ಚಿತ್ರ : ಒಲವೇ ಮಂದಾರ 2
ನಿರ್ದೇಶನ : ಎಸ್.ಆರ್.ಪಾಟೀಲ್
ನಿರ್ಮಾಣ : ರಮೇಶ್ ಮರಗೋಳ, ಸತೀಶ್
ತಾರಾಗಣ: ಸನತ್, ಪ್ರಜ್ಞಾ ಭಟ್, ಅನುಪಾ ಸತೀಶ್, ಭವ್ಯಾ, ಮಂಜುಳಾ ರೆಡ್ಡಿ,
ಡಿಂಗ್ರಿ ನಾಗರಾಜ್, ಮಡೆನೂರ ಮನು ,ಶಿವಾನಂದ ಸಿಂದಗಿ ಇತರರು.
ರೇಟಿಂಗ್ : 3/5
ವಿಜಯ್ ಭರಮಸಾಗರ
ಸಿನಿಮಾ ಅಂದಮೇಲೆ ಪ್ರೀತಿ ಗೀತಿ ಇತ್ಯಾದಿ ಇರಲೇಬೇಕು. ಪ್ರೀತಿ ಇದ್ದಾಗ ದ್ವೇಷ, ಅಸೂಯೆ ಕೂಡ ಇದ್ದೇ ಇರುತ್ತೆ. ಈಗಾಗಲೇ ಇಂತಹ ಅನೇಕ ಕಥೆ ಇರುವ ಸಿನಿಮಾಗಳು ಬಂದಿವೆ. ಆ ಸಾಲಿಗೆ ಒಲವೇ ಮಂದಾರ 2 ಚಿತ್ರವೂ ಸೇರಿದೆ. ಇದು ಪರಿಶುದ್ಧ ಪ್ರೇಮ ಕಥೆ. ಆದರೆ, ಕಥೆಯಲ್ಲಿ ಹೊಸತನವಿಲ್ಲ. ನಿರೂಪಣೆಯಲ್ಲೂ ವಿಶೇಷವೇನಿಲ್ಲ. ಆದರೆ, ತಾಳ್ಮೆಯಿಂದ ನೋಡಿದರೆ, ಅಂತ್ಯದಲ್ಲೊಂದು ಸಂದೇಶವಿದೆ. ಅದೊಂದೇ ಸಿನಿಮಾದ ಜೀವಾಳ. ಆ ಜೀವಾಳ ಏನೆಂಬುದನ್ನು ಕಂಡುಕೊಳ್ಳುವ ಕುತೂಹಲವಿದ್ದರೆ ಅವರಿಬ್ಬರ ಮಂದಾರ ನೋಡಲ್ಲಡ್ಡಿಯಿಲ್ಲ.
ಆರಂಭದಲ್ಲಿ ಸಿನಿಮಾ ಮಂದಗತಿಯಲ್ಲೇ ಸಾಗುತ್ತೆ. ಕೆಲವೆಡೆ ನೀರಸ ಎನಿಸಿದರೂ, ಬರುವ ಹಾಡು, ಕಿರುನಗೆ ಚೆಲ್ಲುವ ಸಣ್ಣ ಹಾಸ್ಯಮಯ ದೃಶ್ಯಗಳು ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತವೆ. ಇಲ್ಲಿ ಒಂದೊಳ್ಳೆಯ ಪ್ರೀತಿಯ ಕಥೆ ಇದೆ. ಅದರೊಳಗೆ ವ್ಯಥೆಯೂ ಇದೆ. ಕಥೆ ಸರಳವಾಗಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಇರಬೇಕಿತ್ತು. ಮೊದಲರ್ಧ ನಿಧಾನ. ದ್ವಿತಿಯಾರ್ಧ ಸಿನಿಮಾ ನಿಧಾನವಾಗಿಯೇ ಕುತೂಹಲ ಕೆರಳಿಸುತ್ತ ಹೋಗುತ್ತೆ.
ಕಥೆ ಇಷ್ಟು…
ನಾಯಕ ಆರ್ಯ ಬಿಕಾಂ ಓದಿದ್ದರೂ ಕೆಲಸಕ್ಕೆ ಹೋಗದೆ ತನ್ನ ಹಳ್ಳಿಯಲ್ಲೇ ಇದ್ದು, ಹಳ್ಳಿ ಜನಪರ ಕೆಲಸ ಮಾಡುವ ಆಶಯ ಇಟ್ಟುಕೊಂಡವ. ಅದೇ ಊರಲ್ಲಿ ರಾಜಕಾರಣಿಯೊಬ್ಬರ ಮಗಳ (ಭೂಮಿ) ಮೇಲೆ ಪ್ರೀತಿ ಹುಟ್ಟಿಸಿಕೊಂಡವ. ಅತ್ತ, ರಾಜಕಾರಣಿಗೆ ಆರ್ಯನೆಂದರೆ ದ್ವೇಷ. ಇತ್ತ ಭೂಮಿ ಅಂದರೆ ಆರ್ಯನಿಗೆ ಪ್ರಾಣ. ಮದುವೆಗೆ ಬಲವಾದ ವಿರೋಧ ವ್ಯಕ್ತವಾದಾಗ, ನಡೆಯುವ ಸನ್ನಿವೇಶಗಳು ಸಿನಿಮಾದ ಹೈಲೆಟ್.
ಇಲ್ಲಿ ಪ್ರೀತಿ, ಒಲವು, ನೋವು, ಸ್ನೇಹ, ಮಮತೆ, ತ್ಯಾಗ… ಇತ್ಯಾದಿ ಅಂಶಗಳು ಗಮನ ಸೆಳೆಯುತ್ತಾವಾದರೂ, ಅಲ್ಲಲ್ಲಿ ಸಿನಿಮಾ ನಿಧಾನ ಎನಿಸುವುದು ನಿಜ. ಹಾಗಂತ ದ್ವಿತಿಯಾರ್ಧ ಅಂದುಕೊಂಡಂತೆ ನಡೆಯಲ್ಲ. ಸಿನಿಮಾ ನೋಡಿ ಹೊರಬಂದವರಿಗೆ ತಕ್ಕಮಟ್ಟಿಗೆ ಕೆಲ ದೃಶ್ಯಗಳು ಕಾಡುತ್ತವೆ.
ಯಾರು ಹೇಗೆ?
ನಾಯಕ ಸನತ್ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಎರಡು ಶೇಡ್ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ನೋಡುಗರನ್ನು ನಗಿಸುವುದರ ಜೊತೆ ಅಳಿಸುವಲ್ಲೂ ಪ್ರಯತ್ನ ಪಟ್ಟಿದ್ದಾರೆ.
ಪ್ರಜ್ಞಾ ಭಟ್ ಅವರ ನಟನೆಯಲ್ಲಿ ಲವಲವಿಕೆ ಇದೆ. ಅನುಪಾ ಕೂಡ ಇಷ್ಟವಾಗುತ್ತಾರೆ. ಅಪ್ಪನಾಗಿ ರಮೇಶ್ ಮರಗೋಳ ಸೈ ಎನಿಸಿಕೊಂಡರೆ, ಭವ್ಯಾ ಮಮ್ಮಲ ಮರಗುವ ಅಮ್ಮನಾಗಿ ಗಮನ ಸೆಳೆಯತ್ತಾರೆ. ಉಳಿದಂತೆ ತೆರೆ ಮೇಲೆ ನಟಿಸಿರುವ ಮಂಜುಳಾ ರೆಡ್ಡಿ, ಡಿಂಗ್ರಿ ನಾಗರಾಜ್, ಮಡೆನೂರ ಮನು, ಶಿವಾನಂದ ಇತರರು ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ.
ಡಾ. ಕಿರಣ್ ತೋಟಂಬೈಲ್ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಕ್ಯಾಮೆರಾ ಕೈಚಳಕದಲ್ಲಿ ಕೊಂಚ ಚುರುಕಿದೆ.
ಕೆಲ ಸಿನಿಮಾಗಳ ಕಥೆ ಹೊರ ಬಂದ ಮೇಲೂ ಕಾಡುತ್ತವೆ.