ಬೇಬೀಸ್: ಇದು ಮಹಿಳಾ ಪ್ರಧಾನ ಚಿತ್ರ: ಮರ್ಡರ್ ಮಿಸ್ಟ್ರಿ ಸಿನಿಮಾಗೆ ಚಾಲನೆ

ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರ ವಿರಳ ಎನ್ನಬಹುದು. ಇತ್ತೀಚೆಗೆ ಕೆಲ ಮಹಿಳಾ ತಂತ್ರಜ್ಞರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅಂಥವರಲ್ಲಿ ಶ್ರೀಪಲ್ಲವಿ ಕೂಡ ಒಬ್ಬರು. ಇವರೊಂದು ಮಹಿಳಾ ಪ್ರಧಾನ
ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಾನ್ಸೆಪ್ಟ್ ಇಟ್ಟುಕೊಂಡು “ಕ್ಯಾನ್ಬೆರಿ ಬೇಬೀಸ್” ಎಂಬ ಚಿತ್ರವನ್ನು ನಿರ್ದೇಶನ ಮಾಡಹೊರಟಿದ್ದಾರೆ.

5 ಜನ ಯುವತಿಯರ ಸುತ್ತ ನಡೆಯುವ ಕಥೆ ಹೊಂದಿದ ಕ್ಯಾನ್ಬೆರಿ ಬೇಬೀಸ್ ಚಿತ್ರದ ಮುಹೂರ್ತ ಕಳೆದ ಗುರುವಾರ ಬೆಂಗಳೂರಿನ ಶ್ರೀ ಬಲಮುರಿ ಬಾಲಚಂದ್ರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ನಿರ್ದೇಶಕಿ ಶ್ರೀಪಲ್ಲವಿ, ನಾನು ಚಿತ್ರರಂಗಕ್ಕೆ ಬಂದು ಎಂಟು ವರ್ಷವಾಯ್ತು. ಕೆಲ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ನಂತರ ಮಾಯಾಜಾಲ ಎಂಬ ಸಿನಿಮಾ ಡೈರೆಕ್ಟ್ ಮಾಡಿದ್ದೆ. ಇದು ಎರಡನೇ ಚಿತ್ರ. ದೊಡ್ಡ ಕನಸಿಟ್ಟುಕೊಂಡು ಬೆಂಗಳೂರಿಗೆ ಬರುವ ಐವರು ಯುವತಿಯರು ಇಲ್ಲಿ ಬಂದಮೇಲೆ ಏನೆಲ್ಲ ತೊಂದರೆ ರಿಸ್ಕ್ ಗಳನ್ನು ಎದುರಿಸಿದರು ಎಂದು ಚಿತ್ರದಲ್ಲಿ ಹೇಳಿದ್ದೇವೆ. ಬೆಂಗಳೂರು ಸುತ್ತಮುತ್ತ 25ರಿಂದ 30 ದಿನಗಳ ಕಾಲ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ನಂತರ ಕಲಾವಿದರು ನಂದಿನಿಗೌಡ, ರಕ್ಷಾ,ಸಿಂಚನ ಶೆಟ್ಟಿ, ಸಂದೀಪ್ ಮಲಾನಿ, ಪ್ರಕಾಶ್, ಸುಶ್ಮಿತಾಗೌಡ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು. ಹಾಸ್ಯನಟ ವಿಜಯ್ ಚೆಂಡೂರ್ ಅವರು ಚಿತ್ರದ ಕಥೆಗೆ ಹೊಸ ತಿರುವು ಕೊಡುವ ಕಾನ್ಸ್ ಟೇಬಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮತ್ತೊಬ್ಬ ಹಿರಿಯ ನಟ, ಸಂಕಲನಕಾರ ನಾಗೇಂದ್ರ ಅರಸ್ ಈ ಚಿತ್ರದಲ್ಲಿ ಒಬ್ಬ ವಿಜ್ಞಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡುತ್ತ ಪಲ್ಲವಿ ಅವರು ಒಳ್ಳೇ ಕಥೆ ಮಾಡಿಕೊಂಡಿದ್ದಾರೆ, ಅಲ್ಲದೆ ಅವರ ಪ್ರಯತ್ನಕ್ಕೆ ಸಪೋರ್ಟ್ ಮಾಡಬೇಕೆಂದು ಈ ಚಿತ್ರ ಒಪ್ಪಿದೆ. ಕನಸಿಟ್ಟುಕೊಂಡು ಬರುವ ಯುವತಿಯರು ತೊಂದರೆಯಲ್ಲಿದ್ದಾಗ ಅವರಿಗೆ ಸಹಾಯ ಮಾಡುವ ಸೈಂಟಿಸ್ಟ್ ಎಂದು ಹೇಳಿದರು.

ಇನ್ನು ಈ ಚಿತ್ರಕ್ಕೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಎಸ್.ನಾಗು ಅವರ ಸಂಗೀತವಿದ್ದು, ರಾಮ್ ನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಎಸ್.ಎಸ್.ಈಶ್ವರ್ ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ. ಆರ್ಯನ್ ರೋಷನ್ ಅವರ ಕೊರಿಯೋಗ್ರಫಿ, ಧನುಷ್ ಅವರ ಸಂಕಲನ, ವೀರೇಶ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

Related Posts

error: Content is protected !!