Categories
ಸಿನಿ ಸುದ್ದಿ

ಫೈಟರ್ ಸಿನಿಮಾದ ಹಾಡು ಹೊರ ಬಂತು : ಅಕ್ಟೋಬರ್ ಗೆ ವಿನೋದ್ ಪ್ರಭಾಕರ್ ನಟನೆಯ ಚಿತ್ರ ರಿಲೀಸ್

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ, ನೂತನ್ ಉಮೇಶ್ ನಿರ್ದೇಶನದ ಹಾಗೂ ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿರುವ “ಫೈಟರ್” ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ “ಐ ವಾನ ಫಾಲೋ ಯು” ಎಂಬ ಹಾಡು ಬಿಡುಗಡೆಯಾಗಿದೆ. ಗುರುಕಿರಣ್ ಸಂಗೀತ ನೀಡಿರುವ ಈ ಹಾಡನ್ನು ಚೈತ್ರ ಹೆಚ್. ಜಿ ಹಾಡಿದ್ದಾರೆ.

ಗುರುರಂಜನ್ ಶೆಟ್ಟಿ(ನಟಿ ಅನುಷ್ಕಾ ಶೆಟ್ಟಿ ಸಹೋದರ), ನಾಗರಾಜ್, ಕೃಷ್ಣಪ್ಪ , ಗೌರೀಶ್ ಹಾಗೂ ಹಿರಿಯ ಪತ್ರಕರ್ತರಾದ ಕೆ.ಎಸ್ ವಾಸು, ಕೆ.ಎನ್.ನಾಗೇಶ್ ಕುಮಾರ್ ಮುಂತಾದ ಗಣ್ಯರು “ಐ ವಾನ ಫಾಲೋ ಯು” ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಹಾಡಿನ ಮೊದಲ ಪದ “ಐ ವಾನ ಫಾಲೋ” ಎಂಬುದನ್ನು ನಿರ್ದೇಶಕರು ಹೇಳಿದಾಗ “ಫಾಲೋ” ಎಂಬ ಪದದಿಂದಲೇ ಈ ಹಾಡು ಆರಂಭವಾಯಿತು. ವಿಶೇಷವೆಂದರೆ, ಈ ಹಾಡಿನಲ್ಲಿ ಬರುವ ಪದಗಳಿಗೆ ಎರಡು ಅರ್ಥಗಳಿದೆ. ಕವಿರಾಜ್ ಅದ್ಭುತವಾಗಿ ಹಾಡು ಬರೆದಿದ್ದಾರೆ. ಚೈತ್ರ ಸೊಗಸಾಗಿ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹಾಡಿನ ಬಗ್ಗೆ ಮಾಹಿತಿ ನೀಡಿದರು.

ಈ ಹಾಡನ್ನು ಪಾಂಡಿಚೆರಿಯಲ್ಲಿ ಚಿತ್ರಿಸಲಾಗಿದೆ. ಗುರುಕಿರಣ್ ಅವರ ಸಂಗೀತ, ಕವಿರಾಜ್ ಅವರ ಸಾಹಿತ್ಯ, ಮೋಹನ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಪ್ರಭಾಕರ್, ಲೇಖಾ ಚಂದ್ರ ಅವರ ಅಭಿನಯ ಎಲ್ಲವೂ ಸೇರಿ ಈ “ಫಾಲೋ ಯು” ಹಾಡು ಅದ್ಭುತವಾಗಿ ಹಾಗೂ ಅದ್ದೂರಿಯಾಗಿ ಮೂಡಿಬಂದಿದೆ. ಸದ್ಯದಲ್ಲೇ ಟ್ರೇಲರ್ ಬರಲಿದ್ದು, ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ದೇಶಕ ನೂತನ್ ಉಮೇಶ್.

ಚಿತ್ರದ ಮುಹೂರ್ತಕ್ಕೆ ಬಂದು ಹಾರೈಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನೆಯುತ್ತಾ ಮಾತು ಆರಂಭಿಸಿದ ನಾಯಕ ವಿನೋದ್ ಪ್ರಭಾಕರ್, ಈ “ಫೈಟರ್” ಅನ್ಯಾಯದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಡುವ “ಫೈಟರ್”. ನಿರ್ಮಾಪಕ ಸೋಮಶೇಖರ್ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಅಷ್ಟೇ ಚೆನ್ನಾಗಿ ಕಥೆ ,ಚಿತ್ರಕಥೆ ಬರೆದಿದ್ದಾರೆ. ಇಂದು ಬಿಡುಗಡೆಯಾದ ಹಾಡಿನ ಚಿತ್ರೀಕರಣ ಮಾರ್ಚ್ ನಲ್ಲಿ ಪಾಂಡಿಚೆರಿಯಲ್ಲಿ ಚಿತ್ರೀಕರಣವಾಗಿದ್ದು, ಅಲ್ಲಿನ ಬಿಸಿಲು ತಡೆಯುವುದು ಕಷ್ಟ. ಎಲ್ಲರ ಶ್ರಮದಿಂದ ಈ ಹಾಡು ಚೆನ್ನಾಗಿ ಬಂದಿದೆ. ನಿರ್ಮಾಪಕ ಸೋಮಶೇಖರ್ ಅವರಿಗೆ ಈ ಚಿತ್ರ ದೊಡ್ಡ ಯಶಸ್ಸು ತಂದು ಕೊಡಲಿ. ಅವರಿಂದ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿ ಎಂದು ಹಾರೈಸಿದರು.

ಇಡೀ ಚಿತ್ರತಂಡದ ಶ್ರಮದಿಂದ ” ಫೈಟರ್ ” ಚಿತ್ರ ಉತ್ತಮವಾಗಿ ಮೂಡಿಬಂದಿದೆ. ‌ಇಂದು ಹಾಡು ಬಿಡುಗಡೆಯಾಗಿದೆ. ಚಿತ್ರತಂಡಕ್ಕೆ ಹಾಗೂ ಆಗಮಿಸಿರುವ ಗಣ್ಯರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ.

ಹಾಡು ಬರೆದಿರುವ ಕವಿರಾಜ್, ಹಾಡಿರುವ ಚೈತ್ರ ಹಾಗೂ ನಾಯಕಿ ಲೇಖಾ ಚಂದ್ರ ” ಫಾಲೋ ಯು” ಹಾಡಿನ ಬಗ್ಗೆ ಮಾತನಾಡಿದರು.

Categories
ಸಿನಿ ಸುದ್ದಿ

ಲವ್ಲಿ ಡಾಟರ್ ಈಗ ಸೂರ್ಯಕಾಂತಿ! ಟಗರು ಪಲ್ಯ ಸಿನಿಮಾದ ಎರಡನೇ ಹಾಡು ರಿಲೀಸ್

ಡಾಲಿ ಧನಂಜಯ್ ನಟನೆಯಲ್ಲಿ ಮಾತ್ರವಲ್ಲ, ನಿರ್ಮಾಣದಲ್ಲೂ ಪ್ರಯೋಗಾತ್ಮಕ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶದೊಂದಿಗೆ ಅವರು ‘ಡಾಲಿ ಪಿಕ್ಚರ್ಸ್​’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂರನೇ ಪ್ರಯತ್ನವೇ ‘ಟಗರು ಪಲ್ಯ’. ಸೆಟ್ಟೇರಿದ ದಿನದಿಂದಲೂ ಭಾರೀ ಸದ್ದು ಮಾಡುತ್ತಿರುವ ಟಗರು ಪಲ್ಯ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.

ಈಗಾಗಲೇ ರಿಲೀಸ್ ಆಗಿರುವ ಟೈಟಲ್ ಟ್ರ್ಯಾಕ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಚಿತ್ರತಂಡ ಸೂರ್ಯಕಾಂತಿ ನಾನು ಎಂಬ ಮೆಲೋಡಿ ಹಾಡನ್ನು ಅನಾವರಣ ಮಾಡಿದೆ. ಸ್ವತಃ ಧನಂಜಯ್ ಅವರೇ ಕ್ಯಾಚಿ‌ ಮ್ಯಾಚಿ ಪದಗಳನ್ನು ಪೋಣಿಸಿ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಹಳ್ಳಿ ಸೊಗಡಿನ ಕಂಪು ಹೊಂದಿರುವ ಈ ಮೆಲೋಡಿ ಹಾಡಿಗೆ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹೆಜ್ಜೆ ಹಾಕಿದ್ದಾರೆ.

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ‘ಟಗರು ಪಲ್ಯ’ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಅನೇಕ ಹೊಸಬರಿಗೆ ಅವಕಾಶ ಸಿಕ್ಕಿದೆ. ಈ ಸಿನಿಮಾ ಮೂಲಕ ನಟಿಯಾಗಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು, ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿರುವ ನಾಗಭೂಷಣ್ ಟಗರು ಪಲ್ಯದ ನಾಯಕ.

‘ಟಗರು ಪಲ್ಯ’ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು ಕೂತೂಹಲ ದುಪ್ಪಟ್ಟಾಗಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಚಿತ್ರಕ್ಕೆ ಸಾಥ್ ಕೊಟ್ಟಿದೆ. ಹಾಗೇ ವಾಸುಕಿ ವೈಭವ್ ಸಂಗೀತವಿದೆ ಇನ್ನು ಎಸ್.ಕೆ.ರಾವ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಪ್ರಚಾರ ಕಾರ್ಯ ಆರಂಭಿಸಿರುವ ಟಗರು ಪಲ್ಯ ತಂಡ ಇದೇ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ.

Categories
ಸಿನಿ ಸುದ್ದಿ

ಪ್ರೇಮಗೀತೆ ಹಾಡಿದ ಸಪ್ಲೈಯರ್ ಶಂಕರ!

ತ್ರಿನೇತ್ರ ಫಿಲಂಸ್ ಬ್ಯಾನರ್ ನಲ್ಲಿ ಎಂ. ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ “ಸಪ್ಲೈಯರ್ ಶಂಕರ” ಚಿತ್ರದ ಎರಡನೇ ಹಾಡು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಪ್ರಮೋದ್ ಮರವಂತೆ ಬರೆದಿರುವ “ಮಾಡೊ ಕೆಲಸವ ನೀನು ಮರೆಸಿದೆ” ಎಂಬ ಈ ಪ್ರೇಮಗೀತೆ ನಕುಲ್ ಅಭಯಂಕರ್ ಹಾಗೂ ಐಶ್ವರ್ಯ ರಂಗರಾಜನ್ ಅವರ ಕಂಠದಲ್ಲಿ ಸುಮಧುರವಾಗಿ ಮೂಡಿ ಬಂದಿದ್ದು, ಆರ್ ಬಿ ಭರತ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆಯಾದ ತಕ್ಷಣದಿಂದಲೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

“ಸಪ್ಲೈಯರ್ ಶಂಕರ” ಬಾರ್ ಸಪ್ಲೈಯರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ. “ಗಂಟು ಮೂಟೆ” ಮತ್ತು “ಟಾಮ್ & ಜೆರ್ರಿ” ಚಿತ್ರಗಳ ಮೂಲಕ ಜನಪ್ರಿರಾಗಿರುವ ನಿಶ್ಚಿತ್ ಕರೋಡಿ ಈ ಚಿತ್ರದಲ್ಲಿ “ಸಪ್ಲೈಯರ್ ಶಂಕರ” ನಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿರ್ದೇಶಕ ರಂಜಿತ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಲವ್, ಕಾಮಿಡಿ, ತಾಯಿ-ಮಗನ ಸೆಂಟಿಮೆಂಟ್, ಬಾರ್ ಸಪ್ಲೇಯರ್ ಜೀವನದ ಜೊತೆಗೆ ಸಸ್ಪೆನ್ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ.
ಸತೀಶ್ ಕುಮಾರ್ ಛಾಯಾಗ್ರಹಣ , ಸತೀಶ್ ಚಂದ್ರಯ್ಯ ಅವರ ಸಂಕಲನ ಹಾಗೂ ಬಾಲಾಜಿ ಅವರ ಕಲಾ ನಿರ್ದೇಶನ “ಸಪ್ಲೇಯರ್ ಶಂಕರ” ಚಿತ್ರಕ್ಕಿದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ “ಸಪ್ಲೈಯರ್ ಶಂಕರ”, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದಾನೆ. ಈ ವರ್ಷದ ಕೊನೆಗೆ ತೆರೆಯ ಮೇಲೆ ರಾರಾಜಿಸಲಿದ್ದಾನೆ.

Categories
ಸಿನಿ ಸುದ್ದಿ

ಸಾಯಿರ ಬಾನು, ಮೋಹನ್ ಕುಮಾರ್ ಬದುಕು ಬವಣೆ ! 13 ಎಂಬ ಹಿಂದೂ ಮುಸ್ಲಿಂ ಸತಿ ಪತಿಯ ಭಾವೈಕ್ಯತೆ ಚಿತ್ರ

ಭಾವೈಕ್ಯತೆಯ ಕಥೆಯ ಜೊತೆಗೆ 13 ಕೋಟಿ ಹಣದ ಸುತ್ತ ನಡೆಯುವ ಕುತೂಹಲಕರ ಕಥೆಯನ್ನು ಹೇಳುವ ಚಿತ್ರ 13 ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಹಿರಿಯನಟ ರಾಘವೇದ್ರ ರಾಜ್‌ಕುಮಾರ್ ಅವರು ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಹಾಗೂ ಹಿರಿಯ ಕಲಾವಿದೆ ಶೃತಿ ಅವರು ಸಾಯಿರಾಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಶೆಟ್ಟಿ ಇಲ್ಲಿ ‌ಪೋಲೀಸ್ ಪಾತ್ರ ನಿರ್ವಹಿಸಿದ್ದಾರೆ.

ಪಲ್ಲಕ್ಕಿ ಖ್ಯಾತಿಯ ನರೇಂದ್ರಬಾಬು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಾನು ಹಿಂದೂ ನೀನು ಮುಸ್ಲಿಂ ಎನ್ನುವ ಭೇದ ಭಾವ ಇಲ್ಲದೆ ನಾಯಕ, ನಾಯಕಿ ಇಬ್ಬರೂ ಸತಿ ಪತಿಗಳಾಗಿ ಅನ್ಯೋನ್ಯ ಜೀವನ ನಡೆಸುತ್ತಿರುವಾಗ ನಡೆಯುವ ಒಂದು ಘಟನೆ ಇವರಿಬ್ಬರ ಜೀವನದಲ್ಲಿ ಹಲವಾರು ತಿರುವುಗಳಿಗೆ ಕಾರಣವಾಗುತ್ತದೆ.

ಅದು ಕೊನೆಗೆ ಅವರನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳುವುದೇ ಚಿತ್ರದ ಕಥೆ. ಹಾಡುಗಳು, ಟ್ರೈಲರ್ ಈಗಾಗಲೇ ವೈರಲ್ ಅಗಿದ್ದು ನೋಡಿದವರೆಲ್ಲ ಇಷ್ಟಪಟ್ಟಿದ್ದಾರೆ.

ಐಟಂ ಸಾಂಗ್, ಡ್ರಿಂಕ್ಸ್ ಸೀನ್ ಇರೋದ್ರಿಂದ ಯಾವುದೇ ಕಟ್ ಇಲ್ಲದೆ ಚಿತ್ರಕ್ಕೆ ಯು/ಎ ಸಿಕ್ಕಿದೆ.
ಸಂಗೀತ ನಿರ್ದೇಶಕ ಶೋಗನ್‌ ಬಾಬು ಅವರು ಮೂರು ಸುಂದರವಾದ ಹಾಡುಗಳನ್ನು ಮಾಡಿ ಕೊಟ್ಟಿದ್ದಾರೆ. ಅಜಯ್ ಮಂಜು ಅವರ ಕ್ಯಾಮೆರಾ ವರ್ಕ್, ಗಿರೀಶ್ ಕುಮಾರ್ ಅವರ ಸಂಕಲನ, ಮದನ್ ಹರಿಣಿ, ಸಶಿಕುಮಾರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ಜಯಸಿಂಹ ಸಂಭಾಷಣೆ ಇದೆ.

ಅನಿಲ್ ಕುಮಾರ್ ಅರ್ಪಿಸುವ ಈ ಚಿತ್ರವನ್ನು, ಯುವಿ ಪ್ರೊಡಕ್ಷನ್ಸ್ ಮೂಲಕ ಕೆ.ಸಂಪತ್ ಕುಮಾರ್, ಮಂಜುನಾಥ್ ಗೌಡ, ಹೆಚ್.ಎಸ್. ಮಂಜುನಾಥ್ ಹಾಗೂ ಸಿ.ಕೇಶವಮೂರ್ತಿ ಸೇರಿ ನಿರ್ಮಾಣ ಮಾಡಿದ್ದಾರೆ.

ಕಾಮಿಡಿ ಕಿಲಾಡಿಗಳು ಲೋಕೇಶ್, ದಿಲೀಪ್ ಪೈ, ವಿನಯ ಸೂರ್ಯ ಮುಂತಾದವರು ಚಿತ್ರದ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಜಾಕ್ ಮಂಜು ಅವರ ಶಾಲಿನಿ ಎಂಟರ್ ಪ್ರೈಸಸ್ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದೆ.

Categories
ಸಿನಿ ಸುದ್ದಿ

ರೀಲ್ ಅಲ್ಲ, ರಿಯಲ್ ನಲ್ಲೂ ಹೀರೋನೇ! ರಕ್ತಾಕ್ಷ ನಾಯಕನ ಜನಸೇವೆ ಇದು

ರೀಲ್ ಅಲ್ಲ, ರಿಯಲ್ ನಲ್ಲೂ ಇವರು ಹೀರೋನೇ. ಹೌದು, ರಕ್ತಾಕ್ಷ ಸಿನಿಮಾ ನಾಯಕ ರೋಹಿತ್ ಅವರು, ಉತ್ತರ ಕರ್ನಾಟಕ ಭಾಗದ ಅನಾಥಶ್ರಮಗಳಿಗೆ ಹಾಗೂ ಸಮಾಜದ ವಿವಿಧ ವರ್ಗಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.

ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಹಾಗೂ ನಿರ್ಮಾಪಕನಾಗಿ ಮೊದಲ ಹೆಜ್ಜೆ ಇಟ್ಟಿರುವ ರೋಹಿತ್ ಸಾಮಾಜಿಕ ಕೆಲಸಕ್ಕಿಳಿದ್ದಾರೆ. ಆಗಸ್ಟ್ 15ರಂದು ರೋಹಿತ್ ತಮ್ಮ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಗದವರೇ ಆದ ರೋಹಿತ್ ಮಸ್ಕಿ, ಲಿಂಗಸಗೂರು, ಸಿಂಧನೂರು ಜನತೆಯೊಂದಿಗೆ ಜನ್ಮದಿನ ಆಚರಿಸಿಕೊಳ್ಳುವುದರ ಜೊತೆಗೆ ಅಲ್ಲಿನ ವಿವಿಧ ವರ್ಗದ ಜನರಿಗೆ ಕೈಲಾದ ಸಹಾಯ ಮಾಡುವುದರ ಜೊತೆಗೆ ಅದೇ ಭಾಗದ ಅನಾಥಶ್ರಮಗಳಿಗೆ ಆಹಾರ ಧಾನ್ಯ ಹಾಗೂ ಪುಸ್ತಕಗಳನ್ನು ವಿತರಣೆ ಮಾಡಿದ್ದಾರೆ.

ಅಂದಹಾಗೆ, ರೋಹಿತ್ ಇದೇ‌ ಮೊದಲ ಬಾರಿಗೆ ಸಾಮಾಜಿಕ ಸೇವೆಗಿಳಿದಿಲ್ಲ. ಹೀರೋ ಆಗಿ ಹೊಸ ಪಯಣ ಆರಂಭಿಸುವುದಕ್ಕೂ ಮುನ್ನ ಅಂದರೆ 2014ರಿಂದಲೂ ಜನೋಪಕಾರಿ ಕೆಲಸ ಮಾಡುತ್ತಿದ್ದು ಅಕ್ಷಯಪಾತ್ರಾ, ಅದಮ್ಯಚೇತನ, ಯೂನಿಸೆಫ್ ಗೆ ಡೋನರ್ ಕೂಡ. ಹೀರೋ ಆದ ಮೇಲೆಯೂ ಜನೋಪಕಾರಿ ಕೆಲಸಗಳನ್ನು ಮುಂದುರೆಸಿಕೊಂಡು ಬರುತ್ತಿದ್ದಾರೆ.

ಉತ್ತರ ಕರ್ನಾಟಕದ ಮಸ್ಕಿ ಊರಿನಲ್ಲಿರುವ ಅನಾಥಶ್ರಮಕ್ಕೆ ಅಪ್ಪು ಅವರ ಹೆಸರಿನಲ್ಲಿ ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ಆಹಾರ ಧಾನ್ಯ ಹಾಗೂ ಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದೀಗ ತಮ್ಮದೇ ಸಾಯಿ ಪ್ರೊಡಕ್ಷನ್ ನಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಕೆಲಸ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ರೋಹಿತ್‌ ಮಾಡೆಲ್‌ ಆಗಿ ಗುರುತಿಸಿಕೊಂಡವರು. ಮೂಲತಃ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಪುಟ್ಟ ಹಳ್ಳಿಯ ರೋಹಿತ್, ಸುಮಾರು 6 ವರ್ಷಗಳ ಕಾಲ ಮಾಡೆಲಿಂಗ್ ಸಾಮ್ರಾಜ್ಯದಲ್ಲಿ ಮಿಂಚಿದವರು. ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿರುವ ಅವರು ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಒಂದಷ್ಟು ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್‌ಗೆ, ರಿಲೀಸ್ ಗೆ ರೆಡಿ ಇರುವ ಇನ್ನೊಂದು ದ್ವಿಭಾಷಿಯ ಸಿನಿಮಾದಲ್ಲಿ ಖಳ ನಾಯಕನಾಗಿ ಅಭಿನಯಿಸಿದ ಅನುಭವಿದೆ. ನಾಯಕನಾಗಿ ಬೆಳ್ಳಿ ಪರದೆಯಲ್ಲಿ ರಾರಾಜಿಸಬೇಕೆಂಬ ಹೊಸ ಉತ್ಸಹ ಹಾಗೂ ಹುಮ್ಮಸ್ಸಿನೊಂದಿಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ಅಡಿ ರಕ್ತಾಕ್ಷ ಚಿತ್ರ ನಿರ್ಮಾಣ ಮಾಡಿ ನಟಿಸುತ್ತಿದ್ದಾರೆ.

ವಾಸುದೇವ್ ಎಸ್ ಎನ್ ರಕ್ತಾಕ್ಷ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ರೋಹಿತ್ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸೇರಿ ‘ರಕ್ತಾಕ್ಷ’ ಸಿನಿಮಾಗೆ ದುಡಿದಿದ್ದಾರೆ. ಆದರ್ಶ್ ಶಿರಾಸ್, ಆರ್ ಜೆ ಛಾಯಾಗ್ರಹಣ ಮಾಡಿದ್ದು , ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್ ಸಂಗೀತ ನೀಡಿದ್ದಾರೆ.

ರೂಪ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಪ್ರಭು, ವಿಶ್ವ, ನಾರಾಯಣ, ಭದ್ರಿ, ಶಿವಮೊಗ್ಗ ರಾಮಣ್ಣ, ವಿಲಾಸ್, ಗುರುದೇವ ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದಶೆಟ್ಟಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಜಲಪಾತದಿಂದ ಇಳಿದು ಬಂದ ಹಾಡಿದು! ಮಲೆನಾಡ ಉತ್ಸವದಲ್ಲಿ ಜಯಮಾಲ ರಿಲೀಸ್ ಮಾಡಿದ್ರು ಸಾಂಗ್

ರವೀಂದ್ರ ತುಂಬರಮನೆ ನಿರ್ಮಿಸಿ , ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಚಿತ್ರದ 2 ನೇ ಹಾಡು ಇದೀಗ ಎ – 2 ಮ್ಯೂಸಿಕ್ ವಾಹಿನಿ ಮೂಲಕ ಬಿಡುಗಡೆಯಾಗಿದೆ. ಇತ್ತೀಚೆಗೆ ಚಿತ್ರ ತಂಡ ಆಯೋಜಿಸಿದ್ದ ‘ಜಲಪಾತ ಮಲೆನಾಡು ಉತ್ಸವ’ ಎಂಬ ಸಾಂಸ್ಕೃತಿಕ ಮೇಳದಲ್ಲಿ ನಟಿ ಜಯಮಾಲ ಅವರು ” ಎಲ್ಲಿ ಹೋದನೇ ಸಖಿ ” ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭ ಮಾತಾಡಿದ ಜಯಮಾಲ, ತನ್ನ ಮಲೆನಾಡು ಮೂಲಕ ಚಿಕ್ಕಮಗಳೂರನ್ನು ನೆನಪಿಸಿಕೊಂಡು ಚಿತ್ರದ ನಾಯಕನಟಿ ನಾಗಶ್ರೀಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

ಇಡೀ ಸಿನಿಮಾದ ಆಶಯವೇ ವಿನಾಶದಂಚಿಗೆ ಸರಿದಿರುವ ಪರಿಸರದ ಕುರಿತು ಕಾಳಜಿ ಮೂಡಿಸುವಂಥದ್ದು. ವ್ಯಾವಹಾರಿಕ ಉದ್ದೇಶಗಳಿಲ್ಲದೇ ನಿಜವಾದ ಪ್ರಕೃತಿ ಪ್ರೀತಿಯಿಂದ ನಿರ್ಮಿಸಿದ ಈ ಚಿತ್ರ ಖಂಡಿತಾ ಜನರಮನಸ್ಸು ಗೆಲ್ಲಲಿದೆ ಎಂದರು ಜಯಮಾಲ.

ನಿರ್ಮಾಪಕ ಟಿ ಸಿ ರವೀಂದ್ರ ತುಂಬರಮನೆ ಮಾತನಾಡಿ, ನಾವು ಸಿನಿಮಾದಲ್ಲಿ ಹೆಚ್ಚು ಗ್ರಾಮೀಣ ಪ್ರತಿಭೆಗಳನ್ನೇ ಬಳಸಿಕೊಂಡು ಅವರಿಗೊಂದು ವೇದಿಕೆ ಒದಗಿಸಿದ್ದೇವೆ. ಬಹಳ ಅರ್ಥಪೂರ್ಣವಾದ ಈ ಲವ್ ಸಾಂಗ್ ಅನ್ನು ವನಿತಾ ವೆಂಕಟೇಶ್ ಎಂಬ ಗೃಹಿಣಿ ಬರೆದಿದ್ದಾರೆ ಎಂದರು ನಿರ್ದೇಶಕ ರಮೇಶ್ ಬೇಗಾರ್. ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ ಕೂಡ ಹಾಡುಗಳ ಬಗ್ಗೆ ಮಾತನಾಡಿದರು.

ಎಲ್ಲಿ ಹೋದನೇ ಸಖೀ ಹಾಡನ್ನು ವನಿತಾ ವೆಂಕಟೇಶ್ ಬರೆದಿದ್ದಾರೆ. ಶ್ರೀನಿಧಿ ಶಾಸ್ತ್ರೀ ಇವರೊಂದಿಗೆ ಡ್ಯುಯೆಟ್ ಹಾಡಿದ್ದಾರೆ. ಚಿತ್ರ ಸೆಪ್ಟೆಂಬರ್ 29 ಕ್ಕೆ ತೆರೆ ಕಾಣಲಿದೆ.

Categories
ಸಿನಿ ಸುದ್ದಿ

ಫಿಲ್ಮ್ ಚೇಂಬರ್ ಚುನಾವಣೆಗೆ ಅಖಾಡ ರೆಡಿ: ಗಣೇಶ್, ಪ್ರಮೀಳಾ ಜೋಷಾಯ್ ಜೊತೆ ಜಂಭದ ಹುಡುಗಿ ಸ್ಪರ್ಧೆ

“ಜಂಭದ ಹುಡುಗಿ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಪ್ರಿಯಾ ಹಾಸನ್, ನಂತರದ ದಿನಗಳಲ್ಲಿ ನಿರ್ಮಾಪಕಿ ಹಾಗೂ ನಿರ್ದೇಶಕಿ ಸಹ ಆದರು. ಈಗ ಪ್ರಿಯಾ ಹಾಸನ್ ಹೊಸ ಹೆಜ್ಜೆ ಇಟ್ಟಿದ್ದಾರೆ ಅನ್ನೋದು ವಿಶೇಷ. ಅಂದರೆ ಅವರಿಲ್ಲಿ ಹೊಸ ಸಿನಿಮಾ ಮಾಡುತ್ತಿಲ್ಲ. ಬದಲಾಗಿ ಚುನಾವಣಾ ಕಣಕ್ಕೆ ಜಿಗಿದಿದ್ದಾರೆ.

ಹೌದು, ಸದ್ಯದಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆಯಲಿದ್ದು, ನಿರ್ಮಾಪಕಕರ ವಲಯ ಸಮಿತಿಗೆ ಪ್ರಿಯಾ ಹಾಸನ್ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪ್ರಿಯಾ ಹಾಸನ್ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣೆಗೂ ಮುನ್ನ ಪ್ರಿಯಾ ಹಾಸನ್, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದ ಗಣ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಅಂದಹಾಗೆ, ನಿರ್ಮಾಪಕರ ವಲಯದಿಂದ ಅಧ್ಯಕ್ಷ ಸ್ಥಾನಕ್ಕಾಗಿ ಎ.ಗಣೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮೀಳಾ ಜೋಷಾಯ್ ಹಾಗೂ ನಿರ್ಮಾಪಕರ ವಲಯ ಸಮಿತಿಗೆ ಪ್ರಿಯಾ ಹಾಸನ್ ಸ್ಪರ್ಧಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ರಾವುತಗೆ ಪ್ರಶಸ್ತಿ: ನಿರ್ದೇಶಕ ಸಿದ್ದು ವಜ್ರಪ್ಪಗೆ ಗೌರವ

ಚಿತ್ರ ನಿರ್ದೇಶಕರಾದ ಸಿದ್ದು ವಜ್ರಪ್ಪರಿಗೆ ಉತ್ತಮ ಕಥೆ ಬರಹಗಾರ ಮತ್ತು ಉತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ‌. ಇತ್ತೀಚೆಗೆ ಹಿರಿಯ ನಟ ಡಾ. ಚಿಕ್ಕಹೆಜ್ಜಾಜಿ ಮಹದೇವ್ ನೀಡಿ ಗೌರವಿಸಿದ್ದಾರೆ.

ಚೈತನ್ಯ ಫೌಂಡೇಶನ್ ಕರ್ನಾಟಕ, ಕನಕಪೀಠ ವಿಶ್ವವಿದ್ಯಾಲಯ ಧಾರವಾಡ ವತಿಯಿಂದ ನಡೆದ ಧಾರವಾಡ ನುಡಿ ಸಡಗರ ಚಲನಚಿತ್ರೋತ್ಸವ ಪ್ರಶಸ್ತಿ -2023 ಕಾರ್ಯಕ್ರಮದಲ್ಲಿ ರಾವುತ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ರಾವುತ ಚಿತ್ರಕಥೆ ಗೆ ದೊರಕಿದ ಈ ಪ್ರಶಸ್ತಿಯು ಏಳು ಜನ ಪರಿಶೀಲಕರಿಂದ ದೊರಕಿದ ಪ್ರಶಸ್ತಿ ಆಗಿದೆ. ತಮ್ಮಣ್ಣ ಬಡಿಗೇರ್, ಚಂದ್ರಶೇಖರ ಹನುಮಗೌಡ ಕನಕ ಪೀಠ ಮುಂತಾದವರು ಪ್ರಶಸ್ತಿ ಪರಿಶೀಲನಾ ಸಮಿತಿಯಲ್ಲಿ ಇದ್ದರು.

ಚಿತ್ರದ ಕತೆಯು ಗುರುಶಿಷ್ಯರ ಸಂಗಮದಲ್ಲಿ, ಮರಣದ ನಂತರದ ಆದಿಯನ್ನು ತೋರುವ ಕಥೆ ಇದೆ. ಅಲ್ಲದೆ ಎರಡು ಉಪಕಥೆಗಳು ಈ ಸಿನಿಮಾದಲ್ಲಿ ಇವೆ. ಆ ಕತೆಗಳು ಆಯೋಜಕರಿಗೆ ತುಂಬಾ ಹಿಡಿಸಿವೆ. ಜೀವನದ ಮೂಲ ಅಂಶಗಳನ್ನು ಪ್ರತಿ ದೃಶ್ಯದಲ್ಲೂ ತೋರಿಸಿದ್ದು ಪರಿಶೀಲಕರಿಗೆ ಖುಷಿ ತಂದಿದೆ. ಕಥೆಯ ಬಿಗಿಯಾಗಿದ್ದು ಈ ಚಿತ್ರಕ್ಕೆ ಜೀವ ಎಂದು ನಿರ್ದೇಶಕರನ್ನು ಪರಿಶೀಲನಾ ಸಮಿತಿ ಬೆನ್ನು ತಟ್ಟಿದೆ.

ಶ್ರೀ ವಿಶ್ವಕರ್ಮ ಸಿನಿಮಾಸ್ ಅಡಿಯಲ್ಲಿ ಈರಣ್ಣ ಸುಭಾಸ್ ಬಡಿಗೇರ್ ನಿರ್ಮಾಣ ಮಾಡಿದ್ದಾರೆ. ನಾಯಕ ರಾಜ ಪ್ರವೀಣ್, ನಾಯಕಿ ಭವಾನಿ ಇನ್ನೂಳಿದ ಕಲಾವಿದರು, ರಾಘವ್ ಗೌಡಪ್ಪ ಮಾರೇಶ್ ಕನಕಗಿರಿ ನರಸಿಂಹಮೂರ್ತಿ ಇವರ ನಟನೆ ಚೆನ್ನಾಗಿ ಮೂಡಿ ಬಂದಿದೆ. ಸಂಗೀತ ಸುಚಿನ್ ಶರ್ಮ, ಸಂಕಲನ, ಅರವಿಂದ್, ಕಲೆ ಲಷ್ಮಿಕಾಂತಜೋಶಿ ಅವರದ್ದು ಆಗಿದೆ.

ಚಿತ್ರದ ಹಾಡುಗಳು ಪೂರ್ಣವಾಗಿದ್ದು ಪ್ರಖ್ಯಾತ ಆಡಿಯೋ ಕಂಪನಿಯಲ್ಲಿ ಬಿಡುಗಡೆಗೊಳ್ಳಲ್ಲಿವೆ, ಚಿತ್ರವು ನವಂಬರ್ ಅಂತ್ಯದಲ್ಲಿ ಬಿಡುಗಡೆ ಆಗಲಿದೆ ಚಿತ್ರ ನಿರ್ದೇಶಕರು ಸಿದ್ದುವಜ್ರಪ್ಪ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಕಿರುತೆರೆಯಿಂದ ಸಿನಿಮಾ ಅಂಗಳಕ್ಕೆ ಬಂದ ರಾಧಾ ಭಗವತಿ

ಜನಪ್ರಿಯ “ರಾಮಾಚಾರಿ” ಧಾರವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಗುರುತಿಸಿಕೊಂಡಿರುವ ರಾಧಾ ಭಗವತಿ , ಈಗ ಸಚಿನ್ ಶೆಟ್ಟಿ ನಿರ್ದೇಶಿಸುತ್ತಿರುವ “ವಸಂತಕಾಲದ ಹೂಗಳು” ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಬಿಜಾಪುರ ಮೂಲದವರಾದ ರಾಧಾ ಭಗವತಿ ಅವರು, ಟೀನೇಜ್ ಪ್ರೇಮಕಥೆ ಹೊಂದಿರುವ ಈ ಚಿತ್ರದಲ್ಲಿ ಸುಮಾ ಎಂಬ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಚಿತ್ರದ ಹೆಸರೇ ನನಗೆ ಆಪ್ತವೆನಿಸಿತು. ಇನ್ನು ಕಥೆ ಕೇಳಿದಾಗಲಂತೂ ಮೂರ್ನಾಲ್ಕು ದಿನಗಳ ಕಾಲ ಆ ಗುಂಗಿನಲ್ಲೇ ಇದ್ದೆ. ಖಂಡಿತ ಚಿತ್ರ ನೋಡಿದವರಿಗೆಲ್ಲ ತಮ್ಮ ಕಾಲೇಜು ದಿನಗಳ ನೆನಪು ಮರುಕಳಿಸದೇ ಇರದು.

ನಟನೆಗೆ ಹೆಚ್ಚು ಅವಕಾಶ ಇರುವಂತ ಪಾತ್ರ ಸಿಕ್ಕಿದ್ದಕ್ಕೆ ಖುಷಿಯಿದೆ. ಸಿನಿಪ್ರಿಯರ ಪ್ರತಿಕ್ರಿಯೆಗೆ ಕಾತರದಿಂದ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ರಾಧಾ ಭಗವತಿ .

Categories
ಸಿನಿ ಸುದ್ದಿ

ಕಾಟೇರ ಚಿತ್ರೀಕರಣ ಮುಕ್ತಾಯ: ಇದು ದರ್ಶನ್ ಚಿತ್ರ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿ ನಟಿಸುತ್ತಿರುವ “ಕಾಟೇರ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.

ನಮ್ಮ ಸಂಸ್ಥೆಯ ನಿರ್ಮಾಣದ “ಕಾಟೇರ” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ತನಕ ನೂರು ದಿನಗಳ ಚಿತ್ರೀಕರಣವಾಗಿದೆ. ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಎಪ್ಪತ್ತರ ದಶಕದಲ್ಲಿ ನಡೆಯುವ ಕಥೆಯಾಗಿದೆ. ಹಾಗಾಗಿ ಈ ಸ್ಥಳದಲ್ಲಿ ಹಳ್ಳಿಯ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದೆ. ತರುಣ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು.


ದರ್ಶನ್ ಅವರು ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದು, ನಾಯಕಿಯಾಗಿ ಮೊದಲ ಬಾರಿಗೆ ಮಾಲಾಶ್ರೀ ಅವರ ಮಗಳು ಆರಾಧನಾ ಅಭಿನಯಿಸುತ್ತಿದ್ದಾರೆ. ಜನಪ್ರಿಯ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ.
ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.

“ಗುರು ಶಿಷ್ಯರು” ಚಿತ್ರದ ನಂತರ ನಾನು ಹಾಗೂ ಜಡೇಶ್ ಅವರು ಸೇರಿ ಈ ಚಿತ್ರದ ಕಥೆ ಬರೆದ್ದೆವು. ದರ್ಶನ್ ಅವರಿಗಾಗಿಯೇ ಬರೆದ ಕಥೆಯಿದು ಎಂದು ಮಾತು ಆರಂಭಿಸಿದ ನಿರ್ದೇಶಕ ತರುಣ್ ಸುಧೀರ್, ಆನಂತರ ದರ್ಶನ್ ಅವರು ರಾಕ್ ಲೈನ್ ವೆಂಕಟೇಶ್ ಅವರಿಗೆ ಈ ಕಥೆ ಹೇಳಿ ಎಂದರು. ರಾಕ್ ಲೈನ್ ಸರ್ ಕಥೆ ಮೆಚ್ಚಿಕೊಂಡು ಚಿತ್ರವನ್ನು ಪ್ರಾರಂಭಿಸಿದರು. ಹಿರಿಯ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ಈ ಚಿತ್ರದ ನಾಯಕಿ ಎಂದು ನಿರ್ಮಾಪಕರು, ದರ್ಶನ್ ಅವರು ಹಾಗೂ ನಾನು ಸೇರಿ ಆಯ್ಕೆ ಮಾಡಿದ್ದೆವು. ಆರಾಧನಾ ಅದ್ಭುತ ನಟಿ. ಬಹುತೇಕ ಎಲ್ಲಾ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಮುಗಿಸಿದ್ದಾರೆ. ಈ ಚಿತ್ರ 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು , ಕನಕಪುರ ರಸ್ತೆಯಲ್ಲಿ ಅದ್ದೂರಿ ಹಳ್ಳಿ ಸೆಟ್ ಹಾಕಲಾಗಿದೆ‌. ನೂರು ದಿನಗಳ ಚಿತ್ರೀಕರಣ ಪೂರ್ಣವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದರು.

ನೂರು ದಿನಗಳ ಚಿತ್ರೀಕರಣದಲ್ಲಿ ನಾನು, ಎಪ್ಪತ್ತೊಂದು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ‌. ತರುಣ್ ಹಾಗೂ ಜಡೇಶ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಾಲಾಶ್ರೀ ಅವರ ಮಗಳು ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಎಂತಹ ಸನ್ನಿವೇಶಗಳನ್ನು ಒಂದೇ ಟೇಕ್ ನಲ್ಲಿ ಅಭಿನಯಿಸುವ ಕಲಾವಿದೆ ಅವರು.


ಹಿರಿಯ ನಟರಾದ ಅವಿನಾಶ್, ಜಗಪತಿ ಬಾಬು, ವಿನೋದ್ ಆಳ್ವ, ಕುಮಾರ್ ಗೋವಿಂದ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ. ಸುಧಾಕರ್ ಅವರ ಛಾಯಾಗ್ರಹಣ ಅದ್ಭುತವಾಗಿದ್ದು, ಈ ಚಿತ್ರದ ಛಾಯಾಗ್ರಹಣಕ್ಕಾಗಿ ಅವರಿಗೆ ಪ್ರಶಸ್ತಿ ಬರಬಹುದು ಎಂಬುದು ನನ್ನ ಅನಿಸಿಕೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದರು‌.

ಇದು ನನ್ನ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ. ಅವಕಾಶ ನೀಡಿದ ರಾಕ್ ಲೈನ್ ವೆಂಕಟೇಶ್, ತರುಣ್ ಸುಧೀರ್ ಹಾಗೂ ದರ್ಶನ್ ಅವರಿಗೆ ನನ್ನ ಧನ್ಯವಾದ ಎನ್ನುತ್ತಾರೆ ನಾಯಕಿ ಆರಾಧನಾ.

ಹಿರಿಯ ನಟರಾದ ಅವಿನಾಶ್, ಕುಮಾರ್ ಗೋವಿಂದ್, ವಿನೋದ್ ಆಳ್ವಾ, ಛಾಯಾಗ್ರಾಹಕ ಸುಧಾಕರ್, ತರುಣ್ ಸುಧೀರ್ ಅವರೊಂದಿಗೆ ಕಥೆ, ಚಿತ್ರಕಥೆ ಬರೆದಿರುವ ಜಡೇಶ್, ಸಂಭಾಷಣೆ ಬರೆದಿರುವ ಮಾಸ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಹಿರಿಯ ನಟಿ ಮಾಲಾಶ್ರೀ ಚಿತ್ರತಂಡಕ್ಕೆ ಶುಭ ಕೋರಿದರು.

error: Content is protected !!