Categories
ರಿ ವಿವ್ಯೂ ಸಿನಿ ಸುದ್ದಿ

ಗೆಳೆತನ + ಪ್ರೀತಿ + ದೇಶಾಭಿಮಾನ = ಜೇಮ್ಸ್!

  • ವಿಜಯ್‌ ಭರಮಸಾಗರ

ಚಿತ್ರ ವಿಮರ್ಶೆ: ಜೇಮ್ಸ್‌

ನಿರ್ದೇಶನ: ಚೇತನ್‌ ಕುಮಾರ್‌
ನಿರ್ಮಾಣ: ಕಿಶೋರ್‌ ಪತ್ತಿಕೊಂಡ
ತಾರಾಗಣ : ಪುನೀತ್‌ ರಾಜಕುಮಾರ್‌, ಪ್ರಿಯಾ ಆನಂದ್‌, ಶ್ರೀಕಾಂತ್‌, ಶರತ್‌, ಅನುಪ್ರಭಾಕರ್‌,ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ಅವಿನಾಶ್‌ ಇತರರು.

ವಿಲನ್:‌ “ನನ್‌ ಜೊತೆ ಕಾಂಪಿಟೇಟ್‌ ಮಾಡಿರೋರು ಯಾರೂ ಗೆದ್ದಿರೋ ರೆಕಾರ್ಡ್ಸೇ ಇಲ್ಲ…
ಹೀರೋ: ನನಗೆ ಮೊದಲಿನಿಂದಲೂ ರೆಕಾರ್ಡ್ಸ್‌ ಬ್ರೇಕ್ ಮಾಡಿ‌ ಅಭ್ಯಾಸ…

ಇದು ಜೇಮ್ಸ್‌ ಚಿತ್ರದಲ್ಲಿ ಬರೋ ಖಡಕ್ ಡೈಲಾಗ್.‌ ವಿಲನ್‌ ಹೇಳೋ ಡೈಲಾಗ್‌ಗೆ,‌ ಹೀರೋ ಕೌಂಟರ್‌ ಇದು. ಹೌದು, ಒಂದೇ ಮಾತಲ್ಲಿ ಹೇಳುವುದಾದರೆ ಜೇಮ್ಸ್‌ ಅದ್ಧೂರಿಯ ಜೊತೆಗೆ ಒಂದೊಳ್ಳೆಯ ಸಂದೇಶ ಇರುವ ಸಿನಿಮಾ. ಇಡೀ ಸಿನಿಮಾದ ಜೀವಾಳ ಪುನೀತ್.‌ ಸಿನಿಮಾ ನೋಡಿದವರಿಗೆ ಪುನೀತ್‌ ಹೊರತಾಗಿ ಬೇರೇನೂ ಅಲ್ಲಿ ಕಾಣಿಸೋದೇ ಇಲ್ಲ. ಅಷ್ಟರ ಮಟ್ಟಿಗೆ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಇಲ್ಲಿ ಏನಿದೆ ಅನ್ನುವುದಕ್ಕಿಂತ ಏನಿಲ್ಲ ಅಂತ ಕೇಳಬೇಕು! ಹೌದು, ಒಂದು ಭರಪೂರ ಭೋಜನ ಎಷ್ಟೊಂದು ಅದ್ಭುತ ಎನಿಸುತ್ತೋ ಅಷ್ಟೊಂದು ಕಲರ್‌ ಫುಲ್‌ ಸಿನಿಮಾ ಇದು ಅಂದರೆ ತಪ್ಪಿಲ್ಲ. ಇಲ್ಲಿ ಗೆಳೆತನವಿದೆ. ಪ್ರೀತಿ ಇದೆ. ದ್ವೇಷ, ಅಸೂಯೆ ಹೆಚ್ಚಾಗಿಯೇ ಇದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ದೇಶಾಭಿಮಾನದ ಕಿಚ್ಚು ಇದೆ. ನೋಡುಗರಿಗೆ ದೇಶಭಕ್ತಿ ಮತ್ತಷ್ಟು ಹೆಚ್ಚಿದರೂ ಅಚ್ಚರಿ ಇಲ್ಲ. ಅಷ್ಟರಮಟ್ಟಿಗೆ ಜೇಮ್ಸ್‌ ಹತ್ತಿರವಾಗುವ ಸಿನಿಮಾ.

ಪುನೀತ್‌ ಸಿನಿಮಾಗಳೆಂದರೆ ಅಲ್ಲಿ ಮನರಂಜನೆ ಹೇರಳವಾಗಿರುತ್ತೆ. ಅಂಥದ್ದೊಂದು ಅದ್ಭುತ ಮನರಂಜನೆಗೆ ಇಲ್ಲಿ ಮೋಸವಿಲ್ಲ. ಇದೊಂದು ಪಕ್ಕಾ ಆಕ್ಷನ್‌ ಪ್ಯಾಕ್ಡ್‌ ಸಿನಿಮಾ. ಮೊದಲರ್ಧ ಸಾಗುವುದೇ ಗೊತ್ತಾಗುವುದಿಲ್ಲ. ಅಪ್ಪು ಅವರ ಖದರ್‌ ಏನೆಂಬುದನ್ನು ಹಿಂದಿನ ಸಿನಿಮಾಗಳಲ್ಲಿ ನೋಡಿರುವ ಫ್ಯಾನ್ಸ್‌ ಇಲ್ಲಿ ಅವರ ಹೊಸ ರೂಪವನ್ನು ಕಾಣಬಹುದು. ಸಿನಿಮಾದುದ್ದಕ್ಕೂ ಚಾಲೆಂಜಿಂಗ್‌ ಎನಿಸುವ ಮತ್ತು ಅಷ್ಟೇ ರಿಸ್ಕ್‌ ಎನಿಸುವ ದೃಶ್ಯಗಳಿವೆ. ಇವೆಲ್ಲವೂ ನೋಡುಗರನ್ನು ಸೀಟಿನ ತುದಿಮೇಲೆ ಕೂರಿಸಿಬಿಡುತ್ತವೆ. ಸಿನಿಮಾದ ಹೈಲೈಟ್‌ ಅಂದರೆ, ಮತ್ತದೇ ಸ್ಟಂಟ್.‌ ಜೇಮ್ಸ್‌ ನೋಡುವಾಗ, ಹೊಸ ಫೀಲ್‌ ಸಿಗೋದು ಗ್ಯಾರಂಟಿ. ಆ ಸಿನಿಮಾದ ರಿಚ್‌ನೆಸ್‌ ಆಗಬಹುದು, ಗುಣಮಟ್ಟ ಇರಬಹುದು, ನೋಡುಗರ ಕಣ್ಣಿಗೆ ಹಬ್ಬ. ಮೊದಲಿಗೆ ಇಲ್ಲಿ ಒಂದೊಳ್ಳೆಯ ಕಥೆ ಇದೆ. ಅದನ್ನು ಅಷ್ಟೇ ಚೆನ್ನಾಗಿಯೇ ನಿರ್ದೇಶಕರು ನಿರೂಪಿಸಿದ್ದಾರೆ. ಚಿತ್ರಕಥೆ ಚಿತ್ರದ ವಿಶೇಷತೆಗಳಲ್ಲೊಂದು. ಇನ್ನು, ಸಿನಿಮಾದಲ್ಲಿ ಖಡಕ್‌ ಡೈಲಾಗ್‌ಗಳೂ ಇವೆ. ಕಚಗುಳಿ ಎನಿಸುವ ಮಾತುಗಳೂ ಇವೆ. ಅದರೊಟ್ಟಿಗೆ ಆಗಾಗ ಮನ ಮಿಡಿಯೋ ದೃಶ್ಯಗಳೂ ಇವೆ. ದೇಶಾಭಿಮಾನ ಹೆಚ್ಚಿಸುವಂತಹ ಸಂದರ್ಭದ ದೃಶ್ಯಗಳೂ ಇವೆ.

ಒಂದು ನೀಟ್‌ ಸಿನಿಮಾಗೆ ಏನೆಲ್ಲಾ ಇರಬೇಕೋ ಆ ಎಲ್ಲಾ ಕ್ವಾಲಿಟೀಸ್‌ ಜೇಮ್ಸ್‌ ಚಿತ್ರದಲ್ಲಿದೆ. ಮೊದಲಿಗೆ ಇಲ್ಲಿ ಮನಸ್ಸಿಗೆ ನಾಟೋದು ಸಿನಿಮಾದ ಆಶಯ. ಹಾಗೆಯೇ ಕಣ್ಣಿಗೆ ಕಾಣೋದು ಅದ್ಧೂರಿತನ ಮತ್ತು ಗುಣಮಟ್ಟ. ಚಿತ್ರದ ಪ್ರತಿ ಪಾತ್ರಗಳನ್ನು ಪೋಣಿಸಿರುವ ರೀತಿ. ಇವೆಲ್ಲದರ ಜೊತೆಗೆ ಮುಖ್ಯವಾಗಿ ಪದೇ ಪದೇ ಇಷ್ಟವಾಗೋದು ಸಿನಿಮಾದ ಸಂಗೀತ. ಇಲ್ಲಿ ಗುನುಗುವ ಹಾಡುಗಳೂ ಇವೆ. ಕಥೆಗೆ ಪೂರಕವಾಗಿರುವಂತಹ ಹಿನ್ನೆಲೆ ಸಂಗೀತವೂ ಇದೆ. ಇವು ಸಿನಿಮಾದ ವೇಗವನ್ನು ಮತ್ತಷ್ಟು ಹೆಚ್ಚಿಸಿವೆ. ಇನ್ನು, ಇಂತಹ ಚಿತ್ರಗಳಿಗೆ ಸಂಕಲನ ಕೂಡ ಮುಖ್ಯ. ಅದಿಲ್ಲಿ ಎದ್ದು ಕಾಣುತ್ತದೆ. ಪ್ರತಿ ಫ್ರೇಮ್‌ ಕೂಡ ಬ್ಯೂಟಿಫುಲ್‌ ಫ್ಲವರ್‌ನಂತಿವೆ. ಆಕ್ಷನ್‌ ಇದ್ದರೂ, ಚೆಂದದ ಗೆಳೆತನವೇ ಇಲ್ಲಿ ಕಾಡುತ್ತದೆ. ಸಿನಿಮಾ ನೋಡುವ ಮಂದಿ ಎಲ್ಲೋ ಒಂದು ಕಡೆ ಭಾವುಕರಾಗುತ್ತಾರೆ. ಅದಕ್ಕೆ ಕಾರಣ, ದೇಶಾಭಿಮಾನದ ಡೈಲಾಗ್‌ಗಳು ಮತ್ತು ನಾಯಕನ ಹೋರಾಟದ ಶ್ರಮ. ಇಲ್ಲಿ ಯಾವ ದೃಶ್ಯವೂ ವಿನಾಕಾರಣ ಎನ್ನುವಂತಿಲ್ಲ. ಕಣ್ಣಿಗೆ ಹಬ್ಬದಷ್ಟೇ ಅಂದವಾಗಿರುವ ಸಿನಿಮಾದಲ್ಲಿ ಯಾವುದನ್ನೂ ತೆಗಳುವಂಥದ್ದಿಲ್ಲ. ಒಟ್ಟಾರೆ ಜೇಮ್ಸ್‌ ಒಂದು ವರ್ಗಕ್ಕೆ ಸೀಮಿತವಾದ ಸಿನಿಮಾವಂತೂ ಅಲ್ಲ. ಎಲ್ಲರೂ ಪ್ರೀತಿಯಿಂದ “ಅಪ್ಪುʼವಂತಹ ಸಿನಿಮಾ ಅನ್ನುವುದಕ್ಕೆ ಇಲ್ಲಿ ನಾನಾ ಕಾರಣಗಳಿವೆ. ಅದನ್ನು ತಿಳಿಯುವುದಕ್ಕಾದರೂ ಒಂದೊಮ್ಮೆ ಜೇಮ್ಸ್‌ ನೋಡಿ ಜೈ ಅಂದು ಬಿಡಿ.

ಕಥೆ ಏನು?
ಚಿತ್ರದ ನಾಯಕ ಸಂತೋಷ್‌ (ಪುನೀತ್‌ ರಾಜಕುಮಾರ್)‌ ಒಬ್ಬ ಸೋಲ್ಜರ್.‌ ದೇಶ ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ವ್ಯಕ್ತಿತ್ವ. ಚಿಕ್ಕಂದಿನಲ್ಲೇ ಘಟನೆಯೊಂದರಲ್ಲಿ ಐದು ಫ್ಯಾಮಿಲಿಗಳನ್ನು ಕಳೆದುಕೊಳ್ಳುವ ಐವರು ಹುಡುಗರು ಅನಾಥರಾಗುತ್ತಾರೆ. ಅಲ್ಲೊಬ್ಬ ಮಿಲಿಟರಿ ಅಧಿಕಾರಿ ಅನಾಥರಾಗಿ ಅಳುವ ಆ ಹುಡುಗರ ಕಣ್ಣೀರು ಒರೆಸಿ, ಅವರ ಗೆಳೆತನಕ್ಕೆ ಸಾಕ್ಷಿಯಾಗುತ್ತಾರೆ. ಅಲ್ಲಿಂದ ಸಿನಿಮಾ ಇನ್ನೊಂದು ಘಟ್ಟಕ್ಕೆ ತಲುಪುತ್ತೆ. ಆ ಐವರು ಗೆಳೆಯರು ಚೆನ್ನಾಗಿ ಓದಿಕೊಂಡು ಉನ್ನತ ಹುದ್ದೆ ಅಲಂಕರಿಸುತ್ತಾರೆ. ಆ ಪೈಕಿ ಸಂತೋಷ್‌ ಮೇಜರ್‌ ಆಗಿ ದೇಶ ಸೇವೆಗೆ ನಿಲ್ಲುತ್ತಾರೆ. ಹೀಗಿರುವಾಗ, ಆ ಮೇಜರ್‌ ಸಂತೋಷ್‌ನ ನಾಲ್ವರು ಗೆಳೆಯರು ಹಾಗು ಕುಟುಂಬ, ಮಕ್ಕಳನ್ನು ಹತ್ಯೆ ಮಾಡಲಾಗುತ್ತೆ. ಯಾಕೆ ಅನ್ನುವುದಕ್ಕೆ ಒಂದು ಕಾರಣವೂ ಇದೆ. ಆ ಕಾರಣ ಹೇಳುವುದಕ್ಕಿಂತ ಅದನ್ನು ತೆರೆ ಮೇಲೆ ನೋಡಬೇಕು. ನಂತರದಲ್ಲಿ ಆ ಮೇಜರ್‌ ಯಾಕೆ ರೆಬೆಲ್‌ ಆಗ್ತಾನೆ ಅನ್ನೋದಕ್ಕೆ ಬಲವಾದ ಕಾರಣವೂ ಇದೆ. ಇಲ್ಲಿ ಒಬ್ಬಿಬ್ಬರು ವಿಲನ್‌ಗಳಿಲ್ಲ. ರಾಶಿ ರಾಶಿ ವಿಲನ್‌ಗಳಿದ್ದಾರೆ. ಅವರೆಲ್ಲರನ್ನೂ ಒಬ್ಬ ಸೋಲ್ಜರ್‌ ಬಗ್ಗು ಬಡಿಯುತ್ತಾನೆ. ಅಂಥದ್ದೊಂದು ದೊಡ್ಡ ಕ್ರೈಮ್‌ ಹಿನ್ನೆಲೆಯ ವಿಲನ್‌ಗಳಿಗೂ ಆ ಸೋಲ್ಜರ್‌ಗು ಏನು ನಂಟು ಎಂಬುದಕ್ಕೂ ಸಿನಿಮಾ ನೋಡಲೇಬೇಕು.

ತಾಂತ್ರಿಕತೆ ಹೇಗಿದೆ?
ಒಂದು ಸಿನಮಾಗೆ ಮುಖ್ಯವಾಗಿ ಬೇಕಿರೋದು ಕಥೆ. ಅದರ ಜೊತೆಗೆ ಗುಣಮಟ್ಟ. ಇಲ್ಲಿ ಛಾಯಾಗ್ರಹಣ ಅಲ್ಟಿಮೇಟ್‌ ಆಗಿದೆ. ಸಂಗೀತ ಕೂಡ ಖುಷಿ ಕೊಡುತ್ತದೆ. ಸಿನಿಮಾ ಸ್ಪೀಡ್‌ ಆಗಿ ಹೋಗುತ್ತೆ ಅಂದರೆ ಅದಕ್ಕೆ ಕತ್ತರಿ ಪ್ರಯೋಗವೂ ಕಾರಣ. ಇನ್ನು, ದೊಡ್ಡ ದೊಡ್ಡ ಸೆಟ್‌ಗಳು ಕೂಡ ಅದ್ಧೂರಿತನಕ್ಕೆ ಸಾಕ್ಷಿಯಾಗಿವೆ. ಪರಭಾಷೆ ಸಿನಿಮಾಗಳನ್ನು ನೋಡಿ ಹಾಗೆ, ಹೀಗೆ ಅನ್ನುವ ಮಂದಿಗೆ ಜೇಮ್ಸ್‌ ತಕ್ಕ ಉತ್ತರ ನೀಡಿದೆ. ಇಲ್ಲಿ ಎಲ್ಲವೂ ಹೈಫೈ. ಪ್ರತಿ ಪಾತ್ರಗಳನ್ನೂ ಸ್ಟೈಲಿಶ್‌ ಆಗಿಯೇ ತೋರಿಸಲಾಗಿದೆ. ಎಷ್ಟು ವೆಪನ್ಸ್‌ಗಳಿವೆಯೋ ಅಷ್ಟೇ ಪಾತ್ರಗಳೂ ಇಲ್ಲಿ ಬಂದು ಹೋಗುತ್ತವೆ. ಇಲ್ಲಿ ಮುಖ್ಯವಾಗಿ ಹೇಳಬೇಕಾದ್ದೆಂದರೆ, ಅದು ಸ್ಟಂಟ್ಸ್.‌ ಜೇಮ್ಸ್‌ ಅನ್ನುವ ಶೀರ್ಷಿಕೆಗೆ ತಕ್ಕಂತೆ ಕಥೆ, ಪಾತ್ರವಿದೆ. ಅದಕ್ಕೆ ತಕ್ಕಂತೆಯೇ ಆಕ್ಷನ್‌ ಸೀಕ್ವೆನ್ಸ್‌ ಕೂಡ ಇದೆ. ಒಂದೊಂದು ಫೈಟ್‌ ಕೂಡ ಅದ್ಧೂರಿಯಾಗಿವೆ. ಜೊತೆಗೆ ರಿಸ್ಕೀ ಸ್ಟಂಟ್‌ ಎಂಥವರನ್ನೂ ಅಬ್ಬಬ್ಬಾ ಅನಿಸುವಷ್ಟರ ಮಟ್ಟಿಗೆ ಸ್ಟಂಟ್‌ ಮಾಸ್ಟರ್‌ಗಳ ಕೆಲಸ ಎದ್ದು ಕಾಣುತ್ತದೆ. ಸ್ಟಂಟ್ಸ್‌ ಇಲ್ಲಿ ಎಕ್ಸಲೆಂಟ್‌ ಅನ್ನೋದೇ ವಿಶೇಷ. ಕಾಸ್ಟ್ಯೂಮ್ಸ್‌ ಬಗ್ಗೆ ಹೇಳಲೇಬೇಕು. ಪ್ರತಿ ಪಾತ್ರಗಳೂ ಇಲ್ಲಿ ರಿಚ್! ಒಟ್ಟಾರೆ, ಜೇಮ್ಸ್‌ ತಾಂತ್ರಿಕತೆಯಲ್ಲೂ ಶ್ರೀಮಂತ ಎಂಬುದನ್ನು ಸಾಬೀತುಪಡಿಸಿದೆ.

ಯಾರು ಹೇಗೆ?
ಇಲ್ಲಿ ಪುನೀತ್‌ ರಾಜಕುಮಾರ್‌ ಅವರು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಒಬ್ಬ ಗೆಳೆಯನಾಗಿ, ಪ್ರೇಮಿಯಾಗಿ, ದೇಶ ಕಾಯುವ ಯೋಧನಾಗಿ ಇಷ್ಟವಾಗುತ್ತಾರೆ. ಡ್ಯಾನ್ಸ್‌ ಮತ್ತು ಫೈಟ್‌ನಲ್ಲಿ ಎಂದಿಗಿಂತಲೂ ಖುಷಿ ಕೊಡುತ್ತಾರೆ. ಇನ್ನು, ಅವರ ಖಡಕ್‌ ಮಾತುಗಳಿಗೆ ಶಿವರಾಜಕುಮಾರ್‌ ಧ್ವನಿಯಾಗಿದ್ದಾರೆ. ಎಲ್ಲೂ ಕೂಡ ಪುನೀತ್‌ ಧ್ವನಿ ಮಿಸ್ಸೇ ಇಲ್ಲ ಎಂಬಂತೆ ಆ ಧ್ವನಿ ಸೆಟ್‌ ಆಗಿರೋದು ಇನ್ನೊಂದು ವಿಶೇಷ. ಪ್ರಿಯಾ ಆನಂದ್‌ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಶರತ್‌ ಕುಮಾರ್‌, ಶ್ರೀಕಾಂತ್‌,ಮುಖೇಶ್‌ ರಿಷಿ, ಆದಿತ್ಯ ಮೆನನ್‌, ರಣಗಾಯಣ ರಘು, ಸಾಧುಕೋಕಿಲ, ಅವಿನಾಶ್‌, ಯಶ್‌ ಶೆಟ್ಟಿ, ವಜ್ರಾಂಗ್‌ ಶೆಟ್ಟಿ, ಶೈನ್‌ ಶೆಟ್ಟಿ, ತಿಲಕ್‌, ಚಿಕ್ಕಣ್ಣ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಶಿವರಾಜಕುಮಾರ್‌ ಕೂಡ ಇಲ್ಲಿ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ರಾಘವೇಂದ್ರ ರಾಜಕುಮಾರ್‌ ಪಾತ್ರ ಕೂಡ ಗಮನಸೆಳೆಯುತ್ತದೆ. ಯಾವ ಪಾತ್ರವೂ ಇಲ್ಲಿ ವೇಸ್ಟ್‌ ಎನಿಸದಂತೆ, ಎಲ್ಲವನ್ನೂ ಅಚ್ಚುಕಟ್ಟಾಗಿಯೇ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಕೊನೆ ಮಾತು: ಕಣ್ಣು, ಕಿವಿ ಮತ್ತು ಹೃದಯಕ್ಕೆ ಹತ್ತಿರವಾಗುವ ಸಿನಿಮಾ.

Categories
ರಿ ವಿವ್ಯೂ ಸಿನಿ ಸುದ್ದಿ

ಡಿಯರ್‌ ಸತ್ಯನ ಮರ್ಡರ್‌ ಸ್ಟೋರಿ!

ಚಿತ್ರ ವಿಮರ್ಶೆ

ರೇಟಿಂಗ್ : /45

ಚಿತ್ರ : ಡಿಯರ್ ಸತ್ಯ
ನಿರ್ದೇಶಕ : ಶಿವಗಣೇಶ್
ನಿರ್ಮಾಣ : ಪರ್ಪಲ್ ರಾಕ್ ಎಂಟರ್ ಟೈನರ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋ
ತಾರಾಗಣ : ಆರ್ಯನ್ ಸಂತೋಷ್, ಅರ್ಚನಾ ಕೊಟ್ಟಿಗೆ, ಅರುಣಾ ಬಾಲರಾಜ್ , ಅಶ್ವಿನ್ ರಾವ್ , ರಂಗಿತರಂಗ ಅರವಿಂದ್ ಇತರರು.

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮರ್ಡರ್‌ ಮಿಸ್ಟ್ರಿ ಸಿನಿಮಾಗಳು ಬಂದಿವೆ. ಆ ಸಾಲಿಗೆ ಡಿಯರ್‌ ಸತ್ಯ ಕೂಡ ಒಂದು. ಆದರೆ, ಇದೊಂದು ವಿಭಿನ್ನ ಕಥಾಹಂದರದ ಸಿನಿಮಾ. ಇಲ್ಲಿ ನವಿರಾದ ಪ್ರೀತಿ ಇದೆ, ಅಪ್ಪುಗೆಯ ಗೆಳೆತನವಿದೆ. ತಾಯಿಯ ಮಮಕಾರವಿದೆ. ಒಂದಷ್ಟು ದ್ವೇಷ, ಅಸೂಯೆ ಕೂಡ ಇಲ್ಲಿದೆ. ಒಟ್ಟಾರೆ ಒಂದೇ ಮಾತಲ್ಲಿ ಹೇಳುವುದಾದರೆ, ಡಿಯರ್‌ ಸತ್ಯ ಹೊಸದೊಂದು ಫೀಲ್‌ ಕೊಡುವ ಸಿನಿಮಾ. ಒಂದಷ್ಟು ಭಾವುಕತೆಯ ಜೊತೆಯಲ್ಲೇ ಸಾಗುವ ಚಿತ್ರ ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡಿಬಿಡುತ್ತದೆ.


ಕಥೆ ತುಂಬಾನೇ ಸರಳ. ಆದರೆ, ನಿರ್ದೇಶಕ ಶಿವಗಣೇಶ್‌ ಅವರ ನಿರೂಪಣೆ ಇಲ್ಲಿ ಹೈಲೈಟ್.‌ ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿವೆ. ಅದಕ್ಕೆ ಕಾರಣ, ಮತ್ತದೇ ಸ್ಕ್ರೀನ್‌ ಪ್ಲೇ. ಚಿತ್ರದ ಹೀರೋ ತಾನು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುತ್ತಾನೆ. ಆದರೆ, ಆತ ಮಾಡಿದ ತಪ್ಪಾದರೂ ಏನು? ಈ ಪ್ರಶ್ನೆಗೆ ಉತ್ತರ ಒಂದೊಮ್ಮೆ ಸಿನಿಮಾ ನೋಡಲೇಬೇಕು. ಸಿನಿಮಾ ರಿವರ್ಸ್‌ ಸ್ಕ್ರೀನ್‌ ಪ್ಲೇನಲ್ಲಿ ಸಾಗುತ್ತ ಹೋಗುತ್ತೆ. ಆಗಾಗ ಫ್ಲ್ಯಾಷ್ ಬ್ಯಾಕ್ ಸ್ಟೋರಿ ಚಿತ್ರದ ವೇಗಕ್ಕೊಂದು ಕಾರಣವಾಗುತ್ತದೆ. ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ಹಾಗಂತ, ಹೊಡಿ ಬಡಿ ಕಡಿ ಇದ್ದರೂ, ಇಲ್ಲೊಂದು ನಿಷ್ಕಲ್ಮಷ ಪ್ರೀತಿ ಇದೆ. ಆಪ್ತವೆನಿಸೋ ಗೆಳೆತನವಿದೆ. ಮಧ್ಯಮವರ್ಗದ ತಾಯಿ ಮಗನ ಬಾಂಧವ್ಯದ ಬೆಸುಗೆಯೂ ಇದೆ. ಹೀರೋ ಇಲ್ಲಿ ಫುಡ್‌ ಡೆಲಿವರಿ ಬಾಯ್ ಕೆಲಸ ಮಾಡುತ್ತಲೇ ತನ್ನ ಸುಂದರ ಬದುಕು ಕಟ್ಟಿಕೊಂಡಾತ. ಅವನಿಗೆ ಅರಿವಿಲ್ಲದೆಯೇ ಹುಡುಗಿಯೊಬ್ಬಳ ಮೊದಲ ನೋಟಕ್ಕೆ ಪ್ರೀತಿ ಹುಟ್ಟಿಸಿಕೊಳ್ಳುತ್ತಾನೆ. ತನ್ನ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂಬ ಕನಸು ಕಾಣುವ ಹೀರೋ, ತನ್ನ ಪ್ರೀತಿಯನ್ನೂ ಸಹ ಕಾಪಾಡಿಕೊಂಡು, ಅವಳನ್ನು ಕೈ ಹಿಡಿದು ಬದುಕಬೇಕೆಂದು ಆಸೆಪಡುವ ಹೀರೋಗೆ ಅದು ಸಾಧ್ಯವಾಗುವುದಿಲ್ಲ. ಯಾಕೆ ಅನ್ನೋದು ಸಸ್ಪೆನ್ಸ್.‌

ತಾನು ಪ್ರೀತಿಸುವ ಹುಡುಗಿಯನ್ನು ಇನ್ನೇನು ತನ್ನ ತಾಯಿಗೆ ಪರಿಚಯಿಸಿ, ಮದುವೆ ಆಗಬೇಕು ಅಂದುಕೊಳ್ಳುವ ನಾಯಕನ ಬದುಕಲ್ಲಿ ಒಂದು ಘೋರ ಘಟನೆ ನಡೆದು ಹೋಗುತ್ತದೆ. ಅದೇ ಇಡೀ ಚಿತ್ರದ ಹೈಲೈಟ್.‌ ಆ ಘಟನೆ ಬಳಿಕ ಏನೆಲ್ಲಾ ನಡೆಯುತ್ತೆ ಅನ್ನೋದೇ ಸಿನಿಮಾದ ವಿಶೇಷ. ಸಿನಿಮಾದಲ್ಲೊಂದು ಕೊಲೆಯಾಗುತ್ತೆ. ಆ ಕೊಲೆ ನಾಯಕನ ಮೇಲೆ ಹೋಗುತ್ತೆ. ಅಲ್ಲಿಂದ ಹೊರಬಂದು, ಆ ಕೊಲೆಗಾರರು ಯಾರು ಅನ್ನುವುದನ್ನು ಹೀರೋ ಕಂಡು ಹಿಡಿಯುತ್ತಾನೆ. ಆ ಬಳಿಕ ಏನೆಲ್ಲಾ ನಡೆದು ಹೋಗುತ್ತೆ ಎಂಬ ಕುತೂಹಲ ಇದ್ದರೆ, ಸಿನಿಮಾ ನೋಡಬಹುದು. ಇಷ್ಟಕ್ಕೂ ಆ ಕೊಲೆ ಯಾರದ್ದು? ಯಾರು ಮಾಡುತ್ತಾರೆ? ನಾಯಕ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತಾನೋ ಇಲ್ಲವೋ ಅನ್ನೋದು ಕಥೆ.

ಇನ್ನು, ಚಿತ್ರದ ಟೆಕ್ನಿಕಲ್‌ ವಿಷಯಕ್ಕೆ ಬರುವುದಾದರೆ, ಚಿತ್ರದ ಕ್ಯಾಮೆರಾ ಕೆಲಸ ಸೊಗಸಾಗಿದೆ. ಶ್ರೀಧರ್‌ ವಿ.ಸಂಭ್ರಮ್‌ ಅವರ ಸಂಗೀತ ಇಲ್ಲಿ ಮಾತಾಡುವಂತಿದೆ. ಎರಡು ಹಾಡುಗಳು ಗುನುಗುವಂತಿವೆ. ಇನ್ನು, ಚಿತ್ರದ ಸಂಕಲನ ಕೆಲಸ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿವೆ. ನಾಯಕ ಆರ್ಯನ್ ಸಂತೋಷ್ ಈ ಚಿತ್ರದ ಮೂಲಕ ಎಂದಿಗಿಂತಲೂ ಲುಕ್‌ ಆಗಿ ಕಾಣುತ್ತಾರೆ. ಅಷ್ಟೇ ಆ್ಯಂಗ್ರಿ ಯಂಗ್ ಮ್ಯಾನ್ ಆಗಿಯೂ ಕಾಣಿಸಿಕೊಂಡಿದ್ದಾರೆ. ತಮಗೆ ಸಿಕ್ಕ ಪಾತ್ರವನ್ನು ಲವ್ಲಿಯಾಗಿಯೇ ನಿರ್ವಹಿಸಿದ್ದಾರೆ. ಡ್ಯಾನ್ಸ್‌ ಮತ್ತು ಫೈಟ್‌ ವಿಚಾರದಲ್ಲಿ ಇಷ್ಟವಾಗುತ್ತಾರೆ. ಇನ್ನು, ನಾಯಕಿ ಅರ್ಚನಾ ಕೊಟ್ಟಿಗೆ ಅವರು ಸಹ ಸ್ಕ್ರೀನ್‌ ಮೇಲೆ ಮುದ್ದಾಗಿ ಕಾಣುತ್ತಾರೆ. ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಕೆಲವು ಕಡೆ ಇನ್ನಷ್ಟು ಎಫರ್ಟ್‌ ಬೇಕಿತ್ತು ಎನಿಸುತ್ತದೆ. ತಾಯಿಯಾಗಿ ಅರುಣಾ ಬಾಲರಾಜ್ ಇರುವಷ್ಟು ಹೊತ್ತು ಇಷ್ಟವಾಗುತ್ತಾರೆ. ಗುರುರಾಜ್ ಹೊಸಕೋಟೆ , ಪಾಪಣ್ಣ, ಸೇರಿದಂತೆ ಒಂದಷ್ಟು ಹೊಸ ಬಗೆಯ ಪಾತ್ರಗಳಿಲ್ಲಿ ಗಮನಸೆಳೆಯುತ್ತವೆ.

Categories
ರಿ ವಿವ್ಯೂ ಸಿನಿ ಸುದ್ದಿ

ಅಘೋರ ಎಂಬ ಭಯಾನಕ ಸಿನಿಮಾ… ಬದುಕು ಕಳಕೊಂಡ ಆತ್ಮದ ಅರ್ತನಾದ!

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ಅವುಗಳ ಸಾಲಿಗೆ ಈಗ ಅಘೋರ ಸಿನಿಮಾವೂ ಸೇರಿದೆ. ಹೆಸರೇ ಹೇಳುವಂತೆ ಸಿನಿಮಾ ಕೂಡ ಗಂಭೀರದ ಜೊತೆ ಭಯಾನಕವಾಗಿಯೂ ಇದೆ. ಅದಕ್ಕೆ ಕಾರಣ ನಿರ್ದೇಶಕರ ಯೋಚನೆ ಮತ್ತು ಆಲೋಚನೆ.

ಮೊದಲೇ ಹೇಳಿದಂತೆ ಇದೊಂದು ಭಯಪಡಿಸೋ ಸಿನಿಮಾ. ಹಾರರ್ ಸಿನಿಮಾಗಳಿಗೆ ಮುಖ್ಯವಾಗಿ ಬೇಕಿರೋದು ಕಥೆ ಮತ್ತು ಎಫೆಕ್ಟ್ಸ್. ಅದು ಈ ಚಿತ್ರದ ಹೈಲೈಟ್. ಇಲ್ಲಿ ಭಯಪಡಿಸುವುದರ ಜೊತೆಗೊಂದು ವಿಶೇಷ ಸಂದೇಶವೂ ಇದೆ. ಅಂಥದ್ದೊಂದು ವಿಭಿನ್ನ ಮೆಸೇಜ್ ಇಟ್ಟುಕೊಂಡು ಹಾರರ್ ಕಮ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಹಾರರ್ ಸಿನಿಮಾ ಅಂದಾಕ್ಷಣ, ಬಿಳಿ ಸೀರೆ ಧರಿಸಿ, ಕೂದಲು ಬಿಟ್ಟುಕೊಂಡು ಕಾಲ್ಗೆಜ್ಜೆಯ ಸದ್ದು ಮಾಡುತ್ತ ಕಿರುಚುತ್ತ, ಅರುಚುತ್ತ, ಭೀತಿ ಹುಟ್ಟಿಸೋ ದೆವ್ವಗಳು ಕಾಮನ್. ಆದರೆ, ಈ ಚಿತ್ರ ಇವೆಲ್ಲದರಿಂದ ಹೊರತಾಗಿದೆ. ಒಂದು ಹಾರರ್ ಸಿನಿಮಾಗೆ ಏನೆಲ್ಲಾ ಕ್ವಾಲಿಟೀಸ್ ಇರಬೇಕೋ ಅದೆಲ್ಲವೂ ಈ ಚಿತ್ರದಲ್ಲಿದೆ. ಮೊದಲಿಗೆ ಇದು ಕಂಟೆಂಟ್ ಚಿತ್ರ. ಕಥೆಯೇ ಇಲ್ಲಿ ಜೀವಾಳ. ಇನ್ನು ಇಂತಹ ಚಿತ್ರಗಳಿಗೆ ಸಂಗೀತ ಮುಖ್ಯ ಆಕರ್ಷಣೆ. ಅದರ ಕೆಲಸ ಇಲ್ಲಿ ಎದ್ದು ಕಾಣುತ್ತೆ. ಹಾರರ್ ಚಿತ್ರಕ್ಕೆ ಎಫೆಕ್ಟ್ಸ್ ಕೂಡ ಪ್ರಮುಖ ಅಂಶ. ಎಫೆಕ್ಟ್ಸ್ ಇಲ್ಲಿ ಅಘೋರನನ್ನು ಮತ್ತಷ್ಟು ಇಷ್ಟವಾಗುವಂತೆ ಮಾಡಿದೆ. ಮೊದಲರ್ಧ ಜಾಲಿಯಾಗಿಯೇ ಸಾಗುವ ಸಿನಿಮಾ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತದೆ. ಜೊತೆಗೆ ಅಷ್ಟೇ ಭಯ ಹುಟ್ಟಿಸುತ್ತ ಹೋಗುತ್ತದೆ. ಅಷ್ಟರಮಟ್ಟಿಗೆ ನಿರ್ದೇಶಕರ ಪ್ರಯತ್ನ ಇಲ್ಲಿ ಸಾರ್ಥಕ.

ಕಥೆ ಏನು?
ಐದಾರು ಪಾತ್ರಗಳು ಇಲ್ಲಿ ಹೈಲೈಟ್. ಪಾತ್ರವೊಂದರ ಜೊತೆ ಅನಿರೀಕ್ಷಿತ ಭೇಟಿಯಾಗುವ ಮೂರು ಪಾತ್ರಗಳು ರಾತ್ರಿ ವೇಳೆ ಒಂದು ಸ್ಥಳಕ್ಕೆ ಹೋಗ್ತಾರೆ. ಅವರು ಅಲ್ಲಿ ಯಾಕೆ ಹೋಗ್ತಾರೆ ಅದಕ್ಕೆ ಕಾರಣ ಏನು ಅನ್ನೋದು ಸಸ್ಪೆನ್ಸ್. ಅಲ್ಲೊಂದು ವಿಚಿತ್ರ ಘಟನೆ ನಡೆಯುತ್ತೆ. ಅಲ್ಲಿಂದ ಆ ನಾಲ್ಕು ಜನ ಒಂದು ಮನೆಗೆ ಎಂಟ್ರಿಯಾಗ್ತಾರೆ. ಅಲ್ಲಿ ವಿಚಿತ್ರ ಘಟನೆಗಳು ಜರುಗುತ್ತವೆ. ಅಲ್ಲೊಂದು ಭಯವೆನಿಸುವ ಸನ್ನಿವೇಶ ನಡೆಯುತ್ತೆ. ಇಡೀ ಚಿತ್ರದ ಸ್ವೀಕೆನ್ಸ್ ನಡೆಯೋದೆ ಅಲ್ಲಿ.

ಒಂದು ಮನೆಯಲ್ಲಿ ನಡೆಯೋ ವಿಚಿತ್ರ ಘಟನೆಗಳು ನೋಡುಗರನ್ನು ಅಕ್ಷರಶಃ ಬೆಚ್ಚಿ ಬೀಳಿಸುತ್ತವೆ. ಅದಕ್ಕೆ ಕಾರಣ ಸೌಂಡಿಂಗ್ ಮತ್ತು ಹಿನ್ನೆಲೆ ಸಂಗೀತ. ಇನ್ನು ಇಂತಹ ಚಿತ್ರಕ್ಕೆ ಸಂಕಲನ ಕೆಲಸವೂ ಮುಖ್ಯ. ಅದಿಲ್ಲಿ ಸಿನಿಮಾದ ವೇಗಕ್ಕೆ ಹೆಗಲು ಕೊಟ್ಟಿದೆ.

ತಾನು ನಟ ಆಗಬೇಕು ಅಂತ ನೂರಾರು ಆಸೆ ಆಕಾಂಕ್ಷೆ ಇಟ್ಟುಕೊಂಡ ಪ್ರತಿಭೆ ಒಂದು ಘಟನೆಗೆ ಸಿಲುಕುತ್ತಾನೆ. ಆ ಬಳಿಕ ಅವನ ಬದುಕೇ ಹಾಳಾಗುತ್ತೆ. ಅಲ್ಲಿಂದಲೇ ನೋಡುಗರಿಗೆ ಹೊಸ ಭೀತಿ ಶುರುವಾಗುತ್ತೆ. ನಿಜ ಹೇಳುವುದಾದರೆ, ಒಂದು ಭಯಾನಕತೆ ಹೇಗೆಲ್ಲ ಇರುತ್ತೆ ಅನ್ನೋದನ್ನ ನಿರ್ದೇಶಕರು ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಪ್ರತಿಭೆಗಳ ಅನಾವರಣ

ಇಲ್ಲಿ ಕಾಣಿಸಿಕೊಂಡಿರುವ ಪ್ರತಿ ಪಾತ್ರಗಳು ನೋಡುಗರನ್ನು ಖುಷಿಪಡಿಸುತ್ತವೆ. ತಮಾಷೆ ಸೀನ್ ಗಳಲ್ಲೂ ಗಮನ ಸೆಳೆಯೊ ಕಲಾವಿದರು, ಅಷ್ಟೇ ಭಯ ಹುಟ್ಟಿಸುತ್ತಾರೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಒಟ್ಟಾರೆ ನಿರ್ದೇಶಕ ಪ್ರಮೋದ್ ರಾಜ್ ಅವರು ನೋಡುಗರನ್ನು ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಅವಿನಾಶ್ ಅವರು ಅಘೋರನಾಗಿ ಅಬ್ಬರಿಸಿದ್ದಾರೆ. ಉಳಿದಂತೆ, ತೆರೆ ಮೇಲೆ ಅಶೋಕ್ ಪುನೀತ್, ದ್ರವ್ಯ, ರಚನಾ ಸೇರಿದಂತೆ ಇತರರು ಕೂಡ ಗಮನ ಸೆಳೆಯುತ್ತಾರೆ.

ಶರತ್ ಕುಮಾರ್ ಅವರ ಛಾಯಾಗ್ರಹಣ ಅಘೋರನನ್ನು ಅಂದಗಾಣಿಸಿದೆ ಮುರಳೀಧರನ್ ಅವರ ಬಿಜಿಎಂ ಖುಷಿ ಕೊಡಿಸುತ್ತೆ. ವಿ.ನಾಗೇಂದ್ರಪ್ರಸಾದ್ ಸಂಗೀತ ಮತ್ತು ಸಾಹಿತ್ಯ ಚಿತ್ರದ ಕಥೆಗೆ ಪೂರಕವಾಗಿದೆ. ವೆಂಕಟೇಶ್ ಯುಡಿವಿ ಅವರ ಕತ್ತರಿ ಪ್ರಯೋಗ ಅಘೋರನನ್ನು ವೇಗಗೊಳಿಸಿದೆ. ಮಾಸ್ ಮಾದ ಅವರ ಕೆಲಸ ಕೂಡ ಗಮನಸೆಳೆಯುತ್ತದೆ.

Categories
ರಿ ವಿವ್ಯೂ

ರಾಬರ್ಟ್‌ ಅದ್ಧೂರಿ ದರ್ಶನ! ಈ ಬಾಸು ಕೊಂಚ ರೌಡಿ, ಮಿಸ್‌ ಮಾಡದೇ ನೀವ್‌ ನೋಡಿ!!

ಚಿತ್ರ ವಿಮರ್ಶೆ

ಮಚ್‌ ಹಾಕೋರಿಗೇ ಹೆದರಲಿಲ್ಲ… ಇನ್ನು ಸ್ಕೆಚ್‌ ಹಾಕೋರಿಗೆ ಹೆದರ್ತೀನಾ..”

– ಈ ಡೈಲಾಗ್‌ ಬರುವ ಹೊತ್ತಿಗೆ, ಒಂದು ಹಂತದಲ್ಲಿ ಸಿನಿಮಾದ ಮೊದಲರ್ಧ ಮುಗಿದು, ತನ್ನ ವೇಗವನ್ನು ಹೆಚ್ಚಿಸಿಕೊಂಡಿರುತ್ತೆ. ಮುಂದೇನಾಗುತ್ತೆ ಎಂಬ ಕುತೂಹಲವೂ ಕೂಡ ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಗುತ್ತೆ. ಆ ಕುತೂಹಲವನ್ನು ವರ್ಣಿಸುವುದು ತುಸು ಕಷ್ಟ. ಅಂಥದ್ದೊಂದು ಕುತೂಹಲ ಕೆರಳಿಸಿರುವ “ರಾಬರ್ಟ್‌” ನಿಜಕ್ಕೂ ಅದ್ಧೂರಿ “ದರ್ಶನ” ನೀಡಿದೆ ಎನ್ನಬಹುದು.
ಇಷ್ಟು ದಿನ “ರಾಬರ್ಟ್‌” ಎದುರು ನೋಡುತ್ತಿದ್ದವರಿಗೆ ಖಂಡಿತ ಇಲ್ಲಿ ನಿರಾಸೆ ಆಗುವುದಿಲ್ಲ. ದರ್ಶನ್‌ ಅಭಿಮಾನಿಗಳಿಗಂತೂ ಪಕ್ಕಾ ಮಾಸ್‌ ಎಂಟರ್‌ಟೈನ್‌ಮೆಂಟ್‌ ಚಿತ್ರವಿದು. ಕಾಸು ಕೊಟ್ಟು ಬಾಸು ನೋಡಿದವರಿಗೆ ಪಾನ್‌ ಮಸಾಲ ತಿಂದಷ್ಟೇ ಖುಷಿ. “ರಾಬರ್ಟ್”‌ ಒಂದು ರಿವೇಂಜ್‌ ಕಥೆ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ರಿವೇಂಜ್‌ ಸ್ಟೋರಿ ಕನ್ನಡಕ್ಕೆ ಹೊಸದಲ್ಲ. ಆದರೆ, ನಿರ್ದೇಶಕ ತರುಣ್‌ ಸುಧೀರ್‌ ಅವರ ಈ “ರಿವೇಂಜ್” ವಿಭಿನ್ನ ಎನ್ನಬಹುದು. ಇಲ್ಲಿ ಕಥೆ ಇದೆ, ಚಿತ್ರಕಥೆಗೊಂದು ವೇಗವಿದೆ. ಸಿನಿಮಾದ ಅವಧಿ ಹೆಚ್ಚಾಯಿತು ಎನಿಸಿದರೂ, ಅಲ್ಲಲ್ಲಿ ಕಾಣುವ ಹಾಡುಗಳು ನೋಡುಗರ ಮನಮುಟ್ಟಿ, ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು “ರಾಬರ್ಟ್‌”ಗಿದೆ.
ಸಾಮಾನ್ಯವಾಗಿ ದರ್ಶನ್‌ ಸಿನಿಮಾಗಳಲ್ಲಿ ಹೊಡಿ, ಬಡಿ, ಕಡಿ ಅಂಶಗಳು ಇದ್ದೇ ಇರುತ್ತೆ. ಇಲ್ಲೂ ಆ ಎಲ್ಲಾ ಅಂಶಗಳಿದ್ದರೂ, ಅವುಗಳ ಜೊತೆ ಒಂದಷ್ಟು ಮನಸ್ಸಿಗೆ ನಾಟುವ ಅಂಶಗಳು ಇವೆ. ದ್ವೇಷ, ಆಕ್ರೋಶ, ಗೆಳೆತನ, ಪ್ರೀತಿ, ಧರ್ಮ, ಅಧರ್ಮ ಅಂಶಗಳು ಇಲ್ಲಿ ಮೇಳೈಸಿವೆ. ಅವೆಲ್ಲವನ್ನೂ ರುಚಿಸುವಂತೆ ಕಟ್ಟಿಕೊಟ್ಟಿರುವ ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತದೆ.

ಒಂದು ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ ಅಂದರೆ, ಅದರಲ್ಲಿರುವ ಗಟ್ಟಿ ಕಥೆ ಮತ್ತು ಅದನ್ನು ಅಷ್ಟೇ ಅಂದವಾದ ನಿರೂಪಣೆ. ಇಲ್ಲಿ ದೊಡ್ಡ ತಾರಾಬಳಗವನ್ನೇ ಕಟ್ಟಿಕೊಂಡು ಎಲ್ಲರಿಗೂ ಆದ್ಯತೆ ಕೊಡುವುದು ತಲೆನೋವಿನ ಕೆಲಸವೇ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸುಂದರ “ದರ್ಶನ” ಮಾಡಿಸುವಲ್ಲಿ ತರುಣ್‌ ಸುಧೀರ್‌ ಯಶಸ್ವಿಯಾಗಿದ್ದಾರೆ.
ಸಿನಿಮಾದ ವೇಗ ಹೆಚ್ಚಿಸಿರೋದು ಚಿತ್ರಕಥೆ ಮತ್ತು ಹಿನ್ನೆಲೆ ಸಂಗೀತ. ಇವುಗಳಿಗೆ ಸಾಥ್‌ ನೀಡಿರೋದು ಸಂಕಲನ ಹಾಗು ಆಗಾಗ ಕಾಣುವ ಸುಂದರ ಹಾಡುಗಳು. ಎಲ್ಲವನ್ನೂ ತೆರೆಯ ಮೇಲೆ ಚೆಂದ ಕಾಣಿಸಿರುವ ಛಾಯಾಗ್ರಹಣ ಕೂಡ ಇಲ್ಲಿ ಕಮ್ಮಿ ಏನಿಲ್ಲ. ಪ್ರತಿಯೊಂದು ಪಾತ್ರದ ಮಾತುಗಳೂ ಕೂಡ ಚಿತ್ರದ ಬಿಗಿಹಿಡಿತಕ್ಕೆ ಕಾರಣವಾಗಿವೆ.

“ರಾಬರ್ಟ್‌” ಬಗ್ಗೆ ಇನ್ನೂ ಆಳವಾಗಿ ಹೇಳುವುದಾದರೆ, ತೆರೆಯ ಮೇಲೆ ಎಲ್ಲವೂ ಅದ್ಧೂರಿಯಾಗಿಯೇ ದರ್ಶನವಾಗಿದೆ. ಪ್ರತಿಯೊಂದು ದೃಶ್ಯ ಕೂಡ ಅದ್ಭುತ ಎನಿಸುವಷ್ಟರ ಮಟ್ಟಿಗೆ ಕಟ್ಟಿಕೊಡಲಾಗಿದೆ. ಅದು ಮಾತಿನ ಭಾಗವಿರಲಿ, ಹಾಡಿರಲಿ, ಫೈಟ್‌ ಇರಲಿ ಎಲ್ಲವೂ ಭರಪೂರವಾಗಿರಬೇಕು ಅಂದುಕೊಂಡೇ ನಿರ್ಮಾಪಕರು ಹಣ ಸುರಿದಿರುವುದು “ರಾಬರ್ಟ್‌” ನೋಡಿದವರಿಗೆ ಗೊತ್ತಾಗದೇ ಇರದು. ಒಂದು ಸಿನಿಮಾ ಅಚ್ಚುಕಟ್ಟಾಗಿ ಮೂಡಬೇಕಾದರೆ, ಕಥೆ ಇದ್ದರೆ ಸಾಲದು, ತೆರೆ ಮೇಲೆ ಕಾಣಿಸುವ ನಟ,ನಟಿ, ಕಲಾವಿದರಿದ್ದರೆ ಸಾಲದು, ತೆರೆ ಹಿಂದೆ ಇರುವವರ ಪಾತ್ರವೂ ಇರಲೇಬೇಕು. ಅದನ್ನಿಲ್ಲಿ ಕಾಣಬಹುದು. “ರಾಬರ್ಟ್‌” ಆರ್ಭಟಕ್ಕೆ, ಅಂದಕ್ಕೆ ಒಗ್ಗಟ್ಟಿನ ಮಂತ್ರ ಕಾರಣ ಎನ್ನಬಹುದು. ಟೀಮ್‌ ಕೆಲಸ ಒಂದೊಳ್ಳೆಯ ಸಿನಿಮಾ ಆಗಲು ಕಾರಣವಾಗಿದೆ ಅಂತ ಮುಲಾಜಿಲ್ಲದೆ ಹೇಳಬಹುದು.

ಸಿನಿಮಾದಲ್ಲಿ ತುಂಬಾ ಹೈಲೈಟ್‌ ಅಂದರೆ, ಪಂಚಿಂಗ್‌ ಡೈಲಾಗ್‌ಗಳು. ಇಲ್ಲಿ ಹೀರೋ ಬರೀ ಎದುರಾಳಿಗಳಿಗೆ ಪಂಚಿಂಗ್‌ ಡೈಲಾಗ್‌ ಕೊಡ್ತಾರೆ ಅಂದುಕೊಂಡರೆ ಆ ಊಹೆ ತಪ್ಪು. ಹೀರೋ ಇಲ್ಲಿ ಮನಮುಟ್ಟುವ ಮಾತುಗಳನ್ನೂ ಹೇಳುತ್ತಾನೆ, ಕಣ್ಣಂಚು ಒದ್ದೆಯಾಗಿಸುವಂತಹ ಮಾತನ್ನೂ ಹೊರಹಾಕುತ್ತಾನೆ. “ಮಡಿ ಮೈಲಿಗೆಗಿಂತ ಮನುಷ್ಯತ್ವ ಮುಖ್ಯ, ಒಳ್ಳೇತನಕ್ಕೆ ಪಾಪ ಅಂಟಲ್ಲ, ಕೆಟ್ಟತನಕ್ಕೆ ಪುಣ್ಯ ಬರಲ್ಲ, ಒಬ್ಬರ‌ ಲೈಫಲ್ಲಿ ಹೀರೋ ಆಗಬೇಕಾದರೆ, ಮತ್ತೊಬ್ಬರ ಲೈಫಲ್ಲಿ ವಿಲನ್‌ ಆಗಬೇಕು..”ಈ ರೀತಿಯ ಹಲವು ಡೈಲಾಗ್‌ಗಳು ಇಡೀ ಚಿತ್ರದುದ್ದಕ್ಕೂ ಬಂದು ಇನ್ನಷ್ಟು ರೋಚಕತೆ ಎನಿಸುತ್ತವೆ. ಕೆಲವು ಡೈಲಾಗ್‌ಗಳು ಭಾವುಕತೆಗೂ ದೂಡುತ್ತವೆ. ಇಲ್ಲಿ ರಾಬರ್ಟ್‌ ಬಗ್ಗೆ ಎಷ್ಟು ಹೇಳಿದರೂ, ತೆರೆ ಮೇಲಿನ ಅಬ್ಬರದ ಬಗ್ಗೆ ವರ್ಣಿಸಲು ಆಗಲ್ಲ. ಅಂತಹ ಅಬ್ಬರದ ದರ್ಶನ ಮಾಡಲೇಬೇಕೆನಿಸಿದರೆ ಮಿಸ್‌ ಮಾಡದೆ ರಾಬರ್ಟ್‌ ನೋಡಿ.

ಇದು ರಾಬರ್ಟ್‌ ಕಥೆ…
ರಾಬರ್ಟ್‌ ಮತ್ತು ರಾಘವ್‌ ಇಲ್ಲಿ ಇಬ್ಬರಿದ್ದಾರೆ. ಈ ಎರಡು ಪಾತ್ರಗಳಲ್ಲೂ ದರ್ಶನ್‌ ಅವರೇ ಇದ್ದಾರೆ. ಹಾಗಾದರೆ, ದರ್ಶನ್‌ ಅವರಿಲ್ಲಿ ಡಬ್ಬಲ್‌ ಪಾತ್ರ ಮಾಡಿದ್ದಾರಾ? ಈ ಪ್ರಶ್ನೆ ಕಾಡಿದರೂ ಅಚ್ಚರಿ ಇಲ್ಲ. ರಾಬರ್ಟ್‌ ಮತ್ತು ರಾಘವ್‌ ಎರಡೂ ಪಾತ್ರದಲ್ಲೂ ದರ್ಶನ್‌ ಇದ್ದಾರೆ. ಯಾಕೆ ಅನ್ನುವ ಕುತೂಹಲವಿದ್ದರೆ ಚಿತ್ರ ನೋಡಿ.
ಕಥೆ ಶುರುವಾಗೋದೇ ಉತ್ತರ ಪ್ರದೇಶದ ಕುಸ್ತಿ ಅಖಾಡದಲ್ಲಿ. ರಾಬರ್ಟ್‌ ಕಥೆ ಲಕ್ನೋದಲ್ಲಿ ನಡೆಯುತ್ತೆ ಎಂಬುದು ವಿಶೇಷ. ಅಲ್ಲಿ ದರ್ಶನ್‌ ಆಂಜನೇಯನಾಗಿಯೂ ಮಿಂಚುತ್ತಾರೆ! ಅರೇ, ಹೌದಾ ಯಾಕೆ ಅನ್ನುವುದಕ್ಕೆ ಚಿತ್ರ ನೋಡಬೇಕು. ರಾಬರ್ಟ್‌ ‌ಇಲ್ಲಿ ರಾಘವ್‌ ಆಗಿ ಬದಲಾಗ್ತಾನೆ ಎಂಬ ಸಣ್ಣ ಸುಳಿವು ಸಿಕ್ಕರೂ ಯಾಕೆ ಅನ್ನೋದೇ ರೋಚಕ. ಮೊದಲರ್ಧ ಇಲ್ಲಿ ರಾಘವನ ಅವತಾರ ತಾಳಿರುವ ದರ್ಶನ್‌, ದ್ವಿತಿಯಾರ್ಧದಲ್ಲಿ ರಾಬರ್ಟ್‌ ಆಗಿ ಅಬ್ಬರಿಸುತ್ತಾರೆ. ಅದಕ್ಕೆ ಹತ್ತಾರು ಟ್ವಿಸ್ಟ್‌ಗಳಿವೆ. ಅವುಗಳೇ ಚಿತ್ರದ ಜೀವಾಳ.

ಒಬ್ಬ ನಾನಾ. ಅವನೊಬ್ಬ ಅಂಡರ್‌ವರ್ಲ್ಡ್‌ ಡಾನ್.‌ ಇನ್ನೊಬ್ಬ ಸರ್ಕಾರ್‌ ಅನು ಆ ಡಾನ್‌ ಸಹೋದರ. ಒಂದು ಹಂತದಲ್ಲಿ ಇಬ್ಬರೂ ಮಂಗಳೂರಿನ ಹಿಡಿತಕ್ಕಾಗಿ ಬೇರೆ ಬೇರೆ ಆಗ್ತಾರೆ. ನಾನಾ ಬಳಿ ರಾಬರ್ಟ್-ರಾಘವ ಕೆಲಸ ಮಾಡ್ತಾರೆ. ಸರ್ಕಾರ್‌ ದಂಧೆಗಳಿಗೆ ಇವರಿಬ್ಬರೂ ಅಡ್ಡವಾಗ್ತಾರೆ. ಒಂದು ಘಟನೆಯಲ್ಲಿ ನಾನಾ ಪುತ್ರನ ಕೆಟ್ಟ ಕೆಲಸಕ್ಕೆ ಬೇಸತ್ತ ರಾಬರ್ಟ್-ರಾಘವ ಅವನನ್ನು ಕೊಲೆ ಮಾಡ್ತಾರೆ. ಅತ್ತ, ಒಂದು ಪ್ರೀತಿ ಕಥೆ ಕೂಡ ಚಿಗುರೊಡೆಯುತ್ತೆ. ಮುಂದೆ ರಾಘವ ಕೊಲೆಯಾಗ್ತಾನೆ. ರಾಬರ್ಟ್‌ ಕೊಲೆಗಾರ ಅನ್ನೋ ಪಟ್ಟ ಬರುತ್ತೆ. ಮಂಗಳೂರಿಂದ ರಾಬರ್ಟ್‌ ಲಕ್ನೋಗೆ ಶಿಫ್ಟ್‌ ಆಗ್ತಾನೆ. ಮುಂದೇನಾಗುತ್ತೆ ಅನ್ನೋದನ್ನು ತೆರೆ ಮೇಲೆ ನೋಡಬೇಕು.

ಚಿತ್ರದಲ್ಲಿ ಜಗಪತಿ ಬಾಬು ನಾನಾ ಪಾತ್ರದಲ್ಲಿ ಮಿಂಚಿದ್ದಾರೆ. ಒಂದೊಳ್ಳೆಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರವಿಶಂಕರ್‌ ಕೂಡ ಎಂದಿನಂತೆ ಘರ್ಜಿಸಿದ್ದಾರೆ, ಅಲ್ಲಲ್ಲಿ ನಗಿಸೋ ಪ್ರಯತ್ನವನ್ನೂ ಮಾಡಿದ್ದಾರೆ. ದರ್ಶನ್‌ ಅವರ ಪಾತ್ರದ ಬಗ್ಗೆ ಹೇಳಲೇಬೇಕು. ಬಾಸು ಕೊಂಚ ರೌಡಿನೇ. ಆ ಪಾತ್ರವನ್ನು ಅಷ್ಟೇ ಅಂದವಾಗಿಸಿದ್ದಾರೆ. ದರ್ಶನ್‌ ಅವರ ಸಿನಿಮಾ ಕೆರಿಯರ್‌ನಲ್ಲಿ ಇರುವ ಚಿತ್ರಗಳ ಪಾತ್ರಗಳ ಬಗ್ಗೆ ಹೆಸರಿಸುವುದಾದರೆ “ರಾಬರ್ಟ್‌” ಚಿತ್ರವನ್ನು ಪ್ರಧಾನವಾಗಿ ತೆಗೆದುಕೊಳ್ಳಲ್ಲಡ್ಡಿಯಿಲ್ಲ. ಅವರ ಅಭಿನಯ ಇಲ್ಲಿ ಬೇರೆ ರೀತಿಯದ್ದೇ ಖುಷಿ ಕೊಡುತ್ತದೆ. ಎರಡು ಶೇಡ್‌ ಇದ್ದರೂ, ಎರಡರಲ್ಲೂ ಔಟ್‌ ಸ್ಟ್ಯಾಂಡಿಂಗ್!‌ ವಿಶೇಷವಾಗಿ ತೊತ್ಲ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಎಂದಿಗಿಂತಲೂ ಜಾಸ್ತಿ ಪಂಚಿಂಗ್‌ ಡೈಲಾಗ್‌, ಫೈಟ್‌ನಲ್ಲಿ ಇಷ್ಟವಾದರೆ, ಡ್ಯಾನ್ಸ್‌ನಲ್ಲಂತೂ ನೋಡಗರನ್ನೂ ಸ್ಟೆಪ್‌ ಹಾಕುವ ರೀತಿ ಹೆಜ್ಜೆ ಹಾಕಿ ಶಿಳ್ಳೆ,ಚಪ್ಪಾಳೆಗೆ ಕಾರಣರಾಗುತ್ತಾರೆ. ಇನ್ನು, ವಿನೋದ್‌ ಪ್ರಭಾಕರ್‌ ಕೂಡ ಇಲ್ಲಿ ಗೆಳೆಯನ ಪಾತ್ರದಲ್ಲಿ ಮಿಂಚಿದ್ದಾರೆ. ಅವರಿಗೂ ಇಲ್ಲಿ ತೂಕವಾದ ಪಾತ್ರ ಸಿಕ್ಕಿದ್ದು, ಅಷ್ಟೇ ಅದ್ಭುತವಾಗಿಯೇ ನಿರ್ವಹಿಸಿದ್ದಾರೆ. ಇವರಿಬ್ಬರ ನಡುವೆ ಒಂದು ಗೆಳೆತನ, ಕಾದಾಟವಿದೆ. ಅದನ್ನು ನೋಡಿದವರಿಗೆ “ನವಗ್ರಹ” ಸಿನಿಮಾ ನೆನಪಾಗದೇ ಇರದು. ನಾಯಕಿ ಆಶಾಭಟ್ ಮೊದಲ ಚಿತ್ರವಾದರೂ, ಇಷ್ಟವಾಗುತ್ತಾರೆ. ಹಾಡು-ಕುಣಿತ, ಮಾತುಕತೆ ಎಲ್ಲದರಲ್ಲೂ ಬೋಲ್ಡ್.‌ ದೇವರಾಜ್‌, ಅವಿನಾಶ್‌, ಅಶೋಕ್‌, ಜಾನ್ಸನ್‌ ಡಿಸೋಜ, ಸೋನಾಲ್‌ ಮಾಂತೆರೊ, ಶಿವರಾಜ್‌ ಕೆ.ಆರ್.ಪೇಟೆ, ಚಿಕ್ಕಣ್ಣ ರವಿಚೇತನ್‌, ರವಿಕಿಶನ್‌, ಕರಿಸುಬ್ಬು, ಅಭಿ ದ್ವಾರಕೀಶ್‌, ಎಲ್ಲರೂ ಸಿಕ್ಕ ಪಾತ್ರವನ್ನು ಚೊಕ್ಕವಾಗಿಯೇ ಮಾಡುವ ಮೂಲಕ ಗಮನಸೆಳೆಯುತ್ತಾರೆ.
ಅರ್ಜುನ್‌ ಜನ್ಯ ಸಂಗೀತದ ಎಲ್ಲಾ ಹಾಡುಗಳು ಗುನುಗುವಂತಿವೆ. ಸುಧಾಕರ್‌ ಎಸ್.ರಾಜ್‌ ಅವರ ಕ್ಯಾಮೆರಾ ಕೈಚಳಕದಲ್ಲಿ “ರಾಬರ್ಟ್‌” ಅತೀ ಸುಂದರ. ಇನ್ನು, ಇಡೀ ಚಿತ್ರದಲ್ಲಿ ರಾಜಶೇಖರ್‌ ಚಂದ್ರಮೌಳಿ ಮಾತುಗಳು ಹಿಡಿದಿಡುತ್ತವೆ. ರಾಮ್‌ ಲಕ್ಷ್ಮಣ್‌, ಅನ್ಬು ಅರಿವು, ವಿನೋದ್‌ ಅವರ ಸ್ಟಂಟ್ಸ್‌ ಚಿತ್ರದ
ಮತ್ತೊಂದು ಹೈಲೈಟ್.‌ ಕೆ.ಎಂ.ಪ್ರಕಾಶ್‌ ಅವರ ಚುರುಕಾದ ಸಂಕಲನ, ವಿ.ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಚಿತ್ರದ ಜೀವಂತಿಕೆಗೆ ಸಾಕ್ಷಿ.

ನಿರ್ದೇಶನ: ತರುಣ್ ಸುಧೀರ್
ನಿರ್ಮಾಣ: ಉಮಾಪತಿ ಶ್ರೀನಿವಾಸ್
ಸಂಗೀತ: ಅರ್ಜುನ್ ಜನ್ಯ-ಹರಿಕೃಷ್ಣ
ತಾರಾಗಣ: ದರ್ಶನ್, ಜಗಪತಿಬಾಬು, ಜಾನ್ಸನ್‌ ಡಿಸೋಜ, ಆಶಾಭಟ್, ಸೋನಾಲ್‌ ಮಾಂತೆರೊ, ವಿನೋದ್ ಪ್ರಭಾಕರ್, ದೇವರಾಜ್, ಅವಿನಾಶ್, ಚಿಕ್ಕಣ್ಣ, ಅಶೋಕ್ ಇತರರು.

  • ವಿಜಯ್‌ ಭರಮಸಾಗರ

Categories
ರಿ ವಿವ್ಯೂ ಸಿನಿ ಸುದ್ದಿ

ಯಾರೋ ಹೆಣೆದ ಬಲೆಗೆ ಸೆರೆ ಸಿಕ್ಕ ಜೀವ

ಆಸೆ -ದುರಾಸೆ, ಸುಳ್ಳು, ಮೋಸಕ್ಕೆ ಬೆಂದ ಮನಸು!

ಚಿತ್ರ ವಿಮರ್ಶೆ

“ನೀನ್‌ ಯಾಕೆ ಈ ಕೊಲೆ ಮಾಡಿದೆ…”
– ಯಾರೂ ಇರದ ಆ ಮನೆಯೊಳಗೆ ಹೋಗಿ ಸಿಲುಕುವ  ಯುವಕನೊಬ್ಬನ ಮೊಬೈಲ್‌ ಕರೆಯಲ್ಲಿ, ಹೆಣ್ಣು ಧ್ವನಿಯೊಂದು ಈ ಪ್ರಶ್ನೆ ಕೇಳುತ್ತೆ. ಅಷ್ಟಕ್ಕೂ ಅಲ್ಲಿ ಆ ಕೊಲೆ ಮಾಡಿದ್ದು ಯಾರು, ಯಾಕೆ, ಆ ಹೆಣ್ಣು ಧ್ವನಿ ಯಾರದ್ದು, ಆ ಕೊಲೆ  ಮಾಡಿದ್ದು ಆ ಯುವಕನಾ ಅಥವಾ ಬೇರೆ ಯಾರದ್ದಾದರೂ ಕೈವಾಡವಿದೆಯಾ?
– ಹೀಗೆ ಇವಿಷ್ಟೂ ಕುತೂಹಲದೊಂದಿಗೆ ಅಂತ್ಯದವರೆಗೂ ಸಾಗುವ “ಅರಿಷಡ್ವರ್ಗ” ಚಿತ್ರದ ಒನ್‌ಲೈನ್.

ಒಂದು ಕೊಲೆ ಸುತ್ತ ಸಾಗುವ‌ ರೋಚಕ ಕಥಾಹಂದರ ಎನ್ಲಡ್ಡಿಯಿಲ್ಲ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕ್ರೈಮ್‌ ಥ್ರಿಲ್ಲರ್‌ ಸ್ಟೋರಿ ಬಂದಿವೆ. ಮರ್ಡರ್‌ ಮಿಸ್ಟ್ರಿ ಕಥೆಗಳು ಬಂದು ಹೋಗಿವೆ. ಅಂಥದ್ದೇ, ಸಾಕಷ್ಟು ತಿರುವುಗಳ ಜೊತೆಗೆ ಮುಂದೇನಾಗುತ್ತೆ ಎಂಬ ಸಣ್ಣ ಆತಂಕದಲ್ಲೇ ನೋಡಿಸಿಕೊಂಡು ಹೋಗುವ ತಾಕತ್ತು ಈ ಚಿತ್ರಕ್ಕಿದೆ ಎಂಬುದೇ ಸಮಾಧಾನ. ನಿರ್ದೇಶಕ ಅರವಿಂದ್‌ ಕಾಮತ್‌ ಕಟ್ಟಿಕೊಟ್ಟಿರುವ ಕಥೆಯಲ್ಲಿ ಗಟ್ಟಿತನವಿದೆ. ಹೆಣೆದಿರುವ ಚಿತ್ರಕಥೆಯಲ್ಲಿ ಬಿಗಿ ಹಿಡಿತವಿದೆ. ಏನು ಹೇಳಬೇಕು, ಎಷ್ಟು ಹೇಳಬೇಕು, ಯಾವುದನ್ನು ತೋರಿಸಬೇಕು ಎಂಬುದರ ಸ್ಪಷ್ಟತೆ ಇದೆ. ಹಾಗಾಗಿ “ಅರಿಷಡ್ವರ್ಗ” ಯಾವುದೇ ಗೊಂದಲವಿಲ್ಲದೆ, ಎಲ್ಲಿಯೂ ಪ್ರಶ್ನೆಗಳಿಗೆ ಆಸ್ಪದ ನೀಡದೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ.


ಮೊದಲೇ ಹೇಳಿದಂತೆ ಇದೊಂದು ಕ್ರೈಮ್‌ ಕುರಿತಾದ ಕಥೆ. ಒಂದು ಕೊಲೆಯ ಸುತ್ತ ನಡೆಯುವ ಕಥೆಗೆ ಅಷ್ಟೇ ಇಷ್ಟವಾಗುವಂತಹ ಚಿತ್ರಕಥೆ ಕೂಡ ಚಿತ್ರಕ್ಕೆ ಸಾಥ್‌ ನೀಡಿರುವುದೇ ಚಿತ್ರದ ಮೆಚ್ಚುಗೆಗೆ ಕಾರಣ. ಇಲ್ಲಿ ಹೊಡಿ, ಬಡಿ,ಕಡಿ ಎಂಬ ಸದ್ದಿನ ಆರ್ಭಟವಿಲ್ಲ. ತಲ್ಲಣಿಸೋ ಕಥೆಯೊಳಗೆ ಬಿಸಿಯುಸಿರಿನ ಸ್ಪರ್ಶ ಕೊಡುವ ಮೂಲಕ ಹಿಡಿಯಷ್ಟು ಕಾಮ, ಕ್ರೋಧ, ಬೊಗಸೆಯಷ್ಟು ಆಸೆ, ದುರಾಸೆ,ಬಯಕೆ, ಸುಳ್ಳು, ಅಧಿಕಾರ, ನಿಯತ್ತು, ಅಸಹಾಯಕತೆ… ಇವೆಲ್ಲದರ ಮಿಶ್ರಣದ ಜೊತೆ ಥ್ರಿಲ್‌ ಎನಿಸುವ ನಿರೂಪಣೆಯೊಂದಿಗೆ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳು ಒಂದೊಂದು ರೀತಿ ತಪ್ಪಾಗಿ ಅರ್ಥೈಸಿಕೊಂಡು ಕಾಣದ ಸುಳಿಯಲ್ಲಿ ಸಿಲುಕಿ ಆ ಸಂಕಷ್ಟಗಳಿಂದ ಹೊರಬರಲು ಹೆಣಗಾಡುವ ಹೋರಾಟವೇ ಚಿತ್ರದ ಹೈಲೈಟ್.‌ ಆ ಹೋರಾಟ, ಚೀರಾಟದ ಚಿತ್ರಣವನ್ನು ಅಷ್ಟೇ ಪರಿಣಾಮಕಾರಿಯಾಗಿಸಿರುವ ನಿರ್ದೇಶಕರ ಜಾಣತನ ಇಲ್ಲಿ ಇಷ್ಟವಾಗುತ್ತೆ.


ಇಷ್ಟಕ್ಕೂ ಕಥೆ ಏನು?
ಮನೆಯೊಂದರಲ್ಲಿ ಚಿತ್ರ ನಿರ್ಮಾಪಕ, ಉದ್ಯಮಿ ಮಂಜುನಾಥ ಭಟ್‌ ಅವರ ಕೊಲೆ ನಡೆದಿರುತ್ತೆ. ಈ ಸಂಬಂಧ ಆ ಮನೆಯಲ್ಲಿದ್ದ ಮೂವರು ಶಂಕಿತರನ್ನು ಬಂಧಿಸಲಾಗುತ್ತೆ. ಅಷ್ಟಕ್ಕೂ ಆ ಮನೆಯಲ್ಲಿನ ಕೊಲೆಗೂ ಆ ಮೂವರು ಶಂಕಿತರಿಗೆ ಸಂಬಂಧವಿದೆಯಾ? ಗೊತ್ತಿಲ್ಲ. ಆ ಕುರಿತು ನಡೆಯುವ ತನಿಖೆಯೇ ಇಡೀ ಸಿನಿಮಾದ ಜೀವಾಳ. ಇಲ್ಲಿ ಯಾರೋ ಯಾರಿಗಾಗಿಯೋ ದಾಳವಾಗುತ್ತಾರೆ ಅನ್ನುವ ಅಂಶ ಮೆಲ್ಲನೆ ಗೊತ್ತಾಗುತ್ತಿದ್ದಂತೆ, ಆ ಕೊಲೆಯ ಹಿಂದಿನ ರಹಸ್ಯಕ್ಕೆ ಮತ್ತಷ್ಟು ತಿರುವು ಸಿಗುತ್ತಾ ಹೋಗುತ್ತದೆ. ಆ ತಿರುವಿನಲ್ಲೇ ಸಾಕಷ್ಟು ರೋಚಕತೆ ಇದೆ. ಫಿಫ್ಟಿ ಪ್ಲಸ್‌ ಉದ್ಯಮಿಯನ್ನು ಮದುವೆಯಾದ ಯುವತಿಯ ಬಯಕೆ ಒಂದೆಡೆಯಾದರೆ, ಅದನ್ನು ಈಡೇರಿಸಲು ಆಗದೆ ಒಳಗೊಳಗೇ ನೋವು ಅನುಭವಿಸುವ ಉದ್ಯಮಿಯ ಸ್ಥಿತಿ ಇನ್ನೊಂದೆಡೆ, ಈ ಮಧ್ಯೆ ತಾನು ನಟಿ ಆಗಬೇಕು ಅನ್ನೋ ಮತ್ತೊಬ್ಬ ಹುಡುಗಿಯ ಆಸೆ, ನಾನೊಬ್ಬ ಹೀರೋ ಆಗಬೇಕು ಅನ್ನೋ ಪ್ರೀತಿಯೂ ಹುಡುಗನೊಬ್ಬನದು ಅದೇ ಕನಸು. ಉದ್ಯಮಿ ಪತ್ನಿಯ ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಗಬಹುದೇನೋ ಎಂಬ ಆಸೆಯ ಕಂಗಳಲ್ಲಿ ನಟಿಯ ಹುಚ್ಚು ಹಿಡಿಸಿಕೊಂಡ ಹುಡುಗಿ, ಹೀರೋ ಆಗುವ ಕನಸು ಕಟ್ಟಿಕೊಂಡ ಹುಡುಗ  ಅವರ ಮನೆಗೆ ಬಂದಾಗ, ಅಲ್ಲಿ ನಡೆಯೋ ದೃಶ್ಯವೇ ಬೇರೆ. ಅಲ್ಲಿ ಉದ್ಯಮಿ ಕೊಲೆ ನೋಡಿ ದಂಗಾಗುತ್ತಾರೆ. ಅವರಷ್ಟೇ ಅಲ್ಲ, ಆ ಉದ್ಯಮಿ ಮನೆಗೆ ಕನ್ನ ಹಾಕಲು ಸಂಚು ರೂಪಿಸುವ ಕಳ್ಳನೊಬ್ಬನೂ ಆ ಮನೆಗೆ ಎಂಟ್ರಿಯಾಗುತ್ತಾನೆ. ಅಲ್ಲಿಗೆ ಆ ಮೂವರು ಕೊಲೆಯಾದ ಉದ್ಯಮಿ ಮನೆಯಲ್ಲಿ ಬಂಧಿಯಾಗುತ್ತಾರೆ. ಹೊರ ಹೋಗೋಕೂ ಭಯ, ಆತಂಕ ಕಾರಣ, ಎಲ್ಲವೂ ಆ ಮನೆಯೊಳಗಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆ. ಮುಂದೆ ಪೊಲೀಸ್‌ ತನಿಖೆ ಶುರುವಾಗುತ್ತೆ. ಇಲ್ಲಿ ಮುಖ್ಯವಾಗಿ “ಸಂಬಂಧ”ದ ಅಂಶವೂ ಗಮನಿಸಲೇಬೇಕು. ಅದನ್ನೂ ಕೂಡ ವಾಸ್ತವತೆಗೆ ಹತ್ತಿರವಾಗುವಂತೆ ಕಟ್ಟಿಕೊಡಲಾಗಿದೆ. ಹಾಗಾದರೆ, ಆ ಕೊಲೆ ಮಾಡಿದ್ದು ಯಾರು? ಈ ಪ್ರಶ್ನೆಯನ್ನಿಟ್ಟುಕೊಂಡು ಕೊನೆಯವರೆಗೂ ಕುತೂಹಲದೊಂದಿಗೆ ಸಿನಿಮಾ ತೋರಿಸಿರುವ ರೀತಿಗೆ ಮೆಚ್ಚಬೇಕು. ಎಲ್ಲಾ ಸರಿ, ಕೊಲೆಗಾರ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾದರೆ, “ಅರಿಷಡ್ವರ್ಗ” ನೋಡಬೇಕು.

ನಿರ್ದೇಶಕ ಅರವಿಂದ್‌ ಕಾಮತ್‌  ಕಥೆ, ಚಿತ್ರಕಥೆ, ಸಂಭಾಷಣೆಯನ್ನಷ್ಟೇ ಅಲ್ಲ, ನೋಡುಗರಿಗೂ ಅಂದಗಾಣಿಸುವಂತೆ ನಿರೂಪಿಸಿ, ಪ್ರತಿ ಪಾತ್ರಗಳನ್ನೂಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲರ್ದ ಕುತೂಹಲ ಕೆರಳಿಸುತ್ತಾ ಸಾಗುವ ಸಿನಿಮಾ ದ್ವಿತಿಯಾರ್ದದಲ್ಲಿ ಆ ಕುತೂಹಲ ದುಪ್ಪಟ್ಟಾಗುತ್ತೆ. ಇಷ್ಟಕ್ಕೆಲ್ಲಾ ಕಾರಣ, ಮತ್ತದೇ ಕಥೆ, ಪಾತ್ರಗಳ ಆಯ್ಕೆ, ಅವಿನಾಶ್‌ ಎಂದಿಗಿಂತಲೂ ಇಲ್ಲಿ ಇಷ್ಟವಾಗುತ್ತಾರೆ. ನಂದ ಗೋಪಾಲ್‌ ತನಿಖಾಧಿಕಾರಿಯಾಗಿ ಗಮನಸೆಳೆಯುತ್ತಾರೆ. ಉಳಿದಂತೆ
ಅಂಜು ಆಳ್ವಾ, ಸಂಯುಕ್ತಾ ಹೊರನಾಡು, ನಂದಗೋಪಾಲ್‌, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್‌ ಕುಪ್ಳಿಕರ್‌ ಇವರೆಲ್ಲರೂ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಚಿತ್ರದ ವೇಗ ಹೆಚ್ಚಿಸಿರೋದು ಬಾಲಾಜಿ ಮನೋಹರ್‌ ಛಾಯಾಗ್ರಹಣ ಮತ್ತು ಅರವಿಂದ್‌ ಅವರ ಸಂಕಲನ.  ಉದಿತ್‌ ಹರಿದಾಸ್‌ ಸಂಗೀತವೂ ಸ್ಕೋರ್‌ ಮಾಡಿದೆ.  “ಭಂಗಿ ಸೇದೋ ಭಂಗಿ ನೋವುಗಳೆಲ್ಲ ಹೋಗಲಿ ಹಿಂಗಿ..”  ಸೇರಿದಂತೆ ಅಲ್ಲಲ್ಲಿ ಕೇಳುವ ಹಾಡು ಕಥೆರೆ ಪೂರಕ ಎನಿಸಿದೆ.


ಕೊನೇ ಮಾತು- ಒಂದು ಕಥೆಯನ್ನು ಹೇಗೆ ಹೇಳಬೇಕು, ಹೇಗೆ ತೋರಿಸಬೇಕು, ನೋಡುಗರನ್ನು ಎಷ್ಟರಮಟ್ಟಿಗೆ ಹಿಡಿದು ಕೂರಿಸಬೇಕು ಎಂಬ ಜಾಣ್ಮೆಯೇ “ಅರಿಷಡ್ವರ್ಗ” ನೋಡುವಿಕೆಗೆ ಕಾರಣ.

ಚಿತ್ರ : ಅರಿಷಡ್ವರ್ಗ
ನಿರ್ಮಾಣ : ಕನಸು ಟಾಕೀಸ್‌
ನಿರ್ದೇಶನ: ಅರವಿಂದ್‌ ಕಾಮತ್‌
ತಾರಾಗಣ: ಅವಿನಾಶ್‌,  ಸಂಯುಕ್ತಾ ಹೊರನಾಡು, ಅಂಜು ಆಳ್ವಾ ನಾಯಕ್‌, ನಂದಗೋಪಾಲ್‌, ಗೋಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬಯಲು, ಅರವಿಂದ್‌ ಕುಪ್ಳಿಕರ್‌, ಮಹೇಶ್‌ ಬಂಗ್‌ ಇತರರು.

 

Categories
ರಿ ವಿವ್ಯೂ ಸಿನಿ ಸುದ್ದಿ

ಅಸಹಾಯಕಿ ಗೀತಾಳ ಡಿಮ್ಯಾಂಡ್‌ಗೆ ಫಿದಾ

ಇದು ಮಂಸೋರೆಯ ಮನಸಾರೆ ಒಪ್ಪುವ, ಅಪ್ಪುವ ಸಿನಿಮಾ

ಯಜ್ಞ ಶೆಟ್ಟಿ

ಚಿತ್ರ ವಿಮರ್ಶೆ

ಚಿತ್ರ : ಆಕ್ಟ್ 1978
ನಿರ್ಮಾಣ : ಆರ್. ದೇವರಾಜ್
ನಿರ್ದೇಶನ : ಮಂಸೋರೆ
ತಾರಾಗಣ : ಯಜ್ಞ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿ.ಸರೇಶ್, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್,
ಅವಿನಾಶ್, ಸುಧಾ ಬೆಳವಾಡಿ, ಶೋಭ್ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ ಇತರರು.

“ಅದ್ಧೂರಿ ಮದುವೆ ಮಾಡೋರು, ಲಕ್ಷಾಂತರ ರುಪಾಯಿ ಬ್ಯಾಂಕ್‌ ಸಾಲ ಕಟ್ಟೋರು, ಕೋಟಿ ಬೆಲೆ ಬಾಳುವ ಮನೆ ಕಟ್ಟೋರು ನಿಮಗೇ ಕಷ್ಟ ಬಂದಾಗ ಮನೆ, ‌ಮಕ್ಕಳು ನೆನಪಾಗುತ್ತಾರೆ. ಆದರೆ, ಸಹಾಯ ಕೇಳಿ ನಿಮ್ಮ ಬಳಿ ಬರುವ ಜನರ ಕಷ್ಟ ಅರ್ಥವಾಗಲ್ಲ. ನಿಮಗೆ ಲಂಚ ಕೋಡೋಕೆ ನಾವು ಸಾಲ ಮಾಡಬೇಕು. ಚಿನ್ನದ ಓಲೆ, ಸರ ಅಡವಿಟ್ಟು ನಿಮ್ಮ ಕಮಿಟ್‌ಮೆಂಟ್‌ಗಳಿಗೆ ನಮ್‌ ಹಣ ಬೇಕು. ದುಡಿದ್‌ ತಿನ್ನೋರ ಜೊತೆ ಬಡಿದ್‌ ತಿಂತಿದ್ದೀರಲ್ಲ…”
– ಹೀಗೆ ನೋವು ತುಂಬಿದ ಮಾತುಗಳಲ್ಲಿ ಆ ಅಸಹಾಯಕ ತುಂಬು ಗರ್ಭಿಣಿ ಹೇಳುತ್ತಾ ಹೋದರೆ, ಅವಳ ಮುಂದೆ ತಪ್ಪು ಮಾಡಿ ಕೂತವರ ಮುಖ ಜೋತುಬಿದ್ದಿರುತ್ತೆ. ಅಂದಹಾಗೆ, ಇದು ಕೊರೊನಾ ಹಾವಳಿ ನಡುವೆಯೂ ಚಿತ್ರಮಂದಿರಕ್ಕೆ ಧೈರ್ಯವಾಗಿಯೇ ಲಗ್ಗೆ ಇಟ್ಟ “ಆಕ್ಟ್‌ 1978” ಚಿತ್ರದೊಳಗಿನ ಸೂಕ್ಷ್ಮತೆಯ ವಿಷಯ. ಈ ವಾರ ತೆರೆಗೆ ಅಪ್ಪಳಿಸಿರುವ “ಆಕ್ಟ್‌ 1978” ನೋಡುಗರಲ್ಲಿ ಒಂದಷ್ಟು ಕಿಚ್ಚೆಬ್ಬಿಸುವುದಷ್ಟೇ ಅಲ್ಲ, ಅತೀ ಅಸಹಾಯಕ ಜನರ ಗೋಳು, ನೋವು, ಕಷ್ಟ-ನಷ್ಟಗಳಿಗೆ ಮಿಡಿಯುವ ತುಡಿತ ಹೆಚ್ಚಾಗದೇ ಇರದು.

ಬಿ.ಸುರೇಶ, ನಟ

ಹೌದು, ಸೂಕ್ಷ್ಮ ಸಂವೇದನೆಯ ನಿರ್ದೇಶಕ ಮಂಸೋರೆ ಅವರ ಮೇಲಿಟ್ಟ ನಂಬಿಕೆ ಸುಳ್ಳಾಗಿಲ್ಲ. ಭರವಸೆಯೂ ಹುಸಿಯಾಗಿಲ್ಲ. ನಿರೀಕ್ಷೆ ಉಳಿಸಿಕೊಂಡಿದ್ದಾರೆ ಅನ್ನುವುದಕ್ಕೆ “ಆಕ್ಟ್‌ 1978” ಕೊಡುವ ಭಾವುಕತೆಯ ಹೂರಣವೇ ಸಾಕ್ಷಿ. ಅವರು ಈ ಬಾರಿ ಜನರ ಮುಂದಿಟ್ಟಿರುವ ವಿಷಯ ಹೊಸದಲ್ಲದಿದ್ದರೂ, ಹೇಳುವ ಮತ್ತು ಅದನ್ನು ಅಷ್ಟೇ ಜಾಣತನದಿಂದ ಕಟ್ಟಿಕೊಡಲು ಮಾಡಿರುವ ಪ್ರಾಮಾಣಿಕ ಪ್ರಯತ್ನ ಮೆಚ್ಚಲೇಬೇಕು. ವಾಸ್ತವ ಅಂಶಗಳು ಜನರಿಗೆ ಗೊತ್ತಿದ್ದರೂ, ಅದನ್ನು ಹೇಗೆಲ್ಲಾ ತೋರಿಸಿ, ಜನರನ್ನು ಹತ್ತಿರ ಬರಮಾಡಿಕೊಳ್ಳಬೇಕು ಎಂಬ ಕಲೆ ಮಂಸೋರೆ ಅವರಿಗೆ ಗೊತ್ತಿದೆ. ಆ ಕಾರಣದಿಂದಲೇ ಅವರ ಈ “ಆಕ್ಟ್‌ 1978” ವಿಶೇಷತೆ ಎನಿಸುತ್ತೆ.

 

ನಿರ್ದೆಶಕ ಮಂಸೋರೆ ಕಟ್ಟಿಕೊಟ್ಟಿರುವ ಕಥೆಯಲ್ಲಿ ಗಟ್ಟಿತನವಷ್ಟೇ ಅಲ್ಲ, ಅಲ್ಲೊಂದು‌ ಸೂಕ್ಮತೆಯೂ ಇದೆ. ಅವರು ಪೋಣಿಸಿರುವ ಪಾತ್ರಗಳಿರಲಿ, ಮಾತುಗಳಿರಲಿ, ಸನ್ನಿವೇಶಗಳಿರಲಿ ಎಲ್ಲವೂ ಸಂದರ್ಭಕ್ಕನುಗುಣವಾಗಿಯೇ ಜನರನ್ನು ಹತ್ತಿರವಾಗಿಸಿಕೊಳ್ಳುತ್ತಲೇ, ನೋಡುವ ಕುತೂಹಲ ಹೆಚ್ಚಿಸುತ್ತ ಹೋಗುತ್ತದೆ. ಸರ್ಕಾರಿ ಕಚೇರಿಯಲ್ಲಿ ನಡೆಯುವ ಒಂದೇ ಒಂದು ಪರಿಹಾರದ ಹಣದ ವಿಷಯ ಇಟ್ಟುಕೊಂಡು ಹೆಣೆದಿರುವ ಕಥೆಯಲ್ಲಿ ಭಾವನಾತ್ಮಕ ಸಂಬಂಧಗಳ ಸುಳಿ ಇದೆ. ಅಲ್ಲೊಂದಷ್ಟು ನೋವಿನ ಛಾಯೆ ಇದ್ದರೂ, ಹೋರಾಟದ ಕಿಚ್ಚು ಎದ್ದು ಕಾಣುತ್ತದೆ. ಸಮಾಜದೊಳಗಿರುವ ಕೆಟ್ಟ ವ್ಯವಸ್ಥೆಯ ಅನಾವರಣಗೊಳ್ಳುತ್ತದೆ. ಆ ವ್ಯವಸ್ಥೆ ಸುತ್ತ ತಿರುಬೋಕಿಗಳಂತೆ ತಿರುಗುವ ಪಾತ್ರಗಳ ಕಪಟ, ಲಂಚಗುಳಿತನ, ಅಲಸ್ಯೆ ಮನೋಭಾವ, ನಿರ್ಲಕ್ಷ್ಯತನ, ಬೇಕಾಬಿಟ್ಟಿ ಮಾತಿನ ವರ್ತನೆ, ದುರಾಸೆ, ದುರಾಲೋಚನೆ ಹೀಗೆ ನಾನಾ ರೀತಿಯ ಕೆಟ್ಟ ಯೋಚನೆಯ ಮನಸ್ಸುಗಳ ಸುತ್ತಾಟ ಗಿರಕಿಹೊಡೆಯುತ್ತದೆ.

ಇದಿಷ್ಟೂ ಈ ಸಮಾಜದೊಳಗಿರುವ ವ್ಯವಸ್ಥೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತೋರಿಸುವ ಪ್ರಯತ್ನದಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.
ಒಂದು ಅಚ್ಚುಕಟ್ಟಾದ ಕಥೆಗೆ, ರೋಚಕ ಎನಿಸುವ ಚಿತ್ರಕಥೆಯೇ ಇಲ್ಲಿ ಜೀವಾಳ. ಇನ್ನುಳಿದಂತೆ ಚಿತ್ರದ ಪ್ರತಿ ಮೂಲೆ ಮೂಲೆಗೂ ಹೆಗಲು ಕೊಟ್ಟಿರೋದು ಕಾಣಸಿಗುವ ಪಾತ್ರಗಳು. ಇಲ್ಲಿ ಯಾರು ಹೆಚ್ಚಲ್ಲ, ಯಾರೂ ಕಮ್ಮಿ ಅಲ್ಲ. ಅಷ್ಟರಮಟ್ಟಿಗೆ ಅಷ್ಟೂ ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಪ್ರಯತ್ನವನ್ನೂ ಇಲ್ಲಿ ಮಾಡಿರುವುದು “ಆಕ್ಟ್‌ʼನ ವಿಶೇಷತೆ ಎನ್ನಬಹುದು.

ಸಂಚಾರಿ ವಿಜಯ್‌, ನಟ

ಗೀತಾಳ ಅಸಹಾಯಕ ಬದುಕು…
ಇಡೀ ಚಿತ್ರದ ಕೇಂದ್ರಬಿಂದು ಗೀತಾ ( ಯಜ್ಞ ಶೆಟ್ಟಿ) ತನ್ನ ಕುಟುಂಬ ಕಳೆದುಕೊಂಡ ಆಕೆ, ತನ್ನ ಒಡಲಲ್ಲಿರುವ ಕಂದಮ್ಮನಿಗಾಗಿ ಬದುಕು ಸವೆಸಬೇಕು ಎಂಬ ಒಂದೇ ಒಂದು ಹಠದಿಂದಾಗಿ, ಬದುಕನ್ನು ಪ್ರೀತಿಸುತ್ತಲೇ ವ್ಯವಸ್ಥೆಯೊಳಗೆ ನೋವುಂಡುಕೊಂಡೇ ಬದುಕು ದೂಡುತ್ತಾಳೆ. ಒಬ್ಬ ಸಾಧಾರಣ ರೈತನ ಮಗಳು ಗೀತಾ. ಬೆಳೆದ ಬೆಳೆಗೆ ಬೆಲೆ ಸಿಗದೆ, ಕಷ್ಟ ಅನುಭವಿಸುವ ಗೀತಾಳ ತಂದೆ, ತಾನು ತೆಂಗಿನ ಮರದಿಂದ ಬಿದ್ದು ಸತ್ತರೆ, ಸರ್ಕಾರದಿಂದ ಒಂದಷ್ಟು ಪರಿಹಾರವಾದರೂ ಸಿಗುತ್ತೆ. ಅದು ನನ್ನ ಕುಟುಂಬಕ್ಕಾದರೂ ಆಸರೆಯಾಗುತ್ತೆ ಅಂತ, ತೆಂಗಿನ ಮರದಿಂದ ಕೆಳಗೆ ಬಿದ್ದು ತನ್ನ ಜೀವವನ್ನೇ ಬಲಿಕೊಡುತ್ತಾನೆ. ಅತ್ತ ಗೀತಾಳ ಗಂಡ ಬೈಕ್‌ನಲ್ಲಿ ಬರುವಾಗ, ರಸ್ತೆಯ ಮೇಲಿದ್ದ ದೊಡ್ಡ ಹಂಪ್‌ ಕಾಣದೆ ಮುಗ್ಗರಿಸಿ ಬಿದ್ದು ಪ್ರಾಣ ಕಳಕೊಳ್ಳುವ ಸ್ಥಿತಿಗೆ ಬರುತ್ತಾನೆ. ದಿಕ್ಕೇ ತೋಚದ ಗೀತಾ, ರೈತ ಅಭಿವೃದ್ಧಿ ಇಲಾಖೆಗೆ ತನ್ನ ತಂದೆ ಸಾವಿನ ಪರಿಹಾರ ಕೇಳಿ ಅರ್ಜಿ ಹಾಕುತ್ತಾಳೆ. ಆ ಇಲಾಖೆಯೊಳಗಿರುವ ಅಷ್ಟೂ ಅಧಿಕಾರಿಗಳು, ನೌಕರರು ಭ್ರಷ್ಟರೇ. ಹೀಗಾದರೆ, ಇನ್ನೆಲ್ಲಿಯ ಪರಿಹಾರ? ಬಿಡಿಗಾಸಿಗಾಗಿ ಅಲೆದಲೆದು ವರ್ಷಗಳನ್ನೇ ಸವೆಸುವ ಗೀತಾ ಅತ್ತ ಗರ್ಭಿಣಿ. ನ್ಯಾಯಕ್ಕೆ ಬೆಲೆ ಸಿಗಲ್ಲ ಎಂಬುದನ್ನುಅರಿತ ಗೀತಾ, ತನ್ನ ದೇಹಕ್ಕೆ ಬಾಂಬ್‌ ಕಟ್ಟಿಕೊಂಡು, ತಂದೆಯಂತೆ ಇರುವ ವ್ಯಕ್ತಿಯ ಜೊತೆ ಆ ಇಲಾಖೆಯೊಳಗೆ ಕಾಲಿಡುತ್ತಾಳೆ. ಆಮೇಲೆ ಅಲ್ಲಿ ನಡೆಯೋದೆ ರೋಚಕ ಸನ್ನಿವೇಶ. ಅದನ್ನು ಕೇಳುವುದಕ್ಕಿಂತ ನೋಡುವುದರಲ್ಲೇ ಮಜಾ ಇದೆ.

ಮಂಸೋರೆ, ನಿರ್ದೇಶಕ

ಭಾವನೆಗಳನ್ನು ಕೆದಕುವಂತಹ ವಿಷಯ ಇಟ್ಟುಕೊಂಡು ನೋಡುಗರಲ್ಲಿ ಅಷ್ಟೇ ಕುತೂಹಲ ಕೆರಳಿಸುತ್ತ ಹೋಗುವ ಮಂಸೋರೆ, ಸಮಾಜದ ವಸ್ತುಸ್ಥತಿಯನ್ನು ಬಯಲಿಗೆಳೆಯುವ ಸಾಹಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಲ್ಲಿ ಅವ್ಯವಹಾರ, ಭ್ರಷ್ಟತೆಯಲ್ಲಿ ಮುಳುಗಿರುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕೆಂದೇ ಗೀತಾ, ಇಲಾಖೆಯ ಅಷ್ಟೂ ಅಧಿಕಾರಿ, ನೌಕರರನ್ನು ಲಾಕ್‌ ಮಾಡಿಕೊಂಡು, ತನ್ನ ಫೇಸ್‌ಬುಕ್‌ ಖಾತೆ ಮೂಲಕ ಲೈವ್‌ ಮಾಡುತ್ತಾಳೆ. ಕ್ಷಣಾರ್ಧದಲ್ಲೇ ಸುದ್ದಿ ರಾಜ್ಯ, ರಾಷ್ಟ್ರಮಟ್ಟದವರೆಗೂ ಹೋಗುತ್ತೆ. ಇಡೀ ರಾಜಕೀಯ ವ್ಯವಸ್ಥೆಯಲ್ಲೆ ನಡುಕ ಶುರುವಾಗುತ್ತೆ. ಒಂದಷ್ಟು ಓದಿಕೊಂಡಿರುವ ಗೀತಾ, ಆ ಕಚೇರಿಯೊಳಗಿದ್ದುಕೊಂಡೇ ಕೆಲವು ಡಿಮ್ಯಾಂಡ್‌ ಇಡುತ್ತಾಳೆ. ತನ್ನ ಡಿಮ್ಯಾಂಡ್‌ ಈಡೇರದಿದ್ದರೆ, ಬ್ಲಾಸ್ಟ್‌ ಮಾಡುವ ಬೆದರಿಕೆಯನ್ನೂ ಹಾಕುತ್ತಾಳೆ. ಸರ್ಕಾರಿ ಕಚೇರಿಯೊಳಗೆ ನಡೆಯುವ ಆ ಅದ್ಭುತ ಡ್ರಾಮ ಅತ್ಯಂತ ಅರ್ಥಪೂರ್ಣ ಎನಿಸದೇ ಇರದು.

ಅವಿನಾಶ್‌, ನಟ

ಒಳಗೆ ಲಾಕ್‌ ಆಗಿರುವ ಸರ್ಕಾರಿ ನೌಕರರನ್ನು ಕ್ಷೇಮವಾಗಿ ಹೊರತರುವ ತಯಾರಿ ಸರ್ಕಾರ ಮಾಡುತ್ತಿದ್ದರೆ, ಅತ್ತ, ಸರ್ಕಾರಿ ಬಿಲ್ಡಿಂಗ್‌ ಹೈಜಾಕ್‌ ಆಗಿರುವುದರಿಂದ ನಮ್ಮ ಫೈಲ್‌ಗಳ ಕಥೆ ಏನ್ರೀ ಎಂಬ ಲೆಕ್ಕಾಚಾರ ಹೊರಗಿರುವ ಭ್ರಷ್ಟರದ್ದು. ಆ ಕಚೇರಿಯೊಳಗೆ ಕಸಗೂಡಿಸೋನಿಂದ ಹಿಡಿದು, ಕ್ಲರ್ಕ್‌, ಮ್ಯಾನೇಜರ್‌ , ಡಯಾಬಿಟೀಸ್‌ ಪೇಶೆಂಟ್‌, ಗಿಡಮೂಲಿಕೆ ಮಾರಲು ಬಂದವ ಹೀಗೆ ಇತರೆ ನೌಕರರೂ ಲಾಕ್.‌ ಹೊರಗಡೆ ಗೀತಾಳ ಬಗ್ಗೆ ಅಪಪ್ರಚಾರ. ಆಕೆ ಟೆರರಿಸ್ಟ್‌, ನಕ್ಸಲ್‌ ಗುಂಪಿನವಳು, ಒಂದು ಸಂಘಟನೆಯಲ್ಲಿದ್ದಾಳೆ ಅಂತೆ-ಕಂತೆಗಳ ಸುದ್ದಿಯ ಹರಿದಾಟ. ಹೊರಗೆ ಪೊಲೀಸ್‌ ಅಧಿಕಾರಿಗಳಿಂದ ಆಕೆಯನ್ನು ಮಟ್ಟ ಹಾಕುವ ಯೋಚನೆ. ಆಕೆ ತನ್ನ ಉದ್ದೇಶ ಈಡೇರುವವರೆಗೂ ಯಾರನ್ನೂ ಹೊರ ಕಳಿಸಲ್ಲ ಎಂದು ಪಟ್ಟು ಹಿಡಿಯುತ್ತಾಳೆ. ಸರ್ಕಾರಕ್ಕೆ ಒಂದು ಡಿಮ್ಯಾಂಡ್‌ ಇಡುತ್ತಾಳೆ. ಅಷ್ಟಕ್ಕೂ ಅವಳ ಉದ್ದೇಶ ಏನು, ಆಕೆಯ ಡಿಮ್ಯಾಂಡ್‌ ಈಡೇರುತ್ತಾ, ಅಧಿಕಾರಿಗಳ ಕೊಡುವ ಗ್ಯಾರಂಟಿ ಮೇಲೆ ನಂಬಿಕೆ ಇಡುತ್ತಾಳಾ? ಇದೆಲ್ಲದ್ದಕ್ಕೂ ಉತ್ತರ ಬೇಕಿದ್ದರೆ, “ಆಕ್ಟ್‌ 1978” ನೋಡಲೇಬೇಕು.


ಮಂಸೋರೆ ಇಲ್ಲಿ, ಭ್ರಷ್ಟ ಅಧಿಕಾರಿಗಳು, ಸಮಾಜದ ವ್ಯವಸ್ಥೆಯನ್ನಷೇ ಅಲ್ಲ, ಸುಳ್ಳು ಸುದ್ದಿ ಹರಡುವ ವಾಹಿನಿಗಳ ಪೇಚಾಟವನ್ನೂ ತೋರಿಸಿದ್ದಾರೆ. ಇದರೊಂದಿಗೆ ಗರ್ಭಿಣಿಯ ಸಂಕಟ, ಅಳು, ಅಸಹಾಯಕತೆಯನ್ನು ಸೂಕ್ಷ್ಮವಾಗಿಯೇ ಹೇಳುತ್ತಾ ಹೋಗಿದ್ದಾರೆ. ಇವೆಲ್ಲದರ ಜೊತೆ ಜೊತೆಗೆ “ಇದು ನನ್ನ ಹಕ್ಕು, ಇದು ನನ್ನ ಸ್ವತ್ತು” ಎಂಬುದನ್ನೂ ಸಾರುತ್ತಾ ಹೋಗಿದ್ದಾರೆ. ಹಾಗಾಗಿ ಇದೊಂದು ಮಂಸೋರೆಯ “ಮನಸಾರೆ” ಸಿನಿಮಾ ಎನ್ನಲಡ್ಡಿಯಿಲ್ಲ. ಇಂತಹ ಕಥೆಗಳಿಗೆ ಕಮರ್ಷಿಯಲ್‌ ಲೇಪದ ಬಗ್ಗೆ ಮಾತಾಡಬಾರದು. ಆದರೆ, ಇಲ್ಲಿ ಭರಪೂರ ಖರ್ಚು ಮಾಡಿರುವುದೂ ಗೊತ್ತಾಗುತ್ತೆ. ಚಿತ್ರಕ್ಕೆ ರಾಹುಲ್ ಶಿವಕುಮಾರ್ ಸಂಗೀತ ನೀಡಿದ್ದು, ಚಿತ್ರವನ್ನು ಇನ್ನೊಂದು ಹಂತಕ್ಕೆ ತಲುಪಲು ಶ್ರಮಿಸಿರುವುದು ಗೊತ್ತಾಗುತ್ತದೆ. ಚಿತ್ರದಲ್ಲಿರುವ ಒಂದೇ ಒಂದು ಹಾಡಿಗೆ ಜಯಂತ್‌ ಕಾಯ್ಕಿಣಿ ಅವರ ಬರಹದ ಸ್ಪರ್ಶವಿದೆ. ಅವರ ” ತೇಲಾಡೋ ಮುಗಿಲೆ‌ ನೀನೆಂದು ಬರುವೆ ಭೂಮಿಯ‌ ಮುದ್ದಿಸಲು..” ಎಂಬ ಆರಂಭದ ಗೀತೆ ಕಥೆಯ ಚಿತ್ರಣಕ್ಕೆ ಪೂರಕವಾಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಇಡೀ ಚಿತ್ರದ ವೇಗವನ್ನು ಹೆಚ್ಚಿಸಿದೆ. ನಾಗೇಂದ್ರ ಕೆ.ಉಜ್ಜನಿ ಅವರ ಕತ್ತರಿ ಪ್ರಯೋಗದಲ್ಲೂ ಹೊಸತನವಿದೆ.

ಶ್ರುತಿ, ನಟಿ

ಇನ್ನು ಚಿತ್ರದ ಪ್ರತಿಯೊಂದು ಮಾತುಗಳಲ್ಲೂ ತೂಕವಿದೆ. ಆ‌ ತೂಕದ ಮಾತುಗಳಿಗೆ ನಿರ್ದೇಶಕ ಮಂಸೋರೆ, ವೀರೇಶ್ ಮಲ್ಲಣ್ಣ ಹಾಗೂ ದಯಾನಂದ್ ಟಿ. ಕೆ . ಅವರು ಕಾರಣವಾಗುತ್ತಾರೆ. ಯಜ್ಞ ಶೆಟ್ಟಿ ನಟನೆ ಮೂಲಕ ನೋಡುಗರನ್ನು ತನ್ನತ್ತ ಸೆಳೆದುಕೊಳ್ಳುತ್ತಾರೆ. ಬಿ.ಸುರೇಶ ಅವರಿಗೆ ಇಲ್ಲಿ ಒಂದೇ ಒಂದು ಡೈಲಾಗ್‌ ಇಲ್ಲ. ಆದರೂ, ಬರೀ ಮೌನದಲ್ಲೇ ಎಲ್ಲರನ್ನೂ ಆಕರ್ಷಿಸುತ್ತಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶೋಭ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ, ಕಿರಣ್ ನಾಯಕ್ ಹೀಗೆ ಇಲ್ಲಿ ಬರುವ ಪ್ರತಿಯೊಂದು ಪಾತ್ರಧಾರಿಗಳು ಚಿತ್ರವನ್ನು ‌ಮತ್ತೊಂದು ಹಂತಕ್ಕೆ‌ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

ದತ್ತಣ್ಣ, ನಟ

ಕೊನೇ ಮಾತರು- ಇದು ಮಂಸೋರೆ ಅವರ ಮನಸಾರೆ ಒಪ್ಪುವ ಅಪ್ಪುವ ಚಿತ್ರವಂತೂ ಹೌದು. ಕನ್ನಡ ಸಿನಿಮಾ ಇತರೆ ಭಾಷೆಯ ಸಿನಿಮಾಗಳಿಗೆ ಹೋಲಿಸಿದರೆ ಯಾಕೆ ಒಂದು ಹೆಜ್ಜೆ ಮುಂದೆ ಅಂದರೆ, ಅದು ಮನಸ್ಸುಗಳಿಗೆ ನಾಟುವ, ಹತ್ತಿರ ಎನಿಸುವ ಭಾವುಕತೆ ಹೆಚ್ಚಿಸುವ ಇಂತಹ ಕಥೆಗಳಿಂದ.

– ವಿಜಯ್‌ ಭರಮಸಾಗರ

error: Content is protected !!