“ಜಾಕಿ” ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಭಾವನಾ ಮೆನನ್ ನಂತರದ ದಿನಗಳಲ್ಲಿ “ಜಾಕಿ” ಭಾವನಾ ಎಂದೇ ಗುರುತಿಸಿಕೊಂಡರು. ಆ ಬಳಿಕ ಕನ್ನಡದಲ್ಲಿ ಅನೇಕ ಸ್ಟಾರ್‌ಗಳ ಜೊತೆ ನಟಿಸಿದರು. ಪರಭಾಷೆ ನಟಿ ಅಂತಾನೂ ಗುರುತಿಸಿಕೊಂಡರು. ಈವರೆಗೆ ಎಲ್ಲಾ ಭಾಷೆಯ ಸಿನಿಮಾಗಳನ್ನು ಲೆಕ್ಕಹಾಕಿದರೆ, ೮೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಭಾವನಾ ಮೆನನ್ ನಟಿಸಿದ್ದಾರೆ. ಈಗ ಭಾವನಾ ಮೆನನ್ ಅವರ ಒಂದು ಸುದ್ದಿ ಇದೆ. ಹಾಗಂತ, ಅವರು ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡ ಪೋಸ್ಟ್‌ವೊಂದು ಸುದ್ದಿ ಮಾಡಿದೆ. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದು, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ. ಅಷ್ಟಕ್ಕೂ ಆ ವಿಷಯ ಏನು ಗೊತ್ತಾ?
ಕಳೆದ ಐದು ವರ್ಷಗಳ ಹಿಂದೆ ಖ್ಯಾತ ನಟಿ ಭಾವನಾ ಮೆನನ್ ಅವರು ಕೇರಳದಲ್ಲಿ ಸಿನಿಮಾವೊಂದರ ಶೂಟಿಂಗ್ ಮುಗಿಸಿಕೊಂಡು ಕಾರಲ್ಲಿ ಮನೆಗೆ ಹೋಗುವಾರ, ಕೆಲ ಕಿಡಿಗೇಡಿಗಳ ಅವರ ಕಾರನ್ನು ಅಡ್ಡಗಟ್ಟಿ ಅಪಹರಿಸಿದ್ದರು. ನಂತರ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆರೋಪವಿತ್ತು. ಆ ವಿಷಯಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ಅವರನ್ನು ಬಂಧಿಸಲಾಗಿತ್ತು. ನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಭಾವನಾ ಮೆನನ್, ಅದೇ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದಷ್ಟು ಬರೆದುಕೊಂಡಿದ್ದರು. ಅದಕ್ಕೆ ಮಲಯಾಳಂ ಸ್ಟಾರ್ ನಟರು ಸಾಥ್ ನೀಡಿದ್ದಾರೆ. ಅವರ ಬರಹವಿದು. “ನನ್ನ ಹೋರಾಟದ ಹಾದಿಯಲ್ಲಿ ನಾನು ಒಬ್ಬಂಟಿಯಲ್ಲ” ನಾನು ಬಲಿಪಶು ಎನಿಸಿಕೊಂಡು ಅದರಿಂದ ಹೊರಬರುವ ಬದುಕಿನ ಆ ಐದು ವರ್ಷಗಳ ಹಾದಿ ನಿಜಕ್ಕೂ ಸುಲಭವಾಗಿರಲಿಲ್ಲ. ಆ ವೇಳೆ ಎಷ್ಟೋ ಮಂದಿ ನನ್ನನ್ನು ಅವಮಾನಿಸಿದರು, ಇನ್ನೂ ಕೆಲವರು ನನ್ನ ಪರವಾಗಿ ಮಾತನಾಡಿದರು. ಇವೆಲ್ಲವನ್ನೂ ನೋಡಿದಾಗ ನನ್ನ ಹೋರಾಟದ ಹಾದಿಯಲ್ಲಿ ನಾನೂ ಒಬ್ಬಂಟಿಯಲ್ಲ ಎಂದೆನಿಸುತ್ತಿದೆ. ನ್ಯಾಯ ಗೆಲ್ಲಲು, ಯಾವುದೇ ಮಹಿಳೆಯು ಇಂತಹ ಪರಿಸ್ಥಿಗೆ ಒಳಗಾಗದಂತೆ ನೋಡಿಕೊಳ್ಳಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ನನ್ನ ಹೋರಾಟದ ಹಾದಿ ಮುಂದುವರೆಸುತ್ತೇನೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಭಾವನಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಬರಹಕ್ಕೆ ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಸಿಕ್ಕಿವೆ. ಈಗಲೂ ಸಿಗುತ್ತಿವೆ.
ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಹಾಕಿಕೊಂಡಿದ್ದೇ ತಡ, ಹಲವು ಸಿನಿಮಾ ನಟರು, ತಾಂತ್ರಿಕ ವರ್ಗದವರು, ನಟಿಮಣಿಗಳು, ನಿರ್ದೇಶಕ, ನಿರ್ಮಾಪಕರು ಬೆಂಬಲ ಸೂಚಿಸಿದ್ದಾರೆ. ಅಂತಹವರ ಪೈಕಿ ಮಲಯಾಳಂನ ಸೂಪರ್ ಸ್ಟಾರ್‌ಗಳಾದ ಮೋಹನ್ ಲಾಲ್ ಹಾಗೂ ಮಮ್ಮುಟಿ ಕೂಡ ಸೇರಿದ್ದಾರೆ. ಈ ಪ್ರಕರಣ ನಡೆದ ಸಮಯದಲ್ಲಿ ಮೋಹನ್ ಲಾಲ್ ಆಗಲಿ ಮಮ್ಮುಟಿಯಾಗಲಿ ಅಥವಾ ಇನ್ನಾವುದೇ ನಟ,ನಟಿಯರು ಮಾತಾಡಿಯೇ ಇರಲಿಲ್ಲ. ಅವರ ಈ ಮೌನದಿಂದಾಗಿ ಅವರೆಲ್ಲರೂ ದಿಲೀಪ್ ಪರವಾಗಿದ್ದಾರೋ ಅಥವಾ ತಟಸ್ಥರಾಗಿದ್ದಾರೋ ಎಂಬ ಪ್ರಶ್ನೆ ಇತ್ತು. ಆದರೂ, ಆ ಕುರಿತಂತೆ ಯಾರಿಗೂ ಗೊತ್ತಿರಲಿಲ್ಲ.
ಆದರೀಗ ಭಾವನಾ ಮೆನನ್ ಅವರು ಮಾಡಿದ ಸೋಶಿಯಲ್ ಮೀಡಿಯಾ ಪೋಸ್ಟ್ ಅನ್ನು ಈ ಇಬ್ಬರು ನಟರು ತಮ್ಮ ಸೋಶಿಯಲ್ ಮೀಡಿಯದಲ್ಲಿ ರೀ ಪೋಸ್ಟ್ ಮಾಡಿದ್ದಾರೆ. ಮೋಹನ್ ಲಾಲ್ “ರೆಸ್ಪೆಕ್ಟ್” ಎಂಂದು ಬರೆದುಕೊಂಡರೆ, ಮಮ್ಮುಟ್ಟಿ ಅವರು “ಭಾವನಾ ನಿಮ್ಮ ಜೊತೆ ನಾವಿರುತ್ತೇವೆ” ಎಂದು ಬರೆದುಕೊಂಡಿದ್ದಾರೆ. ಇವರ ಜೊತೆ ಬಾಲಿವುಡ್ ಚಿತ್ರ ನಿರ್ದೇಶಕಿ ಬರಹಗಾರ್ತಿ ಜೋಯಾ ಅಖ್ತರ್ ಬೆಂಬಲ ನೀಡಿದ್ದು, “ನಿಮಗೆ ಇನ್ನಷ್ಟು ಶಕ್ತಿ ಸಿಗಲಿʼ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಭಾವನಾ ಮೆನನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.