ಚಿದಂಬರನ ರುಚಿಸುವ ಶುಚಿಸುವ ಕಥೆ

ರೇಟಿಂಗ್ : 3/5

ನಿರ್ದೇಶನ : ಆನಂದ್ ರಾಜ್ ಎಂ.
ನಿರ್ಮಾಣ : ರೂಪ ಡಿ.ಎನ್
ತಾರಾಗಣ: ಅನಿರುದ್ಧ, ರಚೆಲ್ ಡೇವಿಡ್, ನಿಧಿ ಸುಬ್ಬಯ್ಯ, ಶರತ್ ಲೋಹಿತಾಶ್ವ, ಶಿವಮಣಿ ಇತರರು.

ಅನಿರುದ್ಧ ಅವರು ಸಹಜ ಅಭಿನಯಕ್ಕೆ ಸುದ್ದಿಯಾದವರು. ಯಾವುದೆ ಪಾತ್ರ ಇರಲಿ ಸೈ ಎನಿಸಿಕೊಂಡವರು. ಈಗ ಶೆಫ್ ಆಗಿಯೂ ರುಚಿಸುವ ನಟನೆ ಕೊಡಬಲ್ಲೆ ಅಂತ ಸಾಬೀತು ಪಡಿಸಿದ್ದಾರೆ.

ಈ ವಾರ ತೆರೆಕಂಡ ಶೆಫ್ ಚಿದಂಬರ ಹೊಸ ವ್ಯಾಖ್ಯಾನದೊದಿಗೆ ಪ್ರೇಕ್ಷಕರ‌ ಮುಂದೆ ಬಂದಿದೆ. ಹೊಡಿ ಬಡಿ ಕಡಿ ಕಥೆಗಳ ಜೊತೆಗೆ ಒಂದೊಳ್ಳೆಯ ಮನರಂಜನೆ ಮತ್ತು ಅಲ್ಲಲ್ಲಿ ಕುತೂಹಲ ಮೂಡಿಸುವ ಕಥೆ ಜೊತೆಗೆ ಪ್ರೇಕ್ಷಕರನ್ನು ನೋಡಿಸಿಕೊಂಡು ಹೋಗುತ್ತದೆ.

ನಿರ್ದೇಶಕ ಆನಂದರಾಜ್ ಅವರ ಕಥೆಯಲ್ಲಿ ಹೊಸತನವಿದೆ. ಚಿತ್ರಕಥೆಯಲ್ಲೂ ಬಿಗಿಹಿಡಿತವಿದೆ. ಇನ್ನು ನಿರೂಪಣೆ ಶೈಲಿಯ ವಿಧಾನ ಕೂಡ ಇಷ್ಟ ಆಗುತ್ತೆ. ಒಬ್ಬ ಅಡುಗೆ ಮಾಡುವ ನಿಪುಣನ ತರಹೇವಾರಿ ತೊಳಲಾಟಗಳನ್ನು ಅಷ್ಟೇ ಚಂದವಾಗಿ ಕಟ್ಟಿಕೊಟ್ಟಿದ್ದಾರೆ.

ಮೊದಲರ್ಧ ಸರಾಗವಾಗಿ ಸಾಗುವ ಕಥೆಯಲ್ಲಿ ಸಾಕಷ್ಟು‌ ಮಜಬೂತು ಎನಿಸುವ ಅಂಶಗಳಿವೆ. ಒಬ್ಬ ಶೆಫ್ ಬರೀ ರುಚಿಸುವ ಖಾದ್ಯ ಮಾಡುವಲ್ಲಿ ನಿಪುಣ ಅಲ್ಲ, ಒಂದು ಘಟನೆಯಲ್ಲಿ ಸಿಲುಕಿದ ಬಳಿಕವೂ ಹೇಗೆ ಪಾರಾಗುತ್ತಾನೆ ಎಂಬುದರಲ್ಲೂ ಜಾಣತನ ಮೆರೆಯುತ್ತಾನೆ ಅನ್ನೋದನ್ನು ಸೊಗಸಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಒಂದಷ್ಟು ಸಣ್ಣಪುಟ್ಟ ಅಂಶಗಳ ಕಡೆ ಗಮನ ಹರಿಸಿದ್ದರೆ, ಚಿದಂಬರನ ಕಥೆ ಮತ್ತಷ್ಟು ರುಚಿಸುತ್ತಿತ್ತು. ಅದೇನೆ ಇದ್ದರೂ ಕೆಲವು ಸನ್ನಿವೇಶಗಳು ರುಚಿಗೆ ತಕ್ಕಷ್ಟು ಉಪ್ಪಿನಂತೆ ರುಚಿಸುತ್ತ ಹೋಗುತ್ತವೆ. ಕಥೆಗೆ ಪೂರಕವಾಗಿರುವ ಹಾಡು ಕೂಡ ಗಮನಸೆಳೆಯುತ್ತೆ.

ಚಿದಂಬರನ ಕಥೆ ಏನು?

ತನ್ನ ಪಾಡಿಗೆ ತಾನು ಶೆಫ್ ಕೆಲಸ ಮಾಡಿಕೊಂಡು ತನ್ನ ಪ್ರೀತಿಯ ಹುಡುಗಿಯ ಜೊತೆ ದಿನ ಸವೆಸುವ ಚಿದಂಬರ ಬದುಕಲ್ಲಿ ಒಂದು ಘಟನೆ ನಡೆಯುತ್ತೆ. ತನಗೇ ಅರಿವಿಲ್ಲದೆ ಒಂದು ಕ್ರಮಿನಲ್ ಲೋಕಕ್ಕೆ ಸಿಕ್ಕಿಕೊಳ್ಳುತ್ತಾನೆ. ಒಂದು ಸಾವು ವಿಷಯವನ್ನು ಯಾರಿಗೂ ಗೊತ್ತಾಗಬಾರದು ಅಂತ ಅದನ್ನು ಮುಚ್ಚಿಡಲು ಹೋಗಿ ಒಂದಷ್ಟು ಪೇಚಿಗೆ ಸಿಲುಕುತ್ತಾನೆ. ಆಮೇಲೆ ಹೇಗೆ ಅದಕ್ಕೆ ಅಂತ್ಯ ಹೇಳುತ್ತಾನೆ ಎಂಬುದು ವಿಶೇಷ.

ಸಿನಿಮಾದುದ್ದಕ್ಕೂ ಮಜ ಎನಿಸುವ ಅಂಶಗಳ ಜೊತೆಗೆ ಒಂದಷ್ಟು ಒದ್ದಾಡುವ ಸೀನ್ ಗಳು ನಗುತರಿಸುತ್ತವೆ. ಇನ್ನು ಒಬ್ಬಾಕೆಯ ಕೊಡುವ ದೊಡ್ಡ ಡೀಲ್ ಯಾವುದು? ಅದರಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದು ಕಥೆಯ ತಿರುಳು. ಇದರ ಮಧ್ಯೆ ಒಂದಷ್ಟು ಪಾತ್ರಗಳು ಕಾಣಿಸಿಕೊಂಡು ಸಿನಿಮಾ ವೇಗವನ್ನು ಹೆಚ್ಚಿಸುತ್ತಾ ಹೋಗುತ್ತವೆ. ಒಟ್ಟಾರೆ, ಒಂದು ಇಂಟ್ರೆಸ್ಟಿಂಗ್ ಎಲಿಮೆಂಟ್ಸ್ ಇದರಲ್ಲಿದೆ. ಅದರ ರುಚಿ ಸವಿಯುವ ಕುತೂಹಲ ಇದ್ದರೆ ಒಮ್ಮೆ ಶೆಫ್ ಚಿದಂಬರನ ನೋಡಬಹುದು.

ಮುಖ್ಯವಾಗಿ ಇಲ್ಲಿ ಹಣಕ್ಕಿಂತ ರುಚಿಸುವ ಅಡುಗೆ ಮುಖ್ಯ ಎಂಬ ಧೈಯವಾಕ್ಯ ಚಿದಂಬರನದು. ಅದೇನೆಂಬ ಕಾತರ ಇದ್ದರೆ ನೋಡಲ್ಲಡ್ಡಿಯಿಲ್ಲ.

ನಿರ್ದೇಶಕ ಆನಂದರಾಜ್ ಅವರ ಪ್ರಯತ್ನ ಕೂಡ ರುಚಿಸಿದೆ. ಹಾಸ್ಯ ಹಾಸುಹೊಕ್ಕಾಗಿಲ್ಲ. ಆದರೆ, ಪೋಣಿಸಿರುವ ಕಥೆಯಲ್ಲಿ ಫೋರ್ಸ್ ಇದೆ. ಮನುಷ್ಯನಲ್ಲಿರುವ ಆಸೆ ಆಕಾಂಕ್ಷೆ ಹೇಗೆಲ್ಲಾ ಇರುತ್ತೆ ಎಂಬುದನ್ನು ಕಥೆ ಹೇಳುತ್ತದೆ.

ಯಾರು ಹೇಗೆ?

ಹಲವು ಸಿನಿಮಾಗಳಲ್ಲಿ ಸಹಜ ನಟನಾಗಿ ಸೈ ಎನಿಸಿಕೊಂಡ ಅನಿರುದ್ಧ್ ಇಲ್ಲೂ ಅವರು ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಗೆದ್ದಿದ್ದಾರೆ‌. ಶೆಫ್ ಆಗಿ ಪರಿಪೂರ್ಣ ನಟರಾಗಿ ಮತ್ತೆ ಸಾಬೀತುಪಡಿಸಿದ್ದಾರೆ.
ಉಳಿದಂತೆ ಕಾಣಿಸಿಕೊಂಡಿರುವ
ರಚೆಲ್ ಡೇವಿಡ್, ನಿಧಿ ಸುಬ್ಬಯ್ಯ, ಶರತ್ ಲೋಹಿತಾಶ್ವ, ಶಿವಮಣಿ ಇತರರು ಕೂಡ ಪಾತ್ರಕ್ಕೆ ಮೋಸ‌ ಮಾಡಿಲ್ಲ. ಸಿನಿಮಾದ ವೇಗಕ್ಕೆ‌ಎಲ್ಲರೂ ಹೆಗಲಾಗಿದ್ದಾರೆ.

ಟೆಕ್ನೀಷಿಯನ್ಸ್ ಬಗ್ಗೆ ಹೇಳುವುದಾದರೆ ಉದಯಲೀಲಾ ಅವರ ಕ್ಯಾಮೆರಾ ಬಕೈಚಳಕ ಕೂಡ ಚಿದಂಬರನ ಆಟೋಟಾಪಗಳನ್ನು ಅಂದವಾಗಿಸಿದೆ. ಹಾಗೆಯೇ ರಿತ್ವಿಕ್ ಮುರಳಿಧರ್ ಸಂಗೀತ ಮತ್ತು ಹಿನ್ನೆಲೆ ಚಿತ್ರವನ್ನು‌ ಮತ್ತಷ್ಟು ರಂಜಿಸುವಲ್ಲಿ ಸಹಕಾರಿಯಾಗಿದೆ.

Related Posts

error: Content is protected !!