Categories
ಸಿನಿ ಸುದ್ದಿ

ಹೈದರಾಬಾದ್‌ನಲ್ಲಿ ನಡೆಯಿತು ಸಲಾರ್‌ಗೆ ಮುಹೂರ್ತ – ಪ್ರಭಾಸ್‌ ಚಿತ್ರಕ್ಕೆ ಯಶ್‌ ಶುಭಹಾರೈಕೆ

 ಕನ್ನಡ-ತೆಲುಗು ಚಿತ್ರರಂಗದ ಮಹಾ ಸಮ್ಮಿಲನ

ಉಪ ಮುಖ್ಯಮಂತ್ರಿ   ಅಶ್ವತ್ಥನಾರಾಯಣ ‌ ಭಾಗಿ

ತೆಲುಗಿನ ಖ್ಯಾತ ನಟ ಪ್ರಭಾಸ್ ಹಾಗೂ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ “ಸಲಾರ್‌” ಚಿತ್ರಕ್ಕೆ ಶುಕ್ರವಾರ (ಜನವರಿ ೧೫) ಮುಹೂರ್ತ ನೆರವೇರಿದೆ.  ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ “ಸಲಾರ್” ಚಿತ್ರಕ್ಕೆ  ಹೈದರಾಬಾದ್ ನಲ್ಲಿ ಜೋರಾಗಿಯೇ ಮುಹೂರ್ತ ನೆರವೇರಿದೆ.  ಮುಹೂರ್ತದಲ್ಲಿ ಪ್ರಭಾಸ್‌,  ನಟ ಯಶ್‌, ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕರಾದ ವಿಜಯ್‌ ಕಿರಗಂದೂರು ಹಾಜರಿದ್ದು, ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.  ಆರಂಭದಲ್ಲಿ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆಯೇ, ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು.

 

ಈಗ ಚಿತ್ರತಂಡ ಶೂಟಿಂಗ್ ಹೋಗಲು ಸಜ್ಜಾಗುತ್ತಿದೆ.  ಪ್ರಶಾಂತ್ ನೀಲ್ ನಿರ್ದೇಶನದ “ಸಲಾರ್” ಇಂಡಿಯನ್ ಸಿನಿಮಾ ಎಂದು ಚಿತ್ರ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಅದರಂತೆ ಇದೀಗ ಚಿತ್ರದ ಮುಹೂರ್ತಕ್ಕೆ ತಂಡ ತಯಾರಿ ನಡೆಸಿದ್ದು, ಶುಕ್ರವಾರ ಹೈದರಾಬಾದ್ ನಲ್ಲಿ ಬೆಳಗ್ಗೆ 11 ಗಂಟೆಗೆ ಪೂಜೆ ನೆರವೇರಿಸಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ “ಸಲಾರ್” ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲ ಕೆರಳಿಸಿದೆ. ಇದೀಗ ತಮ್ಮ ಲುಕ್ ಬಗ್ಗೆಯೂ ಪ್ರಭಾಸ್ ಮಾತನಾಡಿದ್ದಾರೆ. ‘ಈ ಸಿನಿಮಾದ ಮುಹೂರ್ತ ಮತ್ತು ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ತುಂಬ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅಷ್ಟೇ ಉತ್ಸುಕನಾಗಿದ್ದೇನೆ ಎಂದು ಈ ಹಿಂದೆಯೇ  ಪ್ರಭಾಸ್ ಹೇಳಿಕೊಂಡಿದ್ದರು.

ಸದ್ಯಕ್ಕೆ ಚಿತ್ರತಂಡ ಮುಹೂರ್ತ ಮುಗಿಸಿದೆ. ಇದೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದೆ.  ಚಿತ್ರದಲ್ಲಿ ಇನ್ನು ಯಾರೆಲ್ಲಾ ಕಲಾವಿದರು ಇರಲಿದ್ದಾರೆ ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಹಿರಂಗ ಪಡಿಸಲಿದೆ.

 

ಮಕರ ಸಂಕ್ರಮಣದ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತು ಭಾರತೀಯ ಚಿತ್ರಪ್ರೇಮಿಗಳಿಗೆ ಭರ್ಜರಿ ಸುದ್ದಿ ನೀಡಿರುವ ʼಸಲಾರ್‌ʼ ಚಿತ್ರತಂಡದ ಸಂಭ್ರಮದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸಿದ್ದರು. ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮುಹೂರ್ತದ ಪೂಜೆ ನೆರವೇರಿತು. ಚಿತ್ರದ ಹೀರೋ ಪ್ರಭಾಸ್‌, ತೆಲುಗು ಮತ್ತು ಕನ್ನಡ ಚಿತ್ರರಂಗಗಳ ಅನೇಕ ಗಣ್ಯರು, ತಾರೆಯರು ಪಾಲ್ಗೊಂಡು ಶುಭ ಹಾರೈಸಿದರು. ʼಸಲಾರ್‌ʼ ಚಿತ್ರದ ಮುಹೂರ್ತದ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ಹೊರಹೊಮ್ಮಿದೆ.

ಡಿಸಿಎಂ ಶುಭ ಹಾರೈಕೆ

ಉಪ ಮುಖ್ಯಮಂತ್ರಿ ಡಾ.ಸಿಎ.ಎನ್.ಅಶ್ವತ್ಥನಾರಾಯಣ ಮಾತನಾಡಿ, “ಕನ್ನಡದಲ್ಲಿ ತಮ್ಮ ಹೊಂಬಾಳೆ ಫಿಲ್ಮ್ಸ್‌ ವತಿಯಿಂದ ʼಕೆಜಿಎಫ್ ಚಾಪ್ಟರ್‌-1ʼ, ʼಕೆಜಿಎಫ್‌ ಚಾಪ್ಟರ್-‌2ʼ ಅದಕ್ಕೂ ಹಿಂದೆ ಇನ್ನು ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಜಯ್‌ ಕಿರಗಂದೂರು, “ಸಲಾರ್‌” ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಹಾಗೆಯೇ ಕೆಜಿಎಫ್‌ ಸರಣಿ ಚಿತ್ರಗಳ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಪ್ರಶಾಂತ್‌ ನೀಲ್‌ ಅವರು ʼಸಲಾರ್‌ʼ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲೂ ಪ್ರಭಾಸ್‌ ಅವರ ಈ ಚಿತ್ರ ಮಾಡುತ್ತಿರುವುದು ತುಂಬಾ ಸಂತೋಷ ಉಂಟು ಮಾಡಿದೆ.

ಈ ಮೂಲಕ ಭಾಷೆ, ಗಡಿಗಳನ್ನು ಮೀರಿ ಕನ್ನಡ-ತೆಲುಗು ಚಿತ್ರರಂಗಗಳು ಒಂದಾಗಿ ಮುಂದೆ ಹೋಗುತ್ತಿರುವುದಕ್ಕೆ ಆನಂದವಾಗಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ʼಬಾಹುಬಲಿʼ ಚಿತ್ರದಿಂದ ಕನ್ನಡದ ಅಭಿಮಾನಿಗಳ ಮನಗೆದ್ದಿರುವ ಪ್ರಭಾಸ್‌ ಅವರು ʼಸಲಾರ್‌ʼ ಚಿತ್ರದಿಂದ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ” ಎಂದರು.

ಪ್ರಭಾಸ್‌ ಜತೆಯ ಕೆಲಸ ಖುಷಿ ಷಿ ಸಂಗತಿ

“ನಾನು ʼಬಾಹುಬಲಿʼ ಚಿತ್ರವನ್ನು ನೋಡಿ ಪ್ರಭಾಸ್‌ ಅವರಿಗೆ ಫಿದಾ ಆಗಿದ್ದೆ. ಈಗ ಅವರ ಜತೆಯಲ್ಲೇ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ಈ ಮೂಲಕ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ “ಸಲಾರ್”ʼ ಚಿತ್ರವನ್ನು ತಯಾರು ಮಾಡುತ್ತಿದ್ದೇವೆ. ನಮ್ಮ “ಕೆಜಿಎಫ್‌” ಚಿತ್ರವನ್ನು ಡೈರೈಕ್ಟ್‌ ಮಾಡಿರುವ ಪ್ರಶಾಂತ್‌ ನೀಲ್‌ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ” ಎಂಬದು ನಿರ್ಮಾಪಕ ವಿಜಯ್‌ ಕಿರಗಂದೂರು ಮಾತು.

“ಸಲಾರ್‌”  ಚಿತ್ರಕ್ಕೆ ಪ್ರಭಾಸ್‌ ಅವರ ಹೊರತಾಗಿ ನಾಯಕ ನಟಿ, ಇನ್ನಿತರೆ ತಾರಾಬಳಗ ಆಯ್ಕೆಯಾಗಿಲ್ಲ. ಚಿತ್ರವನ್ನು ಅನೌನ್ಸ್‌ ಮಾಡಿದಾಗ ಹೊರಬಿದ್ದ ಸಲಾರ್‌ ಫಸ್ಟ್‌ಲುಕ್‌ ದೇಶದೆಲ್ಲೆಡೆ ವೈರಲ್‌ ಆಗಿತ್ತು. ಪ್ರಭಾಸ್‌ ಈಗಾಗಲೇ ʼರಾಧೆ ಶ್ಯಾಂʼ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣ ಕೊನೆ ಹಂತದಲ್ಲಿದೆ. ʼಆದಿಪುರುಷ್‌ʼ ಚಿತ್ರದ ಶೂಟಿಂಗ್‌ ಇನ್ನೇನು ಆರಂಭವಾಗಬೇಕಿದೆ. ಇದರ ಜತೆಯಲ್ಲೇ ಈಗ ʼಸಲಾರ್‌ʼ ಚಿತ್ರವೂ ಟೇಕಾಫ್‌ ಆಗಿದೆ. ನಟ ಯಶ್, ರವಿ ಬಸ್ರೂರ್​, ಭುವನ್​ ಗೌಡ ಸೇರಿದಂತೆ ಕೆಜಿಎಫ್‌ ಚಿತ್ರತಂಡದ ಅನೇಕರು ಪಾಲ್ಗೊಂಡಿದ್ದರು. ಅದರಲ್ಲೂ ಯಶ್‌ ಪ್ರಮುಖ ಆಕರ್ಷಣೆಯಾಗಿದ್ದರು.

ʼಈಶ್ವರ್‌ʼ ಚಿತ್ರದಿಂದ ಮೊದಲುಗೊಂಡು ʼಸಾಹೋʼ ತನಕ ಪ್ರಭಾಸ್‌‌ ನಟಿಸಿದ ಒಟ್ಟು 19 ಚಿತ್ರಗಳು ರಿಲೀಸ್‌ ಆಗಿವೆ. ಈ ಪೈಕಿ ʼಬಾಹುಬಲಿ-ದಿ ಬಿಗಿನಿಂಗ್‌ʼ ಹಾಗೂ ʼಬಾಹುಬಲಿ-ಕನ್‌ಕ್ಲೂಶನ್‌ʼ ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ಸದ್ದು ಮಾಡಿದ್ದವು. ಇದೀಗ ಅವರು ನಟಿಸುತ್ತಿರುವ ʼಸಲಾರ್‌ʼ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ಕ್ರೇಜ್‌ ಸೃಷ್ಟಿ ಮಾಡಿದೆ.

 

Categories
ಸಿನಿ ಸುದ್ದಿ

ಲಂಕಾಸುರನ ಆರ್ಭಟ ಶುರು -ಸಂಕ್ರಾಂತಿಗೆ ಶುರುವಾಯ್ತು ವಿನೋದ್‌ಪ್ರಭಾಕರ್‌ ಚಿತ್ರ

ಮರಿಟೈಗರ್‌ ಜೊತೆ ಲೂಸ್‌ ಮಾದ ಜೋಡಿ

ಸಂಕ್ರಾಂತಿಯ ಸಂಭ್ರಮ ಈ ವರ್ಷ ತುಸು ಜೋರಾಗಿಯೇ ಇದೆ. ಹಲವು ಸಿನಿಮಾಗಳು ಸಂಕ್ರಮಣದಂದು ಸೆಟ್ಟೇರಿವೆ. ಕೆಲವು ಚಿತ್ರಗಳು ಚಿತ್ರೀಕರಣ ಶುರುಮಾಡಿವೆ. ಆ ನಿಟ್ಟಿನಲ್ಲಿ ವಿನೋದ್‌ ಪ್ರಭಾಕರ್‌ ಅವರ ಅಭಿನಯದ “ಲಂಕಾಸುರ” ಸಿನಿಮಾಗೂ ಕೂಡ ಚಾಲನೆ ಸಿಕ್ಕಿದೆ. ಸುಗ್ಗಿ ಹಬ್ಬದಂದು “ಲಂಕಾಸುರ” ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ದೊಡ್ದ ಬಸ್ತಿಯ ಶ್ರೀಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಚಾಲನೆ ಸಿಕ್ಕಿದೆ. ಈ ಚಿತ್ರದಲ್ಲಿ ವಿನೋದ್‌ಪ್ರಭಾಕರ್‌ ಅವರೊಂದಿಗೆ “ಲೂಸ್‌ ಮಾದ” ಯೋಗೀಶ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

 

ಎ.ಎಂ.ಎಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ ಚಿತ್ರಕ್ಕೆ ನಿರ್ಮಾಪಕರ ಪುತ್ರರಾದ ಮಾ. ಮಾನಸ್ ಪ್ರಜ್ವಲ್ ಹಾಗೂ ಶ್ರೇಯಸ್ ಪ್ರಜ್ವಲ್ ಕ್ಯಾಮೆರಾ ಚಾಲನೆ ‌ಮಾಡಿದರು.‌ ನಿರ್ದೇಶಕರ ಪುತ್ರ ಮಾ.ಯೋಜಿತ್ ಕ್ಲಾಪ್‌ ಮಾಡಿದರು. ಸಂಕ್ರಾಂತಿ ದಿನದಂದು ಶುರುವಾದ ಈ ಚಿತ್ರದ ಚಿತ್ರೀಕರಣ, ಫೆಬ್ರವರಿ 15 ರವರೆಗೂ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊದಲ‌ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಪಾರ್ವತಿ ಅರುಣ್, ಸಹಾನಾ ಗೌಡ ಇತರರು ನಟಿಸಿದ್ದಾರೆ. “ದುನಿಯಾ” ನಿರ್ಮಾಪಕರಾದ ಸಿದ್ದರಾಜು, ವಿನೋದ್ ‌ಮಾಸ್ಟರ್ ಇತರರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಹಿಂದೆ “ಮೂರ್ಕಲ್ ಎಸ್ಟೇಟ್” ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ “ಲಂಕಾಸುರ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ವಿಜೇತ್‌ ಕೃಷ್ಣ ಸಂಗೀತ ನೀಡಿದ್ದಾರೆ. ಸುಜ್ಞಾನ್‌ ಅವರ ಛಾಯಾಗ್ರಹಣವಿದೆ. ಚೇತನ್ ಡಿಸೋಜ, ದೀಪು ಎಸ್ ಕುಮಾರ್ ಸಂಕಲನವಿದೆ. ಮೋಹನ್ ನೃತ್ಯ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಏಕ್‌ ಲವ್‌ ಯಾ ಹೊಸ ಪೋಸ್ಟರ್ ಹವಾ – ಸಂಕ್ರಾಂತಿಗೆ ಪ್ರೇಮ್ ಗಿಫ್ಟ್

ಲವರ್ಸ್ ಡೇಗೆ ಮೊದಲ ಸಾಂಗ್ ರಿಲೀಸ್

ಸದ್ಯಕ್ಕೆ ನಿರೀಕ್ಷೆ ಹುಟ್ಟಿಸಿರುವ ‘ಜೋಗಿ’ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ” ಚಿತ್ರದ ಮತ್ತೊಂದು ಹೊಸ ಪೋಸ್ಟರ್ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಮಾಡಲಾಗಿದೆ. ಈ ಬಾರಿ ಪೋಸ್ಟರ್‌ ಜೊತೆಗೆ ಮೊದಲ ಹಾಡಿನ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಮಾಡಲಾಗಿದೆ.
ಫೆ.14ರ ಪ್ರೇಮಿಗಳ ದಿನದಂದು ‘ಏಕ್ ಲವ್ ಯಾ’ ಚಿತ್ರದ ಮೊದಲ ಹಾಡು ರಿಲೀಸ್‌ ಮಾಡಲು ಪ್ರೇಮ್ ನಿರ್ಧರಿಸಿದ್ದಾರೆ.


ಅಂದಹಾಗೆ ಈ ಚಿತ್ರ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರಲಿದೆ.
ಜೋಗಿ ಪ್ರೇಮ್‌ ನಿರ್ದೇಶನದಲ್ಲಿ ತಯಾರಾಗ್ತಿರೋ ಮ್ಯೂಸಿಕಲ್‌ ವಿಶ್ಯುಯಲ್‌ ಟ್ರೀಟ್‌ ತುಂಬಾನೇ ವಿಶೇಷವಾಗಿರಲಿದೆ ಎಂಬುದನ್ನಿಲ್ಲಿ ಪ್ರತ್ಯೇಕವಾಗಿ ಹೇಳುವಂತಿಲ್ಲ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಹಾಡು ರಿಲೀಸ್‌ ಆಗಲಿದೆ.


ಅರ್ಜುನ್‌ ಜನ್ಯಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಈ ಚಿತ್ರದ ಹೀರೋ ರಾಣಾ, ಸಿಕ್ಸ್‌ ಪ್ಯಾಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ಷಿತಾ ಫಿಲಂ ಫ್ಯಾಕ್ಟರಿ ಮೂಲಕ ಚಿತ್ರ ನಿರ್ಮಾಣವಾಗುತ್ತಿದೆ.

Categories
ಸಿನಿ ಸುದ್ದಿ

ಸಂಕ್ರಾಂತಿಗೆ ಸಲಾರ್ ಗಿಫ್ಟ್ – ಪ್ರಭಾಸ್-ಪ್ರಶಾಂತ್ ಜೋಡಿ ಚಿತ್ರಕ್ಕೆ ಜ.15ರಂದು ಮುಹೂರ್ತ

ಸಲಾರ್ ಮುಹೂರ್ತಕ್ಕೆ ಹೈದರಾಬಾದ್ ಸಾಕ್ಷಿ

ತೆಲುಗಿನ ಖ್ಯಾತ ನಟ ಪ್ರಭಾಸ್ ಹಾಗೂ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿ, ಈಗ ಮೋಡಿಗೆ ಸಜ್ಜಾಗಿದೆ. ಜನವರಿ 15ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ನಿರ್ಮಾಣದ “ಸಲಾರ್” ಚಿತ್ರ ಹೈದರಾಬಾದ್ ನಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ತಮ್ಮ ಹೊಸ ಗೆಟಪ್ ರಿವೀಲ್ ಮಾಡಲು ಕಾತರರಾಗಿದ್ದಾರೆ.

ಸಿನಿಮಾ ಅನೌನ್ಸ್ ಆಗುತ್ತಿದ್ದಂತೆಯೇ, ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು. ಈಗ ಚಿತ್ರತಂಡ ಶೂಟಿಂಗ್ ಹೋಗಲು ಸಜ್ಜಾಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ “ಸಲಾರ್” ಇಂಡಿಯನ್ ಸಿನಿಮಾ ಎಂದು ಚಿತ್ರ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಅದರಂತೆ ಇದೀಗ ಚಿತ್ರದ ಮುಹೂರ್ತಕ್ಕೆ ತಂಡ ತಯಾರಿ ನಡೆಸಿದ್ದು, ಶುಕ್ರವಾರ ಹೈದರಾಬಾದ್ ನಲ್ಲಿ ಬೆಳಗ್ಗೆ 11 ಗಂಟೆಗೆ ನೆರವೇರಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರ ದಂಡೇ ಸಾಕ್ಷಿಯಾಗಲಿದೆ.

ಮುಖ್ಯ ಅತಿಥಿಯಾಗಿ ರಾಜ್ಯದ ಉನ್ನತ ಶಿಕ್ಷಣ ಸಚಿವರು ಮತ್ತು ಉಪಮುಖ್ಯಮಂತ್ರಿಗಳೂ ಆಗಿರುವ ಡಾ. ಅಶ್ವತ್ಥನಾರಾಯಣ್ ಸಿ.ಎನ್ ಭಾಗವಹಿಸಲ್ಲಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ಈ ಮುಹೂರ್ತ ಕಾರ್ಯಕ್ರಮದಲ್ಲಿ ಇರಲಿದ್ದು, ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಭಾಗವಹಿಸಲಿದ್ದಾರೆ.
ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ “ಸಲಾರ್” ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲ ಕೆರಳಿಸಿದೆ. ಇದೀಗ ತಮ್ಮ ಲುಕ್ ಬಗ್ಗೆಯೂ ಪ್ರಭಾಸ್ ಮಾತನಾಡಿದ್ದಾರೆ. ‘ಈ ಸಿನಿಮಾದ ಮುಹೂರ್ತ ಮತ್ತು ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ತುಂಬ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅಷ್ಟೇ ಉತ್ಸುಕನಾಗಿದ್ದೇನೆ ಎಂದಿದ್ದಾರೆ ಪ್ರಭಾಸ್.

ಶುಕ್ರವಾರ ಮುಹೂರ್ತ ಮುಗಿಸಿಕೊಂಡ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದೆ. ಈಗಾಗಲೇ ಅದಕ್ಕಾಗಿ ಭರ್ಜರಿ ತಯಾರಿ ಶುರುವಾಗಿದೆ. ಇನ್ನುಳಿದ ಪಾತ್ರವರ್ಗದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಹಿರಂಗ ಪಡಿಸಲಿದೆ.

Categories
ಸಿನಿ ಸುದ್ದಿ

ಅಯೋಧ್ಯೆ ರಾಮನಿಗೆ ಒಂದು ಲಕ್ಷ ದೇಣಿಗೆ -ರಾಮಮಂದಿರ ನಿರ್ಮಾಣಕ್ಕೆ ನಟಿ ಪ್ರಣೀತಾ ಕಿರು ಕಾಣಿಕೆ

ದೇಶದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ವಿಷಯ ಈಗ ಕೇಂದ್ರಬಿಂದುವಾಗಿದೆ. ಈಗಾಗಲೇ ಅಯೋಧ್ಯೆಯ ಶ್ರೀರಾಮಮಂದಿರದ ನಿರ್ಮಾಣ ಕಾರ್ಯಕ್ಕೆ ನಿಧಿ ಸಮರ್ಪಣಾ ಅಭಿಯಾನವೊಂದು ಶುರುವಾಗಿದೆ. ಈ ನಿಟ್ಟಿನಲ್ಲಿ ಇದೀಗ ಕನ್ನಡದ ನಟಿ ಪ್ರಣೀತಾ ಅವರು ಒಂದು ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದ್ದಾರೆ.

ಈ ಕುರಿತು ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಆ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಭಕ್ತರಿಗೆ ಮನವಿ ಮಾಡಿದ್ದಾರೆ. “ನಿಮಗೆಲ್ಲರಿಗೂ ಗೊತ್ತಿರುವವಂತೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ದೇಶದೆಲ್ಲೆಡೆ ನಿಧಿ ಸಮರ್ಪಣಾ ಕಾರ್ಯ ನಡೆದಿದೆ. ಈ ಕಾರ್ಯಕ್ಕೆ ನಾನು ನನ್ನ ಸಣ್ಣ ಸೇವೆ ಸಲ್ಲಿಸಿದ್ದೇನೆ. ನೀವು ಕೈ ಜೋಡಿಸಿ” ಎಂದು ಮನವಿ ಮಾಡಿದ್ದಾರೆ.
ಪ್ರಣೀತಾ ಸದ್ಯಕ್ಕೆ ತೆಲುಗು ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಕನ್ನಡದಲ್ಲಿ ಅನೇಕ ಸಿನಿಮಾಗಳನ್ನು ಕೊಟ್ಟಿರುವ ಪ್ರಣೀತಾ, ಆಗಾಗ ಸಮಾಜ ಸೇವೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿರುತ್ತಾರೆ. ಈಗ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೂ ದೇಣಿಗೆ ನೀಡಿದ್ದಾರೆ.

Categories
ಸಿನಿ ಸುದ್ದಿ

ಬರಲಿದೆ ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ – ವಿನಾಯಕರಾಮ ಕಲಗಾರು ಅವರ ಕಾಮಗಾರಿ ಶುರು

 

ಜನವರಿ 27ಕ್ಕೆ ಲೋಕಾರ್ಪಣೆ

ಪತ್ರಕರ್ತ ವಿನಾಯಕರಾಮ್‌ ಕಲಗಾರು ಒಳ್ಳೆಯ ಬರಹಗಾರ. ಅದಕ್ಕಿಂತಲೂ ಹೆಚ್ಚು ಅಷ್ಟೇ ಸೊಗಸಾದ ಮಾತುಗಾರ. ಹಾಗಾಗಿಯೇ ಅವರು, ಹಲವು ಚಿತ್ರಗಳಿಗೆ ಮಾತುಗಳನ್ನೂ ಪೋಣಿಸಿದ್ದಾರೆ. ಹಲವಾರು ವಾಹಿನಿಗಳ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ವಿನಾಯಕರಾಮ್‌ ಕಲಗಾರು, ಕೆಲವು ವಾಹಿನಿಗಳಲ್ಲಿ ಪ್ರಸಾರಗೊಂಡ ರಿಯಾಲಿಟಿ ಶೋಗಳ ಸೂತ್ರದಾರ ಕೂಡ. ಅವರ ಬಗ್ಗೆ ಇಲ್ಲೇಕೆ ಇಷ್ಟೊಂದು ಪೀಠಿಕೆ ಅಂದರೆ, ಸಿನಿಮಾರಂಗದಲ್ಲೇ ಅತೀ ಹೆಚ್ಚು ಒಡನಾಟ ಇಟ್ಟುಕೊಂಡಿರುವ ವಿನಾಯಕರಾಮ್‌ ಕಲಗಾರು, ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ಈ ಹಿಂದೆಯೇ ಹೇಳಿದ್ದರು. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ “ಡಾ.ರಾಜಕುಮಾರ ರಸ್ತೆ” ಎಂದೂ ಹೆಸರಿಟ್ಟಿದ್ದರು. ಹಾಗಂತ ಅವರ ಆ ಸಿನಿಮಾ ಕನಸು ಇನ್ನೂ ಮುಗಿದಿಲ್ಲ. ನನಸು ಮಾಡಿಕೊಳ್ಳುವ ಹಾದಿಯಲ್ಲೇ ಅವರಿದ್ದಾರೆ. ಹಾಗಾಗಿಯೇ ರಾಜ್‌ಕುಮಾರ್‌ ರಸ್ತೆಯಲ್ಲಿ ನಿಂತಿದ್ದಾರೆ.

ವಿನಾಯಕರಾಮ್‌ ಕಲಗಾರು

ಹೌದು, ವಿನಾಯಕರಾಮ್‌ ಕಲಗಾರು ಸಿನಿಮಾ ಮಾಡುವುದು ದಿಟ. ಅದಕ್ಕೂ ಮೊದಲು ಅವರೀಗ ಕಾದಂಬರಿ ಹಿಂದೆ ನಿಂತಿದ್ದಾರೆ. “ಡಾ.ರಾಜ್‌ಕುಮಾರ್‌ ರಸ್ತೆ” ಹೆಸರಿನ ಕಾದಂಬರಿ ಬರೆದು ಮುಗಿಸಿರುವ ಅವರು, ಅದನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ. ಆ ಅಪರೂಪದ ಪುಸ್ತಕವನ್ನು ಅಣ್ಣಾವ್ರ ಮುತ್ತಿನಂಥ ಮೂವರು ಮಕ್ಕಳಿಗೆ ಅರ್ಪಣೆ ಮಾಡುವ ಹುರುಪಿನಲ್ಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿಯೂ ನಡೆಸಿದ್ದಾರೆ. ಜನವರಿ ೨೭ರಂದು “ಡಾ.ರಾಜ್‌ಕುಮಾರ್‌ ರಸ್ತೆ ಕಾದಂಬರಿ ಅಧ್ಯಾಯಗಳ ರೂಪದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕೆ.ಪಿ.ಶ್ರೀಕಾಂತ್‌ ಅವರು ಕಾದಂಬರಿಯ ಮೊದಲ ಎಪಿಸೋಡ್‌ ಅನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಇಷ್ಟಕ್ಕೂ ಜನವರಿ 27ರಂದು ಪುಸ್ತಕ ಬಿಡುಗಡೆ ಯಾಕೆ ಗೊತ್ತಾ? ಆ ದಿನದಂದು “ಡಾ.ರಾಜ್‌ಕುಮಾರ್‌ ರಸ್ತೆ”ಗೆ ನಾಮಕರಣ ಮಾಡಲಾಗಿತ್ತು. ಆ ಕಾರಣಕ್ಕಾಗಿಯೇ ಜನವರಿ ೨೭ರಂದು ವಿನಾಯಕರಾಮ್‌ ಕಲಗಾರು ತಮ್ಮ ಪುಸ್ತಕವನ್ನು ಅಂದು ಬಿಡುಗಡೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ತಮ್ಮ “ಡಾ.ರಾಜ್‌ಕುಮಾರ್‌ ರಸ್ತೆ” ಬಗ್ಗೆ ಹೇಳುವ ವಿನಾಯಕರಾಮ್‌ ಕಲಗಾರು, “ಇಲ್ಲಿ ಬರುವ ಪಾತ್ರಗಳು ಮತ್ತು ಚಿತ್ರಗಳು ಕೇವಲ ಕಾಲ್ಪನಿಕ. ಅದಕೆ ರಾಜಕುಮಾರ ಎಂಬ ರಮಣೀಯ ಹೆಸರೇ ಆ ಎಲ್ಲ ಕಥನ ಕಹಾ‌ನಿಯ ನಾವಿಕ. ಈ ಕಾದಂಬರಿ ನನ್ನ ಬದುಕಿನ ಮುಖಪುಟ. ಇಲ್ಲಿ ಯಾರೂ ಅರಿಯದೇ ಇರೋ ಅಚ್ಚರಿಗಳ ಗುಚ್ಛ ಸಹಿತ ರೋಚಕ ಪಟ ಇದಾಗಲಿದೆ. ಇದು ಬರೀ ಕಾದಂಬರಿ ಅಲ್ಲ. ಇಲ್ಲಿ ತೆರೆದುಕೊಳ್ಳುತ ಹೋಗುವ ಪಾತ್ರ-ಚಿತ್ರಗಳು ನನ್ನನ್ನೇ ಭಯ ಬೀಳಿಸುವ ಸತ್ಯಾಂಶ ಸಂಭೂತರು! ಆದರೆ, ಇದು ಕಾಲ್ಪನಿಕ…100% ವೈಮಾನಿಕ… ನನ್ನ ಕಣ್ಣಳತೆಗೂ ಮೀರಿದ ‘ರಾಜತಾಂತ್ರಿಕ’ ಘಟನಾ ಗುಚ್ಛಗಳ ಗಮನಾರ್ಹ ಗ್ಯಾಲರಿ” ಎಂಬುದು ಅವರ ಮಾತು.


ಅದೇನೆ ಇರಲಿ, ರಸ್ತೆ ಅನ್ನುವ ಪದವನ್ನು ಕೇಳಿದರೆ ಸಾಕು, ಅಲ್ಲಿ ಒಂದಷ್ಟು ಕಲರ್‌ಫುಲ್‌ ಕನಸುಗಳ ಮೆರವಣಿಗೆಯ ನೆನಪಾಗುತ್ತೆ. ಒಂದೊಂದು ರಸ್ತೆಯೂ ಒಂದೊಂದು ಕಥೆ ಹೇಳುತ್ತೆ. ಅಂಥದ್ದೊಂದು ರಸ್ತೆಗೆ ಸಾಕಷ್ಟು ಇತಿಹಾಸವೂ ಉಂಟು. ಈಗ ಡಾ.ರಾಜ್‌ಕುಮಾರ್‌ ರಸ್ತೆ ಮೇಲೊಂದು ಕಾದಂಬರಿ ಬರೆದಿದ್ದಾರೆ. ಆ ಹೆಸರಿನ ರಸ್ತೆ ಅಂದಾಕ್ಷಣ ಅದೊಂದು ಮುಗಿಯದ ಸಂಭ್ರಮವೇ ಸರಿ. ಸದ್ಯ, ಕಾದಂಬರಿ ಬಿಡುಗಡೆ ಮಾಡಿ, ನಂತರದ ದಿನಗಳಲ್ಲಿ ಸಿನಿಮಾ ಮಾಡುವ ಉದ್ದೇಶ ಅವರದು. ಅವರ ಹೊಸ ಹೆಜ್ಜೆಗೆ “ಸಿನಿಲಹರಿ”ಯ ಶುಭಹಾರೈಕೆ.

Categories
ಸಿನಿ ಸುದ್ದಿ

ಮಕ್ಕಳ ತಂಟೆಗೆ ಬರಬೇಡಿ ಅಂತಾರೆ ಕೋಡ್ಲು ರಾಮಕೃಷ್ಣ – ಕೊರೊನಾ ಎಫೆಕ್ಟ್‌ ಬಳಿಕ ಮಕ್ಕಳ ಮನಸ್ಥಿತಿಯ ಚಿತ್ರಣ

ಮಕ್ಕಳ ತಂಟೆಗೆ ಬಂದ್ರೆ ಹುಷಾರ್…!‌
– ಈ ಮಾತನ್ನು ನಾವ್‌ ಹೇಳುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಸೈ ಎನಿಸಿಕೊಂಡಿರುವ ಕೋಡ್ಲು ರಾಮಕೃಷ್ಣ ಹೇಳುತ್ತಿದ್ದಾರೆ. ಹೌದು, ಅವರೀಗ ಮಕ್ಕಳ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ “ಮಕ್ಕಳ ತಂಟೆಗೆ ಬಂದ್ರೆ ಹುಷಾರ್” ಎಂದು ನಾಮಕರಣ ಮಾಡಲಾಗಿದೆ. ಇದೊಂದು ಸಂದೇಶ ಸಾರುವ ಸಿನಿಮಾ. ಈ ಚಿತ್ರದ ಬಗ್ಗೆ ಹೇಳುವುದಾದರೆ, “ಮಕ್ಕಳ ನಿತ್ಯ ಚಟುವಟಿಕೆ, ಪೋಷಕರ ಜೀವನ ಶೈಲಿ, ಮೊಬೈಲ್ ಗೀಳು, ಶ್ರೀಮಂತ, ಮಧ್ಯಮ ಹಾಗೂ ಬಡವರ ಮನೆ ಮಕ್ಕಳು ಕೊರೊನಾ ಬರುವ ಮೊದಲು ಹಾಗೂ ನಂತರ ಹೇಗಿದ್ದಾರೆ? ಎನ್ನುವುದೇ ಈ ಚಿತ್ರದ ಕಥಾ ಹಂದರ.


ಚಿತ್ರೀಕರಣ ಮುಗಿದು, ಸೆನ್ಸಾರ್ ಕೂಡ ಆಗಿದೆ. ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದೆ. ಸಂಕ್ರಾಂತಿಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಭುವನ್ ಫಿಲಂಸ್ ಬ್ಯಾನರ್‌ನಲ್ಲಿ ನಾರಾಯಣ್ ಹಾಗೂ ಕೋಡ್ಲು ರಾಮಕೃಷ್ಣ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ದೀಪು (ರಾಮನಗರ) ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.


ಕ್ರಿಶ್ ಜೋಶಿ ಅವರ ಕಥೆಗೆ ಕೋಡ್ಲು ರಾಮಕೃಷ್ಣ ಹಾಗೂ ರಾಮಮೂರ್ತಿ ಚಿತ್ರಕಥೆ ರಚಿಸಿದ್ದಾರೆ. ಕ್ರಿಶ್ ಜೋಶಿ ಅವರ ಜೊತೆಗೂಡಿ ಕೋಡ್ಲು ರಾಮಕೃಷ್ಣ ಸಂಭಾಷಣೆ ಬರೆದಿದ್ದಾರೆ. ಶಮಿತ ಮಲ್ನಾಡ್ ಸಂಗೀತ ನಿರ್ದೇಶನವಿದೆ., ನಾಗೇಂದ್ರ ಛಾಯಾಗ್ರಹಣ ಮಾಡಿದರೆ, ವಸಂತ್ ಕುಮಾರ್ ಸಂಕಲನವಿದೆ.

ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಕಾಶ್, ಶಿವಧ್ವಜ್, ಪ್ರಥಮ ಪ್ರಕಾಶ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ, ಕುಮಾರಿ ಐಶ್ವರ್ಯ, ಶ್ರೀಧರ್ ನಾಯಕ್ ಸ್ನೇಹ ಭಟ್, ಪ್ರಕಾಶ್, ಭವಾನಿ ಪ್ರಕಾಶ್, ಬೇಬಿ ಗಗನ, ಬೇಬಿ ಯಶಿಕಾ, ಬೇಬಿಶ್ರೀ, ಬೇಬಿ ಪ್ರತಿಷ್ಠ ದೇಶಪಾಂಡೆ, ಯುಕ್ತ ಹೆಗಡೆ, ಮಾಸ್ಟರ್ ವಿಷ್ಣು ಸಂಜಯ್, ಮಾಸ್ಟರ್ ತರುಣ್, ಮಾಸ್ಟರ್ ಸರ್ವಜ್ಞ, ಮಾಸ್ಟರ್ ಯುವರಾಜ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಚಡ್ಡಿದೋಸ್ತರ ಹಾಡು ಪಾಡು – ಕಡ್ಡಿ ಅಲ್ಲಾಡಿಸೋ ಮಂದಿಯ ಆಡಿಯೋ ಕಾರ್ಯಕ್ರಮ

ಕೌಂಡಿನ್ಯರ ಕಾದಂಬರಿಗೆ ಸಿನಿಮಾ ಸ್ಪರ್ಶ

ನಿರ್ದೇಶಕ “ಆಸ್ಕರ್‌” ಕೃಷ್ಣ ಈಗ ಹೊಸದೊಂದು ಚಿತ್ರ ಮಾಡಿದ್ದು ಗೊತ್ತೇ ಇದೆ. ಅದೀಗ ರಿಲೀಸ್‌ ಹಂತಕ್ಕ ಬಂದಿದೆ. ಹೌದು, ಈ ಹಿಂದೆ “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಮತ್ತು “ಮನಸಿನ ಮರೆಯಲಿ” ಸಿನಿಮಾ ನಿರ್ದೇಶಿಸಿದ್ದ ಕೃಷ್ಣ, ಈಗ “ಚಡ್ಡಿದೋಸ್ತ್‌ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರ ಮಾಡಿದ್ದಾರೆ. ಅದರ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡವು. ಅಂದಹಾಗೆ, ಈ ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ನಿರ್ಮಾಣ ಮಾಡಿದ್ದಾರೆ. ನಟಿ ಪ್ರೇಮಾ ಅಂದು ಆಡಿಯೋ ಬಿಡುಗಡೆಗೆ ಸಾಕ್ಷಿಯಾದರು.

ಅವರೊಂದಿಗೆ ಎಸ್.ಎ. ಚಿನ್ನೇಗೌಡ, ಬಾಮ ಹರೀಶ್, ಬಾಮ. ಗಿರೀಶ್, ರವಿಚೇತನ್, ಶಿಲ್ಪ ಶ್ರೀನಿವಾಸ್ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದರು.
ತಮ್ಮ ಸಿನಿಮಾ ಕುರಿತು ಮಾತಿಗಿಳಿದ ನಿರ್ದೇಶಕ ಕೃಷ್ಣ, “ನನ್ನ ನಿರ್ದೇಶನದ ಐದನೇ ಚಿತ್ರವಿದು. “ಆಸ್ಕರ್”, “ಮಿಸ್ ಮಲ್ಲಿಗೆ”, “ಮೊನಿಕಾ ಈಸ್ ಮಿಸ್ಸಿಂಗ್” ಹಾಗೂ “ಮನಸಿನ ಮರೆಯಲಿ” ನಂತರ ಈ ಚಿತ್ರ ಮಾಡಿದ್ದೇನೆ. ಅಲ್ಲದೆ ಮೊದಲ ಸಲ ಪ್ರಮುಖ ಪಾತ್ರವೊಂದನ್ನು ಕೂಡ ಮಾಡಿದ್ದೇನೆ ಸೂಪರ್ ನ್ಯಾಚುರಲ್, ರೊಮ್ಯಾಂಟಿಕ್ ಥ್ರಿಲ್ಲರ್ ಹೀಗೆ ಎಲ್ಲಾ ಜಾನರ್ ಚಿತ್ರಗಳನ್ನು ಮಾಡಿದ ನಂತರ ಈ ಚಿತ್ರದ ಮೂಲಕ ಕ್ರೈಂ ಥ್ರಿಲ್ಲರ್ ಕಥೆಯೊಂದನ್ನು ಹೇಳ ಹೊರಟಿದ್ದೇನೆ. ಈ ಟೈಟಲ್ ಕೊಟ್ಟವರು ಚಿತ್ರದ ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ. ಇಬ್ಬರು ಸ್ನೇಹಿತರ ಬಾಂಡಿಂಗ್, ಫ್ರೆಂಡ್‍ಷಿಪ್ ಮಧ್ಯೆ ನಡೆಯುವ ಹುಡುಗಾಟ, ತುಂಟಾಟ ಎಲ್ಲಾ ಇದೆ. ಇದರಲ್ಲಿ ಪೋಲೀಸ್, ವ್ಯಕ್ತಿಯ ಸೋಷಿಯಲ್ ಲೈಫ್ ಹೇಗೆಲ್ಲಾ ಇರುತ್ತೆ ಎಂಬುದನ್ನು ಹೇಳಲಾಗಿದೆ.

ಎಷ್ಟೋ ಸಲ ನಾವು ಕ್ರೈಂ ಮಾಡಿದ್ದರೂ ಅದರಿಂದ ಏನೂ ಆಗುವುದಿಲ್ಲ, ಕೆಲವೊಮ್ಮೆ ನಾವು ಏನೂ ಮಾಡದಿದ್ದರೂ ಅದು ನಮ್ಮನ್ನು ಸುತ್ತಿಕೊಂಡಿರುತ್ತೆ, ಇಲ್ಲೂ ಅಂಥದ್ದೇ ಕಥೆ ಇದೆ. ಲೋಕೇಂದ್ರ ಸೂರ್ಯ ಅವರ “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಚಿತ್ರವನ್ನು ಚಿತ್ರೋತ್ಸವದಲ್ಲಿ ನೋಡಿ ಇಷ್ಟಪಟ್ಟೆ. ನಂತರ ಅವರನ್ನು ಭೇಟಿ ಮಾಡಿ ಮಾತಾಡಿದೆ. ಮೊದಲು ಬರೀ ಪಾತ್ರ ಮಾಡಲು ಬಂದವರು ನಂತರ ಎಲ್ಲದರಲ್ಲೂ ಇನ್‍ವಾಲ್ವ್ ಆಗಿಬಟ್ಟರು. ಅವರೇ ಚಿತ್ರಕಥೆ ಡೈಲಾಗ್ ಬರೆದರು. ಆಗಿನ್ನೂ ಪ್ರೊಡ್ಯೂಸರ್ ಇರಲಿಲ್ಲ, ಮೊದಲು ಇಬ್ಬರೇ ಸೇರಿ ಮಾಡೋಣ ಅಂದುಕೊಂಡಿದ್ದೆವು. ಆ ಸಮಯದಲ್ಲಿ ಸೆವೆನ್‍ರಾಜ್ ಸಿಕ್ಕರು, ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದರೆ ಅದಕ್ಕೆ ಕಾರಣ ಸೆವೆನ್‍ರಾಜ್. ನಾಯಕಿ ಪಾತ್ರಕ್ಕೆ ಹಲವರನ್ನು ಸಂಪರ್ಕಿಸಿದೆವು, ಯಾರೂ ಸರಿಯಾಗಲಿಲ್ಲ, ಸಿನಿಮಾ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿರುವ ಬಹುಭಾಷಾ ನಟಿ ಗೌರಿ ನಾಯರ್ ನಮ್ಮ ನಾಯಕಿಯಾಗಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಬಳಿಕ ಅವರೀಗ ಬೇರೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರದ್ದೆಯಿದ್ದರೆ ಮಾತ್ರ ಸಿನಿಮಾ ಮಾಡಬೇಕು ಎನ್ನುವದು ನನ್ನ ಪಾಲಿಸಿ, ನನ್ನ ಪಾತ್ರಕ್ಕೆ ಹೆಚ್ಚು ಮೇಕಪ್ ಬೇಕಿರಲಿಲ್ಲ, ಜೈಲಿಂದ ಹೊರಬಂದ ವ್ಯಕ್ತಿ ಹೇಗಿರ್ತಾನೋ ಆ ಥರದ ಪಾತ್ರ ನನ್ನದು ಎಂದರು ಅವರು.
ಬಹುತೇಕ ಕುಣಿಗಲ್, ತುಮಕೂರು, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲಿ ರಿಲೀಸ್ ಮಾಡುವ ಯೋಚನೆ ಅವರದು. ನಟ ಲೋಕೇಂದ್ರ ಸೂರ್ಯ, ಚಿತ್ರದಲ್ಲಿ ಗಡಾರಿ ಎನ್ನುವ ಪಾತ್ರ ಮಾಡಿದರೆ, ಆಸ್ಕರ್ ಕೃಷ್ಣ ಫ್ಯಾಷನ್ ರಾಜನಾಗಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು. ನಿರ್ಮಾಪಕ ಸೆವೆನ್ ರಾಜ್, “ಏಳು ನನ್ನ ಜೀವನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದೆ, ನಾನು ಹುಟ್ಟಿದ್ದು ಏಳನೇ ತಾರೀಖು, ನನ್ನ ತಂದೆಗೆ ನಾನು ಏಳನೇ ಪುತ್ರ. ನನ್ನ ಹೆಸರು ಕೂಡ ಸೆವೆನ್‌ ರಾಜ್, ನಾನು ಚಿತ್ರರಂಗಕ್ಕೆ ಬರಬೇಕೆಂದು ಬಹಳ ಹಿಂದೆಯೇ ಪ್ರಯತ್ನಿಸಿದ್ದೆ, ಆಗಿರಲಿಲ್ಲ, ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ ಎಂದರು. ಕೌಂಡಿನ್ಯ ಅವರ ಕಾದಂಬರಿ ಆಧರಿಸಿ ಮಾಡಲಾಗಿರುವ ಈ ಚಿತ್ರದಲ್ಲಿ 2 ಹಾಡುಗಳಿದ್ದು, ಅನಂತ್ ಆರ್ಯನ್ ಅವರ ಸಂಗೀತವಿದೆ. ಗಗನ್ ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಸಂಕಲನ, ಅಕುಲ್ ಅವರ ನೃತ್ಯನಿರ್ದೇಶನ ಹಾಗೂ ವೈಲೆಂಟ್‌ ಸಾಹಸ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಡಬ್ಬಿಂಗ್‌ ಬ್ಯುಜಿಯೋ ಬ್ಯುಜಿ – ಸ್ಟುಡಿಯೋ ಖಾಲಿ ಇಲ್ಲ, ಕಲಾವಿದರೂ ಖಾಲಿ ಕೂತಿಲ್ಲ

ಇದು ಡಬ್ಬಿಂಗ್‌ ಲಾಭ-ನಷ್ಟದ ಲೆಕ್ಕಾಚಾರ

ಕನ್ನಡಕ್ಕೆ ಡಬ್ಬಿಂಗ್‌ ಬಂದರೆ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಅನೇಕರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ..!
– ಈ ಮಾತು ಹಿಂದಿನಿಂದಲೂ ಕೇಳಿಬರುತ್ತಲೇ ಇತ್ತು. ಈ ಕಾರಣಕ್ಕಾಗಿಯೇ ಮೊದಲಿನಿಂದಲೂ ಡಬ್ಬಿಂಗ್‌ ಅನ್ನು ವಿರೋಧಿಸುತ್ತಲೇ ಬರಲಾಗುತ್ತಿತ್ತು. ಡಾ.ರಾಜಕುಮಾರ್‌ ಅವರ ನೇತೃತ್ವದಲ್ಲಿ ಡಬ್ಬಿಂಗ್‌ ವಿರೋಧ ಜೋರಾಗಿಯೇ ಇತ್ತು. ಆದರೆ, ಈಗ…?
ಕಾಲ ಬದಲಾಗಿದೆ. ಡಬ್ಬಿಂಗ್‌ ವಿರೋಧದ ಧ್ವನಿಯೂ ಕ್ಷೀಣವಾಗಿದೆ. ಅಂದುಕೊಂಡಿದ್ದು ಇಲ್ಲಿ ಯಾವುದೂ ನಡೆಯುತ್ತಿಲ್ಲ. ಮುಕ್ತವಾಗಿಯೇ ಈಗ ಡಬ್ಬಿಂಗ್‌ ತಲೆ ಎತ್ತಿರುವುದರಿಂದ ಯಾರೊಬ್ಬರೂ ಮಾತನಾಡುತ್ತಿಲ್ಲ. “ಮೌನಂ ಸಮ್ಮತಿ ಲಕ್ಷಣಂ” ಅನ್ನುವಂತಾಗಿದೆ. ಹೌದು, ಡಬ್ಬಿಂಗ್‌ ಅಲೆ ಈಗ ಜೋರಾಗಿದೆ. ಪರಭಾಷೆಯ ಸಿನಿಮಾಗಳಷ್ಟೇ ಅಲ್ಲ, ಧಾರಾವಾಹಿಗಳು ಕೂಡ ಕನ್ನಡಕ್ಕೆ ಡಬ್‌ ಆಗಿ ಪ್ರಸಾರವಾಗುತ್ತಿವೆ. ಈಗಾಗಲೇ ನೂರಾರು ಚಿತ್ರಗಳು, ಧಾರಾವಾಹಿಗಳು ಕನ್ನಡಕ್ಕೆ ಡಬ್‌ ಆಗಿದ್ದು, ಪ್ರೇಕ್ಷಕರ ಮುಂದೆ ಬಂದಿರುವುದೂ ಉಂಟು. ಹಲವು ಚಿತ್ರಗಳು ಚಿತ್ರಮಂದಿರಕ್ಕೂ ಲಗ್ಗೆ ಇಟ್ಟಿರುವುದಷ್ಟೇ ಅಲ್ಲ, ಒಟಿಟಿ ಫ್ಲಾಟ್‌ಫಾರಂನಲ್ಲೂ ಕಾಣಿಸಿಕೊಳ್ಳುತ್ತಿವೆ.

ಇದು ನೇರವಾಗಿ ಕನ್ನಡ ಚಿತ್ರರಂಗದಲ್ಲಿ ದುಡಿಯುವ ಮಂದಿ ಮೇಲೆ ಪರಿಣಾಮ ಬೀರಿದೆ. ಇಂದು ಡಬ್ಬಿಂಗ್‌ ಅಲೆ ಹೆಚ್ಚಾಗಿದ್ದರಿಂದ ಕನ್ನಡ ಚಿತ್ರರಂಗದ ಅದೆಷ್ಟೋ ಕಿರಿಯ ಕಲಾವಿದರು, ಸಹ ಕಲಾವಿದರು, ಒಕ್ಕೂಟದ ಕಾರ್ಮಿಕರು ಇಂದು ಕೆಲಸವಿಲ್ಲದೆ ಪರಿತಪಿಸುವಂತಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗಿ ನೇರ ಒಟಿಟಿಯಲ್ಲಿ ಪ್ರತ್ಯಕ್ಷಗೊಂಡವು. ಇನ್ನು ಬಹುತೇಕ ಜನರು ತಿಂಗಳುಗಟ್ಟಲೆ ಮನೆಯಲ್ಲೇ ಇದ್ದುರಿಂದ ಅವರೆಲ್ಲರೂ ತಮ್ಮ ಮನೆಯಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗುವ ಡಬ್ಬಿಂಗ್‌ ಸೀರಿಯಲ್‌ ನೋಡುವಂತಾಯಿತು. ಈಗ ಲಾಕ್‌ಡೌನ್‌ ಸಡಿಲಗೊಂಡಿದೆ. ಆದರೆ, ಡಬ್ಬಿಂಗ್‌ ಸಿನಿಮಾಗಳು, ಧಾರಾವಾಹಿಗಳು ನಿಂತಿಲ್ಲ. ಇದರಿಂದ ಸ್ಯಾಂಡಲ್‌ವುಡ್‌ನ ಬಹಳಷ್ಟು ಮಂದಿಗೆ ದೊಡ್ಡ ಪೆಟ್ಟು ಬಿದ್ದಿರುವುದಂತೂ ನಿಜ.

ಹಾಗೆ ನೋಡಿದರೆ, ಡಬ್ಬಿಂಗ್‌ನಿಂದ ಎಲ್ಲವೂ ಹಾಳಾಗಿದೆ ಅಂತ ಹೇಳುತ್ತಿಲ್ಲ. ಡಬ್ಬಿಂಗ್‌ ಬಂದು ಒಂದಷ್ಟು ಜನರ ಕೆಲಸವನ್ನು ಕಸಿದುಕೊಂಡಿದ್ದು ಬಿಟ್ಟರೆ, ಒಂದಷ್ಟು ಜನರ ಮೊಗದಲ್ಲಿ ಮಂದಹಾಸ ಮೂಡಿಸಿದಂತೂ ನಿಜ. ಇದನ್ನು ಇನ್ನಷ್ಟು ವಿಸ್ತರಿಸಿ ಹೇಳುವುದಾದರೆ, ಡಬ್ಬಿಂಗ್‌ ಎಂಟ್ರಿಯಾಗಿದ್ದರಿಂದ ಅನೇಕ ಡಬ್ಬಿಂಗ್‌ ಕಲಾವಿದರು ಬಿಝಿಯಾದರು. ಅವರನ್ನು ಬಿಡುವಿಲ್ಲದಂತೆ ಅರಸಿ ಬಂದ ಕೆಲಸದಿಂದಾಗಿ ಎಲ್ಲರೂ ಬಿಝಿಯಾದರು. ಅದೆಷ್ಟೋ ನಟ,ನಟಿಯರಿಗೆ ಧ್ವನಿ ಕೊಡುವ ಮೂಲಕ ತಕ್ಕಮಟ್ಟಿಗೆ ದುಡಿಮೆ ಮಾಡುತ್ತಿದ್ದ ಡಬ್ಬಿಂಗ್‌ ಕಲಾವಿದರು, ಕೊಟ್ಟಷ್ಟು ಕಾಸು ಪಡೆದು ದಿನ ಸವೆಸುತ್ತಿದ್ದರು. ಯಾವಾಗ ಡಬ್ಬಿಂಗ್‌ ಬಂತೋ, ಅಲ್ಲಿಗೆ ಅವರ ಅದೃಷ್ಟದ ಬಾಗಿಲೂ ತೆರೆಯಿತು. ಅಲ್ಲೊಂದು ಇಲ್ಲೊಂದು ಸಿನಿಮಾಗಳಿಗೆ ಡಬ್‌ ಮಾಡುವ ಮೂಲಕ ಗುರುತಿಸಿಕೊಳ್ಳುತ್ತಿದ್ದವರು, ಈಗ ಇಡೀ ದಿನ ವಾಯ್ಸ್‌ ಡಬ್‌ ಮಾಡುವಲ್ಲಿಯೇ ನಿರತರಾಗಿದ್ದಾರೆ.

ಹಾಗಾಗಿ ಡಬ್ಬಿಂಗ್‌ ಅಂತಹ ಅನೇಕ ಡಬ್ಬಿಂಗ್‌ ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ ಅಂದರೆ ತಪ್ಪಿಲ್ಲ.
ಇದರೊಂದಿಗೆ ಈಗ ಸ್ಟುಡಿಯೋಗಳೂ ಕೂಡ ಬಿಝಿಯಾಗಿವೆ. ಬರೀ ಬೆಂಗಳೂರು ಮಾತ್ರವಲ್ಲ, ರಾಜ್ಯದ ಪ್ರಮುಖ ನಗರಗಳಲ್ಲೂ ಸ್ಟುಡಿಯೋಗಳಿವೆ. ಅಲ್ಲಿಯೂ ಒಂದಷ್ಟು ಪರಭಾಷೆ ಸಿನಿಮಾಗಳು ಡಬ್‌ ಆಗುತ್ತಿವೆ. ಹಾಗಾಗಿ ಎಲ್ಲಾ ಸ್ಟುಡಿಯೋಗಳಲ್ಲೂ ಕೆಲಸ ಹೆಚ್ಚಾಗಿದ್ದು, ಎಲ್ಲರೂ ಡಬ್ಬಿಂಗ್‌ ಕೆಲಸದಲ್ಲಿ ಹಿಂದೆಂದಿಗಿಂತಲೂ ಬಿಝಿಯಾಗಿದ್ದಾರೆ. ಇಲ್ಲೀಗ ಪರದಾಡುತ್ತಿರುವುದೆಂದರೆ, ಜೂನಿಯರ್‌ ಕಲಾವಿದರು ಮತ್ತು ಸಹ ಕಲಾವಿದರು. ಇದರೊಂದಿಗೆ ಕಿರುತೆರೆಯಲ್ಲಿ ಕೆಲಸ ಮಾಡುವ ಅನೇಕ ನಟ,ನಟಿಯರಿಗೂ ಇದು ಸಮಸ್ಯೆಯಾಗಿ ಪರಿಣಮಿಸಿದೆ.

ಡಬ್ಬಿಂಗ್‌ ಸಿನಿಮಾಗಳು ಇಲ್ಲಿ ಬಂದು ಹಣ ಮಾಡುತ್ತವೆಯೇ? ಇದು ಎಲ್ಲರಿಗೂ ಕಾಡುವ ಪ್ರಶ್ನೆ. ಅವುಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಹಣ ಮಾಡುತ್ತವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ, ಹಲವು ವಾಹಿನಿಗಳಲ್ಲೂ ಕೂಡ ಪ್ರಸಾರವಾಗುತ್ತಿವೆ ಅನ್ನೋದೇ ವಿಷಯ. ಈಗಾಗಲೇ ಪರಭಾಷೆಯ ಅನೇಕ ಚಿತ್ರಗಳು ಥಿಯೇಟರ್‌ ಜೊತೆಗೆ ಕಿರುತೆರೆಯಲ್ಲೂ ಬಿಡುಗಡೆಯಾಗಿವೆ. ಒಂದು ಡಬ್‌ ಮಾಡುವ ಸಿನಿಮಾಗೆ ಸುಮಾರು ೧೦ ಲಕ್ಷ ರುಪಾಯಿ ಖರ್ಚು ಮಾಡಿದರೆ, ರೆಡಿಯಾಗುತ್ತದೆ. ಇದು ಸುಲಭ ಮಾರ್ಗ. ಬಹಳಷ್ಟು ಜನ ಇಲ್ಲಿಗೆ ಪರಭಾಷೆಯ ಅನೇಕ ಸಿನಿಮಾಗಳನ್ನು ತಂದು ಡಬ್ಬಿಂಗ್‌ ಮಾಡಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಹಿಂದೆ ಪರಭಾಷೆಯ ಕೆಲವು ಸೀರಿಯಲ್‌ಗಳು ರಿಮೇಕ್‌ ಆಗುತ್ತಿದ್ದವು. ಆದರೆ, ಈಗೀಗ ಕನ್ನಡಕ್ಕೆ ಡಬ್‌ ಆಗುತ್ತಿವೆ. ಅವುಗಳು ಪ್ರಸಾರ ಕೂಡ ಆಗುತ್ತಿದ್ದು, ಡಬ್ಬಿಂಗ್ ಸ್ಟುಡಿಯೋಗಳು‌ ಎರಡು ಮೂರು ವರ್ಷಕ್ಕೆ ಬುಕ್‌ ಆಗಿವೆ ಅನ್ನೋದೇ ವಿಶೇಷ.


ಪ್ರಭಾಸ್‌ ಅಭಿನಯದ “ಬಾಹುಬಲಿ” ಕೂಡ ಕನ್ನಡದಲ್ಲಿ ಬಂತು. ಅಜಿತ್‌ ಅವರ “ಜಗಮಲ್ಲ”, ವಿಜಯ್‌ ಅವರ “ಬಿಗಿಲ್”‌, ಅಲ್ಲು ಅರ್ಜುನ್‌ ಅವರ “ಬಂದ ನೋಡು ಸರ್ರೆನೊಡು”, ರಾಮ್‌ ಚರಣ್‌ ಅವರ “ರಂಗಸ್ಥಳ”, ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಅವರ “ಡಿಯರ್‌ ಕಾಮ್ರೆಡ್”‌, ಜೂನಿಯರ್‌ ಎನ್‌ಟಿಆರ್‌ ಅವರ “ಅಪ್ಪನ ಪ್ರೀತಿಯಲ್ಲಿ” ಸಿನಿಮಾ ಕೂಡ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗುತ್ತಿದೆ. ಅದೇನೆ ಇರಲಿ, ಡಬ್ಬಿಂಗ್‌ ಶುರುವಾಗಿದಾಗಿದೆ. ಹಲವು ಚಿತ್ರಗಳು ಡಬ್ಬಿಂಗ್‌ ಆಗಿಹೋಗಿವೆ. ಇಲ್ಲಿ ಯಾರಿಗೆ ಏನು ಲಾಭ ಆಗಿದೆಯೋ, ನಷ್ಟ ಆಗಿದೆಯೋ ಬೇರೆ ಮಾತು. ಆದರೆ ಡಬ್ಬಿಂಗ್‌ ಸ್ಟುಡಿಯೋಗಳಿಗೆ, ಡಬ್ಬಿಂಗ್‌ ಕಲಾವಿದರಿಗಂತೂ ಸಾಕಷ್ಟು ಸಹಾಯವಾಗಿದೆ. ಇಲ್ಲಿ ಕನ್ನಡಿಗರು ಭಾಷಾ ವಿರೋಧಿಗಳಲ್ಲ. ಭಾಷಾ ಪ್ರೇಮಿಗಳು. ಆದರೆ, ವ್ಯಾಪಾರ ದೃಷ್ಟಿಯಿಂದ ನೋಡುವುದಾದರೆ, ಇವೆಲ್ಲಾ ಕೆಲಸಗಳು ನಡೆಯಲೇಬೇಕು ಅನ್ನೋ ಮಾತುಗಳು ಗಾಂಧಿನಗರದಲ್ಲಿ ಗಿರಕಿಹೊಡೆಯುತ್ತಿರುವುದಂತೂ ಸತ್ಯ.

ಕನ್ನಡದಲ್ಲಿ ಡಬ್ಬಿಂಗ್‌ ಕೆಲಸಗಳು ಜೋರಾಗಿವೆ. ಪರಭಾಷೆ ನಟರು ಅದಾಗಲೇ ಎಂಟ್ರಿಯಾಗಿದ್ದಾಗಿದೆ. ಇಲ್ಲಿ ಸಣ್ಣಪುಟ್ಟ ಕಾರ್ಮಿಕರು, ಕಲಾವಿದರಿಗೆ ಸಂಕಷ್ಟ ಎದುರಾಗಿರುವುದಂತೂ ನಿಜ. ಸ್ಟಾರ್‌ಗಳೂ ಈಗ ಮತ್ತಷ್ಟು ಚುರುಕಾಗಬೇಕಿದೆ. ವರ್ಷಕ್ಕೆ ಒಂದು ಸಿನಿಮಾ ಬದಲು ಎರಡು ಸಿನಿಮಾಗಳನ್ನಾದರೂ ಮಾಡಿದರೆ, ಕೊನೇಪಕ್ಷ ಇಂಡಸ್ಟ್ರಿಯಲ್ಲಿರುವ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳೇ ರಾರಾಜಿಸುತ್ತವೆ. ಆಗ ಪರಭಾಷೆಯ ಡಬ್ಬಿಂಗ್‌ ಸಿನಿಮಾಗಳ ಬಿಡುಗಡೆ ಕೊಂಚ ಕಡಿಮೆಯಾಗಬಹುದೇನೋ? ಇಲ್ಲಿ ಭಾಷೆಯನ್ನು ವಿರೋಧಿಸುತ್ತಿಲ್ಲ. ಕನ್ನಡಿಗರು ಎಲ್ಲಾ ಭಾಷಿಗರನ್ನೂ ಪ್ರೀತಿಸುತ್ತಾರೆ. ಅಂತೆಯೇ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನೋಡುತ್ತಾರೆ. ಕನ್ನಡ ಸ್ಟಾರ್‌ಗಳು ಕೂಡ ವರ್ಷಕ್ಕೆ ಎರಡು ಸಿನಿಮಾಗಳನ್ನು ಮಾಡಿದರೆ, ಎಲ್ಲರಿಗೂ ಹೆಚ್ಚು ಕೆಲಸ ಸಿಗುತ್ತೆ. ಆಗ ಎಷ್ಟೇ ಡಬ್ಬಿಂಗ್‌ ಚಿತ್ರಗಳು ಬಂದರೂ ಯಾವುದೇ ಪರಿಣಾಮ ಬೀರೋದಿಲ್ಲ.

Categories
ಸಿನಿ ಸುದ್ದಿ

ಮಾರ್ಚ್ 11ಕ್ಕೆ ರಾಬರ್ಟ್ ರಿಲೀಸ್

ದರ್ಶನ್ ವಿಡಿಯೋ ಮೂಲಕ ವಿವರಣೆ

ದರ್ಶನ್ ಅಭಿನಯದ “ರಾಬರ್ಟ್‌” ಸಿನಿಮಾ ಬಿಡುಗಡೆ ಯಾವಾಗ ಎನ್ನುವವರಿಗೆ ಚಿತ್ರತಂಡ ಹೀಗೊಂದು ಸಿಹಿ ಸುದ್ದಿ ನೀಡಿದೆ.
ಹೌದು “ರಾಬರ್ಟ್” ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಇದೇ ಮಾರ್ಚ್11 ರಂದು “ರಾಬರ್ಟ್” ಬಿಡುಗಡೆಯಾಗುತ್ತಿದೆ.

ಈ ವಿಷಯವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಕೂಡ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.

error: Content is protected !!