ಆರ್ಮುಗ ಪುತ್ರ ಈಗ ಹೀರೋ! ಮಗನ ಸಿನಿಮಾಗೆ ಅಪ್ಪನ ನಿರ್ದೇಶನ : ಎರಡು ದಶಕದ ಬಳಿಕ ಡೈರೆಕ್ಟರ್ ಆದ ರವಿಶಂಕರ್

ಖಳನಟ ರವಿಶಂಕರ್ ಪುತ್ರ ಈಗ ಹೀರೋ ಆಗುತ್ತಿದ್ದಾರೆ. ಅವರ ಮಗನ ಸಿನಿಮಾಗೆ ‘ಸುಬ್ರಹ್ಮಣ್ಯ’ ಎಂದು ಹೆಸರಿಡಲಾಗಿದ ಮಗನ ಸಿನಿಮಾಗೆ ಅಪ್ಪನೇ ಡೈರೆಕ್ಟರ್ ಎಂಬುದು ವಿಶೇಷ.

ಆರ್ಮುಗ ರವಿಶಂಕರ್ ಆ್ಯಕ್ಟರ್ ಮಾತ್ರವಲ್ಲ ಡೈರೆಕ್ಟರ್, ರೈಟರ್, ಸಿಂಗರ್, ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಹೌದು. ಸಿನಿಕರಿಯರ್ ಆರಂಭದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದರು. ಅನಂತರ ಒಂದೊಂದೆ ಮೆಟ್ಟಿಲುಗಳನ್ನೇರುತ್ತಾ ನಟನಾಗುವ ತಮ್ಮ ಕನಸನ್ನ ಈಡೇರಿಸಿಕೊಂಡರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ `ಕೆಂಪೇಗೌಡ’ ಸಿನಿಮಾದಲ್ಲಿ ಆಮುರ್ಗಂ ಪಾತ್ರ ಪೋಷಣೆ ಮಾಡಿ ಜನಪ್ರಿಯತೆ ಗಳಿಸಿದರು. ಅಲ್ಲಿವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಕೂಡ ಬಿಗ್ ಬ್ರೇಕ್ ಸಿಕ್ಕಿರಲಿಲ್ಲ. ಆದರೆ, ಕೆಂಪೇಗೌಡ ಸಿನಿಮಾದಿಂದ ರವಿಶಂಕರ್ ಕರಿಯರ್ರೇ ಬದಲಾಯ್ತು. ನೇಮು-ಫೇಮು-ಕ್ರೇಜು-ಕಾಸು ಹೀಗೆ ಎಲ್ಲವೂ ಕೂಡ ಒಟ್ಟೊಟ್ಟಿಗೆ ದಕ್ಕಿತು, ಬೇಡಿಕೆ ಸೃಷ್ಟಿಯಾಯ್ತು. ಈಗಲೂ ಆ ಬೇಡಿಕೆ ತಗ್ಗಿಲ್ಲ, ಸದ್ಯಕ್ಕೆ ತಗ್ಗೋದು ಇಲ್ಲ ಅನ್ನೋದಕ್ಕೆ ಅವರ ಕೈಯಲ್ಲಿರುವ ಸಿನಿಮಾಗಳೇ ಸಾಕ್ಷಿ

ದಕ್ಷಿಣ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಆರ್ಮುಗ ರವಿಶಂಕರ್ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಕಳೆದ 20 ವರ್ಷಗಳ ಹಿಂದೆ ಆ್ಯಕ್ಷನ್ ಕ್ವೀನ್ ಮಾಲಾಶ್ರೀಗೆ ಮೊದಲ ಭಾರಿ ಆ್ಯಕ್ಷನ್ ಕಟ್ ಹೇಳಿದ್ದರು. ದುರ್ಗಿ ಸಿನಿಮಾ ಡೈರೆಕ್ಷನ್ ಮಾಡುವ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಅವತ್ತಿಗೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ತೆಲುಗಿಗೆ ರಿಮೇಕ್ ಕೂಡ ಆಗಿತ್ತು. ರವಿಶಂಕರ್ ಗೆ ಈ ಚಿತ್ರದಿಂದ ಒಳ್ಳೆ ಹೆಸರು ಬಂದಿತ್ತು. ಆದರೆ, ಅದ್ಯಾಕೋ ಏನೋ ಗೊತ್ತಿಲ್ಲ ದುರ್ಗಿ ನಂತರ ಡೈರೆಕ್ಷನ್ ಕಡೆ ಮುಖ ಮಾಡಿರಲಿಲ್ಲ. ಇದೀಗ, 20 ವರ್ಷಗಳು ಉರುಳಿದ್ಮೇಲೆ ಮತ್ತೆ ಡೈರೆಕ್ಟರ್ ಹ್ಯಾಟ್ ತೊಡಲು ರೆಡಿಯಾಗಿದ್ದಾರೆ. ಅದು ಅವರ ಮಗನ ಸಿನಿಮಾಗೆ ಅನ್ನೋದು ವಿಶೇಷ.

ಆರ್ಮುಗ ರವಿಶಂಕರ್ ಅವರಿಗೆ ಅದ್ವೆ ಎಂಬ ಮಗನಿದ್ದಾರೆ. ವಿದೇಶದಲ್ಲಿ ನಟನಾ ತರಬೇತಿಯನ್ನು ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸವೆಲ್ಲ ಮುಗಿಸಿ ವಾಪಾಸ್ ಹುಟ್ಟೂರಿಗೆ ಮರಳಿರುವ ಮಗನನ್ನು ಬಣ್ಣದ ಜಗತ್ತಿಗೆ ಪರಿಚಯಿಸಿದ್ದಾರೆ. ತಾತನಂತೆ, ಅಪ್ಪ-ಚಿಕ್ಕಪ್ಪರಂತೆ ಕಲೆ ರಕ್ತಗತವಾಗಿ ಬಂದಿರುವುದರಿಂದ ಮುಖಕ್ಕೆ ಬಣ್ಣ ಹಚ್ಚಲು ಅದ್ವೆ ಕೂಡ ಓಕೆ ಹೇಳಿದ್ದು, ಪುತ್ರನ ಚೊಚ್ಚಲ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ ನಟ ಕಂ ನಿರ್ದೇಶಕ ರವಿಶಂಕರ್.

ಇಂದು ಆಯುಧಪೂಜೆ ಅಂಗವಾಗಿ ಅದ್ವೆ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ‌ ಮಾಡಲಾಗಿದೆ. ಈ ಚಿತ್ರಕ್ಕೆ ಸುಬ್ರಹ್ಮಣ್ಯ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಪೋಸ್ಟರ್ ನಲ್ಲಿ ದೈವಿಕ ಅಂಶಗಳು ಹೈಲೆಟ್ ಆಗಿವೆ. ಪೋಸ್ಟರ್ ನಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಮತ್ತು ಅವರ ವಾಹನ ನವಿಲನ್ನು ತೋರಿಸಲಾಗಿದೆ. ನಾಯಕ ಅದ್ವೆ ಒಂದು ಕೈಯಲ್ಲಿ ಜ್ವಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ನಿಗೂಢವಾಗಿ ಕಾಣುವ ಪುಸ್ತಕವನ್ನು ಇಟ್ಟುಕೊಂಡಿದ್ದಾರೆ.

ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ರಾಜ್ ತೋಟ ಕ್ಯಾಮೆರಾ ಹಿಡಿದಿದ್ದು, ಕೆಜಿಎಫ್ ಸಲಾರ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ, ವಿಜಯ್ ಎಂ ಕುಮಾರ್ ಸಂಕಲನ, ಮಾಸ್ತಿ ಸಂಭಾಷಣೆ ಸುಬ್ರಹ್ಮಣ್ಯ ಸಿನಿಮಾಕ್ಕಿದೆ. ಎಸ್ ಜಿ ಮೂವೀ ಮೇಕರ್ಸ್ ಬ್ಯಾನರ್ ನಡಿ ತಿರುಮಲ ರೆಡ್ಡಿ ಮತ್ತು ಅನಿಲ್ ಕಡಿಯಾಲ ಬಂಡವಾಳ ಹಾಕಿದ್ದು, ಪ್ರವೀಣಾ ಕಡಿಯಾಲ ಹಾಗೂ ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸುಬ್ರಹ್ಮಣ್ಯ ಸಿನಿಮಾ ತಯಾರಾಗುತ್ತಿದ್ದು, ಡಿಸೆಂಬರ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.

Related Posts

error: Content is protected !!