ಇದು ಅನೈತಿಕ! ರಾಜ್‌ಮೌಳಿ ವಿರುದ್ಧ ಗುಡುಗಿದ ಬೋನಿ ಕಪೂರ್‌

ತಮ್ಮ “ಮೈದಾನ್‌” ಚಿತ್ರದ ದಿನದಂದೇ ‘ಆರ್‌ಆರ್‌ಆರ್‌’ ಬಿಡುಗಡೆಗೆ ನಿರ್ಮಾಪಕ ಕಿಡಿ

ಮೊನ್ನೆಯಷ್ಟೇ ನಿರ್ದೇಶಕ ರಾಜ್‌ಮೌಳಿ ತಮ್ಮ ಮಹತ್ವಾಕಾಂಕ್ಷೆಯ “ಆರ್‌ಆರ್‌ಆರ್‌” ತೆಲುಗು ಸಿನಿಮಾ ದಸರಾಗೆ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದರು. ಈ ಸಿನಿಮಾ ಮೂಲ ತೆಲುಗು ಸೇರಿದಂತೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಡಬ್ಬಿಂಗ್ ಅವತರಣಿಕೆಗಳಲ್ಲಿ ಥಿಯೇಟರ್‌ಗೆ ಬರಲಿದೆ. ಇದೀಗ ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಇದಕ್ಕೆ ತಕರಾರು ತೆಗೆದಿದ್ದಾರೆ.

“ಅದೇ ದಿನ ನನ್ನ ನಿರ್ಮಾಣದ “ಮೈದಾನ್‌” ಹಿಂದಿ ಸಿನಿಮಾ ತೆರೆಕಾಣುತ್ತಿದೆ. ಆರು ತಿಂಗಳ ಹಿಂದೆಯೇ ನಾನು ಬಿಡುಗಡೆ ದಿನಾಂಕ ಘೋಷಿಸಿದ್ದೆ. ಇದು ಗೊತ್ತಿದ್ದೂ ರಾಜಮೌಳಿ ಅದೇ ದಿನ ತಮ್ಮ ಸಿನಿಮಾ ಬಿಡುಗಡೆ ಮಾಡಲು ಸನ್ನದ್ಧರಾಗಿದ್ದಾರೆ. ಇದು ಅನೈತಿಕ!” ಎಂದು ಹೇಳುವ ಮೂಲಕ ಗುಡುಗಿದ್ದಾರೆ ಬೋನಿಕಪೂರ್‌.
ಜೀ ಸ್ಟುಡಿಯೋಸ್‌ ಹಾಗೂ ಮತ್ತಿಬ್ಬರು ನಿರ್ಮಾಪಕರೊಡಗೂಡಿ ಬೋನಿಕಪೂರ್ “ಮೈದಾನ್‌” ಹಿಂದಿ ಚಿತ್ರ ನಿರ್ಮಿಸುತ್ತಿದ್ದಾರೆ. ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನದ ಈ ಸಿನಿಮಾ, ಖ್ಯಾತ ಫುಟ್‌ಬಾಲ್ ಕೋಚ್‌ ಸೈಯದ್ ಅಬ್ದುಲ್‌ ರಹೀಂ ಅವರ ಜೀವನಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಒಂದು ರೀತಿಯ ಹೊಸ ಪ್ರಯೋಗವಿದು. ಅಜಯ್ ದೇವಗನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಬಯೋಪಿಕ್‌ನಲ್ಲಿ ಪ್ರಿಯಾಮಣಿ ಹಿರೋಯಿನ್‌. ಹಾಗೆ ನೋಡಿದರೆ ರಾಜ್‌ಮೌಳಿ ನಿರ್ದೇಶನದ “ಆರ್‌ಆರ್‌ಆರ್‌” ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಒಂದೇ ದಿನ ಅಜಯ್‌ರ ಎರಡು ಚಿತ್ರಗಳು ತೆರೆಕಾಣಲಿವೆ.


“ಕೊರೋನಾ ಕಾಲದಲ್ಲಿ ಮೊದಲೇ ಸಿನಿಮಾರಂಗ ಬಸವಳಿದಿದೆ. ಹೀಗಿರುವಾಗ ಒಮ್ಮೆಗೇ ಎರಡು ದೊಡ್ಡ ಸಿನಿಮಾಗಳು ತೆರೆಕಂಡರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಒಟ್ಟಾರೆ ಸಿನಿಮೋದ್ಯಮಕ್ಕೆ ತೊಂದರೆ. ರಾಜ್‌ಮೌಳಿ ತಮ್ಮ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಮಾಡುವುದು ಒಳಿತು” ಎಂದಿದ್ದಾರೆ ಬೋನಿಕಪೂರ್‌. ಇದಕ್ಕೆ “ಆರ್‌ಆರ್‌ಆರ್‌” ತಂಡದ ಪ್ರತಿಕ್ರಿಯೆ ಏನು ಎನ್ನುವ ಕುತೂಹಲದೊಂದಿಗೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

Related Posts

error: Content is protected !!