ಬ್ಲಿಂಕ್ ಸಿನಿಮಾದಲ್ಲಿ ವಿಕ್ರಾಂತ್ ರೋಣ ಪಿಟಿ ಮೇಷ್ಟ್ರು! ಮೋಡಿ ಮಾಡಲು ವಜ್ರಧೀರ್ ಜೈನ್ ಸಜ್ಜು…

ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಪಿಟಿ ಮೇಷ್ಟ್ರು ಪಾತ್ರದ ಮೂಲಕ ಗಮನ ಸೆಳೆದ ಕಲಾವಿದ ವಜ್ರಧೀರ್ ಜೈನ್. ಚಿತ್ರದಲ್ಲಿ ಲಾರೆನ್ಸ್ ಪಿಂಟೋ ಪಾತ್ರದ ಮೂಲಕ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದ್ರು. ಅಚ್ಚುಕಟ್ಟಾದ ನಟನೆ ಮೂಲಕ ಗಮನ ಸೆಳೆದು ಪ್ರೇಕ್ಷಕರ ಮನಗೆದ್ದಿರುವ ಇವರು ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಟೈಟಲ್ ಮೂಲಕವೇ ಗಮನ ಸೆಳೆದಿರೋ ‘ಬ್ಲಿಂಕ್’ ಸಿನಿಮಾದಲ್ಲಿ ಮತ್ತೊಂದು ದೊಡ್ಡ ಪಾತ್ರ ನಿಭಾಯಿಸಿದ್ದಾರೆ ವಜ್ರಧೀರ್ ಜೈನ್.

‘ರಾಜರಥ’ ಸಿನಿಮಾದಲ್ಲಿ ನಟಿಸಿದ್ದ ವಜ್ರಧೀರ್ ಜೈನ್, ‘ವಿಕ್ರಾಂತ್ ರೋಣ’ ಚಿತ್ರದ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ವಜ್ರಧೀರ್ ಜೈನ್ ಸಮಸ್ಟಿ ನಾಟಕ ತಂಡದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ನೀನಾಸಂನಲ್ಲೂ ತರಬೇತಿ ಪಡೆದಿದ್ದಾರೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ರಾಜರಥ’ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟ ಇವರು ವಿಜಯ ರಾಘವೇಂದ್ರ ಅಭಿನಯದ ‘ಮಾಲ್ಗುಡಿ ಡೇಸ್’ ಚಿತ್ರದಲ್ಲೂ ಅಭಿನಯಿಸಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ ದೊಡ್ಡ ಬ್ರೇಕ್ ನೀಡಿದ್ದು ನೈಜ ಅಭಿನಯ, ಪಾತ್ರವನ್ನು ಜೀವಿಸುವ ರೀತಿ ಎಲ್ಲವೂ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗೆ ಪಾತ್ರವಾಗಿದೆ.

ಸ್ಯಾಂಡಲ್ ವುಡ್ ನಲ್ಲಿ ಕ್ಯೂರಿಯಾಸಿಟಿ ಮೂಡಿಸಿರುವ ‘ಬ್ಲಿಂಕ್’ ಸಿನಿಮಾದಲ್ಲೂ ವಜ್ರಧೀರ್ ಜೈನ್ ನಟಿಸಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಚಿತ್ರದಲ್ಲಿ ವಜ್ರಧೀರ್ ಜೈನ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ್ದು ಒಂದು ಹೊಸ ಅನುಭವ ನೀಡಿದೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ದೊಡ್ಡ ಪಾತ್ರ ನಿಭಾಯಿಸಿದ್ದಾರೆ ಎಂದು ನಮಗೆ ಗೊತ್ತಿರಲಿಲ್ಲ. ಅವರು ಕೂಡ ಈ ಬಗ್ಗೆ ಹೇಳಿ ಕೊಂಡಿರಲಿಲ್ಲ. ನಮಗೆ ನಾಟಕ ತಂಡದ ಮೂಲಕ ಅವರ ಪರಿಚಯವಾಗಿದ್ದು, ಬ್ಲಿಂಕ್ ನಲ್ಲೂ ಬಹಳ ಪ್ರಾಮುಖ್ಯತೆ ಇರೋ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರವನ್ನು ತುಂಬಾ ಕ್ಯಾಚಿಯಾಗಿ, ಸೆಟಲ್ ಆಗಿ ನಿರ್ವಹಿಸಿದ್ದಾರೆ ಆ ಮೂಲಕ ಅವರ ಪಾತ್ರಕ್ಕೆ ತೂಕ ತಂದು ಕೊಟ್ಟಿದ್ದಾರೆ. ನೋಡುಗರಿಗೆ ಬಹಳ ಬೇಗ ಅವರ ಪಾತ್ರ ಕನೆಕ್ಟ್ ಆಗುತ್ತೆ. ಆದ್ರಿಂದಲೇ ಅವರ ಪಾತ್ರಕ್ಕೆ ಅರಿವು ಎಂದು ಹೆಸರಿಟ್ಟಿದ್ದೇವೆ ಎಂದು ನಿರ್ದೇಶಕ ಶ್ರೀನಿಧಿ ಬೆಂಗಳೂರು ಸಂತಸ ಹಂಚಿಕೊಂಡಿದ್ದಾರೆ.

‘ಬ್ಲಿಂಕ್’ ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, ನವ ನಿರ್ದೇಶಕ ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಭರವಸೆ ಮೂಡಿಸಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್ ನಡಿ ರವಿಚಂದ್ರ ಎ.ಜೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಟ್ರಾವೆಲ್ ಮಾಡಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್, ವಜ್ರದೀರ್ ಜೈನ್, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಾಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ.

Related Posts

error: Content is protected !!