ಕನ್ನಡದಲ್ಲೀಗ ಹೊಸ ಬಗೆಯ ಅದರಲ್ಲೂ ನಿರೀಕ್ಷೆ ಹೆಚ್ಚಿಸುವ ಸಿನಿಮಾಗಳದ್ದೇ ಸುದ್ದಿ. ಕನ್ನಡ ಚಿತ್ರರಂಗ ಈಗ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಬೆಳೆದು ನಿಂತಿದೆ. ಇಲ್ಲಿ ತರಹೇವಾರಿ ಸಿನಿಮಾಗಳು ಬರುತ್ತಲೇ ಇವೆ. ಆ ಸಾಲಿಗೆ ‘ಸೌತ್ ಇಂಡಿಯನ್ ಹೀರೋ’ ಸಿನಿಮಾ ಕೂಡ ಸೇರಿದೆ. ಹೌದು, ಈ ಸಿನಿಮಾ ಸದ್ಯ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ ನಿರ್ದೇಶಕ ನರೇಶ್ ಕುಮಾರ್ ಎಚ್.ಎನ್.ಹೊಸಳ್ಳಿ. ಆ ನಿರೀಕ್ಷೆಗೆ ಕಾರಣ, ಈ ಹಿಂದೆ “ಫಸ್ಟ್ ರ‍್ಯಾಂಕ್ ರಾಜು’, ‘ರಾಜು ಕನ್ನಡ ಮೀಡಿಯಂ’ ನಂಥ ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದ್ದ ನರೇಶ್‌ಕುಮಾರ್ ಹೆಚ್.ಎನ್. ಹೊಸಳ್ಳಿ ಈ “ಸೌತ್ ಇಂಡಿಯನ್ ಹೀರೋ’ನನ್ನು ಕರೆತರಲು ಅಣಿಯಾಗಿದ್ದಾರೆ. ಫೆಬ್ರವರಿ 24ಕ್ಕೆ ರಾಜ್ಯಾದ್ಯಂತ ಸೌತ್ ಇಂಡಿಯನ್ ಹೀರೋನ ಹವಾ ಶುರುವಾಗಲಿದೆ.
ಅಂದಹಾಗೆ, ಈ ಬಾರಿ ನರೇಶ್ ಕುಮಾರ್ ಅವರು,
ನಿರ್ದೇಶನದ ಜೊತೆ ಅವರ ಪತ್ನಿ ಶಿಲ್ಪಾ ಅವರ ಜೊತೆ ಸೇರಿ ಚಿತ್ರ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಕಿರುತೆರೆ ನಟ ಸಾರ್ಥಕ್ ಹೀರೋ. ಅವರಿಗೆ ಕಾಶಿಮಾ ಹಾಗೂ ಮುಂಬೈ ಮೂಲದ ಊರ್ವಶಿ ನಾಯಕಿಯರು.
ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಸಾಕಷ್ಟು ಜೋರು ಸುದ್ದಿಯಾಗಿದೆ.
ತಮ್ಮ ನಿರ್ಮಾಣ ಹಾಗೂ ನಿರ್ದೇಶನದ ‘ಸೌತ್ ಇಂಡಿಯನ್ ಹೀರೋ’ ಚಿತ್ರದ ಬಗ್ಗೆ ನರೇಶ್ ಕುಮಾರ್ ಅವರಿಗೆ ಸಾಕಷ್ಟು ಭರವಸೆ ಇದೆ. ಆ ಕುರಿತು ಅವರು ಹೇಳುವುದಿಷ್ಟು.
ಇದು ನನ್ನ ನಿರ್ದೇಶನದ 4ನೇ ಚಿತ್ರ. ಪ್ರಾಮಾಣಿಕ ಪ್ರಯತ್ನ ಮೂಲಕ ಈ ಸಿನಿಮಾ ಕಟ್ಟಿದ್ದೇವೆ. ಇಲ್ಲಿ ನಾಯಕ ಭೌತಶಾಸ್ತ್ರದ ಶಿಕ್ಷಕ ಲಾಜಿಕ್ ಲಕ್ಷ್ಮಣರಾವ್. ಚಿತ್ರರಂಗದ ಯಾವುದೇ ಸಂಪರ್ಕವಿಲ್ಲದ ಆತ ಹೇಗೆ ಚಿತ್ರರಂಗಕ್ಕೆ ಬರುತ್ತಾನೆ, ಬಂದಾಗ ಏನೆಲ್ಲ ಸಂಕಷ್ಟಕ್ಕೆ ಸಿಲುಕುತ್ತಾನೆ. ಆಮೇಲೆ ಅದರಿಂದ ಹೊರ ಬರುತ್ತಾನಾ ಇಲ್ಲವಾ ಅನ್ನೋದು ಸಾರಾಂಶ.
ಇಲ್ಲಿ ಹೀರೋಗೆ ಮೂರು ಶೇಡ್ ಇವೆ. ಹಳ್ಳಿ ಬ್ಯಾಕ್‌ಡ್ರಾಪ್, ಸಿಟಿ ಹಿನ್ನೆಲೆ ಕೂಡ ಇಲ್ಲಿದೆ. ಈ ಎರಡರ ನಡುವೆ ವಿಶೇಷ ಗುಣ ಇರುವ ಪಾತ್ರವೂ ಇದೆ. ಇಮೇಜ್ ಇಲ್ಲದ ಒಬ್ಬ ಯುವಕ ಮುಂದೆ ದೊಡ್ಡ ನಾಯಕನಾಗಿ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಅಂತ ತೋರಿಸುವ ಪ್ರಯತ್ನ ಇಲ್ಲಿದೆ ಎನ್ನುತ್ತಾರೆ ನರೇಶ್ ಕುಮಾರ್.
ಇನ್ನು, ಹೀರೋ ಸಾರ್ಥಕ್ ‘ಅವನು ಮತ್ತು ಶ್ರಾವಣಿ’ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವರು ಹೇಳುವಂತೆ, ‘ ಇದೊಂದು ವಿಭಿನ್ನ ಪಾತ್ರ. ಒಬ್ಬ ಸ್ಟಾರ್ ನಟನ ಪರ್ಸನಲ್ ಲೈಫ್ ಹೇಗಿರುತ್ತೆ, ಎಲ್ಲಾ ವಿಷಯಗಳನ್ನು ಲಾಜಿಕ್‌ನಲ್ಲಿ ನೋಡುವ ಅವನು ಸಿನಿಮಾಗೆ ಬಂದಾಗ ಏನಾಗುತ್ತದೆ ಎನ್ನುವುದು ಕಥೆಯ ತಿರುಳು ಅನ್ನುತ್ತಾರೆ ಅವರು.
ನಾಯಕಿ ಕಾಶಿಮಾ ಅವರಿಗೆ ಇಲ್ಲಿ ಹಳ್ಳಿ ಶಿಕ್ಷಕಿ ಪಾತ್ರವಂತೆ. ಮಾನಸಿ ಎಂಬ ಪಾತ್ರ ಮಾಡುತಗತಿರುವ ಅವರು, ಉತ್ತರ ಕರ್ನಾಟಕ ಭಾಷೆ ಮಾತಾಡಿದ್ದಾರಂತೆ.
ಇನ್ನು ಚಿತ್ರಕ್ಕೆ ಶಿಲ್ಪಾ ನಿರ್ಮಾಪಕಿ. ಅವರು, ‘ ಮನರಂಜನೆ ಉದ್ದೇಶ ಇಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡಿದ್ದಾರಂತೆ.
ಚಿತ್ರದಲ್ಲಿ ನಿರ್ದೇಶಕರಾಗಿ ವಿಜಯ್ ಚೆಂಡೂರು ನಟಿಸಿದ್ದರೆ, ಅಮಿತ್, ಅಶ್ವಿನ್ ಕೊಡಂಗಿ, ಅಶ್ವಿನ್‌ರಾವ್ ಪಲ್ಲಕ್ಕಿ ಇತರರು ಕೂಡ ಚಿತ್ರದ ಭಾಗವಾಗಿದ್ದಾರೆ.
ಸಂಗೀತ ನಿರ್ದೇಶಕ ಹರ್ಷವರ್ಧನ್ ಸಿನಿಮಾಗೆ 5 ಹಾಡುಗಳನ್ನು ಕೊಟ್ಟಿದ್ದಾರಂತೆ. ಇನ್ನು ಘಮ ಘಮ ಎಂಬ ಉತ್ತರ ಕರ್ನಾಟಕ ಶೈಲಿಯ ಹಾಡು ಸೊಗಸಾಗಿದೆಯಂತೆ.
ರಾಜಶೇಖರ್ ಹಾಗೂ ಪ್ರವೀಣ್ ಎಸ್. ಅವರ ಕ್ಯಾಮೆರಾ ಕೈಚಳಕವಿದೆ. ನರೇಶಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.