ಮನುಷ್ಯನ ಮನಸ್ಸಿನಲ್ಲಾಗುವ ಗೊಂದಲ, ಮನಸ್ಥಿತಿಯ ಬಗ್ಗೆ ಹೇಳುವ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಖೆಯೊಸ್.
ಈ ಚಿತ್ರ ಫೆ.17 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಅಕ್ಷಿತ್ ಶಶಿಕುಮಾರ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ನಾಯಕಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ವಿಶೇಷವೆಂದರೆ ಸುಪ್ರೀಂ ಹೀರೋ ಶಶಿಕುಮಾರ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಪ್ಪ – ಮಗ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಿತು.
ಮೂಲತಃ ವೈದ್ಯರಾಗಿರುವ ಡಾ.ಜಿ.ವಿ.ಪ್ರಸಾದ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ವೈದ್ಯಕೀಯ ಕಾಲೇಜೊಂದರಲ್ಲಿ ನಡೆಯುವ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಕ್ಷಿತ್ ಶಶಿಕುಮಾರ್ ಹಾಗೂ ಅದಿತಿ ಪ್ರಭುದೇವ ಅವರದು ಈ ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರ.
ಅಲ್ಲದೆ ಹಿರಿಯನಟ ಶಶಿಕುಮಾರ್ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ವಿಶೇಷ ಅತಿಥಿಗಳಾಗಿ ವಿನೋದ್ ಪ್ರಭಾಕರ್, ನಿರಂಜನ್ ಸುಧೀಂದ್ರ ಹಾಗೂ ಮಂಜು ಪಾವಗಡ ಆಗಮಿಸಿದ್ದರು. ನಟ ಶಶಿಕುಮಾರ್ “ಖೆಯೊಸ್” ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಯಜಮಾನ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದರು. ನಟ ವಿನೋದ್ ಪ್ರಭಾಕರ್ ಚಿತ್ರತಂಡವನ್ನು ಅಭಿನಂದಿಸುವ ಮೂಲಕ ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿದರು.
ಗಾಯಕ ಶಶಾಂಕ್ ಶೇಷಗಿರಿ, ಸಂಗೀತ ನಿರ್ದೇಶಕ ವಿಜಯ್ ಹರಿತ್ಸ, ನಟರಾದ ಶಿವಾನಂದ್, ಆರ್.ಕೆ. ಚಂದನ್, ಡಾ.ಸುಮಿತ್ ತಲ್ವಾರ್, ನಟಿ ಗಗನ, ಛಾಯಾಗ್ರಾಹಕ ಸಂದೀಪ್ ವಲ್ಲೂರಿ ಮುಂತಾದವರು ಚಿತ್ರದ ಕುರಿತಂತೆ ಮಾತನಾಡಿದರು.
ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ನಿರ್ಮಾಪಕಿ ಪಾರೂಲ್ ಅಗರ್‌ವಾಲ್ ಚಿತ್ರದ ಆಶಯಗಳನ್ನು ವಿವರಿಸಿದರೆ, ನಿರ್ದೇಶಕ ಜಿ.ವಿ.ಪ್ರಸಾದ್ ಅವರು ಚಿತ್ರದ ಶೀರ್ಷಿಕೆ ಮತ್ತು ಅದನ್ನು ಚಿತ್ರದಲ್ಲಿ ಬಳಸಿಕೊಂಡಿರುವುದರ ಬಗ್ಗೆ ಹೇಳಿದರು.
ನಾಯಕ ಅಕ್ಷಿತ್ ಶಶಿಕುಮಾರ್ ಮಾತನಾಡಿ ಚಿತ್ರಕ್ಕೆ ಪ್ರತಿಯೊಬ್ಬರು ನೀಡಿದ ಸಹಕಾರವನ್ನು ನೆನೆಯುತ್ತಾ, ಇದು ನನ್ನ ಎರಡನೇ ಚಿತ್ರ. ದಯವಿಟ್ಟು ಎಲ್ಲರೂ ಪ್ರೋತ್ಸಾಹಿಸಿ ಎಂದರಲ್ಲದೆ ನಾನು ಅಪ್ಪನ ನೆರಳಿನಲ್ಲಿ ಅರಳಿದರೂ ಬೆಳೆಯಲು ಬೇರೆ ಆಶ್ರಯ ಬೇಕಾಗುತ್ತದೆ. ಈ ವಿಷಯದಲ್ಲಿ ಸ್ನೇಹಿತರು ಅತ್ಯಂತ ಸಹಕಾರ ನೀಡುತ್ತಿದ್ದಾರೆ ಎಂದರು.