ಓಟಿಟಿಯಲ್ಲಿ ಮಾಸ್ಟರ್‌ ಪ್ರದರ್ಶಕರ ಅಸಮಾಧಾನ!

ಥಿಯೇಟರ್‌ಗೆ ಬಂದ ಎರಡನೇ ವಾರಕ್ಕೇ ಓಟಿಟಿಯಲ್ಲಿ ವಿಜಯ್ ತಮಿಳು ಚಿತ್ರ

ವಿಜಯ್‌ ತಮಿಳು ಸಿನಿಮಾ ನಾಡಿದ್ದು ಅಮೇಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ತೆರೆಕಂಡ ಎರಡನೇ ವಾರಕ್ಕೇ ಓಟಿಟಿಯಲ್ಲಿ ಬಂದರೆ ತಮಗೆ ಅನ್ಯಾಯವಾಗುತ್ತದೆ ಎಂದು ವಿತರಕರು, ಪ್ರದರ್ಶಕರು ಅಲವತ್ತುಕೊಂಡಿದ್ದಾರೆ.  ಕೊರೋನಾ ಸಂಕಷ್ಟದಲ್ಲಿದ್ದ ದಕ್ಷಿಣದ ಚಿತ್ರೋದ್ಯಮಕ್ಕೆ ವಿಜಯ್‌ ನಟನೆಯ ‘ಮಾಸ್ಟರ್‌’ ಹುರುಪು ತುಂಬಿತ್ತು. ಥಿಯೇಟರ್‌ನಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರಿರಬೇಕು ಎನ್ನುವ ನಿಯಮದ ಮಧ್ಯೆಯೂ ಈ ಚಿತ್ರ ದೊಡ್ಡ ವಹಿವಾಟು ನಡೆಸಿತು. ಅಧಿಕೃತ ಮೂಲಗಳ ಪ್ರಕಾರ ಈ ಚಿತ್ರದ ದೇಸಿ ಮತ್ತು ಜಾಗತಿಕ ಮಾರುಕಟ್ಟೆ ವಹಿವಾಟು 220 ಕೋಟಿ ರೂಪಾಯಿ ದಾಟುತ್ತಿದೆ ಎನ್ನಲಾಗಿದೆ. ಲೋಕೇಶ್ ಕನಗರಾಜ್‌ ನಿರ್ದೇಶನದ ಚಿತ್ರ ಇದೀಗ ಓಟಿಟಿ ಮೂಲಕ ಜಗತ್ತಿನ ಮೂಲೆಮೂಲೆಗಳಿಗೂ ತಲುಪಲಿದೆ.

ನಾಡಿದ್ದು ಜನವರಿ 29ಕ್ಕೆ ‘ಮಾಸ್ಟರ್‌’ ಅಮೇಜಾನ್ ಪ್ರೈಮ್‌ ವೀಡಿಯೋದಲ್ಲಿ ಪ್ರೀಮಿಯರ್ ಆಗಲಿದೆ. ತಮಿಳು ಸ್ಟಾರ್ ಹೀರೋ ವಿಜಯ್ ಮತ್ತು ತಮ್ಮದೇ ಆದ ಅಭಿಮಾನಿ ವಲಯ ಹೊಂದಿರುವ ವಿಜಯ್ ಸೇತುಪತಿ ನಟನೆಯ ‘ಮಾಸ್ಟರ್‌’ ಜನವರಿ 13ರ ಪೊಂಗಲ್‌ನಂದು ತೆರೆಕಂಡಿತ್ತು. ಪ್ರೊಫೆಸರ್‌ ಜಾನ್‌ ದೊರೈರಾಜ್‌ ಮತ್ತು ಮಕ್ಕಳನ್ನು ಬಳಸಿಕೊಂಡು ಕ್ರಿಮಿನಲ್ ಚಟುವಟಿಕೆ ನಡೆಸುವ ಭೂಗತ ಪಾತಕಿ ಭವಾನಿ ಮಧ್ಯೆಯ ಹೋರಾಟವೇ ಚಿತ್ರದ ಕಥಾವಸ್ತು. ಉತ್ತಮ ತಾಂತ್ರಿಕ ಗುಣಮಟ್ಟ ಹಾಗೂ ಮೇಕಿಂಗ್‌ನಿಂದಾಗಿ ಗಮನ ಸೆಳೆದಿದ್ದ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದರು. ಇದೀಗ ಚಿತ್ರದ ಓಟಿಟಿ ದಿನಾಂಕ ಘೋಷಣೆಯಾಗಿದ್ದು, ಚಿತ್ರದ ವಿತರಕರು ಹಾಗೂ ಪ್ರದರ್ಶಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

“ಈ ಸುದ್ದಿ ನಮಗೆ ಶಾಕ್ ತಂದಿದೆ. ಚಿತ್ರ ಬಿಡುಗಡೆಯಾಗಿ ಎರಡು ವಾರವಷ್ಟೇ ಆಗಿದೆ. ಮೂರು ಮತ್ತು ನಾಲ್ಕನೇ ವಾರ ನಾವು ಲಾಭ ಮಾಡುತ್ತಿದ್ದೆವು. ಓಟಿಟಿಯಲ್ಲಿ ಬರುವುದರಿಂದ ಪ್ರೇಕ್ಷಕರು ಥಿಯೇಟರ್‌ಗೆ ಬರುವುದಿಲ್ಲ. ನಮಗಿದು ನಷ್ಟದ ಬಾಬತ್ತು” ಎನ್ನುವುದು ಥಿಯೇಟರ್‌ ಮಾಲೀಕರ ಅಳಲು. ಒಪ್ಪಂದದಂತೆ 70:30 ಅನುಪಾತದಲ್ಲಿ ಹಣ ಹಂಚಿಕೊಳ್ಳುವುದು ಯೋಜನೆ. ನೂರು ರೂಪಾಯಿ ಟಿಕೆಟ್ ದರವಿದ್ದರೆ ಅದರಲ್ಲಿ 70 ರೂಪಾಯಿ ಚಿತ್ರದ ನಿರ್ಮಾಪಕರಿಗೆ ಹೋದರೆ ಪ್ರದರ್ಶಕರಿಗೆ 30 ರೂಪಾಯಿ ಪ್ರದರ್ಶಕರದ್ದು. ಎರಡು ವಾರಗಳ ನಂತರ ಪ್ರದರ್ಶಕರಿಗೆ ಶೇ.10ರಷ್ಟು ಲಾಭಾಂಶ ಹೆಚ್ಚಿಗೆ ಸಿಗಬೇಕೆನ್ನುವುದು ಒಪ್ಪಂದ. ಇದೀಗ ಚಿತ್ರ ಓಟಿಟಿಯಲ್ಲಿ ಪ್ರಸಾರವಾಗುವುದರಿಂದ ಥಿಯೇಟರ್‌ ಬರುವ ಪ್ರೇಕ್ಷಕರು ಕಡಿಮೆಯಾಗುತ್ತಾರೆ. ಹಾಗಾಗಿ ತಮಗೆ ಅನ್ಯಾಯವಾಗುತ್ತದೆ ಎಂದು ವಿತರಕರು, ಪ್ರದರ್ಶಕರು ದನಿ ಎತ್ತಿದ್ದಾರೆ. ಓಟಿಟಿ ಲೆಕ್ಕಾಚಾರದಿಂದ ಥಿಯೇಟರ್‌ನವರಿಗೆ ತೊಂದರೆಯಾಗುತ್ತದೆ ಎನ್ನುವ ವಾದಕ್ಕೆ ‘ಮಾಸ್ಟರ್‌’ ಉದಾಹರಣೆಯಾದಂತಿದೆ. ಆದರೆ ಈ ಬಗ್ಗೆ ಚಿತ್ರತಂಡವಿನ್ನೂ ಪ್ರತಿಕ್ರಿಯಿಸಿಲ್ಲ. ಓಟಿಟಿಯಲ್ಲಿ ಬರಲಿರುವ ತಮ್ಮ ಚಿತ್ರದ ಬಗ್ಗೆ ನಟ ವಿಜಯ್‌, “ನಮ್ಮ ಚಿತ್ರ ಪ್ರೈಮ್ ವೀಡಿಯೋ ಮೂಲಕ ಜಾಗತಿಕ ಪ್ರೇಕ್ಷಕರನ್ನು ತಲುಪಲಿದೆ. ಇದು ಇಡೀ ಚಿತ್ರತಂಡಕ್ಕೆ ಖುಷಿಯ ಸಂಗತಿ” ಎಂದಿದ್ದಾರೆ. ಮಾಳವಿಕಾ ಮೋಹನನ್, ಆಂಡ್ರಿಯಾ ಜೆರಿಮಿ, ಶಂತನು ಭಾಗ್ಯರಾಜ್‌, ಅರ್ಜುನ್ ದಾಸ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂಗೀತ ಅನಿರುದ್ಧ ರವಿಚಂದ್ರನ್ ಅವರದು.

Related Posts

error: Content is protected !!