ಘೋಸ್ಟ್ ಎಂಟ್ರಿ ಆಗ್ತಾ ಇದೆ ದಾರಿ ಬಿಡಿ: ಕಥೆ ಕೇಳಿ ಬಿಡಲಿಲ್ಲ ಅಂದ್ರು ಶಿವಣ್ಣ- ಅಕ್ಟೋಬರ್ 19ಕ್ಕೆ ಚಿತ್ರ ತೆರೆಗೆ

ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಘೋಸ್ಟ್’ ಅಕ್ಟೋಬರ್‍ 19ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ರಾಜ್ಯಾದ್ಯಂತ ಈ ಸಿನಿಮಾ ಸುಮಾರು ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ದಿನವೊಂದಕ್ಕೆ 1500ಕ್ಕೂ ಹೆಚ್ಚು ಪ್ರದರ್ಶನಗಳು ಕಾಣಲಿವೆ.

ಈ ಸಿನಿಮಾ ಮೇಲೆ ಶಿವರಾಜ್ ಕುಮಾರ್ ಸಾಕಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಏಕತಾನತೆ ಮುರಿಯಲು ಈ ಚಿತ್ರ ಮಾಡಿದ್ದಾರಂತೆ. ‘ಈ ಚಿತ್ರವನ್ನು ಅವರು ಒಪ್ಪಲು ಕಾರಣ ಸಿನಿಮಾದ ಹೊಸತನವಂತೆ. ಒಂದೇ ತರಹದ ಪಾತ್ರಗಳನ್ನು ಬಿಟ್ಟು ಬರುವ ಉದ್ದೇಶದಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಶಿವರಾಜಕುಮಾರ್ ಪತ್ರಕರ್ತರ ಮುಂದೆ ಹೇಳಿಕೊಂಡಿದ್ದಾರೆ. ಹಾಗಾಗಿಯೇ ಅವರು, ಈ ಸಿನಿಮಾದ ಕಥೆ ಕೇಳಿದ‌ ಬಳಿಕ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ.

‘ಘೋಸ್ಟ್’ ಸಿನಿಮಾದ ಪಾತ್ರವೇ ವಿಶೇಷವಾಗಿದೆ. ಇಲ್ಲಿ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದು, ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ ಇದಾಗಿದೆ. ಖಂಡಿತ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಲಿದೆ ಎಂಬುದು ಶಿವರಾಜಕುಮಾರ್ ಮಾತು.

ನಿರ್ದೇಶಕ ಶ್ರೀನಿ ಅವರು ಮೈಸೂರಿನ ಶಕ್ತಿಧಾಮದಲ್ಲಿ ಶಿವಣ್ಣ ಅವರಿಗೆ ಈ ಕಥೆ ಹೇಳಿದ್ದರಂತೆ. ಈ ಕಥೆ ಮಾಡಿಕೊಂಡಾಗ, ಶಿವಣ್ಣ ಅವರೇ ಈ ಸಿನಿಮಾದಲ್ಲಿ ನಟಿಸಿದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದೆವು. ಶಿವಣ್ಣ ಕೂಡ ಕಥೆ ಕೇಳಿ ನಟಿಸಲು ಒಪ್ಪಿದರು. ಸಿನಿಮಾದ ವಿಶೇಷ ಅಂದರೆ ಶೇ. 70ರಷ್ಟು ಕಥೆ ಜೈಲಲ್ಲೇ ನಡೆಯುತ್ತದೆ. ನಿರ್ಮಾಪಕರ ಸಹಕಾರದಿಂದ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಈ ವಾರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಅನ್ನೋದು ಮತ್ತೊಂದು ವಿಶೇಷ. ಇದರ ಜೊತೆಯಲ್ಲಿ ಅಮೇರಿಕಾ, ಕೆನಡ ಸೇರಿದಂತೆ ಇತರೆ ದೇಶಗಳಲ್ಲೂ ಏಕಕಾಲಕ್ಕೆ ಬಿಡುಗಡೆ ಕಾಣಲಿದೆ ಎನ್ನುತ್ತಾರೆ ಶ್ರೀನಿ.

ನಿರ್ಮಾಪಕ ಸಂದೇಶ್ ಅವರು ಸಿನಿಮಾ ಮೇಲೆ ತುಸು ಹೆಚ್ಚೇ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಶಿವಣ್ಣ ಅವರು ಅದಾಗಲೇ ಏಳೆಂಟು ಚಿತ್ರಗಳಿಗೆ ಸಹಿ ಹಾಕಿದ್ದರು. ಆದರೆ, ಕಥೆ ಕೇಳಿ ನಮಗೆ ಮೊದಲ ಆದ್ಯತೆ ಕೊಟ್ಟಿದ್ದಾರೆ. ಈ ಹಿಂದೆ ನಮ್ಮ ಬ್ಯಾನರ್ ನಲ್ಕಿ ಶಿವಣ್ಣ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಎರಡೂ ಚಿತ್ರಗಳು ಕೂಡ ಗೆಲುವು ಕಂಡಿದ್ದವು. ಈ ಚಿತ್ರದ ಮೂಲಕ ಹ್ಯಾಟ್ರಿಕ್‍ ಗೆಲುವಿನ ನಿರೀಕ್ಷೆ ಇದೆ ಎಂದರು.

ಶಿವರಾಜಕುಮಾರ್ ಜೊತೆಯಲ್ಲಿ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್, ವಿಜಯಲಕ್ಷ್ಮೀ ಸಿಂಗ್​ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಮಹೇಂದ್ರ ಸಿಂಹ ಕ್ಯಾಮೆರಾ ಹಿಡಿದಿದ್ದಾರೆ.

Related Posts

error: Content is protected !!