Categories
ಸಿನಿ ಸುದ್ದಿ

ಜೂನ್ 14ಕ್ಕೆ ಬರ್ತಾರೆ ಶಿವಮ್ಮ! ಇದು ರಿಷಭ್ ಶೆಟ್ಟಿ ಚಿತ್ರ

ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಅವರು ತಮ್ಮ ರಿಷಭ್ ಶೆಟ್ಟಿ ಫಿಲಂಸ್ ಮೂಲಕ ನಿರ್ಮಾಣ ಮಾಡಿರುವ ಚಿತ್ರ “ಶಿವಮ್ಮ”. ಗ್ರಾಮೀಣ ಸೊಗಡಿನ ಈ ಚಿತ್ರ ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವು ಪ್ರಶಸ್ತಿಗಳು ಈ ಚಿತ್ರಕ್ಕೆ ದೊರಕಿದೆ. “ಶಿವಮ್ಮ” ಚಿತ್ರವನ್ನು ಜೂನ್ 14 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕ ರಿಷಭ್ ಶೆಟ್ಟಿ ತೀರ್ಮಾನಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು.

ನಾನು ವಿಜಯ ಕರ್ನಾಟಕ ಪತ್ರಿಕೆ ನಡೆಸುವ ಕಿರು ಚಿತ್ರೋತ್ಸವಕ್ಕೆ ಹೋದಾಗ ನಿರ್ದೇಶಕ ಜೈಶಂಕರ್ ಆರ್ಯರ್ ಅವರ ಪರಿಚಯವಾಯಿತು. ಆನಂತರ ನಮ್ಮ “ಕಥಾ ಸಂಗಮ” ಚಿತ್ರದ ನಿರ್ದೇಶಕರಲ್ಲಿ ಅವರು ಒಬ್ಬರಾದರು‌‌‌. ಆನಂತರ ಜೈಶಂಕರ್ ಅವರು “ಶಿವಮ್ಮ” ಚಿತ್ರದ ಕಥೆ ಕುರಿತಾಗಿ ಹೇಳಿದರು. ಕಥೆ ಇಷ್ಟವಾಯಿತು. ನಿರ್ಮಾಣ ಆರಂಭಿಸಿದ್ದೆವು. ಕೋವಿಡ್ ಗೂ ಮುನ್ನ ಆರಂಭವಾದ ಚಿತ್ರವಿದು. ಉತ್ತರ ಕರ್ನಾಟಕದ ಯರೇಹಂಚಿನಾಳ ನಿರ್ದೇಶಕರ ಊರು. ಈ ಚಿತ್ರದಲ್ಲಿ ನಟಿಸಿರುವ “ಶಿವಮ್ಮ” ಪಾತ್ರಧಾರಿ ಶರಣಮ್ಮ ಚಟ್ಟಿ ಅವರ ಊರು ಕೂಡ ಅದೆ. ಆ ಊರಿನ ಪ್ರತಿಭೆಗಳನ್ನು ಬಳಸಿಕೊಂಡು ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ‌. ಈವರೆಗೂ ಹದಿನೇಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ಶಿವಮ್ಮ” ಪ್ರದರ್ಶನವಾಗಿ ಪ್ರಶಂಸೆ ಪಡೆದುಕೊಂಡಿದೆ.

ಜನರಿಗೂ ಈ ಚಿತ್ರ ಇಷ್ಟವಾಗಲಿದೆ. ಏಕೆಂದರೆ ನಾನು ಈ ಚಿತ್ರ ನೋಡಿದ್ದೇನೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾಗೆ ಸಿಕ್ಕ ಮೆಚ್ಚುಗೆ ನೋಡಿ ಖುಷಿಯಾಯಿತು. ಈಗ ಈ ಚಿತ್ರವನ್ನು ಜನರ ಮುಂದೆ ತರುತ್ತಿದ್ದೇನೆ. ಇದೇ ಜೂನ್ 14 ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ‌. “ಶಿವಮ್ಮ” ಎಂಬ ಹೊಸ ನಾಯಕಿಯನ್ನು ಈ ಚಿತ್ರದ ಮೂಲಕ ಪರಿಚಯ ಮಾಡುತ್ತಿದ್ದೇವೆ.‌ ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಚಿತ್ರಕ್ಕಿರಲಿ ಎಂದರು ನಿರ್ಮಾಪಕ ರಿಷಭ್ ಶೆಟ್ಟಿ.

ನಾನು ಮೂಲತಃ ಐಟಿ ಉದ್ಯೋಗಿ. ಬೆಳೆದಿದ್ದು ಬೆಂಗಳೂರಿನಲ್ಲೇ. ಆದರೆ ಯರೇಹಂಚಿನಾಳ ನನ್ನ ತಂದೆಯ ಊರು. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ನನ್ನ ಊರಿನ ಬಗ್ಗೆ ಸಿನಿಮಾ ಮಾಡುವ ಆಸೆಯಾಯಿತು. ಹಾಗಾಗಿ ನಮ್ಮ ಊರಿಗೆ ಹೋದೆ. ಕೋವಿಡ್ ನಿಂದಾಗಿ ಒಂದು ವರ್ಷ ಅಲ್ಲೇ ಇರಬೇಕಾಯಿತು. ಅದು ನನಗೆ ಅನುಕೂಲವಾಯಿತು. ಅಲ್ಲಿನ ಜನರ ಹಾಗೂ ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಮಯ ಸಿಕ್ಕಿತ್ತು. ರಿಷಭ್ ಶೆಟ್ಟಿ ಅವರು ನಿರ್ಮಾಣಕ್ಕೆ ಮುಂದಾದರು. ನಮ್ಮ ಊರಿನವರಾದ ಶರಣಮ್ಮ ಚಟ್ಟಿ “ಶಿವಮ್ಮ”ನ ಪಾತ್ರಕ್ಕೆ ಆಯ್ಕೆಯಾದರು. ಅದೇ ಊರಿನ ಹೆಚ್ಚಿನ ಜನರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆನಂತರ ಚಿತ್ರೀಕರಣ ಪೂರ್ಣವಾಗಿ “ಶಿವಮ್ಮ” ಚಿತ್ರ ತೆರೆಗೆ ಬರಲು ಸಿದ್ದವಾಯಿತು. ಬಿಡುಗಡೆಗೂ ಮುನ್ನ ಒಂದುವರ್ಷದಿಂದ ಸಾಕಷ್ಟು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರದರ್ಶನವಾಗಿದೆ. ಜೂನ್ 14 ಚಿತ್ರ ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಜೈಶಂಕರ್ ಆರ್ಯರ್ ತಿಳಿಸಿದರು.

ನಿರ್ದೇಶಕ ಜೈಶಂಕರ್ ಅವರ ತಾಯಿಯನ್ನು ಮಾತನಾಡಿಸಲು ಹೋದಾಗ, ನನ್ನನ್ನು ನೋಡಿದ ಜೈಶಂಕರ್ ಅವರು ಸಿನಿಮಾದಲ್ಲಿ ಮಾಡುತ್ತೀರಾ ಎಂದರು. ನಮಗೆ ಇದೆಲ್ಲಾ ಹೊಸತು. ಯಾವಾಗಲಾದರು ಒಮ್ಮೆ ಸಿನಿಮಾ ನೋಡಿ ಗೊತ್ತಿದೆ‌ ಅಷ್ಟೇ. ಆನಂತರ ನಮ್ಮ ಮನೆಯವರ ಹಾಗು ಊರಿನ ಹಿರಿಯರ ಅನುಮತಿ ಪಡೆದು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಚಿತ್ರತಂಡದವರು ನಮ್ಮನೆಲ್ಲಾ ಚೆನ್ನಾಗಿ ನೊಡಿಕೊಂಡಿದ್ದಾರೆ. ನಿರ್ದೇಶಕರು ಹಾಗು ತಂಡದವರು ನಟನೆ ಗೊತ್ತಿಲ್ಲದ ನಮಗೆ ನಟಿಸುವುದನ್ನು ಕಲಿಸಿದ್ದಾರೆ ಎಂದು “ಶಿವಮ್ಮ” ಪಾತ್ರಧಾರಿ ಶರಣಮ್ಮ ಚಟ್ಟಿ ಹೇಳಿದರು.

ಚಿತ್ರದಲ್ಲಿ ನಟಿಸಿರುವ ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ ಹಾಗೂ ಶೃತಿ ಕೊಂಡೇನಹಳ್ಳಿ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ಪ್ರಮೋದ್ ಶೆಟ್ಟಿ ಚಿತ್ರಕ್ಕೆ ಶುಭ ಕೋರಿದರು.

Categories
ಸಿನಿ ಸುದ್ದಿ

ಎಸ್.ನಾರಾಯಣ್ ನಿರ್ದೇಶನದ ಸಿನಿಮಾದಲ್ಲಿ ದುನಿಯಾ ವಿಜಯ್- ಶ್ರೇಯಸ್ ಮಂಜು ನಟನೆ

ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ. ಅಂಬರೀಶ್ ಮುಂತಾದ ಜನಪ್ರಿಯ ನಟರ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಡಾ.ಎಸ್ ನಾರಾಯಣ್ ಅವರ ನಿರ್ದೇಶನದ “ಪ್ರೊಡಕ್ಷನ್ ನಂ 1” ಚಿತ್ರ ಇತ್ತೀಚೆಗಷ್ಟೇ ಆರಂಭವಾಗಿದೆ. ಈ ನೂತನ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಅಭಿನಯಿಸುತ್ತಿದ್ದಾರೆ. ದುನಿಯಾ ವಿಜಯ್ ಅವರು ಜೂನ್ 5 ರಿಂದ ಚಿತ್ರೀಕರಣದಲ್ಲಿ ಭಾಗಿಯಾಲಿದ್ದಾರೆ.
ಈಗಾಗಲೇ ಚಿಕ್ಕಮಗಳೂರಿನಲ್ಲಿ ಶ್ರೇಯಸ್ ಮಂಜು ಮುಂತಾದ ಕಲಾವಿದರ ಅಭಿನಯದಲ್ಲಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ಈಶ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಶ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಎಸ್ ನಾರಾಯಣ್, ಕೆ.ಮಂಜು, ರಮೇಶ್ ಯಾದವ್ ಹಾಗೂ ದುನಿಯಾ ವಿಜಯ್ ಅವರಂತಹ ಕನ್ನಡ ಚಿತ್ರರಂಗದ ದಿಗ್ಗಜರ ಪಾಲ್ಗೊಳ್ಳುವಿಕೆಯಲ್ಲಿ ಮೂಡಿ ಬರುತ್ತಿರುವ ಈ ನೂತನ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಸದ್ಯದಲ್ಲೇ ಅದ್ದೂರಿಯಾಗಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲು ಚಿತ್ರತಂಡ ಸಿದ್ದತೆ ನಡೆಸುತ್ತಿದೆ‌.

ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಬೃಂದಾ. ವಿಭಿನ್ನಪಾತ್ರದಲ್ಲಿ ಸಾಧುಕೋಕಿಲ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ಗಿರಿ, ಜಯರಾಂ, ಸುಜಯ್ ಶಾಸ್ತ್ರಿ, ಮಂಜು ಪಾವಗಡ ಸೇರಿದಂತೆ ಅನೇಕ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಎಸ್ ನಾರಾಯಣ್ ಅವರು ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಜೆ‌ಸ್ಸಿ ಗಿಫ್ಟ್ ಅವರ ಸಂಗೀತ ನಿರ್ದೇಶನವಿದೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ,ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಸಂತು ಅವರ ನೃತ್ಯ ನಿರ್ದೇಶನವಿರುವ “ಪ್ರೊಡಕ್ಷನ್ ನಂ 1” ಚಿತ್ರದ ಪಿ.ಆರ್.ಓ ಆಗಿ ಸುಧೀಂದ್ರ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಬೆಣ್ಣೆ ನಗರಿಯಲ್ಲಿ ಕೋಟಿ ಉತ್ಸವ! ದಾವಣಗೆರೆಯಲ್ಲಿ ಡಾಲಿ ಅಬ್ಬರ

ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕೋಟಿ’ ಜೂನ್ 14ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.‌ ಈಗಾಗಲೇ ಚಿತ್ರದ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು, ಇದೇ ಬುಧವಾರ ‘ಕೋಟಿ’ಯ ಟ್ರೇಲರ್ ಬಿಡುಗಡೆಯಾಗಲಿದೆ.

‘ಕೋಟಿ’ಯ ಪ್ರಮೋಶನ್ ಸಲುವಾಗಿ ಡಾಲಿ ಧನಂಜಯ ದಾವಣಗೆರೆಗೆ ತೆರಳಿದ್ದರು. ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ‘ದವನ ಫೆಸ್ಟ್’ ಅತಿದೊಡ್ಡ ಕಾಲೇಜ್ ಫೆಸ್ಟಿವಲ್‌ಗಳಲ್ಲೊಂದು. ಇಲ್ಲಿಗೆ ಡಾಲಿ ಮುಖ್ಯ ಅತಿಥಿಯಾಗಿ ಬಂದಿದ್ದು ಅಭಿಮಾನಿಗಳನ್ನು ಖುಷಿಯ ಕಡಲಿನಲ್ಲಿ ತೇಲಿಸಿತ್ತು. ಸುಮಾರು ಐದು ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳು ಸೇರಿದ್ದ ಈ ಸಮಾರಂಭದಲ್ಲಿ ಡಾಲಿಯ ಜತೆ ಕೋಟಿಯ ನಾಯಕಿ ಮೋಕ್ಷಾ ಕುಶಾಲ್, ಸಹಕಲಾವಿದರಾದ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್ ಮತ್ತು ಅಭಿಷೇಕ್ ಶ್ರೀಕಾಂತ್ ಪಾಲ್ಗೊಂಡಿದ್ದರು.

ಡಾಲಿ ಧನಂಜಯ ‘ದವನ’ದ ವೇದಿಕೆಯ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಕೇಕೆ, ಕೂಗಾಟ ಮುಗಿಲ ಮುಟ್ಟಿತ್ತು. ‘ಕೋಟಿ’ ಒಬ್ಬ ಸಾಮಾನ್ಯ ಡ್ರೈವರ್‌. ಅವನಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. “ಇಲ್ಲಿ ಯಾರ್ಯಾರಿಗೆ ಕೋಟಿ ದುಡಿಯುವ ಆಸೆ ಇದೆ?” ಎಂದು ನೆರೆದಿದ್ದ ವಿಧ್ಯಾರ್ಥಿಗಳ ಕೇಳಿದ ಧನಂಜಯ ಎಲ್ಲರ ಉತ್ತರ ಕೇಳಿ, “ಕೋಟಿ ನಮ್ಮೆಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ” ಎಂದರು. ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ‘ಕೋಟಿ’ಯ ಟೀಸರ್ ಮತ್ತು ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಧನಂಜಯ್ ಕಾರ್ಯಕ್ರಮದಿಂದ ವಾಪಾಸು ಹೋಗುವವರೆಗೂ ಇಡೀ ಕಾಲೇಜಿನ‌ ಮೂಲೆಮೂಲೆಯಲ್ಲಿ ‘ಡಾಲಿ ಡಾಲಿ’ ಎಂಬ ಅಭಿಮಾನಿಗಳ‌ ಪ್ರೀತಿಯ ದನಿ ಮೊಳಗುತ್ತಿತ್ತು.

ಜೂನ್ 14 ರಂದು ಬಿಡುಗಡೆಗೆ ಸಿದ್ಧವಾಗಿರುವ ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಕಿಚ್ಚ ಜೊತೆ ಸಂದೇಶ್ ಪ್ರೊಡಕ್ಷನ್ಸ್: ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಸುದೀಪ್

ಕನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಈಗಾಗಲೇ ಸದಭಿರುಚಿಯ ಚಿತ್ರಗಳ ಜತೆಗೆ ಬಿಗ್‌ ಬಜೆಟ್‌ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ಘೋಸ್ಟ್‌” ಚಿತ್ರವೂ ಅದರಲ್ಲೊಂದು. ಇದೀಗ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಮತ್ತೊಂದು ಬಿಗ್‌ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಸಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜತೆಗೆ ಕೈ ಜೋಡಿಸಿದ್ದಾರೆ ನಿರ್ಮಾಪಕ ಎನ್‌. ಸಂದೇಶ್‌.

ಸಂದೇಶ್‌ ನಾಗರಾಜ್‌ ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಅವರ ಜತೆಗೆ ಸಂದೇಶ್‌ ನಾಗರಾಜ್ ಮತ್ತು ಎನ್ ಸಂದೇಶ್‌ ಅವರು ಒಟ್ಟಿಗೆ ಇರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎಂದೇ ಹೇಳಲಾಗಿತ್ತು. ಇದೀಗ ಆ ಊಹೆ ನಿಜವಾಗಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಸೆಟ್ಟೇರಲಿದೆ.

ಹಾಗಾದರೆ ಯಾವಾಗ ಶುರು? ಸದ್ಯಕ್ಕೆ ಕಿಚ್ಚ ಸುದೀಪ್‌ ಸಂದೇಶ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಯಾವಾಗ ಶುರು, ನಿರ್ದೇಶಕರು ಯಾರು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಈ ನಡುವೆ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ “ವುಲ್ಫ್” ಸಿನಿಮಾ ರೆಡಿಯಾಗಿದೆ.

ಸೃಜನ್‌ ಲೋಕೇಶ್‌ ಜತೆಗಿನ ಜಿಎಸ್‌ಟಿ ಚಿತ್ರದ ಶೂಟಿಂಗ್‌ ಕೆಲಸಗಳೂ ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜತೆಗೆ “ಘೋಸ್ಟ್‌ 2” ಅಥವಾ ಶಿವಣ್ಣನ ಜತೆಗಿನ “ದಳವಾಯಿ ಮುದ್ದಣ್ಣ”, “ಬೀರಬಲ್ 2” ಸಿನಿಮಾಗಳೂ ಸೆಟ್ಟೇರಲಿವೆ.

Categories
ಸಿನಿ ಸುದ್ದಿ

ಬೇಬೀಸ್: ಇದು ಮಹಿಳಾ ಪ್ರಧಾನ ಚಿತ್ರ: ಮರ್ಡರ್ ಮಿಸ್ಟ್ರಿ ಸಿನಿಮಾಗೆ ಚಾಲನೆ

ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರ ವಿರಳ ಎನ್ನಬಹುದು. ಇತ್ತೀಚೆಗೆ ಕೆಲ ಮಹಿಳಾ ತಂತ್ರಜ್ಞರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಂಥವರಲ್ಲಿ ಶ್ರೀಪಲ್ಲವಿ ಕೂಡ ಒಬ್ಬರು. ಇವರೊಂದು ಮಹಿಳಾ ಪ್ರಧಾನ
ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಾನ್ಸೆಪ್ಟ್ ಇಟ್ಟುಕೊಂಡು “ಕ್ಯಾನ್ಬೆರಿ ಬೇಬೀಸ್” ಎಂಬ ಚಿತ್ರವನ್ನು ನಿರ್ದೇಶನ ಮಾಡಹೊರಟಿದ್ದಾರೆ.

5 ಜನ ಯುವತಿಯರ ಸುತ್ತ ನಡೆಯುವ ಕಥೆ ಹೊಂದಿದ ಕ್ಯಾನ್ಬೆರಿ ಬೇಬೀಸ್ ಚಿತ್ರದ ಮುಹೂರ್ತ ಕಳೆದ ಗುರುವಾರ ಬೆಂಗಳೂರಿನ ಶ್ರೀ ಬಲಮುರಿ ಬಾಲಚಂದ್ರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ನಿರ್ದೇಶಕಿ ಶ್ರೀಪಲ್ಲವಿ, ನಾನು ಚಿತ್ರರಂಗಕ್ಕೆ ಬಂದು ಎಂಟು ವರ್ಷವಾಯ್ತು. ಕೆಲ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ನಂತರ ಮಾಯಾಜಾಲ ಎಂಬ ಸಿನಿಮಾ ಡೈರೆಕ್ಟ್ ಮಾಡಿದ್ದೆ. ಇದು ಎರಡನೇ ಚಿತ್ರ. ದೊಡ್ಡ ಕನಸಿಟ್ಟುಕೊಂಡು ಬೆಂಗಳೂರಿಗೆ ಬರುವ ಐವರು ಯುವತಿಯರು ಇಲ್ಲಿ ಬಂದಮೇಲೆ ಏನೆಲ್ಲ ತೊಂದರೆ ರಿಸ್ಕ್ ಗಳನ್ನು ಎದುರಿಸಿದರು ಎಂದು ಚಿತ್ರದಲ್ಲಿ ಹೇಳಿದ್ದೇವೆ. ಬೆಂಗಳೂರು ಸುತ್ತಮುತ್ತ 25ರಿಂದ 30 ದಿನಗಳ ಕಾಲ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ನಂತರ ಕಲಾವಿದರು ನಂದಿನಿಗೌಡ, ರಕ್ಷಾ,ಸಿಂಚನ ಶೆಟ್ಟಿ, ಸಂದೀಪ್ ಮಲಾನಿ, ಪ್ರಕಾಶ್, ಸುಶ್ಮಿತಾಗೌಡ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು. ಹಾಸ್ಯನಟ ವಿಜಯ್ ಚೆಂಡೂರ್ ಅವರು ಚಿತ್ರದ ಕಥೆಗೆ ಹೊಸ ತಿರುವು ಕೊಡುವ ಕಾನ್ಸ್ ಟೇಬಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮತ್ತೊಬ್ಬ ಹಿರಿಯ ನಟ, ಸಂಕಲನಕಾರ ನಾಗೇಂದ್ರ ಅರಸ್ ಈ ಚಿತ್ರದಲ್ಲಿ ಒಬ್ಬ ವಿಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡುತ್ತ ಪಲ್ಲವಿ ಅವರು ಒಳ್ಳೇ ಕಥೆ ಮಾಡಿಕೊಂಡಿದ್ದಾರೆ, ಅಲ್ಲದೆ ಅವರ ಪ್ರಯತ್ನಕ್ಕೆ ಸಪೋರ್ಟ್ ಮಾಡಬೇಕೆಂದು ಈ ಚಿತ್ರ ಒಪ್ಪಿದೆ. ಕನಸಿಟ್ಟುಕೊಂಡು ಬರುವ ಯುವತಿಯರು ತೊಂದರೆಯಲ್ಲಿದ್ದಾಗ ಅವರಿಗೆ ಸಹಾಯ ಮಾಡುವ ಸೈಂಟಿಸ್ಟ್ ಎಂದು ಹೇಳಿದರು.

ಇನ್ನು ಈ ಚಿತ್ರಕ್ಕೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಎಸ್.ನಾಗು ಅವರ ಸಂಗೀತವಿದ್ದು, ರಾಮ್ ನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಎಸ್.ಎಸ್.ಈಶ್ವರ್ ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ. ಆರ್ಯನ್ ರೋಷನ್ ಅವರ ಕೊರಿಯೋಗ್ರಫಿ, ಧನುಷ್ ಅವರ ಸಂಕಲನ, ವೀರೇಶ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಸವದತ್ತಿ ಎಲ್ಲಮ್ಮ ದೇವಿಯ ದರ್ಶನ ಪಡೆದ ಶಿವಣ್ಣ

ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಬೆಳಗಾವಿಯಲ್ಲಿ “ಉತ್ತರಕಾಂಡ” ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದ ಶಿವಣ್ಣನಿಗೆ ಈ ಕ್ಷೇತ್ರ ಅದೃಷ್ಟವಂತೆ. ಹಿಂದೆ “ಶ್ರೀರಾಮ್”, “ಮೈಲಾರಿ” ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳ ಪಾಲಿಗೂ ಸೌದತ್ತಿ ಎಲ್ಲಮ್ಮ ಅದೃಷ್ಟ ದೇವತೆ. ಹಾಗಾಗಿ “ಉತ್ತರಕಾಂಡ‌”ದ ಚಿತ್ರೀಕರಣದ ನಂತರ ಶಿವಣ್ಣ ತಾಯಿ‌ ಆಶಿರ್ವಾದವನ್ನು ಪಡೆದಿರುತ್ತಾರೆ.

ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ “ಉತ್ತರಕಾಂಡ” ರೋಹಿತ್ ಪದಕಿ ನಿರ್ದೇಶನದ ಬಹು ನಿರೀಕ್ಷಿತ ಆಕ್ಷನ್ ಡ್ರಾಮಾ ಚಿತ್ರವಾಗಿದೆ. ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ‌ ಧನಂಜಯ, ಐಶ್ವರ್ಯ ರಾಜೇಶ್,ಭಾವನಾ‌ ಮೆನನ್, ದಿಗಂತ್ ಮಂಚಾಲೆ, ರಂಗಾಯಣ ರಘು, ವಿಜಯ್ ಬಾಬು ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಬಾಲಿವುಡ್ ಹೆಸರಾಂತ ಗಾಯಕ,ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ.

Categories
ಸಿನಿ ಸುದ್ದಿ

ಡಾಲಿಯ ಕೋಟಿ ವಿತರಣೆ ಮಾಡಲು ರೆಡಿಯಾದ ಕೆಆರ್ ಜಿ ಸ್ಟುಡಿಯೋಸ್

ಡಾಲಿಯ ಕೋಟಿ ಸಿನಿಮಾ ಪ್ರಭೆ ಎಲ್ಲೆಡೆ ಹಬ್ಬಿಕೊಂಡಿದೆ. ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇರುವಾಗಲೇ ಈ ಸಿನಿಮಾದೆಡೆಗಿನ ಕ್ರೇಜ್ ಅಚ್ಚರಿದಾಯಕವಾಗಿ ವ್ಯಾಪಿಸಿಕೊಂಡಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ದಿನಕ್ಕೊಂದರಂತೆ ಹೊಸಾ ಬಗೆಯ ಸುದ್ದಿಗಳು ಕೋಟಿ ಬಳಗದಿಂದ ಕಡೆಯಿಂದ ಬರುತ್ತಲೇ ಇದ್ದಾವೆ. ಇದೀಗ ಕೋಟಿ ವಿತರಣಾ ಹಕ್ಕುಗಳು KRG ಸ್ಟುಡಿಯೋಸ್ ಪಾಲಾಗಿದೆ. ಸಿನಿಮಾ ಮೂಡಿ ಬಂದಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಲೇ, ಭರವಸೆಯಿಂದ ಸದರಿ ಸಂಸ್ಥೆ ಡಾಲಿ ಸಿನಿಮಾ ವಿತರಣಾ ಹಕ್ಕನ್ನು ತನ್ನದಾಗಿಸಿಕೊಂಡಿದೆ.

ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ವಿತರಣೆಯಲ್ಲಿ ಕೆಆರ್ ಜಿ ಸಂಸ್ಥೆ ಒಳ್ಳೆ ಹೆಸರು ಮಾಡಿದೆ. ಕೆಜಿಎಫ್ 1, ಕೆಜಿಎಫ್ 2, ಕಾಂತಾರ, ಚಾರ್ಲಿ 777, ಬಡವ ರಾಸ್ಕಲ್, ಪೈಲ್ವಾನ್, 12 ನೇ ಫೇಲ್, ಹನುಮಾನ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆಯ ಮೂಲಕವೇ ಬಿಡುಗಡೆಗೊಂಡಿದೆ. KRG ಸ್ಟುಡಿಯೋಸ್ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿದೆ. ಹಾಗೆಂದ ಮಾತ್ರಕ್ಕೆ, ಈ ಸಂಸ್ಥೆಯ ಕಡೆಯಿಂದ ಸಿನಿಮಾವೊಂದು ಬಿಡುಗಡೆಗೊಳ್ಳೋದು ಸಲೀಸಿನ ಸಂಗತಿಯಲ್ಲ. ಅದು ನಿಜಕ್ಕೂ ಪ್ರತಿಷ್ಠೆಯ ಸಂಗತಿ. ಯಾಕೆಂದರೆ, ಎಲ್ಲ ಬಗೆಯಲ್ಲಿಯೂ ಪರಿಪೂರ್ಣವಾಗಿರುವ, ಗೆಲುವಿನ ಲಕ್ಷಣಗಳನ್ನು ಹೊಂದಿರುವ ಚಿತ್ರಗಳನ್ನು ಮಾತ್ರವೇ ಈ ಸಂಸ್ಥೆ ತನ್ನಡಾಗಿಸಿಕೊಳ್ಳುತ್ತೆ. ಇದೀಗ ಕೋಟಿ ವಿತರಣಾ ಹಕ್ಕು ಕೆಆರ್ ಜಿ ಪಾಲಾಗಿರೋದೇ, ಈ ಚಿತ್ರದೆಡೆಗಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಕೋಟಿ ಸಿನಿಮಾವನ್ನು ಇಡೀ ಕೆಆರ್ ಜಿ ಬಳಗ ವೀಕ್ಷಣೆ ಮಾಡಿದೆ. ಭಾವನಾತ್ಮಕ ಎಳೆಯುಳ್ಳ ಈ ಚಿತ್ರ ಐಪಿಎಲ್ ಹಾಗೂ ಚುನಾವಣಾ ಬಳಿಕ ಇಡೀ ಫ್ಯಾಮಿಲಿಗೆ ಹೇಳಿ ಮಾಡಿಸಿದ ಪರಿಪೂರ್ಣವಾದ ಔತಣದಂತಿದೆ ಎಂದಿದೆ.

ಕೆಆರ್‌ಜಿ ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, “ಧನಂಜಯ್ ಅವರೊಂದಿಗಿನ ನಮ್ಮ ಸಂಬಂಧವು ‘ಕೋಟಿ’ ಮೂಲಕ ಮತ್ತಷ್ಟು ವಿಸ್ತರಿಸಿದೆ. ನಾನು ಸಿನಿಮಾ ನೋಡಿದೆ. ಪರಮೇಶ್ವರ್ ಗುಂಡ್ಕಲ್ ಅವರ ಬರವಣಿಗೆ ಹಾಗೂ ಚಿತ್ರಕಥೆ ಹೆಣೆದಿರುವ ಸೊಗಸನ್ನು ನೋಡಿ ಥ್ರಿಲ್ ಆಗಿದ್ದೇನೆ. ಈ ಚಿತ್ರವನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಈ ಅವಕಾಶವನ್ನು ನೀಡಿದ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರಿಗೆ ನಾನು ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.

ಕೋಟಿ ಕನ್ನಡದಲ್ಲಿ ಜಿಯೋ ಸ್ಟುಡಿಯೋಸ್ ಚೊಚ್ಚಲ ನಿರ್ಮಾಣವಾಗಿದ್ದು, ನಿರ್ದೇಶಕ ಪರಮ್ ಅವರ ನೇತೃತ್ವದಲ್ಲಿ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರವಾಗಿದೆ. ನಟರಾಕ್ಷಸ ಡಾಲಿ ಧನಂಜಯ, ರಮೇಶ್ ಇಂದಿರಾ, ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಪರಮ್ ಬರವಣಿಗೆ ಸಾರಥ್ಯದ ಕೋಟಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಟೀಸರ್ ಹಾಗೂ ಹಾಡುಗಳು ಹಿಟ್ ಲೀಸ್ಟ್ ಸೇರಿದ್ದು,, ಜೂನ್ 14 ರಿಂದ ಚಿತ್ರ ತೆರೆಗೆ ಬರಲಿದೆ.

Categories
ಸಿನಿ ಸುದ್ದಿ

ಬುಜ್ಜಿ- ಭೈರವ ಜುಗಲ್ ಬಂದಿ: ಅಮೇಜಾನ್ ಪ್ರೈಮ್ ನಲ್ಲಿ ಕಲ್ಕಿ ಸಿನಿಮಾದ ‘ಬಿ ಬಿ’ ಅನಿಮೇಷನ್‌ ಸೀರೀಸ್

2024 ರ ಭಾರತೀಯ ಮಹಾಕಾವ್ಯ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಲನಚಿತ್ರ ಹಾಗೂ ‘ಪ್ಯಾನ್‍ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್‍ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ. ಈವರೆಗೂ ಯಾರು ಮಾಡಿರದ ವಿನೂತನ ಪ್ರಯೋಗಕ್ಕೆ ಈ ಚಿತ್ರತಂಡ ಮುಂದಾಗಿದೆ‌.

ಪ್ರಭಾಸ್ ಈ ಚಿತ್ರದಲ್ಲಿ ಭೈರವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭೈರವನ ನಂಬಿಕಸ್ಥ ಗೆಳೆಯನಾಗಿ ಬುಜ್ಜಿ(ವಿಶೇಷ ಕಾರ್)ಪಾತ್ರವಿದೆ‌. ಈ ಎರಡು ಪಾತ್ರಗಳನಿಟ್ಟುಕೊಂಡು ಚಿತ್ರತಂಡ “B&B” ಎಂಬ ಹದಿನೈದು ಹದಿನೈದು ನಿಮಿಷಗಳ ಎರಡು ಅನಿಮೇಷನ್‌ ಸಿರೀಸ್ ಬಿಡುಗಡೆ ಮಾಡಿದೆ. ದೇಶದ ಪ್ರಮುಖ ನಗರಗಳ ಚಿತ್ರಮಂದಿರಗಳಲ್ಲಿ ಈ ಅನಿಮೇಷನ್‌ ಸಿರೀಸ್ ಏಕಕಾಲಕ್ಕೆ ಬಿಡುಗಡೆಯಾಗಿದೆ‌. ಈ ಎರಡು ಭಾಗಗಳು ಮೇ 31 ರಿಂದ ಅಮೇಜಾನ್ ಪ್ರೈಮ್ ನಲ್ಲಿ ನೋಡಲು ಲಭ್ಯವಿದೆ. ಈ ಅನಿಮೇಷನ್‌ ಸೀರಿಸ್ ನಲ್ಲಿರುವ ಭೈರವ ಹಾಗೂ ಬುಜ್ಜಿಯ ಜುಗಲ್ ಬಂದಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ಚಿತ್ರದ ಪ್ರಚಾರಕಷ್ಟೇ ಮಾಡಿರುವ ಅನಿಮೇಷನ್‌ ಸಿರೀಸ್. ಚಿತ್ರದ ಕಥೆಯೆ ಬೇರೆ. ಇದೇ ಬೇರೆ ಎಂದು ನಿರ್ದೇಶಕ ನಾಗ್ ಅಶ್ವಿನ್ ತಿಳಿಸಿದ್ದಾರೆ.

ಕಳೆದ ಅರ್ಧ ಶತಕದಿಂದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವೈಜಯಂತಿ ಮೂವೀಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದ್ದು, ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆ ಮಾಡುತ್ತಿದೆ.

ಬೆಂಗಳೂರಿನಲ್ಲೂ “ಕಲ್ಕಿ 2898 AD” ಚಿತ್ರದ ಅನಿಮೇಷನ್‌ ಸಿರೀಸ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆ.ವಿ.ಎನ್ ಪ್ರೊಡಕ್ಷನ್ ನ ಸುಪ್ರೀತ್ ಅವರು ಈ ಅನಿಮೇಷನ್‌ ಸಿರೀಸ್ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ‌‌. ಎರಡು ಭಾಗಗಳಲ್ಲಿ ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬಂದಿರುವ ಈ ಅನಿಮೇಷನ್‌ ಸಿರೀಸ್ ಅನ್ನು ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಿಸಬಹುದು ಎಂದರು.

ಈ ವರ್ಷದ ಬಹು ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

Categories
ಸಿನಿ ಸುದ್ದಿ

ಬ್ಯಾಕ್ ಬೆಂಚರ್ಸ್ ಹಾಡು ಬಂತು

ಕಾಲೇಜು ದಿನಮಾನದ ಕಥೆಗಳು ಕನ್ನಡದಲ್ಲಿ ಸಾಕಷ್ಟು ಬಂದಿದೆ. ಆದರೆ ಮನೋರಂಜನೆಯೇ ಪ್ರಮುಖವಾಗಿಟ್ಟಿಕೊಂಡು ಕಾಲೇಜು ದಿನಗಳ ಕಥೆಯೊಂದು ಕನ್ನಡದಲ್ಲಿ ಬರುತ್ತಿದೆ. ಅದೇ ” ಬ್ಯಾಕ್ ಬೆಂಚರ್ಸ್ “. ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಟ್ಟಿರುವ “ಬ್ಯಾಕ್ ಬೆಂಚರ್ಸ್” ಚಿತ್ರದ “ಯಲ್ಲೋ ಯಲ್ಲೋ” ಹಾಡು ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಯವಜನತೆಗೆ ಮುದ ನೀಡುವ ಈ ಹಾಡನ್ನು ನಕುಲ್ ಅಭಯಂಕರ್ ಹಾಡಿದ್ದಾರೆ. ಸಂಗೀತವನ್ನೂ ನಕುಲ್ ಅಭಯಂಕರ್ ಅವರೆ ನೀಡಿದ್ದಾರೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆಯ ನಂತರ “ಬ್ಯಾಕ್ ಬೆಂಚರ್ಸ್” ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಇದೊಂದು ಮನೋರಂಜನೆಯೇ ಪ್ರಮುಖವಾಗಿರುವ ಕಾಲೇಜು ಸ್ಟೋರಿ ಎಂದು ಮಾತನಾಡಿದ ನಿರ್ದೇಶಕ, ನಿರ್ಮಾಪಕ ಬಿ.ಆರ್ ರಾಜಶೇಖರ್, ಚಿತ್ರ ತೆರೆಗೆ ಬರಲು ಸಿದ್ದಾವಾಗಿದೆ‌.‌ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಮುಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಹೊಸಬರು. ಹೊಸತಂಡಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ನಿರ್ದೇಶಕ ರಾಜಶೇಖರ್ ಅವರು ನಮಗೆಲ್ಲಾ ನೀಡಿದ ಪ್ರೋತ್ಸಹ ಅಷ್ಟಿಷ್ಟಲ್ಲ. ನಮ್ಮಗೆಲ್ಲಾ ಇದು ಮೊದಲ ಚಿತ್ರ. ಆದರೆ ನಮಗೆ ನಟನೆ ಹೊಸತಲ್ಲ‌‌. ನಾವೆಲ್ಲ ನಟನೆ ಕಲಿತು ಬಂದಿರುವವರು. ಈಗ ಚಿತ್ರಮಂದಿರಕ್ಕೆ ಹೆಚ್ಚಾಗಿ ಜನರು ಬರುತ್ತಿಲ್ಲ. ಆ ಮಾತನ್ನು ಸುಳ್ಳು ಮಾಡುವ ಪ್ರಯತ್ನವನ್ನು ನಾವು ಮಾಡುತ್ತೇವೆ‌. ವಿನೂತನ ಪ್ರಚಾರ ಮಾಡುವ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ‌.

ಚಿತ್ರಮಂದಿರಕ್ಕೆ ಬಂದ ಮೇಲು ನಮ್ಮ ಚಿತ್ರ ನೀವು ಕೊಟ್ಟ ದುಡ್ಡಿಗೆ ಮೋಸ ಆಗುವುದಿಲ್ಲ ಎಂಬ ಭರವಸೆ ನೀಡುತ್ತೇವೆ ಎಂದು “ಬ್ಯಾಕ್ ಬೆಂಚರ್ಸ್ ” ಚಿತ್ರದಲ್ಲಿ ನಟಿಸಿರುವ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಮಾನ್ಯ ಗೌಡ, ಕುಂಕುಮ್ ಹೆಚ್, ಮನೋಜ್ ಶೆಟ್ಟಿ ಮುಂತಾದವರು ತಿಳಿಸಿದರು. ಛಾಯಾಗ್ರಾಹಕ ಮನೋಹರ್ ಜೋಶಿ “ಬ್ಯಾಕ್ ಬೆಂಚರ್ಸ್ ” ನ ಗುಣಗಾನ ಮಾಡಿದರು‌.

ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನವಿದೆ.

Categories
ಸಿನಿ ಸುದ್ದಿ

ಗೋವಾ ಗಲಾಟೆ: ಹಲ್ಲೆ ಮಾಡಿದ ಆಂತರ್ಯ ಸತೀಶ್ ಅಮಾನತು- ಫಿಲಂ ಚೇಂಬರ್ ನಿರ್ಧಾರ

ಗೋವಾಕ್ಕೆ ಪಾರ್ಟಿಗಾಗಿ ತೆರಳಿದ್ದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರ ನಡುವೆ ಗಲಾಟೆಯಲ್ಲಿ ನಿರ್ಮಾಪಕ ಎ. ಗಣೇಶ್‍ ಮೇಲೆ ದೈಹಿಕ ಹಲ್ಲೆ ಮಾಡಿದ್ದ ನಿರ್ಮಾಪಕ ಆಂತರ್ಯ ಸತೀಶ್‍ ಅವರನ್ನು ಅಮಾನತು ಮಾಡುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ. ಅಧ್ಯಕ್ಷರ ಈ ನಿರ್ಧಾರಕ್ಕೆ ನಿರ್ಮಾಪಕರ ಸಂಘ ಕೂಡ ಬೆಂಬಲಿಸಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಅಧ್ಯಕ್ಷ ಎನ್.ಎಮ್.ಸುರೇಶ್ ನೇತೃತ್ವದಲ್ಲಿ ಗೋವಾಗೆ ತೆರಳಿದ್ದರು. ರಾತ್ರಿ ಊಟದ ಸಮಯದಲ್ಲಿ ನಡೆದ ಗಲಾಟೆಯಲ್ಲಿ ನಿರ್ಮಾಪಕ ‘ರಥಾವರ ಮಂಜುನಾಥ್‍ ಮೇಲೆ ಆಂತರ್ಯ ಸತೀಶ್‍ ಜೋರಾದ ಜಗಳ ನಡೆದು, ಈ ವೇಳೆ ಸತೀಶ್ ಅವರು ಮಂಜುನಾಥ್‍ ಮೇಲೆ ಹಲ್ಲೆ ಮಾಡಿದ್ದಾರೆ. ಈ ಗಲಾಟೆ ಬಿಡಿಸಲು ಹೋದ ಗಣೇಶ್‍ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಊಟ ಮಾಡುವ ಟೇಬಲ್ ಮೇಲಿದ್ದ ಫೋರ್ಕ್‍ನಿಂದ ಗಣೇಶ್ ಅವರಿಗೆ ಚುಚ್ಚಿದ್ದರಿಂದ. ಗಣೇಶ್‍ ತೀವ್ರ ಗಾಯಗೊಂಡಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡಿರುವ, ಮಂಜುನಾಥ್‍ ಆಸ್ಪತ್ರೆಯಲ್ಲಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಸುದ್ದಿಗೋಷ್ಠಿ ನಡೆಸಿತು. ಗಾಯಗೊಂಡ ಎ. ಗಣೇಶ್‍ ಮಾತನಾಡಿ, ಊಟದ ವೇಳೆ ಏಕಾಏಕಿ ‘ಸತೀಶ್‍ ಮತ್ತು ಮಂಜುನಾಥ್‍ ನಡುವೆ ಗಲಾಟೆ ಆಯ್ತು. ಅದು ದೊಡ್ಡ ಹಂತಕ್ಕೆ ಹೋಯ್ತು. ಆಗ ನಾನು ತಕ್ಷಣ ಜಗಳ ಬಿಡಿಸಲು ಹೋದಾಗ ನನ್ನ ಮಲೆ ಹಲ್ಲೆ ನಡೆಸಿದರು. ಗಾಯಗೊಂಡು ರಕ್ತಸ್ರಾವ ಆಯ್ತು. ಕೂಡಲೇ ನಾನು ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಚಿಕಿತ್ಸೆ ಪಡೆದು, ಬೆಂಗಳೂರಿಗೆ ಬಂದೆ. ಇಲ್ಲಿ ಗೊತ್ತಿರುವ ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆ ಪಡೆದೆ.

ಗಲಾಟೆ ನಡೆದ ವಿಷಯಕ್ಕೆ ನಾನು ದೂರು‌ ನೀಡಲಿಲ್ಲ. ಈಗ ಮಂಡಳಿಯ ಸದಸ್ಯರ ಚರ್ಚೆ ಬಳಿಕ ದೂರು ನೀಡಲು ನಿರ್ಧರಿಸಿದ್ದೇನೆ ಎಂದರು.

ಈ ವಿಷಯಕ್ಕೆ‌ ಸಂಬಂಧಿಸಿದಂತೆ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರ ನೇತೃತ್ವದ ಸಮಿತಿ ರಚನೆಯಾಗಲಿದೆ. ಗದ್ದಲದ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿದೆ. ಇನ್ನು ಈ ಕೂಡಲೆ, ಸತೀಶ್‍ ಅವರನ್ನು ಅಮಾನತುಗೊಳಿಸಲಾಗುವುದು ಅಂತ ಅಧ್ಯಕ್ಷ ಎನ್‍.ಎಂ. ಸುರೇಶ್‍ ಸ್ಪಷ್ಟಪಡಿಸಿದ್ದಾರೆ.

error: Content is protected !!