Categories
ಸಿನಿ ಸುದ್ದಿ

ಕೆರೆಬೇಟೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್: ಮೂರನೇ ಹಾಡು ಬಂತು

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಿಕ್ಕಾಪಟ್ಟೆ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ ಕೆರೆಬೇಟೆ. ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರಕ್ಕೆ ಈಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಸಿನಿಮಾದ ಮೂರನೇ ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ರಿಲೀಸ್ ಮಾಡುವ ಮೂಲಕ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.

ಈಗಾಗಲೇ ಸಿನಿಮಾದಿಂದ ಟೀಸರ್, ಟ್ರೈಲರ್ ಮತ್ತು ಎರಡು ಹಾಡುಗಳು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಸಿನಿಮಾ ತಂಡ 3ನೇ ಹಾಡನ್ನು ರಿಲೀಸ್ ಮಾಡುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

‘ಕಣ್ಣುಗಳೆ ಕಳೆದು ಹೋದಾಗ…’ ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ. …. ಈ ಸುಂದರ ಹಾಡಿಗೆ…. ಸಿದ್ಧಾರ್ಥ ಬೆಳ್ಮಣ್ಣು ಧ್ವನಿ ನೀಡಿದ್ದು ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇತ್ತೀಚಿಗಷ್ಟೇ ಸಿನಿಮಾತಂಡ 2ನೇ ಹಾಡನ್ನು ಶಿವಮೊಗ್ಗದಲ್ಲಿ ಅದ್ದೂರಿಯಾಗಿ ರಿಲೀಸ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದರು. ಇದೀಗ ಸಿನಿಮಾ ತಂಡ ಚಿತ್ರದ ಪ್ಯಾತೋ ಸಾಂಗ್ ರಿಲೀಸ್ ಮಾಡಿದೆ. ಈ ಹಾಡಿಗೆ ಮನ ಸೋತ ಅಶ್ವಿನಿ ಪುನೀತ್ ರಾಜಕುಮಾರ್ ಸಂತಸ ವ್ಯಕ್ತಪಡಿಸಿದರು.

ಹಾಡು ರಿಲೀಸ್ ಮಾಡುವ ನೆಪದಲ್ಲಿ ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾ ತಂಡ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನ ಹಂಚಿಕೊಂಡರು.

ನಿರ್ದೇಶಕ ರಾಜ್ ಗುರು ಮಾತನಾಡಿ ನಿರ್ಮಾಪಕ ಅಶ್ವಿನಿ ಪುನೀತ್ ರಾಜಕುಮಾರ್ ಹಾಡನ್ನು ರಿಲೀಸ್ ಮಾಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ‘ದೊಡ್ಮನೆಗೂ ನನಗೂ ಒಂದು ಸಂಬಂಧವಿದೆ‌. ಅಪ್ಪು ಸರ್ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಮಣ್ಣಿನ ಕಥೆಗಳ ಬಗ್ಗೆ ತುಂಬಾ ಮಾತನಾಡುತ್ತಿದ್ವಿ. ಈ ರೀತಿಯ ಸಿನಿಮಾ ಅವರಿಗೆ ತುಂಬಾ ಇಷ್ಟ’ ಎಂದರು.

ನಾಯಕಿ ಬಿಂಧು ಶಿವರಾಮ್ ಮಾತನಾಡಿ, ‘ಮಲೆನಾಡಿನ ಭಾಷೆ ನನಗೆ ತುಂಬಾ ಕಷ್ಟವಾಯಿತು. ಇಡೀ ಸಿನಿಮಾ ತಂಡ ಮಲೆನಾಡಿನವರಾಗಿದ್ದರಿಂದ ಅದೇ ಭಾಷೆಯನ್ನು ಮಾತನಾಡುತ್ತಿದ್ದರು. ಹಾಗಾಗಿ ನನಗೂ ಅವರ ಜೊತೆ ಸೇರಿ ಮಲೆನಾಡಿನ ಭಾಷೆ ಮಾತನಾಡಲು ಸುಲಭವಾಯ್ತು. ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಗಟ್ಟಿಯಾಗಿದೆ’ ಎಂದರು.

ನಾಯಕ ಗೌರಿಶಂಕರ್ ಮಾತನಾಡಿ, ‘ಅಶ್ವಿನಿ ಮೇಡಮ್ ಸಿನಿಮಾದ ಟೀಸರ್, ಟ್ರೈಲರ್ ಹಾಡನ್ನು ನೋಡಿ ತುಂಬಾ ಇಷ್ಟಪಟ್ಟರು. ಈ ಸಿನಿಮಾ ನನಗೆ ಗೆಲ್ಲಲೇ ಬೇಕಾಗಿದೆ. ಏಕೆಂದರೆ ನಾನು ತುಂಬಾ ಸೋಲನ್ನು ಕಂಡಿದ್ದೇನೆ. ಸೋತು ಮನೆಯಲ್ಲಿ ಕೂರುವುದು ತುಂಬಾ ಕಷ್ಟ. ಸಿನಿಮಾ ಸಹವಾಸವೇ ಬೇಡ ಅಂತ ಇದ್ದೆ. ನಿರ್ದೇಶಕರು ಈ ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ. ತುಂಬಾ ಪ್ರಿಪರೇಷನ್ ಮಾಡಿದ್ದೇವೆ, ಗೆಲುವು ನನಗೆ ಅನಿವಾರ್ಯವಾಗಿದೆ’ ಎಂದರು.

ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಇದೇ ಮಾರ್ಚ್ 15ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕೆರಬೇಟೆ ಸಿನಿಮಾ ಹೇಗಿರಲಿದೆ, ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

Categories
ಸಿನಿ ಸುದ್ದಿ

ಉದಯ ಟಿವಿಯಲ್ಲೂ ಸೂರ್ಯವಂಶನ ಮೋಡಿ: ಅನಿರುದ್ಧ್ ನಟನೆಯ ಹೊಸ ಧಾರಾವಾಹಿ ಮಾರ್ಚ್ 11 ರಿಂದ ಶುರು

ಡಾ.ವಿಷ್ಣುವರ್ಧನ್ ಅಭಿನಯದ ’ಸೂರ್ಯವಂಶ’ ಚಿತ್ರವು ಬಿಡುಗಡೆಗೊಂಡು ಸೂಪರ್ ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಧಾರವಾಹಿಯೊಂದು ’ಉದಯ ವಾಹಿನಿ’ಯಲ್ಲಿ ವೀಕ್ಷಕರಿಗೆ ತೋರಿಸಲು ಸಿದ್ದವಾಗಿದೆ. ತನ್ವಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಪಕ ಎಲ್.ಪದ್ಮನಾಭ ಬಂಡವಾಳ ಹೂಡುವುದರ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಹರಿಸಂತು ಪ್ರಧಾನ ನಿರ್ದೇಶಕರಾಗಿದ್ದು, ಪ್ರಕಾಶ್ ಮುಚ್ಚಳಗುಡ್ಡ ಸಂಚಿಕೆ ನಿರ್ದೇಶನ ಮಾಡುತ್ತಿದ್ದಾರೆ.

ಒಂದು ಹಳೆಯ ಭವ್ಯ ಪರಂಪರೆಯ ಹೆಗ್ಗುರುತಾಗಿ ನಿಂತಿರುವ ’ಸೂರ್ಯವಂಶ’ ಕುಟುಂಬದಲ್ಲಿ ತಾತ ಸತ್ಯಮೂರ್ತಿಗೆ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಬಯಕೆ. ವಂಶದ ಕುಡಿ ಇಪ್ಪತ್ತು ವರ್ಷಗಳ ಹಿಂದೆ ಮೊಮ್ಮಗ ಸೂರ್ಯವರ್ಧನ ಕಾಣೆಯಾಗಿದ್ದೆ ಚಿಂತೆಗೆ ಕಾರಣವಾಗಿರುತ್ತದೆ. ಒಂದು ಆಕಸ್ಮಿಕ ಸಂದರ್ಭದಲ್ಲಿ ಆ ಹುಡುಗ ಸಿಗುತ್ತಾನೆ. ತಾಯಿಯ ಚಿಕಿತ್ಸೆಗೆ ಹಣ ಬೇಕಿರುವುದರಿಂದ ಆತನು ಈ ನಾಟಕಕ್ಕೆ ಒಪ್ಪಿಕೊಳ್ಳುತ್ತಾನೆ. ಅವನೇ ಕಥಾನಾಯಕ ಕರ್ಣ.

ನಂತರ ಕರ್ಣನು ಸೂರ್ಯವಂಶಕ್ಕೆ ಕಾಲಿಟ್ಟ ನಂತರ ಎಲ್ಲಾ ಕಡೆಗಳಿಂದಲೂ ವಿರೋಧಿಗಳು ಹುಟ್ಟಿಕೊಳ್ಳುತ್ತಾರೆ. ಅದೇ ಊರಿನ ಕಾಳಿಂಗ ಆಟಾಟೋಪವನ್ನು ಬಗ್ಗು ಬಡಿಯಲು ಕರ್ಣನಿಂದ ಮಾತ್ರ ಸಾಧ್ಯ ಎಂದು ಊರ ಜನರು ನಂಬಿರುತ್ತಾರೆ. ಇದರ ಮಧ್ಯೆ ನಾಯಕಿ ಸುರಭಿ ಆಗಮನವಾಗುತ್ತದೆ. ಇದರಿಂದ ಕಥೆ ಹೊಸ ರೂಪ ಪಡೆದುಕೊಳ್ಳುತ್ತದೆ. ಮುಂದೆ ಕರ್ಣನೇ ಸೂರ್ಯವರ್ಧನ ಎನ್ನುವ ವಿಷಯ ತಿಳಿಯುತ್ತದೆ. ಅದು ಹೇಗೆ, ಯಾರಿಂದ, ಯಾವಾಗ ಎಂಬ ಸನ್ನಿವೇಶಗಳೊಂದಿಗೆ ರೋಚಕ ತಿರುವುಗಳು ಬರುತ್ತದೆ. ಪ್ರತಿ ಕಂತುಗಳು ಶ್ರೀಮಂತವಾಗಿ ಮೂಡಿಬಂದಿರುವುದು ವಿಶೇಷ.

ನಾಯಕನಾಗಿ ಅನಿರುದ್ದ್‌ ಜಟ್ಕರ್, ನಾಯಕಿಯಾಗಿ ಸುರಭಿ. ತಾತನಾಗಿ ಸುಂದರರಾಜ್, ಖಳನಾಗಿ ದಿ.ಉದಯ್‌ಕುಮಾರ್ ಪುತ್ರ ವಿಕ್ರಂಉದಯಕುಮಾರ್. ಉಳಿದಂತೆ ರವಿಭಟ್, ಸುಂದರಶ್ರೀ, ಲೋಕೇಶ್‌ಬಸವಟ್ಟಿ, ಪುಷ್ಪಾಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರು ನಟಿಸುತ್ತಿದ್ದಾರೆ.

ಮಾರ್ಚ್,11 ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Categories
ಸಿನಿ ಸುದ್ದಿ

ರೋಜಿಯಲ್ಲಿ ಒರಟ! ಯೋಗಿ ಜೊತೆ ಪ್ರಶಾಂತ್ ಬಂದ್ರು: ಇದು ಶೂನ್ಯ ಚಿತ್ರ

ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ “ರೋಜಿ”. ಈ ಚಿತ್ರದಲ್ಲಿ ಈಗಾಗಲೇ ಶ್ರೀನಗರ ಕಿಟ್ಟಿ ಹಾಗೂ “ಲಿಯೋ” ಚಿತ್ರದ ಸ್ಯಾಂಡಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ನಟ ಒರಟ ಪ್ರಶಾಂತ್ “ರೋಜಿ” ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸ್ವಾಮಿ ಅಣ್ಣ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಒರಟ ಪ್ರಶಾಂತ್ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಚಿತ್ರತಂಡದಿಂದ ಬಿಡುಗಡೆಯಾಗಿದೆ.

“ರೋಜಿ” ಚಿತ್ರ ಸ್ಟೈಲೀಶ್ ಗ್ಯಾಂಗ್ ಸ್ಟರ್ ಡ್ರಾಮ ಎಂದು ಮಾತನಾಡಿದ ನಿರ್ದೇಶಕ ಶೂನ್ಯ, ಒರಟ ಪ್ರಶಾಂತ್ ಬಹಳ ದಿನಗಳ ನಂತರ ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. “ಸ್ವಾಮಿ ಅಣ್ಣ” ಎನ್ನುವುದು ಅವರ ಪಾತ್ರದ ಹೆಸರು. ಚಿತ್ರದಲ್ಲಿ ಇನ್ನೂ ಎರಡು ಪ್ರಮುಖ ಪಾತ್ರಗಳಿದ್ದು, ಸದ್ಯದಲ್ಲೇ ಮಾಹಿತಿ ನೀಡುತ್ತೇನೆ ಎಂದರು.

ನನಗೆ ಬಹಳ ಅವಕಾಶಗಳು ಬಂದವು. ಆದರೆ, ನಾನು ಒಪ್ಪಿರಲಿಲ್ಲ. ಶೂನ್ಯ ಅವರು ಹೇಳಿದ ಕಥೆ ಹಾಗೂ ನನ್ನ ಪಾತ್ರ ಇಷ್ಟವಾಯಿತು. ಹಾಗಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಯೋಗಿ ಅವರ ಜೊತೆಗೆ ಅಭಿನಯಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರತ್ತಿದೆ ಎಂದು ಒರಟ ಪ್ರಶಾಂತ್ ತಿಳಿಸಿದರು.

ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿರುತ್ತದೆ. ನಾನು ಇತ್ತೀಚಿಗೆ ಹೊಸಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕೊರೋನ ನಂತರ ನಾನು ಒಪ್ಪಿಕೊಂಡಿರುವ ಚಿತ್ರ “ರೋಜಿ” ಎಂದು ತಿಳಿಸಿದ ಸಂಗೀತ ನಿರ್ದೇಶಕ ಗುರುಕಿರಣ್, ನಾನು ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷಗಳಾಯಿತು. ಈ ಸಮಯದಲ್ಲಿ ನನ್ನ “ಕರಿಮಣಿ ಮಾಲೀಕ” ಹಾಡು ಈಗ ಸಾಕಷ್ಟು ಟ್ರೆಂಡ್ ಆಗುತ್ತಿರುವುದಕ್ಕೆ ಸಂತಸಪಟ್ಟರು.

ನಿರ್ಮಾಪಕರಾದ ಡಿ.ವೈ.ರಾಜೇಶ್, ಡಿ.ವೈ.ವಿನೋದ್, ಛಾಯಾಗ್ರಾಹಕ ಎಸ್ ಕೆ ರಾವ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ “ರೋಜಿ” ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಕೆರೆಬೇಟೆ’ ಟೈಟಲ್ ಟ್ರಾಕ್ ರಿಲೀಸ್: ಸಿನಿಮಾ ಟೀಮ್ ಗೆ ಆರಗ ಜ್ಞಾನೇಂದ್ರ, ಬಿ ವೈ ರಾಘವೇಂದ್ರ ಸಾಥ್; ಇದು ಗೌರಿ ಶಂಕರ ಸಿನಿಮಾ

‘ಕೆರೆಬೇಟೆ’ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ. ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರದ ಟ್ರೇಲರ್, ಟೀಸರ್ ಮತ್ತು ರೋಮ್ಯಾಂಟಿಕ್ ಹಾಡು ಈಗಾಗಲೇ ರಿಲೀಸ್ ಆಗಿದ್ದು ಕುತೂಹಲ ದುಪ್ಪಟ್ಟು ಮಾಡಿದೆ. ಸಿನಿಮಾ ತಂಡ ಇತ್ತೀಚೆಗೆ ಟೈಟಲ್ ಟ್ರಾಕ್ ರಿಲೀಸ್ ಮಾಡುವ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚಿಗಷ್ಟೇ ಮೊದಲ ಹಾಡನ್ನು ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಸಿನಿಮಾದ ಬಹುನಿರೀಕ್ಷಿಯ ಟೈಟಲ್ ಟ್ರಾಕ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ.

ವಿಶೇಷ ಎಂದರೆ ಈ ಹಾಡನ್ನು ಶಾಸಕ ಹಾಗೂ ಮಾಜಿ ಹೋಂ ಮಿನಿಸ್ಟರ್ ಆರಗ ಜ್ಞಾನೇಂದ್ರ ಹಾಗೂ ಸಂಸದರಾದ ಬಿ ವೈ ರಾಘವೇಂದ್ರ ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಟೈಟಲ್ ಟ್ರ್ಯಾಕ್ ರಿಲೀಸ್ ಕಾರ್ಯಕ್ರಮದಲ್ಲಿ ಕೆರೆಬೇಟೆ ಚಿತ್ರದ ಹಾಡು ಅದ್ದೂರಿಯಾಗಿ ಬಿಡುಗಡೆಯಾಯಿತು.

‘ಕೆರಿಬ್ಯಾಟಿ ಶುರುವಾತು…’ ಎನ್ನುವ ಈ ಟೈಟಲ್ ಟ್ರ್ಯಾಕ್ ಅನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ, ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದು ಕರಿಬಸವ ತಡಕಲ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡನ್ನು ಕೇಳಿ ಮನಸೋತ ಶಾಸಕ ಆರಗ ಜ್ಞಾನೇಂದ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರು ಸಂತಸ ವ್ಯಕ್ತಪಡಿಸಿದರು.

ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿ ಮಾತನಾಡಿದ ಬಿ ವೈ ರಾಘವೇಂದ್ರ, ‘ಈ ಸಿನಿಮಾ ಸಂಪೂರ್ಣವಾಗಿ ಮಲೆನಾಡಿನ ಸುತ್ತಮುತ್ತವೇ ಚಿತ್ರೀಕರಣಗೊಂಡಿದೆ. ಜೊತೆಗೆ ಮಲೆನಾಡಿನವರೇ ಸೇರಿ ಈ ಸಿನಿಮಾ ಮಾಡಿದ್ದಾರೆ. ಮಲೆನಾಡಿನ ಸೌಂದರ್ಯವನ್ನು ತುಂಬಾ ಸುಂದರವಾಗಿ ತೋರಿಸಲಾಗಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

ಇನ್ನು ಆರಗ ಜ್ಞಾನೇಂದ್ರ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಸಂಸ್ಕೃತಿಗಳು ಕಣ್ಮರೆಯಾಗಿವೆ. ಅನೇಕ ಪದ್ಧತಿಗಳು ಮರೆಯಾಗಿವೆ. ಇದೀಗ ಕೆರೆಬೇಟೆ ಸಂಸ್ಕೃತಿಯ ಬಗ್ಗೆ ಸಿನಿಮಾ ಮಾಡಿರುವುದು ತುಂಬಾ ಖುಷಿ ಆಗುತ್ತೆ. ಟ್ರೈಲರ್ ಮತ್ತು ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ. ನಾಯಕ ನಟ, ನಿರ್ದೇಶಕ ನಿರ್ಮಾಪಕ ಸೇರಿದಂತೆ ಎಲ್ಲರೂ ಮಲೆನಾಡಿನವರೇ ಎನ್ನುವುದು ಖುಷಿಯ ವಿಚಾರ. ಸಿನಿಮಾ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣಲಿ’ ಎಂದು ಹೇಳಿದರು.

ಸಾಂಗ್ ರಿಲೀಸ್ ಬಳಿಕ, ನಿಜವಾದ ಕೆರೆಬೇಟೆ ಆಟಗಾರರು ಕೂಣಿ ಹಿಡಿದು ಪ್ರತಿ ಜಿಲ್ಲೆಗಳಿಗೂ ಚಿತ್ರದ ಪ್ರಚಾರಕ್ಕಾಗಿ ಬೈಕ್ ರ್ಯಾಲಿ ಹೊರಡಲಿದ್ದು ರ್ಯಾಲಿಗೂ ಚಾಲನೆ ನೀಡಲಾಯಿತು.

ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ‘ಕೆರೆಬೇಟೆ’ ಸಿನಿಮಾ ಟೈಟಲ್ ಟ್ರ್ಯಾಕ್ ಮೂಲ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಇದೇ ಮಾರ್ಚ್ 15ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕೆರಬೇಟೆ ಸಿನಿಮಾ ಹೇಗಿರಲಿದೆ, ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

Categories
ಸಿನಿ ಸುದ್ದಿ

ಜೋಗ್ 101; ಇದು ವಿಜಯ ರಾಘವೇಂದ್ರ ಚಿತ್ರ: ಮಾರ್ಚ್ 7ಕ್ಕೆ ರಿಲೀಸ್

ನಿರ್ಮಾಪಕ & ಕ್ರಿಯೇಟಿವ್ ಡೈರೆಕ್ಟರ್ ರಾಘು ರವರ ಸೆವೆನ್ ಸ್ಟಾರ್ ಪಿಚ್ಚರ್ಸ್ ಪ್ರೊಡಡಕ್ಷನ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಹಾಗೂ ಕರ್ನಾಟಕದ
ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅಭಿನಯಯದ, ವಿಜಯ್ ಕನ್ನಡಿಗ ನಿರ್ದೇಶನ ಹೊಂದಿರುವ ‘ಜೋಗ್ 101’ ಚಿತ್ರವು ಇದೇ ಮಾರ್ಚ್ 07 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರದಲ್ಲಿ ತೇಜಸ್ವಿನಿ ಶೇಖರ್, ತಿಲಕ್ ಶೇಖರ್, ಕಡ್ಡಿಪುಡಿ ಚಂದ್ರು, ರಾಜೇಶ್ ನಟರಂಗ, ಗೋವಿಂದೇ ಗೌಡ, ನಿರಂಜನ್ ದೇಶಪಾಂಡೆ ಹಾಗು ಇನ್ನು ಮುಂತಾದ
ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಅವಿನಾಶ್ ಆರ್ ಬಸುತ್ಕರ್ ರವರ ಸಂಗೀತವಿದ್ದು, ಸುನೀತ್ ಹಲಗೇರಿಯವರ ಛಾಯಾಗ್ರಹಣವನ್ನು ಹೊಂದಿದೆ.

ವಿಶ್ವವಿಖ್ಯಾತ ಜೋಗ್ ಜಲಪಾತದ ಸುತ್ತಮುತ್ತಲಿನ ಕಾಡುಗಳಲ್ಲಿ, ಮಲೆನಾಡ
ಸೊಬಗಿನ ಜೊತೆ ಒಂದು ಸಂಗೀತಮಯವಾದ ಥ್ರಿಲ್ಲರ್ ಅನುಭವವನ್ನು “ಜೋಗ್ 101” ಚಿತ್ರ ಕಟ್ಟಿಕೊಡುತ್ತದೆ.

Categories
ಸಿನಿ ಸುದ್ದಿ

ದಿಲ್ ಖುಷ್ ಸಿನಿಮಾದ ಖುಷಿಯ ಹಾಡು ನೀನೇ ನೀನೇ ರಿಲೀಸ್ ಆಯ್ತು

ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ದಿಲ್ ಖುಷ್” ಚಿತ್ರಕ್ಕಾಗಿ ಗೀತ ಸಾಹಿತಿ ಗೌಸ್ ಪೀರ್ ಅವರು ಬರದಿರುವ “ನೀನೇ ನೀನೇ” ಎಂಬ ಸುಮಧುರ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿದರು. “ಸರಿಗಮಪ” ಖ್ಯಾತಿಯ ನಿಹಾಲ್ ತೌರೊ ಹಾಗೂ ಆರತಿ ಅಶ್ವಿನ್ ಈ ಹಾಡಿಗೆ ಧ್ವನಿಯಾಗಿದ್ದು ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿದ್ದಾರೆ.

ಚಿತ್ರದ ಹಾಡುಗಳು ಹಾಗೂ ಟೀಸರ್ ತುಂಬಾ ಚೆನ್ನಾಗಿದೆ. ಪ್ರಮೋದ್ ಜಯ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ. ಹಾಡುಗಳು ಹಾಗೂ ಟೀಸರ್ ಮೂಲಕ ಪ್ರಮೋದ್ ಜಯ ಭರವಸೆ ಮೂಡಿಸಿದ್ದಾರೆ. ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿರುವ ವಿಶ್ವಾಸ ನಮಗಿದೆ. ಉತ್ತಮ ಕಥೆಗಳಿರುವ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರುತ್ತಿದೆ. ದಯವಿಟ್ಟು ಜನ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬನ್ನಿ. ಆಗ ಮಾತ್ರ ಚಿತ್ರಗಳು ಯಶಸ್ಸಿಯಾಗಲು ಸಾಧ್ಯ ಎಂದರು ಅತಿಥಿಗಳಾಗಿ ಆಗಮಿಸಿದ್ದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗು ಬಹದ್ದೂರ್ ಚೇತನ್ ಕುಮಾರ್.

ನಾನು ಸಿಂಪಲ್ ಸುನಿ ಅವರ ಹತ್ತಿರ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಸಾಕಷ್ಟು ಕೆಲಸ ಕಲಿತ್ತಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಹಾಡು ಬಿಡುಗಡೆ ಮಾಡಿಕೊಟ್ಟ ಮೂರು ಜನ ನಿರ್ದೇಶಕರಿಗೆ ಧನ್ಯವಾದ. ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ನಿರ್ದೇಶಕ ಪ್ರಮೋದ್ ಜಯ ತಿಳಿಸಿದರು.

ಈ ಚಿತ್ರದಲ್ಲಿ ಖುಷ್ ನನ್ನ ಹೆಸರು. ಲವಲವಿಕೆ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ರಂಜಿತ್. ದಿಲ್ಮಯ ನನ್ನ ಪಾತ್ರದ ಹೆಸರು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಸ್ಪಂದನ ಸೋಮಣ್ಣ. ನಟರಾದ ಧರ್ಮಣ್ಣ, ರಘು ರಾಮನಕೊಪ್ಪ ಮಂತಾದ ಕಲಾವಿದರು ಹಾಗೂ ಚಿತ್ರತಂಡದ ಸದಸ್ಯರು “ದಿಲ್ ಖುಷ್” ಚಿತ್ರದ ಬಗ್ಗೆ ಮಾತನಾಡಿದರು.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ “ದಿಲ್ ಖುಷ್” ಚಿತ್ರವನ್ನು ನಿರ್ಮಿಸಿದ್ದಾರೆ.

Categories
ಸಿನಿ ಸುದ್ದಿ

ಪರವಶರಾದ ಕ್ರೇಜಿಸ್ಟಾರ್: ಟೈಟಲ್ ಪೋಸ್ಟರ್ ಬಂತು

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನೂತನ ಪ್ರತಿಭೆ ರಘು ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ನೂತನ ಚಿತ್ರವೊಂದರ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದ್ದು, ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ನೆಲಮಂಗಲದ ಬಳಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಅನಾವರಣವಾಯಿತು. ಚಿತ್ರಕ್ಕೆ “ಪರವಶ” ಎಂದು ಹೆಸರಿಡಲಾಗಿದೆ. ಖ್ಯಾತ ನಿರೂಪಕಿ ಅನುಶ್ರೀ ಅವರ ಅಚ್ಚುಕಟ್ಟಾದ ನಿರೂಪಣೆಯಲ್ಲಿ ಸಮಾರಂಭ ನೆರವೇರಿತು.

ಅವ್ಯಕ್ತ ಸಿನಿಮಾಸ್ ಲಾಂಛನದಲ್ಲಿ ಹರೀಶ್ ಗೌಡ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಸುಧೀಂದ್ರ ನಾಡಿಗರ್ ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಹೊಸತಂಡದ ಜೊತೆಗೆ ಕೆಲಸ ಮಾಡಿರುವುದು ಖುಷಿಯಾಗಿದೆ. ನಾನು ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನನ್ನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ನಿರ್ದೇಶಕ ಸುಧೀಂದ್ರ ನಾಡಿಗರ್ ಅವರ ‌ನಿರ್ದೇಶನದ ಶೈಲಿ ವಿನೂತನವಾಗಿದೆ. ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಈಗಾಗಲೇ ನಲವತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಮಂಗಳೂರು, ಉಡುಪಿ, ಮಣಿಪಾಲ ಹಾಗೂ ಕುಂದಾಪುರದಲ್ಲಿ ಚಿತ್ರೀಕರಣವಾಗಿದೆ. ರವಿಚಂದ್ರನ್, ರಘು ಭಟ್, ಸೋನಾಲ್ ಮೊಂಟೆರೊ, ಪವಿತ್ರ ಲೋಕೇಶ್, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಅನನ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.

ನಾಯಕ ರಘು ಭಟ್ “ಪರವಶ” ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಹಾಗೂ ಪ್ರತೀಕ್ ಶೆಟ್ಟಿ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಪ್ರಮೋದ್ ಮರವಂತೆ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ನಿಡವಳ್ಳಿ ಬರೆದಿದ್ದಾರೆ ಎಂದು ನಿರ್ದೇಶಕ ಸುಧೀಂದ್ರ ನಾಡಿಗರ್ ತಿಳಿಸಿದರು.

ನಮ್ಮೂರಿನಲ್ಲಿ ನಾನು ನಿರ್ಮಿಸುತ್ತಿರುವ “ಪರವಶ” ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿರುವುದು ಖುಷಿಯಾಗಿದೆ. ಹೊಸತಂಡಕ್ಕೆ ಪ್ರೋತ್ಸಾಹ ನೀಡುತ್ತಿರುವ ರವಿಚಂದ್ರನ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಹರೀಶ್ ಗೌಡ.

ಥ್ರಿಲ್ಲರ್, ಕೌಟುಂಬಿಕ ಹಾಗೂ ಪ್ರೇಮ ಕಥಾಹಂದರವುಳ್ಳ “ಪರವಶ” ಚಿತ್ರದಲ್ಲಿ ಜನರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಒಟ್ಟಿನಲ್ಲಿ ಪ್ರೇಕ್ಷಕ ಕೊಟ್ಟ ದುಡ್ಡಿಗೆ ದುಪ್ಪಟ್ಟು ಮನೋರಂಜನೆ ನೀಡುವ ಚಿತ್ರವಿದು. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಚಿತ್ರದ ಹಾಡುಗಳು ಕೂಡ ಮುದ ನೀಡುತ್ತದೆ ಎಂದು ನಾಯಕ ಹಾಗೂ ಕಥೆಗಾರ ರಘು ಭಟ್ ತಿಳಿಸಿದರು.

ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ.‌ ಈ ತಂಡದ ಜೊತೆಗೆ ಕೆಲಸ ಮಾಡಿದ್ದು ಸಂತೋಷವಾಗಿದೆ ಎಂದರು ನಾಯಕಿ ಸೋನಾಲ್ ಮೊಂಟೆರೊ

ಕಲಾವಿದರಾದ ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಅನನ್ಯ ಹಾಗೂ ಛಾಯಾಗ್ರಾಹಕ ಆನಂದ್ ಮೀನಾಕ್ಷಿ ಚಿತ್ರತಂಡದ ಅನೇಕ ಸದಸ್ಯರು ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಕೋರ ಹಾಡು ಬಂತು: ಇದು ಸುನಾಮಿ ಕಿಟ್ಟಿ ಚಿತ್ರ

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ “ಕೋರ” ಚಿತ್ರದ “ಬಾನಿನಿಂದ” ಹಾಡು ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಮಹರ್ಷಿ ಆನಂದ ಗುರೂಜಿ ಅವರು ಗೊಲ್ಲಹಳ್ಳಿ ಶಿವಪ್ರಸಾದ್ ಬರೆದಿರುವ, ರವೀಂದ್ರ ಸೊರಗಾವಿ ಅವರು ಹಾಡಿರುವ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಬಿ.ಆರ್.ಹೇಮಂತ್ ಕುಮಾರ್ ಈ ಚಿತ್ರದ ಸಂಗೀತ ನಿರ್ದೇಶಕರು.

“ಕೋರ” ಎಂದರೆ ಬುಡಕಟ್ಟು ಜನಾಂಗದ ಹೆಸರು ಎಂದು ಮಾತನಾಡಿದ ನಿರ್ಮಾಪಕ ಪಿ.ಮೂರ್ತಿ, ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತ ತಲುಪಿದೆ. ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಒರಟ ಶ್ರೀ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸುನಾಮಿ ಕಿಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ನಮ್ಮ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಏಕೆಂದರೆ ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ನಡೆದಿರುವುದು ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ.

ಆ ಸ್ಥಳಗಳಲ್ಲಿ ಅನುಕೂಲತೆ ಕಡಿಮೆ. ಅಂತಹ ಸ್ಥಳಗಳಲ್ಲೂ ಯಾವುದೇ ಅಡೆತಡೆ ಇಲ್ಲದೆ ಚಿತ್ರೀಕರಣವಾಗಲು ತಂಡದ ಸಹಕಾರವೇ ಕಾರಣ. ಇನ್ನು ಹೇಮಂತ್ ಕುಮಾರ್ ಅವರು ಸಂಗೀತ ನೀಡಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ. ವಿಶೇಷವಾಗಿ ಇಂದು ಬಿಡುಗಡೆಯಾಗಿರುವ “ಬಾನಿನಿಂದ” ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ. ಹಾಡು ಬಿಡುಗಡೆ ಮಾಡಿಕೊಟ್ಟ ಆನಂದ್ ಗುರೂಜಿ ಅವರಿಗೆ ಮತ್ತು ಆಗಮಿಸಿರುವ ಗಣ್ಯರಿಗೆ ಧನ್ಯವಾದ ಎಂದರು.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ನಮ್ಮ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಅವರು ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರವಿದು. ಸುನಾಮಿ ಕಿಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚರಿಶ್ಮಾ “ಕೋರ” ಚಿತ್ರದ ನಾಯಕಿ. ನಿರ್ಮಾಪಕ‌ ಪಿ. ಮೂರ್ತಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಒರಟ ಶ್ರೀ.

ನನ್ನನ್ನು ನಾಯಕನನ್ನಾಗಿ ಮಾಡಿದ ಪಿ.ಮೂರ್ತಿ ಅವರಿಗೆ ಧನ್ಯವಾದ ತಿಳಿಸಿತ್ತಾ, ಹುಟ್ಟುಹಬ್ಬದ ಶುಭಾಶಯ ಕೂಡ ಹೇಳುತ್ತೇನೆ. ಅವರ ಹುಟ್ಟುಹಬ್ಬದ ದಿನ ಈ ಹಾಡು ಬಿಡುಗಡೆಯಾಗಿರುವುದು ವಿಶೇಷ. ರಿಯಾಲಿಟಿ ಶೋ ಮೂಲಕ ಪರಿಚಿತನಾದ ನನಗೆ ಕರುನಾಡ ಜನತೆ ನೀಡಿರುವ ಪ್ರೀತಿ ಅಪಾರ. ಅದೇ ಪ್ರೀತಿ ಈಗಲೂ ಮುಂದುವರೆಯಲಿ ಎಂದು ಸುನಾಮಿ ಕಿಟ್ಟಿ ತಿಳಿಸಿದರು.

ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ನಟರಾದ ಎಂ.ಕೆ.ಮಠ, ಮುನಿ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಗಾಯಕ ರವೀಂದ್ರ ಸೊರಗಾವಿ ಮುಂತಾದ ಚಿತ್ರತಂಡದ ಸದಸ್ಯರು “ಕೋರ” ಚಿತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಆರ್ಗ್ಯಾನಿಕ್ ಕಥೆಯೊಳಗೆ ಮನಸ್ಸುಗಳು ಬಂಧಿ!

ಚಿತ್ರ ವಿಮರ್ಶೆ
ರೇಟಿಂಗ್: 3 /5

ನಿರ್ದೇಶನ, ನಿರ್ಮಾಣ : ದಿವಾಕರ್ ಡಿಂಡಿಮ
ತಾರಾಗಣ: ಮಾನಸಿ ಸುಧೀರ್, ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅರ್ಚನಾ ಕೊಟ್ಟಿಗೆ, ಅರವಿಂದ್ ರಾವ್, ಅಶ್ವಿನ್ ರಾವ್ ಪಲ್ಲಕ್ಕಿ ಇತರರು.

ಒಂದು ಕಡೆ ಹುಡುಗ ಹುಡುಗಿಯ ವಾಸ್ತವತೆಯ ಮಾತು ಕತೆ. ಮತ್ತೊಂದೆಡೆ ಮೂಗ, ಕಿವುಡ ಮತ್ತು ಅಂಧನೊಬ್ಬನ ಪೀಕಲಾಟ. ಇನ್ನೊಂದೆಡೆ ತಾಯಿ ಆಗಬೇಕೆಂಬ ಹಂಬಲ ಇರೋ ಬಂಜೆಯೊಬ್ಬಳ ಒಳನೋವಿನ ಕಣ್ಣೀರು…

ಈ ಮೂರು ಟ್ರಾಕ್ ಇಟ್ಟುಕೊಂಡು ಒಂದೊಳ್ಳೆಯ ಬರಹದ ಮೂಲಕ ಗಟ್ಟಿ ಕಥೆ ಕಟ್ಟಿಕೊಟ್ಟಿರುವ ಜುಗಲ್ ಬಂದಿ, ನಿಜಕ್ಕೂ ಮನ ತಟ್ಟುವ ಚಿತ್ರ. ಒಂದೇ ಮಾತಲ್ಲಿ ಹೇಳೋದಾದರೆ, ಇದು ಎಲ್ಲರೊಳಗಿನ ಜುಗಲ್ ಬಂದಿ. ನೆನಪುಗಳ ಹೂರಣದ ಸಾರ ಇಲ್ಲಿ ಬಂಧುವಾಗಿದೆ ಮತ್ತು ಬಂದಿಯಾಗಿದೆ.

ನಿರ್ದೇಶಕ ದಿವಾಕರ್ ಡಿಂಡಿಮ ಅವರು ಮೊದಲ ಪ್ರಯತ್ನದಲ್ಲೇ ಬಾಲ್ ಬೀಟ್ ಮಾಡದೆ ಬೌಂಡರಿ ಟಚ್ ಮಾಡಿದ್ದಾರೆ. ಅವರೊಳಗೊಬ್ಬ ಅತ್ಯುತ್ತಮ ಬರಹಗಾರ ಇದ್ದಾನೆ. ಕನ್ನಡ ಚಿತ್ರರಂಗದಲ್ಲಿ ಬರಹಗಾರರಿಗೆ ಕೊರತೆ ಇಲ್ಲ ಅನ್ನೋದಕ್ಕೆ ಈ ಸಿನಿಮಾ ಮತ್ತೊಂದು ಸಾಕ್ಷಿ ಎನ್ನಬಹುದು.

ಜುಗಲ್ ಬಂದಿ ನೋಡಿ ಹೊರ ಬಂದವರಿಗೆ ಕೊಂಚ ಎದೆ ಭಾರ ಎನಿಸದಿರದು. ಕಾರಣ, ನಿರ್ದೇಶಕರು ಕಟ್ಟಿಕೊಟ್ಟಿರುವ ಈ ನೆಲದ ಗಟ್ಟಿ ಕಥೆ. ಅದರಲ್ಲೂ ವಾಸ್ತವಕ್ಕೆ ಹತ್ತಿರ ಎಂಬಂತೆ ಭಾಸವಾಗುವ ಪಾತ್ರಗಳು, ಸನ್ನಿವೇಶಗಳು ನೋಡುಗರ ಕಣ್ಮನ ತಟ್ಟುತ್ತವೆ. ಸೂಕ್ಷ್ಮ ಸಂವೇದನೆಯ ಅಂಶ ಸಿನಿಮಾದುದ್ದಕ್ಕೂ ಎಡತಾಕುತ್ತದೆ.

ಮೊದಲು ಇಲ್ಲಿ ಇಷ್ಟ ಆಗೋದು ಕಥೆ. ಅದು ಸಿಂಪಲ್ ಎನಿಸಿದರೂ, ನಿರೂಪಣೆ ವಿಷಯದಲ್ಲಿ ಗೊಂದಲವಿಲ್ಲ. ಆರಂಭದಿಂದ ಅಂತ್ಯದವರೆಗೂ ಚಿತ್ರಕಥೆಯ ಹಿಡಿತ ಸಡಿಲವಾಗಿಲ್ಲ. ಹಾಗಾಗಿ ಸಿನಿಮಾದ ಮೊದಲರ್ಧ ಮುಗಿಯೋದು ಗೊತ್ತಾಗಲ್ಲ. ದ್ವಿತಿಯಾರ್ಧ ಜುಗಲ್ ಬಂದಿಯ ಮಾತುಕತೆ ನೋಡುವ ಕುತೂಹಲ ಹೆಚ್ಚಿಸುತ್ತಾ ಹೋಗುತ್ತೆ.

ಇಲ್ಲಿ ಮುಖ್ಯವಾಗಿ ಆಸೆ, ದುರಾಸೆ, ಪ್ರೀತಿ, ಬದುಕು, ಹತಾಶೆ, ಅಸಹಾಯಕತೆ, ಹಂಬಲ ಇತ್ಯಾದಿ ಕಾಣಸಿಕ್ಕರೂ ಕೊಂಚ ತಿಳಿ ಹಾಸ್ಯದೊಂದಿಗೆ ಭಾವುಕತೆ ಹೆಚ್ಚಿಸುತ್ತಾ ಹೋಗುತ್ತದೆ. ಅದೇ ಸಿನಿಮಾದ ಜೀವಾಳ.

ಸಿನಿಮಾ ಸರಾಗವಾಗಿ ಸಾಗಲು ಸಂಗೀತ ಹಾಗು ಕ್ಯಾಮರಾ ಕೈಚಳಕ ಸಾಥ್ ನೀಡಿದೆ. ಖುಷಿ ಕೊಡೋದು ಸಂಭಾಷಣೆ. ಮಜವೆನಿಸೋ ದೃಶ್ಯಗಳ ಜೊತೆಯಲ್ಲೇ ಆಗಾಗ ತಾಯಿ ತನ್ನ ಮಗುವಿನಿಂದ ‘ಅಮ್ಮ’ ಅಂತ ಕರೆಸಿಕೊಳ್ಳಬೇಕೆಂಬ ಹಂಬಲದ ದೃಶ್ಯಕೂಡ ಇಲ್ಲಿ ಕಣ್ತುಂಬಿಸದೇ ಇರದು.

ಕಥೆ ಇಷ್ಟು…

ಉದ್ಯಮಿಯೊಬ್ಬ ಖರೀದಿಸಿ ಮನೆಯೊಳಗಿಟ್ಟ ಬೆಲೆಬಾಳುವ ಕ್ರಿಸ್ಟಲ್ ಕದಿಯೋಕೆ ಅಂತ ಬರುವ ಮಾತು ಬಾರದ, ಕಿವಿ ಕೇಳದ ಕಳ್ಳ, ಅದಾಗಲೇ ಆ ಮನೆಯೊಳಗಿರೋ ಮತ್ತೊಬ್ಬ ‘ಅಂಧ’ ಕಳ್ಳ. ಈ ಇಬ್ಬರ ನಡುವಿನ ಜುಗಲ್ ಬಂದಿ ಮಧ್ಯೆ ಕಾಣಸಿಗೋ ಹುಡುಗ ಹುಡುಗಿಯ ಲವ್ ಸ್ಟೋರಿ, ಅಮ್ಮನಾಗೋ ಹಂಬಲದಲ್ಲಿ ನೋವಲ್ಲೇ ದಿನದೂಡುವ ತಾಯಿಯೊಬ್ಬಳ ಕಣ್ಣೀರಧಾರೆ. ಇದರ ಮಧ್ಯೆ ಬರುವ ಒಂದಷ್ಟು ತರಹೇವಾರಿ ಪಾತ್ರಗಳು.

ಇಷ್ಟಕ್ಕೂ ಆ ಬೆಲೆಬಾಳುವ ಕ್ರಿಸ್ಟಲ್ ಯಾರ ಕೈ ಸೇರುತ್ತೆ. ಆ ಯುವ ಪ್ರೇಮಿಗಳು ಒಂದಾಗುತ್ತಾರಾ? ಆ ತಾಯಿ ಆಸೆ ಈಡೇರುತ್ತಾ? ಈ ಕುತೂಹಲ ಇದ್ದರೆ ಒಮ್ಮೆ ಜುಗಲ್ ಬಂದಿ ನೋಡಲ್ಲಡ್ಡಿಯಿಲ್ಲ.

ಯಾರು ಹೇಗೆ?

ಇಲ್ಲಿ ಮಗುವಿಗಾಗಿ ಹಂಬಲಿಸುವ ತಾಯಿಯಾಗಿ ಮಾನಸಿ ಸುಧೀರ್ ಗಮನ ಸೆಳೆದರೆ, ಅಂಧನಾಗಿ ಯಶ್ ಶೆಟ್ಟಿ ಇಷ್ಟವಾಗುತ್ತಾರೆ. ಕಿವಿ ಕೇಳದ, ಮಾತು ಬಾರದ ಕಳ್ಳನಾಗಿ ಸಂತೋಷ್ ಆಶ್ರಯ್ ಸ್ಕೋರ್ ಮಾಡಿದ್ದಾರೆ. ಅರ್ಚನಾ ಕೊಟ್ಟಿಗೆ, ಅಶ್ವಿನ್, ಅರವಿಂದ್ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಬರುವ ಪಾತ್ರಗಳನ್ನು ಕಡೆಗಣಿಸುವಂತಿಲ್ಲ.

ಪ್ರದ್ಯೋತ್ನ ಸಂಗೀತದ ಎರಡು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತಕ್ಕಿನ್ನು ಧಮ್ ಇರಬೇಕಿತ್ತು. ಕ್ಯಾಮರಾ ಕೆಲಸ ಜುಗಲ್ ಬಂದಿ ಅಂದ ಹೆಚ್ಚಿಸಿದೆ.

Categories
ಸಿನಿ ಸುದ್ದಿ

ವಿದ್ಯಾಪತಿಗೆ ಜೋಡಿಯಾದ ಉಪಾಧ್ಯಕ್ಷ ಸುಂದರಿ: ನಾಗಭೂಷಣ್ ಚಿತ್ರಕ್ಕೆ ಮಲೈಕಾ ವಸುಪಾಲ್ ನಾಯಕಿ

ವಿದ್ಯಾಪತಿಯಾಗಿರುವ ನಾಗಭೂಷಣ್ ಗೆ ಜೋಡಿ ಸಿಕ್ಕಾಗಿದೆ. ಉಪಾಧ್ಯಕ್ಷ ಸುಂದರಿ ಈಗ ಡಾಲಿ ಬಳಗ ಸೇರ್ಪಡೆಯಾಗಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ಟಗರು ಪಲ್ಯ ಸಕ್ಸಸ್ ಬಳಿಕ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ಮತ್ತೊಮ್ಮೆ ಧನು ಹಾಗೂ ನಾಗಭೂಷಣ್ ಕೈ ಜೋಡಿಸಿದ್ದು, ಈ ಚಿತ್ರಕ್ಕೆ ವಿದ್ಯಾಪತಿ ಎಂಬ ಟೈಟಲ್ ಇಡಲಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ ಇಂದು ನಾಯಕಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.

ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಚಿಕ್ಕಣ್ಣನಿಗೆ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿ ಮಿಂಚಿದ್ದ ಮಲೈಕಾ ವಸೂಪಾಲ್ ಈಗ ವಿದ್ಯಾಪತಿಗೆ ಜೋಡಿಯಾಗಿದ್ದಾರೆ. ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಮಲೈಕಾ ಉಪಾಧ್ಯಕ್ಷ ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾವೇ ಅವರಿಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದೆ. ಉಪಾಧ್ಯಕ್ಷ ಸಿನಿಮಾದಲ್ಲಿ ಇವ್ರ ನಟನೆ ನೋಡಿ ಮೆಚ್ಚಿಕೊಂಡಿರುವ ವಿದ್ಯಾಪತಿ ಟೀಂ ತಮ್ಮ ತಂಡಕ್ಕೆ ಅವರನ್ನು ಸ್ವಾಗತಿಸಿದೆ.

ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ವಿದ್ಯಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಸಿಂಪಲ್ ಆಗಿರುವ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ವಿದ್ಯಾಪತಿ ಚಿತ್ರದಲ್ಲಿ ನಾಗಭೂಷಣ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಮಾರ್ಚ್ ತಿಂಗಳಿನಿಂದ ವಿದ್ಯಾಪತಿ ನಾಯಕಿ ಮಲೈಕಾ ವಸೂಪಾಲ್ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.

error: Content is protected !!