ಆ ಒಂದು ಗೆಲುವು, ಕುಮುದಾ ಮುಖದಲ್ಲಿ ನಗುವು!
ಹರಿಪ್ರಿಯಾ ಎಂಬ ಸೋತು ಗೆದ್ದ ಸುಂದರಿಯ ರೋಚಕ ಕತೆ ಹೀಗಿದೆ ಇಲ್ಲಿದೆ.
ನಟ-ನಟಿಯರ ಪಾಲಿಗೆ ಅವರ ನಟನೆಯ ಭವಿಷ್ಯ ನಿರ್ಧಾರ ಆಗೋದು ‘ ಸಕ್ಸಸ್’ ಎಂಬ ಮೂರಕ್ಷರದ ಮೇಲೆ. ಸಕ್ಸಸ್ ಎನ್ನುವುದಕ್ಕೆ ಇಲ್ಲಿ ಅಷ್ಟೊಂದು ಮಹತ್ವ ಇದೆ. ಇಲ್ಲಿ ಗೆದ್ದವರು ಎದ್ದರು, ಸೋತವರು ಬಿದ್ದರು ಅಂತಲೇ. ಹಾಗಿದ್ದಾಗ್ಯೂ , ಇಲ್ಲಿ ಸೋತು ಗೆದ್ದವರದ್ದೂ ದೊಡ್ಡ ಸಂಖ್ಯೆ. ಆ ಸಾಲಿನಲ್ಲಿ ಹೇಳಬಹುದಾದ ಹೆಸರು ಬಹುಭಾಷೆ ನಟಿ ಹರಿಪ್ರಿಯಾ ಅವರದು.
ಫಿನಿಕ್ಸ್ ನಂತೆ ಮೇಲೆದ್ದ ನಟಿ
ಮೋಹಕನಟಿ ಹರಿಪ್ರಿಯಾ ಈಗಲೂ ಬಹುಬೇಡಿಕೆಯ ನಟಿ. ಈಗಲೂ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರ ಜತೆಗೆಯೇ ನಟಿಯರಾಗಿ ಸಿನಿಮಾ ಇಂಡಸ್ಟ್ರಿಗೆ ಬಂದ ಅನೇಕರು ಇಲ್ಲಿಲ್ಲ. ಬಹಳಷ್ಟು ನಟಿಯರು ಉದ್ಯಮ ಬಿಟ್ಟು ಮನೆ ಸೇರಿಕೊಂಡಿದ್ದಾರೆ. ಕೆಲವರು ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಮತ್ತೆ ಕೆಲವರು ಮದುವೆಯಾಗಿ ಸಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಹರಿಪ್ರಿಯಾ ಮಾತ್ರ, ಸೋಲು- ಗೆಲುವಿನ ಎರಿಳಿತಗಳ ನಡುವೆ ಫೀನಿಕ್ಸ್ ನಂತೆ ಮೇಲೆದ್ದು , ಈಗಲೂ ಬೇಡಿಕೆ ಉಳಿಸಿಕೊಂಡಿರುವುದು ಅವರ ಸಿನಿ ಜರ್ನಿಯ ಹೆಗ್ಗಳಿಕೆ.
ಸೋತು ಗೆದ್ದ ಸುಂದರಿ
ಬರೀ ಗೆದ್ದು ಬೀಗುವುದಕ್ಕಿಂತ ಸೋತು ಗೆಲ್ಲುವುದರಲ್ಲೂ ಥ್ರಿಲ್ ಇದೆ. ಅಂತಹ ಥ್ರಿಲ್ ಕಂಡವರು ಹರಿಪ್ರಿಯಾ . ಒಂದಷ್ಟು ಸಿನಿಮಾಗಳ ಸೋಲು, ಆನಂತರ ಪರಭಾಷೆಗಳ ಸುತ್ತಾಟ ಅಂತ ಅಲೆದು ಬೇಸತ್ತಿದ್ದ ಹರಿಪ್ರಿಯಾ ಅವರಿಗೆ ‘ಉಗ್ರಂ’ ಚಿತ್ರದ ಗೆಲುವು ,ಒಯಸಿಸ್ ನಲ್ಲಿ ಸರೋವರವೇ ಕಂಡಂಷ್ಟು ಖುಷಿ ಕೊಟ್ಟಿತು. ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಶುರು ಮಾಡಲು ಕಾರಣವಾಯಿತು. ಅದು ಸೋತ ಗೆದ್ದ ಥ್ರಿಲ್. ಆ ಗೆಲುವು ಕಂಡ ಮರು ದಿನ ಹರಿಪ್ರಿಯಾ ಮುಖ, ದುಂಡು ಮಲ್ಲಿಗೆಯಂತೆ ಅರಳಿತ್ತು. ಅದು ಸಕ್ಸಸ್ ನ ನಗು.
ಎಲ್ಲಾ ಪಾತ್ರಕ್ಕೂ ಸೈ ಅಂದ ನಟಿ
ಕನ್ನಡದ ಮಟ್ಟಿಗೆ ಹರಿಪ್ರಿಯಾ ಎಲ್ಲ ನಟಿಯರ ಹಾಗಲ್ಲ. ನಿಜಕ್ಕೂ ಡೆಫೆರೆಂಟ್. ಯಾಕಂದ್ರೆ ಬೋಲ್ಡ್, ಗ್ಲಾಮರ್, ಡಿ ಗ್ಲಾಮರ್ ..ಹೀಗೆ ಯಾವುದೇ ತರಹದ ಪಾತ್ರ ಸಿಕ್ಕರೂ ಅದರಲ್ಲಿ ಬಿಂದಾಸ್ ಆಗಿ ಅಭಿನಯಿಸುವ ಅಭಿನಯ ಶಾರದೆ. ‘ಅಭಿನಯ ಶಾರದೆ’ ಎನ್ನುವ ಮಾತು ಕೊಂಚ ಬಾರವಾದರೂ, ಈಗಿನ ನಟಿಯರ ಮಟ್ಟಿಗೆ ಅದಕ್ಕೆ ಹೊಂದಿಕೆ ಆಗಬಲ್ಲ ನಟಿಯಂತೂ ಹೌದು. ನಟನೆ ಎಂಬ ಎನ್ನುವ ಕಲಾ ಸರಸ್ವತಿಯನ್ನು ವಿವಾದಗಳಿಲ್ಲದೆ ಶ್ರದ್ದೆ, ಭಕ್ತಿ ಮತ್ತು ತಾಳ್ಮೆಯಲ್ಲಿ ಸಮರ್ಥವಾಗಿ ದುಡಿಸಿಕೊಂಡ ನಟಿ. ಹರಿಪ್ರಿಯಾ ಅವರ ಸಿನಿಜರ್ನಿಯನ್ನು ಆರಂಭದಿಂದ ಇಲ್ಲಿವರೆಗೂ ಸೂಕ್ಷ್ಮವಾಗಿ ನೋಡಿದರೆ ಇದು ಅರ್ಥವಾಗಲು ಸಾಧ್ಯ.
ಮೂರು ಘಟ್ಟದ ಆ ಹದಿನಾಲ್ಕು ವರ್ಷ
ಹರಿಪ್ರಿಯಾ ನಟಿಯಾಗಿ ಚಿತ್ರರಂಗಕ್ಕೆ ಬಂದು ಇಲ್ಲಿಗೆ ಸರಿ ಸುಮಾರು 14 ವರ್ಷ. ಇಷ್ಟು ವರ್ಷಗಳಲ್ಲಿ ಅವರ ಸಿನಿ ಜರ್ನಿ ಮೂರು ಘಟ್ಟಗಳಲ್ಲಿ ರೂಪಾಂತರಗೊಂಡಿದೆ. ಅಂದ್ರೆ ಅವರು ನಟಿಯಾಗಿ ಪಕ್ವಗೊಂಡ ಪರಿ ಅದು. 2007 ರಿಂದ 2014ರವರೆಗೆ ಒಂದು ಜರ್ನಿ. ಆದಾದ ನಂತರ 2014 ರಿಂದ 2016 ರ ವರೆಗೆ ಮತ್ತೊಂದು ಪಯಣ. ಅದು ದಾಟಿ 2017 ರಿಂದ ಶುರುವಾದ ಇನ್ನೊಂದು ರೂಪಾಂತರ. ಇಷ್ಟು ವರ್ಷಗಳ ಪಯಣದಲ್ಲಿ ಗೆದ್ದು ಬೀಗಿದ್ದಕ್ಕಿಂತ ಸೋತು ಗೆದ್ದಿದ್ದೇ ಹೆಚ್ಚು.
ಎಲ್ಲಿಯಾ ತುಳು ಭಾಷೆ, ಇನ್ನೆಲ್ಲಿಯಾ ಹರಿಪ್ರಿಯಾ
ಎಲ್ಲಿಯಾ ತುಳು ಭಾಷೆ, ಇನ್ನೆಲ್ಲಿಯಾ ಹರಿಪ್ರಿಯಾ? ತುಳು ಭಾಷೆಯೇ ಗೊತ್ತಿಲ್ಲದ ಗಡಿ ಜಿಲ್ಲೆಯ ಹರಿಪ್ರಿಯಾ ನಟಿಯಾಗಿ ಮೊದಲು ಬಣ್ಣ ಹಚ್ಚಿದ್ದು’ ಬದಿ’ ಹೆಸರಿನ ಒಂದು ತುಳು ಚಿತ್ರಕ್ಕೆ. ಅಲ್ಲಿಂದ ಗಾಂಧಿನಗರಕ್ಕೆ ಬಂದಿದ್ದು
‘ಮನಸುಗಳ ಮಾತು ಮಧುರ’ ಚಿತ್ರದೊಂದಿಗೆ. ಆ ಹೊತ್ತಿಗೆ ಹರಿಪ್ರಿಯಾ ಯಾವುದರಲ್ಲೂ ಕಮ್ಮಿ ಇರಲಿಲ್ಲ. ಆದರೂ ಮುಂದೆ ಸಕ್ಸಸ್ ಕಾಣದೆ ಕಂಗಾಲಾದರು. ಅವಕಾಶಗಳ ಬೆನ್ನು ಬಿದ್ದು ಕನ್ನಡದ ಗಡಿ ದಾಟಿದರು. ಪರಭಾಷೆಗೆ ಹೋದರೆನ್ನುವುದೇನೋ ಸರಿ, ಅಲ್ಲೂನೆಲೆ ಸಿಗದೆ ಪರದಾಡಿದರು. ಕೊನೆಗೆ ಅವರಿಗೆ ವರವಾಗಿ ಸಿಕ್ಕಿದ್ದು ‘ ಉಗ್ರಂ’ ಚಿತ್ರ.ಆವೊಂದು ಚಿತ್ರದ ಗೆಲುವು ಅವರನ್ನುಹತ್ತಾರು ಪ್ರಯೋಗಳಿಗೆ ಒಡ್ಡಿಕೊಳ್ಳಲು ಪ್ರೇರೆಪಿಸಿತು.
ಹಾಗಾಗಿಯೇ ರನ್ನ, ರಿಚ್ಚಿ, ನೀರ್ ದೋಸೆ, ಡಾಟರ್ ಆಫ್ ಪಾರ್ವತಮ್ಮ, ಭರ್ಜರಿ, ಬೆಲ್ ಬಾಟಮ್, ಕುರುಕ್ಷೇತ್ರ,
ಕನ್ನಡ್ ಗೊತ್ತಿಲ್ಲ, ಬಿಚ್ಚುಗತ್ತಿ ದಂತಹ ಚಿತ್ರಗಳಲ್ಲಿನ ವಿಭಿನ್ನ ಪಾತ್ರಗಳಲ್ಲಿ ತಮ್ಮನ್ನು ತಾವು ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎನ್ನುವ ಮಾತನ್ನು ಹರಿಪ್ರಿಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಸದ್ಯಕ್ಕೀಗ ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್, ಎವರು ರಿಮೇಕ್ ಚಿತ್ರಗಳ ಜತೆಗೆ ಮೂರ್ನಾಲ್ಕು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.ನಟನೆಯ ನಡುವೆಯೇ ಬ್ಲಾಗ್ ಬರವಣಿಗೆಯಲ್ಲಿ ಸಕ್ರಿಯವಾಗಿರುವುದು ವಿಶೇಷ.