಕರು ಎದುರಿಸುತ್ತಿರುವ ಕಾಡಾನೆ ತೊಂದರೆ ಸಮಸ್ಯೆ ಇರಬಹುದು, ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಚರ್ ಗಳು ಎದುರಿಸುವ ಕಷ್ಟಗಳಿರಬಹುದು ಹೀಗೆ ಸುಮಾರು 20 ಅಂಶಗಳ ವಿವರವಾದ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಅವರು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಸಮಸ್ಯೆಗೆ ತಕ್ಷಣ ಸ್ಪಂದಿಸುವ ಮುಖ್ಯಮಂತ್ರಿಗಳು ಇರುವುದಕ್ಕೆ ನಾವು ಧನ್ಯರು ಎಂದೂ ತಿಳಿಸಿದ್ದಾರೆ.

ಕಾಂತಾರ ಸಿನಿಮಾ ಮೂಲಕ ಅರಣ್ಯ ರಕ್ಷಣೆಯ ಸಂದೇಶ ನೀಡಿದ ರಿಷಬ್ ಶೆಟ್ಟಿಯವರು ಇದೀಗ ಅರಣ್ಯ ರಕ್ಷಣೆ ಮತ್ತು ಕಾಡಂಚಿನಲ್ಲಿರುವ ಜನರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸವೇ ಸರಿ.


ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು.

Categories
ಸಿನಿ ಸುದ್ದಿ

ಬೊಂಬೆ ಹೇಳುತೈತೆ ಸಿನಿಮಾ ಮೂಲಕ ಯತಿರಾಜ್ ಹೊಸ ದಾಖಲೆ

ಸಿನಿಮಾ ಪತ್ರಕರ್ತನಾಗಿ ಪರಿಚಿತರಾಗಿದ್ದ ಯತಿರಾಜ್ ನಂತರ ಕಲಾವಿದನಾಗಿ ಚಿರಪರಿಚಿತರಾದರು. ಈಗ ಯತಿರಾಜ್ ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಅವರು ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ “ಬೊಂಬೆ ಹೇಳುತೈತೆ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ಯತಿರಾಜ್ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ

ನಾನು ಇಪ್ಪತ್ತೈದು ವರ್ಷಗಳ ಹಿಂದೆ ಸಿನಿಮಾದ ಒಂದು ಸನ್ನಿವೇಶದಲ್ಲಿ ಕಂಡರೆ ಸಾಕು ಎಂದು ಕೊಂಡಿದ್ದವನು. ಆನಂತರ ಅನೇಕ ಚಿತ್ರಗಳಲ್ಲಿ ಅಭಿನಯಿಸಿದೆ. ನಂತರ ನಿರ್ದೇಶಕನಾಗುವ ಕನಸು ಈಡೇರಿತು. ಈ ತನಕ ಆರು ಚಿತ್ರಗಳನ್ನು ನಿರ್ದೇಶಿಸಿದ್ಧೇನೆ. ಇಡೀ ಚಿತ್ರ ಪೂರ್ತಿ ಒಂದೇ ಪಾತ್ರವಿರಬೇಕು. ಅದರಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಇದಕ್ಕೆ ಸ್ಪೂರ್ತಿ ಹಿಂದಿಯಲ್ಲಿ ಸುನಿಲ್ ದತ್ ಹಾಗೂ ತಮಿಳಿನಲ್ಲಿ ಪಾರ್ಥಿಬನ್ ಅವರು ಎಂದರೆ ತಪ್ಪಾಗಲಾರದು. ಈ ವಿಷಯವನ್ನು ನನ್ನ ಮಗ ಪೃಥ್ವಿರಾಜ್‌ ಮುಂದೆ ಹೇಳಿದಾಗ, ಅವನು “ಬೊಂಬೆ ಹೇಳುತೈತೆ” ಚಿತ್ರದ ಕಥೆ ಹೇಳಿದ್ದ. ಪರಿಕಲ್ಪನೆ ಅವನದೆ. ಕಥೆ ಕೇಳಿ ಮೆಚ್ಚಿದ ಮಾರುತಿ ಪ್ರಸಾದ್ ನಿರ್ಮಾಣಕ್ಕೆ ಮುಂದಾದರು.

ಚನ್ನಪಟ್ಟಣದ ಒಂದು ಬೊಂಬೆ ಅಂಗಡಿಯಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಚಿತ್ರ ಸೆನ್ಸಾರ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರ ಮುಗಿದ ಮೇಲೆ ನನಗೊಂದು ವಿಷಯ ತಿಳಿಯಿತು. ಈವರೆಗೂ ಕನ್ನಡದಲ್ಲಿ ಒಬ್ಬ ವ್ಯಕ್ತಿ ತಾನೇ ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ಯಾವ ಚಿತ್ರಗಳು ಬಂದಿಲ್ಲ ಎಂದು. ಏಕ ಪಾತ್ರ, ದ್ವಿಪಾತ್ರ ಚಿತ್ರಗಳು ಬಂದಿದೆಯಾದರೂ, ನಿರ್ದೇಶಕರು ಬೇರೆಯವರಾಗಿರುತ್ತಾರೆ. ಅವರೆ ನಿರ್ದೇಶಿಸಿ ಜೊತೆಗೆ ಏಕಪಾತ್ರದಲ್ಲಿ ನಟಿಸಿರುವ ಕನ್ನಡದ ಮೊದಲ ಚಿತ್ರ ಇದೇ ಎನ್ನಬಹುದು. ಹಾಗಂತ ನಾನು ಯಾವ ದಾಖಲೆಗೂ ಇದನ್ನು ಕಳುಹಿಸಿಲ್ಲ. ಇದೇ ಮಾರ್ಚ್ 23ರ ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಅದರಲ್ಲಿ ನಮ್ಮ‌ ಚಿತ್ರ ಪ್ರದರ್ಶನವಾಗಬೇಕೆಂಬ ಆಸೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಸಕಾಲ ನೋಡಿಕೊಂಡು ಮುಂದಿನ ದಿನಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇನೆ ಎಂದ ನಿರ್ದೇಶಕ ಹಾಗೂ ನಟ ಯತಿರಾಜ್, ಸಹಕಾರ ನೀಡಿದ ಚಿತ್ರತಂಡದ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದ ತಿಳಿಸಿದರು.

ಕಥೆ ಬರೆದಿರುವ ಪೃಥ್ವಿರಾಜ್, ಛಾಯಾಗ್ರಾಹಕ ವಿದ್ಯಾ ನಾಗೇಶ್ ಹಾಗೂ ಸಹ ನಿರ್ದೇಶಕ ಅರುಣ್ ಚಿತ್ರದ ಕುರಿತು ಮಾತನಾಡಿದರು. ಪಿ ಆರ್ ಓ ಸುಧೀಂದ್ರ ವೆಂಕಟೇಶ್, ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಮತ್ತು ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಸಂಪರ್ಕಾಧಿಕಾರಿ ಶಂಕರ್ ಚಿತ್ರಕ್ಕೆ ಶುಭ ಕೋರಿದರು.

ಪತ್ರಿಕಾಗೋಷ್ಠಿಗೂ ಮುನ್ನ ಯತಿರಾಜ್ ಅವರೆ ಬರೆದಿರುವ, ರಾಜ್ ಭಾಸ್ಕರ್ ಸಂಗೀತ ನೀಡಿರುವ ಹಾಡನ್ನು ಹಾಗೂ ಚಿತ್ರದ ಟ್ರೇಲರ್ ಪ್ರದರ್ಶಿಸಲಾಯಿತು.

Categories
ಸಿನಿ ಸುದ್ದಿ

ಅಥಿ ಐ ಲವ್ ಯು! ಇದು ಲೋಕೇಂದ್ರ ಲವ್ ಸ್ಟೋರಿ: ಹನ್ನೊಂದು ನಿಮಿಷದ ಸಿಂಗಲ್ ಶಾಟ್ ದೃಶ್ಯ

ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಅಥಿ ಐ ಲವ್ ಯು. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಒಂದೇ ದಿನದಲ್ಲಿ, ಒಂದು ಮನೆಯಲ್ಲಿ ನಡೆಯುವ ಕತೆ ಈ ಚಿತ್ರದಲ್ಲಿದೆ. ಗಂಡ-ಹೆಂಡತಿಯ ನಡುವಿನ ಆಪ್ತ ದೃಶ್ಯಗಳು ಇಲ್ಲಿ ಪ್ರಮುಖವಾಗಿರಲಿದೆ. ಅದು ಬೆಂಗಳೂರಿನ ಮನೆಯಲ್ಲಿ ನಡೆದ ಚಿತ್ರೀಕರಣ. ಬರೋಬ್ಬರಿ ಹನ್ನೊಂದು ನಿಮಿಷದ ದೊಡ್ಡ ದೃಶ್ಯವದು. ಅದೂ ಸಿಂಗಲ್‌ ಶಾಟ್‌ನಲ್ಲಿ ಕಂಪೋಸ್‌ ಮಾಡಲಾಗಿತ್ತು. ಮಲಗಿದ್ದ ಗಂಡ ಹೆಂಡತಿ ಎದ್ದ ನಂತರದ ದೀರ್ಘವಾದ ಈ ದೃಶ್ಯಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗಿತ್ತು. ಮನೆಯಲ್ಲೇ ವಿವಿಧ ಕೋನಗಳಲ್ಲಿ ಲೈಟಿಂಗ್‌ ವ್ಯವಸ್ಥೆ ರೂಪಿಸಿ, ಕ್ಯಾಮೆರಾ ಚಲನೆಗೆ ಪ್ಲಾನ್‌ ಮಾಡಲಾಗಿತ್ತು.

ಅಂದುಕೊಂಡಂತೇ ಈ ದೃಶ್ಯ ಮೂಡಿ ಬಂದಿದ್ದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಈ ರೀತಿಯ ದೀರ್ಘಾವಧಿಯ ದೃಶ್ಯಗಳು ಚಿತ್ರದುದ್ದಕ್ಕೂ ಮೂಡಿಬರಲಿದೆಯಂತೆ. ಒಂದು ನಿಮಿಷದ ದೃಶ್ಯವನ್ನು ಕಂಪೋಸ್‌ ಮಾಡುವುದು ಕಷ್ಟದ ಕೆಲಸ. ಹತ್ತು ನಿಮಿಷಕ್ಕೂ ಅಧಿಕ ಸಮಯದ ದೃಶ್ಯವನ್ನು ಕಟ್ಟುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ಸ್ವತಃ ನಾಯಕನಾಗಿ ನಟಿಸಿ, ನಿರ್ದೇಶನವನ್ನೂ ಮಾಡಿರುವ ಲೋಕೇಂದ್ರ ಸೂರ್ಯ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ನಾಯಕಿ ಶ್ರಾವ್ಯಾ ರಾವ್‌ ಕೂಡಾ ಈ ಚಿತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದಾರೆ.


ʻʻಲೆಂತಿ ಶಾಟ್ ಗಳು ಚಿತ್ರದುದ್ದಕ್ಕೂ ಸಹಜವಾಗಿಯೇ ಕಾಣಸಿಗುತ್ತವೆ, ಕತ್ತರಿಸಿ ಜೋಡಿಸಿದರೂ ಸಿಗದ ಅನುಭವವನ್ನು ಶಾಟ್ ಕಟ್ ಮಾಡದೇಯೇ ಪರದೆಯ ಮೇಲೆ ತರಬೇಕಾದರೆ, ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಬೇಕಾಗುತ್ತದೆ. ಅಂತಹ ಪ್ರಯತ್ನದಲ್ಲಿ ಶ್ರಾವ್ಯ ಅವರು ನನಗೆ ಉತ್ತಮವಾದ ಸಾಥ್ ನೀಡಿದ್ದಾರೆ. ಭಾವನಾತ್ಮಕ ದೃಶ್ಯಗಳನ್ನು ಅಲ್ಲಲ್ಲಿ ಸಣ್ಣ ಶಾಟ್‌ಗಳಾಗಿ ವಿಭಾಗಿಸಿದರೆ, ಭಾವನೆಗಳನ್ನು ಹಿಡಿದಿಡುವುದು ಕಷ್ಟ. ಆದ ಕಾರಣ ಕೆಲವು ದೃಶ್ಯಗಳನ್ನು ಒಂದೊಂದೇ ಶಾಟ್‌ಗಳಲ್ಲಿ ಚಿತ್ರಿಸುತಿದ್ದೇವೆ. ಅದು ಪ್ರೇಕ್ಷಕರಿಗೆ ಮತ್ತಷ್ಟು ಹಿತವೆನಿಸುತ್ತದೆʼʼ ಎನ್ನುವುದು ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಮಾತು.


ʻʻಸಾಕಷ್ಟು ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದೇನೆ. ಎಲ್ಲವೂ ನನಗೆ ಇಷ್ಟವಾದವುಗಳೇ, ಆದರೆ, ಅಥಿ ಐ ಲವ್ ಯು ಚಿತ್ರದಲ್ಲಿ ನಾನು ಬೇರೊಂದು ಬಗೆಯಲ್ಲಿ ಅನುಭವ ಪಡೆದುಕೊಳ್ಳುತಿದ್ದೇನೆ. ಈ ಚಿತ್ರದ ಚಿತ್ರೀಕರಣ ನನಗೊಂದು ವಿಷೇಶವಾದ ಅನುಭವ ನೀಡುತ್ತಿದೆ. ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಜೊತೆ ಅಭಿನಯಿಸುವುದರ ಜೊತೆಗೆ, ಅವರ ನಿರ್ದೇಶನದ ರೀತಿಯೂ ಹೊಸತನದಿಂದ ಕೂಡಿದೆ. ಅಥಿ ಐ ಲವ್ ಯು ನನ್ನ ಚಿತ್ರ ಗುಚ್ಚದಲ್ಲಿ ಒಂದೊಳ್ಳೆ ಚಿತ್ರವಾಗುತ್ತದೆ.“ ಎಂದು ನಟಿ ಶ್ರಾವ್ಯ ರಾವ್ ಹೇಳಿದರು.


ನಾನು ಈ ಬಾರಿ ಚಿತ್ರದ ನಿರ್ಮಾಣದಲ್ಲಿ ತುಂಭಾ ಸಂತಸವನ್ನು ಹೊಂದಿದ್ದೇನೆ, ಒಂದೊಳ್ಳೆ ಚಿತ್ರದ ನಿರ್ಮಾಣ ನನ್ನ ಬ್ಯಾನರ್ ನಲ್ಲಿ ನಡೆಯುತ್ತಿರುವುದು ನನಗೆ ಮತ್ತಷ್ಟು ಸಂತಸವನ್ನು ತಂದುಕೊಟ್ಟಿದೆ. ಚಿತ್ರೀಕರಣದ ವೇಳೆಯಲ್ಲಿ ಕೆಲವು ದೃಷ್ಯಗಳು ನನಗೆ ತುಂಬ ಮಜಾ ಎನಿಸಿದೆ. ನಾನು ಅದೆಷ್ಟು ಅನುಭವಿಸಿದ್ದೇನೆ ಅನ್ನೋದನ್ನು ಪರದೆಯ ಮೇಲೆ ಚಿತ್ರ ವೀಕ್ಷಣೆ ಮಾಡಿದರೆ ಗೊತ್ತಾಗುತ್ತದೆ. ಎಲ್ಲಾ ಅಂದುಕೊಂಡತೆ ಚಿತ್ರದ ಫಸ್ಟ್ ಕಾಪಿ ರೆಡಿಯಾದ ಕೂಡಲೇ ಬಿಡುಗಡೆಗೆ ತಡ ಮಾಡುವುದಿಲ್ಲ. ಮೇ ಮೊದಲ ವಾರದಲ್ಲೇ ಬಿಡುಗಡೆ ಮಾಡುತ್ತೇವೆ. ಆದಷ್ಟು ಬೇಗ ಈ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಬೇಕು ಎನ್ನುವ ತವಕ ನನ್ನದಾಗಿದೆʼʼ ಎಂದು ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ತಮ್ಮ ಸಂತೋಷವನ್ನು ಹೇಳಿಕೊಂಡರು.

ಇನ್ನು ಕುಗ್ರಾಮ ಚಿತ್ರದ ನಟಿ ಋತು ಚೈತ್ರಾ ಅವರೇ ವಸ್ತ್ರ ವಿನ್ಯಾಸ ಮಾಡಿದ್ದು, ಜೋಡಿಗಳಿಗೆ ಮತ್ತಷ್ಟು ಅಂದವನ್ನು ಹೆಚ್ಚಿಸಿದ್ದಾರೆ. ಇದೇ ತಿಂಗಳಲ್ಲಿ ಚಿತ್ರದ ಕುಂಬಳ ಕಾಯಿ ಹೊಡೆಯುವ ಯೋಚನೆ ಚಿತ್ರ ತಂಡಕ್ಕಿದೆ.
ಸೆವೆನ್ ರಾಜ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ, ರೆಡ್ ಅಂಡ್ ವೈಟ್ ಸೆವೆನ್ ರಾಜ್ ʻಅಥಿ ಐ ಲವ್ ಯೂʼ ಚಿತ್ರದಲ್ಲಿ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆಯ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ನಟಿ ಋತು ಚೈತ್ರ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿರುವುದು ವಿಶೇಷ. ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ಅತ್ಯುತ್ತಮ ನಟ ರಿಷಬ್, ನಟಿ ಶರ್ಮಿಳಾ

4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯಿತು. 2022ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ನೀಡಲಾದ ಪ್ರಶಸ್ತಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ’ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರಗಳು ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.


ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾಗಿದ್ದರೆ, ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ‘ಕಾಂತರ’ದ ಕೈ ಸೇರಿದೆ. ಅತ್ಯುತ್ತಮ ಸಂಗೀತ ಕಾಂತಾರ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್ ಪಡೆದುಕೊಂಡರೆ, ಅತ್ಯುತ್ತಮ ಸ್ಟಂಟ್ ಪ್ರಶಸ್ತಿಯು ಕಾಂತಾರ ಸಿನಿಮಾದ ವಿಕ್ರಮ್ ಮೋರ್ ಅವರಿಗೆ ಸಂದಿದೆ.


ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನ ಚಿತ್ರಕ್ಕೆ ಒಟ್ಟು ಮೂರು ಪ್ರಶಸ್ತಿಗಳು ಸಂದಿದ್ದು, ಸಿನಿಮಾಟೋಗ್ರಫಿಗಾಗಿ ಭುವನ್ ಗೌಡ, ಅತ್ಯುತ್ತಮ ಸಂಕಲನಕ್ಕಾಗಿ ಪ್ರಜ್ವಲ್ ಕುಲಕರ್ಣಿ ಹಾಗೂ ಅತ್ಯುತ್ತಮ ವಿಎಫ್ ಎಕ್ಸ್ ಹಾಗಿ ಉದಯ ರವಿ ಹೆಗಡೆ ಪಡೆದುಕೊಂಡಿದ್ದಾರೆ.


ಅತ್ಯುತ್ತಮ ನಟಿ ಪ್ರಶಸ್ತಿಯು ಗಾಳಿಪಟ 2 ಚಿತ್ರಕ್ಕಾಗಿ ಶರ್ಮಿಳಾ ಮಾಂಡ್ರೆಗೆ ದೊರೆತರೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು 777 ಚಾರ್ಲಿ ಚಿತ್ರಕ್ಕಾಗಿ ಕಿರಣ್ ರಾಜ್ ಕೆ ಪಡೆದಿದ್ದಾರೆ. ಈ ಬಾರಿ ಐದು ವಿಶೇಷ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅತ್ಯುತ್ತಮ ನಿರ್ಮಾಪಕ (ಡೆಬ್ಯು), ಸಂಚಾರಿ ವಿಜಯ್ ಹೆಸರಿನಲ್ಲಿ ಅತ್ಯುತ್ತಮ ನಟ (ಡೆಬ್ಯು), ತ್ರಿಪುರಾಂಭ ಹೆಸರಿನಲ್ಲಿ ಅತ್ಯುತ್ತಮ ನಟಿ (ಡೆಬ್ಯು), ಶಂಕರನಾಗ್ ಹೆಸರಿನಲ್ಲಿ ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹಾಗೂ ಚಿ.ಉದಯ ಶಂಕರ್ ಹೆಸರಿನಲ್ಲಿ ಅತ್ಯುತ್ತಮ ಬರಹಗಾರ (ಡೆಬ್ಯು) ಪ್ರಶಸ್ತಿಯನ್ನು ನೀಡಲಾಯಿತು.


ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮೋಹಕ ತಾರೆ ರಮ್ಯಾ, ನಟಿಯರಾದ ಕಾರುಣ್ಯ ರಾಮ್, ನಿರ್ದೇಶಕರಾದ ಬಿ.ಸುರೇಶ್, ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಸ್ಮೈಲ್ ಶ್ರೀನು, ಬಿ.ಎಸ್.ಲಿಂಗದೇವರು, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅವಾರ್ಡ್ಸ್ ವಿಜೇತರು

ಅತ್ಯುತ್ತಮ ಚಿತ್ರ
ಕಾಂತಾರ

ಅತ್ಯುತ್ತಮ ನಿರ್ದೇಶಕ
ಕಿರಣ್ ರಾಜ್ (ಚಾರ್ಲಿ)

ಅತ್ಯುತ್ತಮ ನಾಯಕ
ರಿಷಬ್ ಶೆಟ್ಟಿ (ಕಾಂತಾರ)

ಅತ್ಯುತ್ತಮ ನಾಯಕಿ
ಶರ್ಮಿಳಾ ಮಾಂಡ್ರೆ (ಗಾಳಿಪಟ 2)

ಅತ್ಯುತ್ತಮ ಸಂಭಾಷಣೆ
ಮಾಸ್ತಿ (ಗುರು ಶಿಷ್ಯರು)
ಅತ್ಯುತ್ತಮ ಪೋಷಕ ನಟ
ಸುಚೇಂದ್ರ ಪ್ರಸಾದ್ (ವ್ಹೀಲ್ ಚೇರ್ ರೋಮಿಯೋ)

ಅತ್ಯುತ್ತಮ ಪೋಷಕ ನಟಿ
ಸುಧಾರಾಣಿ (ತುರ್ತು ನಿರ್ಗಮನ)

ಅತ್ಯುತ್ತಮ ಚಿತ್ರಕಥೆ
ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೆಲ್ 2)

ಅತ್ಯುತ್ತಮ ಬಾಲನಟ/ನಟಿ
ಶಾರ್ವರಿ (ಚಾರ್ಲಿ)

ಅತ್ಯುತ್ತಮ ಸಂಗೀತ
ಕಾಂತಾರ (ಅಜನೀಶ್)

ಅತ್ಯುತ್ತಮ ಹಿನ್ನೆಲೆ ಸಂಗೀತ
ಅನೂಪ ಸೀಳೀನ್ (ಮಾನ್ಸೂನ್ ರಾಗ)

ಅತ್ಯುತ್ತಮ ಚಿತ್ರ ಸಾಹಿತ್ಯ
ಶಶಾಂಕ (ಲವ್ 350)

ಅತ್ಯುತ್ತಮ ಗಾಯಕ
ಮೋಹನ್ (ಜುಂಜಪ್ಪ, ವೇದ)

ಅತ್ಯುತ್ತಮ ಗಾಯಕಿ
ಐಶ್ವರ್ಯ ರಂಗರಾಜ್ (ಏಕ್ ಲವ್ ಯಾ)

ಅತ್ಯುತ್ತಮ ಛಾಯಾಗ್ರಹಣ
ಭುವನ್ ಗೌಡ (ಕೆಜಿಎಫ್ 2)

ಅತ್ಯುತ್ತಮ ಸಂಕಲನ
ಉಜ್ವಲ್ ಕುಲಕರ್ಣಿ (ಕೆಜಿಎಫ್2)

ಅತ್ಯುತ್ತಮ ಕಲಾ ನಿರ್ದೇಶನ
ಶಿವಕುಮಾರ (ವಿಕ್ರಾಂತ ರೋಣ)

ಅತ್ಯುತ್ತಮ ನೃತ್ಯ ನಿರ್ದೇಶನ
ಮೋಹನ್ (ಏಕ್ ಲವ್ ಯಾ, ಮೀಟ್ ಮಾಡೋಣ)

ಅತ್ಯುತ್ತಮ ಸಾಹಸ
ವಿಕ್ರಮ್ ಮೋರ್ (ಕಾಂತಾರ)

ಅತ್ಯುತ್ತಮ ವಿಎಫ್ ಎಕ್ಸ್
ಉದಯ ರವಿ ಹೆಗಡೆ ಯೂನಿಫೈ ಮೀಡಿಯಾ (ಕೆಜಿಎಫ್2)

ಅತ್ಯುತ್ತಮ ನಟ (ಡೆಬ್ಯು)
ಪೃಥ್ವಿ ಶ್ಯಾಮನೂರು (ಪದವಿ ಪೂರ್ವ)

ಅತ್ಯುತ್ತಮ ನಟಿ (ಡೆಬ್ಯು)
ಯಶಾ ಶಿವಕುಮಾರ್ (ಮಾನ್ಸನ್ ರಾಗ)

ಅತ್ಯುತ್ತಮ ನಿರ್ದೇಶಕ (ಡೆಬ್ಯು)
ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)

ಅತ್ಯುತ್ತಮ ನಿರ್ಮಾಪಕ (ಡೆಬ್ಯು)
ಪವನ್ ಒಡೆಯರ್ (ಡೊಳ್ಳು)

ಅತ್ಯುತ್ತಮ ಬರಹಗಾರ (ಡೆಬ್ಯು)
ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)

ಅತ್ಯುತ್ತಮ ಯುಟ್ಯೂಬರ್
ಕಲಾ ಮಾಧ್ಯಮ (ಪರಮೇಶ್ವರ ಕೆ.ಎಸ್)

ಅತ್ಯುತ್ತಮ ಮನರಂಜನಾ ಸಾಮಾಜಿಕ ಜಾಲತಾಣ
ವಿಕ್ಕಿ ಪೀಡಿಯಾ

error: Content is protected !!