ಕನ್ನಡದಲ್ಲಿ ದಿನ ಕಳೆದಂತೆ ಹೊಸ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಸಂಕ್ರಾಂತಿ ಹಬ್ಬದ ದಿನದಂದೇ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ತಮ್ಮ ಎರಡನೇ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದೆ. ಹೌದು, ಅವರು ತಮ್ಮ ಹೊಸ ನಿರ್ಮಾಣದ ಸಿನಿಮಾಗೆ “ಹೊಯ್ಸಳ” ಎಂದು ನಾಮಕರಣ ಮಾಡಿದ್ದಾರೆ.
ಇತ್ತೀಚೆಗೆ ರಿಲೀಸ್ ಆಗಿ ಸಾಕಷ್ಟು ಜನಪ್ರಿಯಗೊಂಡ “ರತ್ನನ್ ಪ್ರಪಂಚ” ಚಿತ್ರದ ನಿರ್ಮಾಪಕ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದು ವಿಶೇಷ.
ಇನ್ನು, ಹೊಂಬಾಳೆ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರ್ ಅವರು ಈ ಚಿತ್ರವನ್ನು ಅರ್ಪಿಸುತಿದ್ದಾರೆ. ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಈ ಹಿಂದೆ “ಗೀತಾ” ಚಿತ್ರ ನಿರ್ದೇಶಿಸಿದ್ದ ವಿಜಯ್ ಹೊತ್ತುಕೊಂಡಿದ್ದಾರೆ. ಇನ್ನು, ಚಿತ್ರಕ್ಕೆ ಎಸ್.ಎಸ್.ತಮನ್ ಅವರು ಸಂಗೀತ ನೀಡುತ್ತಿದ್ದಾರೆ. ದೀಪು.ಎಸ್.ಕುಮಾರ್ ಸಂಕಲನ ಮಾಡಲ್ಲಿದ್ದಾರೆ. ವಿಶ್ವಾಸ್ ಕಶ್ಯಪ್ ಅವರ ಕಲಾ ನಿರ್ದೇಶನವಿದೆ. ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. ಚಿತ್ರಕ್ಕೆ ಸುಧೀಂದ್ರ ವೆಂಕಟೇಶ್ ಪ್ರಚಾರಕರ್ತರು. ಅವರ ಜೊತೆ ಚಿತ್ರದ ಪ್ರಚಾರವನ್ನು ಕೆ.ಆರ್.ಜಿ ಕನೆಕ್ಟ್ಸ್ ಸಂಸ್ಥೆ ಮಾಡುತ್ತಿದೆ.
ವಿಶೇಷವೆಂದರೆ, ಈ ಚಿತ್ರದ ನಾಯಕರಾಗಿ ಧನಂಜಯ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಧನಂಜಯ ಅವರ ೨೫ ನೇ ಚಿತ್ರ ಅನ್ನೋದು ಮತ್ತೊಂದು ವಿಶೇಷ. ಅವರಿಗೆ ಈ ಚಿತ್ರ ಒಂದು ಮೈಲಿಗಲ್ಲು. ಚಿತ್ರದ ಬಹುತೇಕ ಚಿತ್ರೀಕರಣ ಬೆಳಗಾವಿ ಜೆಲ್ಲೆಯ ಅನೇಕ ಭಾಗಗಳಲ್ಲಿ ನಡೆಯಲಿದೆ. ಕಥೆಯ ಒನ್‌ಲೈನ್ ಹೇಳುವುದಾದರೆ, ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿ ಸುತ್ತ ಹೆಣೆದಿರುವ ಕಥೆ ಇದು. ಏಪ್ರಿಲ್‌ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಅನ್ನೋದು ಇಷ್ಟರಲ್ಲೇ ಗೊತ್ತಾಗಲಿದೆ.