ಸುಶಾಂತ್ ಸಿಂಗ್ ರಜಪೂತ್ ನೆನಪು – ನಟನಿಗೆ ‌ಸಂಗೀತ ನಿರ್ದೇಶಕ ವಿನಯ್‌ ಚಂದ್ರ ಅಲ್ವಿದಾ ಆಲ್ಬಂ ಗೌರವ

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ಸಿನಿಮಾಗಳು, ಅವರ ಹಾಡುಗಳು ಇಂದಿಗೂ ಅಚ್ಚಳಿಯದೆ ಎಲ್ಲರ ಮನದಲ್ಲಿ ಉಳಿದಿವೆ. ಕಡಿಮೆ ಅವಧಿಯಲ್ಲೇ ಜೋರು ಸುದ್ದಿಯಾದ ಸುಶಾಂತ್‌ ಸಿಂಗ್‌ ಅವರ ನೆನಪಿಗೋಸ್ಕರ “ಅಲ್ವಿದಾ” ಆಲ್ಬಂವೊಂದನ್ನು ಹೊರತರಲಾಗಿದೆ. ಹೌದು, ಬಾಲಿವುಡ್‌ನಲ್ಲಿ ಒಂದಷ್ಟು ಸಾಧನೆ ಮಾಡಿದ ಸುಶಾಂತ್‌ ಸಿಂಗ್‌ ಕುರಿತ “ಅಲ್ವಿದಾ” ಆಲ್ಬಂ ಹಾಡು ಸಿದ್ಧಗೊಂಡಿದ್ದು, ಅದನ್ನು ಇತ್ತೀಚೆಗೆ ಪ್ಲೇ ಟು ಮೀ ಅರ್ಪಿಸಿದೆ.

ಸಂಗೀತ ನಿರ್ದೇಶಕ ಕಮ್‌ ಗಾಯಕ ವಿನಯ್‌ ಚಂದ್ರ ಅವರು ವಿಶೇಷವಾಗಿಯೇ “ಅಲ್ವಿದಾ” ಹಾಡನ್ನು ರೆಡಿಮಾಡಿದ್ದಾರೆ. ಇತ್ತೀಚೆಗೆ ವಿನಯ್‌ಚಂದ್ರ ಅವರ ತಂಡ ಆ ಹಾಡಿನ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು. ಹಾಡು ಹಿಂದಿಯಲ್ಲಿಯೇ ತಯಾರಾಗಿದ್ದು, ಹಾಡಿಗೆ ದನಿಯಾಗುವುದರ ಜತೆಗೆ ಸಂಗೀತವನ್ನೂ ನೀಡಿದ್ದಾರೆ ವಿನಯ್ ಚಂದ್ರ. ಅಷ್ಟೇ ಅಲ್ಲ ಈ ಹಾಡಲ್ಲೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅದರ ಟೀಸರ್ ಕೂಡ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ.


ಈ ವೇಳೆ ಮಾತಿಗಿಳಿದ ಸಂಗೀತ ನಿರ್ದೇಶಕ ವಿನಯ್‌ ಚಂದ್ರ, “ಬಾಲಿವುಡ್ ನಲ್ಲಿ‌ ನೆಲೆ ನಿಲ್ಲಲು ಸುಶಾಂತ್ ಅವರ ಶ್ರಮ ಹೇಗಿತ್ತು ಎಂಬುದನ್ನು ಈ‌ ಹಾಡಿನಲ್ಲಿ ತೋರಿಸಿದ್ದೇವೆ. ಅವರ ಬಾಲ್ಯದ ಫೋಟೋಗಳಿಂದ ಹಿಡಿದ ಇತ್ತೀಚಿನ ಫೋಟೋಗಳನ್ನು ಮೂರು ನಿಮಿಷದ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಕೊನೆಗೆ ತಮ್ಮ ಈ ಸಿನಿಮಾ ಪಯಣದಲ್ಲಿ ಕೈ ಹಿಡಿದವರಿಗೆ, ಆಸರೆಯಾದವರಿಗೂ ಥ್ಯಾಂಕ್ಸ್ ಹೇಳಿ ಹೊರಡುವ ಪರಿಕಲ್ಪನೆಯ ಹಾಡು ಅಂದು ಎಂಬುದು ಅವರ ಮಾತು.


ಎರಡೂವರೆ‌ ದಿನಗಳ ಕಾಲ ಬೆಂಗಳೂರಿನಲ್ಲಿಯೇ ಸಂಪೂರ್ಣವಾಗಿ ಸೆಟ್ ಹಾಕಿ ಅಲ್ವಿದಾ ಹಾಡಿನ ಶೂಟಿಂಗ್ ನಡೆಸಿರುವುದು ವಿಶೇಷ. ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ, ಅದ್ಧೂರಿಯಾಗಿಯೇ ಚಿತ್ರೀಕರಿಸಲಾಗಿದೆ. ಸದ್ಯ ಟೀಸರ್ ಬಿಡುಗಡೆಯಾಗಿದ್ದು, ಇನ್ನೊಂದು ವಾರದಲ್ಲಿ ಯೂಟ್ಯೂಬ್ ನಲ್ಲಿ ಹಾಡು ಬಿಡುಗಡೆಯಾಗಲಿದೆ.
ಪ್ಲೇ ಟು ಮಿ ಇಂಡಿಯಾದ ಬಿಗೆಸ್ಟ್ ಫರ್ಫಾಮಿಂಗ್ ನಮಗೊಂದು ಒಳ್ಳೆಯ ವೇದಿಕೆ ಕಲ್ಪಿಸಿದೆ.

ಇದೀಗ ಪ್ಲೇ ಟು ಮಿ ಒರಿಜಿನಲ್ಸ್ ಶುರುಮಾಡಿದ್ದು, ಆ ಮೂಲಕ ನನ್ನ ಮೊದಲ ಹಾಡಾಗಿ ಅಲ್ವಿದಾ ಮೂಡಿಬಂದಿದೆ. ಕೀರ್ತಿ ವಾಸನ್ ಸುಬ್ರಮಣ್ಯಂ ಪ್ಲೇ ಟು ಮಿಯ ಸಿಇಒ ಆಗಿದ್ದಾರೆ. 104 ಎಫ್ಎಂನ ಸಿಇಒ ಮತ್ತು ವಲ್ಫೂಲ್ ಬ್ರಾಂಡ್ ನ ಬಿಸಿನೆಸ್ ಹೆಡ್ ಕೂಡ ಅವರು. ಇನ್ನು, ಶ್ರೀಧರ್ ಮತ್ತು ಶೀತಲ್ ಈ ಹಾಡಿಗೆ ಹಣ ಹಾಕಿದ್ದಾರೆ. ಹಾಡಿನ ನಿರ್ದೇಶನವನ್ನೂ ಶ್ರೀಧರ್ ಮಾಡಿದ್ದಾರೆ.

ಹಾಡಿನ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಅಂದು ಅತಿಥಿಗಳ ದಂಡೇ ಹಾಜರಿತ್ತು. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್, ಸಾಹಸ‌ ನಿರ್ದೇಶಕ ಥ್ರಿಲ್ಲರ್ ಮಂಜು, ವಿನಯ್ ಚಂದ್ರ ಅವರ ತಂದೆ ಮತ್ತು ಹಿರಿಯ ಪತ್ರಕರ್ತರು, ಕಲಾವಿದರಾಗಿರುವ ಸುರೇಶ್ ಚಂದ್ರ, ರವಿಚೇತನ್, ನಟಿ ರೂಪಿಕಾ, ಅಭಯ್ ಚಂದ್ರ, ಕೀರ್ತಿ ವಾಸನ್ ಸೇರಿದಂತೆ ಹಲವು ಗೆಳೆಯರು ಆಗಮಿಸಿ ವಿನಯ್‌ ಚಂದ್ರ ಅವರ ಪ್ರಯತ್ನಕ್ಕೆ ಶುಭಕೋರಿದರು.

ಈಗಾಗಲೇ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ‌ಮಾಡುತ್ತಿರುವ ಅನಿಲ್ ಕುಮಾರ್ , ಆಲ್ವಿದಾ ಹಾಡಿಗೆ ಕ್ಯಾಮರಾ ಹಿಡಿದಿದ್ದಾರೆ. ಜತೆಗೆ ಸಂಕಲನವನ್ನೂ ಮಾಡಿದ್ದಾರೆ. ವಿನಯ್‌ ಚಂದ್ರ ಸ್ವತಃ ಸಂಗೀತದ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು, ಅಭಿಲಾಷ್ ಗುಪ್ತಾ ಸಾಹಿತ್ಯವಿದೆ.

Related Posts

error: Content is protected !!