ಡಾಲಿಯ ಕೋಟಿ ವಿತರಣೆ ಮಾಡಲು ರೆಡಿಯಾದ ಕೆಆರ್ ಜಿ ಸ್ಟುಡಿಯೋಸ್

ಡಾಲಿಯ ಕೋಟಿ ಸಿನಿಮಾ ಪ್ರಭೆ ಎಲ್ಲೆಡೆ ಹಬ್ಬಿಕೊಂಡಿದೆ. ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇರುವಾಗಲೇ ಈ ಸಿನಿಮಾದೆಡೆಗಿನ ಕ್ರೇಜ್ ಅಚ್ಚರಿದಾಯಕವಾಗಿ ವ್ಯಾಪಿಸಿಕೊಂಡಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ದಿನಕ್ಕೊಂದರಂತೆ ಹೊಸಾ ಬಗೆಯ ಸುದ್ದಿಗಳು ಕೋಟಿ ಬಳಗದಿಂದ ಕಡೆಯಿಂದ ಬರುತ್ತಲೇ ಇದ್ದಾವೆ. ಇದೀಗ ಕೋಟಿ ವಿತರಣಾ ಹಕ್ಕುಗಳು KRG ಸ್ಟುಡಿಯೋಸ್ ಪಾಲಾಗಿದೆ. ಸಿನಿಮಾ ಮೂಡಿ ಬಂದಿರುವ ರೀತಿಯನ್ನು ಮೆಚ್ಚಿಕೊಳ್ಳುತ್ತಲೇ, ಭರವಸೆಯಿಂದ ಸದರಿ ಸಂಸ್ಥೆ ಡಾಲಿ ಸಿನಿಮಾ ವಿತರಣಾ ಹಕ್ಕನ್ನು ತನ್ನದಾಗಿಸಿಕೊಂಡಿದೆ.

ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ವಿತರಣೆಯಲ್ಲಿ ಕೆಆರ್ ಜಿ ಸಂಸ್ಥೆ ಒಳ್ಳೆ ಹೆಸರು ಮಾಡಿದೆ. ಕೆಜಿಎಫ್ 1, ಕೆಜಿಎಫ್ 2, ಕಾಂತಾರ, ಚಾರ್ಲಿ 777, ಬಡವ ರಾಸ್ಕಲ್, ಪೈಲ್ವಾನ್, 12 ನೇ ಫೇಲ್, ಹನುಮಾನ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆಯ ಮೂಲಕವೇ ಬಿಡುಗಡೆಗೊಂಡಿದೆ. KRG ಸ್ಟುಡಿಯೋಸ್ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಿಸಿದೆ. ಹಾಗೆಂದ ಮಾತ್ರಕ್ಕೆ, ಈ ಸಂಸ್ಥೆಯ ಕಡೆಯಿಂದ ಸಿನಿಮಾವೊಂದು ಬಿಡುಗಡೆಗೊಳ್ಳೋದು ಸಲೀಸಿನ ಸಂಗತಿಯಲ್ಲ. ಅದು ನಿಜಕ್ಕೂ ಪ್ರತಿಷ್ಠೆಯ ಸಂಗತಿ. ಯಾಕೆಂದರೆ, ಎಲ್ಲ ಬಗೆಯಲ್ಲಿಯೂ ಪರಿಪೂರ್ಣವಾಗಿರುವ, ಗೆಲುವಿನ ಲಕ್ಷಣಗಳನ್ನು ಹೊಂದಿರುವ ಚಿತ್ರಗಳನ್ನು ಮಾತ್ರವೇ ಈ ಸಂಸ್ಥೆ ತನ್ನಡಾಗಿಸಿಕೊಳ್ಳುತ್ತೆ. ಇದೀಗ ಕೋಟಿ ವಿತರಣಾ ಹಕ್ಕು ಕೆಆರ್ ಜಿ ಪಾಲಾಗಿರೋದೇ, ಈ ಚಿತ್ರದೆಡೆಗಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಕೋಟಿ ಸಿನಿಮಾವನ್ನು ಇಡೀ ಕೆಆರ್ ಜಿ ಬಳಗ ವೀಕ್ಷಣೆ ಮಾಡಿದೆ. ಭಾವನಾತ್ಮಕ ಎಳೆಯುಳ್ಳ ಈ ಚಿತ್ರ ಐಪಿಎಲ್ ಹಾಗೂ ಚುನಾವಣಾ ಬಳಿಕ ಇಡೀ ಫ್ಯಾಮಿಲಿಗೆ ಹೇಳಿ ಮಾಡಿಸಿದ ಪರಿಪೂರ್ಣವಾದ ಔತಣದಂತಿದೆ ಎಂದಿದೆ.

ಕೆಆರ್‌ಜಿ ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, “ಧನಂಜಯ್ ಅವರೊಂದಿಗಿನ ನಮ್ಮ ಸಂಬಂಧವು ‘ಕೋಟಿ’ ಮೂಲಕ ಮತ್ತಷ್ಟು ವಿಸ್ತರಿಸಿದೆ. ನಾನು ಸಿನಿಮಾ ನೋಡಿದೆ. ಪರಮೇಶ್ವರ್ ಗುಂಡ್ಕಲ್ ಅವರ ಬರವಣಿಗೆ ಹಾಗೂ ಚಿತ್ರಕಥೆ ಹೆಣೆದಿರುವ ಸೊಗಸನ್ನು ನೋಡಿ ಥ್ರಿಲ್ ಆಗಿದ್ದೇನೆ. ಈ ಚಿತ್ರವನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. 250ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಈ ಅವಕಾಶವನ್ನು ನೀಡಿದ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರಿಗೆ ನಾನು ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದಿದ್ದಾರೆ.

ಕೋಟಿ ಕನ್ನಡದಲ್ಲಿ ಜಿಯೋ ಸ್ಟುಡಿಯೋಸ್ ಚೊಚ್ಚಲ ನಿರ್ಮಾಣವಾಗಿದ್ದು, ನಿರ್ದೇಶಕ ಪರಮ್ ಅವರ ನೇತೃತ್ವದಲ್ಲಿ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರವಾಗಿದೆ. ನಟರಾಕ್ಷಸ ಡಾಲಿ ಧನಂಜಯ, ರಮೇಶ್ ಇಂದಿರಾ, ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಪರಮ್ ಬರವಣಿಗೆ ಸಾರಥ್ಯದ ಕೋಟಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಟೀಸರ್ ಹಾಗೂ ಹಾಡುಗಳು ಹಿಟ್ ಲೀಸ್ಟ್ ಸೇರಿದ್ದು,, ಜೂನ್ 14 ರಿಂದ ಚಿತ್ರ ತೆರೆಗೆ ಬರಲಿದೆ.

Related Posts

error: Content is protected !!