Categories
ಸಿನಿ ಸುದ್ದಿ

ಬಹು ನಿರೀಕ್ಷಿತ ಕಬ್ಜ ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್ ಶುರು…

ವಿಶ್ವದಾದ್ಯಂತ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಜನಪ್ರಿಯತೆ ಪಡೆದಿರುವ, ಆರ್ ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ “ಕಬ್ಜ” ಚಿತ್ರ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.

ಒಂದು ಹಾಡಿನ ಚಿತ್ರೀಕರಣ ಬಿಟ್ಟು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಏಕಕಾಲದಲ್ಲಿ ಏಳುಭಾಷೆಗಳಲ್ಲೂ ಡಬ್ಬಿಂಗ್ ಸಹ ಸದ್ದಿಲ್ಲದೆ ನಡೆಯುತ್ತಿದೆ.

1940ರ ಕಾಲಘಟ್ಟದ ಕಥೆ ಅದ್ಭುತವಾಗಿದೆ. ಮೋಷನ್ ಪೋಸ್ಟರ್ ಹಾಗೂ ಸ್ಟಿಲ್ಸ್ ಜನಮನಸೂರೆಗೊಂಡಿದೆ. ಮೇಕಿಂಗ್ ತುಣುಕು ನೋಡಿದವರಂತು ಫಿದಾ ಆಗಿದ್ದಾರೆ. ಭಾರತ ದೇಶವೇ ತಿರುಗಿ ನೋಡುವ ಸಿನಿಮಾ ಇದಾಗಲಿದೆ. “ಕಬ್ಜ” ಚಿತ್ರ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೈಲಿಗಲ್ಲಾಗಲಿ ಎಂಬುದೇ ಕನ್ನಡಿಗರ ಆಶಯ. ಚಿತ್ರದ. ಟೀಸರ್ ನೋಡುವ ಕಾತುರದಲ್ಲಿದ್ದೇವೆ. ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಸಿನಿಪ್ರೇಕ್ಷಕರು ಚಂದ್ರು ಅವರನ್ನು ಒತ್ತಾಯಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಬಿಡುಗಡೆ ಮುನ್ನವೇ ನೋಡುಗರ ಮನ ಗೆದ್ದ 777 ಚಾರ್ಲಿ…

ಕಿರಣ್ ರಾಜ್ ನಿರ್ದೇಶನದ ಮೊದಲ ಚಿತ್ರ, ರಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ “777 ಚಾರ್ಲಿ” ಚಿತ್ರ. ಜೂನ್ 10 ರಂದು ದೇಶ ಹಾಗೂ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.

ನಮ್ಮ ಚಿತ್ರ ಇದೇ ಹತ್ತರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ದೆಹಲಿ, ಅಹಮದಾಬಾದ್, ಲಕ್ನೋ, ಕೊಲ್ಕತ್ತಾ ಸೇರಿದಂತೆ ಭಾರತದ ವಿವಿಧ ಕಡೆ ಹಾಗೂ ವಿದೇಶದ ಕೆಲವು ಕಡೆ ನಮ್ಮ ಚಿತ್ರದ ಸೆಲೆಬ್ರಿಟಿ ಶೋಗಳನ್ನು ಆಯೋಜಿಸಲಾಗಿತ್ತು. ಸಾಕಷ್ಟು ಜನ ನಮ್ಮ ಚಿತ್ರ ವೀಕ್ಷಣೆ ಮಾಡಿ,‌‌ ಮೆಚ್ಚುಗೆ ಸೂಚಿಸಿದ್ದಾರೆ.‌ ಕೆಲವು ಪ್ರಾಣಿಪ್ರಿಯರಂತೂ ಕಣ್ಣಲ್ಲಿ ನೀರು ಹಾಕಿಕೊಂಡು ಹೊರಬಂದಿದ್ದಾರೆ.‌‌ ಅವರ ಪ್ರತಿಕ್ರಿಯೆ ನೋಡಿ, ನಮಗೂ ಮನ ತುಂಬಿ‌ ಬಂದಿದೆ. ವ್ಯಾಪಾರ ದೃಷ್ಟಿಯಿಂದ ಹೇಳುವುದಾದಾರೆ, ಬಿಡುಗಡೆಗೂ ಮುನ್ನವೇ “ಚಾರ್ಲಿ” ನಮ್ಮನ್ನು‌ ಗೆಲಿಸಿದ್ದಾಳೆ ಎನ್ನುತ್ತಾರೆ‌ ಚಿತ್ರದ ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ.

ನನ್ನ ತಂಡದ ಪರಿಶ್ರಮದಿಂದ ನನ್ನ ಮೊದಲ ಚಿತ್ರ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರ ನೋಡಿರುವವರು ಮೆಚ್ಚುಗೆ ಸೂಚಿಸಿದ್ದಾರೆ. ಒಳ್ಳೆಯ ಚಿತ್ರ ಮಾಡಿದ್ದೀನಿ ಎಂಬ ವಿಶ್ವಾಸವಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಕಿರಣ್ ರಾಜ್.

ಕರ್ನಾಟಕದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರದ ವಿಶೇಷವೆಂದರೆ ಇದೇ ಮೊದಲ ಬಾರಿಗೆ ಜೂನ್ 9 ರಂದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗಾಗಿ ಪೂರ್ವಭಾವಿ ಪ್ರದರ್ಶನ ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ 55 ಕಡೆ ನಡೆದರೆ, ಉಳಿದಂತೆ ಕರ್ನಾಟಕದ ವಿವಿಧ ಕಡೆ ನಡೆಯಲಿದೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಎರಡರಲ್ಲೂ ಪ್ರದರ್ಶನ ನಡೆಯಲಿದೆ ಎಂದರು ಕೆ.ಆರ್.ಜಿ ಫಿಲಂಸ್ ನ‌ ಕಾರ್ತಿಕ್ ಗೌಡ.

ನಾಯಕಿ ಸಂಗೀತ ಶೃಂಗೇರಿ, “ಚಾರ್ಲಿ” ಟ್ರೈನರ್ ಪ್ರಮೋದ್, ಸಂಗೀತ ನಿರ್ದೇಶಕ ನೊಬಿನ್ ಪಾಲ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಬೇಬಿ ಶಾರ್ವರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ನಿರ್ಮಾಣದ ಚಿತ್ರ ಜು. 8ಕ್ಕೆ ರಿಲೀಸ್: ಇದು ಎಲ್ಲರ ಹೋಪ್…!

ಹೋಪ್..ಕನ್ನಡದಲ್ಲಿ ಹೀಗೊಂದು ಸಿನಿಮಾ ಬರ್ತಿರೋದು ಗೊತ್ತೇ ಇದೆ. ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ಸಣ್ಣದೊಂದು ಗ್ಯಾಪ್ ಬಳಿಕ ಕಂಬ್ಯಾಕ್ ಆಗ್ತಿರುವ ಈ ಚಿತ್ರ ತೆರೆಗೆ ಬರೋದಿಕ್ಕೆ ಅಣಿಯಾಗಿದೆ. ಜುಲೈ 8ರಂದು ಹೋಪ್ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಈಗಾಗಲೇ ಚಿತ್ರತಂಡ ಪ್ರಚಾರಕ್ಕೆ ಸಜ್ಜಾಗ್ತಿದೆ.

ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಕಥೆ ಬರೆದು ನಿರ್ಮಾಣ ಮಾಡಿರುವ ಹೋಪ್ ಸಿನಿಮಾಗೆ ಅಂಬರೀಷ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೆಎಎಸ್ ಅಧಿಕಾರಿಗಳ ವರ್ಗಾವಣೆ ಸಾಮಾನ್ಯ ಜನರಿಗೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬ ಕಂಟೆಂಟ್ ಆಧಾರಿತ ಸೋಷಿಯಲ್ ಡ್ರಾಮಾ ಹೋಪ್ ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಕೆಎಎಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಸಂಸದೆ ಸುಮಲತಾ ಅಂಬರೀಷ್ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಗೋಪಾಲ್ ದೇಶಪಾಂಡೆ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹೋಪ್ ಚಿತ್ರ ಇಷ್ಟರಲ್ಲಾಗಲೇ ತೆರೆಗೆ ಬರಬೇಕಿತ್ತು. ಆದ್ರೆ ಕೊರೋನಾ ಕಾರಣದಿಂದ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಮಾಡಲಾಗಿತ್ತು. ಇದೀಗ ಎಲ್ಲಾ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. 34 ದಿನಗಳ ಶೂಟಿಂಗ್ ಮುಗಿಸಿರುವ ಹೋಪ್ ಚಿತ್ರಕ್ಕೆ ಹಾಲೇಶ್ ಛಾಯಾಗ್ರಾಹಣ, ಹರೀಶ್ ಕೊಮ್ಮೆ ಸಂಕಲನ, ರಿತ್ವಿಕ್ ಮುರಳೀಧರ್ ಸಂಗೀತವಿದೆ.

Categories
ಸಿನಿ ಸುದ್ದಿ

ಡೊಳ್ಳುಗೆ ಪ್ರಶಸ್ತಿಗಳ ಸೌಂಡು!ಇದು ಪವನ್‌ ಒಡೆಯರ್ ನಿರ್ಮಾಣದ ಚಿತ್ರ…

ನಿರ್ದೇಶಕನಾಗಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪವನ್ ಒಡೆಯರ್, ತಮ್ಮದೇ ಒಡೆಯರ್ ಮೂವೀಸ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಸಿನಿಮಾ ಡೊಳ್ಳು. ಡೊಳ್ಳು ಕುಣಿತದ ಸುತ್ತ ಎಣೆದಿರುವ ಈ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಹರಿದು ಬಂದಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಡೊಳ್ಳು ಸಿನಿಮಾ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ. ಇಷ್ಟೆಲ್ಲಾ ಯಶಸ್ಸಿಗೆ ಕಾರಣದವರಿಗೆ ಇಡೀ ಚಿತ್ರತಂಡ ಧನ್ಯವಾದ ಅರ್ಪಿಸಿದೆ.

ಒಡೆಯರ್ ಮೂವೀಸ್ ನಡಿ ನಿರ್ಮಾಣದ ಮಾಡಿರುವ ಮೊದಲ ಸಿನಿಮಾವಾಗಿದ್ದು, ನಾನು ನನ್ನ ಪತ್ನಿ, ಸ್ನೇಹಿತರಾದ ಹರೀಶ್ ನಾರಾ, ಸಚಿನ್ ತಪಶೆಟ್ಟಿ, ನರಸಿಂಹ ಜೊತೆಗೂಡಿ ಚಿತ್ರ ನಿರ್ಮಾಣ ಮಾಡಿದ್ದೇವೆ. ಇದು ನಿಜವಾದ ಸಿನಿಮಾ. ಇಡೀ ತಂಡ ಸೇರಿಕೊಂಡು ತುಂಬಾ ಅದ್ಭುತ ಸಿನಿಮಾ ಮಾಡಿದ್ದಾರೆ. ನಿರ್ಮಾಪಕನಾಗಿ ನನಗೂ ಇದು ಹೊಸ ಅನುಭವ. ಸಿನಿಮಾದ ವಿಶೇಷ ಅಂದ್ರೆ ಇಡೀ ಡೊಳ್ಳು ಕಲಾವಿದರು ಅಭಿನಯಿಸಿರುವ ಚಿತ್ರ ಇದಾಗಿದೆ ಎಂದು ನಿರ್ಮಾಪಕ ಪವನ್ ಒಡೆಯರ್ ಅಭಿಪ್ರಾಯ ಹಂಚಿಕೊಂಡರು.

ಇಂತಹ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪವನ್ ಸರ್ ಗೆ ಧನ್ಯವಾದ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿದವರಿಗೆ ಸಿನಿಮಾ ಮಾಡುವುದು ದೊಡ್ದ ಸಾಹಸ. ಆ ಸಾಹಸ ಮಾಡುವುದಕ್ಕೆ ಇಡೀ ತಂಡ ಸಪೋರ್ಟ್ ಮಾಡಿದೆ. ಈ ಯಶಸ್ಸಿಗೆ ಕಾರಣವರಾದ ಎಲ್ಲರಿಗೂ ಧನ್ಯವಾದ ಎಂದು ನಿರ್ದೇಶಕ ಸಾಗರ್ ಪುರಾಣಿಕ್ ತಮ್ಮ ಅನಿಸಿಕೆ ಹಂಚಿಕೊಂಡರು.

ಸಾಗರ್ ಪುರಾಣಿಕ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿರುವ ಡೊಳ್ಳು ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ನಾಯಕ-ನಾಯಕಿಯಾಗಿ ನಟಿಸಿದ್ದು, ಬಾಬು ಹಿರಣಯ್ಯ, ಚಂದ್ರ ಮಯೂರ್ ಶರಣ್ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಕ್ಯಾಮೆರಾವಿರುವ ಡೊಳ್ಳು ಸಿನಿಮಾ ಸದ್ಯದಲ್ಲಿಯೇ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡಲಿದೆ.

Categories
ಸಿನಿ ಸುದ್ದಿ

ಗೆಳೆಯನ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾಥ್: ಶೀರ್ಷಿಕೆ ಅನಾವರಣ

‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಚಿತ್ರದ ಟೈಟಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಗೊಳಿಸುವ ಮೂಲಕ ನಿರ್ದೇಶಕ ಸಡಗರ ರಾಘವೇಂದ್ರ ತಮ್ಮ ಮೊದಲನೆಯ ನಿರ್ದೇಶನದ ಸಡಗರಕ್ಕೆ ಗೆಳೆಯ ರೀಷಬ್ ಶೆಟ್ಟಿ ಸಾಥ್ ನೀಡಿದ್ದಾರೆ.

ಈಗಾಗಲೇ ಸುದ್ಧಿಯಾಗಿರುವ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಚಿತ್ರದ ಟೈಟಲ್ ಬಿಡುಗಡೆಯ ವಿಚಾರದಲ್ಲಿ ಮೊದಲಿನಿಂದಲೂ ಕುತೂಹಲ ಹುಟ್ಟಿಸಿದ್ದ ಚಿತ್ರ ತಂಡ ಕೊನೆಗೂ ನಾಯಕ ಕವೀಶ್ ಶೆಟ್ಟಿ ಹುಟ್ಟುಹಬ್ಬದ ಉಡುಗೊರೆಯಾಗಿ ಪ್ಯಾನ್ ಇಂಡಿಯಾ ಮಟ್ಟದ ಆಕರ್ಷಕ ಟೈಟಲ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಇನ್ನಷ್ಟೂ ಕುತೂಹಲ ಮೂಡಿಸಿದೆ.

‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಟೈಟಲ್ನಲ್ಲಿಯೇ ಇದೊಂದು ದೊಡ್ಡ ಮಟ್ಟದ ಆಕ್ಷನ್ ಪ್ಯಾಕೇಜ್ ಸಿನಿಮಾ ಎನ್ನುವುದನ್ನು ರುಜು ಮಾಡಿದೆ. ಹಾಲಿವುಡ್ ಶೈಲಿಯ ಪೋಸ್ಟರ್ನಲ್ಲಿರುವ ನಾಯಕ ಕವೀಶ್ ಶೆಟ್ಟಿ ಖದರ್ರು ಅದಕ್ಕೆ ಪುಷ್ಟಿ ನೀಡಿದೆ.

ನುರಿತ ತಾಂತ್ರಿಕ ವರ್ಗ ಹಾಗೂ ಕನ್ನಡ, ಮರಾಠಿ ಮತ್ತು ಬಹುಭಾಷಾ ಕಲಾವಿದರನ್ನು ಹೊಂದಿರುವ ಲಂಡನ್ ಕೆಫೆಯ ಗುಟ್ಟು ಬಿಟ್ಟು ಕೊಡದ ನಿರ್ದೇಶಕ ಸಡಗರ ರಾಘವೇಂದ್ರ ಹೆಸರಿಗೆ ತಕ್ಕಂತೆ ಚಿತ್ರ ಪ್ರೇಕ್ಷಕರ ನಿರೀಕ್ಷೆಯನ್ನು ನಿರಾಸೆಗೊಳಿಸುವುದಿಲ್ಲ ಎನ್ನುತ್ತಾ ಚಿತ್ರದ ಟೈಟಲ್ ಬಿಡುಗಡೆಗೆ ಸಹಕರಿಸಿದ ಗೆಳೆಯ ರೀಷಬ್ ಶೆಟ್ಟಿಗೆ ಈ ಮೂಲಕ ಕೃತಜ್ಞತೆಯನ್ನು ಸೂಚಿಸಿದ್ದಾರೆ.

ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ಮರಾಠಿಯ ಹೆಸರಾಂತ ಡ್ರೀಮರ್ಸ್ ಪ್ರೊಡಕ್ಷನ್ ದೀಪಕ್ ರಾಣೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು. ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ.

ಕನ್ನಡದ ಮತ್ತೊಂದು ಚಿತ್ರ ಕರ್ನಾಟಕದ ಗಡಿ ಭಾಷೆಯನ್ನು ಮೀರಿ ಯಶಸ್ಸಿನ ಹಾದಿಯಲ್ಲಿ ಸಾಗಲಿ!

Categories
ಸಿನಿ ಸುದ್ದಿ

ತ್ರಿವಿಕ್ರಮನಿಗೆ ಕುಂಬಳಕಾಯಿ: ಜೂನ್ 24ಕ್ಕೆ ಚಿತ್ರ ಬಿಡುಗಡೆ…

ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಶೂಟಿಂಗ್ ಮುಗಿದಿದೆ. ಇತ್ತೀಚೆಗೆ ಹಾಡಿನ ಚಿತ್ರೀಕರಣ ನಡೆಸಿರುವ ‘ತ್ರಿವಿಕ್ರಮ’ ತಂಡ, ಬಳಿಕ ಕುಂಬಳಕಾಯಿ ಒಡೆದಿದೆ. ಜೂನ್ 24ರಂದು ರಾಜ್ಯಾದ್ಯಂತ ‘ತ್ರಿವಿಕ್ರಮ’ ದರ್ಶನವಾಗಲಿದೆ.

ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ ‘ಶಕುಂತಲಾ ಶೇಕ್ ಎ ಬಾಡಿ ಪ್ಲೀಸ್…’ ಎಂಬ ಹಾಡನ್ನು ಮೋಹನ್ ಬಿ ಕೆರೆ ಸ್ಟೂಡಿಯೋದಲ್ಲಿ ಹಾಕಲಾಗಿದ್ದ ಬೃಹತ್ ಸೆಟ್ ಹಾಗೂ ಕಲರ್ ಕಲರ್ ಕಾಸ್ಟ್ಯೂಮ್’ಗಳಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಅರ್ಜುನ್ ಜನ್ಯ ಸಂಗೀತವಿರುವ ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಕ್ಕಿ ಹಾಗೂ ಆಕಾಂಕ್ಷಾ ಶರ್ಮಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಟ್ಟಾರೆ ನೂರಕ್ಕೂ ಅಧಿಕ ದಿನಗಳ ಕಾಲ ಶೂಟಿಂಗ್ ನಡೆಸಿರುವ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ರೋಸ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ ‘ತ್ರಿವಿಕ್ರಮ’ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಪ್ಲೀಸ್ ಮಮ್ಮಿ’ ಹಾಡು ಮಿಲಿಯನ್’ಗಟ್ಟಲೆ ಹಿಟ್ಸ್ ದಾಖಲಿಸಿ, ಟ್ರೆಂಡಿಂಗ್’ನಲ್ಲಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ ಹಾಡಿಗೆ ವಿಜಯಪ್ರಕಾಶ್ ಹಾಡಿದ್ದಾರೆ.

ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ.

Categories
ಸಿನಿ ಸುದ್ದಿ

ಮೈಲಾರ ಜಾತ್ರೆ ನೋಡ ಬನ್ನಿ! ಇದು ಸಂಚಾರಿ ವಿಜಯ್ ಹಾಡಿ ಕುಣಿದ ಸಾಂಗು: ಏಳುಕೋಟಿ ಮೈಲಾರನ ವಿಶೇಷ ವಿಡಿಯೋ ಆಲ್ಬಂ…

ಕನ್ನಡದಲ್ಲಿ ಮೈಲಾರಿ ಅನ್ನೋ ಪದಕ್ಕೆ ವಿಶೇಷ ಸ್ಥಾನವಿದೆ. ಈ ಮೈಲಾರಿ ಅಮನದಾಕ್ಷಣ ತಕ್ಷಣ ನೆನಪಾಗೋದೆ ಡಾ.ರಾಜಕುಮಾರ್ ಅವರ ‘ ಬಂಗಾರದ ಪಂಜರ’ ಚಿತ್ರದಲ್ಲಿ ಅವರು ಕೂಗಿ ಹೇಳೋ ‘ಮೈಲಾರಿ…’ ಎಂಬ ಡೈಲಾಗ್. ಇನ್ನು, ಈ ಮೈಲಾರಿಯ ನಂಟು ಶಿವರಾಜಕುಮಾರ್ ಅವರಿಗೂ ಅಂಟಿಕೊಂಡಿದ್ದು ಗೊತ್ತೇ ಇದೆ. ಮೈಲಾರಿ ಸಿನಿಮಾ ಮೂಲಕ ಶಿವಣ್ಣ ಮತ್ತೆ ಜೋರು ಸುದ್ದಿಯಾದರು. ಇಷ್ಟಕ್ಕೂ ಈ ಮೈಲಾರಿ ಬಗ್ಗೆ ಇಷ್ಟೊಂದು ಪೀಠಿಕೆಗೆ ಕಾರಣ, ಮತ್ತದೇ ಮೈಲಾರಿ!
ಹೌದು, ಈಗ ಮೈಲಾರ ಲಿಂಗೇಶ್ವರನ ಭಕ್ತರಾಗಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದಾರೆ. ಅದೇ ಈ ಹೊತ್ತಿನ ಸುದ್ದಿ. ಸಂಚಾರಿ ವಿಜಯ್ ನಮ್ಮಿಂದ ದೂರವಾಗಿ ವರ್ಷ ಸಮೀಪಿಸುತ್ತಿದೆ. ಆದರೆ, ಅವರಿಲ್ಲ ಎಂಬ ಭಾವ ಯಾರಲ್ಲೂ ಇಲ್ಲ. ಅವರ ಅದ್ಭುತ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರು ನಟಿಸಿ ಕೊನೆಯ ವಿಡಿಯೋ ಆಲ್ಬಂ ಸಾಂಗ್ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಅದರ ಹೆಸರು ‘ಮೈಲಾರ’. ಇದೊಂದು ಭಕ್ತಿಪೂರ್ವಕ ಹಾಡು. ಜಾನಪದ ಭಾವಗುಚ್ಛ ಇದರ ಹೈಲೆಟ್. ಅಂಥದ್ದೊಂದು ಆಲ್ಬಂ ಸಾಂಗ್ ಕುರಿತು ಒಂದು ವರದಿ…

ಕನ್ನಡದಲ್ಲಿ ಈಗಾಗಲೇ ಅನೇಕ ಭಕ್ತಿಪ್ರಧಾನ, ಜಾನಪದ ಹಿನ್ನೆಲೆಯ ಹಾಡುಗಳು ಬಂದಿವೆ. ಆ ಸಾಲಿಗೆ ‘ಮೈಲಾರ’ ಹಾಡು ಸೇರಿದೆ. ಪ್ರದೀಪ್ ಚಂದ್ರ ಈ ಹಾಡು ಹುಟ್ಟಿಗೆ ಕಾರಣರಾದರೆ, ಸುಂದರ ಆಲ್ಬಂ ಆಗೋಕೆ‌ ಕಾರಣ ಡಾ. ರಾಜಶೇಖರ್ . ಇನ್ನು‌ ಇಂಥದ್ದೊಂದು ಹಾಡನ್ನು ಅಷ್ಟೇ ಅದ್ಭುತವಾಗಿ ಕಲ್ಪನೆಯಂತೆ ಮೂಡಿಬರಲು ಕಾರಣ ನಿರ್ದೇಶಕ ಹುಡುಗಾಟ ಸಂಜಯ್. ಈ ಹಾಡಿನ ಹಿಂದೆ ನೂರಾರು ಜನರ ಹಗಲಿರುಳು ಶ್ರಮವಿದೆ. ಇಷ್ಟಕ್ಕೂ ಈ ಹಾಡು ಮಾಡಿದ್ದು ಯಾಕೆ, ಹೇಗೆ, ಎಲ್ಲಿ ಎಂಬಿತ್ಯಾದಿ ಕುರಿತು ಸಂಗೀತ ನಿರ್ದೇಶಕ, ಗಾಯಕ ಮತ್ತು ಗೀತೆರಚನೆಕಾರ ಪ್ರದೀಪ್ ಚಂದ್ರ ಸಿನಿಲಹರಿ ಜೊತೆ ಹಂಚಿಕೊಂಡಿದ್ದಾರೆ.

ಓವರ್ ಟು ಪ್ರದೀಪ್ ಚಂದ್ರ…

‘ಮೈಲಾರ’ ಇದು ನನ್ನ ಕನಸಿನ ಆಲ್ಬಂ ಸಾಂಗ್. ಜಾನಪದ ಹಿನ್ನಲೆಯ ಹಾಡು ಕಟ್ಟಬೇಕೆಂಬ ನನ್ನ ಆಸೆ ಇದರ ಮೂಲಕ ಈಡೇರಿದೆ. ಮೈಸೂರು ಕಡೆ ಮಲೆ ಮಹದೇಶ್ವರ ಸ್ವಾಮಿ ಪ್ರಸಿದ್ಧಿ. ಅದರ‌ ಮೇಲೆ ಸಾಕಷ್ಟು ಹಾಡು ಬಂದಿದೆ. ನಮ್ಮ ಈ ಭಾಗದಲ್ಲಿ ಮೈಲಾರ ಲಿಂಗೇಶ್ವರ ಪ್ರಸಿದ್ಧಿ. ಹಾಗಾಗಿ ಯಾಕೆ ಮೈಲಾರ ಸ್ವಾಮಿ ಮೇಲೆ ಹಾಡು ಮಾಡಬಾರದು ಅಂತ ನಿರ್ಧರಿಸಿದೆ.

ಅದಕ್ಕೆ ಕಾರಣ ಅಲ್ಲಿ ನಡೆಯುವ ದೊಡ್ಡ ಜಾತ್ತೆ, ಅಲ್ಲಿನ ಕಲ್ಚರ್, ಗೊರಪ್ಪಗಳು, ಅಲ್ಲಿನ ಪವಾಡ, ಭವಿಷ್ಯ ನುಡಿಯುವ ಕಾರ್ಣಿಕ ಲಕ್ಷಾಂತರ ಭಕ್ತರು ಇವೆಲ್ಲವೂ ಅದರ ಹೈಲೆಟ್. ಹಾಗಾಗಿ ಹಾಡು ಮಾಡಲು ಮುಂದಾದೆ. ನಿರ್ದೇಶಕ ಸಂಜಯ್ ಅವರು ಹಾಡನ್ನು ಚಿತ್ರೀಕರಿಸಬೇಕೆಂದಾಗ ಒಂದಷ್ಟು ಸಲಹೆ ನೀಡಿ, ಚಂದದ ಹಾಡಾಗಲು ಕಾರಣರಾದರು.

ನಮ್ಮ‌ ಕನಸಿಗೆ ಬಣ್ಣ ತುಂಬಿದ್ದು, ನಿರ್ಮಾಪಕರಾದ ಡಾ.ರಾಜಶೇಖರ್. ಅವರು ತುಂಬಿದ ಧೈರ್ಯ ಮತ್ತು ಪ್ರೋತ್ಸಾಹದಿಂದ ಇಂದು ಚಂದದ ಆಲ್ಬಂ ಸಾಂಗ್ ಆಗಿದೆ.

ಸಂಚಾರಿಯ ಮಿಂಚಿನ ಸಂಚಾರ


ಈ ಹಾಡಿನ ಹೈಲೆಟ್ ಸಂಚಾರಿ ವಿಜಯ್. ಹಾಡು ಕೇಳಿ ನಟಿಸಲು ಒಪ್ಪಿ, ಐದು ದಿನಗಳ ಕಾಲ ನಡೆದ‌ ಶೂಟಿಂಗ್ ವೇಳೆ ಖುಷಿಯಿಂದಲೇ ನಮ್ಮೊಂದಿಗಿದ್ದರು. ನಮಗೆ ಆ ಭಾಗದ ಮೈಲಾರ ಸ್ವಾಮಿ ಚರಿತ್ರೆ ಮತ್ತು ಶ್ರೀಮಂತವಾಗಿ ನಡೆಯುವ ಜಾತ್ರೆ ಚಿತ್ರಣವನ್ನು ಇಡೀ ರಾಜ್ಯದ ಜನತೆಗೆ ತೋರಿಸಬೇಕೆಂಬ ಉದ್ದೇಶವಿತ್ತು.

ಅದಕ್ಕಾಗಿ ಸರ್ಕಾರದ ಪರ್ಮಿಷನ್ ಪಡೆದು ಜಾತ್ರೆಯಲ್ಲೇ ಚಿತ್ರೀಕರಿಸಿದ್ದೇವೆ. ಮೈಲಾರಿ ಸಿನಿಮಾ ಚಿತ್ರೀಕರಣ ಬಳಿಕ ನಮ್ಮ ಹಾಡಿನ ಚಿತ್ರೀಕರಣ ಅಲ್ಲಾಗಿದೆ. ನಾವು ಅಂದುಕೊಂಡಿದ್ದಕ್ಕಿಂತಲೂ ಹಾಡು ಚೆನ್ನಾಗಿ ಮೂಡಿಬಂದಿದೆ.

ವಿಜಯ್ ಪ್ರಕಾಶ್ ಗಾನ…

ಇನ್ನು, ಇದೊಂದು ಹೈ ಪಿಚ್ ಗೀತೆ. ಇದಕ್ಕೆ ವಿಜಯ್ವಪ್ರಕಾಶ್ ಅವರ ಧ್ವನಿ ಬೇಕು ಎಂಬ ಕಾರಣಕ್ಕೆ ಅವರಿಂದಲೇ ಹಾಡು ಹಾಡಿಸಿದ್ದೇವೆ. ಅವರೂ ಕೂಡ ಹಾಡಿನ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಾಕಷ್ಟು ಲೈವ್ ವಾದ್ಯಗಳಿಂದಲೇ ಸಂಗೀತ ಸಂಯೋಜಿಸಲಾಗಿದೆ. ಹಾಡನ್ನು ಹಗಲಿರುಳು ಚಿತ್ರೀಕರಿಸಲಾಗಿದೆ. ಲಕ್ಷಾಂತರ ಜನರ ನಡುವೆ ಶೂಟಿಂಗ್ ನಡೆಸಿದ್ದು ವಿಶೇಷ ಎನ್ನುತ್ತಾರೆ ಪ್ರದೀಪ್ ಚಂದ್ರ.

ಕಮರ್ಷಿಯಲ್ ಹಾಡಿಗೆ ಕಮ್ಮಿ ಇಲ್ಲದಂತೆ ಅದ್ಧೂರಿಯಾಗಿ ಚಿತ್ರೀಕರಿಸಿದ್ದೇವೆ. ಸದಾ ನೃತ್ಯ ಸಂಯೋಜನೆ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ಚಂದ್ರು ಮತ್ತು ರಾಜಶೇಖರ್ ಛಾಯಾಗ್ರಹಣವಿದೆ. ಈ ಹಾಡಿನ ಹಿಂದೆ ಡಾಕ್ಟರ್ ಗಿರೀಶ್, ಮಂಜುನಾಥ್, ಮೈಲೇಶ್ ನಿಂತು‌ ಸಾಥ್ ನೀಡಿದ್ದಾರೆ.

ಸಂಚಾರಿ ವಿಜಯ್ ಅವರು ಇಲ್ಲವಾಗಿ ಒಂದು ವರ್ಷವಾಗಿದೆ. ಈ ಹಾಡು ಅವರಿಗೆ ಅರ್ಪಿಸುತ್ತಿದ್ದೇವೆ. ಕನ್ನಡದ ಹಲವು ನಟ, ನಟಿಯರು ಹಾಡು ನೋಡಿ ಮೆಚ್ಚಿಕೊಂಡಿದ್ದಾರೆ.

ಕನ್ನಡದ ಸ್ಟಾರ್ ನಟರೊಬ್ಬರು ಈ ಹಾಡನ್ನು ರಿಲೀಸ್ ಮಾಡಲಿದ್ದಾರೆ. ಇಷ್ಟರಲ್ಲೇ ಮೈಲಾರ ಹಾಡು ಎಲ್ಲೆಡೆ ಪಸರಿಸಲಿದೆ ಎನ್ನುತ್ತಾರೆ ಅವರು.

Categories
ಸಿನಿ ಸುದ್ದಿ

ಉಪ್ಪಿ ಹೊಸ ನಾಮ! ಬುದ್ಧಿವಂತ ನಿರ್ದೇಶಕನ ಚಿತ್ರಕ್ಕೆ ಅದ್ಧೂರಿ ಮುಹೂರ್ತ…

“A”, “ಓಂ” ನಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಉಪೇಂದ್ರ ನಾಯಕರಾಗೂ ಜನಪ್ರಿಯ. “ಉಪ್ಪಿ ೨” ಚಿತ್ರದ ನಂತರ ಉಪೇಂದ್ರ ಯಾವುದೇ ಚಿತ್ರ ನಿರ್ದೇಶನ ಮಾಡಿರಲಿಲ್ಲ. ಉಪೇಂದ್ರ ನಿರ್ದೇಶನದ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆ ಶುಭಘಳಿಗೆ ಈಗ ಬಂದಿದೆ.‌ ಉಪೇಂದ್ರ ನಿರ್ದೇಶಿಸಿ, ನಾಯಕರಾಗೂ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಸುದೀಪ್ ಆರಂಭ ಫಲಕ ತೋರಿದರು. ಶಿವರಾಜಕುಮಾರ್ ಕ್ಯಾಮೆರಾ ಚಾಲಾನೆ ಮಾಡಿದರು. ಗೀತಾ ಶಿವರಾಜಕುಮಾರ್, ಡಾಲಿ ಧನಂಜಯ, ವಸಿಷ್ಠ ಸಿಂಹ ಆಗಮಿಸಿ ಶುಭ ಕೋರಿದರು.

ಲಹರಿ ಫಿಲಂಸ್ ಹಾಗೂ VENUS entertainers ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶನದೊಂದಿಗೆ ಉಪೇಂದ್ರ ನಾಯಕರಾಗೂ ನಟಿಸುತ್ತಿದ್ದಾರೆ.

ಮೂರುನಾಮದ ಚಿಹ್ನೆಯೊಂದು ಈ ಚಿತ್ರದ ಶೀರ್ಷಿಕೆಯಾಗಿದೆ. ಇದನ್ನು ಕೆಲವರು ಮೂರು ನಾಮ ಅಂದುಕೊಂಡರೆ, ಮತ್ತೆ ಕೆಲವರು ಯು ಮತ್ತು ಐ ಅಂದುಕೊಳ್ಳುತ್ತಾರೆ. ನಾನು ಮತ್ತು ನೀನು ಎಂಬ ಅರ್ಥ ಬರುವ ಹಾಗಿದೆ ಆ ಚಿಹ್ನೆ.

ಒಟ್ಟಿನಲ್ಲಿ ತಮ್ಮ ಹಿಂದಿನ ಚಿತ್ರಗಳಲ್ಲಿ ವಿಭಿನ್ನ ಶೀರ್ಷೆಕೆಯಿಟ್ಟು ಎಲ್ಲರ ತಲೆಗೆ ಕೆಲಸ ಕೊಡುತ್ತಿದ್ದ ಉಪೇಂದ್ರ ಅವರು ಈ ಚಿತ್ರದಲ್ಲೂ ಹಾಗೆ ಮಾಡಿದ್ದಾರೆ.

ಇಂದಿನಿಂದ ಚಿತ್ರೀಕರಣ ಆರಂಭಿಸಿದ್ದೇವೆ. ಲಹರಿ ಸಂಸ್ಥೆಯವರು ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ವಿಭಿನ್ನ ಶೀರ್ಷಿಕೆ ಯಿಟ್ಟಿದ್ದೀನಿ. ನಿಮಗೆಲ್ಲಾ ಏನು ಅನಿಸುತ್ತದಯೋ, ಅದೇ ಶೀರ್ಷಿಕೆ ಆಗಿರುತ್ತದೆ. ನಾನು ಕಥೆ ಸಿದ್ದಮಾಡಿಕೊಂಡಿರುತ್ತೇನೆ. ಮತ್ತೆ ಬೇರೆ ಅಲೋಚನೆ ಬಂದರೆ, ಬದಲಿಸುತ್ತೀನಿ. ಚಿತ್ರದ ಶೀರ್ಷಿಕೆ ಹಾಗೂ ಕುದುರೆ ಪೋಸ್ಟರ್ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ.

ಅದರ ಬಗ್ಗೆ ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಹೊಳೆಯುತ್ತಿದೆ. ನಿಮ್ಮಗೆಲ್ಲಾ ಏನು ಅನಿಸುವುದೊ, ಅದು ಚಿತ್ರದಲ್ಲಿ ಇರುತ್ತದೆ. ನಾನು ನನ್ನ ನಿರ್ದೇಶಕರ ತಂಡ ಹಾಗೂ ಇನ್ನೂ ಕೆಲವರ ಬಳಿ ಕಥೆಯ ಬಗ್ಗೆ ಹೇಳಿರುತ್ತೇನೆ. ಅವರಿಗೆ ಅದನ್ನು ಹೇಳಲು ಬರುವುದಿಲ್ಲ ಎಂದ ಉಪೇಂದ್ರ ಅವರು ಒಟ್ಟಿನಲ್ಲಿ ಉತ್ತಮ ಚಿತ್ರವೊಂದನ್ನು ನಿಮ್ಮ ಮುಂದೆ ಇಡುತ್ತೇನೆ. ನಿಮ್ಮ ನಿರೀಕ್ಷೆ ಸುಳ್ಳು ಮಾಡುವುದಿಲ್ಲವೆಂದು ತಿಳಿಸಿದರು.

ಕಲಾವಿದರು ಹಾಗೂ ತಾಂತ್ರಿಕವರ್ಗದ ಕುರಿತು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಉಪೇಂದ್ರ ಹೇಳಿದರು.

ಉಪೇಂದ್ರ ಅವರು ನಿರ್ದೇಶನಕ್ಕೆ ಒಪ್ಪಿರುವುದು ಖುಷಿಯಾಗಿದೆ. ಶಿವಣ್ಣ ಹಾಗೂ ಗೀತಕ್ಕ ಅವರ ಆಶೀರ್ವಾದದಿಂದ ಮೂರನೇ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಖ್ಯಾತ ಲಹರಿ ಫಿಲಂಸ್ ನವರು ನಾವು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ನಿಮ್ಮ ಹಾರೈಕೆ ಇರಲಿ ಎಂದರು ಕೆ.ಪಿ.ಶ್ರೀಕಾಂತ್.

ನಾನು ಹಾಗೂ ಉಪೇಂದ್ರ ಅವರು ಸಹಪಾಠಿಗಳು. ತುಂಬಾ ವರ್ಷಗಳಿಂದ ಅವರು ಪರಿಚಯ.
ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ಸಂತೋಷವೆಂದರು ಲಹರಿ ವೇಲು.

ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ನವೀನ್, ಕಾಕ್ರೋಜ್ ಸುಧಿ, ನಟಿ ತ್ರಿವೇಣಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

.

Categories
ಸಿನಿ ಸುದ್ದಿ

ಶಿವಣ್ಣ-ಶರಣ್ ಜುಗಲ್ ಬಂದಿ; ಸಿಂಗಲ್ ಶಾಟ್ ಹಾಡಿಗೆ ಟೀಂ ‘ಬೈರಾಗಿ’ ಸಖತ್ ಸ್ಟೆಪ್ಸ್…

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ಬೈರಾಗಿ. ‘ಡಾಲಿ’ ಧನಂಜಯ್ ಹಾಗೂ ಪೃಥ್ವಿ ಅಂಬರ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡು ಶಿವರಾಜ್‌ಕುಮಾರ್ ಮತ್ತು ಶರಣ್ ಕಂಠಸಿರಿಯಲ್ಲಿ ಮೂಡಿಬಂದಿರೋದು ವಿಶೇಷ. ‘ವಜ್ರಕಾಯ’ ಬಳಿಕ ಶಿವಣ್ಣನ ಸಿನಿಮಾಕ್ಕೆ ಶರಣ್ ದನಿಗೂಡಿಸಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿರುವ ‘ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ…’ ಎಂಬ ಹಾಡು ಸಿಂಗಲ್ ಶಾಟ್’ನಲ್ಲಿ ಶೂಟ್ ಮಾಡಿರುವುದು ಮತ್ತೊಂದು ವಿಶೇಷ.

‘ರಿದಮ್ ಆಫ್ ಶಿವಪ್ಪ’ ಕಾನ್ಸೆಪ್ಟ್‌’ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ ‘ಬೈರಾಗಿ’ ತಂಡ ಹೆಜ್ಜೆ ಹಾಕಿದ್ದು, ದೇವನಹಳ್ಳಿ ಬಳಿಯಿರುವ ನೂತನ ಮಾಲ್’ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮುರಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ನಖರನಖ’ ಹಾಡಿಗೆ ಆ್ಯಂಥೋನಿ ದಾಸ್ ದನಿಗೂಡಿಸಿದ್ದರು.

ಇದೀಗ ‘ಸಂಡೆ-ಮಂಡೆ’ ಹಾಡು ಶಿವಣ್ಣ-ಶರಣ್ ದನಿಯಲ್ಲಿ ಮೂಡಿಬಂದಿದ್ದು ಜೆ.ಪಿ ಮ್ಯೂಸಿಕ್ ಯೂಟ್ಯೂಬ್ ಚಾನಲ್’ನಲ್ಲಿ ರಿಲೀಸ್ ಆಗಿದೆ. ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಹಿಟ್ಸ್ ದಾಖಲಾಗಿ ಟ್ರೆಂಡಿಂಗ್’ನಲ್ಲಿದೆ.

ವಿಜಯ್ ಮಿಲ್ಟನ್‌ ನಿರ್ದೇಶನವಿರುವ ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್, ಅನು ಪ್ರಭಾಕರ್, ಅಂಜಲಿ, ಯಶ ಶಿವಕುಮಾರ್, ಚಿಕ್ಕಣ್ಣ ಮೊದಲಾದವರ ತಾರಾದಂಡೇ ಇದೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ‘ಬೈರಾಗಿ’ಗೆ ಬಂಡವಾಳ ಹೂಡಿದ್ದಾರೆ.

Categories
ಸಿನಿ ಸುದ್ದಿ

ನೈಟ್ ಕರ್ಫ್ಯೂ ಸಿನಿಮಾ ಮೂಲಕ ಮಾಲಾಶ್ರೀ ಕಂಬ್ಯಾಕ್:

ಕನ್ನಡ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ.. ಕನಸಿನ ರಾಣಿ ಮಾಲಾಶ್ರೀ ಮತ್ತೆ ಸಿನಿಮಾ ಲೋಕಕ್ಕೆ ಕಂಬ್ಯಾಕ್ ಆಗ್ತಿದ್ದಾರೆ. ಪತಿ ಅಗಲಿಕೆ ನೋವಿನ ನಂತ್ರ ಒಂದಷ್ಟು ಗ್ಯಾಂಪ್ ತೆಗೆದುಕೊಂಡಿದ್ದ ಮಾಲಾಶ್ರೀ ನೈಟ್ ಕರ್ಫ್ಯೂ’ ಸಿನಿಮಾ ಮೂಲಕ ಬೆಳ್ಳಿತೆರೆಮೇಲೆ ದಿಬ್ಬಣ ಹೊರಡಲಿದ್ದಾರೆ.

ಈ ಹಿಂದೆ ‘ಪುಟಾಣಿ ಸಫಾರಿ’ ನಿರ್ದೇಶನ ಮಾಡಿದ್ದ ರವೀಂದ್ರ ವೆಂಶಿ ಈ ಚಿತ್ರಕ್ಕೆ ಕಥೆ ಬರೆದು, ‌ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಇಡೀ ತಂಡ ಭಾಗಿಯಾಗಿ ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡರು.

ಮಾಲಾಶ್ರೀ ಮಾತನಾಡಿ, ನನಗೆ ತುಂಬಾ ಗ್ಯಾಪ್ ಅನಿಸುತ್ತಿಲ್ಲ, ತುಂಬಾ ಖುಷಿಯಾಗ್ತಿದೆ. ಕಥೆಯಲ್ಲಿ ಹೊಸತನವಿದೆ. ಹೊಸ ತಂಡ ನನಗೆ ಹೊಸ ಅನುಭವ, ಚಾಲೆಂಜ್ ಇರುತ್ತದೆ. ನಾನು ಡಾಕ್ಟರ್ ಆಗಿ ಎರಡನೇ ಸಿನಿಮಾವಿದು ಎಂದು ಹೇಳಿದರು.
ತುಂಬಾ ಕಾರಣಕ್ಕೆ ಈ ಸಿನಿಮಾ ನನಗೆ ವಿಶೇಷವಾಗಿದೆ. ಮಾಲಾಶ್ರೀ ಅವರ ಜೊತೆ ಕೆಲಸ ಮಾಡ್ತಿರೋದು ಖುಷಿ ಕೊಟ್ಟಿದೆ. ಇದೊಂದು ಕ್ರೈಮ್ ಥ್ರಿಲ್ಲರ್. ಕೊರೋನಾ ಕಾಲಘಟ್ಟದಲ್ಲಿ ನಡೆಯುವ ಕಥೆ. ನಾನು ಡಾಕ್ಟರ್ ಪಾತ್ರ ಮಾಡಿದ್ದೇನೆ ಎಂದು ರಂಜನಿ ರಾಘವನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ನಿರ್ದೇಶಕ ರವೀಂದ್ರ ವಂಶಿ, ನೈಟ್ ಕರ್ಫ್ಯೂ ವಿಶೇಷ ಸಿನಿಮಾ. ಸಿನಿಮಾದಲ್ಲಿ ನಾಲ್ಕು ಅಂಶ ಮುಖ್ಯ. ಕಥೆ ಚಿತ್ರ-ಕಥೆ, ಸಂಭಾಷಣೆ. ಈ ಸಿನಿಮಾದಲ್ಲಿ, ವಿಶೇಷ ಕಥೆ, ನಿರೂಪಣಾ ಶೈಲಿ ಇದ್ದು, ಸಿನಿಮಾದ ತಾರಾಬಳಗ ತುಂಬಾ ಚೆನ್ನಾಗಿದೆ, ಟೆಕ್ನಿಕಲ್ ಡಿಪಾರ್ಟ್ ಚೆನ್ನಾಗಿದೆ. ನಿರ್ಮಾಣ ಎಲ್ಲದಕ್ಕೂ ಸಾಥ್ ಕೊಟ್ಟಿದ್ದಾರೆ ಎಂದರು.

ಇದೊಂದು ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು ಮೆಡಿಕಲ್ ಮಾಫಿಯಾ ಕುರಿತಾದ ಕಥೆ ಒಳಗೊಂಡಿದ್ದು, ಪ್ರಮೋದ್ ಶೆಟ್ಟಿ, ಬಲರಾಜ್ವಾಡಿ, ವರ್ಧನ್ ,ಅಶ್ವಿನ್, ರಂಗಾಯಣ ರಘು ಸಾಧು ಕೋಕಿಲ, ಮಂಜು ಪಾವಗಡ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಸ್ವರ್ಣಗಂಗಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಬಿ.ಎಸ್ ಚಂದ್ರಶೇಖರ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಕ್ಯಾಮೆರಾ ವರ್ಕ್, ಜಾಗ್ವಾರ್ ಸಣ್ಣಪ್ಪ ಸಾಹಸ ಸಿನಿಮಾಕ್ಕಿದೆ.

error: Content is protected !!