ರಾಮಾ ರಾಮಾ ರೇ ಸಿನಿಮಾ ಮೂಲಕ ಸುದ್ದಿಯಾದ ಹಾಸ್ಯ ಕಲಾವಿದ ಧರ್ಮಣ್ಣ ಕಡೂರು, ಇತ್ತೀಚೆಗೆ ರಾಜಯೋಗ ಸಿನಿಮಾ ಮೂಲಕ ಜೋರು ಸದ್ದು ಮಾಡಿದ್ದರು. ಈ ಸಿನಿಮಾದಲ್ಲಿ ಧರ್ಮಣ್ಣ ಪ್ರಮುಖ ಆಕರ್ಷಣೆಯಾಗಿದ್ದರು. ಅದಕ್ಕೂ ಮುನ್ನ ಧರ್ಮಣ್ಣ ಒಂದಷ್ಟು ಸಿನಿಮಾಗಳಲ್ಲಿ ಅವರು ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಮೂಲತಃ ಅವರು ಗ್ರಾಮೀಣ ಭಾಗದ ಪ್ರತಿಭೆ. ಅದರಲ್ಲೂ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಯಾವುದೇ ಸಿನಿಮಾ ಮಾಡಿದರೂ ಧರ್ಮಣ್ಣ ಪಾತ್ರಕ್ಕೆ ಜೀವ ತುಂಬುವ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಇದೀಗ ಧರ್ಮಣ್ಣ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
ಅಂದಹಾಗೆ, ಧರ್ಮಣ್ಣ ಒಪ್ಪಿಕೊಂಡ ಸಿನಿಮಾಗೆ ಹಂಪಿ ಎಕ್ಸ್ ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಚಿತ್ರದ ಶೀರ್ಷಿಕೆಯನ್ನು ನಿರ್ದೇಶಕ ಯೋಗರಾಜ ಭಟ್ ಅವರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಿನಿಮಾಗೆ ಮುಹೂರ್ತ ಕೂಡ ನೆರವೇರಿದೆ. ಇನ್ನು ಈ ಚಿತ್ರವನ್ನು ಪಾಟೀಲ್ ಲಿಂಗನಗೌಡ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಕಥೆ ಚಿತ್ರಕಥೆಯೂ ಅವರದೆ. ಹಂಪಿ ಟಾಕೀಸ್ ಬಳಗ ಬ್ಯಾನರ್ ಮೂಲಕ ಸಿನಿಮಾ ತಯಾರಾಗುತ್ತಿದ. ಮನ್ ಪ್ರಸಾದ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ.
ಧರ್ಮಣ್ಣ ಕಡೂರು ಅವರ ಜೊತೆ ಪದ್ಮಶ್ರಿ ಪುರಸ್ಕೃತರಾದ ಮಂಜಮ್ಮ ಜೋಗತಿ, ಮಹಾಂತೇಶ್ ಹಿರೇಮಠ್, ರಂಜಿತಾ ಪುಟ್ಟಸ್ವಾಮಿ, ರಾಮ್ ನಾಡಗೌಡ, ಇತರರು ನಟಿಸುತ್ತಿದ್ದಾರೆ. ಚಂದನ್ ಮೂರ್ತಿ ಅವರ ಕಲಾನಿರ್ದೇಶನವಿದೆ. ಯರ್ರಿ ಸ್ವಾಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಪ್ರಸನ್ನ ಕುಮಾರ್, ಸಂತೋಷ್ ಕುಮಾರ್, ಪ್ರವೀಣ್ ಶೆಟ್ಟಿ, ಕಾರ್ತಿಕ್ ಹರಪನಹಳ್ಳಿ ಇವರು ಸಹ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.
ಆರ್ ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ” ದೇಶಾದ್ಯಂತ ಜನಮನ್ನಣೆ ಪಡೆದಿತ್ತು. ಈಗ ಈ ಚಿತ್ರವನ್ನು ನಿರ್ಮಿಸಿದ್ದ ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆ ಅತೀ ಹೆಚ್ಚು ತೆರಿಗೆ ಪಾವತಿಸಿದ ಕೀರ್ತಿಗೆ ಭಾಜನವಾಗಿದೆ. ದಾಖಲೆ ಮೊತ್ತದ ಹಣವನ್ನು “ಕಬ್ಜ” ಚಿತ್ರದ ಸಲುವಾಗಿ ಆರ್ ಚಂದ್ರು ಕೇಂದ್ರ ತೆರಿಗೆ ಇಲಾಖೆಗೆ ಪಾವತಿಸಿದ್ದಾರೆ. ಯಾವುದೇ ತೆರಿಗೆ ಉಳಿಸಿಕೊಳ್ಳದೇ ಅಧಿಕ ಮೊತ್ತದ ತೆರಿಗೆಯನ್ನು ಪಾವತಿಸಿರುವುದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸಾ ಪತ್ರ ಕೂಡ ದೊರಕಿದೆ. ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಪಾವತಿಸಿದ ಸಾಲಿಗೆ ಕನ್ನಡದ “ಕಬ್ಜ” ಚಿತ್ರ ಸೇರಿದೆ.
ಇತ್ತೀಚೆಗೆ ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ ಸಮಾರಂಭದಲ್ಲಿ ಅತ್ಯುತ್ತಮ ವಿಎಫ್ಎಕ್ಸ್ ಪೋಸ್ಟ್ ಪ್ರೊಡಕ್ಷನ್ ಹಾಗೂ ಅನ್ನಿಮೇಷನ್ ಚಿತ್ರ ಪ್ರಶಸ್ತಿಗೆ “ಕಬ್ಜ” ಚಿತ್ರ ಭಾಜನವಾಗಿದೆ.
ಈ ಎಲ್ಲಾ ಖುಷಿಯ ವಿಚಾರಗಳ ನಡುವೆ ಆರ್ ಚಂದ್ರು ಅವರ ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಐದು ಚಿತ್ರಗಳಲ್ಲಿ ಒಂದಾದ ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರೈ ಮುಂತಾದವರು ನಟಿಸುತ್ತಿರುವ “ಫಾದರ್” ಚಿತ್ರಕ್ಕೆ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆ.
ಉತ್ತಮ ಸಂದೇಶವಿರುವ ‘ಸಂಭವಾಮಿ ಯುಗೇ ಯುಗೇ’ ಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುವುದರ ಮೂಲಕ ಪ್ರೋತ್ಸಾಹಿಸಿ. ಇದು ಚಿತ್ರತಂಡದ ಮನವಿ.
ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ “ಸಂಭಾವಮಿ ಯುಗೇಯುಗೇ” ಚಿತ್ರ ಇತ್ತೀಚಿಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ನಿರೀಕ್ಷಿಸಿದಷ್ಟು ಜನರು ಚಿತ್ರ ನೋಡುತ್ತಿಲ್ಲ ಎಂಬ ಬೇಸರ ಚಿತ್ರತಂಡಕ್ಕಿದೆ.
ಪಕ್ಕಾ ಗ್ರಾಮೀಣ ಶೈಲಿಯ, ಉತ್ತಮ ಕಥಾಹಂದರ ಹೊಂದಿರುವ ನಮ್ಮ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ. ಆದರೆ ನಾವು ನಿರೀಕ್ಷಿಸಿದಷ್ಟು ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆ ಬಗ್ಗೆ ಬೇಸರವಿದೆ. ಆದರೆ ಈವರೆಗೂ ನಮ್ಮ ಚಿತ್ರ ನೋಡಿದವರು ಚಿತ್ರದ ಕುರಿತು ಆಡುತ್ತಿರುವ ಒಳ್ಳೆಯ ಮಾತುಗಳು ಖುಷಿ ಕೊಟ್ಟಿದೆ. ಕರ್ನಾಟಕದಾದ್ಯಂತ ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಿತ್ರವನ್ನು ನೋಡುವುದರ ಮೂಲಕ ಹೊಸತಂಡದ ಹೊಸಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ.
ಹೊಸ ನಾಯಕನ ಮೊದಲ ಚಿತ್ರಕ್ಕೆ ಹೆಚ್ಚು ಜನ ಚಿತ್ರಮಂದಿರಕ್ಕೆ ಬರುವುದಿಲ್ಲ ಎನ್ನುತ್ತಾರೆ. ಆದರೆ ನನ್ನ ಮೊದಲ ಚಿತ್ರದ ಬಿಡುಗಡೆಯ ದಿನ ಅಧಿಕ ಸಂಖ್ಯೆಯ ಜನರು ಬಂದು ವೀಕ್ಷಿಸಿ ಪ್ರೋತ್ಸಾಹ ನೀಡಿದರು. ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯವಿದ್ದರೂ, ಆನಂತರದ ದಿನಗಳಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಿತ್ರವನ್ನು ನೋಡುವುದರ ಮೂಲಕ ಉತ್ತೇಜನ ನೀಡಬೇಕೆಂದರು ನಾಯಕ ಜಯ್ ಶೆಟ್ಟಿ.
ಚಿತ್ರದಲ್ಲಿ ನಟಿಸುರುವ ಮಧುರ ಗೌಡ, ಭಜರಂಗಿ ಪ್ರಸನ್ನ, ವೆಂಕಟೇಶ್ ಪ್ರಸಾದ್ ಹಾಗೂ ಛಾಯಾಗ್ರಾಹಕ ರಾಜು ಹೆಮ್ಮಿಗೆಪುರ ಮೊದಲಾದವರು ಚಿತ್ರವನ್ನು ಹೆಚ್ಚಿನ ಜನರು ನೋಡುವ ಮೂಲಕ ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.
ಗೋಶಾಲೆಗಳ ಉಳಿವಿಗಾಗಿ ಮತ್ತು ಗೋವುಗಳ ಸಂರಕ್ಷಣೆಗಾಗಿ ದೇಣಿಗೆ ನೀಡುವಂತ ಪುಣ್ಯದ ಕೆಲಸ ಮಾಡುವ ಮೂಲಕ ಮಹೇಂದ್ರ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ʼತಾಯಿಯ ಋಣವನ್ನು ತೀರಿಸಲು ಅಸಾಧ್ಯ. ಆದರೆ ತಾಯಿಯಂತೆ ನಮ್ಮನ್ನು ಪೊರೆಯುವ ಗೋಮಾತೆಯ ಋಣವನ್ನು ತೀರಿಸಲು ಖಂಡಿತಾ ಸಾಧ್ಯʼ ಎನ್ನುತ್ತಾರೆ ಬೆಂಗಳೂರಿನ ವಿಜಯನಗರ ಮಾರುತಿ ಮೆಡಿಕಲ್ಸ್‌ನ ಗೋಸೇವಕ ಮಹೇಂದ್ರ ಮನ್ನೋತ್.
ತಮ್ಮ ವ್ಯಾಪಾರದಲ್ಲಿ ಸಂಗ್ರಹಿಸಿದ ಬಹುಪಾಲು ಹಣವನ್ನು ಗೋವುಗಳ ರಕ್ಷಣೆಗೆ ಪಾಲನೆಗಾಗಿ ವ್ಯಯಿಸುತ್ತಿರುವ ಕುಟುಂಬವೆಂದರೆ ಅದು ಈ ಮಹೇಂದ್ರ ಮನ್ನೋತ್ ರವರ ಕುಟುಂಬ. ಕಳೆದ ಹದಿನಾಲ್ಕು ವರ್ಷಗಳಿಂದ ಪ್ರತೀ ವರ್ಷ ಗೋಶಾಲೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ನೀಡುತ್ತಾರೆ. ಈ ವರ್ಷ ಅವರು ನಾಡಿನ ವಿವಿಧ ಗೋಶಾಲೆಗಳಿಗೆ 51 ಲಕ್ಷ ರೂಪಾಯಿಗಳನ್ನು ದಾನ ಮಾಡಿದ್ದಾರೆ. ಗೋಶಾಲೆಗಳಿಗೆ ಅಗತ್ಯಗಳ ತಕ್ಕಂತೆ ಹಣವನ್ನು ಒದಗಿಸಲಾಗಿದೆ.
ಇದರ ಹಿಂದಿನ ಕುತೂಹಲಕಾರಿ ಅಂಶವೆಂದರೆ ನಾಡಿನಲ್ಲಿ ಅಕ್ರಮವಾಗಿ ಸಾಗಿಸಲ್ಪಡುವ ಗೋವುಗಳನ್ನು ಕಾನೂನಾತ್ಮಕವಾಗಿ ರಕ್ಷಿಸಿದ ನಂತರ ಆ ಗೋವುಗಳನ್ನು ಈ ಗೋಶಾಲೆಗಳಿಗೆ ತಂದು ಬಿಡಲಾಗುತ್ತದೆ. ಅಂತಹ ಗೋವುಗಳನ್ನು ಪೊರೆಯಲು ಗೋಶಾಲೆಗಳಿಗೆ ಆರ್ಥಿಕ ಶಕ್ತಿಬೇಕಲ್ಲವೇ ?
ಅಂಥ ಶಕ್ತಿಯನ್ನು ತುಂಬವ ಕೆಲಸವನ್ನು ಮಹೇಂದ್ರ ಮುನ್ನೋತ್ ಅವರು ತಮ್ಮ ಮಾತಾಪಿತೃಗಳ ಪುಣ್ಯಸ್ಮರಣೆಯ ಹೆಸರಿನಲ್ಲಿ ಈ ಸೇವೆಯನ್ನು ಈ ಕುಟುಂಬವು ಮಾಡಿಕೊಂಡು ಬಂದಿದೆ.
ಕನಕಪುರ ರಸ್ತೆಯ ದಿಣ್ಣೆಪಾಳ್ಯದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ 20ಕ್ಕೂ ಹೆಚ್ಚು ಗೋಶಾಲೆಯ ಮುಖ್ಯಸ್ಥರನ್ನು ಆಹ್ವಾನಿಸಿ ಅವರಿಗೆ ಚೆಕ್ ರೂಪದಲ್ಲಿ ಹಣವನ್ನು ನೀಡಲಾಗಿದೆ. ಇವರೊಂದಿಗೆ ಮಹೇಂದ್ರ ಅವರ ಧರ್ಮಪತ್ನಿ ಸುರಕ್ಷಾ ಅಲ್ಲದೇ ಇಡೀ ಕುಟುಂಬ ಹಾಜರಿದ್ದು ವೃಕ್ಷಾರೋಹಣ ಹೆಸರಿನಲ್ಲಿ ಗೋಶಾಲೆಯಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರೊಂದಿಗೆ ಗೋಪೂಜೆಯನ್ನೂ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯವನ್ನೂದ್ದೇಶಿಸಿ ಮಾತನಾಡಿದ ಮಹೇಂದ್ರ ಮನ್ನೋತ್ “ನಮ್ಮ ತಂದೆತಾಯಿಯ ಋಣವನ್ನು ನಾವುಗಳು ತೀರಿಸಲು ಅಸಾಧ್ಯ. ಆದರೆ ಜೀವನಪೂರ್ತಿ ಪಂಚಾಮೃತವನ್ನು ನೀಡುವ ಗೋಮಾತೆಯ ಋಣವನ್ನು ಖಂಡಿತಾ ತೀರಿಸಬಹುದು. ಅಲ್ಲದೇ ಗೋವು ಎಂಬುದು ನಮ್ಮ ಸನಾತನ ಪರಂಪರೆಯ ದೈವೀಮೂರ್ತಿ ಮಾತ್ರವಲ್ಲ ಒಂದು ರೀತಿಯ ಪಾಪನಾಶಿನಿ.
ಅಲ್ಲದೇ ಭಾರತೀಯ ಕೃಷಿ ವ್ಯವಸ್ಥೆಯ ಮಹಾಪಾತ್ರ ಮತ್ತು ಅನ್ನದಾತನ ಜೀವಬಂಧು. ಅಂತಹ ಗೋವನ್ನು ಉಳಿಸಿದರೆ ಬರಿಯ ಗ್ರಾಮ ಮಾತ್ರವಲ್ಲ ಇಡೀ ದೇಶ ಸಂವೃದ್ಧಿ ಸಂಪದ್ಭರಿತ ಭೂಮಿಯಾಗುತ್ತದೆ. ಈ ನಂಬಿಕೆಯನ್ನು ಪ್ರತಿಯೊಬ್ಬ ಭಾರತೀಯನೂ ಅರ್ಥೈಸಿಕೊಳ್ಳಬೇಕಿದೆ” ಎಂದರು.
ಹಿರಿಯನಟ ಆಭಿಜಿತ್ ಹಾಗೂ ನಾಗರಾಜು ಪ್ರಮುಖಪಾತ್ರದಲ್ಲಿ ನಟಿಸಿರುವ “ಅಡವಿಕಟ್ಟೆ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಕಾಂಗ್ರೆಸ್ ಮುಖಂಡರಾದ ಡಿ.ಕೆ.ಸುರೇಶ್ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿದರು. ಇದು ಉಮ ಎಸ್ ನಿರ್ಮಾಣದ ಚಿತ್ರ. ಸಂಜೀವ್ ಗಾವಂಡಿ ನಿರ್ದೇಶನ ಮಾಡಿದ್ದಾರೆ.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಿ.ಕೆ.ಸುರೇಶ್ ಅವರು, ಕನ್ನಡದಲ್ಲಿ ಸಾಕಷ್ಟು ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳು ಬರುತ್ತಿದೆ. ಆ ಸಾಲಿಗೆ ಈ ಚಿತ್ರ ಕೂಡ ಸೇರಲಿದೆ ಎಂದು ನನಗೆ ಟ್ರೇಲರ್ ನೋಡಿದಾಗ ಅನಿಸಿತು. ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಚಿತ್ರದಲ್ಲಿ ನನ್ನದು ವಿಶೇಷ ಪಾತ್ರ. ಚಿತ್ರ ನೋಡಿದಾಗ ನಿಮಗೂ ನನ್ನ ಪಾತ್ರ ಇಷ್ಟವಾಗುತ್ತದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಡಿ.ಕೆ.ಸುರೇಶ್ ಅವರಿಗೆ ಧನ್ಯವಾದ ಎಂದರು ಹಿರಿಯ ನಟ ಅಭಿಜಿತ್.
ನಾನು ಕನಕಪುರದ ಹತ್ತಿರದ ಹಳ್ಳಿಯಿಂದ ಬಡ ಕುಟುಂಬದಿಂದ ಬಂದವನು. ಸಿನಿಮಾದಲ್ಲಿ ನಟಿಸುವುದು ನನ್ನ ಆಸೆಯಾಗಿತ್ತು. ಅದು ಈಗ ನನಸ್ಸಾಗಿದೆ. ನಮ್ಮ ಚಿತ್ರದ ಟ್ರೇಲರ್ ಅನ್ನು ಡಿ.ಕೆ.ಸುರೇಶ್ ಅವರು ಬಿಡುಗಡೆ ಮಾಡಿಕೊಟ್ಟಿದ್ದು ನನಗೆ ಬಹಳ ಸಂತೋಷವಾಗಿದೆ. ಅವರಿಗೆ ಅನಂತ ಧನ್ಯವಾದ ಎಂದರು ಪ್ರಮುಖ ಪಾತ್ರಧಾರಿ ನಾಗರಾಜು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಹಾರಾರ್ ಜಾನಾರ್ ನ ಚಿತ್ರ. ಕನ್ನಡದಲ್ಲಿ ಸಾಕಷ್ಟು ಈ ಜಾನರ್ ನ ಚಿತ್ರ ಬಂದಿದೆಯಾದರೂ ಇದು ವಿಭಿನ್ನ. ಚಿತ್ರದ ಹೆಸರೆ ಹೇಳುವಂತೆ ಇದೊಂದು ಇದು ಅಡವಿ ಅಂದರೆ ಕಾಡಿನಲ್ಲಿ ನಡೆಯುವ ಕಥೆ. ಗೋಕಾಕ್ ನಗರದ ಸುತ್ತಮುತ್ತ ಹೆಚ್ಚಿನ ಚಿತ್ರೀಕರ ನಡೆದಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಂಜೀವ್ ಗಾವಂಡಿ.
ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ನಿರ್ಮಾಪಕಿ ಉಮಾ ಧನ್ಯವಾದ ತಿಳಿಸಿದರು. ನಟಿಯರಾದ ಶಾಂತಿ, ಮಂಜುಳ ಹಾಗೂ ವಿತರಕ ಶ್ರೀಧರ್ ಚಿತ್ರದ ಕುರಿತು ಮಾತನಾಡಿದರು.
ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ “ಗೌರಿ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್ 15 ಸ್ವತಂತ್ರ ದಿನಾಚರಣೆ ದಿನ ಹಾಗೂ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.
ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಇಂದ್ರಜಿತ್ ಲಂಕೇಶ್ ಅವರು ರಾಜಾಜಿನಗರದ ವಿದ್ಯಾವಿಹಾರ (ಎಂ ಇ ಎಸ್ ಮ್ಯಾನೇಜ್ಮೆಂಟ್) ಕಾಲೇಜಿನಲ್ಲಿ ಅದ್ದೂರಿ ಸಮಾರಂಭ ಆಯೋಜಿಸಿದ್ದರು. ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಸಮಾರಂಭಕ್ಕೆ ಸಾಕ್ಷಿಯಾದರು. ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ “ಗೌರಿ” ಚಿತ್ರತಂಡ ಕರ್ನಾಟಕದಾದ್ಯಂತ ಸಂಚಾರ ಮಾಡುತ್ತಿದೆ. ಆ ಊರಿನ ಮಾಧ್ಯಮದವರು ಹಾಗೂ ಅಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹಕ್ಕೆ ಮನ ತುಂಬಿ ಬಂದಿದೆ. ಹಾಡುಗಳ ಮೂಲಕ ಈಗಾಗಲೇ ಜನರನ್ನು ತಲುಪಿರುವ “ಗೌರಿ” ಚಿತ್ರ ಇದೇ ಅಗಸ್ಟ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ವರಮಹಾಲಕ್ಷ್ಮೀ, ಸ್ವತಂತ್ರ ದಿನಾಚರಣೆ, ರಕ್ಷಾ ಬಂಧನ ಹೀಗೆ ಸಾಲುಸಾಲು ರಜೆ ದಿಗಗಳು ಆ ಸಮಯದಲ್ಲಿದೆ. ಹಾಗಾಗಿ ಆಗಸ್ಟ್ 15 ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಒಬ್ಬ ಪ್ರೇಕ್ಷಕನಾಗಿ ಸಿನಿಮಾ ನೋಡಿದಾಗ ನನಗೆ ಬಹಳ ಇಷ್ಟವಾಯಿತು. ಪ್ರೇಕ್ಷಕರಿಗೂ ನಮ್ಮ ಚಿತ್ರ ಮೆಚ್ಚುಗೆಯಾಗಲಿದೆ ಎಂದರು ಇಂದ್ರಜಿತ್ ಲಂಕೇಶ್.
ಅಪ್ಪ ಹೇಳಿದ ಹಾಗೆ ಹೋದ ಕಡೆಯಲ್ಲಾ ನಮ್ಮ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನನ್ನ ಹಲವು ವರ್ಷಗಳ ಶ್ರಮಕ್ಕೆ ಉತ್ತರ ಸಿಗುವ ದಿನ ಹತ್ತಿರ ಬಂದಿದೆ ಎಂದರು ನಾಯಕ ಸಮರ್ಜಿತ್ ಲಂಕೇಶ್.
ಆಗಸ್ಟ್ 15, ನನ್ನ ಕನಸು ನನ್ನಸಾಗುವ ದಿನ. ಈ ದಿನಕ್ಕಾಗಿ ಕಾಯುತ್ತಿದೆ. ಅವಕಾಶ ನೀಡಿದ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ ಎಂದರು ನಾಯಕಿ ಸಾನ್ಯ ಅಯ್ಯರ್ .
‘ಫೈರ್‌ಫ್ಲೈ’ನಲ್ಲಿ ಪದ್ಮಳಾದ ಸುಧಾರಾಣಿ..ದೀಪಾವಳಿಗೆ ಬರಲಿದೆ ನಿವೇದಿತಾ ನಿರ್ಮಾಣದ ಚೊಚ್ಚಲ ಸಿನಿಮಾ ನಿವೇದಿತಾ ಶಿವರಾಜ್ ಕುಮಾರ್ ‘ಫೈರ್‌ಫ್ಲೈ’ಗೆ ಸುಧಾರಾಣಿ ಎಂಟ್ರಿ. ಪದ್ಮ ಪಾತ್ರದಲ್ಲಿ ಮಿಂಚಲಿದ್ದಾರೆ ಹಿರಿಯ ನಟಿ
ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾ ತಾರಾಬಳಗದ ಮೂಲಕ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ನಟಿ ಹಾಗೂ ನಿರ್ದೇಶಕಿಯಾಗಿರುವ ಶೀತಲ್ ಶೆಟ್ಟಿ, ಹಿರಿಯ ಕಲಾವಿದ ಮೂಗು ಸುರೇಶ್ ಅವರನ್ನು ಚಿತ್ರತಂಡ ಪರಿಚಯಿಸಿತ್ತು. ಫೈರ್ ಫ್ಲೈ ಸಿನಿಮಾ ಬಳಗಕ್ಕೀಗ ಹಿರಿಯ ನಟಿ ಸುಧಾರಾಣಿ ಸೇರಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆಯಾಗಿರುವ ಸುಧಾರಾಣಿ ಈಗ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾದ ಭಾಗವಾಗಿದ್ದಾರೆ. ಅವರು ಪದ್ಮಾ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಸುಧಾರಾಣಿ ಒಂದೊಳ್ಳೆ ಪಾತ್ರವನ್ನು ನಿಭಾಯಿಸಿರುವ ಖುಷಿ ಅವರಲ್ಲಿದೆ. ಈಗಾಗಲೇ ಸುಧಾರಾಣಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತಾಡಿರುವ ಸುಧಾರಾಣಿ, ‘ಅಪ್ಪಾಜಿಯವರ ಮನೆಯಿಂದ ಯಾರು ಏನೇ ಮಾಡಿದರೂ ಅದು ನನ್ನ ತವರು ಮನೆ. ಹಾಗಾಗಿ ಇವತ್ತಿಗೂ ಅವರಲ್ಲಿ ಯಾರಾದ್ರೂ ಬಂದು ಹಿಂದೆ ಬಂದು ನಿಂತು ಹೋಗು ಅಂದ್ರೆ ನಾನು ತಯಾರಿದ್ದೇನೆ. ಏಕೆಂದರೆ ಇದು ನನ್ನ ಮನೆ. ನಿವಿ ನನ್ನ ಕಣ್ಣ ಮುಂದೆ ಹುಟ್ಟಿ ಬೆಳೆದಂತ ಮಗು, ಇವತ್ತು ಅವಳು ಒಂದು ನಿರ್ಮಾಣ ಸಂಸ್ಥೆ ಶುರು ಮಾಡುತ್ತಿದ್ದಾಳೆ, ಅವಳು ನಿರ್ಮಾಪಕಿಯಾಗಿದ್ದಾಳೆ. ನನಗೆ ತುಂಬಾ ಖುಷಿ ಇದೆ. ಕಥೆಯಿಂದ ಹಿಡಿದು ಪ್ರೊಡಕ್ಷನ್ ವರೆಗೂ ಸಿನೆಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ನಮ್ಮ ಕನ್ನಡದ ಕಲಾಭಿಮಾನಿಗಳು ಈ ಚಿತ್ರಕ್ಕೆ ಬೆಂಬಲ ನೀಡಬೇಕು. ನಿರ್ದೇಶಕರಿಗೆ ಸ್ವಲ್ಪ ಮುಜುಗರ ಇತ್ತು. ನನ್ನ ಇಷ್ಟು ಚಿಕ್ಕ ಪಾತ್ರ ಕೇಳಬೇಕು ಅಂತಾ ಆದ್ರೆ ಚೊಚ್ಚಲ ನಿರ್ದೇಶಕರಾಗಿ ಅವರಲ್ಲಿದ್ದ ಹುಮ್ಮಸ್ಸು. ಆಸಕ್ತಿ ನನಗೆ ಇಷ್ಟ ಆಯಿತು. ನಿರ್ದೇಶಕರಾಗಿ ನಟನೆಯೂ ಮಾಡುತ್ತಿರುವುದರಿಂದ ಎಲ್ಲರಿಗೂ ಅವರ ಮೊದಲ ಸಿನಿಮಾ ದೊಡ್ಡ ಬಜೆಟ್, ಮಲ್ಟಿಸ್ಟಾರ್ಸ್, ಆಕ್ಷನ್ ಸಿನಿಮಾ ಆಗಿರಬೇಕು ಅಂತಾ ಬಹುತೇಕರು ಯೋಚನೆ ಮಾಡುತ್ತಾರೆ. ಆದರೆ ಈ ವಿಚಾರದಲ್ಲಿ ಅವರು ವಿಭಿನ್ನ. ಸಂಬಂಧಗಳ ಬಗ್ಗೆ ಅವರು ಫೋಕಸ್ ಮಾಡಿದ್ದಾರೆ. ಇಡೀ ಕುಟುಂಬ ಕುಳಿತುಕೊಂಡು, ನೋಡಿ ಇಷ್ಟವಾಗುವಂತ ಚಿತ್ರವನ್ನು ಮಾಡಿದ್ದಾರೆ’ ಎಂದಿದ್ದಾರೆ.
‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಈಗ ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.
ಶಿವರಾಜಕುಮಾರ್ ಅವರು ಯಾವಾಗಲೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರ ರೀತಿಯೇ ನಿವೇದಿತಾ ಶಿವರಾಜಕುಮಾರ್ ಕೂಡ ಹೊಸಬರಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.
‘ಫೈರ್ ಫ್ಲೈ’ ಚಿತ್ರಕ್ಕೆ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆಯ ಬರೆಯುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ.
ಯುವನಿವರ್ಸಲ್ ಸ್ಟಾರ್, ಉಳಗನಾಗನ್ ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಇಂಡಿಯನ್ -2 ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಲವು ಶೇಡ್ ನಲ್ಲಿ ಕಮಲ್ ಕಮಾಲ್ ಮಾಡಿದ್ದು, ಶಂಕರ್ ಟೇಕಿಂಗ್ ಮತ್ತೊಮ್ಮೆ ಒಳ್ಳೆ ಮಾರ್ಕ್ಸ್ ಸಿಗಲಿದೆ. 1996 ರ ಬ್ಲಾಕ್‌ಬಸ್ಟರ್ “ಇಂಡಿಯನ್” ಸಿನಿಮಾದ ಮುಂದುವರೆದ ಭಾಗವಾಗಿರುವ “ಇಂಡಿಯನ್ 2” ನಲ್ಲಿ ಸೇನಾಪತಿಯಾಗಿ ಕಮಲ್ ಹಾಸನ್ ಮರಳಿದ್ದಾರೆ.
ರಾಷ್ಟ್ರವನ್ನು ಕಾಡುತ್ತಿರುವ ವ್ಯವಸ್ಥಿತ ಭ್ರಷ್ಟಾಚಾರ, ನಿರುದ್ಯೋಗ, ಸಮಾಜವನ್ನು ಪೀಡಿಸುವ ಅಭಿವೃದ್ಧಿಯ ಕೊರತೆಯ ಸಮಸ್ಯೆಗಳ ವಿರುದ್ಧ ಕಮಲ್ ಹಾಸನ್ ಸೇನಾಪತಿಯಾಗಿ ಸಮರ ಸಾರಿದ್ದಾರೆ. ಭರ್ಜರಿ ಆಕ್ಷನ್ ಸೀಕ್ವೆನ್ಸ್ ಜೊತೆಗೆ ದೇಶಭಕ್ತಿಯ ಕಥೆ ಹೇಳುವ ಇಂಡಿಯನ್ ಸೀಕ್ವೆಲ್ ನಲ್ಲಿ ದೊಡ್ಡ ತಾರಾಬಳಗವೇ ಇದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.
ಕಮಲ್ ಹಾಸನ್ ಜೊತೆಗೆ ಸಿದ್ದಾರ್ಥ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಜಯರಾಮ್, ಬ್ರಹ್ಮಾನಂದಂ, ಬಾಬಿ ಸಿಂಹ, ಸಮುದ್ರಕನಿ ಮತ್ತು ನೆಡುಮುಡಿ ವೇಣು ಹಲವರು ನಟಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಿಸಿರುವ ಇಂಡಿಯನ್ 2 ಜುಲೈ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೇಲರ್ ಕೂಡ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಚಿತ್ರಗಳು ಹೆಚ್ಚು ಬರುತ್ತಿದೆ. ಅಂತಹುದೇ ಉತ್ತಮ ಕಂಟೆಂಟ್ ಹೊಂದಿರುವ “ನಸಾಬ್” ಕನ್ನಡ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಟ್ರೇಲರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಂಜಾರ ಶಕ್ತಿಪೀಠದ ಶ್ರೀ ಕುಮಾರ ಮಹಾರಾಜರು, ಮಾಜಿ ಉಪ ಸಭಾಪತಿ ರುದ್ರಪ್ಪ ಎಂ ಲಮ್ಮಾಣಿ, ಐ ಎ ಎಸ್ ಅಧಿಕಾರಿ ಜಗದೀಶ್ ಜಿ, ಮಾಜಿ ಶಾಸಕ ಪಿ.ರಾಜೀವ್, ಶೋಭ ಜಿ , ಶೋಭಾ ಟಿ.ಆರ್ , ಹರೀಶ್ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ಇದು ನನ್ನ ಜೀವನದ ಕಥೆ ಎಂದು ಮಾತಮಾಡಿದ ಕಿಶೋರ್ ಕುಮಾರ್ ನಾಯ್ಕ್, ನಮ್ಮ ತಂದೆ ತಾಯಿಗೆ ಹದಿನಾಲ್ಕು ಜನ ಮಕ್ಕಳು. ಬಡತನ ಬೇರೆ. ಅಂತಹ ಬಡ ಕುಟುಂಬದಲ್ಲಿ ಹುಟ್ಟಿದ ಬಂಜಾರ ಸಮುದಾಯದ ಹುಡುಗನೊಬ್ಬ ಚೆನ್ನಾಗಿ ಓದಿ ವಿದ್ಯಾವಂತನಾಗಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆ. ಇದೇ ಚಿತ್ರದ ಕಥಾಹಂದರ. ನಾನು, ನನ್ನ ಜೀವನದ ಕಥೆಯನ್ನು “ನಸಾಬ್” ಎಂದು ಪುಸ್ತಕ ರೂಪದಲ್ಲಿ ಹೊರ ತಂದೆ. ಇದನ್ನು ಓದಿದ್ದ ಮಿತ್ರ ಹರೀಶ್, ಈ ಕೃತಿಯನ್ನು ಸಿನಿಮಾ ಮಾಡೋಣ ಎಂದರು. ಈ ಸಿನಿಮಾ ಆಗಲು ಹರೀಶ್ ಅವರೆ ಮುಖ್ಯ ಕಾರಣ. ನನ್ನ ಮಗ ಕೀರ್ತಿ ಕುಮಾರ್ ನಾಯ್ಕ್ ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ ನಾಯಕನಾಗೂ ಅಭಿನಯಿಸಿದ್ದಾರೆ. ಶೆಫಾಲಿ ಸಿಂಗ್ ಸೋನಿ ಈ ಚಿತ್ರದ ನಾಯಕಿ. ಬಿ.ಜಯಶ್ರೀ, ಪದ್ಮಾ ವಾಸಂತಿ, ವಿಜಯ ಕಾಶಿ, ತಬಲ ನಾಣಿ, ನಾಗೇಂದ್ರ ಅರಸ್, ಶೋಭ್ ರಾಜ್, ಪ್ರಕಾಶ್, ಹನುಮಂತೇ ಗೌಡ ಮುಂತಾದವರು ಚಿತ್ರದಲ್ಲಿದ್ದಾರೆ. “ನಸಾಬ್” ಎಂದರೆ ಲಮ್ಮಾಣಿ ಭಾಷೆಯಲ್ಲಿ ನ್ಯಾಯ ಎಂದು ಅರ್ಥ. ಇಂದು ಸಾಕಷ್ಟು ಗಣ್ಯರು ಹಾಗೂ ನಮ್ಮ ಊರಿನವರು ಆಗಮಿಸಿ ನಮ್ಮ ಚಿತ್ರಕ್ಕೆ ಶುಭ ಕೋರಿದ್ದೀರಿ. ನಿಮಗೆ ಅನಂತ ಧನ್ಯವಾದಗಳು. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದರು.
ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ ನನ್ನ ತಂದೆ ಕಿಶೋರ್ ಕುಮಾರ್ ನಾಯ್ಕ್ ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ. ಇದು ನನ್ಮ ಮೊದಲ ಚಿತ್ರ. ನಟನೆಗೆ ಸಹಕಾರ ನೀಡಿದ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರನ್ನು ಈ ಸಮಯದಲ್ಲಿ ನೆನೆಯುತ್ತೇನೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಹಾಗೂ ನಾಯಕ ಕೀರ್ತಿ ಕುಮಾರ್ ನಾಯ್ಕ್.
ನಾಯಕಿ ಶೆಫಾಲಿ ಸಿಂಗ್ ಸೋನಿ, ನಟರಾದ ವಿಜಯ ಕಾಶಿ, ತಬಲನಾಣಿ, ನಾಗೇಂದ್ರ ಅರಸ್, ಪ್ರಕಾಶ್ ಮುಂತಾದವರು “ನಸಾಬ್” ಚಿತ್ರದ ತಮ್ಮ ಪಾತ್ರಗಳ ಕುರಿತು ಮಾಹಿತಿ ನೀಡಿದರು. ಕೀರ್ತಿ ಕ್ರಿಯೇಷನ್ಸ್ ಲಾಂಛನದಲ್ಲಿ ಸುಜಾತ ಕಿಶೋರ್ ನಾಯ್ಕ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಗಂ ಸಂಗೀತ ಸಂಯೋಜಿಸಿದ್ದಾರೆ.