ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರು ಬಿಟ್ಟು ಹೋದ ಆದರ್ಶ ಮತ್ತು ಮಾನವೀಯ ಮೌಲ್ಯಗಳಿವೆ. ಆ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ. ಅಪ್ಪು ಅವರ ನೆನಪಲ್ಲಿ ಈಗಾಗಲೇ ಹಲವು ಗೀತೆಗಳು ಹೊರಬಂದಿವೆ. ಬರುತ್ತಲೂ ಇವೆ. ಮಾರ್ಚ್ 17 ರಂದು ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ನಡುವೆಯೇ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಅವರು ತಮ್ಮ ಹೊಸ ಸಂಭ್ರಮ್ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಪು ಅವರಿಗೊಂದು ವಿನೂತನ ಎನಿಸುವ ಗೀತೆಯನ್ನು ರಿಲೀಸ್ ಮಾಡಿದ್ದಾರೆ
ಹೌದು, ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಅವರು, ಹಲವಾರು ವರ್ಷಗಳಿಂದಲೂ ಅನೇಕ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸಾಕಷ್ಟು ಸೂಪರ್ ಹಿಟ್ ಸಾಂಗ್ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಸಂಗೀತ ಯಾನ ನಡೆಸಿರುವ ಶ್ರೀಧರ್ ಸಂಭ್ರಮ್ ಇದೀಗ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಶುರುಮಾಡಿದ್ದಾರೆ. ಆಮೂಲಕ ಅವರೀಗ ಪುನೀತ್ ರಾಜಕುಮಾರ್ ಅವರಿಗಾಗಿಯೇ “ಮಹಾನುಭಾವ” ಎಂಬ ಗೀತೆ ಬಿಡುಗಡೆ ಮಾಡಿದ್ದಾರೆ. ಈ ಮಹಾನುಭಾವ ಹಲವು ವಿಶೇಷತೆಗಳನ್ನು ಹೊಂದಿದೆ. ಆ ಕುರಿತು ಸ್ವತಃ ಶ್ರೀಧರ್ ಸಂಭ್ರಮ್ ಹೇಳುವುದಿಷ್ಟು.
“ಅಪ್ಪು ಸರ್ ಅಂದರೆ, ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ. ಅಪ್ಪು ಸರ್ ಇಲ್ಲ ಅನ್ನುವುದನ್ನೂ ಸಹ ಊಹಿಸಿಕೊಳ್ಳಲಾಗುತ್ತಿಲ್ಲ. ಅವರು ಯಾವುದೇ ಕ್ಷಣದಲ್ಲಿ ಸಿಕ್ಕರೂ ಪ್ರೀತಿಯಿಂದಲೇ ಮಾತಾಡಿಸುತ್ತಿದ್ದರು. ಸದಾ ನಗುಮೊಗದಲ್ಲೇ ಇರುತ್ತಿದ್ದ ಅಪ್ಪು ಸರ್ ನಮ್ಮೊಂದಿಗಿಲ್ಲ. ಹಾಗಂತ ಆ ಭಾವನೆಯಲ್ಲೂ ನಾವಿಲ್ಲ. ಅವರ ಸದಭಿರುಚಿಯ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರಿಗಾಗಿಯೇ ಒಂದೊಳ್ಳೆಯ ಗೀತೆ ಮಾಡಬೇಕು ಎಂಬ ಉದ್ದೇಶವಿತ್ತು.
ಗಾಯಕ ಕೈಲಾಶ್ ಖೇರ್ ಜೊತೆ ಶ್ರೀಧರ್ ವಿ.ಸಂಭ್ರಮ್
ಕರುನಾಡಿಗರೆಲ್ಲರೂ ಅವರಿಲ್ಲದ ನೋವಲ್ಲಿದ್ದಾರೆ. ಹಾಗಂತ, ಪ್ರತಿನಿತ್ಯ ಆ ನೋವಲ್ಲೇ ಬಾಳುವುದಕ್ಕಾಗಲ್ಲ. ಅವರನ್ನು ಹಾಡಿನ ಮೂಲಕ ನೆನಪಿಸಿಕೊಳ್ಳುವಂತಾಗಬೇಕು ಎಂಬುದು ನಮ್ಮ ಆಲೋಚನೆ ಆಗಿತ್ತು. ಹಾಗಾಗಿಯೇ ಅವರನ್ನು ಹತ್ತಿರದಿಂದ ನೋಡಿದ್ದರಿಂದ, ಅವರ ಒಡನಾಟ ಇದ್ದುದರಿಂದ, ದೊಡ್ಮನೆ ಹುಡುಗನಾಗಿ ಹೇಗೆಲ್ಲಾ ಇದ್ದರು, ಏನೆಲ್ಲಾ ಮಾಡಿದ್ದರು, ಹೇಗೆಲ್ಲ ಪ್ರೀತಿ ತೋರುತ್ತಿದ್ದರು ಅನ್ನುವುದನ್ನೇ ಹಾಡಿನ ಮೂಲಕ ಹೇಳಲಾಗಿದೆ. ಅದೊಂದು ಅವರ ಮೇಲಿನ ಪ್ರೀತಿ ಮತ್ತು ಗೌರವಕ್ಕಾಗಿ ಮಾಡಿರುವ ಹಾಡಿದು” ಎಂದು ವಿವರ ಕೊಡುತ್ತಾರೆ ಶ್ರೀಧರ್ ವಿ.ಸಂಭ್ರಮ್.
ಇನ್ನು, ಈ ಹಾಡನ್ನು ನಿರ್ದೇಶಕ ಕಾಂತ ಕನ್ನಲ್ಲಿ ಬರೆದಿದ್ದಾರೆ. ಅವರ ಸಾಹಿತ್ಯಕ್ಕೆ ತಕ್ಕಂತೆ ನಾನು ಸಂಗೀತ ನೀಡಿದ್ದೇನೆ. ” ಆಕಾಶ ಭೂಮಿ ಹೇಳಿದೆ, ಊರಿಗೇ ನಮ್ಮೂರಿಗೆ ಮಹಾನುಭಾವ ನೀನಯ್ಯ… ನಾಡಿಗೆ ಕರುನಾಡಿಗೆ ಮಹಾನುಭಾವ ನೀನಯ್ಯ…” ಎಂದು ಶುರುವಾಗುವ ಗೀತೆ ಈಗಾಗಲೇ ಸಂಭ್ರಮ್ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಸಾಕಷ್ಟು ಜನ ಹಾಡನ್ನು ಮೆಚ್ಚಿಕೊಂಡಿದ್ದಾರೆ.
ಕಾಂತ ಕನ್ನಲ್ಲಿ, ನಿರ್ದೇಶಕ, ಗೀತೆರಚನೆಕಾರ
ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನು, ಹಾಡಲ್ಲಿ ವಿಶೇಷತೆಗಳಿವೆ. ಈ ಹಾಡಿಗೆ ಖ್ಯಾತ ಗಾಯಕರು ಧ್ವನಿಯಾಗಿದ್ದಾರೆ. ಬಾಲಿವುಡ್ ಗಾಯಕರಾದ ಸೋನು ನಿಗಮ್, ಶಂಕರ್ ಮಹದೇವನ್. ವಿಜಯ ಪ್ರಕಾಶ್, ಕೈಲಾಶ್ ಕೇರ್ ಅವರು ಧ್ವನಿಯಾಗಿರುವುದು ವಿಶೇಷತೆಗಳಲ್ಲೊಂದು ನಿರ್ದೇಶಕ ಕಾಂತ ಕನ್ನಲ್ಲಿ ಅವರ ಗೀತ ಸಾಹಿತ್ಯದ ಜೊತೆ ಪರಿಕಲ್ಪನೆಯೂ ಇದೆ. ಇನ್ನು, ಇಂಥದ್ದೊಂದು ಒಳ್ಳೆಯ ಹಾಡಿಗೆ ಸುನೀಲ್ ಬಿ.ಎನ್. ಅವರು ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಾರೆ ಶ್ರೀಧರ್ ವಿ.ಸಂಭ್ರಮ್.
“ಮಹಾನುಭಾವ” ಗೀತೆಯಿಂದ ಬರುವ ಆದಾಯವನ್ನು ಅಪ್ಪು ಸರ್ ಅವರ ಚಾರಿಟಿಗೆ ಕೊಡಬೇಕು ಎಂಬ ನಿರ್ಧಾರ ಮಾಡಲಾಗಿದೆ. ಯಾಕೆಂದರೆ, ಅಪ್ಪು ಸರ್ ಅವರು ಯಾರಿಗೂ ಗೊತ್ತಾಗದ ರೀತಿ ಹಲವು ಮಾನವೀಯ ಕೆಲಸ ಮಾಡಿದ್ದಾರೆ. ಅನೇಕರ ಕಷ್ಟಕ್ಕೆ ಮಿಡಿದಿದ್ದಾರೆ. ಹಾಗಾಗಿ, ಅವರ ನೆನಪಲ್ಲಿ ಮಾಡಿರುವ ಈ ಗೀತೆಯಿಂದ ಬರುವ ಆದಾಯವನ್ನು ಅವರ ಚಾರಿಟಿಗೆ ನೀಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ ಎನ್ನುವ ಶ್ರೀಧರ್ ಸಂಭ್ರಮ್, ಮುಂದಿನ ದಿನಗಳಲ್ಲಿ ನಮ್ಮ ಸಂಭ್ರಮ್ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ ಮೂಲಕ ಹೊಸ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಇಲ್ಲಿ ಗೀತೆಗಳ ಜೊತೆಯಲ್ಲಿ ವಿಡಿಯೋ ಆಲ್ಬಂ ಕೂಡ ರಿಲೀಸ್ ಮಾಡಲಾಗುತ್ತದೆ. ಹೊಸಬರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದಲೇ ನಾವು ನಾಗಭಾವಿಯಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಾಣ ಮಾಡಿ, ಆ ಮೂಲಕ ಹೊಸಬರಿಗೆ ವೇದಿಕೆ ಕಲ್ಪಿಸುವ ಉದ್ದೇಶನ ನನ್ನದು. “ಮಹಾನುಭಾವ” ಗೀತೆ ಮೂಲಕ ನಮ್ಮ ಯುಟ್ಯೂಬ್ ಚಾನೆಲ್ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ಗೀತೆಗಳನ್ನೂ ಕೊಡುವ ಉದ್ದೇಶವಿದೆ ಎನ್ನುತ್ತಾರೆ ಶ್ರೀಧರ್.