ಮುಂಗಾರು ಮಳೆ ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾ. ಆ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿದ ನಾಯಕಿ ಪೂಜಾಗಾಂಧಿ. ನೋಡ ನೋಡುತ್ತಿದ್ದಂತೆಯೇ ಪೂಜಾಗಾಂಧಿ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪ್ಪಟ ಕನ್ನಡದ ಹುಡುಗಿಯಾಗಿ ಗಮನ ಸೆಳೆದರು. ಒಂದಷ್ಟು ಸಿನಿಮಾಗಳ ಬಳಿಕ ಪೂಜಾಗಾಂಧಿ ನಟನೆಗೆ ಬ್ರೇಕ್ ಕೊಟ್ಟಿದ್ದು ನಿಜ.
ನಂತರ, ಪೂಜಾಗಾಂಧಿ ಎಲ್ಲೋ ಕಳೆದು ಹೋದರು ಅಂದುಕೊಳ್ಳುತ್ತಿದ್ದಂತೆಯೇ, ಮಳೆ ಹುಡುಗಿ ಪೂಜಾಗಾಂಧಿ, ನಾನಿಲ್ಲೇ ಇದ್ದೇನೆ. ಈಗ ಕನ್ನಡವನ್ನು ಸ್ಪಷ್ಟವಾಗಿ ಓದಲು, ಬರೆಯಲು ಕಲಿತಿದ್ದೇನೆ ಅಂತ ಹೇಳಿ ನಾನೂ ಕೂಡ ಈಗ ಕನ್ನಡತಿಯೇ ಅಂತ ಬೀಗಿದ್ದರು. ಅವರ ಕನ್ನಡ ಪ್ರೀತಿಗೆ ಬಹಳಷ್ಟು ಕನ್ನಡಿಗರು ಮೆಚ್ಚಿ ಜೈ ಪೂಜಾ ಅಂದಿದ್ದರು.
ಈಗ ಪೂಜಾಗಾಂಧಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮತ್ತಷ್ಟು ಕನ್ನಡಿಗರಿಗೆ ಇಷ್ಟವಾಗಿದ್ದಾರೆ. ಅದಕ್ಕೆ ಕಾರಣ, ಅವರು ಕನ್ನಡ ಹಾಡೊಂದನ್ನು ಹಾಡಿರುವುದು.
ಹೌದು, ಪೂಜಾಗಾಂಧಿ ಕನ್ನಡ ಓದುವುದು, ಬರೆಯುವುದಷ್ಟೇ ಅಲ್ಲ, ನಾನು ಕೂಡ ಹಾಡ್ತೀನಿ ಅಂತ ಹಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಅಂದಹಾಗೆ, ಪೂಜಾಗಾಂಧಿ ಧ್ವನಿಯಾಗಿರೋದು ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಚಿ.ಉದಯಶಂಕರ್ ಬರೆದಿರುವ ಡಾ.ರಾಜಕುಮಾರ್ ಅವರು ಹಾಡಿರುವ ‘ಜೇನಿನ ಹೊಳೆಯೋ’ ಹಾಡನ್ನು ಪೂಜಾಗಾಂಧಿ, ಅನ್ ಪ್ಲಗ್ಗಡ್ ವರ್ಷನ್ ಆಫ್ ಜೇನಿನ ಹೊಳೆಯೋ’ ಹಾಡು ಹಾಡಿದ್ದಾರೆ.
ಅರ್ಜುನ್ ಜನ್ಯ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಈ ಹಾಡು ಹಾಡಿರುವ ಪೂಜಾಗಾಂಧಿ ತಮ್ಮ ಕಂಠದ ಮೂಲಕ ಮಾಧುರ್ಯವಾಗಿ ಹಾಡುವ ಪ್ರಯತ್ನ ಮಾಡಿದ್ದಾರೆ.
ಅವರು ಹಾಡಿಗೆ ಚಂದನ್ ಗೌಡ ಕ್ಯಾಮೆರಾ ಹಿಡಿದರೆ, ಕಿರಣ್ ಗೌಡ ಸಂಕಲನ ಮಾಡಿದ್ದಾರೆ.