Categories
ಸಿನಿ ಸುದ್ದಿ

ಅಗ್ನಿಪ್ರವ ಶುರು- ವಿಜಯೇಂದ್ರ ಪ್ರಸಾದ್ ಚಾಲನೆ

ಸಂಸ್ಕೃತ ಪದವೇ ಚಿತ್ರದ ಶೀರ್ಷಿಕೆ

ಕನ್ನಡದಲ್ಲಿ ಸಂಸ್ಕೃತ ಪದವುಳ್ಳ ಶೀರ್ಷಿಕೆ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದಿವೆ. ಈಗಲೂ ಬರುತ್ತಿವೆ. ಆ ಸಾಲಿಗೆ ಈಗ “ಅಗ್ನಿ ಪ್ರವ” ಎಂಬ ಸಿನಿಮಾವೂ ಸೇರಿದೆ. ಹೌದು, ಇದೊಂದು ಸಂಸ್ಕೃತ ಭಾಷೆಯ ಪದ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಸಿನಿಮಾ ಮೂಲಕ ಸುರೇಶ ಆರ್ಯ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗುತ್ತಿದ್ದಾರೆ. ಹಾಗಂತ ಇವರಿಗೆ ಸಿನಿಮಾರಂಗ ಹೊಸದಲ್ಲ. ಈಗಾಗಲೇ ತೆಲುಗಿನ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ “ಅಗ್ನಿ ಪ್ರವ” ಮೊದಲ ಚಿತ್ರ. ಈ ಚಿತ್ರದ ವಿಶೇಷವೆಂದರೆ, ಕಥೆಗಾರ, “ಬಾಹುಬಲಿ” ಖ್ಯಾತಿಯ ವಿಜಯೇಂದ್ರ ಪ್ರಸಾದ್ ಅವರು ಕ್ಯಾಮರಾ ಚಾಲನೆ ಮಾಡುವ ಮೂಲಕ ಚಿತ್ರಕ್ಕೂ ಚಾಲನೆ ನೀಡಿದ್ದಾರೆ. ಇನ್ನು, ಡಾ.ರಾಜಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮೀ ಮತ್ತು ಗೋವಿಂದ್ ರಾಜ್ ಕ್ಲಾಪ್​ ಮಾಡಿ ಶುಭಕೋರಿದ್ದಾರೆ.


ಚಿತ್ರಕ್ಕೆ ಶುಭಕೋರಿದ ಕಥೆಗಾರ ವಿಜಯೇಂದ್ರ ಪ್ರಸಾದ್​, “ನಾನು ಈ ಚಿತ್ರದ ಕಥೆ ಕೇಳಿದಾಗ ಕುತೂಹಲವಿತ್ತು. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ ಎನಿಸಿತು. ಆ ಕಥೆಯ ಒನ್‌ಲೈನ್‌ ಕೇಳಿದಾಗ ನಿಜಕ್ಕೂ ಇದು ವರ್ಕೌಟ್‌ ಆಗುತ್ತೆ ಎನಿಸಿತು. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಅಷ್ಟೇ ಅಲ್ಲ, ಈ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ರಾಜ್‌ಕುಮಾರ್‌ ಅವರ ಪುತ್ರಿ ಬಂದಿದ್ದಾರೆ ಅಂದಮೇಲೆ, ಚಿತ್ರಕ್ಕೂ ಒಳ್ಳೆಯದಾಗಲಿದೆ ಎಂಬುದು ವಿಜಯೇಂದ್ರ ಪ್ರಸಾದ್ ಅವರ ಮಾತು.
ಈ ಚಿತ್ರ ನವರತ್ನ ಪಿಕ್ಚರ್ಸ್​ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದ್ದು, ವರ್ಷಾ ತಮ್ಮಯ್ಯ ಈ ಚಿತ್ರದ ನಿರ್ಮಾಪಕರು. ಅವರು ಚಿತ್ರದ ನಾಯಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ 5 ಚಿತ್ರಗಳನ್ನು ಮಾಡಿರುವ ವರ್ಷಾ, ಅವರು, “ಅಗ್ನಿಪ್ರವ” ಕಥೆ ಚೆನ್ನಾಗಿದೆ ಎಂಬ ಕಾರಣಕ್ಕೆ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ.

ಇವರೊಂದಿಗೆ ಜೀತೇಂದ್ರ ಜೋಸೈಮನ್​ ಕೂಡ ನಿರ್ಮಾಣದಲ್ಲಿ ಸಾಥ್​ ನೀಡುತ್ತಿದ್ದಾರೆ. ತಮ್ಮ ನಿರ್ಮಾಣದ ಚಿತ್ರದ ಕುರಿತು ಮಾತನಾಡುವ ವರ್ಷಾ ತಮ್ಮಯ್ಯ, “ನನಗೆ ಚಿತ್ರದ ಕಥೆ ಇಷ್ಟವಾಯಿತು. ಕಮರ್ಷಿಯಲ್‌ ಅಂಶಗಳೊಂದಿಗೆ ಈ ಚಿತ್ರ ಮಾಡುತ್ತಿದ್ದೇನೆ. ಇಲ್ಲಿ ಆ್ಯಕ್ಷನ್ ದೃಶ್ಯಗಳು ಹೆಚ್ಚಾಗಿವೆ. ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ ಎನ್ನುತ್ತಾರೆ ಅವರು.
ತಮ್ಮ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸುರೇಶ್ ಆರ್ಯ. “ಇದೊಂದು ಮಹಿಳಾ ಪ್ರಧಾನ ಚಿತ್ರ. ಅಗ್ನಿಪ್ರವ ಅಂದರೆ, ಬೆಳಕು ಪ್ರವಹಿಸುವುದು ಎಂದರ್ಥ. ಇಡೀ ಸಿನಿಮಾ ನಾಯಕಿ ಸುತ್ತಲೇ ಸಾಗುವುದರಿಂದ ಕಮರ್ಷಿಯಲ್ ಅಂಶಗಳ ಜತೆಗೆ ಒಂದಷ್ಟು ಮಿಸ್ಟರಿ ಥ್ರಿಲ್ಲರ್ ಅಂಶಗಳನ್ನು ಸೇರಿಸಿದ್ದೇವೆ.

ಸಿನಿಮಾ ನೋಡುತ್ತಿದ್ದರೆ, ನಾಯಕಿ ಇಲ್ಲಿ ನೆಗೆಟಿವ್‌ ಅನಿಸುತ್ತಾಳೆ. ಆದರೆ, ಚಿತ್ರದ ಹೀರೋಯಿನ್ ಕೂಡ ಅವಳೇ ಆಗಿರುತ್ತಾಳೆ. ಸಿನಿಮಾ ಬಗ್ಗೆ ಹೇಚ್ಚು ಹೇಳುವುದಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ಕಥೆ ಎಂಥದ್ದು ಎಂಬುದು ಅರ್ಥವಾಗುತ್ತದೆ” ಎನ್ನುತ್ತಾರೆ ಅವರು.
ನಟ ನಿರ್ದೇಶಕ ಜೋ ಸೈಮನ್ ಈ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಇನ್ನುಳಿದಂತೆ ನಾರಾಯಣ ಸ್ವಾಮಿ, ನಟಿ ಜ್ಯೋತಿ ರೈ, ವೆಂಕಟೇಶ್ ಪ್ರಸಾದ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಸೇರಿ ಹಲವರು ಇದ್ದರು. ಚಿತ್ರಕ್ಕೆ ಉದಯ್ ಶೆಟ್ಟಿ, ಯುವ, ಸುರೇಶ್ ಆರ್ಯ ಕಥೆ ಬರೆದರೆ, ಲವಿತ್ ಛಾಯಾಗ್ರಹಣವಿದೆ. ವದತ್ತ, ಡಾ ರಾಮಕೃಷ್ಣ ಕೋಡೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Categories
ಸಿನಿ ಸುದ್ದಿ

ಪೊಗರು ರಿಲೀಸ್‌ ಡೇಟ್‌ ಫಿಕ್ಸ್‌ ! ಕ್ರಿಸ್ಮಸ್‌ ಇಲ್ಲವೇ ಸಂಕ್ರಾಂತಿಗೆ ಬಿಡುಗಡೆ

ಕೊರೊನಾ ಬಳಿಕ ಮೊದಲು ರಿಲೀಸ್‌ ಆಗಲಿದೆಯಾ ದೊಡ್ಡ ಬಜೆಟ್‌ ಸಿನಿಮಾ?

ಕನ್ನಡದಲ್ಲೀಗ ಸಿನಿಮಾ ಬಿಡುಗಡೆ ಪರ್ವ!
ಹೌದು, ಮೇಲಿನ ಮಾತನ್ನು ಸ್ವಲ್ಪ ಅಚ್ಚರಿಯಂತೆ ಕಾಣಬಹುದಾದರೂ, ಕೊರೊನಾ ಹಾವಳಿ ಬಳಿಕ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿರುವುದಂತೂ ಹೌದು, ಈಗಾಗಲೇ ಮರುಬಿಡುಗಡೆಯಾದ ಚಿತ್ರಗಳು ಹೀಗೆ ಬಂದು ಹಾಗೆ ಹೋದವು. ಹಾಗಂತ, ಹೊಸ ಚಿತ್ರಗಳನ್ನು ಬಿಡುಗಡೆ ಮಾಡಲು ಒಂದಷ್ಟು ಮಂದಿ ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ. ನವೆಂಬರ್‌ ೨೦ರಂದು ಮಂಸೋರೆ ನಿರ್ದೇಶನದ “ಆಕ್ಟ್‌-೧೯೭೮” ಚಿತ್ರ ಬಿಡುಗಡೆಯಾಯಿತು. ಅದರ ಬೆನ್ನಲ್ಲೇ ನ.೨೭ರಂದು “ಅರಿಷಡ್ವರ್ಗ” ಚಿತ್ರವೂ ತೆರೆಗೆ ಅಪ್ಪಳಿಸುತ್ತಿದೆ. ಹಾಗೆಯೇ ಒಂದಷ್ಟು ಹೊಸಬರು ಕೂಡ ಚಿತ್ರಮಂದಿರದಲ್ಲೇ ಸಿನಿಮಾ ಬಿಡುಗಡೆ ಮಾಡಲು ಧೈರ್ಯ ತೋರಿದ್ದಾರೆ. ಇಲ್ಲಿಯವರೆಗೆ ಹೊಸಬರೇ ಚಿತ್ರಮಂದಿರಕ್ಕೆ ಬರುವ ಧೈರ್ಯ ಮಾಡಿದ್ದರು. ಈಗ “ಪೊಗರು” ಕೂಡ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ.


ಹೌದು, ಇತ್ತೀಚೆಗಷ್ಟೇ ಸಿನಮಾದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ನಂದಕಿಶೋರ್‌, ಈಗ ತಮ್ಮ “ಪೊಗರು” ಚಿತ್ರವನ್ನು ರಿಲೀಸ್‌ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ಯಾವಾಗ ರಿಲೀಸ್‌ ಆಗುತ್ತೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಧ್ರುವ ಸರ್ಜಾ ಎಲ್ಲೇ ಕಾಣಿಸಿಕೊಂಡರೂ, ಅಭಿಮಾನಿಗಳು “ಪೊಗರು” ಯಾವಾಗ ಚಿತ್ರಮಂದಿರಕ್ಕೆ ಬರುತ್ತೆ ಎಂದು ಪ್ರಶ್ನೆ ಕೇಳುತ್ತಿದ್ದರು. ಈಗ ಅದಕ್ಕೆ ಉತ್ತರವೂ ಸಿಕಿದೆ. ಮೂಲಗಳ ಪ್ರಕಾರ “ಪೊಗರು” ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬಕ್ಕೆ ಬರಲಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಕ್ರಿಸ್‌ಮಸ್‌ ಹಬ್ಬಕ್ಕೆ ಬರಲು ತಡವಾದರೆ, ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. ಒಂದು ವೇಳೆ ಚಿತ್ರತಂಡದ ಯೋಜನೆಯಂತೆಯೇ “ಪೊಗರು” ತೆರೆಗೆ ಅಪ್ಪಳಿಸಿದರೆ, ಕನ್ನಡ ಚಿತ್ರರಂಗದಲ್ಲಿ ಕೊರೊನಾ ಬಳಿಕ ಬಿಡುಗಡೆಯಾಗುವ ಮೊದಲ ದೊಡ್ಡ ಬಜೆಟ್‌ ಸಿನಿಮಾ ಇದಾಗಲಿದೆ. ಈ ಚಿತ್ರದಲ್ಲಿ ಧ್ರುವ ಅವರಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದೇನೆ ಇರಲಿ, ಈಗಾಗಲೇ ಬಿಡುಗಡೆಯಾಗಿರುವ ಸಾಂಗ್‌ ಹಾಗೂ ಟ್ರೇಲರ್‌ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದು, ಅಭಿಮಾನಿಗಳು ಈಗ ಸಿನಿಮಾ ಬಿಡುಗಡೆಯ ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ಮತ್ತೆ ರಾಮಾಚಾರಿ ಸದ್ದು! ತೇಜ್‌ ಚಿತ್ರಕ್ಕೆ ಚಾಲನೆ

ಇಲ್ಲಿ ವಿಧಿಯೇ ವಿಲನ್!‌ ಜಲೀಲ, ಮಾರ್ಗರೇಟ್‌ ಇಲ್ಲೂ ಇದ್ದಾರೆ!!

ಕನ್ನಡ ಚಿತ್ರರಂಗದಲ್ಲಿ ಈ ರಾಮಾಚಾರಿ ಅನ್ನೋ ಹೆಸರಲ್ಲಿ ಒಂದು ಪವರ್‌ ಇದೆ, ಖದರ್‌ ಇದೆ. ಅಷ್ಟೇ ಕೆಪಾಸಿಟಿಯೂ ಇದೆ. ಹೌದು, ರಾಮಾಚಾರಿ ಅಂದಾಕ್ಷಣ ನೆನಪಾಗೋದೇ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಡಾ.ವಿಷ್ಣುವರ್ಧನ್‌ ಅಭಿನಯದ “ನಾಗರಹಾವು” ಚಿತ್ರ. ಈ ಚಿತ್ರದ ಯಂಗ್‌ ರೆಬೆಲ್‌ ಹೀರೋ ಆಗಿ ಕಾಣಿಸಿಕೊಂಡಿದ್ದ ವಿಷ್ಣುವರ್ಧನ್‌ ಅವರು ರಾಮಾಚಾರಿ ಹೆಸರಿನ ಪಾತ್ರ ನಿರ್ವಹಿಸಿದ್ದು ಎಲ್ಲರಿಗೂ ಗೊತ್ತು. ಇವತ್ತಿಗೂ ಚಿತ್ರದುರ್ಗ ಅಂದಾಕ್ಷಣ ನೆನಪಿಗೆ ಬರೋದೇ ರಾಮಾಚಾರಿಯ ಅ ರೆಬೆಲ್‌ ಪಾತ್ರ. ಆ ಬಳಿಕ ರವಿಚಂದ್ರನ್‌ ಅವರ “ರಾಮಾಚಾರಿ” ಕೂಡ ಮಾಸದ ಚಿತ್ರ. ಇನ್ನು, ಯಶ್‌ ಹಾಗೂ ರಾಧಿಕಾ ಪಂಡಿತ್‌ ಅಭಿನಯಿಸಿದ “ಮಿಸ್ಟರ್‌ ಅಂಡ್‌ ಮಿಸ್ಸಸ್‌ ರಾಮಾಚಾರಿ” ಚಿತ್ರದ ಬಗ್ಗೆ ಬೇರೇನೂ ಹೇಳುವಂತಿಲ್ಲ. ಇಲ್ಲೂ ರಾಮಾಚಾರಿಯೇ ಹೈಲೈಟ್. ಇಷ್ಟಕ್ಕೂ ಈಗ ಯಾಕೆ ಈ ರಾಮಾಚಾರಿಯ ವಿಷಯ ಅಂದರೆ, “ರಾಮಾಚಾರಿ೨.೦” ಎಂಬ ಹೊಸ ಚಿತ್ರ ಸೆಟ್ಟೇರಿದೆ. ಹಾಗಾಗಿ “ರಾಮಾಚಾರಿ” ಬಗ್ಗೆ ಹೇಳಲೇಬೇಕಿತ್ತು.

ತೇಜ್‌, ಶಿಲ್ಪಾಶೆಟ್ಟಿ

ಹೊಸ ಪ್ರಯತ್ನಕ್ಕೆ ಶುಭ ಹಾರೈಕೆ

ಅಂದಹಾಗೆ, ಹೊಸ ಯಂಗ್‌ ರೆಬೆಲ್‌ ರಾಮಾಚಾರಿಯಾಗಿ ತೇಜ್‌ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ಅವರು ನಾಯಕರಾಗಿ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ದೇಶಕರಾಗಿಯೂ, ನಿರ್ಮಾಪಕರಾಗಿಯೂ ಅವರ ಎಂಟ್ರಿಯಾಗುತ್ತಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಅಂದು ನಿರ್ದೇಶಕರಾದ ಶಶಾಂಕ್‌, ಮಹೇಶ್‌, ಪ್ರವೀಣ್‌ ನಾಯಕ್‌, ಫೈವ್‌ ಸ್ಟಾರ್‌ ಗಣೇಶ್‌, ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ, ಚಿತ್ರತಂಡಕ್ಕೆ ಹಾಗೂ ತೇಜ್‌ ಅವರ ಹೊಸ ಪ್ರಯತ್ನಕ್ಕೆ ಶುಭಕೋರಿದ್ದಾರೆ.

ಬುದ್ಧಿವಂತನ ಕಥೆ

ಪನಾರೋಮಿಕ್​ ಸ್ಟುಡಿಯೋದ ಸಹಯೋಗದಲ್ಲಿ ಮೇಘನಾ ಕ್ರಿಯೇಷನ್ಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರದ ಕುರಿತು ಸ್ವತಃ ನಾಯಕ ಕಮ್‌ ನಿರ್ದೇಶಕ ತೇಜ್‌ ಹೇಳುವುದಿಷ್ಟು. “ಇದೊಂದು ತುಂಬಾ ಬುದ್ಧಿವಂತ ಹುಡುಗನ ಕಥೆ. ಒಂದು ರೀತಿಯ ಬಟರ್​ಫ್ಲೈ ಪರಿಕಲ್ಪನೆಯ ಸಿನಿಮಾ. ವಿಧಿಯೇ ಈ ಚಿತ್ರದಲ್ಲಿ ವಿಲನ್​ ಆಗಿದೆ. ಆ ವಿಧಿಯನ್ನು ಹೀರೋ ಇಲ್ಲಿ ಹೇಗೆಲ್ಲಾ ನಿಭಾಯಿಸುತ್ತಾನೆ ಅನ್ನೋದೇ ಕಥೆ. ಡಿಸೆಂಬರ್‌ ಅಥವಾ ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿದೆ ಎಂದು ಮಾಹಿತಿ ಕೊಡುತ್ತಾರೆ ತೇಜ್.‌

ಹೈ ವೋಲ್ಟೇಜ್‌ ಸಿನ್ಮಾ

ಈ ಚಿತ್ರದಲ್ಲಿ ನಾಯಕ ತೇಜ್‌ ಅವರಿಗೆ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ನಾಯಕಿಯಾಗಿದ್ದಾರೆ. ಅವರಿಗೆ ಈ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದು ಅದೃಷ್ಟವಂತೆ. ಆರಂಭದಲ್ಲಿ ಎಲ್ಲರಿಗೂ ಇರುವಂತೆ ಅವರಿಗೂ ಒಂದು ಕಡೆ ಭಯವಿದೆಯಂತೆ. ಬಹುತೇಕ ಗ್ರಾಮೀಣ ಭಾಗದಲ್ಲೇ ಚಿತ್ರೀಕರಣ ನಡೆಯಲಿದ್ದು, ಮಂಡ್ಯ ಮತ್ತು ಬೆಂಗಳೂರು ಸುತ್ತಮುತ್ತ ಶೂಟಿಂಗ್‌ ಪ್ಲಾನ್‌ ಇದೆ ಎಂಬುದು ಚಿತ್ರತಂಡದ ಹೇಳಿಕೆ.
ಚಿತ್ರದಲ್ಲಿ ವಿಜಯ್‌ ಚೆಂಡೂರ್‌ ಅವರಿಲ್ಲಿ ಜಲೀಲ ಪಾತ್ರ ಮಾಡುತ್ತಿದ್ದಾರಂತೆ. ಸಹಜವಾಗಿಯೇ ಅವರಿಗೂ ಆ ಹೆಸರಲ್ಲಿ ಪಾತ್ರ ಮಾಡೋಕೆ ಭಯವಿದೆಯಂತೆ. ಆ ಹೆಸರಲ್ಲೇ ಒಂದು ಹೈ ವೋಲ್ಟೇಜ್‌ ಇರುವುದರಿಂದ ನೀಟ್‌ ಆಗಿಯೇ ನಿರ್ವಹಿಸುವ ಜವಾಬ್ದಾರಿ ಇದೆಯಂತೆ.

ಚಿತ್ರದಲ್ಲಿ ಸಂದೀಪ್ ಮಲಾನಿ, ಪ್ರಭು ಸೂರ್ಯ, ಸ್ಪರ್ಶ ರೇಖಾ, ಕೃಷ್ಣಮೂರ್ತಿ ಕವತಾರ್, ಅಶ್ವಿನ್ ಹಾಸನ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ವಿನಯ ಪಾಂಡವಪುರ ಈ ಚಿತ್ರದ ಹಾಡುಗಳಿಗೆ ಗೀತೆ ಬರೆದರೆ, ಪ್ರೇಮ್​ ಕ್ಯಾಮೆರಾ ಹಿಡಿದಿದ್ದಾರೆ. ಸುಂದರ್​ ಮೂರ್ತಿ ಸಂಗೀತವಿದೆ. ರಾಜೇಶ್​ ಕೃಷ್ಣನ್, ಸಂತೋಷ್, ಐಶ್ವರ್ಯಾ ಹಾಡುಗಳಿಗೆ ಧ್ವನಿಯಾಗಲಿದ್ದಾರೆ ಎಂಬುದು ಚಿತ್ರತಂಡದ ಮಾತು.

Categories
ಸಿನಿ ಸುದ್ದಿ

ಪದವಿಪೂರ್ವಕ್ಕೆ ಚಾಲನೆ- ಶಾಮನೂರು ಫ್ಯಾಮಿಲಿಯ ಹೊಸ ಚಿತ್ರ

ನಿರ್ಮಾಣದಲ್ಲಿ ಯೋಗರಾಜ್‌ ಭಟ್‌ ಸಾಥ್‌

ಈ ಹಿಂದೆ “ಪದವಿ ಪೂರ್ವ” ಸಿನಿಮಾ ಕುರಿತು ಒಂದಷ್ಟು ಹೇಳಲಾಗಿತ್ತು. ಈಗ ಆ ಚಿತ್ರಕ್ಕೆ ಮುಹೂರ್ತ ಕೂಡ ನಡೆದಿದೆ. ಇತ್ತೀಚೆಗೆ ರಾಜಾಜಿನಗರದ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಚಿತ್ರಕ್ಕೆ ಪೂಜೆ ನಡೆದಿದ್ದು, ಯೋಗರಾಜ್‌ಭಟ್‌ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರಕ್ಕೆ ಶುಭಕೋರಿದ್ದಾರೆ.

ಅಂದಹಾಗೆ, ಇದು ಹರಿಪ್ರಸಾದ್ ಜಯಣ್ಣ ನಿರ್ದೇಶನದ ಚಿತ್ರ. ಇನ್ನು, ಯೋಗರಾಜ್ ಭಟ್ ಮತ್ತು ರವಿಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರವಿದು. ಅಂದು ನಿರ್ಮಾಪಕರಾದ ರವಿ ಶಾಮನೂರು ಅವರ ಪುತ್ರಿ ಸೃಷ್ಠಿ ಶಾಮನೂರ್ ಕ್ಲಾಪ್ ಮಾಡಿದ್ದಾರೆ. ಚಿತ್ರದಲ್ಲಿ ಪೃಥ್ವಿ ಶಾಮನೂರ್ ನಾಯಕರಾದರೆ, ಅವರಿಗೆ ಅಂಜಲಿ ಅನೀಶ್ ಹಾಗು ಯಶಾ ಶಿವಕುಮಾರ್ ನಾಯಕಿಯರು.

ಇದು ಹರಿಪ್ರಸಾದ್ ಜಯಣ್ಣ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಿದ್ದು, ಚಿತ್ರದ ಎರಡನೇ ಹಂತದ ಚಿತ್ರೀಕರಣವನ್ನು ಮಲೆನಾಡಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ತಯಾರಿ ನಡೆಸಿದೆ. ಅರ್ಜುನ್ ಜನ್ಯ ಸಂಗೀತವಿದೆ. ಮಧು ತುಂಬಕೆರೆ ಸಂಕಲನ ಮಾಡಿದರೆ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಮತ್ತೆ ಮದಗಜನ ಸದ್ದು!

ಡಿಸೆಂಬರ್‌ 1ರಿಂದ 3ನೇ ಹಂತದ ಶೂಟಿಂಗ್‌

ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣ

ಶ್ರೀಮುರಳಿ ಅಭಿನಯದ “ಮದಗಜ” ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದಿದೆ. ಈಗಾಗಲೇ ಚಿತ್ರ ಎರಡು ಹಂತಗಳ ಚಿತ್ರೀಕರಣ ಮುಗಿಸಿದ್ದು, ಈಗ ಮೂರನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಿದೆ. ಹೌದು, ಸಾಕಷ್ಟು ಕುತೂಹಲ ಕೆರಳಿಸಿರುವ “ಮದಗಜ” ಈಗ ಅದ್ಧೂರಿ ಸೆಟ್‌ನಲ್ಲಿ ಶೂಟಿಂಗ್‌ ನಡೆಸಲು ಹಲವು ರೀತಿಯ ಯೋಜನೆ ಹಾಕಿಕೊಂಡಿದೆ. ನಿರ್ದೇಶಕ ಮಹೇಶ್‌ಕುಮಾರ್‌ ಅವರು ಕಲಾ ನಿರ್ದೇಶಕ ಮೋಹನ್‌ ಬಿ.ಕೆರೆ ಅವರಿಗೆ ಒಂದು ದೊಡ್ಡ ಜವಾಬ್ದಾರಿ ವಹಿಸಿದ್ದು, ಮಿನರ್ವ ಮಿಲ್‌ ಹಾಗೂ ಎಚ್‌ಎಂಟಿ ಫ್ಯಾಕ್ಟರಿಯಲ್ಲಿ ಸೆಟ್‌ ಹಾಕುವ ಕೆಲಸ ಕೊಟ್ಟಿದ್ದಾರೆ. ಈಗಾಗಲೇ ಬಹುತೇಕ ಕೆಲಸಗಳು ಮುಗಿಯುತ್ತ ಬಂದಿದ್ದು, ಡಿಸೆಂಬರ್ 1ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ.


“ಮದಗಜ” ಒಂದು ಪಕ್ಕಾ ಫ್ಯಾಮಿಲಿ ಆಕ್ಷನ್ ಡ್ರಾಮಾ ಆಗಿದ್ದು, ಶ್ರೀಮುರಳಿ ಅವರ ಹಿಂದಿನ ಸಿನಿಮಾಗಳಿಗಿಂತಲೂ ವಿಭಿನ್ನವಾದ ಆಕ್ಷನ್‌ ಮತ್ತು ಕಥೆಯೊಂದಿಗೆ ಅಭಿಮಾನಿಗಳನ್ನು ರಂಜಿಸಲಿದೆ ಎಂಬುದು ನಿರ್ದೇಶಕರ ಮಾತು. ಇನ್ನು, ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್‌ ಅವರು ಅದ್ಧೂರಿ ಬಜೆಟ್‌ನಲ್ಲೇ ನಿರ್ಮಾಣ ಮಾಡುತ್ತಿದ್ದಾರೆ.

ಉಮಾಪತಿ, ನಿರ್ಮಾಪಕ

“ರಾಬರ್ಟ್” ಸಿನಿಮಾ ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ “ಮದಗಜ” ಚಿತ್ರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕರು ಶ್ರೀಮುರಳಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಚಿತ್ರದ ಮೊದಲ ಹಂತ ವಾರಣಾಸಿಯಲ್ಲಿ ಮುಗಿದಿದ್ದು, ಮೈಸೂರಿನಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ನಡೆಸಲಾಗಿತ್ತು.


ಈ ಚಿತ್ರಕ್ಕೆ ಆಶಿಕಾ ರಂಗನಾಥ್‌ ಅವರು ಶ್ರೀಮುರಳಿಗೆ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ತೆಲುಗು ಖ್ಯಾತ ನಟ ಜಗಪತಿ ಬಾಬು ವಿಲನ್‌ ಆಗಿದ್ದು, ಸುಮಾರು 20 ವರ್ಷದ ನಂತರ ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಪುನಃ ಬರುತ್ತಿರುವುದು ವಿಶೇಷತೆಗಳಲ್ಲೊಂದು. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ರವಿ ಬಸ್ರೂರು ಸಂಗೀತವಿದೆ. ಚೇತನ್ ಕುಮಾರ್ ಸಾಹಿತ್ಯವಿದೆ.

ಮಹೇಶ್‌ ಕುಮಾರ್‌, ನಿರ್ದೇಶಕ
Categories
ಸಿನಿ ಸುದ್ದಿ

ಇದು ಸಿಕ್ಸ್‌ ಕ್ವಾಲಿಟೀಸ್ ವಿಷಯ-‌ ಅಭಿಮನ್‌ ರಾಯ್‌ ಈಗ ನಿರ್ದೇಶಕ

ಸಿಕ್ಸ್‌ ಮೂಲಕ ಆಕ್ಷನ್-ಕಟ್‌ ಹೇಳ್ತಾರೆ ಮ್ಯೂಸಿಕ್‌ ಡೈರೆಕ್ಟರ್‌

ಅಮೃತಾಂಜನ್‌ ಬೆಡಗಿ ನಾಯಕಿ

ಕನ್ನಡದಲ್ಲಿ ಈಗಾಗಲೇ ಒಂದಷ್ಟು ತಾಂತ್ರಿಕ ವರ್ಗದವರು ನಿರ್ದೇಶನಕ್ಕೆ ಇಳಿದಿರೋದು ಗೊತ್ತೇ ಇದೆ. ಛಾಯಾಗ್ರಾಹಕರು ನಿರ್ದೇಶಕರಾಗಿದ್ದಾರೆ. ಸಂಗೀತ ನಿರ್ದೇಶಕರೂ ಆಕ್ಷನ್‌ -ಕಟ್‌ ಹೇಳಿದ್ದಾರೆ. ಆ ಸಾಲಿಗೆ ಈಗ ಅಭಿಮನ್‌ ರಾಯ್‌ ಕೂಡ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಹೌದು, ಕನ್ನಡದಲ್ಲಿ ಇಲ್ಲಿಯವರೆಗೂ ಅದೆಷ್ಟೋ ಹಿಟ್‌ ಹಾಡುಗಳನ್ನು ಕೊಟ್ಟು ತಮ್ಮದೇ ಆದ ಅಭಿಮಾನಿ ವರ್ಗವನ್ನು ಕಟ್ಟಿಕೊಂಡಿರುವ ಅಭಿಮನ್‌ ರಾಯ್‌, ತಮ್ಮಸಂಗೀತ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದವರು. ಸದಾ ಉತ್ಸಾಹದಲ್ಲೇ ಕೆಲಸ ಮಾಡುವ ಮತ್ತು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಮ್ಯೂಸಿಕ್‌ ಹೀರೋ ಆಗಿದ್ದ ಅಭಿಮನ್‌ ರಾಯ್‌,   ಇದೀಗ ಮೊದಲ ನಿರ್ದೇಶನದ ಚಿತ್ರಕ್ಕೆ ರೆಡಿಯಾಗಿದ್ದಾರೆ. ಅಷ್ಟೇ ಅಲ್ಲ, ಸದ್ದಿಲ್ಲದೆಯೇ ಅವರು ತಮ್ಮ ಹೊಸ ಚಿತ್ರದ ಫಸ್ಟ್‌ ಲುಕ್‌ ಕೂಡ ಬಿಡುಗಡೆ ಮಾಡಿದ್ದಾರೆ. ಅಂದಹಾಗೆ, ಅಭಿಮನ್‌ರಾಯ್‌ ಅವರು ತಮ್ಮ ಚೊಚ್ಚಲ ಚಿತ್ರಕ್ಕೆ ಇಟ್ಟಿರುವ ಹೆಸರು “ಸಿಕ್ಸ್‌”.

ಲವ್‌ ಜೊತೆ ಕಾಮಿಡಿ ಥ್ರಿಲ್ಲರ್

ಇದು ಶ್ರೇಯ ಸಿಲ್ವರ್‌ ಸ್ಕ್ರೀನ್‌ ಬ್ಯಾನರ್‌ನಲ್ಲಿ ತಯಾರಾಗಿರುವ ಸಿನಿಮಾ. ನಳಿನಿ ಗೌಡ ಹಾಗೂ ರವಿಕುಮಾರ್‌, ಸೋಮಶೇಖರ್‌ ರಾಜವಂಶಿ ನಿರ್ಮಾಣ ಮಾಡಿದ್ದಾರೆ. ಇಷ್ಟಕ್ಕೂ ಸಂಗೀತ ನಿರ್ದೇಶಕ ಅಭಿಮನ್‌ರಾಯ್‌ ಅವರೇಕೆ ನಿರ್ದೇಶನಕ್ಕಿಳಿದರು? ಈ ಬಗ್ಗೆ “ಸಿನಿ ಲಹರಿ” ಜೊತೆ ಮಾತನಾಡುವ ಅಭಿಮನ್‌ ರಾಯ್‌, “ಮೊದಲಿನಿಂದಲೂ ನನಗೆ ಸಿನಿಮಾ ನಿರ್ದೇಶಿಸುವ ಆಸಕ್ತಿ ಇತ್ತು. ಈಗ ಇರುವ ತಾಂತ್ರಿಕತೆಯಲ್ಲಿ ಯಾರು ಏನ್‌ ಬೇಕಾದರೂ ಮಾಡಬಹುದು. ಈ ಹಿಂದೆಯೇ ನಾನು, ಆಡಿಯೋ, ವಿಡಿಯೋ ಆಲ್ಬಂ ಮಾಡಿದ್ದೆ. ಅದೇ ಟೆಕ್ನಲಾಜಿ ಬಳಸಿಕೊಂಡು ಒಂದು ಹೆಜ್ಜೆ ಮುಂದಿಟ್ಟಿದ್ದೇನೆ. “ಸಿಕ್ಸ್”‌ ಅನ್ನೋದು ಒಂದು ಸಂದೇಶ ಇರುವ ಕಥೆ. ಪಕ್ಕಾ ಕನ್ನಡ ನೆಲದ ಚಿತ್ರ. ಅದರಲ್ಲೂ ಈಗಿನ ಟ್ರೆಂಡ್‌ಗೆ ತಕ್ಕಂತಿರುವ ಕಥೆ. ಇದೊಂದು ಲವ್‌ಸ್ಟೋರಿ, ಕಾಮಿಡಿಯ ಜೊತೆಗೆ ಥ್ರಿಲ್ಲರ್‌ ಅಂಶಗಳೂ ಇಲ್ಲಿವೆ. ಹಾಗಾಗಿ ನಾನೇ ಒಂದೊಳ್ಳೆಯ ಕಥೆ ಹೆಣೆದು, ಚಿತ್ರಕಥೆ ಮಾಡಿಕೊಂಡು, ಸಂಭಾಷಣೆಯನ್ನೂ ಬರೆದು, ಈಗ ನಿರ್ದೇಶನಕ್ಕೆ ಅಣಿಯಾಗಿದ್ದೇನೆ. ನನ್ನ ಈ ಮೊದಲ “ಸಿಕ್ಸ್‌” ಬಗ್ಗೆ ಹೇಳುವುದಾದರೆ, ಸಣ್ಣ ತಪ್ಪಿನಿಂದ ದೊಡ್ಡ ತಪ್ಪುಗಳು ಹೇಗಾಗುತ್ತವೆ. ದೊಡ್ಡ ಸಮಸ್ಯೆಯನ್ನೂ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬ ವಿಷಯ ಇಟ್ಟುಕೊಂಡು ಕಥೆ ಹೆಣೆದಿದ್ದೇನೆ ಎಂಬುದು ಅಭಿಮನ್‌ ಅಭಿಪ್ರಾಯ.

ನೈಜತೆಯ ಚಿತ್ರಣ‌

ಸಾಮಾನ್ಯವಾಗಿ ಸಮಾಜದಲ್ಲಿ ಒಂದಲ್ಲ ಒಂದು ಸಮಸ್ಯೆಗೆ ಎಲ್ಲರೂ ಸಿಲುಕಿಕೊಳ್ಳುತ್ತಾರೆ. ಅಂತಹ ಸಣ್ಣಪುಟ್ಟ ಸಮಸ್ಯೆ ಹೇಗೆ ದೊಡ್ಡದ್ದಾಗುತ್ತೆ. ಯಾಕೆ ಹಾಗಾಗುತ್ತೆ ಎಂಬುದರ ಅಂಶ ಇಲ್ಲಿದೆ. ಇದೊಂದು ನೈಜತೆಗೆ ಹತ್ತಿರವಾಗಿರುವ ಚಿತ್ರ. ಇಲ್ಲಿ ಯಾವುದೇ ಕಲಾವಿದರಿಗೂ ಮೇಕಪ್‌ ಇರುವುದಿಲ್ಲ. ಎಲ್ಲವೂ ನಮ್ಮ ಅಕ್ಕಪಕ್ಕದಲ್ಲೇ ನಡೆದ ಘಟನೆ ಎಂಬಂತೆ ಭಾಸವಾಗುವಂತಹ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಮಾಡುತ್ತೇನೆ. ಬಹುತೇಕ ಬೆಂಗಳೂರು, ಕೋಲಾರ, ಚಿತ್ರದುರ್ಗ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇಲ್ಲಿ ಡ್ರಾಮಾ ಅನ್ನೋದು ಇರಲ್ಲ. ಈ ಹಿಂದೆ ಕನ್ನಡದಲ್ಲಿ ಬಂದಿರುದ ಕೆಲವು ನೈಜ ಘಟನೆಯ ಸಿನಿಮಾಗಳಂತೆಯೇ ಇದೂ ಮೂಡಿಬರಲಿದೆ. ಇನ್ನು, ನನ್ನ ಸರ್ಕಲ್‌ ಬಳಿ ನಡೆದಿರುವಂತಹ ಹಲವಾರು ವಿಷಯಗಳನ್ನು ಇಲ್ಲಿ ಹೇಳಹೊರಟಿದ್ದೇನೆ. ನಾನೊಬ್ಬ ಸಂಗೀತ ನಿರ್ದೇಶಕನಾಗಿದ್ದರೂ, ಇಲ್ಲಿ ವಿನಾಕಾರಣ ಹಾಡುಗಳನ್ನು ತೂರಿಸಲು ಹೋಗಿಲ್ಲ. ಕೇವಲ ಮೂರು ಹಾಡುಗಳಿವೆ. ಎಲ್ಲಾ ಹಾಡುಗಳೂ ಕಥೆಗೆ ಪೂರಕವಾಗಿರಲಿವೆ. ಸದ್ಯಕ್ಕೆ ಈಗ ಝೇಂಕಾರ್‌ ಮ್ಯೂಸಿಕ್‌ ಮೂಲಕ ಫಸ್ಟ್‌ ಲುಕ್‌ ಹೊರಬಂದಿದೆ. ಡಿಸೆಂಬರ್‌ ಹೊತ್ತಿಗೆ ಚಿತ್ರೀಕರಣ ಮುಗಿಸಿ, ನಂತರ ಟೀಸರ್‌, ಸಾಂಗ್‌, ಟ್ರೇಲರ್‌ ಅನ್ನು ಹಂತ ಹಂತವಾಗಿ ಬಿಡುಗಡೆ ಮಾಡಿ ಆಮೇಲೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ಅಭಿಮನ್‌ ರಾಯ್.‌

ಪಾಯಲ್‌ ಚೆಂಗಪ್ಪ, ನಾಯಕಿ

ಅಮೃತಾಂಜನ್‌ ಬೆಡಗಿ ಎಂಟ್ರಿ
ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ “ಅಮೃತಾಂಜನ್‌” ಬೆಡಗಿ ಪಾಯಲ್‌ ಚೆಂಗಪ್ಪ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿದ್ದಾರೆ. “ಅಮೃತಾಂಜನ್”‌ ಸಾಕಷ್ಟು ಸುದ್ದಿ ಮಾಡಿದ ಕಿರುಚಿತ್ರ. ಒಂದೊಳ್ಳೆಯ ಸಂದೇಶವನ್ನು ಹಾಸ್ಯಮಯವಾಗಿ ರೂಪಿಸಿದ ಕಿರುಚಿತ್ರಕ್ಕೆ ಭಾರೀ ಮೆಚ್ಚುಗೆ ಬಂದಿತ್ತು. ಅಲ್ಲಿ ನಟಿಸಿದ್ದ ಪಾಯಲ್‌ ಚೆಂಗಪ್ಪ ನಮ್ಮ “ಸಿಕ್ಸ್‌ʼ ಚಿತ್ರದ ನಾಯಕಿ. ಉಳಿದಂತೆ ಇಲ್ಲಿ ರವಿಚಂದ್ರ, ಪ್ರಣವ್‌ ರಾಯ್‌, ಪೂರ್ವ ಯೋಗಾನಂದ್‌ ಇತರರು ಇದ್ದಾರೆ. ಎಲ್ಲಾ ಸರಿ, “ಸಿಕ್ಸ್‌” ಶೀರ್ಷಿಕೆ ಇರುವುದರಿಂದ ಇಲ್ಲಿ ಆರು ಪಾತ್ರಗಳ ಸುತ್ತವೇನಾದರೂ ಸಿನಿಮಾ ಸಾಗುತ್ತಾ? ಅಥವಾ ಇಲ್ಲಿ “ಸಿಕ್ಸ್‌” ಕ್ವಾಲಿಟೀಸ್‌ ಏನಾದರೂ ಇದೆಯಾ? ಇದೆಲ್ಲದ್ದಕ್ಕೂ ಸಿನಿಮಾ ಉತ್ತರ ಕೊಡುತ್ತದೆ ಎಂಬುದು ಅಭಿಮನ್ ರಾಯ್‌ ಮಾತು. ಅಂದಹಾಗೆ, ಚಿತ್ರಕ್ಕೆ ಸಿದ್ಧಾರ್ಥ್‌ ಛಾಯಾಗ್ರಹಣವಿದೆ. ಅದೇನೆ ಇರಲಿ, ಕೇವಲ ಫಸ್ಟ್‌ ಲುಕ್‌ನಲ್ಲಿ ಕಣ್ಣುಗಳನ್ನಷ್ಟೇ ಬಿಟ್ಟು, ಕಣ್ಣಲ್ಲೇ ಕುತೂಹಲ ಕೆರಳಿಸಿದ್ದಾರೆ. ಆ ಕುತೂಹಲ ತಣಿಯಬೇಕಾದರೆ, ಅವರ ಮೊದಲ ನಿರ್ದೇಶನದ “ಸಿಕ್ಸ್‌” ಹೊರಬರಬೇಕು. ಮೊದಲ ಬಾಲ್‌ನಲ್ಲೇ ಸಿಕ್ಸರ್‌ ಬಾರಿಸಿದರೆ, ಅಭಿಮನ್‌ ರಾಯ್‌ ತಮ್ಮ ಮೊದಲ ಚಿತ್ರ ʼಸಿಕ್ಸ್‌” ಮೂಲಕ ಸಿಕ್ಸರ್‌ ಬಾರಿಸುವಂತಾಗಲಿ ಎಂಬುದು ʼಸಿನಿ ಲಹರಿ” ಆಶಯ.

ಸಿಕ್ಸ್‌ ತಂಡದ ಜೊತೆ ಅಭಿಮನ್‌ ರಾಯ್
Categories
ಸಿನಿ ಸುದ್ದಿ

ಕನ್ನಡಿಗರಿಗೆ ನಾನು ಚಿರಋಣಿ- 4 ದಶಕ ಸಿನಿಪಯಣ ನೆನೆದು ಜಗ್ಗೇಶ್‌ ಭಾವುಕ

ನನ್ನ ಹೀರೋ ಮಾಡಿದ್ದು ಅಂಬರೀಶ್‌ !

ರಾಜಕೀಯಕ್ಕೆ ತಳ್ಳಿದ್ದು ಡಿಕೆಶಿ

 

“ನನ್ನ ಬದುಕಿಗೆ ಆ ಎರಡು ಚಿತ್ರಗಳ ಪಾತ್ರಗಳು ದೊಡ್ಡ ತಿರುವು ಕೊಟ್ಟಿವೆ…”
– ಹೀಗೆ ಹೇಳಿ ಹಾಗೊಂದು ನಿಟ್ಟುಸಿರು ಬಿಟ್ಟರು ಜಗ್ಗೇಶ್.‌ ನವರಸ ನಾಯಕ ಜಗ್ಗೇಶ್‌ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಅಷ್ಟೇ ಅಲ್ಲ, ಅವರೊಬ್ಬ ಅಪ್ಪಟ ಮಾತಿನ ಮಲ್ಲ. ನಗುವಿನ ಮೋಡಿಗಾರ. ನವೆಂಬರ್‌ ೧೭, ೧೯೮೦ರಲ್ಲಿ ಕನ್ನಡ ಸಿನಿಜಗತ್ತಿಗೆ ಕಾಲಿಟ್ಟ ಜಗ್ಗೇಶ್‌ ಅವರ ಸಿನಿ ಬದುಕಿಗೆ ಈಗ ನಾಲ್ಕು ದಶಕಗಳಾಗಿವೆ. ಈ ೪೦ ವರ್ಷಗಳ ಅದ್ಭುತ ಸಿನಿ ಪಯಣ ಕುರಿತು ಜಗ್ಗೇಶ್‌ ಒಂದಷ್ಟು ಮಾತನಾಡಿದ್ದಾರೆ. ಅದು ಅವರದೇ ಮಾತುಗಳಲ್ಲಿ…

 

“ಇಷ್ಟು ವರ್ಷ ನಾನು ಸಿನಿಬದುಕಲ್ಲಿದ್ದೇನೆ ಅಂದರೆ ಅದಕ್ಕೆ ಬಹಳಷ್ಟು ಜನ ಕಾರಣರಾಗಿದ್ದಾರೆ. ಅಂದಿನ ಮತ್ತು ಇಂದಿನ ಮಾಧ್ಯಮವೂ ಜೊತೆಗಿದೆ. ನಾನು ಈ ಚಿತ್ರರಂಗದಲ್ಲಿ ಬೆಳೆಯೋಕೆ ಹಲವರು ಕಾರಣ. ಮುಖ್ಯವಾಗಿ ನಿರ್ಮಾಪಕ ವೀರಸ್ವಾಮಿ. ಅವರು ಗಾಂಧಿನಗರದ ಕಿಂಗ್.‌ ಒಮ್ಮೆ ಒಂದಷ್ಟು ಫೋಟೋ ಹಿಡಿದು ಅವರನ್ನು ಭೇಟಿ ಮಾಡಲು ಹೋದಾಗ, ನನ್ನ ಫೋಟೋ ನೋಡಿ, ರಜನಿ ಲುಕ್‌ ಇದೆಯಲ್ಲಯ್ಯಾ, ಅಂತ ಹೇಳಿ, ನನ್ನ ಹೆಸರನ್ನು ಬರೆಸಿ, ಅವರ “ರಣಧೀರ” ಸಿನಿಮಾಗೆ ಆಯ್ಕೆ ಮಾಡಿದರು. ಆಗ ನನ್ನದು ಚಿತ್ರಾನ್ನ ತಿನ್ನೋ ಪಿರಿಯಡ್.‌ ಕೈಗೆ ಕಾಸು ಕೊಕಟ್ಟು ನಿಮ್ಮ ಬಟ್ಟೆ ಆಯ್ಕೆ ಮಾಡ್ಕೊಳ್ಳಿ ಅಂದ ಪುಣ್ಯಾತ್ಮ. ಆ ದುಡ್ಡಲ್ಲಿ ಸ್ವಲ್ಪ ಉಳಿಸಿಕೊಂಡು ಹೇಗೋ ಆ ಚಿತ್ರ ಮಾಡಿದೆ. ಅಲ್ಲಿಂದ ನನ್ನ ಸಿನಿಬದುಕು ಮತ್ತೊಂದು ದಾರಿ ಕಂಡುಕೊಂಡಿತು. ಅದೃಷ್ಟ ಅನ್ನೋದು ಹೇಗೆಲ್ಲಾ ಬದಲಾಯ್ತಾ ಹೋಯ್ತು. ನನ್ನ ಬದುಕಲ್ಲಿ ಆ ಎರಡು ಚಿತ್ರಗಳ ಪಾತ್ರಗಳು ದೊಡ್ಡ ಮಟ್ಟದ ಓಪನಿಂಗ್ ಕೊಟ್ಟಿದ್ದು ಸುಳ್ಳಲ್ಲ.‌

 

ಒಂದು “ರಣರಂಗʼ ಚಿತ್ರ. ಆ ಕ್ರೆಡಿಟ್‌ ಶಿವರಾಜಕುಮಾರ್‌ಗೆ ಸಲ್ಲಬೇಕು. ಒಮ್ಮೆ ಅವಕಾಶ ಕುರಿತು ಹೊನ್ನವಳ್ಳಿ ಕೃಷ್ಣ ಅವರ ಬಳಿ ಹೇಳಿಕೊಂಡೆ, ಕೃಷ್ಣ ಶಿವಣ್ಣನ್ನೊಮ್ಮೆ ಕೇಳು ಸಹಾಯ ಮಾಡ್ತಾರೆ ಅಂದ. ಆಗ ನನ್ನ ಬಳಿ ಬೈಕ್‌ಗೆ ಪೆಟ್ರೋಲ್‌ ಹಾಕಿಸೋಕು ಕಾಸಿಲ್ಲ. ಹೇಗೋ ಜೈ ಅಂತ ಶಿವಣ್ಣ ಮನೆಗೆ ಹೋದೆ. “ನನಗೆ ಅವಕಾಶ ಸಿಗ್ತಾ ಇಲ್ಲ. ಸಹಾಯ ಮಾಡಿʼ ಅಂದೆ. ಶಿವಣ್ಣ “ರಣರಂಗ” ಚಿತ್ರದಲ್ಲಿ ಪಾತ್ರ ಫಿಕ್ಸ್‌ ಮಾಡಿಸಿದರು. ಅದೇಕೋ ಆ ಸೆಟ್‌ನಲ್ಲಿ ಎಲ್ಲರಿಗೂ ನನ್ನ ಮೇಲೆ ಸಿಟ್ಟು. ಯಾರೋ ಮಾಡಬೇಕಿದ್ದ ಪಾತ್ರ ನನಗೆ ಸಿಕ್ಕಿದೆ ಅಂತ. ಆ ಚಿತ್ರಕ್ಕೆ ಸೋಮಶೇಖರ್‌ ನಿರ್ದೇಶಕರು. ಅವರಿಗೂ ಒಂದು ರೀತಿ ಕೋಪ ಇತ್ತು. ಯಾರೋ ಬಂದಿರದ ವ್ಯಕ್ತಿಯ ಡೈಲಾಗ್‌ ನನ್ನ ಪಾಲಿಗೆ ಬಂದಿತ್ತು. ಆ ಡೈಲಾಗ್‌ ಹೇಳಿಸಿದರು. ಚೆನ್ನಾಗಿಯೇ ಡೈಲಾಗ್‌ ಹೇಳಿದೆ. ನಿರ್ದೇಶಕರು ಖುಷಿಯಾಗಿ, ಒಳ್ಳೆಯ ಡೈಲಾಗ್‌ ಕೊಟ್ಟರು. ಆ ಶಾಟ್‌ ನಂತರ ಬ್ರೇಕ್‌ನಲ್ಲಿ ಊಟ ಮಾಡ್ತಾ ಕೂತಿದ್ದೆ. ನಿರ್ದೇಶಕರು ಬಂದು ಪ್ರೀತಿಯಿಂದ ಮಾತಾಡಿಸಿದರು. ಅಲ್ಲಿಂದ ಒಂದು ರೀತಿಯ ಟರ್ನ್‌ ಆಯ್ತು.

 

ಮತ್ತೊಂದು ಹಂತಕ್ಕೆ ಕರೆದೊಯ್ದ ದ್ವಾರಕೀಶ್ ಚಿತ್ರ
ಇನ್ನೊಂದು ಸಿನ್ಮಾ “ಕೃಷ್ಣ ನೀ ಕುಣಿದಾಗ”. ದ್ವಾರಕೀಶ್‌ ಅವರು ಆ ಚಿತ್ರ ಮಾಡುವಾಗ, ಯಾರೋ ಕಲಾವಿದರು ಹೆಚ್ಚು ಹಣ ಕೇಳಿದರು ಅಂತ, ಬೇಜಾರಾಗಿ, ದಾರಿ ಹೋಗೋ ದಾಸಯ್ಯನನ್ನು ಕರೆದು ಆಕ್ಟ್‌ ಮಾಡಿಸ್ತೀನಿ. ಇವರಿಗೆ ಅಷ್ಟೊಂದು ಕಾಸು ಕೊಡಲ್ಲ ಅಂತ ಹೇಳಿದ್ದರಂತೆ. ಆಗ ನನಗೆ ಗೊತ್ತಿರೋರು ಒಬ್ಬರು, ರಜನಿಕಾಂತ್‌ ರೀತಿ ಒಬ್ಬ ಇದ್ದಾನೆ. ಚೆನ್ನಾಗಿ ನಟಿಸ್ತಾನೆ ಅಂದಿದ್ದಾರೆ. ಹೌದಾ, ಹೋಗಿ ಎತ್ತಾಕ್ಕೊಂಡ್‌ ಬನ್ನಿ ಅಂದಿದ್ದಾರೆ. ಉದಯಶಂಕರ್‌ ಎರಡನೇ ಮಗ ರವಿ ನಮ್ಮನೆ ಹುಡುಕಿಕೊಂಡು ಬಂದ. ಅವತ್ತು ಜನವರಿ ೧೪ ಹಬ್ಬವಿತ್ತು. ಬಂದ ರವಿಗೆ ಏನ್‌ ಸಮಾಚಾರ ಅಂದೇ, ದ್ವಾರಕೀಶ್‌ ಕರ್ಕೊಂಡ್‌ ಬಾ ಅಂದಿದ್ದಾರೆ ಅಂದ. ಯಪ್ಪಾ, ಸಣ್ಣ ಪಾತ್ರ ಇರಬೇಕು ಅದಕ್ಕೆ ಇಷ್ಟೊಂದ್‌ ಬಿಲ್ಡಪ್ಪಾ ಅಂದೆ. ಇಲ್ಲಾ ಕಣಯ್ಯಾ, ಕಾಸು ಕೊಟ್ಟು ಕಳುಹಿಸಿದ್ದಾರೆ ನೋಡು ಅಂದ. ಅಲ್ಲಿಂದ ಮೈಸೂರಿಗೆ ಹೋದೆ. ಸೆಟ್‌ನಲ್ಲಿ ದ್ವಾರಕೀಶ್‌ ನೋಡಿ, ಖುಷಿಯಾದರು. ರಜನಿಕಾಂತ್‌ ಹಾಕಿ ಬಿಟ್ಟಿರುವ ಅಷ್ಟೂ ಬಟ್ಟೆ ಆಲ್ಟ್ರ್‌ ಮಾಡಿ ಇವನಿಗೆ ಹಾಕ್ರಿ ಅಂದ್ರು. ಸೇಮ್‌ ಕಮಲಹಾಸನ್‌ ಟೈಪ್‌ ರೆಡಿ ಮಾಡಿಬಿಟ್ರು. ಕನ್ನಡಿ ನೋಡಿ ನನಗೇ ಒಂದು ರೀತಿ ನಂಬಲಾಗಲಿಲ್ಲ. ಅಷ್ಟರಮಟ್ಟಿಗೆ ಮೇಕಪ್‌ ಮಾಡಿದ್ದರು. ಆ ಚಿತ್ರ ಇನ್ನೊಂದು ಹಂತಕ್ಕೆ ಕರೆದೊಯ್ತು.

 

ಹೀರೋ ಆಗು ಅಂದದ್ದು ಅಂಬರೀಶ್
ಆ ಎರಡು ಸಿನಿಮಾಗಳ ಬಳಿಕ ಒಂದೊಂದೇ ಸಿನಿಮಾಗಳು ಹುಡುಕಿ ಬಂದವು. ಸಂಬಳ ಅಂದ್ರೆ ಏನು ಅಂತ ಗೊತ್ತಿಲ್ಲದವನು, ಇಷ್ಟು ಕೊಟ್ಟರೆ, ಚಿತ್ರ ಮಾಡಬಹುದು ಅಂತ ಹೇಳುವ ಮಟ್ಟಕ್ಕೆ ಬಂದೆ. ಅಂದಿನ ದಿನದಲ್ಲಿ ಈ ಪಾತ್ರ, ಈ ಚಿತ್ರ ಮಾಡಬೇಕು ಅಂತ ಬಂದವರಿಗೆ ಎರಡು ಲಕ್ಷ ಕೇಳುವ ಮಟ್ಟಕ್ಕೆ ಬಂದೆ. ಅದೊಂದು ಹೆಮ್ಮೆ. ಇನ್ನು, ಅಂಬರೀಶ್‌ ಅವರ “ರೌಡಿ ಎಂಎಲ್‌ಎ” ಚಿತ್ರದ ಕ್ಲ್ಯೆಮ್ಯಾಕ್ಸ್‌ ಫೈಟ್‌ ನಡೀತಾ ಇತ್ತು. ಜನರಂತೂ ಕಿರುಚಾಡೋರು. ಆಗ, ಅವರೇ ಲೋ, ನೋಡೋ, ಹೆಂಗ್‌ ಕಿರುಚಾಡ್ತಾರೆ ಜನ. ಹೀರೋ ಆಗೋ ನೀನು ಅಂದ್ರು. ನಂಜನಗೂಡಿನ ಈಶ್ವರನ ಮುಂದೆ ಅವರು ಆ ಮಾತು ಹೇಳಿದ ಕ್ಷಣ ಚೆನ್ನಾಗಿತ್ತು ಅನಿಸುತ್ತೆ. ಅವರ ಮಾತು ನಿಜವಾಯ್ತು. ನಾನು ಹೀರೋ ಆದೆ. “ತರ್ಲೆ ನನ್ಮಗ” ಚಿತ್ರ ಮಾಡಿದೆ. ಆದರೆ, ಆ ಚಿತ್ರವನ್ನು ಉಪ್ಪಿ ಚೆನ್ನಾಗಿ ಮಾಡಿದ್ದರೂ, ನಿಂತು ಹೋಯ್ತು. ಬೇಸರ ಆಯ್ತು. ಆಮೇಲೆ, ನಮ್ಮ ಭಾವ ಜೊತೆ ಸೇರಿ “ಭಂಡ ನನ್ನ ಗಂಡ” ಚಿತ್ರದ ಸ್ಕ್ರಿಪ್ಟ್‌ ರೆಡಿ ಮಾಡಿದೆ. ಅದರಲ್ಲಿ ಸ್ಪೆಷಲ್‌ ಪಾತ್ರವಿತ್ತು. ಅಂಬರೀಶ್‌ ಅವರನ್ನು ಕೇಳಿ, ಖಂಡಿತ ಮಾಡ್ತಾರೆ ಅನ್ನೋ ಮಾತು ಕೇಳಿಬಂತು. ಸರಿ, ನೋಡೋಣ ಅಂತ, ಅವರ ಮನೆಗೆ ಹೋದೆ. ಹೇಳಿದೆ. ದೊಡ್ಡ ಹೃದಯ ಅವರದು. ಒಪ್ಪಿದರು. ಸಿನಿಮಾನು ಕಷ್ಟಪಟ್ಟು ಮಾಡಿದೆ. ಆಮೇಲೆ ಆ ಸಿನಿಮಾ ರಿಲೀಸ್‌ ಆಗೋಕೆ ಸಾಕಷ್ಟು ಪರದಾಡಿದೆ. ಯಾರ ಬಳಿ ಹೋದರೂ, ರಿಲೀಸ್‌ ಮಾಡೋಕೆ ಮುಂದಾಗಲಿಲ್ಲ. ಕೊನೆಗೆ, ಅಂಬರೀಶ್‌ ಬಳಿ ಹೋಗಿ, ಹೀರೋ ಆಗು ಅಂತ ಹೇಳಿದ್ರಿ, ಹೀರೋ ಆದೆ. ಈಗ ಯಾರೂ ಸಿನಿಮಾ ರಿಲೀಸ್‌ ಮಾಡೋಕೆ ಮುಂದಾಗ್ತಾ ಇಲ್ಲ. ಅಂದೆ. ಹೌದಾ, ಸರಿ ನೀನೀಗ ಮನೆಗೆ ಹೋಗು ಮಾತಾಡ್ತೀನಿ ಅಂದ್ರು. ಬೆಳಗ್ಗೆ, ಒಬ್ಬ ವಿತರಕರು ಫೋನ್‌ ಮಾಡಿ,ಕರೆಸಿಕೊಂಡು ಸಿನಿಮಾ ನೋಡಿ, ಖುಷಿಪಟ್ಟು ಸಿನಿಮಾ ರಿಲೀಸ್‌ ಮಾಡಿದರು. ಅದು ಸೂಪರ್‌ ಹಿಟ್‌ ಆಯ್ತು. ಆ ಕಾಲಕ್ಕೆ ಅದು ೬೯ ಲಕ್ಷ ವ್ಯಾಪಾರ ಆಯ್ತು. ದುಡ್ಡು ಅನ್ನೋದನ್ನದ್ದು ಜೋಡಿಸಿ ನೋಡಿದ ದಿನವದು. ಅಲ್ಲಿಂದ ಬೆಳೆಯುತ್ತಾ, ಹಿಟ್‌, ಪ್ಲಾಪ್‌ ಕೊಡ್ತಾ, ಏರುತ್ತಾ, ಇಳಿಯುತ್ತಾ, ಗೆಲುವು, ಸೋಲು ಕಂಡು ಹಾಗೆಯೇ ಬೆಳೆದು ಬಂದೆ.

ರಾಜಕೀಯಕ್ಕೆ ತಳ್ಳಿದ್ದು ಡಿಕೆಶಿ
ಯಾವುದೋ ಒಂದು ಕಾರ್ಯಕ್ರಮಕ್ಕೆ ಟೈಗರ್‌ ಪ್ರಭಾಕರ್‌ ಸೇರಿದಂತೆ ಒಂದಷ್ಟು ಜನ ಬರ್ತಾರೆ, ನೀನು ಬಾ ಅಂತ ಅಂದು ಡಿ.ಕೆ.ಶಿವಕುಮಾರ್‌ ನನ್ನನ್ನು ಆಹ್ವಾನಿಸಿದರು. ನಾನು ಹೋದೆ. ನನ್ನ ಭಾಷಣ ಕೇಳಿದ ಡಿ.ಕೆ.ಶಿ. ಚೆನ್ನಾಗ್‌ ಮಾತಾಡ್ತಾನಲ್ಲ ಅಂತ, ನನ್ನನ್ನು ರಾಜಕೀಯಕ್ಕೆ ತಂದುಬಿಟ್ಟರು. ರಾಜಕೀಯ ಅನ್ನೋದು ನನ್ನ ಆಕಸ್ಮಿಕ ಎಂಟ್ರಿ. ಈಗಲೂ ನಾನು ಒಂದು ಪಕ್ಷದಲ್ಲಿ ಸದಸ್ಯನಷ್ಟೇ. ನಾನು ಇಂದಿಗೂ ಇಷ್ಟಪಡೋದು ಕಲೆಯನ್ನು ಮಾತ್ರ. ಈ 4೦ ವರ್ಷದ ಜರ್ನಿ ತೃಪ್ತಿ ನೀಡಿದೆ. ಇಷ್ಟು ವರ್ಷ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ ಎನ್ನುತ್ತಲೇ ಭಾವುಕರಾದ ಜಗ್ಗೇಶ್‌, ಎಲ್ಲರಿಗೂ ಧನ್ಯವಾದ ಹೇಳುತ್ತಾ ಹೋದರು. ಇನ್ನು, ನನ್ನ ಈ ಬೆಳವಣಿಗೆಯ ಹಿಂದೆ ರಾಯಯ ಆಶೀರ್ವಾದವಿದೆ. ಮನುಷ್ಯನಿಗೆ ಆಸೆ ಸಹಜ. ಆದರೆ, ತಾವು ಎಷ್ಟೇ ಬೆಳೆದರೂ, ಸರಿಯಾಗಿ ಬದುಕಿದ್ದೇವಾ ಅನ್ನೋದನ್ನು ಗಮನಿಸಬೇಕು. ನನಗೆ ಇಂದಿಗೂ ಭಯವಿದೆ. ಕನಸು ಮನಸ್ಸಲ್ಲೂ ಅಹಂಕಾರ ಇಟ್ಟುಕೊಂಡಿಲ್ಲ. ಎಲ್ಲರೂ ಅಷ್ಟೇ ಎಲ್ಲರ ಮೇಲೂ ಪ್ರೀತಿ ತೋರಿಸಿ, ದ್ವೇಷ ಬೇಡ.

 

ಕನ್ನಡಕ್ಕೆ ಆದ್ಯತೆ ಕೊಡಿ
ಕನ್ನಡ ಭಾಷೆ, ನೆಲ,ಜಲ ಬಗ್ಗೆ ಯೋಚಿಸಿ. ಕನ್ನಡ ಚಿತ್ರರಂಗದಲ್ಲಿ ಮೊದಲು ಕನ್ನಡಿಗರಿಗೆ ಅವಕಾಶ ಸಿಗಬೇಕು. ಈ ಪ್ಯಾನ್‌ ಇಂಡಿಯಾ ಕಟ್ಟಿಕೊಂಡು ಏನ್‌ ಮಾಡಬೇಕು. ಅಲ್ಲಿ ಕನ್ನಡಿಗರಿಗೆ ಕೆಲಸ ಕೊಡಲ್ಲ. ನಮ್ಮ ಕಲಾವಿದರು ಇರಲ್ಲ. ಯಾರನ್ನೋ ಮೆಚ್ಚಿಸೋಕೆ ಇಲ್ಲಿ ಏನೇನೋ ನಡೆಯುತ್ತಿದೆ. ನಾವು ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟವಿದೆ. ಕನ್ನಡಿಗರಿಗೆ ಕೆಲಸ ಕೊಡಿ, ಕನ್ನಡ ಸಿನಿಮಾ ಬಗ್ಗೆ ಮಾತಾಡಿ. ನಮ್ಮ ತನ ಉಳಿಸಿಕೊಳ್ಳಿ ಎಂಬುದು ಜಗ್ಗೇಶ ಮಾತು.


ಅಣ್ಣಾವ್ರು ನಾ ಕಂಡ ಸಂತ
ನಮ್‌ ತಾತಾ ಅಣ್ಣಾವ್ರ ಸಿನಿಮಾ ತೋರಿಸುತ್ತಿದ್ದರು. ಆಗಿನಿಂದಲೂ ನಾನು ಅಣ್ಣಾವ್ರ ಅಭಿಮಾನಿ. ನನ್ನ ಸೌಭಾಗ್ಯವೋ ಏನೋ, ಅವರೊಂದಿಗೆ ಬೆರೆತು, ಅವರಿಂದ ಶಹಬಾಸ್‌ಗಿರಿ ಪಡೆದಿದ್ದೇನೆ. ಎಲ್ಲರೂ ಅವರನ್ನು ಒಬ್ಬ ನಟರನ್ನಾಗಿ ನೋಡಿದರು. ನಾನು ಅವರನ್ನು ಸಂತರಾಗಿ ಕಂಡಿದ್ದೇನೆ. ನನ್ನ ಬದುಕಿನ ಸಾಕಷ್ಟು ಡೌಟ್ಸ್‌ ಕ್ಲಾರಿಫೈ ಮಾಡಿದವರು. ಅದು ಹಂಗಲ್ಲ, ಹಿಂಗೆ ಅಂತ ತಿದ್ದಿದವರು. ಅವರಿಂದ ನಾನು ತುಂಬಾ ವಿಷಯ ಕಲಿತುಕೊಂಡಿದ್ದೇನೆ. ಕುಟುಂಬ, ಭಾಷೆ, ಸಿನಿಮಾ ಅಂದರೆ ಏನು, ತಾನಂದರೆ ಏನು, ಹೇಗಿರಬೇಕು ಎಂಬಿತ್ಯಾದಿ ವಿಷಯವನ್ನು ಅರ್ಥಪೂರ್ಣವಾಗಿ ಹೇಳಿದ್ದಾರೆ. ಅವರ ಮಾತನ್ನು ನಾನು ಈಗಲೂ ಚಾಚು ತಪ್ಪದೆ ಮಾಡಿಕೊಂಡು ಬರುತ್ತಿದ್ದೇನೆ.

Categories
ಸಿನಿ ಸುದ್ದಿ

ಬಿಗ್‌ ಬಾಸ್‌ ಜೊತೆ ಮಾತುಕತೆ! ರಿಯಾಲಿಟಿ ಶೋ ಕುರಿತ ಪ್ರಕ್ರಿಯೆ ಜೋರು

ಸಂಕ್ರಾಂತಿಗೆ ಬಿಗ್‌ಬಾಸ್‌ ರಿಯಾಲಿಟಿ ಶೋ ಶುರು!

‌ ಮಾತುಕತೆಯಲ್ಲಿ ಪರಮೇಶ್ವರ್‌, ಸುದೀಪ್

ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್‌ ಅತೀ ಕುತೂಹಲ ಕೆರಳಿಸುವ ರಿಯಾಲಿಟಿ ಶೋ. ಇದುವರೆಗೂ ಕಿಚ್ಚ ಸುದೀಪ್‌ ಅತ್ಯದ್ಭುತವಾಗಿಯೇ ಆ ಬಿಗ್‌ಬಾಸ್‌ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಈಗ ಮತ್ತೊಂದು ಸುತ್ತಿನ ಬಿಗ್‌ಬಾಸ್‌ ಯಾವಾಗ ನಡೆಯುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಕುರಿತು ಈಗಾಗಲೇ ಒಂದಷ್ಟು ಅಂತೆ-ಕಂತೆಗಳೂ ಶುರುವಾಗಿವೆ. ಆಗುತ್ತೋ, ಇಲ್ಲವೋ ಎಂಬ ಮಾತಿಗೆ ಕೊನೆಗೂ ಬ್ರೇಕ್‌ ಬಿದ್ದಿದೆ. ಸ್ವತಃ ಕಾರ್ಯಕ್ರಮದ ಮುಖ್ಯಸ್ಥ ಪರಮೇಶ್ವರ್‌ ಗುಂಡ್ಕಲ್‌ ಅವರು ಬಿಗ್‌ಬಾಸ್‌ ರಿಯಾಲಿಟಿ ಶೋ ಕುರಿತು ಸ್ಪಷ್ಟಪಡಿಸಿದ್ದಾರೆ. ಸದ್ಯ ಬಿಗ್‌ಬಾಸ್‌ ರಿಯಾಲಿಟಿ ಶೋ ಕುರಿತಂತೆ ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ಸುದೀಪ್‌ ಜೊತೆಗೆ ಮಾತಿಗೆ ಕುಳಿತಿರುವ ಫೋಟೋವೊಂದನ್ನು ಹಂಚಿಕೊಂಡು ತಮ್ಮ ಮುಖಪುಟದಲ್ಲಿ ಶೇರ್‌ ಮಾಡಿದ್ದಾರೆ.


ಎಂಟನೇ ಆವೃತ್ತಿಯ ಬಿಗ್‌ಬಾಸ್‌ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಅಂತಿಮ ಹಂತ ತಲುಪಬೇಕಿತ್ತು. ಕೊರೊನಾ ಅಡ್ಡಿಯಾದ ಹಿನ್ನೆಲೆಯಲ್ಲಿ ಬಿಗ್‌ಬಾಸ್‌ ಕೂಡ ತಡವಾಗಿದೆ. ಈಗ ಅದಕ್ಕೆ ಚಾಲನೆ ದೊರೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸಂಕ್ರಾಂತಿ ವೇಳೆಗೆ ಬಿಗ್‌ಬಾಸ್‌ಗೆ ಚಾಲನೆ ದೊರೆಯಬಹುದು. ಎಂದಿನಂತೆ ಈ ಸಲದ ಅವೃತ್ತಿಯಲ್ಲೂ ಒಂದಷ್ಟು ಸೆಲಿಬ್ರಿಟಿಗಳ ಜೊತೆಗೆ ಸಾಮಾನ್ಯರೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇನ್ನು, ಕೊರೊನಾ ಹಾವಳಿಯಿಂದ ಬೇಸತ್ತ ಮಂದಿಗೂ ಭಯವಿದೆ. ಹಾಗಾಗಿ, ಬಿಗ್‌ಬಾಸ್‌ಗೆ ಬರುವ ಸ್ಪರ್ಧಿಗಳಿಗೆ ಪರೀಕ್ಷೆ ನಡೆಸಿ, ನಂತರ ಅವರನ್ನು ಕ್ವಾರಂಟೈನ್‌ ಮಾಡಿ ನಂತರ ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸುವ ಯೋಚನೆಯೂ ಕಾರ್ಯಕ್ರಮದ ಮುಖ್ಯಸ್ಥರಿಗೆ ಇದೆ.

 

 

Categories
ಸಿನಿ ಸುದ್ದಿ

ಇದು ಆರ್‌ಎಕ್ಸ್‌ ಅಲ್ಲ, ಆರ್‌ಎಚ್‌ 100!

ಡಿಸೆಂಬರ್‌ 18 ರಂದು ರಾಜ್ಯಾದ್ಯಂತ ಬಿಡುಗಡೆ

 

ಕನ್ನಡ ಸಿನಿಮಾರಂಗ ಈಗ ಎಂದಿನಂತೆ ಮೆಲ್ಲನೆ ಉತ್ಸಾಹದಲ್ಲಿದೆ. ಅಕ್ಟೋಬರ್‌ ೧೫ರಿಂದ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ಸಿಕ್ಕಿದ್ದೇ ತಡ, ಒಂದೊಂದೇ ಸಿನಿಮಾಗಳು ಚಿತ್ರಮಂದಿರದತ್ತ ದಾಪುಗಾಲು ಹಾಕಿದ್ದು ನಿಜ. ಮರುಬಿಡುಗಡೆ ಕಂಡ ಸಿನಿಮಾಗಳ ಸಂಖ್ಯೆಯೇ ಹೆಚ್ಚು. ಹಾಗೆ ನೋಡಿದರೆ, ಹೊಸ ಚಿತ್ರಗಳ್ಯಾವೂ ತೆರೆಗೆ ಮುಂದಾಗಲಿಲ್ಲ. ಯಾವಾಗ “ಆಕ್ಟ್‌ -1978” ಚಿತ್ರ ತೆರೆಗೆ ಬಂತೋ, ಮೆಲ್ಲನೆ ಒಂದೊಂದೇ ಸಿನಿಮಾಗಳು ತೆರೆಗೆ ಅಪ್ಪಳಿಸಲು ಸಜ್ಜಾಗಿವೆ. ಆ ಸಾಲಿಗೆ ಈಗ “ಆರ್‌ಎಚ್‌ 100” ಸಿನಿಮಾ ಕೂಡ ಬಿಡುಗಡೆಗೆ ತಯಾರಾಗಿದೆ.

ಹೌದು, ಡಿಸೆಂಬರ್ 18 ರಂದು ಚಿತ್ರ ಬಿಡುಗಡೆಯನ್ನು ಘೋಷಿಸಿದೆ. “ಆರ್‌ಎಚ್‌ 100” ಇದೊಂದು ಹಾರಾರ್ ಕಥಾಹಂದರ ಹೊಂದಿರುವ ಚಿತ್ರ. ಈಗಾಗಲೇ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಎ” ಪ್ರಮಾಣ ಪತ್ರ ನೀಡಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳಿಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ದೊರೆಕಿದೆ. ಎಸ್.ಎಲ್.ಎಸ್. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹರೀಶ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಸೋಮಶೇಖರ್ ಪಿ.ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರವನ್ನು ಮಹೇಶ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ಇವರದೇ. ಮನೋಜ್, ಸಿದ್ದು ಕೋಡಿಪುರ್ ಗೀತೆಗಳನ್ನು ಬರೆದಿದ್ದು, ಮೆಲ್ವಿನ್ ಮೈಕಲ್ ಸಂಗೀತ ನೀಡಿದ್ದಾರೆ. ಸಂಜಿತ್ ಹೆಗ್ಡೆ, ಅನುರಾಧ ಭಟ್, ಸಿದ್ದಾರ್ಥ್ ಬೆಲ್ ಮನು ಹಾಡಿದ್ದಾರೆ. ಚಿತ್ರಕ್ಕೆ ಕೃಷ್ಣ ಅವರ ಛಾಯಾಗ್ರಹಣವಿದೆ. ಸಿ.ರವಿಚಂದ್ರನ್ ಸಂಕಲನ ಮಾಡಿದರೆ, ಕುಂಫು ಚಂದ್ರು ಸಾಹಸವಿದೆ. ಗಣೇಶ್, ಹರ್ಷ್, ಚಿತ್ರ, ಕಾವ್ಯ, ಸೋಮ್, ಸುಹಿತ್ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಹನಿಮೂನ್‌ಗೆ ರೆಡಿನಾ?‌ ಶಿವಣ್ಣ ಪುತ್ರಿ ನಿವೇದಿತಾರ ವೆಬ್‌ಸೀರೀಸ್‌ ರೆಡಿ

ಸಕ್ಕತ್‌ ಮಜಾ ಉಂಟು ಟ್ರೇಲರ್

ಕನ್ನಡದಲ್ಲಿ ವೆಬ್‌ಸೀರೀಸ್‌ಗಳು ಹೊಸದೇನಲ್ಲ. ಈಗಾಗಲೇ ಸಾಕಷ್ಟು ವೆಬ್‌ಸೀರೀಸ್‌ ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ “ಹನಿಮೂನ್‌” ಕೂಡ ಸೇರಿದೆ. ಈ ಹೆಸರಲ್ಲೇ ಒಂಥರಾ ಮಜವಿದೆ. ಇನ್ನು, ವೆಬ್‌ಸೀರೀಸ್‌ ಒಳಗಿರುವ ಕಂಟೆಂಟ್‌ ಹೇಗಿರಬೇಡ. ಆ ಕಂಟೆಂಟ್‌ ಹೇಗಿದೆ ಅನ್ನೋದ್ದಕ್ಕೆ ವೆಬ್‌ಸೀರೀಸ್‌ ತಂಡ ಟ್ರೇಲರ್‌ ಬಿಡುಗಡೆ ಮಾಡಿದೆ.


ಹೌದು, ಡಾ.ಶಿವರಾಜ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಅವರು ದೊಡ್ಡ ಬಜೆಟ್ ನಲ್ಲಿ ವೆಬ್ ಸೀರೀಸ್ ಶುರು ಮಾಡಿದ್ದ ವಿಷಯ ಎಲ್ಲರಿಗೂ ಗೊತ್ತಿದೆ. ಅದೇ “ಹನಿಮೂನ್” . ಈಗಾಗಲೇ ಈ ವೆಬ್ ಸೀರೀಸ್, ಪೂರ್ಣಗೊಂಡಿದ್ದು ಇಷ್ಟರಲ್ಲೇ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ.

ಅದಕ್ಕೂ ಮುನ್ನ “ಹನಿಮೂನ್” ವೆಬ್ ಸೀರೀಸ್‌ ಟ್ರೇಲರ್ ಬಿಡುಗಡೆಯಾಗಿದ್ದು, ಸಖತ್ ಮಜಬೂತಾಗಿದೆ. ಆಗಷ್ಟೇ ಮದುವೆಯಾದ ಜೋಡಿಯೊಂದು ಹನಿಮೂನ್ ಗೆ ಕೇರಳ ಕಡೆ ಹೋದಾಗ, ಅಲ್ಲಿ ನಡೆಯುವ ಒಂದಷ್ಟು ಫಜೀತಿ, ಅಯಾಸ ಇತ್ಯಾದಿ ಕುರಿತ ರಸವತ್ತಾದ ವಿಷಯಗಳಿರುವ ತುಣುಕು ಟ್ರೇಲರ್ ನಲ್ಲಿ ಕಾಣಬಹುದು. ಸದ್ಯಕ್ಕೆ ಆ ಟ್ರೇಲರ್ ಗೆ ಭರ್ಜರಿ ಮೆಚ್ಚುಗೆ ಸಿಗುತ್ತಿದೆ.


ನಿವೇದಿತಾ ಶಿವರಾಜಕುಮಾರ್ ಅವರ ಜೊತೆ ಸಕ್ಕತ್ ಸ್ಟುಡಿಯೊ ಸಹ‌ ನಿರ್ಮಾಣ ಈ ಹನಿಮೂನ್ ವೆಬ್ ಸೀರೀಸ್ ಗಿದೆ.
ಇದು ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ. ಅಂದಹಾಗೆ, ಈ “ಹನಿಮೂನ್” ತೆಲುಗು ಅವತರಣಿಕೆ ವೆಬ್ ಸೀರೀಸ್ ನವೆಂಬರ್ 27ರಂದು ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ.
ಸಕ್ಕತ್ ಸ್ಟುಡಿಯೋ ಕ್ರಿಯೇಟಿವ್ ಟೀಮ್, ಈ ವೆಬ್ ಸರಣಿಯ ನಿರ್ದೇಶನದ ಜವಾಬ್ದಾರಿ ಹೊತ್ತಿದೆ. ಕ್ರಿಯೇಟಿವ್ ಡೈರೆಕ್ಟರ್ ಆಗಿ ತೇಜೇಶ್ ಗಣೇಶ್, ನಾಗಭೂಷಣ್ ಕೆಲಸ ಮಾಡಿದರೆ, ನಾಗಭೂಷಣ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ವಾಸುಕಿ ವೈಭವ್ ಸಂಗೀತವಿದೆ. ಶ್ರೀಷ ಕೂದುವಳ್ಳಿ ಹಾಗು ರಾಹುಲ್ ರಾಯ್ ಛಾಯಾಗ್ರಹಣವಿದೆ.


ಆರ್.ಜೆ.ಪ್ರದೀಪ್‌ ಮತ್ತು ತಂಡ ಈ “ಹನಿಮೂನ್‌” ಹಿಂದೆ ನಿಂತಿದೆ. ಒಂದೊಳ್ಳೆಯ ಈಗಿನ ಟ್ರೆಂಡ್‌ಗೆ ಬೇಕಾದ ಕಥಾವಸ್ತು ಇಟ್ಟುಕೊಂಡು ಹಾಸ್ಯಭರಿತದೊಂದಿಗೆ ಒಂದಷ್ಟು ಸಂದೇಶ ಸಾರುವ ಈ ವೆಬ್‌ಸರಣಿ, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಶಿವರಾಜಕುಮಾರ್‌ ಅವರ ಪುತ್ರಿ ನಿವೇದಿತಾ ಅವರಿಗೆ ನಿರ್ಮಾಣದ ಕಡೆ ಆಸಕ್ತಿ ಬಂದಿದ್ದೇ ತಡ,ಅವರು ತಮ್ಮ ಬ್ಯಾನರ್‌ನಡಿ ಹೊಸ ಬಗೆಯ ವೆಬ್‌ಸರಣಿ ಮಾಡಬೇಕು ನಿರ್ಧರಿಸಿದ ಹಿನ್ನೆಲೆಯಲ್ಲಿ ಸಿಕ್ಕಿದ್ದೇ, “ಹನಿಮೂನ್‌” ಕಥಾಹಂದರ.

ಟ್ರೇಲರ್‌ ನೋಡುವುದಕ್ಕೇ ಒಂದು ಮಜವೆನಿಸಿದರೆ, ಇಡೀ ವೆಬ್‌ಸರಣಿ ಇನ್ನುಹೇಗೆಲ್ಲಾ ಇರಬೇಡ. ಸದ್ಯಕ್ಕೆ, ಟ್ರೇಲರ್‌ ಟ್ರೆಂಡಿಂಗ್‌ನಲ್ಲಿದೆ. ಈಗಿನ ಯೂಥ್‌ಗೊಂದು ಹೇಳಿಮಾಡಿಸಿದ “ಹನಿಮೂನ್‌” ವೆಬ್‌ಸರಣಿ ಇದಾಗಿದ್ದು, ಹೊಸತನಕ್ಕೊಂದು ಸಾಕ್ಷಿಯಾಗಲಿದೆ ಎಂಬ ನಂಬಿಕೆ ಹುಟ್ಟಿಸಿದೆ.

error: Content is protected !!