ನಾಟ್ಯ ರಿಶಿಕುಮಾರಶ್ರೀ ! ಕಾಳಿ ಸ್ವಾಮಿಯ ನೃತ್ಯ ಪ್ರಸಂಗ; ಯುಗಾದಿಗೆ ಬಿಡುಗಡೆ


ಬಿಗ್ ಬಾಸ್ ಮೂಲಕ ಗುರುತಿಸಿಕೊಂಡ ಶ್ರೀ ಯೋಗೇಶ್ವರ ರಿಶಿಕುಮಾರಸ್ವಾಮಿ (ಕಾಳಿ ಮಠ) ಅವರಿಗೆ ಸಿನಿಮಾ ನಂಟು ಹೊಸದೇನಲ್ಲ. ಅವರು ಸ್ವಾಮಿ ಆಗುವ ಮೊದಲೇ ಸಿನಿಮಾರಂಗದಲ್ಲಿ ಮಿಂದೆದ್ದವರು. ಹೌದು, ಅದೇ ರಿಶಿಕುಮಾರಸ್ವಾಮಿ ಸಿನಿಮಾವೊಂದರಲ್ಲಿ ಮುಖ್ಯಪಾತ್ರ ಮಾಡಿದ್ದಾರೆ. ಅಂದಹಾಗೆ, ಅದರ ಹೆಸರು “ಸರ್ವಸ್ಯ ನಾಟ್ಯಂ”. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆಯಾಗಿದೆ. ಕುಂಚಿಘಟ್ಟ ಮಹಾಸಂಸ್ಥಾನದ ಶ್ರೀಹನುಮಂತನಾಥ ಮಹಾಸ್ವಾಮಿಗಳು, ಕುಣಿಗಲ್‌ನ ಹರೇಶಂಕರ ಮಹಾಸಂಸ್ಥಾನದ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಆಡಿಯೋ ರಿಲೀಸ್‌ಗೆ ಸಾಕ್ಷಿಯಾದರು.


ತಮ್ಮ ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ವಿಜಯನಗರ ಮಂಜು, “ನಾನು ನೃತ್ಯ ನಿರ್ದೇಶಕ. ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಸಂಘದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ನನಗೆ ಮೊದಲಿನಿಂದಲೂ ನೃತ್ಯ ಕಥಾಹಂದರದ ಕುರಿತು ಸಿನಿಮಾ ಮಾಡುವ ಹಂಬಲವಿತ್ತು. ಆ ಆಸೆಯನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದೆ. ನನ್ನ ನೃತ್ಯ ಶಾಲೆಗೆ ವಿದ್ಯಾರ್ಥಿಯಾಗಿ ಬಂದ ಮನೋಜ್ ಕುಮಾರ್, ನನ್ನ ಆಸೆ ತಿಳಿದು, ನಿರ್ಮಾಣಕ್ಕೆ ಮುಂದಾದರು. ಕೊರೊನಾ ಇಲ್ಲದಿದ್ದರೆ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಈ ಚಿತ್ರ ಸಂಪೂರ್ಣವಾಗಲು ನಿರ್ಮಾಪಕರ ಹಾಗೂ ಚಿತ್ರತಂಡದ ಸಹಕಾರ ಅಪಾರ. ಸ್ವದೇಶಿ ಹಾಗೂ ಪಾಶ್ಚಾತ್ಯ ನೃತ್ಯಗಳ ಪೈಪೋಟಿ ಮೇಲೆ ಈ ಚಿತ್ರದ ಕಥೆ ಸಾಗುತ್ತದೆ. ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾಗಿ ಹೇಳುವ ಅವರು. ಈ ಸಿನಿಮಾದಲ್ಲಿ ಸುಮಾರು ನೂರೈವತ್ತಕ್ಕು ಹೆಚ್ಚು ಮಕ್ಕಳು ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ನಲ್ಲಿ ನಡೆಯುವ ವಾಸ್ತವಾಂಶಗಳು ನನ್ನ ಕಥೆಗೆ ಸ್ಪೂರ್ತಿ ಎನ್ನುತ್ತಾರೆ ವಿಜಯನಗರ ಮಂಜು. ಅಂದಹಾಗೆ, ಈ ಚಿತ್ರ ಯುಗಾದಿಗೆ ತೆರೆಗೆ ಬರುವ ಸಾಧ್ಯತೆ ಇದೆ ಎನ್ನುತ್ತಾರೆ.

ರಿಶಿಕುಮಾರ ಸ್ವಾಮಿ ಮಾತನಾಡಿ, “ಇಂದು ವಿಶ್ವಕಂಡ ಮಹಾ ಸಂತ ವಿವೇಕಾನಂದರ ಜಯಂತಿ. ಈ ಮಹಾ ಸಂತನ ಜಯಂತಿ ದಿವಸ ಇನೊಬ್ಬ ಸಂತನ ಅಭಿನಯದ ಸಿನಿಮಾವೊಂದರ ಹಾಡುಗಳ ಬಿಡುಗಡೆಯಾಗುತ್ತಿರುವುದು ಸಂತೋಷದ ವಿಚಾರ. ಪ್ರತಿಯೊಬ್ಬ ನೃತ್ಯ ನಿರ್ದೇಶಕ ಅಥವಾ ಶಿಕ್ಷಕನಿಗೆ ಆಗುವ ನೋವುಗಳು. ಅವರು ಒಂದು ಹಂತಕ್ಕೆ ಬರುವವರೆಗೂ ಎಲ್ಲರು ತುಳಿಯುವವರೆ. ಆ ತುಳಿತಕ್ಕೆ‌ ಸಿಕ್ಕಿ ನಲಗುವ ಪಾತ್ರ ನನ್ನದು. ನನ್ನೊಂದಿಗೆ ಅನಾಥ ಮಕ್ಕಳ ಪಾತ್ರದಲ್ಲಿ ಅಭಿನಯಿಸಿರುವ ಮಕ್ಕಳು ಅಭಿನಯದಲ್ಲಿ ರಾಕ್ಷಸರು. ಅಂತಹ ಅಮೋಘ ಅಭಿನಯ ಅವರದು. ಮಕ್ಕಳನ್ನು ಸುಸೂತ್ರವಾಗಿ ನಿಭಾಯಿಸಿದ ನಿರ್ದೇಶಕ ವಿಜಯನಗರ ‌ಮಂಜು ಅವರ ತಾಳ್ಮೆ ನಿಜಕ್ಕೂ ಶ್ಲಾಘನೀಯ ಎಂಬುದು ರಿಶಿಕುಮಾರ ಸ್ವಾಮಿ ಅವರ ಮಾತು. ಈ ವೇಳೆ ನಿರ್ಮಾಣದ ಬಗ್ಗೆ ಮನೋಜ್‌ ವರ್ಮ ಮಾತಾಡಿದರೆ, ಎ.ಟಿ.ರವೀಶ್‌ ಸಂಗೀತ ಕುರಿತು ಹೇಳಿಕೊಂಡರು. ಲೋಕಿ ಸಾಹಿತ್ಯ ಬಗ್ಗೆ ಮಾತಾಡಿದರು. ಛಾಯಾಗ್ರಾಹಕ ಎಂ.ಬಿ.ಅಳಿಕಟ್ಟಿ, ಸಂಕಲನಕಾರ ಸೌಂದರ್‌ ರಾಜ್‌ ಇದ್ದರು. ನೃತ್ಯ ನಿರ್ದೇಶಕ ಮುರಳಿ, ರವೀಂದ್ರ , ಸಿರಿ ಮ್ಯೂಸಿಕ್ ಚಿಕ್ಕಣ್ಣ ಇತರರು ಶುಭಕೋರಿದರು.

Related Posts

error: Content is protected !!