ಪತ್ರಕರ್ತ, ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ “ಗೌರಿ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್ 15 ಸ್ವತಂತ್ರ ದಿನಾಚರಣೆ ದಿನ ಹಾಗೂ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಇಂದ್ರಜಿತ್ ಲಂಕೇಶ್ ಅವರು ರಾಜಾಜಿನಗರದ ವಿದ್ಯಾವಿಹಾರ (ಎಂ ಇ ಎಸ್ ಮ್ಯಾನೇಜ್ಮೆಂಟ್) ಕಾಲೇಜಿನಲ್ಲಿ ಅದ್ದೂರಿ ಸಮಾರಂಭ ಆಯೋಜಿಸಿದ್ದರು. ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಸಮಾರಂಭಕ್ಕೆ ಸಾಕ್ಷಿಯಾದರು. ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಮ್ಮ “ಗೌರಿ” ಚಿತ್ರತಂಡ ಕರ್ನಾಟಕದಾದ್ಯಂತ ಸಂಚಾರ ಮಾಡುತ್ತಿದೆ. ಆ ಊರಿನ ಮಾಧ್ಯಮದವರು ಹಾಗೂ ಅಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹಕ್ಕೆ ಮನ ತುಂಬಿ ಬಂದಿದೆ. ಹಾಡುಗಳ ಮೂಲಕ ಈಗಾಗಲೇ ಜನರನ್ನು ತಲುಪಿರುವ “ಗೌರಿ” ಚಿತ್ರ ಇದೇ ಅಗಸ್ಟ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ವರಮಹಾಲಕ್ಷ್ಮೀ, ಸ್ವತಂತ್ರ ದಿನಾಚರಣೆ, ರಕ್ಷಾ ಬಂಧನ ಹೀಗೆ ಸಾಲುಸಾಲು ರಜೆ ದಿಗಗಳು ಆ ಸಮಯದಲ್ಲಿದೆ. ಹಾಗಾಗಿ ಆಗಸ್ಟ್ 15 ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಒಬ್ಬ ಪ್ರೇಕ್ಷಕನಾಗಿ ಸಿನಿಮಾ ನೋಡಿದಾಗ ನನಗೆ ಬಹಳ ಇಷ್ಟವಾಯಿತು. ಪ್ರೇಕ್ಷಕರಿಗೂ ನಮ್ಮ ಚಿತ್ರ ಮೆಚ್ಚುಗೆಯಾಗಲಿದೆ ಎಂದರು ಇಂದ್ರಜಿತ್ ಲಂಕೇಶ್.

ಅಪ್ಪ ಹೇಳಿದ ಹಾಗೆ ಹೋದ ಕಡೆಯಲ್ಲಾ ನಮ್ಮ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನನ್ನ ಹಲವು ವರ್ಷಗಳ ಶ್ರಮಕ್ಕೆ ಉತ್ತರ ಸಿಗುವ ದಿನ ಹತ್ತಿರ ಬಂದಿದೆ ಎಂದರು ನಾಯಕ ಸಮರ್ಜಿತ್ ಲಂಕೇಶ್.

ಆಗಸ್ಟ್ 15, ನನ್ನ ಕನಸು ನನ್ನಸಾಗುವ ದಿನ. ಈ ದಿನಕ್ಕಾಗಿ ಕಾಯುತ್ತಿದೆ. ಅವಕಾಶ ನೀಡಿದ ಇಂದ್ರಜಿತ್ ಲಂಕೇಶ್ ಅವರಿಗೆ ಧನ್ಯವಾದ ಎಂದರು ನಾಯಕಿ ಸಾನ್ಯ ಅಯ್ಯರ್ .