ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಗೆಲುತ್ತಿವೆ. ಆ ಸಾಲಿಗೆ ಸೇರುವ ಗ್ರಾಮೀಣ ಸೊಗಡಿನ “ದೊಡ್ಡಹಟ್ಟಿ ಬೋರೇಗೌಡ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ.
ನಾನು ಈ ಹಿಂದೆ “ತರ್ಲೆ ವಿಲೇಜ್”, “ಪರಸಂಗ” ಚಿತ್ರಗಳನ್ನು ನಿರ್ದೇಶಿಸಿದ್ದೆ. ಈಗ ಗ್ರಾಮೀಣ ಸೊಗಡಿನ “ದೊಡ್ಡಹಟ್ಟಿ ಬೋರೇಗೌಡ” ಚಿತ್ರವನ್ನು ನಿರ್ದೇಶಿಸಿದ್ದೇನೆ. ನಮ್ಮ ಚಿತ್ರ ಮನೆಯ ಸುತ್ತ ಹೆಣೆಯಲಾಗಿರುವ ಕಥೆ.
ಹಳ್ಳಿಯಲ್ಲಿ ಬಡವರಿಗೆ ಸರ್ಕಾರದಿಂದ ನೀಡುವ ಆಶ್ರಯ ಯೋಜನೆ ಮನೆಯನ್ನು ವ್ಯಕ್ತಿಯೊಬ್ಬ ಪಡೆದುಕೊಳ್ಳಲು ಯಾವರೀತಿ ಕಷ್ಟಪಡುತ್ತಾನೆ ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ನಮ್ಮ ಚಿತ್ರಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ದೊರಕಿದೆ.
ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಇದು ಕಲಾತ್ಮಕ ಚಿತ್ರ ಅಲ್ಲ. ಕಮರ್ಷಿಯಲ್ ಚಿತ್ರ. ನನ್ನ ಪ್ರಕಾರ ಆರರಿಂದ ಅರವತ್ತು ವರ್ಷಗಳ ತನಕ ಎಲ್ಲರಿಗೂ ಹಿಡಿಸುವ ಚಿತ್ರಗಳು ಕಮರ್ಷಿಯಲ್ ಚಿತ್ರಗಳೇ.ಈ ಚಿತ್ರದಲ್ಲಿ ಗ್ರಾಮೀಣ ಪ್ರತಿಭೆಗಳೇ ಅಭಿನಯಿಸಿರುವುದು ವಿಶೇಷ. ಮೂರು ತಿಂಗಳ ಕಾಲ ಎಲ್ಲರಿಗೂ ತರಬೇತಿ ನೀಡಲಾಗಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಕೆ.ಎಂ.ರಘು.
ನಾನು ಮೈಸೂರಿನ ಬಳಿಯ ಬೀರಹುಂಡಿ ಎಂಬ ಹಳ್ಳಿಯವನು. ಗ್ರಾಮ ಪಂಚಾಯತಿ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ರಂಗಭೂಮಿಯಲ್ಲಿ ಅನುಭವವಿದೆ. ಹಿರಿತೆರೆಯಲ್ಲಿ ಮೊದಲ ಚಿತ್ರ. ನಾನೇ ಬೋರೇಗೌಡ ಪಾತ್ರ ಮಾಡಿದ್ದೀನಿ ಎಂದರು ನಟ ಶಿವಣ್ಣ ಬೀರಹುಂಡಿ.
ಚಿತ್ರದಲ್ಲಿ ಅಭಿನಯಿಸಿರುವ ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದ ಕಲಾವಿದರು ಅಭಿನಯದ ಅನುಭವ ಹಂಚಿಕೊಂಡರು. ಹಾಡುಗಳ ಬಗ್ಗೆ ಹರ್ಷವರ್ಧನ್ ರಾಜ್ ಮಾಹಿತಿ ನೀಡಿದರು.
ನಿರ್ಮಾಪಕರಾದ ಶಶಿಕುಮಾರ್ ಬಿ ಸಿ ಹಾಗೂ ಲೋಕೇಶ್ ಕೆ.ಎಂ ಹಾಗೂ ಚಿತ್ರ ಬಿಡುಗಡೆಗೆ ಸಹಕಾರ ನೀಡಿರುವ ವೆಂಕಟೇಶ, ಅನ್ನಪೂರ್ಣ ಇದ್ದರು.
ಕನ್ನಡದಲ್ಲಿ ಈಗಾಗಲೇ ದ್ವನಿ ಇಲ್ಲದವರ ಕುರಿತ ಸಿನಿಮಾಗಳು ಬಂದಿವೆ. ಅವುಗಳು ಸದ್ದು ಮಾಡಿವೆ ಕೂಡ. ಅದರಲ್ಲೂ ಕಾಡೇ ನಮ್ಮ ಬದುಕು ಅಂದುಕೊಂಡು ಉಸಿರಾಡುತ್ತಿರುವ ಜನರ ಬದುಕಿನ ಚಿತ್ರಣವನ್ನೂ ಕಟ್ಟಿಕೊಡಲಾಗಿದೆ. ಅಂತಹ ಸಿನಿಮಾಗಳ ಸಾಲಿಗೆ ಈಗ ‘ಅಡವಿ’ ಎಂಬ ಸಿನಿಮಾ ಕೂಡ ಸೇರಿದೆ. ಈಗಾಗಲೇ ಸದ್ದಿಲ್ಲದೆಯೇ ಆ ಸಿನಿಮಾ ಚಿತ್ರೀಕರಣ ಪೂರೈಸಿದೆ. ಆ ಸಿನಿಮಾ ಕುರಿತ ಒಂದು ವರದಿ ಇದು…
ಕಲೆ ತನ್ನ ದೈವ ಅಂದುಕೊಂಡು, ಸದಾ ಹೋರಾಟದ ಮನೋಭಾವನೆಯಲ್ಲೇ ದಿನ ಸವೆಸುತ್ತಿರುವ, ಜನಪರ ಕಾಳಜಿ ಇರುವ, ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಟೈಗರ್ ನಾಗ್, ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಇದು ಅವರ ಇಷ್ಟು ವರ್ಷಗಳ ಅನುಭವದ ಪಾಕ. ಯಶಸ್ವಿಯಾಗಿ ಸಿನಿಮಾ ಮುಗಿಸಿರುವ ಖುಷಿಯಲ್ಲಿ ಟೈಗರ್ ನಾಗ್ ಹಾಗು ಅವರ ತಂಡವಿದೆ.
ಅಂದಹಾಗೆ, ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ನ ಮೊದಲ ಸಿನಿಮಾ ಇದು. ಟೈಗರ್ ನಾಗ್ ಅವರೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸದ್ಯ ‘ಅಡವಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಬೇಕಾದ ಕೆಲಸಗಳನ್ನು ಚಿತ್ರತಂಡ ತಯಾರಿ ನಡೆಸುತ್ತಿದೆ.
ಅಡವಿ ಕಥೆ ಏನು?
ಕಾಡನ್ನೇ ಸರ್ವಸ್ವ ಎಂದು ನಂಬಿ ಬದುಕುವ ದ್ರಾವಿಡ ಜನರ ಬದುಕು ಬವಣೆಯ ಕಥೆ ಇದು. ಕರ್ನಾಟಕದ ಪ್ರಥಮ ದಲಿತ ದೊರೆ ಕೊರಂಗರಾಯ ಆಳಿದ ಐತಿಹಾಸಿಕ ಹಿನ್ನೆಲೆ ಹಾಗು ಸಿದ್ದ ಸಾಧು ಸಂತರ ತಪೋ ಭೂಮಿ ಆಯುರ್ವೇದದಲ್ಲಿ ಪ್ರಖ್ಯಾತಿ ಪಡೆದ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಸಿದ್ದರ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಮುಹೂರ್ತಕ್ಕೆ ಅಲ್ಲೇ ಚಾಲನೆ ನೀಡಲಾಗಿತ್ತು ಅಲ್ಲೇ ಚಿತ್ರಕ್ಕೆ ಕುಂಬಳಕಾಯಿ ಹೊಡೆದಿದ್ದು ವಿಶೇಷ.
ಚಿತ್ರಕ್ಕಾಗಿ ಸಿದ್ದರ ಬೆಟ್ಟದಲ್ಲಿ ಆದಿವಾಸಿಗಳು ವಾಸಿಸುವ ಗುಡಿಸಲ ಹಟ್ಟಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಹಿರಿಯ ಕಲಾ ನಿರ್ದೇಶಕ ಬಾಬು ಖಾನ್ ಅವರ ಕಲಾ ನಿರ್ದೇಶನವಿದೆ. ಕಲಾ ಸಹಾಯಕರ ತಂಡ ಹಗಲಿರುಳನ್ನದೆ ಶ್ರಮಿಸಿ ಗುಡಿಸಲ ಹಟ್ಟಿ ಸೆಟ್ ಜೊತೆಗೆ ಪೊಲೀಸ್ ಸ್ಟೇಷನ್ ಹಾಗೂ ಕೋರ್ಟ್ ಸೆಟ್ ಕೂಡ ನಿರ್ಮಾಣ ಮಾಡಲಾಗಿತ್ತು.
ಸಿದ್ದರಬೆಟ್ಟ. ಚಿಕ್ಕಮಗಳೂರು. ಸಕಲೇಶಪುರ. ಮತ್ತಿತರ ಸುಂದರ ತಾಣಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು ಅರಣ್ಯ ರಕ್ಷಣೆಯ ಜಾಗೃತಿ ಜೊತೆಗೆ ಆದಿವಾಸಿ ದ್ರಾವಿಡ ಜನರು ತಮ್ಮ ಬದುಕಿಗಾಗಿ ಏನೆಲ್ಲಾ ಹೋರಾಟ ಮಾಡಬೇಕಾಗುತ್ತದೆ ಎಂಬ ಆದಿವಾಸಿ ಜನರ ಹಾಗೂ ವ್ಯವಸ್ಥೆಯ ಸಂಘರ್ಷದ ಕಥೆಯನ್ನು ತೆರೆದಿಡುವ ಈ ಚಿತ್ರ, ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯ ಚಿತ್ರ ಆಗಲಿದೆ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ಮೂರು ಹಾಡುಗಳಿವೆ. ಎರಡು ಭರ್ಜರಿ ಸಾಹಸಗಳಿವೆ. ಅದೇನೆ ಇರಲಿ, ಟೈಗರ್ ನಾಗ್ ಅವರು ಶೋಷಿತ ವರ್ಗದ ಕಥೆ ಇಟ್ಟುಕೊಂಡು ಸಿನಿಮಾ ಮಾಡಿರುವ ಅವರು, ಪತ್ರಕರ್ತರಾಗಿ, ಕೊರಟಗೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದಾರೆ. ಇದರೊಂದಿಗೆ ಹೋರಾಟದ ಹಾದಿಯಲ್ಲಿರುವ ಟೈಗರ್ ನಾಗ್, ಸುಮಾರು 17 ಕ್ಕೂ ಹೆಚ್ಚು ಭ್ರಷ್ಟ ಅಧಿಕಾರಿಗಳನ್ನು ಎಸಿಬಿ ಗೆ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ದಶಕದಿಂದಲೂ ಶೋಷಿತರ ಪರ, ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ವಿಭಿನ್ನ ಹೋರಾಟಗಳ ಮೂಲಕ ದಿನ ಸವೆಸಿದ್ದಾರೆ. ತಳ ಸಮುದಾಯಗಳ ಪರ ಭ್ರಷ್ಟ ಅಧಿಕಾರಿಗಳ ವಿರುದ್ಧ ದ್ವನಿ ಎತ್ತುತ್ತಿರುವ ಅವರು, ಮೊದಲ ಪ್ರಯತ್ನದಲ್ಲೇ ಚರ್ಚೆಗೆ ಗ್ರಾಸವಾಗುವ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಸಮಾಜದ ಅಂಕು ಡೊಂಕು ತಿದ್ದುವ, ಭ್ರಷ್ಟಾಚಾರ ತೋರಿಸುವ, ಮಾನವ ಹಕ್ಕು ಉಲ್ಲಂಘನೆಯಂತಹ ವಿಷಯಗಳಿವೆ. ಇವೆಲ್ಲದರ ಜೊತೆ, ಸಮಾನತೆಗೆ ಹೋರಾಡುವ, ಹೋರಾಟಗಾರರನ್ನು ಬಳಸಿಕೊಂಡು ಚಿತ್ರೀಕರಿಸಿರುವುದು ಮತ್ತೊಂದು ವಿಶೇಷ.
ನಿರ್ಮಾಪಕ ಬಿಎಎಸ್ ಮಧುಗಿರಿ ಸಾಧಿಕ್ ಸಾಬ್
ಜಗದೀಶ್ ಮಹಾದೇವ್ ( ವಕೀಲ್ ಸಾಬ್ ) ಹ.ರಾ.ಮಹಿಷಾ. ಕುಣಿಗಲ್ ರಮೇಶ್ ಸೇರಿದಂತೆ ಹಲವು ಹೋರಾಟಗಾರರು ಅಭಿನಯಿಸಿದ್ದಾರೆ. ಮೋಹನ್ ಮೌರ್ಯ ನಾಯಕರಾಗಿ ನಟಿಸಿದ್ದಾರೆ. ಮಾಸ್ಟರ್ ಚಿರುಶ್ರೀ ನಾಗ್. ಅರುಂಧತಿ ಲಾಲ್, ಅರ್ಜುನ್ ಪಾಳ್ಳೇಗಾರ್ ಹಾಗು ವಿಲನ್ ಆಗಿ ಟೈಗರ್ ನಾಗ್ ಕೂಡ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ರವಿಕುಮಾರ್ ಸಾನ, ಆರ್. ಅನಂತರಾಜ್, ರಥವಾರಂ ದೇವು, ಶಿಲ್ಪಾ ನಾಗ್, ವಾಲೆ ಚಂದ್ರು, ರಾಮನಾಯಕ್, ವೃಶ್ಚಿಕ, ಮಂಜೀವ, ಸರಸ್ವತಿ, ಬೇಬಿ ಸಿಂಚನ, ಪತ್ರಕರ್ತರಾದ ಶಿವಾನಂದ, ಕೆ ಆರ್ ಓಬಳರಾಜು ನವೀನ್, ಆನಂದ್ ದಿನೇಶ್, ಅರುಣ್ ಸೇರಿದಂತೆ ಇತರರು ನಟಿಸಿದ್ದಾರೆ.
ನಿರ್ದೇಶಕ ಟೈಗರ್ ನಾಗ್
ಈ ಚಿತ್ರಕ್ಕೆ ಬಿಎಎಸ್ ಮಧುಗಿರಿ ಸಾಧಿಕ್ ಸಾಬ್ ನಿರ್ಮಾಪಕರು. ವಿಪಿನ್ ರಾಜ್ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತವಿದೆ. ಎ.ಆರ್. ಸಾಯಿ ರಾಮ್ ಸಂಭಾಷಣೆ, ಸಾಹಸವಿದೆ. ಕೆ. ಮಂಜುನಾಥ್ ಕೋಟೆ ಕೆರೆ. ಸಹ ನಿರ್ದೇಶಕರು. ಪುಟ್ಟರಾಜ, ದಯಾನಂದ್ ಸಾಥ್ ನೀಡಿದ್ದಾರೆ. ಸದ್ಯ ಚಿತ್ರ ಸಂಕಲನ ಕಾರ್ಯದಲ್ಲಿದೆ.
ಕನ್ನಡದಲ್ಲಿ ಹಲವು ವಿಭಿನ್ನ ಕಥಾಹಂದರದ ಸಿನಿಮಾ ಮೂಲಕ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಕಾಕ್ಟೈಲ್’ ಸಿನಿಮಾದ ಯುವ ಪ್ರತಿಭೆ ವಿರೇನ್ ಕೇಶವ್ ಕೂಡ ಸೇರಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಕನ್ನಡದಲ್ಲಿ ಗಟ್ಟಿನೆಲೆ ಕಟ್ಟಿಕೊಡುವ ವಿಶ್ವಾಸ ಅವರದ್ದು. ಕಾಕ್ಟೈಲ್’ ಜನವರಿ 6 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕೆ ಆರ್ ಜಿ ಸ್ಟುಡಿಯೋ ಈ ಸಿನಿಮಾ ರಿಲೀಸ್ ಮಾಡುವ ಜವಾಬ್ದಾರಿ ಹೊತ್ತಿದೆ.
ವಿಜಯಲಕ್ಷ್ಮಿ ಕಂಬೈನ್ಸ್ ಬ್ಯಾನರ್ ನಲ್ಲಿ ಡಾ. ಶಿವಪ್ಪ ಈ ಸಿನಿಮಾ ನಿರ್ಮಿಸಿದ್ದಾರೆ. ಶ್ರೀರಾಮ್ ನಿರ್ದೇಶನ ಮಾಡಿರುವ”ಕಾಕ್ಟೈಲ್” ಚಿತ್ರದ ಟ್ರೇಲರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಕೂಡ ಈ ವೇಳೆ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ಮಾಪಕ ಡಾ.ಶಿವಪ್ಪ ಮಾತನಾಡಿ, ನಾನು ಈ ಸಮಯದಲ್ಲಿ ಮೊದಲು ನೆನಪಿಸಿಕೊಳ್ಳುವುದು ಪುನೀತ್ ರಾಜಕುಮಾರ್ ಅವರನ್ನು. ನನ್ನ ಮಗನನ್ನು ನಾಯಕನನ್ನಾಗಿ ಮಾಡುವುದರಿಂದ ಹಿಡಿದು, ನಮ್ಮ ಚಿತ್ರದ ಎಲ್ಲಾ ವಿಷಯಗಳನ್ನು ಅವರ ಬಳಿ ಹಂಚಿಕೊಳ್ಳುತ್ತಿದ್ದೆ. ಅವರು ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಧೈರ್ಯ ತುಂಬುತ್ತಿದ್ದರು. ಚಿತ್ರ ಬಿಡುಗಡೆಯ ಹೊತ್ತಿಗೆ ಅವರಿಲ್ಲದುರುವುದು ತುಂಬಾ ದುಃಖವಾಗುತ್ತಿದೆ. ಇಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಅಶ್ವಿನಿ ಪುನೀತ್ ರಾಜಕುಮಾರ್ ಬಂದಿದ್ದಾರೆ. ಅವರಿಗೆ ಅನಂತ ಧನ್ಯವಾದಗಳು. ಈ ಸಿನಿಮಾ ಮೂಲಕ ವಿರೇನ್ ಕೇಶವ್ ಹೀರೋ ಆಗುತ್ತಿದ್ದಾನೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದರು ನಿರ್ಮಾಪಕ ಡಾ.ಶಿವಪ್ಪ.
ನನಗೆ ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದ ಒಡನಾಟವಿದೆ. “ಕಾಕ್ಟೈಲ್” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಲವ್, ಹಾರರ್, ಸೆಂಟಿಮೆಂಟ್, ಸಸ್ಪೆನ್ಸ್ ಥ್ರಿಲ್ಲರ್ ಎಲ್ಲವೂ ಇದೆ. ಇದು ಒಂದೇ ಜಾನರ್ ನ ಚಿತ್ರವಲ್ಲ. ಕನ್ನಡದಲ್ಲಿ ಇದು ಹೊಸ ನರೇಶನ್ ಸಿನಿಮಾ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಕೆಲವು ಸ್ನೇಹಿತರು ಸಹ ಮೆಚ್ಚುಗೆ ಸೂಚಿಸಿದರು.
ಚಿತ್ರ ಉತ್ತಮವಾಗಿ ಬರಲು ಕಾರಣ ನನ್ನ ತಂಡ. ನಿವೃತ್ತ ಐ ಎ ಎಸ್ ಅಧಿಕಾರಿಯಾಗಿರುವ ನಿರ್ಮಾಪಕ ಡಾ.ಶಿವಪ್ಪ ಅವರ ಮಗ ವೀರೆನ್ ಕೇಶವ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜನವರಿ 6 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಜನರ ಪ್ರೋತ್ಸಾಹ ಸಿಕ್ಕರೆ, ಮುಂದಿನ ದಿನಗಳಲ್ಲಿ ಭಾಗ 2 ಮಾಡುತ್ತೇವೆ ಎಂದರು ನಿರ್ದೇಶಕ ಶ್ರೀರಾಮ್.
ನಾಲ್ಕೈದು ಡ್ರಿಂಕ್ಸ್ ಗಳ ಮಿಶ್ರಣಕ್ಕೆ “ಕಾಕ್ಟೈಲ್” ಎನ್ನುತ್ತಾರೆ. ನಮ್ಮ ಸಿನಿಮಾದಲ್ಲೂ ಹಾಗೆ. ಲವ್ ಇದೆ. ಲವ್ ಜಾನರ್ ಸಿನಿಮಾ ಅಲ್ಲ. ಸೆಂಟಿಮೆಂಟ್ ಇದೆ ಸೆಂಟಿಮೆಂಟ್ ಸಿನಿಮಾ ಅಲ್ಲ. ಎಲ್ಲಾ ಅಂಶಗಳನ್ನು ಒಳಗೊಂಡಿರುವ ಬೇರೆ ರೀತಿಯ ಸಿನಿಮಾ ನಮ್ಮದು. ವಿಕ್ರಮ್ ಎಂಬುದು ನನ್ನ ಪಾತ್ರದ ಹೆಸರು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಾಯಕ ವೀರೆನ್ ಕೇಶವ್.
ನಾಯಕಿ ಚರಿಶ್ಮಾ ಸಹ ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಲೋಕಿ ತವಸ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕೆಲವು ಸಿನಿಮಾಗಳೇ ಹಾಗೆ. ಶೀರ್ಷಿಕೆ ಮೂಲಕವೇ ನಿರೀಕ್ಷೆ ಹೆಚ್ಚಿಸಿಬಿಡುತ್ತವೆ. ಅಂತಹ ನಿರೀಕ್ಷೆ ಸಿನಿಮಾಗಳ ಸಾಲಿಗೆ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾ ಕೂಡ ಸೇರಿದೆ. ಈಗ ಈ ಸಿನಿಮಾನೂ ಸೊಗಸಾಗಿ ಮೂಡಿ ಬಂದಿದೆ ಎಂಬ ಖುಷಿ ಚಿತ್ರತಂಡದ್ದು. ಸಿನಿಮಾದ ಪೋಸ್ಟರ್ ಮತ್ತು ಹಾಡು ಈಗಾಗಲೇ ಮಜವೆನಿಸಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗು ಹಾಡೊಂದು ಬಿಡುಗಡೆಯಾಗಿದೆ.
‘ಗಂಧದಗುಡಿ’ ನಿರ್ದೇಶಕ ಅಮೋಘ ವರ್ಷ ಈ ಸಂದರ್ಭದಲ್ಲಿ ಸಿನಿಮಾ ತಂಡಕ್ಕೆ ಶುಭ ಕೋರಿ, ಇದೊಂದು ಅದ್ಭುತ ಕಲ್ಪನೆಯ ಕಥೆಯ ಸಿನಿಮಾ. ಸಿನಿಮಾ ಶೀರ್ಷಿಕೆಯೇ ಖುಷಿಕೊಟ್ಟಿದೆ. ಸಿನಿಮಾ ಕೂಡ ನೋಡುಗರಿಗೆ ಇಷ್ಟವಾಗುತ್ತೆ ಎಂಬುದಕ್ಕೆ ಚಿತ್ರದ ಟ್ರೇಲರ್ ಸಾಕ್ಷಿ. ಟ್ರೇಲರ್ ನೋಡಿದರೆ, ಇಲ್ಲಿ ಒಬ್ಬ ಫೋಟೋಗ್ರಾಫರ್ ನ ಭಾವನೆ, ತೊಳಲಾಟ, ಪೇಚಾಟ, ಬದುಕು ಎಲ್ಲವೂ ಇಲ್ಲಿ ಅನಾವರಣಗೊಂಡಿದೆ ಅನಿಸುತ್ತದೆ. ಕನ್ನಡದಲ್ಲಿ ಈ ರೀತಿಯ ವಿಭಿನ್ನ ಕಥಾಹಂದರದ ಸಿನಿಮಾಗಳು ಹೆಚ್ಚೆಚ್ಚು ಬರಲಿ. ಸಿನಿಮಾ ಎಲ್ಲರಿಗೂ ಯಶಸ್ಸು ತಂದುಕೊಡಲಿ ಅಂದರು.
ನಟ ಶಿಶಿರ್ ಕೂಡ ಸಿನಿಮಾ ತಂಡದ ಶ್ರಮದ ಕುರಿತು ಮಾತನಾಡಿದರು. ಒಳ್ಳೆಯ ಸಿನಿಮಾ ಆಗಲು ಮೊದಲು ಒಳ್ಳೆಯ ಮನಸ್ಸುಗಳು ಸೇರಬೇಕು. ಅವೆಲ್ಲದರಿಂದ ಒಳ್ಳೆಯ ಬಸಿನಿಮಾ ಮೂಡಿಬಂದಿದೆ. ಇದೊಂದು ಎಲ್ಲರ ಮನಸ್ಸಲ್ಲಿ ಉಳಿಯೋ ಚಿತ್ರವಾಗಲಿ ಅಂದರು ಅವರು.
ಇದೇ ವೇಳೆ ಚಿತ್ರತಂಡ ಸಿನಿಮಾರಂಗದ ಹಿರಿಯ ಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ಅವರನ್ನು ಪ್ರೀತಿಯಿಂದ ಸನ್ಮಾನಿಸಿತು. ಈ ಚಿತ್ರವೇ ಕ್ಯಾಮರಾ ಮತ್ತು ಒಬ್ಬ ಫೋಟೋಗ್ರಾಫರ್ ಕುರಿತ ಕಥೆ. ಹಾಗಾಗಿ ನಾಗೇಶ್ ಕುಮಾರ್ ಅವರನ್ನೇ ಆಹ್ವಾನಿಸಿ, ಅದಕ್ಕೊಂದು ಅರ್ಥ ಕಲ್ಪಿಸಿದ್ದು ವಿಶೇಷವಾಗಿತ್ತು.
ಈಗಾಗಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ಜನವರಿ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಮೆಚ್ಚುಗೆ ಪಡೆದಿವೆ.
ಇದು ಒಬ್ಬ ಫೋಟೋಗ್ರಾಫರ್ ಜೀವನದ ಕಥೆ. ಈವರೆಗೆ ಆ ಕುರಿತು ಬರದಂತಹ ಕಥೆ ಇಲ್ಲಿದೆ. ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ, ಚಿತ್ರಕ್ಕೆ ಎಲ್ಲರ ಹಾರೈಕೆ ಇರಲಿ ಎಂಬುದು ಚಿತ್ರತಂಡದ ಮಾತು.
ಈಗಂತೂ ಜನರು ಹೊಸ ಬಗೆಯ ಕಥೆ ಆಯ್ಕೆ ಮಾಡುತ್ತಾರೆ. ಅಂತಹವರಿಗೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ರುಚಿಸಲಿದೆ ಎಂಬುದು ನಿರ್ಮಾಪಕ ವೆಂಕಟೇಶ್ವರ ರಾವ್ ಬಳ್ಳಾರಿ ಅವರ ಮಾತು. ಇದು ಅವರ ಸೃಜನ ಪ್ರೊಡಕ್ಷನ್ ಅಡಿ ನಿರ್ಮಿಸಿದ ಮೊದಲ ಚಿತ್ರ.
ಅವರು, ಸಿನಿಮಾ ಮಾಡ್ತೀನಿ ಅಂದಾಗ,ಹಲವಾರು ಜನ ಸಿನಿಮಾ ಬೇಡ ಎಂದು ತಲೆಕೆಡಿಸಲು ಪ್ರಯತ್ನ ಪಟ್ಟಿದ್ದರಂತೆ. , ಆದರೆ ಈ ಸಿನೆಮಾ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ಅವರದು.
ಇನ್ನು ನಿರ್ದೇಶಕ ರಾಜೇಶ್ ಧ್ರುವ ಅವರು, 23 ದಿನ ಮಳೆಯಲ್ಲೇ ಚಿತ್ರೀಕರಿಸಿದ್ದಾರಂತೆ. ಅವರ ಊರಿನಲ್ಲಿ ಅನುಭವಕ್ಕೆ ಬಂದ ಹಲವು ಅನುಭವನ್ನು, ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡು ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂತೆ ತಯಾರು ಮಾಡಿಸಿ ಶೂಟಿಂಗ್ ಮಾಡಿದ್ದಾರಂತೆ.
ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು ಈ ವೇಳೆ ಅನುಭವನ್ನು ಹಂಚಿಕೊಂಡರು, ಈ ಸಿನೆಮಾ ಜನವರಿ 6 ರಂದು ಬಿಡುಗಡೆಯಾಗಲಿದೆ.
ಅಂದಹಾಗೆ, ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. ಈ ಚಿತ್ರದ ವಿಶೇಷತೆ ಅಂದರೆ, ಬಳಸಿರುವ ಉತ್ತರ ಕನ್ನಡ ಭಾಷೆ. ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಜೊತೆಗೊಂದು ನವಿರಾದ ಲವ್ ಸ್ಟೋರಿ.
ಚಿತ್ರದಲ್ಲಿ ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಕಾಣಿಸಿಕೊಂಡಿದ್ದಾರೆ.
ಕಥೆ – ಚಿತ್ರಕಥೆಗೆ ಅಭಿಷೇಕ್ ಶಿರಸಿ ಪಲ ಹಾಗೂ ಪೃಥ್ವಿಕಾಂತ ಪೆನ್ನು ಹಿಡಿದಿದ್ದಾರೆ. ಅಜಿತ್ ಬೊಪ್ಪನಳ್ಳಿ ಸಂಭಾಷಣೆ ಬರೆದಿದ್ದಾರೆ.
ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣವಿದೆ. ಗಣಪತಿ ಭಟ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿಗೆ ಶ್ರೀರಾಮ್ ಗಂಧರ್ವ ಸಂಗೀತ ನೀಡಿದ್ದಾರೆ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಇದೆ, ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
ಸ್ಯಾಂಡಲ್ ವುಡ್ ಅಂಗಳದ ದೂದ್ ಪೇಡ ದಿಗಂತ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅದರ ವಿಶೇಷವಾಗಿ ದಿಗಂತ್ ನಟಿಸುತ್ತಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡುವ ಮೂಲಕ ಚಿತ್ರದ ನಾಯಕ ನಟನಿಗೆ ಶುಭ ಕೋರಿದೆ.
ದಿಗಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡುವ ಮೂಲಕ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡ ಹುಟ್ಟುಹಬ್ಬಕ್ಕೆ ಶುಭ ಕೋರಿದೆ. ದಿಗಂತ್ ಅವರಿಗೆ ಇಲ್ಲಿವರೆಗೆ ಚಾಕೋಲೇಟ್ ಬಾಯ್. ರೋಮ್ಯಾಂಟಿಕ್ ಹೀರೋ ಇಮೇಜ್ ಇತ್ತು ಆದ್ರೆ ಈ ಸಿನಿಮಾದಿಂದ ಕಂಪ್ಲೀಟ್ ಡಿಫ್ರೆಂಟ್ ಇಮೇಜ್ ನಲ್ಲಿ ದಿಗಂತ್ ಕಾಣಸಿಗುತ್ತಾರೆ. ಬರ್ತ್ ಡೇ ಗೆ ಡಿಫ್ರೆಂಟ್ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ವಿ ಅದರಂತೆ ಇಂದು ಅನಾವರಣ ಮಾಡಿದ್ದೇವೆ ಎಂದು ನಿರ್ದೇಶಕ ಸಮರ್ಥ್ ಬಿ ಕಡಕೊಳ್ ತಿಳಿಸಿದ್ದಾರೆ.
‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಜನವರಿ ಕೊನೆಯಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಸಮರ್ಥ್ ಬಿ ಕಡಕೊಳ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಹೈಫನ್ ಪಿಕ್ಚರ್ಸ್ ಬ್ಯಾನರ್ ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಶೇಕಡಾ 90ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಸಿನಿಮಾಗಿದೆ.
ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಪಿಟಿ ಮೇಷ್ಟ್ರು ಪಾತ್ರದ ಮೂಲಕ ಗಮನ ಸೆಳೆದ ಕಲಾವಿದ ವಜ್ರಧೀರ್ ಜೈನ್. ಚಿತ್ರದಲ್ಲಿ ಲಾರೆನ್ಸ್ ಪಿಂಟೋ ಪಾತ್ರದ ಮೂಲಕ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದ್ರು. ಅಚ್ಚುಕಟ್ಟಾದ ನಟನೆ ಮೂಲಕ ಗಮನ ಸೆಳೆದು ಪ್ರೇಕ್ಷಕರ ಮನಗೆದ್ದಿರುವ ಇವರು ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಟೈಟಲ್ ಮೂಲಕವೇ ಗಮನ ಸೆಳೆದಿರೋ ‘ಬ್ಲಿಂಕ್’ ಸಿನಿಮಾದಲ್ಲಿ ಮತ್ತೊಂದು ದೊಡ್ಡ ಪಾತ್ರ ನಿಭಾಯಿಸಿದ್ದಾರೆ ವಜ್ರಧೀರ್ ಜೈನ್.
‘ರಾಜರಥ’ ಸಿನಿಮಾದಲ್ಲಿ ನಟಿಸಿದ್ದ ವಜ್ರಧೀರ್ ಜೈನ್, ‘ವಿಕ್ರಾಂತ್ ರೋಣ’ ಚಿತ್ರದ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ವಜ್ರಧೀರ್ ಜೈನ್ ಸಮಸ್ಟಿ ನಾಟಕ ತಂಡದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ನೀನಾಸಂನಲ್ಲೂ ತರಬೇತಿ ಪಡೆದಿದ್ದಾರೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ರಾಜರಥ’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟ ಇವರು ವಿಜಯ ರಾಘವೇಂದ್ರ ಅಭಿನಯದ ‘ಮಾಲ್ಗುಡಿ ಡೇಸ್’ ಚಿತ್ರದಲ್ಲೂ ಅಭಿನಯಿಸಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ ದೊಡ್ಡ ಬ್ರೇಕ್ ನೀಡಿದ್ದು ನೈಜ ಅಭಿನಯ, ಪಾತ್ರವನ್ನು ಜೀವಿಸುವ ರೀತಿ ಎಲ್ಲವೂ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗೆ ಪಾತ್ರವಾಗಿದೆ.
ಸ್ಯಾಂಡಲ್ ವುಡ್ ನಲ್ಲಿ ಕ್ಯೂರಿಯಾಸಿಟಿ ಮೂಡಿಸಿರುವ ‘ಬ್ಲಿಂಕ್’ ಸಿನಿಮಾದಲ್ಲೂ ವಜ್ರಧೀರ್ ಜೈನ್ ನಟಿಸಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಚಿತ್ರದಲ್ಲಿ ವಜ್ರಧೀರ್ ಜೈನ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಒಂದು ಹೊಸ ಅನುಭವ ನೀಡಿದೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ದೊಡ್ಡ ಪಾತ್ರ ನಿಭಾಯಿಸಿದ್ದಾರೆ ಎಂದು ನಮಗೆ ಗೊತ್ತಿರಲಿಲ್ಲ. ಅವರು ಕೂಡ ಈ ಬಗ್ಗೆ ಹೇಳಿ ಕೊಂಡಿರಲಿಲ್ಲ. ನಮಗೆ ನಾಟಕ ತಂಡದ ಮೂಲಕ ಅವರ ಪರಿಚಯವಾಗಿದ್ದು, ಬ್ಲಿಂಕ್ ನಲ್ಲೂ ಬಹಳ ಪ್ರಾಮುಖ್ಯತೆ ಇರೋ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರವನ್ನು ತುಂಬಾ ಕ್ಯಾಚಿಯಾಗಿ, ಸೆಟಲ್ ಆಗಿ ನಿರ್ವಹಿಸಿದ್ದಾರೆ ಆ ಮೂಲಕ ಅವರ ಪಾತ್ರಕ್ಕೆ ತೂಕ ತಂದು ಕೊಟ್ಟಿದ್ದಾರೆ. ನೋಡುಗರಿಗೆ ಬಹಳ ಬೇಗ ಅವರ ಪಾತ್ರ ಕನೆಕ್ಟ್ ಆಗುತ್ತೆ. ಆದ್ರಿಂದಲೇ ಅವರ ಪಾತ್ರಕ್ಕೆ ಅರಿವು ಎಂದು ಹೆಸರಿಟ್ಟಿದ್ದೇವೆ ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಸಂತಸ ಹಂಚಿಕೊಂಡಿದ್ದಾರೆ.
‘ಬ್ಲಿಂಕ್’ ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, ನವ ನಿರ್ದೇಶಕ ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಭರವಸೆ ಮೂಡಿಸಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್ ನಡಿ ರವಿಚಂದ್ರ ಎ.ಜೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಟ್ರಾವೆಲ್ ಮಾಡಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್, ವಜ್ರದೀರ್ ಜೈನ್, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಾಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ.
ಭಾಷೆಯ ಗಡಿ ಎಂಬ ಎಲ್ಲೆಯನ್ನು ಮೀರಿದ್ದು ಸಿನಿಮಾ. ಅದರ ಉದ್ದೇಶ ಒಂದೇ ಮನರಂಜನೆ. ಇದೀಗ ಅದೇ ಮನರಂಜನೆ ಉದ್ದೇಶ ಇಟ್ಟುಕೊಂಡು ಉತ್ತರ ಕರ್ನಾಟಕದ ಜವಾರಿ ಭಾಷೆಯ ಘಮ ಹೊತ್ತ ‘ಬಯಲು ಸೀಮೆ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ
ವರುಣ್ ಕಟ್ಟೀಮನಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬಯಲುಸೀಮೆ’ ಸಿನಿಮಾ ಹೆಸರೇ ಸೂಚಿಸುವಂತೆ ಪಕ್ಕಾ ಉತ್ತರ ಕರ್ನಾಟಕ ಸೊಗಡಿರುವ ಚಿತ್ರ. ರಗಡ್ ಕಥೆ ಈ ಸಿನಿಮಾದ ಜೀವಾಳ. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರದ ಕಥಾವಸ್ತು. ಎಂಬತ್ತರ ದಶಕ ಹಾಗೂ ಈಗಿನ ಕಾಲಘಟ್ಟವನ್ನಿಟ್ಟುಕೊಂಡು ಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ ವರುಣ್ ಕಟ್ಟೀಮನಿ. ಕಥೆಗೆ ತಕ್ಕಂತೆ ಸಾಕಷ್ಟು ಟ್ವಿಸ್ಟ್ ಟರ್ನ್ ಗಳು ಚಿತ್ರದಲ್ಲಿದ್ದು, ನೋಡುಗರನ್ನು ಥ್ರಿಲ್ ಗೊಳಿಸುವ ಕಥಾಹಂದರ ಸಿನಿಮಾದಲ್ಲಿದೆ. ಈಗಾಗಲೇ ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ. ಸೆನ್ಸಾರ್ ನಲ್ಲಿ ‘ಎ’ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಸಿನಿಮಾ ಸದ್ಯದಲ್ಲೇ ತೆರೆ ಕಾಣೋದಕ್ಕೆ ರೆಡಿಯಾಗಿದೆ.
ವರುಣ್ ಕಟ್ಟೀಮನಿ ನಿರ್ದೇಶನದ ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಸಂಯುಕ್ತ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಆರ್ಮುಗಂ ರವಿಶಂಕರ್, ಟಿ.ಎಸ್ ನಾಗಾಭರಣ, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.
ಈ ಸಿನಿಮಾ ಉತ್ತರ ಕರ್ನಾಟಕದ ಖಡಕ್ ಖಾನಾವಳಿ ಊಟ ಇದ್ದಂಗೆ. ಕಂಪ್ಲೀಟ್ ಸಿನಿಮಾ ಉತ್ತರ ಕರ್ನಾಟಕ ಸ್ಲ್ಯಾಂಗ್ ಇರುತ್ತೆ. ಎಲ್ಲಾ ಕಲಾವಿದರು ಆ ಸ್ಲ್ಯಾಂಗ್ ನಲ್ಲೇ ಡಬ್ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಗದ ಪೊಲಿಟಿಕಲ್, ಕ್ರೈಂ,ಅಲ್ಲಿನ ಸಂಸ್ಕೃತಿ ಎಲ್ಲವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕಮರ್ಶಿಯಲ್ ಎಲಿಮೆಂಟ್ ಗಳನ್ನು ಇಟ್ಟುಕೊಂಡು ವಿಭಿನ್ನವಾಗಿ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ನಿರ್ದೇಶಕ ವರುಣ್ ಕಟ್ಟೀಮನಿ.
ಗಾಯಿತ್ರಿ ದೇವಿ ಕ್ರಿಯೇಷನ್ಸ್ ಮತ್ತು ಪಿ ಆರ್ ಎಸ್ ಕ್ರಿಯೇಷನ್ಸ್ ಬ್ಯಾನರ್ ನಡಿ ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಜೇಂದ್ರಗಡ, ಬೀಳಗಿ, ಮುಂಬೈನಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾವರ್ಕ್, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಚಿತ್ರಕ್ಕಿದೆ.
ಶ್ರೀ ಜಗನ್ನಾಥ ದಾಸರು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಚಿತ್ರತಂಡ ಈಗ “ಶ್ರೀ ಪ್ರಸನ್ನ ವೆಂಕಟ ದಾಸರು” ಎಂಬ ದಾಸಪರಂಪರೆ ಮತ್ತೊಬ್ಬ ದಾಸರ ಜೀವನ ಚರಿತ್ರೆ ಕುರಿತಾದ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು “ಶ್ರೀ ಪ್ರಸನ್ನ ವೆಂಕಟ ದಾಸರು” ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದರು. ಆನಂತರ ಚಿತ್ರತಂಡದ ಚಿತ್ರದ ಬಗ್ಗೆ ಮಾತನಾಡಿದರು.
ಈ ಹಿಂದೆ ಶ್ರೀ ಜಗನ್ನಾಥ ದಾಸರು ಚಿತ್ರವನ್ನು ನಿರ್ಮಿಸಿದ್ದ ನಮ್ಮ ತಂಡ ಇದೀಗ ಮತ್ತೋರ್ವ ದಾಸ ಶ್ರೇಷ್ಠ ರಾದ ಶ್ರೀ ಪ್ರಸನ್ನ ವೆಂಕಟ ದಾಸರ ಜೀವನವನ್ನು ತೆರೆ ಮೇಲೆ ತರುತ್ತಿದ್ದೇವೆ. ಚಿತ್ರ ಬಿಡುಗಡೆಗೆ ಸಿದ್ದಾವಾಗಿದೆ. ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ. ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಶ್ರೀ ಸತ್ಯಾತ್ಮ ತೀರ್ಥರಿಗೆ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ ಎಂದರು ನಿರ್ದೇಶಕ ಮತ್ತು ನಿರ್ಮಾಪಕ ಮಧುಸೂದನ್ ಹವಾಲ್ದಾರ್.
ಪ್ರಸನ್ನ ವೆಂಕಟ ದಾಸರ ಪಾತ್ರಧಾರಿ ಪ್ರಭಂಜನ್ ದೇಶಪಾಂಡೆ ಮಾತನಾಡಿ, ಪ್ರಸನ್ನ ವೆಂಕಟದಾಸರ ಪಾತ್ರವನ್ನು ನಿರ್ವಹಿಸಿದ್ದು ನಿಜಕ್ಕೂ ನನ್ನ ಪುಣ್ಯ. ದಾಸ ಪರಂಪರೆಯಲ್ಲಿ ಪುರಂದರ ದಾಸರು, ಕನಕ ದಾಸರು ಇವರುಗಳ ಕುರಿತು ಚಿತ್ರ ಆಗಿದೆ. ಆದರೆ ಇನ್ನೂ ಸಾಕಷ್ಟು ದಾಸ ಶ್ರೇಷ್ಠರು ಇದ್ದಾರೆ. ಅವರಲ್ಲಿ ಶ್ರೀ ಪ್ರಸನ್ನ ವೆಂಕಟ ದಾಸರು ಒಬ್ಬರು. ದಾಸರಿಗೆ ಸ್ವತಃ ಶ್ರೀನಿವಾಸ ದೇವರೇ ಬಂದು ನಾಲಿಗೆ ಮೇಲೆ ಬೀಜಾಕ್ಷರಗಳನ್ನು ಬರೆದಿದ್ದರು. ಅವರ ಜೀವನದ ಪ್ರತಿಯೊಂದು ಅಮೂಲ್ಯ ಘಟನೆಯನ್ನು ಇಲ್ಲಿ ತೋರಿಸಿದ್ದೇವೆ. ಚಿತ್ರಕ್ಕಾಗಿ ನಾನು ದೈಹಿಕವಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಇದು ಕೇವಲ ಕಥೆಯಲ್ಲ ಒಂದು ಭಕ್ತಿ ಕಥೆ. ದಾಸರ ಸರಣಿ ಚಿತ್ರಗಳನ್ನು ಮಾಡುವುದು ನಮ್ಮ ಯೋಜನೆಯಾಗಿದ್ದು ಇದು ಎರಡನೇ ಚಿತ್ರ. ಮುಂದಿನ ದಿನಗಳಲ್ಲಿ ಮತ್ತೊಬ್ಬ ದಾಸರ ಚಿತ್ರವನ್ನು ತರಲಿದ್ದೇವೆ ಎಂದರು.
ಚಿತ್ರದಲ್ಲಿ ಒಟ್ಟು10 ಹಾಡುಗಳಿವೆ 8 ಸಂಪೂರ್ಣ ಗೀತೆ. ಇನ್ನೆರಡು ಬಿಟ್ಸ್. ಇಲ್ಲಿ ದಾಸರ ಪದ್ಯಗಳನ್ನೇ ಬಳಸಿದ್ದೇವೆ. ಮೂಲ ಸಂಗೀತ ರಚನೆಗೆ ಚ್ಯುತಿ ಬರದಂತೆ ಟ್ಯೂನ್ ಗಳನ್ನು ಬಳಸಿಕೊಂಡಿದ್ದೇವೆ. ಅನಂತ್ ಕುಲಕರ್ಣಿ, ರಾಯಚೂರು ಶೇಷಗಿರಿ ದಾಸ್ ಮುಂತಾದವರು ಚಿತ್ರದಲ್ಲಿ ಹಾಡಿದ್ದಾರೆ ಎಂದು ಸಂಗೀತ ನಿರ್ದೇಶಕ ವಿಜಯ ಕೃಷ್ಣ ಮಾಹಿತಿ ನೀಡಿದರು.
ರಾಯಚೂರು, ಹಂಪಿ, ಆನೆಗುಂದಿ, ಬಾಗಲಕೋಟೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ‘ಮಾತಾಂಬುಜಾ ಮೂವೀಸ್’ ಬ್ಯಾನರ್ ಅಡಿಯಲ್ಲಿ ಮಧುಸೂದನ್ ಹವಾಲ್ದಾರ್, ಸುಧಾ ಸ್ವಾಮಿ ರಾವ್ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಮಧುಸೂದನ್ ಹವಾಲ್ದಾರ್ ನಿರ್ದೇಶನ, ನಾರಾಯಣ ಸಿ ಛಾಯಾಗ್ರಹಣ, ಆರ್ ಡಿ ರವಿ ಸಂಕಲನವಿದೆ.
ಪ್ರಭಂಜನ್ ದೇಶಪಾಂಡೆ, ವಿಜಯಾನಂದ ನಾಯ್ಕ, ವಿಷ್ಣು ಜೋಶಿ, ಲಕ್ಷ್ಮೀ , ಸ್ವಾಮಿ ರಾವ್ ದೇಸಾಯಿ, ಶರತ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಜನಮನಸೂರೆಗೊಂಡಿರುವ ಚಂದನ್ ಶೆಟ್ಟಿ, ಈಗ ನಾಯಕನಾಗೂ ಜನಪ್ರಿಯ. ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ” ಸೂತ್ರಧಾರಿ” ಚಿತ್ರದ “ಡ್ಯಾಶ್” ಸಾಂಗ್ ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಹೊಸವರ್ಷದ ಸಂಭ್ರಮಾಚರಣೆಗೆ ಇದು ಅದ್ಭುತ ಗೀತೆಯಾಗಲಿದೆ.
“ಸೂತ್ರಧಾರಿ” ಸಿನಿಮಾದ “ಡ್ಯಾಶ್” ಹಾಡು ಹೊಸವರ್ಷಕ್ಕೆ ನಮ್ಮ ಚಿತ್ರತಂಡದಿಂದ ಉಡುಗೊರೆ. “ಡ್ಯಾಶ್” ಎಂದರೆ ಏನು ಅಂತ ಎಲ್ಲಾ ಕೇಳುತ್ತಿದ್ದಾರೆ? ಡ್ಯಾಶ್ ಎಂದರೆ ಖಾಲಿ ಜಾಗ. ಅಲ್ಲಿ ನೀವು ಏನು ಬೇಕಾದರೂ ಬರೆದುಕೊಳ್ಳಬಹುದು. ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್ ಈ ಹಾಡಿಗೆ ನನ್ನ ಜೊತೆ ಹೆಜ್ಜೆ ಹಾಕಿದ್ದಾರೆ. ನಿರ್ಮಾಪಕ ನವರಸನ್ ಅದ್ದೂರಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಾನು ಹಾಗೂ ಚೇತನ್ ಕುಮಾರ್ ಈ ಹಾಡನ್ನು ಬರೆದಿದ್ದೇವೆ. ನಾನೇ ಸಂಗೀತ ನೀಡಿದ್ದೀನಿ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ ಎಂದರು ಚಂದನ್ ಶೆಟ್ಟಿ.
ನಾನು ಮೊದಲ ಬಾರಿಗೆ ಸ್ಪೆಷಲ್ ಸಾಂಗ್ ಒಂದರಲ್ಲಿ ನಟಿಸಿದ್ದೇನೆ. ಚಂದನ್ ಶೆಟ್ಟಿ ಅವರ ಜೊತೆ ಡ್ಯಾನ್ಸ್ ಮಾಡಿರುವುದು ಖುಷಿಯಾಗಿದೆ. ಹಾಡು ಅದ್ಭುತವಾಗಿದೆ ಎಂದರು ಸಂಜನಾ ಆನಂದ್.
ಚಂದನ್ ಶೆಟ್ಟಿ ಅವರು ಹೊಸವರ್ಷಕ್ಕೆ ಹೊಸ ಹಾಡೊಂದನ್ನು ಬಿಡುಗಡೆ ಮಾಡುತ್ತಾರೆ. ಈ ಬಾರಿ ನಮ್ಮ ಚಿತ್ರದ ಹಾಡೊಂದನ್ನು ಹೊಸವರ್ಷಕ್ಕೆ ಬಿಡುಗಡೆ ಮಾಡುವ ಆಸೆಯಿತ್ತು. ಆದರೆ ಸಮಯ ಕಡಿಮೆ ಇತ್ತು. ಚಂದನ್ ಶೆಟ್ಟಿ ಅವರ ಬಳಿ ಈ ವಿಷಯ ಹೇಳಿದೆ. ಕೇವಲ ಎರಡು ದಿನಗಳ ಹಿಂದೆ ಈ ಹಾಡಿನ ಚಿತ್ರೀಕರಣವಾಗಿ ಈಗ ಬಿಡುಗಡೆಯಾಗಿದೆ. ಈ ಚಿತ್ರದ ನಾಯಕಿ ಅಪೂರ್ವ. ಆದರೆ ಈ ವಿಶೇಷ ಹಾಡಿಗೆ ಚಂದನ್ ಶೆಟ್ಟಿ ಅವರ ಜೊತೆ ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ನವರಸನ್.
ನಿರ್ದೇಶಕ ಕಿರಣ್ ಕುಮಾರ್ ಹಾಡಿನ ಬಗ್ಗೆ ಮಾಹಿತಿ ನೀಡಿದರು. ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರಾದ ಸಂಜಯ್ ಗೌಡ, ರವಿ ಗೌಡ, ಗೋವಿಂದರಾಜು, ರಾಜೇಶ್ ಮುಂತಾದವರು “ಸೂತ್ರಧಾರಿ” ಹಾಡಿಗೆ ಹಾರೈಸಿದರು.
ಕಿರುತೆರೆ ಸೂಪರ್ ಸ್ಟಾರ್ ಎಂದು ಖ್ಯಾತರಾಗಿರುವ ಬೇಬಿ ವಂಶಿಕಾ ಕೆಲವು ಸಮಯ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು.
ವಿಶ್ವಮಟ್ಟದಲ್ಲಿ ಕನ್ನಡ ಚಿತ್ರಗಳು ಗುರುತಿಸಿಕೊಳ್ಳುತ್ತಿವೆ. ಈ ಸಾಲಿಗೆ ವಿಭಿನ್ನ ಕಥಾಹಂದರ ಹೊಂದಿರುವ “ಜ್ಯೂಲಿಯೆಟ್ 2” ಸಹ PL production ಬ್ಯಾನರ್ ನಡಿ ನಿರ್ಮಾಣವಾಗಿದೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
“ನೆನಪಿರಲಿ” ಪ್ರೇಮ್ ಅಭಿನಯದ “ಪ್ರೇಮ ಪೂಜ್ಯಂ” ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬೃಂದಾ ಆಚಾರ್ಯ “ಜ್ಯೂಲಿಯೆಟ್ 2” ಚಿತ್ರದಲ್ಲಿ ಜ್ಯೂಲಿಯೆಟ್ ಆಗಿ ಕಾಣಿಸಿಕೊಂಡಿದ್ದಾರೆ.
ಕ್ರೈಮ್ ಥ್ರಿಲ್ಲರ್ ಜಾನರ್ ನ ಈ ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಕೂಡ ವಿರಾಟ್ ಅವರದೆ.
ಲಿಖಿತ್ ಆರ್ ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ.
ನಗರವಾಸಿಯಾದ ಮಗಳು, ತನ್ನ ತಂದೆಯ ಕೊನೆಯ ಆಸೆ ಈಡೇರಿಸಲು ಹುಟ್ಟೂರಿಗೆ ಹೋಗಿ ನೆಲೆಸುತ್ತಾಳೆ. ಅಲ್ಲಿ ಏನೆಲ್ಲಾ ಆಗುತ್ತದೆ ಹಾಗೂ ಹೆಣ್ಣು ಶಾಂತರೂಪಿಯಾದ ಶಾರದೆಯ ರೀತಿ ಇರುತ್ತಾಳೆ. ಆದರೆ ತನಗೆ ತೊಂದರೆಯಾದಾಗ ಆಕೆ ದುರ್ಗೆಯೂ ಆಗುತ್ತಾಳೆ ಎಂಬುದು ಈ ಚಿತ್ರದ ಕಥಾಹಂದರ.
ಬೃಂದಾ ಆಚಾರ್ಯ, ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ shanto v anto ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು.
ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮೊದಲು “ಜ್ಯೂಲಿಯೆಟ್ 2” ಫೆಬ್ರವರಿ ವೇಳೆಗೆ ತೆರೆಗೆ ಬರಲಿದೆ. ಆನಂತರ ಮೊದಲ ಭಾಗ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ವಿರಾಟ್ ತಿಳಿಸಿದ್ದಾರೆ.