ಬರಲಿದೆ ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ – ವಿನಾಯಕರಾಮ ಕಲಗಾರು ಅವರ ಕಾಮಗಾರಿ ಶುರು

 

ಜನವರಿ 27ಕ್ಕೆ ಲೋಕಾರ್ಪಣೆ

ಪತ್ರಕರ್ತ ವಿನಾಯಕರಾಮ್‌ ಕಲಗಾರು ಒಳ್ಳೆಯ ಬರಹಗಾರ. ಅದಕ್ಕಿಂತಲೂ ಹೆಚ್ಚು ಅಷ್ಟೇ ಸೊಗಸಾದ ಮಾತುಗಾರ. ಹಾಗಾಗಿಯೇ ಅವರು, ಹಲವು ಚಿತ್ರಗಳಿಗೆ ಮಾತುಗಳನ್ನೂ ಪೋಣಿಸಿದ್ದಾರೆ. ಹಲವಾರು ವಾಹಿನಿಗಳ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ವಿನಾಯಕರಾಮ್‌ ಕಲಗಾರು, ಕೆಲವು ವಾಹಿನಿಗಳಲ್ಲಿ ಪ್ರಸಾರಗೊಂಡ ರಿಯಾಲಿಟಿ ಶೋಗಳ ಸೂತ್ರದಾರ ಕೂಡ. ಅವರ ಬಗ್ಗೆ ಇಲ್ಲೇಕೆ ಇಷ್ಟೊಂದು ಪೀಠಿಕೆ ಅಂದರೆ, ಸಿನಿಮಾರಂಗದಲ್ಲೇ ಅತೀ ಹೆಚ್ಚು ಒಡನಾಟ ಇಟ್ಟುಕೊಂಡಿರುವ ವಿನಾಯಕರಾಮ್‌ ಕಲಗಾರು, ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಈ ಹಿಂದೆಯೇ ಹೇಳಿದ್ದರು. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ “ಡಾ.ರಾಜಕುಮಾರ ರಸ್ತೆ” ಎಂದೂ ಹೆಸರಿಟ್ಟಿದ್ದರು. ಹಾಗಂತ ಅವರ ಆ ಸಿನಿಮಾ ಕನಸು ಇನ್ನೂ ಮುಗಿದಿಲ್ಲ. ನನಸು ಮಾಡಿಕೊಳ್ಳುವ ಹಾದಿಯಲ್ಲೇ ಅವರಿದ್ದಾರೆ. ಹಾಗಾಗಿಯೇ ರಾಜ್‌ಕುಮಾರ್‌ ರಸ್ತೆಯಲ್ಲಿ ನಿಂತಿದ್ದಾರೆ.

ವಿನಾಯಕರಾಮ್‌ ಕಲಗಾರು

ಹೌದು, ವಿನಾಯಕರಾಮ್‌ ಕಲಗಾರು ಸಿನಿಮಾ ಮಾಡುವುದು ದಿಟ. ಅದಕ್ಕೂ ಮೊದಲು ಅವರೀಗ ಕಾದಂಬರಿ ಹಿಂದೆ ನಿಂತಿದ್ದಾರೆ. “ಡಾ.ರಾಜ್‌ಕುಮಾರ್‌ ರಸ್ತೆ” ಹೆಸರಿನ ಕಾದಂಬರಿ ಬರೆದು ಮುಗಿಸಿರುವ ಅವರು, ಅದನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ. ಆ ಅಪರೂಪದ ಪುಸ್ತಕವನ್ನು ಅಣ್ಣಾವ್ರ ಮುತ್ತಿನಂಥ ಮೂವರು ಮಕ್ಕಳಿಗೆ ಅರ್ಪಣೆ ಮಾಡುವ ಹುರುಪಿನಲ್ಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿಯೂ ನಡೆಸಿದ್ದಾರೆ. ಜನವರಿ ೨೭ರಂದು “ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ ಅಧ್ಯಾಯಗಳ ರೂಪದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೆ.ಪಿ.ಶ್ರೀಕಾಂತ್‌ ಅವರು ಕಾದಂಬರಿಯ ಮೊದಲ ಎಪಿಸೋಡ್‌ ಅನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಇಷ್ಟಕ್ಕೂ ಜನವರಿ 27ರಂದು ಪುಸ್ತಕ ಬಿಡುಗಡೆ ಯಾಕೆ ಗೊತ್ತಾ? ಆ ದಿನದಂದು “ಡಾ.ರಾಜ್‌ಕುಮಾರ್‌ ರಸ್ತೆ”ಗೆ ನಾಮಕರಣ ಮಾಡಲಾಗಿತ್ತು. ಆ ಕಾರಣಕ್ಕಾಗಿಯೇ ಜನವರಿ ೨೭ರಂದು ವಿನಾಯಕರಾಮ್‌ ಕಲಗಾರು ತಮ್ಮ ಪುಸ್ತಕವನ್ನು ಅಂದು ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ತಮ್ಮ “ಡಾ.ರಾಜ್‌ಕುಮಾರ್‌ ರಸ್ತೆ” ಬಗ್ಗೆ ಹೇಳುವ ವಿನಾಯಕರಾಮ್‌ ಕಲಗಾರು, “ಇಲ್ಲಿ ಬರುವ ಪಾತ್ರಗಳು ಮತ್ತು ಚಿತ್ರಗಳು ಕೇವಲ ಕಾಲ್ಪನಿಕ. ಅದಕೆ ರಾಜಕುಮಾರ ಎಂಬ ರಮಣೀಯ ಹೆಸರೇ ಆ ಎಲ್ಲ ಕಥನ ಕಹಾ‌ನಿಯ ನಾವಿಕ. ಈ ಕಾದಂಬರಿ ನನ್ನ ಬದುಕಿನ ಮುಖಪುಟ. ಇಲ್ಲಿ ಯಾರೂ ಅರಿಯದೇ ಇರೋ ಅಚ್ಚರಿಗಳ ಗುಚ್ಛ ಸಹಿತ ರೋಚಕ ಪಟ ಇದಾಗಲಿದೆ. ಇದು ಬರೀ ಕಾದಂಬರಿ ಅಲ್ಲ. ಇಲ್ಲಿ ತೆರೆದುಕೊಳ್ಳುತ ಹೋಗುವ ಪಾತ್ರ-ಚಿತ್ರಗಳು ನನ್ನನ್ನೇ ಭಯ ಬೀಳಿಸುವ ಸತ್ಯಾಂಶ ಸಂಭೂತರು! ಆದರೆ, ಇದು ಕಾಲ್ಪನಿಕ…100% ವೈಮಾನಿಕ… ನನ್ನ ಕಣ್ಣಳತೆಗೂ ಮೀರಿದ ‘ರಾಜತಾಂತ್ರಿಕ’ ಘಟನಾ ಗುಚ್ಛಗಳ ಗಮನಾರ್ಹ ಗ್ಯಾಲರಿ” ಎಂಬುದು ಅವರ ಮಾತು.


ಅದೇನೆ ಇರಲಿ, ರಸ್ತೆ ಅನ್ನುವ ಪದವನ್ನು ಕೇಳಿದರೆ ಸಾಕು, ಅಲ್ಲಿ ಒಂದಷ್ಟು ಕಲರ್‌ಫುಲ್‌ ಕನಸುಗಳ ಮೆರವಣಿಗೆಯ ನೆನಪಾಗುತ್ತೆ. ಒಂದೊಂದು ರಸ್ತೆಯೂ ಒಂದೊಂದು ಕಥೆ ಹೇಳುತ್ತೆ. ಅಂಥದ್ದೊಂದು ರಸ್ತೆಗೆ ಸಾಕಷ್ಟು ಇತಿಹಾಸವೂ ಉಂಟು. ಈಗ ಡಾ.ರಾಜ್‌ಕುಮಾರ್‌ ರಸ್ತೆ ಮೇಲೊಂದು ಕಾದಂಬರಿ ಬರೆದಿದ್ದಾರೆ. ಆ ಹೆಸರಿನ ರಸ್ತೆ ಅಂದಾಕ್ಷಣ ಅದೊಂದು ಮುಗಿಯದ ಸಂಭ್ರಮವೇ ಸರಿ. ಸದ್ಯ, ಕಾದಂಬರಿ ಬಿಡುಗಡೆ ಮಾಡಿ, ನಂತರದ ದಿನಗಳಲ್ಲಿ ಸಿನಿಮಾ ಮಾಡುವ ಉದ್ದೇಶ ಅವರದು. ಅವರ ಹೊಸ ಹೆಜ್ಜೆಗೆ “ಸಿನಿಲಹರಿ”ಯ ಶುಭಹಾರೈಕೆ.

Related Posts

error: Content is protected !!