ಡಬ್ಬಿಂಗ್‌ ಬ್ಯುಜಿಯೋ ಬ್ಯುಜಿ – ಸ್ಟುಡಿಯೋ ಖಾಲಿ ಇಲ್ಲ, ಕಲಾವಿದರೂ ಖಾಲಿ ಕೂತಿಲ್ಲ

ಇದು ಡಬ್ಬಿಂಗ್‌ ಲಾಭ-ನಷ್ಟದ ಲೆಕ್ಕಾಚಾರ

ಕನ್ನಡಕ್ಕೆ ಡಬ್ಬಿಂಗ್‌ ಬಂದರೆ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಅನೇಕರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ..!
– ಈ ಮಾತು ಹಿಂದಿನಿಂದಲೂ ಕೇಳಿಬರುತ್ತಲೇ ಇತ್ತು. ಈ ಕಾರಣಕ್ಕಾಗಿಯೇ ಮೊದಲಿನಿಂದಲೂ ಡಬ್ಬಿಂಗ್‌ ಅನ್ನು ವಿರೋಧಿಸುತ್ತಲೇ ಬರಲಾಗುತ್ತಿತ್ತು. ಡಾ.ರಾಜಕುಮಾರ್‌ ಅವರ ನೇತೃತ್ವದಲ್ಲಿ ಡಬ್ಬಿಂಗ್‌ ವಿರೋಧ ಜೋರಾಗಿಯೇ ಇತ್ತು. ಆದರೆ, ಈಗ…?
ಕಾಲ ಬದಲಾಗಿದೆ. ಡಬ್ಬಿಂಗ್‌ ವಿರೋಧದ ಧ್ವನಿಯೂ ಕ್ಷೀಣವಾಗಿದೆ. ಅಂದುಕೊಂಡಿದ್ದು ಇಲ್ಲಿ ಯಾವುದೂ ನಡೆಯುತ್ತಿಲ್ಲ. ಮುಕ್ತವಾಗಿಯೇ ಈಗ ಡಬ್ಬಿಂಗ್‌ ತಲೆ ಎತ್ತಿರುವುದರಿಂದ ಯಾರೊಬ್ಬರೂ ಮಾತನಾಡುತ್ತಿಲ್ಲ. “ಮೌನಂ ಸಮ್ಮತಿ ಲಕ್ಷಣಂ” ಅನ್ನುವಂತಾಗಿದೆ. ಹೌದು, ಡಬ್ಬಿಂಗ್‌ ಅಲೆ ಈಗ ಜೋರಾಗಿದೆ. ಪರಭಾಷೆಯ ಸಿನಿಮಾಗಳಷ್ಟೇ ಅಲ್ಲ, ಧಾರಾವಾಹಿಗಳು ಕೂಡ ಕನ್ನಡಕ್ಕೆ ಡಬ್‌ ಆಗಿ ಪ್ರಸಾರವಾಗುತ್ತಿವೆ. ಈಗಾಗಲೇ ನೂರಾರು ಚಿತ್ರಗಳು, ಧಾರಾವಾಹಿಗಳು ಕನ್ನಡಕ್ಕೆ ಡಬ್‌ ಆಗಿದ್ದು, ಪ್ರೇಕ್ಷಕರ ಮುಂದೆ ಬಂದಿರುವುದೂ ಉಂಟು. ಹಲವು ಚಿತ್ರಗಳು ಚಿತ್ರಮಂದಿರಕ್ಕೂ ಲಗ್ಗೆ ಇಟ್ಟಿರುವುದಷ್ಟೇ ಅಲ್ಲ, ಒಟಿಟಿ ಫ್ಲಾಟ್‌ಫಾರಂನಲ್ಲೂ ಕಾಣಿಸಿಕೊಳ್ಳುತ್ತಿವೆ.

ಇದು ನೇರವಾಗಿ ಕನ್ನಡ ಚಿತ್ರರಂಗದಲ್ಲಿ ದುಡಿಯುವ ಮಂದಿ ಮೇಲೆ ಪರಿಣಾಮ ಬೀರಿದೆ. ಇಂದು ಡಬ್ಬಿಂಗ್‌ ಅಲೆ ಹೆಚ್ಚಾಗಿದ್ದರಿಂದ ಕನ್ನಡ ಚಿತ್ರರಂಗದ ಅದೆಷ್ಟೋ ಕಿರಿಯ ಕಲಾವಿದರು, ಸಹ ಕಲಾವಿದರು, ಒಕ್ಕೂಟದ ಕಾರ್ಮಿಕರು ಇಂದು ಕೆಲಸವಿಲ್ಲದೆ ಪರಿತಪಿಸುವಂತಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿ ನೇರ ಒಟಿಟಿಯಲ್ಲಿ ಪ್ರತ್ಯಕ್ಷಗೊಂಡವು. ಇನ್ನು ಬಹುತೇಕ ಜನರು ತಿಂಗಳುಗಟ್ಟಲೆ ಮನೆಯಲ್ಲೇ ಇದ್ದುರಿಂದ ಅವರೆಲ್ಲರೂ ತಮ್ಮ ಮನೆಯಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗುವ ಡಬ್ಬಿಂಗ್‌ ಸೀರಿಯಲ್‌ ನೋಡುವಂತಾಯಿತು. ಈಗ ಲಾಕ್‌ಡೌನ್‌ ಸಡಿಲಗೊಂಡಿದೆ. ಆದರೆ, ಡಬ್ಬಿಂಗ್‌ ಸಿನಿಮಾಗಳು, ಧಾರಾವಾಹಿಗಳು ನಿಂತಿಲ್ಲ. ಇದರಿಂದ ಸ್ಯಾಂಡಲ್‌ವುಡ್‌ನ ಬಹಳಷ್ಟು ಮಂದಿಗೆ ದೊಡ್ಡ ಪೆಟ್ಟು ಬಿದ್ದಿರುವುದಂತೂ ನಿಜ.

ಹಾಗೆ ನೋಡಿದರೆ, ಡಬ್ಬಿಂಗ್‌ನಿಂದ ಎಲ್ಲವೂ ಹಾಳಾಗಿದೆ ಅಂತ ಹೇಳುತ್ತಿಲ್ಲ. ಡಬ್ಬಿಂಗ್‌ ಬಂದು ಒಂದಷ್ಟು ಜನರ ಕೆಲಸವನ್ನು ಕಸಿದುಕೊಂಡಿದ್ದು ಬಿಟ್ಟರೆ, ಒಂದಷ್ಟು ಜನರ ಮೊಗದಲ್ಲಿ ಮಂದಹಾಸ ಮೂಡಿಸಿದಂತೂ ನಿಜ. ಇದನ್ನು ಇನ್ನಷ್ಟು ವಿಸ್ತರಿಸಿ ಹೇಳುವುದಾದರೆ, ಡಬ್ಬಿಂಗ್‌ ಎಂಟ್ರಿಯಾಗಿದ್ದರಿಂದ ಅನೇಕ ಡಬ್ಬಿಂಗ್‌ ಕಲಾವಿದರು ಬಿಝಿಯಾದರು. ಅವರನ್ನು ಬಿಡುವಿಲ್ಲದಂತೆ ಅರಸಿ ಬಂದ ಕೆಲಸದಿಂದಾಗಿ ಎಲ್ಲರೂ ಬಿಝಿಯಾದರು. ಅದೆಷ್ಟೋ ನಟ,ನಟಿಯರಿಗೆ ಧ್ವನಿ ಕೊಡುವ ಮೂಲಕ ತಕ್ಕಮಟ್ಟಿಗೆ ದುಡಿಮೆ ಮಾಡುತ್ತಿದ್ದ ಡಬ್ಬಿಂಗ್‌ ಕಲಾವಿದರು, ಕೊಟ್ಟಷ್ಟು ಕಾಸು ಪಡೆದು ದಿನ ಸವೆಸುತ್ತಿದ್ದರು. ಯಾವಾಗ ಡಬ್ಬಿಂಗ್‌ ಬಂತೋ, ಅಲ್ಲಿಗೆ ಅವರ ಅದೃಷ್ಟದ ಬಾಗಿಲೂ ತೆರೆಯಿತು. ಅಲ್ಲೊಂದು ಇಲ್ಲೊಂದು ಸಿನಿಮಾಗಳಿಗೆ ಡಬ್‌ ಮಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದವರು, ಈಗ ಇಡೀ ದಿನ ವಾಯ್ಸ್‌ ಡಬ್‌ ಮಾಡುವಲ್ಲಿಯೇ ನಿರತರಾಗಿದ್ದಾರೆ.

ಹಾಗಾಗಿ ಡಬ್ಬಿಂಗ್‌ ಅಂತಹ ಅನೇಕ ಡಬ್ಬಿಂಗ್‌ ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ ಅಂದರೆ ತಪ್ಪಿಲ್ಲ.
ಇದರೊಂದಿಗೆ ಈಗ ಸ್ಟುಡಿಯೋಗಳೂ ಕೂಡ ಬಿಝಿಯಾಗಿವೆ. ಬರೀ ಬೆಂಗಳೂರು ಮಾತ್ರವಲ್ಲ, ರಾಜ್ಯದ ಪ್ರಮುಖ ನಗರಗಳಲ್ಲೂ ಸ್ಟುಡಿಯೋಗಳಿವೆ. ಅಲ್ಲಿಯೂ ಒಂದಷ್ಟು ಪರಭಾಷೆ ಸಿನಿಮಾಗಳು ಡಬ್‌ ಆಗುತ್ತಿವೆ. ಹಾಗಾಗಿ ಎಲ್ಲಾ ಸ್ಟುಡಿಯೋಗಳಲ್ಲೂ ಕೆಲಸ ಹೆಚ್ಚಾಗಿದ್ದು, ಎಲ್ಲರೂ ಡಬ್ಬಿಂಗ್‌ ಕೆಲಸದಲ್ಲಿ ಹಿಂದೆಂದಿಗಿಂತಲೂ ಬಿಝಿಯಾಗಿದ್ದಾರೆ. ಇಲ್ಲೀಗ ಪರದಾಡುತ್ತಿರುವುದೆಂದರೆ, ಜೂನಿಯರ್‌ ಕಲಾವಿದರು ಮತ್ತು ಸಹ ಕಲಾವಿದರು. ಇದರೊಂದಿಗೆ ಕಿರುತೆರೆಯಲ್ಲಿ ಕೆಲಸ ಮಾಡುವ ಅನೇಕ ನಟ,ನಟಿಯರಿಗೂ ಇದು ಸಮಸ್ಯೆಯಾಗಿ ಪರಿಣಮಿಸಿದೆ.

ಡಬ್ಬಿಂಗ್‌ ಸಿನಿಮಾಗಳು ಇಲ್ಲಿ ಬಂದು ಹಣ ಮಾಡುತ್ತವೆಯೇ? ಇದು ಎಲ್ಲರಿಗೂ ಕಾಡುವ ಪ್ರಶ್ನೆ. ಅವುಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಹಣ ಮಾಡುತ್ತವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ, ಹಲವು ವಾಹಿನಿಗಳಲ್ಲೂ ಕೂಡ ಪ್ರಸಾರವಾಗುತ್ತಿವೆ ಅನ್ನೋದೇ ವಿಷಯ. ಈಗಾಗಲೇ ಪರಭಾಷೆಯ ಅನೇಕ ಚಿತ್ರಗಳು ಥಿಯೇಟರ್‌ ಜೊತೆಗೆ ಕಿರುತೆರೆಯಲ್ಲೂ ಬಿಡುಗಡೆಯಾಗಿವೆ. ಒಂದು ಡಬ್‌ ಮಾಡುವ ಸಿನಿಮಾಗೆ ಸುಮಾರು ೧೦ ಲಕ್ಷ ರುಪಾಯಿ ಖರ್ಚು ಮಾಡಿದರೆ, ರೆಡಿಯಾಗುತ್ತದೆ. ಇದು ಸುಲಭ ಮಾರ್ಗ. ಬಹಳಷ್ಟು ಜನ ಇಲ್ಲಿಗೆ ಪರಭಾಷೆಯ ಅನೇಕ ಸಿನಿಮಾಗಳನ್ನು ತಂದು ಡಬ್ಬಿಂಗ್‌ ಮಾಡಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಹಿಂದೆ ಪರಭಾಷೆಯ ಕೆಲವು ಸೀರಿಯಲ್‌ಗಳು ರಿಮೇಕ್‌ ಆಗುತ್ತಿದ್ದವು. ಆದರೆ, ಈಗೀಗ ಕನ್ನಡಕ್ಕೆ ಡಬ್‌ ಆಗುತ್ತಿವೆ. ಅವುಗಳು ಪ್ರಸಾರ ಕೂಡ ಆಗುತ್ತಿದ್ದು, ಡಬ್ಬಿಂಗ್ ಸ್ಟುಡಿಯೋಗಳು‌ ಎರಡು ಮೂರು ವರ್ಷಕ್ಕೆ ಬುಕ್‌ ಆಗಿವೆ ಅನ್ನೋದೇ ವಿಶೇಷ.


ಪ್ರಭಾಸ್‌ ಅಭಿನಯದ “ಬಾಹುಬಲಿ” ಕೂಡ ಕನ್ನಡದಲ್ಲಿ ಬಂತು. ಅಜಿತ್‌ ಅವರ “ಜಗಮಲ್ಲ”, ವಿಜಯ್‌ ಅವರ “ಬಿಗಿಲ್”‌, ಅಲ್ಲು ಅರ್ಜುನ್‌ ಅವರ “ಬಂದ ನೋಡು ಸರ್ರೆನೊಡು”, ರಾಮ್‌ ಚರಣ್‌ ಅವರ “ರಂಗಸ್ಥಳ”, ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಅವರ “ಡಿಯರ್‌ ಕಾಮ್ರೆಡ್”‌, ಜೂನಿಯರ್‌ ಎನ್‌ಟಿಆರ್‌ ಅವರ “ಅಪ್ಪನ ಪ್ರೀತಿಯಲ್ಲಿ” ಸಿನಿಮಾ ಕೂಡ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗುತ್ತಿದೆ. ಅದೇನೆ ಇರಲಿ, ಡಬ್ಬಿಂಗ್‌ ಶುರುವಾಗಿದಾಗಿದೆ. ಹಲವು ಚಿತ್ರಗಳು ಡಬ್ಬಿಂಗ್‌ ಆಗಿಹೋಗಿವೆ. ಇಲ್ಲಿ ಯಾರಿಗೆ ಏನು ಲಾಭ ಆಗಿದೆಯೋ, ನಷ್ಟ ಆಗಿದೆಯೋ ಬೇರೆ ಮಾತು. ಆದರೆ ಡಬ್ಬಿಂಗ್‌ ಸ್ಟುಡಿಯೋಗಳಿಗೆ, ಡಬ್ಬಿಂಗ್‌ ಕಲಾವಿದರಿಗಂತೂ ಸಾಕಷ್ಟು ಸಹಾಯವಾಗಿದೆ. ಇಲ್ಲಿ ಕನ್ನಡಿಗರು ಭಾಷಾ ವಿರೋಧಿಗಳಲ್ಲ. ಭಾಷಾ ಪ್ರೇಮಿಗಳು. ಆದರೆ, ವ್ಯಾಪಾರ ದೃಷ್ಟಿಯಿಂದ ನೋಡುವುದಾದರೆ, ಇವೆಲ್ಲಾ ಕೆಲಸಗಳು ನಡೆಯಲೇಬೇಕು ಅನ್ನೋ ಮಾತುಗಳು ಗಾಂಧಿನಗರದಲ್ಲಿ ಗಿರಕಿಹೊಡೆಯುತ್ತಿರುವುದಂತೂ ಸತ್ಯ.

ಕನ್ನಡದಲ್ಲಿ ಡಬ್ಬಿಂಗ್‌ ಕೆಲಸಗಳು ಜೋರಾಗಿವೆ. ಪರಭಾಷೆ ನಟರು ಅದಾಗಲೇ ಎಂಟ್ರಿಯಾಗಿದ್ದಾಗಿದೆ. ಇಲ್ಲಿ ಸಣ್ಣಪುಟ್ಟ ಕಾರ್ಮಿಕರು, ಕಲಾವಿದರಿಗೆ ಸಂಕಷ್ಟ ಎದುರಾಗಿರುವುದಂತೂ ನಿಜ. ಸ್ಟಾರ್‌ಗಳೂ ಈಗ ಮತ್ತಷ್ಟು ಚುರುಕಾಗಬೇಕಿದೆ. ವರ್ಷಕ್ಕೆ ಒಂದು ಸಿನಿಮಾ ಬದಲು ಎರಡು ಸಿನಿಮಾಗಳನ್ನಾದರೂ ಮಾಡಿದರೆ, ಕೊನೇಪಕ್ಷ ಇಂಡಸ್ಟ್ರಿಯಲ್ಲಿರುವ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳೇ ರಾರಾಜಿಸುತ್ತವೆ. ಆಗ ಪರಭಾಷೆಯ ಡಬ್ಬಿಂಗ್‌ ಸಿನಿಮಾಗಳ ಬಿಡುಗಡೆ ಕೊಂಚ ಕಡಿಮೆಯಾಗಬಹುದೇನೋ? ಇಲ್ಲಿ ಭಾಷೆಯನ್ನು ವಿರೋಧಿಸುತ್ತಿಲ್ಲ. ಕನ್ನಡಿಗರು ಎಲ್ಲಾ ಭಾಷಿಗರನ್ನೂ ಪ್ರೀತಿಸುತ್ತಾರೆ. ಅಂತೆಯೇ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನೋಡುತ್ತಾರೆ. ಕನ್ನಡ ಸ್ಟಾರ್‌ಗಳು ಕೂಡ ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಿದರೆ, ಎಲ್ಲರಿಗೂ ಹೆಚ್ಚು ಕೆಲಸ ಸಿಗುತ್ತೆ. ಆಗ ಎಷ್ಟೇ ಡಬ್ಬಿಂಗ್‌ ಚಿತ್ರಗಳು ಬಂದರೂ ಯಾವುದೇ ಪರಿಣಾಮ ಬೀರೋದಿಲ್ಲ.

Related Posts

error: Content is protected !!