ಕನ್ನಡದಲ್ಲಿ ದಿನ ಕಳೆದಂತೆ ಹೊಸ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಸಂಕ್ರಾಂತಿ ಹಬ್ಬದ ದಿನದಂದೇ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ತಮ್ಮ ಎರಡನೇ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದೆ. ಹೌದು, ಅವರು ತಮ್ಮ ಹೊಸ ನಿರ್ಮಾಣದ ಸಿನಿಮಾಗೆ “ಹೊಯ್ಸಳ” ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿ ಸಾಕಷ್ಟು ಜನಪ್ರಿಯಗೊಂಡ “ರತ್ನನ್ ಪ್ರಪಂಚ” ಚಿತ್ರದ ನಿರ್ಮಾಪಕ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ವಿಶೇಷ.
ಇನ್ನು, ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರ್ ಅವರು ಈ ಚಿತ್ರವನ್ನು ಅರ್ಪಿಸುತಿದ್ದಾರೆ. ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಈ ಹಿಂದೆ “ಗೀತಾ” ಚಿತ್ರ ನಿರ್ದೇಶಿಸಿದ್ದ ವಿಜಯ್ ಹೊತ್ತುಕೊಂಡಿದ್ದಾರೆ. ಇನ್ನು, ಚಿತ್ರಕ್ಕೆ ಎಸ್.ಎಸ್.ತಮನ್ ಅವರು ಸಂಗೀತ ನೀಡುತ್ತಿದ್ದಾರೆ. ದೀಪು.ಎಸ್.ಕುಮಾರ್ ಸಂಕಲನ ಮಾಡಲ್ಲಿದ್ದಾರೆ. ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನವಿದೆ. ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. ಚಿತ್ರಕ್ಕೆ ಸುಧೀಂದ್ರ ವೆಂಕಟೇಶ್ ಪ್ರಚಾರಕರ್ತರು. ಅವರ ಜೊತೆ ಚಿತ್ರದ ಪ್ರಚಾರವನ್ನು ಕೆ.ಆರ್.ಜಿ ಕನೆಕ್ಟ್ಸ್ ಸಂಸ್ಥೆ ಮಾಡುತ್ತಿದೆ.
ವಿಶೇಷವೆಂದರೆ, ಈ ಚಿತ್ರದ ನಾಯಕರಾಗಿ ಧನಂಜಯ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಧನಂಜಯ ಅವರ ೨೫ ನೇ ಚಿತ್ರ ಅನ್ನೋದು ಮತ್ತೊಂದು ವಿಶೇಷ. ಅವರಿಗೆ ಈ ಚಿತ್ರ ಒಂದು ಮೈಲಿಗಲ್ಲು. ಚಿತ್ರದ ಬಹುತೇಕ ಚಿತ್ರೀಕರಣ ಬೆಳಗಾವಿ ಜೆಲ್ಲೆಯ ಅನೇಕ ಭಾಗಗಳಲ್ಲಿ ನಡೆಯಲಿದೆ. ಕಥೆಯ ಒನ್ಲೈನ್ ಹೇಳುವುದಾದರೆ, ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿ ಸುತ್ತ ಹೆಣೆದಿರುವ ಕಥೆ ಇದು. ಏಪ್ರಿಲ್ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಅನ್ನೋದು ಇಷ್ಟರಲ್ಲೇ ಗೊತ್ತಾಗಲಿದೆ.
ಸಂಕ್ರಾಂತಿ ಹಬ್ಬದಂದೇ ಭಜರಂಗಿ ಆಶೀರ್ವಾದ ಪಡೆದು “ಭೈರವ” ಚಿತ್ರಕ್ಕೆ ಚಾಲನೆ ದೊರೆತಿದೆ. ಶುಕ್ರವಾರ ಮುಹೂರ್ತ ನಡೆಸಿ ಶೂಟಿಂಗ್ ಚಟುವಟಿಕೆ ಶುರುಮಾಡಿದೆ. ಈ ಹಿಂದೆ ಮುಂಬೈನಲ್ಲಿ ಟೈಟಲ್ ಲಾಂಚ್ ಮಾಡಿ ಸುದ್ದಿಯಾಗಿದ್ದ ರಾಮತೇಜ್ ನಿರ್ದೇಶನದ ಭೈರವ ಇಂದು ಮೂಹರ್ತ ಕಾರ್ಯ ಮಾಡುವ ಮೂಲಕ ಚಿತ್ರೀಕರಣ ಪ್ರಾರಂಭಿಸಿದೆ.
ಉತ್ತರ ಪ್ರದೇಶದ ಗೋವಿಂದಪುರಿ ನಗರದ ಹನುಮಾನ್ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆದಿರುವುದು ವಿಶೇಷತೆಗಳಲ್ಲೊಂದು. ಉತ್ತರ ಪ್ರದೇಶದ ಬಿಜೆಪಿಯ ಮಖಂಡ ಡಾ.ಮಂಜು ಶಿವಾಜ್ ಅವರು ಮುಖ್ಯ ಅತಿಥಿಯಾಗಿ, ಚಿತ್ರಕ್ಕೆ ಕ್ಲಾಪ್ ಮಾಡಿದರು. ಚಿದಂಬರ ಕುಲಕರ್ಣಿ ಕಾಮೆರಾ ಚಾಲನೆ ಮಾಡಿದರು. ವೈಭವ ಬಜಾಜ್ ಮತ್ತು ಹನಿ ಚೌಧರಿ (ವಿಸಿಕಾ ಫಿಲ್ಮ್ಸ್ ಸಂಸ್ಥೆ) ಸೇರಿ ಅದ್ದೂರಿಯಾಗಿ ಈ ಚಿತ್ರವನ್ನು ಶುರುಮಾಡಿದ್ದಾರೆ.
ಉಳಿದಂತೆ ಕಮರೊಟ್ಟು ಚೆಕ್ಪೋಸ್ಟ್ ಖ್ಯಾತಿಯ ನಾಯಕ ಸನತ್, ಹಾಗೂ ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕಿ ಶೈಲಶ್ರಿ ಮುಲ್ಕಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಖಳನಟರಾಗಿ ಉಮೇಶ ಸಕ್ಕರೆನಾಡು ಇದ್ದಾರೆ. ಚಿತ್ರಕ್ಕೆ ಸಂದೀಪ್ ಫ್ರೇಡಿಕ್ ಕ್ಯಾಮೆರಾ ಹಿಡಿದರೆ, ಕಪಿಲ್ ದೀಕ್ಷಿತ್ ಸಹಾಯಕ ನಿರ್ದೆಶಕರು. ಕರುಣ್ ಕ್ಷೀತಿ ಸುವರ್ಣ ಸೇರಿದಂತೆ ಮೀರತ್ ನಗರದ ವಕೀಲರಾದ ರಾಜಕುಮಾರ ಗುಪ್ತಾ ಮತ್ತು ಡಾ.ಸಂಜೀವ ಚೌಧರಿ ಈ ವೇಳೆ ಇದ್ದರು.
ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾಲ ಪ್ರತಿಭೆ ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ನಿಜಕ್ಕೂ ಆಘಾತಕಾರಿ ವಿಷಯ. ತಾಯಿ ಮಗಳಿಬ್ಬರೂ ಹೋಗುತ್ತಿದ್ದ ವೇಳೆ ಕೋಣನಕುಂಟೆ ರಸ್ತೆಯಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಆರು ವರ್ಷದ ಮುಗ್ಧ ಬಾಲಕಿ ಸಮನ್ವಿ ಅಸುನೀಗಿದ್ದು ನಿಜಕ್ಕೂ ವಿಪರ್ಯಾಸ. ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು ಅನ್ನುವುದು ವಿಶೇಷ. ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಸಮನ್ವಿ, ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಕಿರುತೆರೆ ಲೋಕದಲ್ಲಿ ಮಿಂಚಿದ್ದರು
ಹೌದು… ಆಗಷ್ಟೇ ಚಿಗುರುತ್ತಿದ್ದ ಸುಪ್ತ ಪ್ರತಿಭೆಯೊಂದು ಕಣ್ಮರೆಯಾಗಿದೆ. ಅದು ಕೇವಲ ಕುಟುಂಬಕ್ಕೆ ಮಾತ್ರವಲ್ಲ ಕನ್ನಡ ಕಿರುತೆರೆ ಲೋಕಕ್ಕೇ ತುಂಬಲಾರದ ನಷ್ಟವೂ ಹೌದು. ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಬಾಲ ಪ್ರತಿಭೆ ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ನಿಜಕ್ಕೂ ಆಘಾತಕಾರಿ ವಿಷಯ. ನಟಿ ಅಮೃತಾ ನಾಯ್ಡು ಅವರ ಪುತ್ರಿ ಸಮನ್ವಿ. ಇವರಿಬ್ಬರೂ ಗುರುವಾರ ಸಂಜೆ ಸ್ಕೂಟಿಯಲ್ಲಿ ತಾಯಿ ಮಗಳಿಬ್ಬರೂ ಹೋಗುತ್ತಿದ್ದ ವೇಳೆ ಕೋಣನಕುಂಟೆ ರಸ್ತೆಯಲ್ಲಿ ಹಿಂದಿನಿಂದ ಬಂದ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಆರು ವರ್ಷದ ಮುಗ್ಧ ಬಾಲಕಿ ಸಮನ್ವಿ ಅಸುನೀಗಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು ಅನ್ನುವುದು ವಿಶೇಷ. ಚಿಕ್ಕ ವಯಸ್ಸಲ್ಲೇ ಅಗಾಧ ಪ್ರತಿಭೆ ಹೊಂದಿದ್ದ ಸಮನ್ವಿ, ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಕಿರುತೆರೆ ಲೋಕದಲ್ಲಿ ಮಿಂಚಿದ್ದರು. ಅಷ್ಟೇ ಅಲ್ಲ, ನೋಡುಗರ ಮನ ಗೆದ್ದಿದ್ದರು. ಇದೀಗ ಈ ದುರ್ಘಟನೆ ಸಂಭವಿಸಿದೆ. ಅವರ ತಾಯಿ ಅಮೃತಾ ಅವರೂ ಸಹ ಈ ಘಟನೆಯಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ತಿಳಿಯುತ್ತಿದ್ದಂತೆಯೇ ಕಿರುತೆರೆ ಲೋಕ ದುಃಖದ ಮಡುವಿನಲ್ಲಿ ಮುಳುಗಿದೆ. ಅದರಲ್ಲೂ ಆ ಶೋನ ತೀರ್ಪುಗಾರರಾಗಿದ್ದ ನಟಿ ತಾರಾ, ಅನುಪ್ರಭಾಕರ್ ಮತ್ತು ಸೃಜನ್ ಲೋಕೇಶ್ ಸೇರಿದಂತೆ ಇತರರು ಸಮನ್ವಿ ನಿಧನದಿಂದ ಅಘಾತಗೊಂಡಿದ್ದಾರೆ. ನಟಿ ತಾರಾ ಅವರಿಗೆ ಈ ಘಟನೆ ಕುರಿತಂತೆ ಹಲವರು ಫೋನ್ ಮಾಡಿದಾಗಲೇ ಅವರಿಗೊಂದು ರೀತಿ ಆತಂಕ ಶುರುವಾಗಿತ್ತಂತೆ. ಅದರಲ್ಲೂ, ಸಮನ್ವಿ ಇನಿಲ್ಲ ಎಂಬ ಸುದ್ದಿ ಕೇಳಿದಾಕ್ಷಣ, ತಾರಾ ಅವರು ನಂಬಲೇ ಇಲ್ಲ. ಕಾರಣ, ಕಳೆದ ಏಳೆಂಟು ವಾರಗಳ ಕಾಲ ಆ ಹುಡುಗಿ ತಾರಾ ಅವರೊಂದಿಗೇ ಇದ್ದಳು. ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಹನ್ನೆರೆಡು ಮಂದಿ ಅಮ್ಮಂದಿರು, ಅವರ ಹನ್ನೆರೆಡು ಮಕ್ಕಳು ಜೊತೆಯಲ್ಲಿದ್ದರು. ಅವರ ಒಡನಾಟ ಹೆಚ್ಚಾಗಿತ್ತು. ಒಂದು ರೀತಿ ಆ ಶೋನಲ್ಲಿದ್ದ ಎಲ್ಲರೂ ಒಂದೇ ಕುಟುಂಬದಂತಿದ್ದರು. ಆದರೆ, ಪುಟ್ಟ ಪ್ರತಿಭೆ ಸಮನ್ವಿ ಇಲ್ಲ ಅನ್ನುವ ಸುದ್ದಿ ತಾರಾ ಸೇರಿದಂತೆ ಹಲವರಿಗೆ ಬರಸಿಡಿಲು ಬಡಿದಂತಾಗಿದೆ.
ಅಂದಹಾಗೆ, ಕಳೆದ ಎಪಿಸೋಡ್ನಲ್ಲಷ್ಟೆ ಅಮೃತಾ ನಾಯ್ಡು ಮತ್ತು ಸಮನ್ವಿ ಎಲಿಮಿನೇಟ್ ಆಗಿದ್ದರು. ಆ ಶೋನಿಂದ ಎಲಿಮಿನೇಟ್ ಆದಮೇಲೂ ಸಮನ್ವಿ ತಾಯಿ ಅಮೃತಾ ತಾರಾ ಅವರಿಗೆ ಫೋನ್ ಮಾಡಿ ಸಮನ್ವಿ ನಿಮ್ಮನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದಾಳೆ ಅಂದಿದ್ದರು. ಆಗ ತಾರಾ ಕೂಡ ಆಕೆಯನ್ನು ಸೆಟ್ಗೆ ಕರೆದುಕೊಂಡು ಬರುವಂತೆ ಹೇಳಿದ್ದರು. ಅದೇನೆ ಇರಲಿ, ಸಮನ್ವಿ ಪ್ರತಿಭಾವಂತೆ. ಆಕೆ ನಡೆಯುವುದು, ನಿಲ್ಲುವುದು, ಮಾತಾಡುವುದು ಎಲ್ಲವೂ ವಿಭಿನ್ನ ಮತ್ತು ವಿಶೇಷ ಎಂದು ಗುಣಗಾನ ಮಾಡಿರುವ ತಾರಾ, ಸಮನ್ವಿ ನೆನೆದು ಕಣ್ಣೀರಾಗಿದ್ದಾರೆ.
ಹಲವು ವರ್ಷಗಳಿಂದ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಸಮನ್ವಿ ತಾಯಿ ಅಮೃತಾ ನಾಯ್ಡು ಕೂಡ ನಟಿಸುತ್ತಿದ್ದಾರೆ. ಕನ್ನಡದ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ತನ್ನ ಮಗಳು ಸಮನ್ವಿ ಜೊತೆ ಕಾಣಿಸಿಕೊಂಡಿದ್ದು, ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು. ಕನ್ನಡದ ಮನೆ ಮನಗಳಲ್ಲಿ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮಕ್ಕಳು ಸ್ಥಾನ ಪಡೆದುಕೊಂಡಿದ್ದಾರೆ. ವಾರಾಂತ್ಯ ಬಂದರೆ ಸಾಕು, ಮನೆಗಳಲ್ಲಿ ಆ ರಿಯಾಲಿಟಿ ಶೋ ಮುಂದೆ ಕೂತುಬಿಡುತ್ತಿದ್ದರು. ಅದರಲ್ಲೂ, ಅಲ್ಲಿ ಪಾಲ್ಗೊಂಡ ಮಕ್ಕಳ ಮಾತು ಕೇಳುವುದೇ ಖುಷಿಪಡಿಸುತ್ತಿತ್ತು. ಅಂತಹ ಮುದ್ದು ಮಕ್ಕಳಲ್ಲಿ ಕಲಾವಿದೆ ಅಮೃತಾ ನಾಯ್ಡು ಅವರ ಮಗಳು ಸಮನ್ವಿ ಕೂಡ ತನ್ನ ತುಂಟುತನದಿಂದಲೇ ಎಲ್ಲರ ಅಚ್ಚುಮೆಚ್ಚು ಎನಿಸಿಕೊಂಡಿದ್ದರು. ಆದರೆ, ವಿಧಿ ಅವಳನ್ನು ಬಿಡದೆ ಕರೆದೊಯ್ದಿದೆ. ಇದು ಕಿರುತೆರೆ ಮಾತ್ರವಲ್ಲ, ಇಡೀ ಕರುನಾಡೇ ಸಮನ್ವಿ ನೆನೆದು ದುಃಖ ಪಡುವಂತಾಗಿದೆ. ಎಲ್ಲರ ಮನಸ್ಸನ್ನೂ ಗಾಸಿಘೊಳಿಸಿಬಿಟ್ಟಿದೆ.
ಕೆಲವರು ಕಡಿಮೆ ಅವಧಿಯಲ್ಲೇ ಕೀರ್ತಿ ಗಳಿಸಿ ಸಂಭ್ರಮಿಸುವಂತೆ ಮಾಡಿಬಿಡುತ್ತಾರೆ. ಅಂತಹವರ ಸಾಲಿಗೆ ಈ ಸಮನ್ವಿ ಕೂಡ ಸೇರಿದ್ದಳು. ಆದರೆ, ಆ ಸಂಭ್ರಮ ಮಾತ್ರ ಹೆಚ್ಚು ದಿನ ಉಳಿಯಲೇ ಇಲ್ಲ. ಸಮನ್ವಿ ಜೀವ ಬಾರದ ಲೋಕಕ್ಕೆ ಹಾರಿ ಹೋಗಿದೆ.
ಸಮನ್ವಿ ಈಗ ನಮ್ಮೊಂದಿಗಿಲ್ಲ. ಆದರೆ, ಆಕೆಯ ತುಂಟಾದ ಮಾತುಗಳು, ಅವಳ ನಡೆ ಮತ್ತು ಮುಗ್ಧ ಪ್ರಶ್ನೆ ಉತ್ತರಗಳು ಮಾತ್ರ ಗುನಗುನಿಸುವಂತಿವೆ. ಚಿಕ್ಕವಯಸ್ಸಲ್ಲೇ ಸೈ ಎನಿಸಿಕೊಂಡು ನಕ್ಕು ನಲಿದಾಡುತ್ತಿದ್ದ ಸಮನ್ವಿ ಈಗ ಬರೀ ನೆನಪು ಮಾತ್ರ….
ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಮತ್ತು ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ನಟಿಸಿರುವ, ಜಯತೀರ್ಥ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ “ಬನಾರಸ್” ಈಗಾಗಲೇ ರಿಲೀಸ್ ಆಗಲು ರೆಡಿಯಾಗಿದೆ. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬನಾರಸ್ ಚಿತ್ರತಂಡ ಹೊಸ ಪೋಸ್ಟರ್ ಅನಾವರಣಗೊಳಿಸಿದೆ.
ಈ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿರಸಿಕರಿಗೆ ಮಕರ ಸಂಕ್ರಮಣದ ಶುಭಾಶಯ ಹೇಳಿದೆ. ಸಾಕಷ್ಟು ನಿರೀಕ್ಷೆ ಹೊಂದಿರವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಮೂಲಕ ತಿಲಕ್ ರಾಜ್ ಬಲ್ಲಾಳ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕೆ.ಎಂ.ಪ್ರಕಾಶ್ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.
ಸಂಗೀತವೇ ಹಾಗೆ. ಎಂತಹವರನ್ನಾದರೂ ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಒತ್ತಡಗಳನ್ನು ನಿವಾರಿಸಿ ಮನಕ್ಕೆ ಮುದ ನೀಡುವ ಮದ್ದು ಸಂಗೀತ ಅಂದ್ರು ತಪ್ಪಿಲ್ಲ. ಸಂಗೀತವೆಂಬ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದು ದೈವಾನುಗ್ರಹದಿಂದ ಬಂದಿದ್ದರೂ ಪರಿಣತಿ ಹೊಂದಲು ಬೆವರು ಹರಿಸಲೇಬೇಕು ಎಂಬ ಮಾತನ್ನು ನಂಬಿರುವ ಗಾಯಕ ಆದರ್ಶ್ ಅಯ್ಯಂಗಾರ್. ಸಂಗೀತವೇ ತಮ್ಮ ಸಂಗಾತಿ ಅಂತಾ ಆರಾಧಿಸುತ್ತಿರುವ ಆದರ್ಶ್, ಜಯ ಹೇ ಎಂಬ ಗೀತೆ ಮೂಲಕ ಕರುನಾಡಿನ ಮನೆ-ಮನ ತಲುಪಲು ಬರುತ್ತಿದ್ದಾರೆ. ಆದರ್ಶ್ ಪ್ರೀತಿಯಿಂದ ಮಾಡಿರುವ ಜಯ ಹೇ ಹಾಡನ್ನು ವಿಂಗ್ ಕಮಾಂಡರ್ ಸುದರ್ಶನ್, ರಾಮ್ ದಾಸ್ ಜಿ ಎನ್ ( Retired LT Col ), ನಟ ವಿರಾಟ್ ಬಿಡುಗಡೆ ಮಾಡಿ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರ್ಶ್ ಅಯ್ಯಂಗಾರ್ ಮೂಲತಃ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಸದ್ಯ ಅಮೇರಿಕಾದಲ್ಲಿ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದರ್ಶ, ಸ್ಟಾರ್ ಸುವರ್ಣ “ಸ್ಟಾರ್ ಸಿಂಗರ್” ಕಾರ್ಯಕ್ರಮದಲ್ಲಿ ಸ್ಪರ್ಧಿ ಭಾಗಿಯಾಗಿ ಅಪಾರ ಜನಪ್ರಿಯತೆ ಪಡೆದುಕೊಂಡರು. ನಂತರ ಉದ್ಯೋಗ ಅರಸಿ ದೂರದ ಅಮೇರಿಕಾಗೆ ಹೋದ್ರೂ ಕೂಡ ಸಂಗೀತದ ಮೇಲಿನ ಅವರ ಆಸಕ್ತಿ ಏನನ್ನಾದರು ಮಾಡುವಂತೆ ಪ್ರೇರೇಪಿಸುತ್ತಿತ್ತು. ಅದರಂತೆ ಅಮೇರಿಕಾದಲ್ಲೇ ತಮ್ಮದೊಂದು ಚಿಕ್ಕ ಸ್ಟುಡಿಯೋ ಮಾಡಿ ಬಿಡುವಿನ ಸಮಯದಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತಾ ಬಂದರು. ನಂತರ “My Friend” ಎಂಬ ವಿಡಿಯೋ ಹಾಡನ್ನು ತಮ್ಮದೆ ಆದ “ಶ್ರೀ ಕೃಷ್ಣ ಪ್ರೊಡಕ್ಷನ್” ಮೂಲಕ ಭಾರತ ಮತ್ತು ಅಮೇರಿಕಾ ಎರಡು ಕಡೆ ಶೂಟ್ ಮಾಡಿ My friend ಹಾಡಿನಿಂದ ಹೊಸ ಹೆಜ್ಜೆ ಇಟ್ಟರು. ಇದೀಗ ಜಯ ಹೇ ಹಾಡನ್ನು ಭಾರತದ ಸೈನಿಕರಿಗೆ ಅರ್ಪಿಸಿದ್ದಾರೆ.
ಹಳ್ಳಿಗಾಡಿನಿಂದಲೇ ಸೈನ್ಯಕ್ಕೆ ಸೇರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಮಲೆನಾಡಿನ ಹಳ್ಳಿಯೊಂದರಲ್ಲಿ ಮತ್ತು ಅಲ್ಲಿನ ಕುಟುಂಬವನ್ನು ಆಯ್ಕೆ ಮಾಡಿಕೊಂಡು ತೀರ್ಥಹಳ್ಳಿಯ ಸುತ್ತ ಮುತ್ತ ಎರಡು ದಿನಗಳ ಕಾಲ ಚಿತ್ರೀಕರಣ ನಡೆಸಿ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ ಆದರ್ಶ್.
ರಾಕ್-ಪಾಪ್ ಜಾನರ್ ನಲ್ಲಿ ಮೂಡಿ ಬಂದಿರುವ ಜಯ ಹೇ ಎಂಬ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಹೇಮಂತ್ ಜೋಯೀಸ್ ಸಂಗೀತ ನೀಡಿದ್ದು, ಆದರ್ಶ್ ಅಯ್ಯಂಗಾರ್ ಹಾಡಿಗೆ ಧ್ವನಿಯಾಗುವುದರ ಜೊತೆಗೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಹೇಮಂತ್ ಜೋಯಿಸ್, ಗುರುಪ್ರಸಾದ್ ಬಡಿಗೇರ್, ದರ್ಶನ್ ಕುಮಾರ್, ಶ್ರೀ ಹರ್ಷ ರಾಮ್ ಕುಮಾರ್ ನಟಿಸಿದ್ದು, ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ, ಗುರುಪ್ರಸಾದ್ ನರ್ನಾಡ್ ಕ್ಯಾಮೆರಾ, ಸುಧೀರ್ ಎಸ್ ಜೆ ಸಂಕಲನವಿರುವ ಜಯ ಹೇ ಹಾಡು, ಆದರ್ಶ್ ಅಯ್ಯಂಗಾರ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ..
ಶೋಕಿವಾಲ ಚಿತ್ರ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದು ಪಾಸ್ ಅಗಿದ್ದು… ಜನರ ಮುಂದೆ ಬರಲು ತಯಾರಿ ನಡೆಸುತ್ತಿದ್ದಾನೆ. ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಸಿನಿಮಾದ ಮೊದಲ ಲಿರಿಕಲ್ ವೀಡಿಯೋ ರೀಲಿಸ್ ಅಗಿ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ಮತ್ತೊಂದು ಹಾಡನ್ನು ರಿಲೀಸ್ ಮಾಡಲು ತಂಡ ತಯಾರಿ ನಡೆಸುತ್ತಿದೆ.
ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ . ಅಜಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ನಟಿಸಿದ್ದಾರೆ. ಇದುವರೆಗೆ ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು , ಮಾಗಡಿ ಯತಂಹ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ ಎಂಬುದು ನಿರ್ದೇಶಕ ಜಾಕಿ ಮಾತು.
ಶ್ರೀಧರ್. ವಿ. ಸಂಭ್ರಮ್ ಸಂಗೀತ ನೀಡಿದ್ದು, 4 ಹಾಡುಗಳಿವೆ. ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ರವರ ಸಾಹಿತ್ಯವಿದೆ. ನವೀನ್ ಕುಮಾರ್.ಎಸ್ ಕ್ಯಾಮೆರಾ ಹಿಡಿದರೆ, ಕೆ.ಎಂ. ಪ್ರಕಾಶ್ ಸಂಕಲನವಿದೆ., ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಮೋಹನ್ ನೃತ್ಯವಿದೆ. ವಿಕ್ರಮ್ ಮೋರ್ ಸಾಹಸ ಮಾಡಿದ್ದಾರೆ. ಮೈಸೂರು ರಘು ಕಲಾ ನಿರ್ದೇಶನ ಚಿತ್ರಕ್ಕಿದೆ. ಕೊರೊನಾ ಸಮಸ್ಯೆ ಬಗೆಹರಿದರೆ, ಈ ತಿಂಗಳಲ್ಲೇ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬುದು ತಂಡ ಹೇಳಿಕೆ. ಈ ಚಿತ್ರಕ್ಕೆ ಟಿ.ಆರ್.ಚಂದ್ರಶೇಖರ್ ನಿರ್ಮಾಪಕರು.
ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದ ಗರುಡ ಗಮನ ವೃಷಭ ವಾಹನ ಸಿನಿಮಾ ಜೀ5ನಲ್ಲಿ ಇಂದಿನಿಂದ ಸ್ಟ್ರೀಮ್ ಆಗಲಿದೆ. ಕಳೆದ ನವೆಂಬರ್ 19ರಂದು ಥಿಯೇಟರ್ ಗೆ ಲಗ್ಗೆ ಇಟ್ಟ ‘ಗರುಡ ಗಮನ ವೃಷಭ ವಾಹನ’ ಸಿನಿಮಾವು ನೋಡುಗರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು. ‘ಒಂದು ಮೊಟ್ಟೆಯ ಕಥೆ’ ಥರದ ಕಾಮಿಡಿ ಸಿನಿಮಾ ಮಾಡಿದ್ದ ರಾಜ್ ಬಿ. ಶೆಟ್ಟಿ, ಇಂಥದ್ದೊಂದು ಗ್ಯಾಂಗ್ಸ್ಟರ್ ಸಿನಿಮಾ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ ಅವರು ಮಾಡಿದ್ದ ಶಿವ ಪಾತ್ರ ಸಖತ್ ರಗಡ್ ಆಗಿ ಮೂಡಿಬಂದಿತ್ತು. ರಾಜ್ ಬಿ. ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕಾಂಬಿನೇಷನ್ ನೋಡುಗರಿಗೆ ಇಷ್ಟವಾಗಿತ್ತು. ಇದೀಗ ಈ ಸಿನಿಮಾವನ್ನು ಟಾಲಿವುಡ್ ಖ್ಯಾತ ನಿರ್ಮಾಪಕ ದೇವ ಕಟ್ಟ ಮೆಚ್ಚುಕೊಂಡಿದ್ದಾರೆ.
ಆಸ್ಕರ್ ಅವಾರ್ಡ್ ವಿನ್ನಿಂಗ್ ಮೂವಿ ಎಂದ ದೇವ
ಟಾಲಿವುಡ್ ಸೇರಿದಂತೆ ಬಾಲಿವುಡ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ದೇವ ಕಟ್ಟಾ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. 2021ರ ಭಾರತೀಯ ಸಿನಿಮಾಗಳ ಪೈಕಿ ಅತ್ಯುತ್ತಮ ಚಲನಚಿತ್ರ ಗರಡುಗಮನ ವೃಷಭ ವಾಹನ. ನನಗೆ ಆಸ್ಕರ್ ಗೆ ಸಿನಿಮಾ ಆಯ್ಕೆ ಮಾಡುವ ಪವರ್ ಇದ್ದಿದ್ದರೆ ಈ ಸಿನಿಮಾವನ್ನು ಆಯ್ಕೆ ಮಾಡುತ್ತಿದ್ದೆ. ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ನನ್ನ ಸ್ನೇಹಿತರ ಜೊತೆ ನೋಡಿದೆ. ಫಿಲ್ಮಂ ಮೇಕಿಂಗ್ ಅದ್ಭುತವಾಗಿದೆ.
ಸಿನಿಮಾ ಬಹಳಷ್ಟು ಇಷ್ಟದ ನಂತರ ಮತ್ತೆ ಕೆಲ ದಿನ ಬಳಿಕ ಥಿಯೇಟರ್ ಗೆ ಹೋದಾಗ ಸಿನಿಮಾ ಇರಲಿಲ್ಲ. ಹೀಗಾಗಿ ಬೇಸರ ಆಯ್ತು. ಈಗ ಜೀ5 ಫ್ಲಾಟ್ ಫಾರ್ಮ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ ಬಿ ಶೆಟ್ಟಿ ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೆ ಇಷ್ಟು ಆಗುತ್ತೆ ಮಿಸ್ ಮಾಡದ್ದೇ ಎಲ್ಲರೂ ನೋಡಿ ಎಂದಿದ್ದಾರೆ ದೇವ್.
ಕಳೆದ ಐದು ವರ್ಷಗಳ ಹಿಂದೆ ಮೀಟು ವಿಷಯಕ್ಕೆ ಸಂಬಂಧಿಸಿದಂತೆ ನಟಿ ಶ್ರುತಿ ಹರಿಹರನ್ ಅವರು ನಟ ಆರ್ಜುನ್ ಸರ್ಜಾ ಅವರ ಮೇಲೆ ಆರೋಪಿಸಿದ್ದ ಪ್ರಕರಣವನ್ನು ನ್ಯಾಯಾಲಯ, ಬಿ.ರಿಪೋರ್ಟ್ ಅಂತ ತೀರ್ಮಾನಿಸಿ ತೀರ್ಪು ಪ್ರಕಟಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಹಿಂದೆ ನಟಿ ಶ್ರುತಿ ಅವರು ಸಿನಿಮಾವೊಂದರ ಚಿತ್ರೀಕರಣ ವೇಳೆ, ಅರ್ಜುನ್ ಸರ್ಜಾ ಅವರ ವಿರುದ್ಧ ಗಂಭೀರ ಅರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ್ದ ಬಿ.ರಿಪೋರ್ಟ್ಗೆ ಎಂಟನೇ ಎಸಿಎಂಎಂ ಕೋರ್ಟ್ ಮುಕ್ತಾಯ ಅನ್ನುವ ರೀತಿಯಲ್ಲಿ, ಆರೋಪಕ್ಕೆ ಸಾಕ್ಷ್ಯಾಧಾರ ಕೊರತೆ ಇದೆ ಎಂದು ಪರಿಗಣಿಸಿ, ಈ ತೀರ್ಪು ನೀಡಿದೆ.
ಬಿ.ರಿಪೋರ್ಟ್ಗೆ ಆಕ್ಷೇಪಣೆ ಸಲ್ಲಿಸುವ ಅವಕಾಶ ಇತ್ತು. ಆದರೆ, ನಟಿ ಶ್ರುತಿ ಅವರು ಯಾವುದೇ ರೀತಿ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಸಾಕ್ಷ್ಯಾಧಾರ ಸಲ್ಲಿಕೆ ಮಾಡಿರಲಿಲ್ಲ. ಅವರು ಈ ಪ್ರಕರಣ ಕೈ ಬಿಟ್ಟಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
2017ರಲ್ಲಿ ಶ್ರುತಿ ಹರಿಹರನ್ ಅವರು ಮೀಟು ಗಂಭೀರ ಆರೋಪ ಮಾಡಿದ್ದರು. ಅವರು ಬ್ಯಾಡ್ ಟಚ್ ಎಂದು ಆರೋಪಿಸಿ, ಸಾಕಷ್ಟು ಹೇಳಿಕೆ ನೀಡಿದ್ದರು. ಈ ಪ್ರಕರಣ ವಿರುದ್ಧ ಹೋರಾಡುವುದಾಗಿಯೂ ತಿಳಿಸಿದ್ದರು. ಪೋಲೀಸರು ಕೂಡ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸಿದ್ದರು.
ಬಿಗ್ ಬಾಸ್ ಮೂಲಕ ಗುರುತಿಸಿಕೊಂಡ ಶ್ರೀ ಯೋಗೇಶ್ವರ ರಿಶಿಕುಮಾರಸ್ವಾಮಿ (ಕಾಳಿ ಮಠ) ಅವರಿಗೆ ಸಿನಿಮಾ ನಂಟು ಹೊಸದೇನಲ್ಲ. ಅವರು ಸ್ವಾಮಿ ಆಗುವ ಮೊದಲೇ ಸಿನಿಮಾರಂಗದಲ್ಲಿ ಮಿಂದೆದ್ದವರು. ಹೌದು, ಅದೇ ರಿಶಿಕುಮಾರಸ್ವಾಮಿ ಸಿನಿಮಾವೊಂದರಲ್ಲಿ ಮುಖ್ಯಪಾತ್ರ ಮಾಡಿದ್ದಾರೆ. ಅಂದಹಾಗೆ, ಅದರ ಹೆಸರು “ಸರ್ವಸ್ಯ ನಾಟ್ಯಂ”. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆಯಾಗಿದೆ. ಕುಂಚಿಘಟ್ಟ ಮಹಾಸಂಸ್ಥಾನದ ಶ್ರೀಹನುಮಂತನಾಥ ಮಹಾಸ್ವಾಮಿಗಳು, ಕುಣಿಗಲ್ನ ಹರೇಶಂಕರ ಮಹಾಸಂಸ್ಥಾನದ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಆಡಿಯೋ ರಿಲೀಸ್ಗೆ ಸಾಕ್ಷಿಯಾದರು.
ತಮ್ಮ ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ವಿಜಯನಗರ ಮಂಜು, “ನಾನು ನೃತ್ಯ ನಿರ್ದೇಶಕ. ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಸಂಘದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ನನಗೆ ಮೊದಲಿನಿಂದಲೂ ನೃತ್ಯ ಕಥಾಹಂದರದ ಕುರಿತು ಸಿನಿಮಾ ಮಾಡುವ ಹಂಬಲವಿತ್ತು. ಆ ಆಸೆಯನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದೆ. ನನ್ನ ನೃತ್ಯ ಶಾಲೆಗೆ ವಿದ್ಯಾರ್ಥಿಯಾಗಿ ಬಂದ ಮನೋಜ್ ಕುಮಾರ್, ನನ್ನ ಆಸೆ ತಿಳಿದು, ನಿರ್ಮಾಣಕ್ಕೆ ಮುಂದಾದರು. ಕೊರೊನಾ ಇಲ್ಲದಿದ್ದರೆ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಈ ಚಿತ್ರ ಸಂಪೂರ್ಣವಾಗಲು ನಿರ್ಮಾಪಕರ ಹಾಗೂ ಚಿತ್ರತಂಡದ ಸಹಕಾರ ಅಪಾರ. ಸ್ವದೇಶಿ ಹಾಗೂ ಪಾಶ್ಚಾತ್ಯ ನೃತ್ಯಗಳ ಪೈಪೋಟಿ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ. ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾಗಿ ಹೇಳುವ ಅವರು. ಈ ಸಿನಿಮಾದಲ್ಲಿ ಸುಮಾರು ನೂರೈವತ್ತಕ್ಕು ಹೆಚ್ಚು ಮಕ್ಕಳು ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ನಲ್ಲಿ ನಡೆಯುವ ವಾಸ್ತವಾಂಶಗಳು ನನ್ನ ಕಥೆಗೆ ಸ್ಪೂರ್ತಿ ಎನ್ನುತ್ತಾರೆ ವಿಜಯನಗರ ಮಂಜು. ಅಂದಹಾಗೆ, ಈ ಚಿತ್ರ ಯುಗಾದಿಗೆ ತೆರೆಗೆ ಬರುವ ಸಾಧ್ಯತೆ ಇದೆ ಎನ್ನುತ್ತಾರೆ.
ರಿಶಿಕುಮಾರ ಸ್ವಾಮಿ ಮಾತನಾಡಿ, “ಇಂದು ವಿಶ್ವಕಂಡ ಮಹಾ ಸಂತ ವಿವೇಕಾನಂದರ ಜಯಂತಿ. ಈ ಮಹಾ ಸಂತನ ಜಯಂತಿ ದಿವಸ ಇನೊಬ್ಬ ಸಂತನ ಅಭಿನಯದ ಸಿನಿಮಾವೊಂದರ ಹಾಡುಗಳ ಬಿಡುಗಡೆಯಾಗುತ್ತಿರುವುದು ಸಂತೋಷದ ವಿಚಾರ. ಪ್ರತಿಯೊಬ್ಬ ನೃತ್ಯ ನಿರ್ದೇಶಕ ಅಥವಾ ಶಿಕ್ಷಕನಿಗೆ ಆಗುವ ನೋವುಗಳು. ಅವರು ಒಂದು ಹಂತಕ್ಕೆ ಬರುವವರೆಗೂ ಎಲ್ಲರು ತುಳಿಯುವವರೆ. ಆ ತುಳಿತಕ್ಕೆ ಸಿಕ್ಕಿ ನಲಗುವ ಪಾತ್ರ ನನ್ನದು. ನನ್ನೊಂದಿಗೆ ಅನಾಥ ಮಕ್ಕಳ ಪಾತ್ರದಲ್ಲಿ ಅಭಿನಯಿಸಿರುವ ಮಕ್ಕಳು ಅಭಿನಯದಲ್ಲಿ ರಾಕ್ಷಸರು. ಅಂತಹ ಅಮೋಘ ಅಭಿನಯ ಅವರದು. ಮಕ್ಕಳನ್ನು ಸುಸೂತ್ರವಾಗಿ ನಿಭಾಯಿಸಿದ ನಿರ್ದೇಶಕ ವಿಜಯನಗರ ಮಂಜು ಅವರ ತಾಳ್ಮೆ ನಿಜಕ್ಕೂ ಶ್ಲಾಘನೀಯ ಎಂಬುದು ರಿಶಿಕುಮಾರ ಸ್ವಾಮಿ ಅವರ ಮಾತು. ಈ ವೇಳೆ ನಿರ್ಮಾಣದ ಬಗ್ಗೆ ಮನೋಜ್ ವರ್ಮ ಮಾತಾಡಿದರೆ, ಎ.ಟಿ.ರವೀಶ್ ಸಂಗೀತ ಕುರಿತು ಹೇಳಿಕೊಂಡರು. ಲೋಕಿ ಸಾಹಿತ್ಯ ಬಗ್ಗೆ ಮಾತಾಡಿದರು. ಛಾಯಾಗ್ರಾಹಕ ಎಂ.ಬಿ.ಅಳಿಕಟ್ಟಿ, ಸಂಕಲನಕಾರ ಸೌಂದರ್ ರಾಜ್ ಇದ್ದರು. ನೃತ್ಯ ನಿರ್ದೇಶಕ ಮುರಳಿ, ರವೀಂದ್ರ , ಸಿರಿ ಮ್ಯೂಸಿಕ್ ಚಿಕ್ಕಣ್ಣ ಇತರರು ಶುಭಕೋರಿದರು.
“ಜಾಕಿ” ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಭಾವನಾ ಮೆನನ್ ನಂತರದ ದಿನಗಳಲ್ಲಿ “ಜಾಕಿ” ಭಾವನಾ ಎಂದೇ ಗುರುತಿಸಿಕೊಂಡರು. ಆ ಬಳಿಕ ಕನ್ನಡದಲ್ಲಿ ಅನೇಕ ಸ್ಟಾರ್ಗಳ ಜೊತೆ ನಟಿಸಿದರು. ಪರಭಾಷೆ ನಟಿ ಅಂತಾನೂ ಗುರುತಿಸಿಕೊಂಡರು. ಈವರೆಗೆ ಎಲ್ಲಾ ಭಾಷೆಯ ಸಿನಿಮಾಗಳನ್ನು ಲೆಕ್ಕಹಾಕಿದರೆ, ೮೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಭಾವನಾ ಮೆನನ್ ನಟಿಸಿದ್ದಾರೆ. ಈಗ ಭಾವನಾ ಮೆನನ್ ಅವರ ಒಂದು ಸುದ್ದಿ ಇದೆ. ಹಾಗಂತ, ಅವರು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡ ಪೋಸ್ಟ್ವೊಂದು ಸುದ್ದಿ ಮಾಡಿದೆ. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದು, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ. ಅಷ್ಟಕ್ಕೂ ಆ ವಿಷಯ ಏನು ಗೊತ್ತಾ?
ಕಳೆದ ಐದು ವರ್ಷಗಳ ಹಿಂದೆ ಖ್ಯಾತ ನಟಿ ಭಾವನಾ ಮೆನನ್ ಅವರು ಕೇರಳದಲ್ಲಿ ಸಿನಿಮಾವೊಂದರ ಶೂಟಿಂಗ್ ಮುಗಿಸಿಕೊಂಡು ಕಾರಲ್ಲಿ ಮನೆಗೆ ಹೋಗುವಾರ, ಕೆಲ ಕಿಡಿಗೇಡಿಗಳ ಅವರ ಕಾರನ್ನು ಅಡ್ಡಗಟ್ಟಿ ಅಪಹರಿಸಿದ್ದರು. ನಂತರ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆರೋಪವಿತ್ತು. ಆ ವಿಷಯಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ಅವರನ್ನು ಬಂಧಿಸಲಾಗಿತ್ತು. ನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಭಾವನಾ ಮೆನನ್, ಅದೇ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದಷ್ಟು ಬರೆದುಕೊಂಡಿದ್ದರು. ಅದಕ್ಕೆ ಮಲಯಾಳಂ ಸ್ಟಾರ್ ನಟರು ಸಾಥ್ ನೀಡಿದ್ದಾರೆ. ಅವರ ಬರಹವಿದು. “ನನ್ನ ಹೋರಾಟದ ಹಾದಿಯಲ್ಲಿ ನಾನು ಒಬ್ಬಂಟಿಯಲ್ಲ” ನಾನು ಬಲಿಪಶು ಎನಿಸಿಕೊಂಡು ಅದರಿಂದ ಹೊರಬರುವ ಬದುಕಿನ ಆ ಐದು ವರ್ಷಗಳ ಹಾದಿ ನಿಜಕ್ಕೂ ಸುಲಭವಾಗಿರಲಿಲ್ಲ. ಆ ವೇಳೆ ಎಷ್ಟೋ ಮಂದಿ ನನ್ನನ್ನು ಅವಮಾನಿಸಿದರು, ಇನ್ನೂ ಕೆಲವರು ನನ್ನ ಪರವಾಗಿ ಮಾತನಾಡಿದರು. ಇವೆಲ್ಲವನ್ನೂ ನೋಡಿದಾಗ ನನ್ನ ಹೋರಾಟದ ಹಾದಿಯಲ್ಲಿ ನಾನೂ ಒಬ್ಬಂಟಿಯಲ್ಲ ಎಂದೆನಿಸುತ್ತಿದೆ. ನ್ಯಾಯ ಗೆಲ್ಲಲು, ಯಾವುದೇ ಮಹಿಳೆಯು ಇಂತಹ ಪರಿಸ್ಥಿಗೆ ಒಳಗಾಗದಂತೆ ನೋಡಿಕೊಳ್ಳಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ನನ್ನ ಹೋರಾಟದ ಹಾದಿ ಮುಂದುವರೆಸುತ್ತೇನೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಭಾವನಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಬರಹಕ್ಕೆ ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಸಿಕ್ಕಿವೆ. ಈಗಲೂ ಸಿಗುತ್ತಿವೆ.
ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಹಾಕಿಕೊಂಡಿದ್ದೇ ತಡ, ಹಲವು ಸಿನಿಮಾ ನಟರು, ತಾಂತ್ರಿಕ ವರ್ಗದವರು, ನಟಿಮಣಿಗಳು, ನಿರ್ದೇಶಕ, ನಿರ್ಮಾಪಕರು ಬೆಂಬಲ ಸೂಚಿಸಿದ್ದಾರೆ. ಅಂತಹವರ ಪೈಕಿ ಮಲಯಾಳಂನ ಸೂಪರ್ ಸ್ಟಾರ್ಗಳಾದ ಮೋಹನ್ ಲಾಲ್ ಹಾಗೂ ಮಮ್ಮುಟಿ ಕೂಡ ಸೇರಿದ್ದಾರೆ. ಈ ಪ್ರಕರಣ ನಡೆದ ಸಮಯದಲ್ಲಿ ಮೋಹನ್ ಲಾಲ್ ಆಗಲಿ ಮಮ್ಮುಟಿಯಾಗಲಿ ಅಥವಾ ಇನ್ನಾವುದೇ ನಟ,ನಟಿಯರು ಮಾತಾಡಿಯೇ ಇರಲಿಲ್ಲ. ಅವರ ಈ ಮೌನದಿಂದಾಗಿ ಅವರೆಲ್ಲರೂ ದಿಲೀಪ್ ಪರವಾಗಿದ್ದಾರೋ ಅಥವಾ ತಟಸ್ಥರಾಗಿದ್ದಾರೋ ಎಂಬ ಪ್ರಶ್ನೆ ಇತ್ತು. ಆದರೂ, ಆ ಕುರಿತಂತೆ ಯಾರಿಗೂ ಗೊತ್ತಿರಲಿಲ್ಲ.
ಆದರೀಗ ಭಾವನಾ ಮೆನನ್ ಅವರು ಮಾಡಿದ ಸೋಶಿಯಲ್ ಮೀಡಿಯಾ ಪೋಸ್ಟ್ ಅನ್ನು ಈ ಇಬ್ಬರು ನಟರು ತಮ್ಮ ಸೋಶಿಯಲ್ ಮೀಡಿಯದಲ್ಲಿ ರೀ ಪೋಸ್ಟ್ ಮಾಡಿದ್ದಾರೆ. ಮೋಹನ್ ಲಾಲ್ “ರೆಸ್ಪೆಕ್ಟ್” ಎಂಂದು ಬರೆದುಕೊಂಡರೆ, ಮಮ್ಮುಟ್ಟಿ ಅವರು “ಭಾವನಾ ನಿಮ್ಮ ಜೊತೆ ನಾವಿರುತ್ತೇವೆ” ಎಂದು ಬರೆದುಕೊಂಡಿದ್ದಾರೆ. ಇವರ ಜೊತೆ ಬಾಲಿವುಡ್ ಚಿತ್ರ ನಿರ್ದೇಶಕಿ ಬರಹಗಾರ್ತಿ ಜೋಯಾ ಅಖ್ತರ್ ಬೆಂಬಲ ನೀಡಿದ್ದು, “ನಿಮಗೆ ಇನ್ನಷ್ಟು ಶಕ್ತಿ ಸಿಗಲಿʼ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಭಾವನಾ ಮೆನನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.