Categories
ಸಿನಿ ಸುದ್ದಿ

ಬುರ್ಜ್‌ ಖಲೀಫ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ಹೇಗೆ – ಒಂದೊಂದು ವಿಷಯವೂ ರೋಚಕ…

ವಿಕ್ರಾಂತ್‌ ರೋಣ ಅನಾವರಣ ಹಿಂದಿನ ಕಥೆ

ಕಿಚ್ಚ ಸುದೀಪ್‌ ಅಭಿನಯದ “ವಿಕ್ರಾಂತ್‌ ರೋಣ” ಶೀರ್ಷಿಕೆ ಜಗತ್ತಿನ ಅತೀ ಎತ್ತರದ ಕಟ್ಟಡದ ಖ್ಯಾತಿ ಪಡೆದಿರುವ ದುಬೈನ “ಬುರ್ಜ್‌ ಖಲೀಫ” ಮೇಲೆ ಅನಾವರಣಗೊಂಡಿದ್ದು ಎಲ್ಲರಿಗೂ ಗೊತ್ತು. ಅತ್ಯಂತ ಎತ್ತರದ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣಗೊಂಡಿದ್ದು ಇದೇ ಮೊದಲು. ಅಷ್ಟೇ ಅಲ್ಲ, ಅದೊಂದು ಐತಿಹಾಸಿಕ ಕ್ಷಣವಂತೂ ಹೌದು. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣ ಮಾಡುವುದು ಅಂದರೆ ತುಸು ಶ್ರಮದ ಕೆಲಸವೇ ಅಂಥದ್ದೊಂದು ಕೆಲಸಕ್ಕೆ “ವಿಕ್ರಾಂತ್‌ ರೋಣ” ಚಿತ್ರತಂಡ ಸಾಕ್ಷಿಯಾಗಿದೆ. ಇಷ್ಟೇ ಆಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಬರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ವಿಶೇಷವೇ ಸರಿ. ಆ ಕುರಿತು ಒಂದಷ್ಟು ರೋಚಕ ವಿಷಯಗಳಿವೆ. ಹಾಗೆ ಹೇಳುವುದಾದರೆ…


ಬುರ್ಜ್‌ ಖಲೀಫ ಕಟ್ಟಡದಲ್ಲಿ ಬೇರೆ ಬೇರೆ ದೇಶಗಳ ಧ್ವಜಗಳನ್ನು ಹಾರಿಸಬಹುದು. ಹಾಗೆಯೇ, “ವಿಕ್ರಾಂತ್‌ ರೋಣ” ಚಿತ್ರದ ನಿರ್ಮಾಪಕ ಜಾಕ್‌ ಮಂಜು ಅವರು ಇಂಡಿಯನ್‌ ಫ್ಲಾಗ್‌ ಹಾರಿಸುವ ಹುಮ್ಮಸ್ಸಿನಲ್ಲಿದ್ದರು. ಆದರೆ, ಅಲ್ಲಿ ಬೇಗನೇ ಅನುಮತಿ ಸಿಗಲಿಲ್ಲ. ಯಾಕೆಂದರೆ, ಎಂಬೆಸ್ಸಿ ಮೂಲಕ ಅನುಮತಿ ಪಡೆಯಬೇಕಿತ್ತು. ಅದಕ್ಕೆಲ್ಲ ಸಮಯವೂ ಇರಲಿಲ್ಲ. ಕಡಿಮೆ ಅವಧಿ ಇದ್ದುದರಿಂದ ನಿರ್ಮಾಪಕ ಜಾಕ್‌ ಮಂಜು, ಏನಾದರೂ ಸರಿ, ಕನ್ನಡ ಧ್ವಜ ಹಾರಿಸಬೇಕು ಅಂದುಕೊಂಡು ಮುಂದಾದರು. ಎರಡು ವಾರದಲ್ಲಿ ಶೀರ್ಷಿಕೆ ಅನಾವರಣಗೊಳ್ಳಬೇಕಿತ್ತು. ಸಮಯ ಕಡಿಮೆ ಇದ್ದುರಿಂದ ಎಂಬೆಸ್ಸಿ ಅನುಮತಿ ಅಸಾಧ್ಯ. ಹಾಗಾಗಿ ಅಲ್ಲಿ ಕನ್ನಡ ಧ್ವಜ ಹಾರಿಸಿಬಿಟ್ಟರು. ಆದರೆ, ಕನ್ನಡಿಗರನ್ನು ಹೊರತುಪಡಿಸಿ ಅಲ್ಲಿರುವ ಮಂದಿಗೆ ಕನ್ನಡ ಧ್ವಜದ ಬಣ್ಣದ ಬಗ್ಗೆ ಅಷ್ಟೇನೂ ಐಡಿಯಾ ಇರಲಿಲ್ಲ. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿತು.

ಸ್ಕ್ರೀನಿಂಗ್‌ ಆಗಿದ್ದು 6 ಕಿಮೀ ದೂರದಿಂದ...
ಎಲ್ಲರೂ ಬುರ್ಜ್‌ ಖಲೀಫ ಮೇಲೆ ನಮ್ಮ ಕನ್ನಡ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು ನೋಡಿ ಹೆಮ್ಮೆ ಎನಿಸಿದ್ದು ನಿಜ. ಕನ್ನಡ ಧ್ವಜ ಕಾಣಿಸಿಕೊಂಡಿದ್ದೂ ಕೂಡ ಅಷ್ಟೇ ಸಂಭ್ರಮ ಎನಿಸಿತು. ಆದರೆ, ಆ ಕಟ್ಟಡದ ಮೇಲೆ ಇಷ್ಟೆಲ್ಲಾ ಸಾಧ್ಯವಾಗಬೇಕಾದರೆ, ಎಲ್ಲವೂ ಸುಲಭವಾಗಿರಲಿಲ್ಲ. ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಚಿತ್ರದ ಶೀರ್ಷಿಕೆ ಮೂಡಲು, ಕನ್ನಡ ಧ್ವಜ ರಾರಾಜಿಸಲು ಸುಮಾರು 6  ಕಿ.ಮೀ ದೂರದಲ್ಲೇ ಪ್ರೊಜೆಕ್ಟರ್ ಸೆಟಪ್‌ ಮಾಡಿ ಆ ನಂತರ ಲೇಸರ್‌ ಮೂಲಕ ಸ್ಕ್ರಿನಿಂಗ್‌ ಮಾಡಲಾಗಿದೆ.

ದೊಡ್ಡ ಕಟ್ಟಡದ ಮೇಲೆ ಇಷ್ಟೆಲ್ಲಾ ಬರಬೇಕಾದರೆ, ದೂರದಿಂದಲೇ ಪ್ರೊಜೆಕ್ಟರ್ ಸೆಟಪ್‌ ಮಾಡಲೇಬೇಕಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಕಿಲೋಮೀಟರ್‌ಗೊಂದೊಂದು ಕ್ಯಾಮೆರಾ ಸೆಟಪ್‌ ಮಾಡಿ ಸುಮಾರು ನಾಲ್ಕೈದು ಪ್ರೊಜೆಕ್ಟರ್‌ಗಳ ಮೂಲಕ ಆ ವ್ಯವಸ್ಥೆ ಮಾಡಲಾಗಿದೆ. ಇನ್ನು, ಕೋವಿಡ್‌ ಇದ್ದುದರಿಂದ ಆರು ಜನರ ಮೇಲೆ ಗುಂಪಾಗಲು ಅಲ್ಲಿ ಅವಕಾಶವೂ ಇರಲಿಲ್ಲ. ಹೇಗೋ, “ವಿಕ್ರಾಂತ್‌ ರೋಣ” ತಂಡ, ಇಷ್ಟಿಷ್ಟು ಜನರನ್ನು ಇಟ್ಟುಕೊಂಡು ಅಸಾಧ್ಯವಾದದ್ದನ್ನು ಸಾಧಿಸಿದೆ. ವಿಶೇಷ ಕಾರ್ಯಕ್ರಮ ವೀಕ್ಷಿಸಲು ದುಬೈ ಕನ್ನಡಿಗರು ಬರುತ್ತಾರಾ ಎಂಬ ಪ್ರಶ್ನೆ ಕೂಡ ಚಿತ್ರತಂಡಕ್ಕಿತ್ತು. ಆದರೆ, ಅವರ ನಿರೀಕ್ಷೆ ಮೀರಿ ಜನರು ಸೇರಿದ್ದು ಮರೆಯಲಾರದ ವಿಷಯ ಎಂಬುದು ಚಿತ್ರತಂಡದ ಮಾತು.

ಬುರ್ಜ್‌ ಖಲೀಫಗೆ ಮಾಡಿದ ಖರ್ಚಲ್ಲಿ ನಾಲ್ಕು ಕಲಾತ್ಮಕ ಚಿತ್ರ ಮಾಡಬಹುದಿತ್ತು!
ಇಂಥದ್ದೊಂದು ಸಾಹಸಕ್ಕೆ ಮುಂದಾದ ಜಾಕ್‌ ಮಂಜು, ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಟೈಟಲ್‌ ಜೊತೆ ಕನ್ನಡ ಧ್ವಜ ರಾರಾಜಿಸಬೇಕೆನಿಸಿದ್ದು ನವೆಂಬರ್‌ನಲ್ಲಿ ಮಕ್ಕಳ ಜೊತೆ ಕುಳಿತು ಊಟ ಮಾಡುವಾಗ, ಕನ್ನಡ ಬಗ್ಗೆ, ಧ್ವಜದ ಬಗ್ಗೆ ಮಾತುಕತೆ ನಡೆಸುತ್ತಿದ್ದರಂತೆ.

ಅತೀ ಎತ್ತರದಲ್ಲಿ ಬಾವುಟ ಹಾರಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ, ಜಾಕ್‌ಮಂಜು ಅವರಿಗೊಂದು ಯೋಚನೆ ಬಂದಿದೆ. ಯಾಕೆ ದುಬೈನಲ್ಲಿರುವ ಬುರ್ಜ್‌ ಖಲೀಫ ಮೇಲೆ ಇದನ್ನೆಲ್ಲಾ ಮಾಡಬಾರದು ಅಂತಂದುಕೊಂಡು ಇಷ್ಟೆಲ್ಲಾ ಮಾಡಲು ಕಾರಣವಾಯಿತು ಎನ್ನುತ್ತಾರೆ ಜಾಕ್‌ ಮಂಜು. ಅಂದಹಾಗೆ, ಅದಕ್ಕೆಲ್ಲಾ ಕೋಟಿಗಟ್ಟಲೆ ಖರ್ಜು ಬೇಕೇ ಬೇಕು. ಆದರೆ, ದೊಡ್ಡ ಮಟ್ಟದಲ್ಲೇ ಸುದೀಪ್‌ ಅವರ ಚಿತ್ರದ ಟೈಟಲ್‌ ಲಾಂಚ್‌ ಮಾಡಬೇಕು ಅಂದುಕೊಂಡು, ಈ ಕೆಲಸ ಮಾಡಿದ್ದಾರೆ. ಇನ್ನು, ಅಲ್ಲಿಗೆ ಖರ್ಚು ಮಾಡಿದ ಹಣದಲ್ಲಿ ನಾಲ್ಕು ಕಲಾತ್ಮಕ ಚಿತ್ರಗಳನ್ನು ಮಾಡಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿರುವುದಂತೂ ನಿಜ.

Categories
ಸಿನಿ ಸುದ್ದಿ

ದರ್ಶನ್‌ ಫ್ಯಾನ್ಸ್‌ಗೆ ಇದು ಸಂಭ್ರಮದ ಸುದ್ದಿ – ಮೆಜೆಸ್ಟಿಕ್‌ ಚಿತ್ರ ಬಂದು ಹತ್ತೊಂಬತ್ತು ವರ್ಷ

ಸಂತಸದಲ್ಲಿ ಮಿಂದೆದ್ದ ದಚ್ಚು ಹುಡುಗರು

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಹೌದು, ದರ್ಶನ್‌ ಅವರ “ರಾಬರ್ಟ್‌” ಸಿನಿಮಾ ಬಿಡುಗಡೆ ದಿನವನ್ನು ಈಗಾಗಲೇ ಅನೌನ್ಸ್‌ ಮಾಡಿದೆ. ತೆಲುಗಿನಲ್ಲೂ ಚಿತ್ರ ತೆರೆಗೆ ಬರುತ್ತಿದೆ. ಇದು ಅವರ ಫ್ಯಾನ್ಸ್‌ಗೆ ದೊಡ್ಡ ಖುಷಿಯ ವಿಷಯವೆಂದರೆ, ಇನ್ನೊಂದು ಸಂತಸದ ಸುದ್ದಿಯೂ ಇದೆ. ಹೌದು, ದರ್ಶನ್‌ ಅಭಿನಯದ “ಮೆಜೆಸ್ಟಿಕ್‌” ಚಿತ್ರ ಬಿಡುಗಡೆಯಾಗಿ ಇಂದಿಗೆ ೧೯ ವರ್ಷಗಳು ಸಂದಿವೆ.

“ಮೆಜಸ್ಟಿಕ್‌” ಅವರ ಬದುಕಿನ ದಿಕ್ಕನ್ನೇ ಬದಲಿಸಿದ ಚಿತ್ರ. “ಮೆಜೆಸ್ಟಿಕ್‌” ಬಳಿಕ ಅವರು ಇದುವರೆಗೂ ತಿರುಗಿ ನೋಡಿದವರೇ ಅಲ್ಲ, ಅಲ್ಲಿಂದ ಬಣ್ಣದ ಲೋಕದಲ್ಲಿ ಮಿಂದೆದ್ದ ದರ್ಶನ್‌ ಈಗ‌ ಕನ್ನಡದ ಪಾಲಿಗೆ ಬಹುದೊಡ್ಡ ಸ್ಟಾರ್‌ನಟ. ಕ್ರಮೇಣ ಒಳ್ಳೆಯ ಚಿತ್ರಗಳ ಮೂಲಕವೇ ಅವರು ಸದ್ದು ಮಾಡುತ್ತಲೇ ಬಂದರು. “ಕಲಾಸಿಪಾಲ್ಯ”, “ಗಜ”, “ಚಿಂಗಾರಿ”, “ಬೃಂದಾವನ”, “ಸರ್ದಾರ್”, “ಜಗ್ಗುದಾದ”, “ದಾಸ” ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಕನ್ನಡ ಕಲಾರಸಿಕರಿಗೆ ನೀಡಿದ್ದಾರೆ. “ಮೆಜೆಸ್ಟಿಕ್‌” ಪಕ್ಕಾ ಮಾಸ್‌ ಸಿನಿಮಾ. ಅಲ್ಲಿಂದಲೇ ದರ್ಶನ್‌ ಅವರಿಗೆ ಮಾಸ್‌ ಫ್ಯಾನ್ಸ್‌ ಹುಟ್ಟುಕೊಂಡರು.

ಈಗ ಎಲ್ಲಿ ನೋಡಿದರೂ ದರ್ಶನ್‌ ಅವರ ಅಭಿಮಾನಿಗಳದ್ದೇ ಸುದ್ದಿ. ಅದರಲ್ಲೂ ದರ್ಶನ್‌ ಅಂದಾಕ್ಷಣ ನೆನಪಾಗೋದೇ ಮಾಸ್‌ ಫೀಲ್.‌ ಸದಾ ಸದಭಿರುಚಿಯ ಚಿತ್ರ ಕೊಡುತ್ತ ಬಂದಿರುವ ದರ್ಶನ್‌ ಅವರ “ಮೆಜೆಸ್ಟಿಕ್‌” ಚಿತ್ರದ ಬಗ್ಗೆಯೇ ಈಗ ಎಲ್ಲರ ಮಾತು. ಮತ್ತೆ ಮತ್ತೆ “ಮೆಜಸ್ಟಿಕ್‌” ನೆನಪಾಗುತ್ತೆ ಅಂದರೆ, ಅದರೊಳಗಿರುವ ಕಂಟೆಂಟ್.‌

ಅದೇನೆ ಇರಲಿ, ಇಂಥದ್ದೊಂದು ಸಿನಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ದರ್ಶನ್‌ ಇಂದಿಗೂ ಮಾಸ್‌ ಹೀರೋ ಆಗಿಯೇ ಗಟ್ಟಿನೆಲೆ ಕಂಡಿದ್ದಾರೆ. ಅಂದಹಾಗೆ, ಪಿ.ಎನ್.ಸತ್ಯ ನಿರ್ದೇಶಿಸಿದ ಸಿನಿಮಾ ಇದು. ರಾಮಮೂರ್ತಿ, ಬಾ.ಮ.ಹರೀಶ್‌ ಇದರ ಹಿಂದೆ ಇದ್ದು, ತಯಾರು ಮಾಡಿದವರು.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಕೋಟಿಗೊಬ್ಬನ ಹಾಡು ಪಾಡು- ಮಾರ್ಚ್‌ 28ಕ್ಕೆ ಹಾಡುಗಳ ಬಿಡುಗಡೆ

ಸಾಂಗ್‌ ಎದುರು ನೋಡುತ್ತಿರುವ ಫ್ಯಾನ್ಸ್‌ 

ಕೋಟಿಗೊಬ್ಬ ಅಂದಾಕ್ಷಣ, ನೆನಪಾಗೋದೇ ಡಾ.ವಿಷ್ಣುವರ್ಧನ್.‌ ಈಗ ಅದೇ ಕೋಟಿಗೊಬ್ಬ ಹೆಸರಲ್ಲಿ ಸುದ್ದಿಯಾದವರು ಕಿಚ್ಚ ಸುದೀಪ್.‌ ಹೌದು, ಸುದೀಪ್‌ ಈಗಾಗಲೇ “ಕೋಟಿಗೊಬ್ಬ” ಸೀರೀಸ್‌ನಲ್ಲಿ ಸಿನಿಮಾ ಮಾಡಿರುವ ಸುದೀಪ್‌, “ಕೋಟಿಗೊಬ್ಬ ೩” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.

ಅದಕ್ಕೆ ಕಾರಣ, ಈಗಾಗಲೇ ಸಾಕಷ್ಟು ಸುದ್ದಿಯಲ್ಲಿರೋದು. ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾಗಳ ಸ್ಟಾರ್‌ ನಟ ಎನಿಸಿರುವ ಸುದೀಪ್‌ ಅವರ “ಕೋಟಿಗೊಬ್ಬ” ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಮಾ.೨೮ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಹೌದು, ಸೂರಪ್ಪ ಬಾಬು ನಿರ್ಮಾಣದ “ಕೋಟಿಗೊಬ್ಬ ೩” ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ, ಟ್ವೀಟ್‌ ಮೂಲಕ ಚಿತ್ರತಂಡ ಹಾಡುಗಳ ಬಿಡುಗಡೆ ಕುರಿತು ಹೇಳಿಕೊಂಡಿದೆ.

Categories
ಸಿನಿ ಸುದ್ದಿ

ಹೊಸ ಪ್ರತಿಭೆಗಳ ರಿವೈಂಡ್ ರೆಡಿ

ಟೀಸರ್ ಗೆ  ಭರಪೂರ ಮೆಚ್ಚುಗೆ

ಕನ್ನಡ ಚಿತ್ರರಂಗದಲ್ಲಿ ಈಗ ಬಿಡುಗಡೆಗೆ ಸಾಲು ನಿಂತಿರುವ ಚಿತ್ರಗಳ ಪಟ್ಟಿ ದೊಡ್ಡದ್ದೇ ಒದೆ. ಆ ಸಾಲಿಗೆ ‘ರಿವೈಂಡ್’ ಸಿನಿಮಾವೂ ಸೇರಿದೆ.
ಇದು ಬಹುತೇಕ ಹೊಸಬರ ಚಿತ್ರ.

ಈ ಚಿತ್ರ ಕಥೆ ಬಗ್ಗೆ ಹೇಳೋದಾದರೆ, ಹೀರೋ ಇಲ್ಲಿ ಒಬ್ಬ ರಿಪೋರ್ಟರ್. ಒಂದಷ್ಟು ಸಮಸ್ಯೆಗಳು ಅವನಿಗೂ ಎದುರಾಗುತ್ತವೆ. ಅದರಿಂದ ಅವನ ಫ್ಯಾಮಿಲಿಯೂ ಸಿಲುಕುತ್ತದೆ. ನಂತರ ಹೇಗೆ ಅವನು ತನ್ನ ಫ್ಯಾಮಿಲಿಯನ್ನು ಕಷ್ಟಗಳಿಂದ ಪಾರು ಮಾಡ್ತಾನೆ ಅನ್ನೋದು ಕಥೆ.

ಇದೊಂದು ಥ್ರಿಲ್ಲರ್ ಸಿನಿಮಾ. ಈ ಪ್ರಯತ್ನಕ್ಕೆ ಎಲ್ಲರ ಸಹಕಾರವಿತ್ತು ಚೆನ್ನಾಗಿತ್ತು ಎಂದು ನಟ ಧರ್ಮ ಹೇಳಿಕೊಂಡರು.
ಇನ್ನು, ಚಿತ್ರದ ಹೀರೋ ತೇಜ್ ತಮ್ಮ ಸಿನಿಮಾ ಬಗ್ಗೆ ಹೇಳಿದ್ದು ಹೀಗೆ. ‘ಯಂಗ್ ಸ್ಟಾರ್ಸ್ ಸೇರಿ ಈ ಪ್ರಯತ್ನ ಮಾಡಿದ್ದೇವೆ, ಕನ್ನಡ, ತಮಿಳು ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ ಎಂಬ ವಿವರ ಕೊಟ್ಟರು.

ಅಂದಹಾಗೆ, ಈ ಚಿತ್ರಕ್ಕೆ ತೇಜ್ ಅವರದೇ ನಿರ್ದೇಶನವಿದೆ. ವಿನೋದ್ ನಿರ್ಮಾಪಕರು.
ಸದ್ಯ ಟೀಸರ್ ಬಿಡುಗಡೆಯಾಗಿದ್ದು,

ಏಪ್ರಿಲ್ 16 ರಂದು ರಿಲೀಸ್ ಆಗಲಿದೆ. ಚಿತ್ರದಲ್ಲಿ ಚಂದನ, ಹಿರಿಯ ನಟ ಸುಂದರ್ ರಾಜ್, ಸಂದೀಪ್ , ಮಲಾನಿ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಭಾರತ ರೈತರ ಪರ ಮಾತಾಡಿದ ಹಾಲಿವುಡ್ ನಟಿಗೆ ರೇಪ್‌-ಕೊಲೆ ಬೆದರಿಕೆ!

ಹಾಲಿವುಡ್‌ ನಟಿ, ಸಾಮಾಜಿಕ ಹೋರಾಟಗಾರ್ತಿ ಜಮೀಲಾ ಬಿಚ್ಚಿಟ್ಟ ಸತ್ಯ 

ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟದ ವಿಚಾರವಾಗಿ ಬಹಳಷ್ಟು ನಟಿಮಣಿಯರು ಸ್ಟೇಟ್ ಮೆಂಟ್ ಗಳನ್ನು ನೀಡಿದ್ದು ಗೊತ್ತೇಇದೆ. ಆ ಕುರಿತಂತೆ ಸಾಕಷ್ಟು ಸ್ಟಾರ್‌ಗಳು ಸಹ ಟ್ವೀಟ್‌ ಮಾಡಿದ್ದಾರೆ. ಇತ್ತೀಚೆಗೆ ಕನ್ನಡದ ನಟಿ ಪ್ರಣೀತಾ ಟ್ವೀಟ್‌ ಮಾಡಿದ್ದರು. ಈಗ ಹಾಲಿವುಡ್‌ ನಟಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಎಂದೇ ಗುರುತಿಸಿಕೊಂಡಿರುವ ಜಮೀಲಾ ಹಾಗೊಂದು ಟ್ವೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ಟ್ವೀಟ್‌ ಮಾಡಿದ ನಂತರ ಕರಾಳ ಸತ್ಯವೊಂದನ್ನೂ ಬಿಚ್ಚಿಟ್ಟಿದ್ದಾರೆ.

ಹೌದು, ಭಾರತದ ರೈತರ ಬಗ್ಗೆ ಮಾತನಾಡಿದ ನಟಿ ಜಮೀಲಾ ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬಂದಿವೆಯಂತೆ. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಜಮೀಲಾ, ” ನಾನೂ ಮನುಷ್ಯಳು” ಎಂದು ಟ್ವೀಟರ್ ನಲ್ಲಿ ಹಾಕಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಖುಷ್‌ ಖುಷಿಯಲಿ… ಕೇರಳದಲ್ಲಿ ಖುಷಿ ಹಾಡು

ಪ್ರೇಮಿಗಳ ದಿನಕ್ಕೆ ಆಲ್‌ ಓಕೆ ‌ ಗಿಫ್ಟ್

ಹೊಸ ಆಲ್ಬಂ ಸಾಂಗ್‌ಗೆ ಖುಷಿ ಹೆಜ್ಜೆ

ಕನ್ನಡದಲ್ಲಿ “ದಿಯಾ” ಅನ್ನುವ ಸಿನಿಮಾ ಹೊಸದೊಂದು ಕ್ರೇಜ್‌ ಹುಟ್ಟಿಸಿದ್ದು ಎಲ್ಲರಿಗೂ ಗೊತ್ತು.  ವಿಷಯ ಏನೆಂದರೆ, “ದಿಯಾ” ಸಿನಿಮಾ ನಾಯಕಿ ಖುಷಿ ಆ ಸಿನಿಮಾ ಬಳಿಕ ಸಾಕಷ್ಟು ಖುಷಿಯಲ್ಲಿರೋದಂತು ನಿಜ.

ಅದಾದ ಮೇಲೆ ಒಂದೊಂದೇ ಸಿನಿಮಾಗಳು ಅವರನ್ನು ಹುಡುಕಿ ಬಂದಿದ್ದು ನಿಜ. “ದಿಯಾ” ಕನ್ನಡದ ಮಟ್ಟಿಗೆ ವಿಶೇಷವಾದ ಚಿತ್ರ. ಈಗೇಕೆ “ದಿಯಾʼ ಕುರಿತ ಸುದ್ದಿ ಅಂದರೆ, ಆ ಸಿನಿಮಾದ ನಾಯಕಿ ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿರುವುದಷ್ಟೇ ಅಲ್ಲ, ಅವರೀಗ  ಕೇರಳದ  ರೆಸಾರ್ಟ್‌ವೊಂದರಲ್ಲಿ ‌ಬೀಡು ಬಿಟ್ಟಿದ್ದಾರೆ. ಆಲ್‌ ಓಕೆ (ಅಲೋಕ್)‌ ಅವರ ಹೊಸ ಆಲ್ಬಂ ಸಾಂಗ್‌ವೊಂದರಲ್ಲಿ ತೊಡಗಿಕೊಂಡಿದ್ದು, ಚಿತ್ರೀಕರಣ ಅಲ್ಲೀಗ ಜೋರಾಗಿ ನಡೆಯುತ್ತಿದೆ. ಅದು ವ್ಯಾಲೆಂಟೈನ್ಸ್ ಡೇ ‌ಗಾಗಿಯೇ ಮಾಡುತ್ತಿರುವ ಹಾಡು ಎಂದು ಹೇಳಿದ್ದಾರೆ ಖುಷಿ. ಆ ಹಾಡಿನ ಕೆಲ ಫೋಟೋಗಳನ್ನು ಅವರು ಟ್ವೀಟ್‌ ಮಾಡಿದ್ದಾರೆ.

ಆಲ್ಬಂ ಸಾಂಗ್‌ಗಾಗಿ ಅವರು ಸದ್ಯ ಕೇರಳದಲ್ಲಿದ್ದಾರೆ. ಬಿಡುವಿನ ಸಮಯ ನೋಡಿಕೊಂಡು, ಹಾಡಿನ ಫೋಟೋಗಳನ್ನು ಟ್ವಿಟ್ಟರ್‌‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಫ್ಯಾನ್ಸ್‌ ಸದ್ಯಕ್ಕೆ ಅವರ ಕಲರ್‌ಫುಲ್‌ ಫೋಟೋಗಳನ್ನು ನೋಡಿ ಖುಷ್‌ ಖುಷಿಯಾಗಿದ್ದಾರೆ. ದಿ ಕೇಕ್‌ ಎನ್ನುವುದು ಆ ಆಲ್ಬಂ ಸಾಂಗ್‌ ಹೆಸರು. ಅಲೋಕ್‌ ಹಾಗೂ ಖುಷಿ ಅವರೊಂದಿಗೆ  “ಕೆಜಿಎಫ್‌ʼ ಖ್ಯಾತಿಯ ‌ಜಾನ್‌ ‌ ಕೊಕೆನ್  ಇಲ್ಲಿ ಗೆಸ್ಟ್‌ ಆಫಿರಿಯನ್ಸ್‌ ಮಾಡಿದ್ದಾರೆ. ‌  ಇದು ವ್ಯಾಲೆಂಟೈನ್ಸ್ ಡೇ ಗೆ ರಿಲೀಸ್ ಆಗಲಿದೆ.ಸದ್ಯ ಈ ಸಾಂಗ್‌  ಗೆ  ಕೇರಳದ ವಯನಾಡ್ ನಲ್ಲಿ  ಚಿತ್ರೀಕರಣ ನಡೆಯುತ್ತಿದೆ. ಮೂರು ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ.  ಕನ್ನಡ, ತೆಲುಗು, ತಮಿಳಿನಲ್ಲಿ ಮೂಡಿಬರಲಿದೆ. ಚಿತ್ರೀಕರಣದ ಅನುಭವ ಹೇಳಿಕೊಂಡಿರುವ ನಟಿ ಖುಷಿ, ಬೇರೆ ಬೇರೆ ಭಾಷೆಯ ನಟರನ್ನು ಭೇಟಿಯಾಗುವ ಅವಕಾಶ ದೊರಕಿತು. ರೆಸಾರ್ಟ್ ತುಂಬಾ ಬ್ಯೂಟಿಫುಲ್ ಎಂದು ಖುಷಿ ಖುಷಿ ವ್ಯಕ್ತಪಡಿಸಿದರು.

Categories
ಸಿನಿ ಸುದ್ದಿ

ಪಬ್ಲಿಕ್‌ ಟಾಯ್ಲೆಟ್‌ ತೊಳೆದಷ್ಟೂ ಕೊಳೆ- ಹೆಬ್ಬೂರು ಹುಡುಗನ ಮನ ಮಿಡಿಯೋ ಕಿರುಚಿತ್ರ

ಯಾಕಣ್ಣ… ಎಂಬ ಧ್ವನಿ ಹಿಂದಿನ ಗೋಳು!

ಸಾಮಾನ್ಯವಾಗಿ ಸಿನಿಮಾ ಅಂದಾಕ್ಷಣ, ಒಂದು ಕಲ್ಪನೆಯ ಕಥೆಯನ್ನೋ ಅಥವಾ ನೈಜ ಘಟನೆಯುಳ್ಳ ಕಥೆಯನ್ನೋ ಇಟ್ಟುಕೊಂಡು ಮಾಡುವುದು ಸಹಜ. ಅಂತಹ ಅನೇಕ ಸಿನಿಮಾಗಳು ಗೆಲುವು ಕಂಡಿರುವುದೂ ಉಂಟು. ಇನ್ನೂ ಕೆಲವರು ಒಂದಷ್ಟು ಸುದ್ದಿಯಾದ ಘಟನೆಗಳನ್ನೇ ಇಟ್ಟುಕೊಂಡು ತೆರೆಯ ಮೇಲೆ ತಂದಿದ್ದೂ ಉಂಟು. ಈಗ ರಾಜ್ಯಾದ್ಯಂತ ಸಖತ್‌ವೈರಲ್‌ ಆಗಿದ್ದ ಒಂದು ವಿಡಿಯೋ ಒಳಗಿನ ವಿಷಯ ಇಟ್ಟುಕೊಂಡೇ ಒಂದು ಕಿರುಚಿತ್ರ ಮಾಡಲಾಗಿದೆ.  ಫೆಬ್ರವರಿ 6ರಂದು ಆ ಕಿರುಚಿತ್ರ ಭವಾನಿ ಕ್ಯಾಪ್ಚರ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಅದೊಂದು ವಿಶೇಷ ಕಥಾವಸ್ತು ಇರುವ ಕಿರುಚಿತ್ರ. ಆ ಕಾರಣಕ್ಕೆ ಅದು ಸುದ್ದಿಗೆ ಅರ್ಹವಾದ ಕಿರುಚಿತ್ರವೂ ಹೌದು.

ಅಂದಹಾಗೆ, ಆ ಕಿರುಚಿತ್ರಕ್ಕೆ “ಪಬ್ಲಿಕ್‌ ಟಾಯ್ಲೆಟ್‌” ಎಂದು ನಾಮಕರಣ ಮಾಡಲಾಗಿದೆ. ಈ ಶೀರ್ಷಿಕೆಗೆ “ತೊಳೆದಷ್ಟೂ ಕೊಳೆ” ಎಂಬ ಅರ್ಥಪೂರ್ಣ ಅಡಿಬರಹವನ್ನೂ ಕೊಡಲಾಗಿದೆ. ಈ ಟೈಟಲ್‌ನಲ್ಲೇ ಒಂದೊಳ್ಳೆಯ ಕಥೆ ಇದೆ, ವ್ಯಥೆಯೂ ಇದೆ ಅನ್ನೋದು ಗೊತ್ತಾಗುತ್ತೆ. ಈ ಕಿರುಚಿತ್ರಕ್ಕೆ ನಾಗೇಶ್‌ ಹೆಬ್ಬೂರು ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು ಒಂದು ದಶಕದಿಂದಲೂ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ತಾನೂ ಸ್ವತಂತ್ರ ನಿರ್ದೇಶಕನಾಗಬೇಕು ಎಂಬ ಹಂಬಲದಿಂದಲೇ ಒಂದೊಳ್ಳೆಯ ಕಂಟೆಂಟ್‌ ಇರುವ ಕಿರುಚಿತ್ರ ನಿರ್ದೇಶಿಸಿ, ಆ ಮೂಲಕ ಸೈ ಎನಿಸಿಕೊಂಡು, ನಿರ್ಮಾಪಕರನ್ನು ಹುಡುಕಿ ಸದಭಿರುಚಿಯ ಸಿನಿಮಾ ಮಾಡುವ ಉದ್ದೇಶ ನಾಗೇಶ್‌ ಹೆಬ್ಬೂರು ಅವರಿಗಿದೆ. ಅವರ “ಪಬ್ಲಿಕ್‌ಟಾಯ್ಲೆಟ್”‌ ಕುರಿತು ಸ್ವತಃ ಅವರೇ “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.

ನಾಗೇಶ್‌ ಹೆಬ್ಬೂರು, ನಿರ್ದೇಶಕ

“ಇತ್ತೀಚೆಗೆ ಒಂದು ಹೆಣ್ಣು ಮಗಳ ವಿಡಿಯೋವೊಂದು ಸಾಕಷ್ಟು ವೈರಲ್‌ ಆಗಿತ್ತು. ಅದು ಬೇರೇನೂ ಅಲ್ಲ, ತುಮಕೂರು ಜಿಲ್ಲೆಯಲ್ಲಿ ನಡೆದ ಒಂದು ಘಟನೆಯದು. ಒಂದು ಪಬ್ಲಿಕ್‌ ಟಾಯ್ಲೆಟ್‌ನಲ್ಲಿ ಮಹಿಳೆಯೊಬ್ಬಳು ಪರಪುರುಷನ ಜೊತೆ ಇರುವ ವೇಳೆ ಅಪರಿಚಿತನೊಬ್ಬ ಮೊಬೈಲ್‌ ಮೂಲಕ ವಿಡಿಯೋ ಮಾಡಲು ಮುಂದಾದಾಗ, ಆ ಮಹಿಳೆ, “ಯಾಕಣ್ಣಾ…” ಅಂತ ಮುಗ್ಧತೆಯಿಂದಲೇ ಪ್ರಶ್ನಿಸುತ್ತಾಳೆ. ಆ “ಯಾಕಣ್ಣಾ…” ಅನ್ನುವ ಧ್ವನಿಯಲ್ಲಿ ಒಂದು ಮನವಿ ಇತ್ತು. ಆದರೆ, ಆ ವಿಡಿಯೋ ಮಾಡಿದ ಅಪರಿಚಿತ, ತನ್ನ ಕಲ್ಮಶ ಮನಸ್ಸಲ್ಲೇ ಆ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿಬಿಟ್ಟ. ಗಂಟೆಗಳಲ್ಲೇ ಆ ವಿಡಿಯೋ ತುಂಬಾ ಫೇಮಸ್ ಆಯ್ತು. ಅಷ್ಟೇ ಅಲ್ಲ, ಆ ಮಹಿಳೆ ಹೇಳಿದ “ಯಾಕಣ್ಣಾ..” ಅನ್ನೋ ಪದ ಸಾಕಷ್ಟು ಟಿಕ್‌ಟಾಕ್‌ಗೂ ಬಳಕೆಯಾಯ್ತು. ಆ ಟಿಕ್‌ಟಾಕ್‌ಮೂಲಕ ಹಲವು ಯುವತಿಯರು, ಯುವಕರು ತಮ್ಮ ಖುಷಿಗೆ ಬಳಸಿಕೊಂಡರು.

ಆ ಬಳಿಕ “ಯಾಕಣ್ಣ ರೀಮಿಕ್ಸ್‌ ಸಾಂಗ್‌”, “ಯಾಕಣ್ಣ ಡಿಜೆ ಸೌಂಡ್‌”, “ಯಾಕಣ್ಣ ಅಭಿಮಾನಿಗಳ ಸಂಘ” ಕೂಡ ಆಗುವ ಮೂಲಕ ಆಕೆ ರಾತ್ರೋ ರಾತ್ರಿ ಆಕೆ ಮನೆ ಮಾತಾಗಿಬಿಟ್ಟಳು. ಪಡ್ಡೆಗಳ ಪಾಲಿಗೆ ಆಕೆ ತಮಾಷೆಯ ವಸ್ತುವಾಗಿಬಿಟ್ಟಳು. ಏನಿಲ್ಲವೆಂದರೂ ಆ ವಿಡಿಯೋ ಒಂದು ಕೋಟಿ ವೀಕ್ಷಣೆ ಪಡೆದಿದ್ದೇ ದೊಡ್ಡ ಸುದ್ದಿಯಾಯ್ತು. ಈ ಕಥೆಯ ಹಿಂದೆ ಒಂದು ವ್ಯಥೆಯ ಕಥೆ ಹುಡುಕಿದೆ. ಅಲ್ಲೊಂದು ಮಾನವೀಯತೆಯ ಕಥೆಯ ಎಳೆ ಸಿಕ್ಕಿತು. ಅದನ್ನಿಟ್ಟುಕೊಂಡೇ ಒಂದು ಕಿರುಚಿತ್ರ ಮಾಡಿದ್ದೇನೆ” ಎಂದು ವಿವರ ಕೊಡುತ್ತಾರೆ ನಿರ್ದೇಶಕ ನಾಗೇಶ್‌ ಹೆಬ್ಬೂರು.

ಆ ಶೌಚಾಲಯದೊಳಗೆ ಪರಪುರುಷನ ಜೊತೆ ಇದ್ದ ಆಕೆಯ ವಿಡಿಯೋ ಮಾಡಿ ಹರಿಬಿಟ್ಟ ವ್ಯಕ್ತಿಗೆ ಆ ಕ್ಷಣಕ್ಕೆ ಖುಷಿಯಾಗಿರಬಹುದು. ತಾನು ಮಾಡಿದ ವಿಡಿಯೋ ವೈರಲ್‌ ಆಗಿ, ಟಿಕ್‌ಟಾಕ್‌ ಕೂಡ ಆಗೋಗಿದೆ ಅಂತೆಲ್ಲಾ ಸಂಭ್ರಮ ಪಟ್ಟಿರಬಹುದು. ಆದರೆ, ಆಕೆಯ ಪರಿಸ್ಥಿತಿ ಏನಾಯ್ತು ಎಂಬುದರ ಅರಿವು ಆತನಿಗಿಲ್ಲವಂತಾಯ್ತು. ಆಕೆ ಎಲ್ಲೇ ಸಿಕ್ಕರೂ, ಜನರು ಮಾತನಾಡಿಸಿ, ವಿಡಿಯೋ ಮಾಡುವ ಖಯಾಲಿಗಿಳಿದರು. ಕೊನೆ ಕೊನೆಗೆ ಆಕೆಗೂ ಆ ವಿಡಿಯೋದ ಅರಿವಾಯಿತು. ಆಕೆ ನೊಂದಳು, ಬೆಂದಳು, ಮರುಗಿದಳು, ಕಣ್ಣೀರಾದಳು. ಕಣ್ಣೀರಿಡುತ್ತಲೇ ಆಕೆ ಹೇಳಿದ್ದು, “ನಾನು ಯಾರೋ ಮಾಡದಿರುವ ತಪ್ಪು ಮಾಡಿಲ್ಲ. ಹೊಟ್ಟೆಗಾಗಿ ಮಾಡಿದೆ. ಈಗ ನೋಡಿದರೆ, ಯಾರೋ ವಿಡಿಯೋ ಮಾಡಿ, ತಿನ್ನುವ ಅನ್ನಕ್ಕೂ ಕಲ್ಲುಹಾಕಿದ್ದಾರೆ” ಅಂತ ಮನಕಲಕುವ ಆ ದೃಶ್ಯ ಕೂಡ ವೈರಲ್‌ ಆಗೋಯ್ತು. ನಾನೂ ಅದನ್ನೆಲ್ಲಾ ನೋಡಿದ್ದರಿಂದ ನನ್ನೊಳಗೊಂದು ಕಥೆ ಹುಟ್ಟುಕೊಂಡಿತು.

ಆಕೆಯ ವಿಡಿಯೋ ಮಾಡಿದ ವ್ಯಕ್ತಿ ಆಕೆಯ ಗೋಳು ನೋಡಿದ ಮೇಲೆ ಹೇಗೆಲ್ಲಾ ಪಶ್ಚಾತ್ತಾಪ ಪಟ್ಟಿರಬಹುದು ಅನ್ನುವುದನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದು ಆಕೆಯ ಕಥೆಯಂತೂ ಅಲ್ಲ. ಇಡೀ ಕಥೆಯಲ್ಲಿ ಅವಳಿಗೆ ಕ್ಯಾಮೆರಾವನ್ನೂ ಹಿಡಿದಿಲ್ಲ. ಆದರೆ, ಅವಳಿಗೆ ಮೊಬೈಲ್‌ ಕ್ಯಾಮೆರಾ ಹಿಡಿದವನ ಮೇಲೆ ಕ್ಯಾಮೆರಾ ಹಿಡಿಯಲಾಗಿದೆ. ಅವನು ಯಾರೂ ಅನ್ನೋದೇ ಜಗತ್ತಿಗೆ ಗೊತ್ತಿಲ್ಲ. ಅವನು ಯಾಕೆ ಆ ವಿಡಿಯೋ ಮಾಡಿ ಹರಿಬಿಟ್ಟ, ಆ ಕ್ಷಣಕ್ಕೆ ಮಾಡಿದನಾದರೂ ಆಮೇಲೆ ಅವನ ಮನಸ್ಥಿತಿ ಹೇಗಿರಬಹುದು ಅನ್ನೋದು ಕಥೆ. ಎಲ್ಲರಿಗೂ ಗೊತ್ತಿರುವ ಕಥೆಯನ್ನು ಗೊತ್ತಿರದ ದೃಷ್ಟಿಕೋನದಲ್ಲಿ ಮಾಡಲಾಗಿದೆ” ಎಂಬುದು ಅವರ ಮಾತು.

ಇಷ್ಟಕ್ಕೂ ನಾನು ಈ ಕಥೆ ಆಯ್ಕೆ ಮಾಡಿಕೊಳ್ಳೋಕೆ ಕಾರಣ, ನಾನೊಬ್ಬ ನಿರ್ದೇಶಕನಾಗಬೇಕು. ನಾನು ಏನು ಅಂತ ಸಾಬೀತುಪಡಿಸಿಕೊಳ್ಳಬೇಕು ಅನ್ನೋದು. ನಾನೀಗ ಕೈಗೆತ್ತಿಕೊಂಡ ಸಬ್ಜೆಕ್ಟ್‌ ಮೇಲೆ ವಿಶ್ವಾಸವಿದೆ. ಗೊತ್ತಿರುವ ಕಂಟೆಂಟ್‌ ಅನ್ನು ಹೇಗೆ ತೋರಿಸ್ತಾರೆ. ಆಕೆಯನ್ನು ತೋರಿಸದೆ, ಹೇಗೆ ಮಾಡಬಹುದು. ನಾನು ಸಾಬೀತುಪಡಿಸಿಕೊಳ್ಳೋಕೆ ಈ ಕಥೆ ಚೆನ್ನಾಗಿದೆ ಅನಿಸಿತು. ನಾನು ಮೇಕಿಂಗ್‌ನಲ್ಲಿ ಎಲ್ಲೂ ಕಾಂಪ್ರಮೈಸ್‌ ಆಗಲಿಲ್ಲ. ರಿಯಲ್‌ ಪಾತ್ರದಂತೇ ಇರುವ ಒಬ್ಬ ಜೂನಿಯರ್‌ ಅರ್ಟಿಸ್ಟ್‌ ಪವಿ ಎಂಬುವವರನ್ನು ಕರೆಸಿ, ಕ್ಯಾಮೆರಾ ಮುಂದೆ ನಿಲ್ಲಿಸಿ ಚಿತ್ರೀಕರಿಸಲಾಗಿದೆ. ಆಕೆ ಆ ಪಾತ್ರ ಮಾಡುವ ಮುನ್ನ, ರಿಯಲ್‌ ಹೆಣ್ಣುಮಗಳ ಕಥೆ ವ್ಯಥೆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಕುರಿತು ತೋರಿಸಿದ ಬಳಿಕ ಪವಿ ನಾನು ಮಾಡ್ತೀನಿ ಅಂತ ಒಪ್ಪಿದರು. ಇನ್ನು, ಚಿತ್ರಕ್ಕೆ ಅಭಿಷೇಕ್‌ ಕಾಸರಗೋಡು ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಕಾಂತ್‌ ಸಂಕಲನ ಮಾಡಿದ್ದಾರೆ.

ಹರ್ಷವರ್ಧನ್‌ ಸಂಗೀತವಿದೆ. ರಘುನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಕಾಣಿ ಸ್ಟುಡಿಯೋದವರು ಪೋಸ್ಟರ್‌ ಡಿಸೈನ್‌ ಮಾಡಿಕೊಟ್ಟಿದ್ದಾರೆ. ಇವರೆಲ್ಲರೂ ನನ್ನ ಪ್ರೀತಿಗಾಗಿ ಕೆಲಸ ಮಾಡಿದ್ದಾರೆ. ಇನ್ನು, ರಂಗಭೂಮಿ ಪ್ರತಿಭೆ ಶ್ವೇತಾ ಇಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ “{ಫ್ರೆಂಚ್‌ ಬಿರಿಯಾನಿ” ಖ್ಯಾತಿಯ ಮಹಾಂತೇಶ, ಸೇರಿದಂತೆ ಇತರರು ಸಾಥ್‌ ನೀಡಿದ್ದಾರೆ. ಇಲ್ಲಿ ಪ್ರಮುಖ ಪಾತ್ರವೊಂದಿದೆ. ಅದನ್ನು ಕಿರುಚಿತ್ರದಲ್ಲೇ ನೋಡಬೇಕು. ಇಡೀ ಕಿರುಚಿತ್ರವನ್ನು ಐದು ದಿನಗಳ ಕಾಲ ಚಿತ್ರೀಕರಿಸಿದ್ದು, ನಾಗರಭಾವಿಯಲ್ಲಿರುವ ಮಾಳಗಾಳ ಗ್ರಾಮದಲ್ಲಿ ಶೂಟಿಂಗ್‌ ನಡೆಸಲಾಗಿದೆ. ಅಲ್ಲೊಂದು ಆಲದ ಮರವಿದೆ. ಬಂಡೆ ಮಾರಮ್ಮ ಬಸ್‌ಸ್ಟಾಪ್‌ ಬಳಿ ಇರುವ ಟಾಯ್ಲೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ನಾನು ಈ ಕಿರುಚಿತ್ರ ಮಾಡಲು ಹೊರಟಾಗ ಜೇಬಲ್ಲಿ ಕೇವಲ ನಾಲ್ಕು ಸಾವಿರ ಮಾತ್ರ ಹಣವಿತ್ತು. ನನ್ನ ಕಥೆ ಕೇಳಿದ ರಘುನಿಡುವಳ್ಳಿ, ಒಬ್ಬ ಬಳಿ ಕರೆದುಕೊಂಡು ಹೋದರು. ಅವರು ಕೂಡ ಮಹಿಳಾ ಪ್ರಧಾನ ಕಥೆ ಆಧರಿತ ಕಿರುಚಿತ್ರ ಮಾಡುವ ಉದ್ದೇಶ ಹೊಂದಿದ್ದರು. ಅವರಿಗೆ ಕಥೆ ಇಷ್ಟವಾಯ್ತು.  ಈ ಕಿರುಚಿತ್ರವನ್ನು ಸಿನಿಮಾ ರೇಂಜ್‌ನಲ್ಲೇ ಮಾಡಿದರು. ಒಂದು ಸೂಕ್ಷ್ಮ ವಿಷಯ ಇಟ್ಟುಕೊಂಡೇ ಕಿರುಚಿತ್ರ ಮಾಡಿದ್ದೇನೆ. ಇಷ್ಟರಲ್ಲೇ ಒಂದು ಟೀಸರ್‌ ಬಿಡುಗಡೆಯಾಗಲಿದೆ. ನಂತರ ಕಿರುಚಿತ್ರ ಬಿಡುಗಡೆಯಾಗಲಿದೆ. ಜನರು ಟೀಸರ್‌ ನೋಡಿ ನನ್ನನ್ನು ಬೈಕೋಬಹುದು. ಆದರೆ, ಕಿರುಚಿತ್ರ ನೋಡಿದಾಗ, ನನ್ನ ಪ್ರಯತ್ನ ಏನು, ಯಾವ ವಿಷಯ ಹೇಳಲು ಹೊರಟಿದ್ದೇನೆ ಅನ್ನೋದು ಗೊತ್ತಾಗುತ್ತೆ ಅನ್ನುತ್ತಾರೆ  ನಾಗೇಶ್‌ ಹೆಬ್ಬೂರು.

Categories
ಸಿನಿ ಸುದ್ದಿ

ರಾಜ್‌ ಸಹೋದರ ವರದರಾಜು ನೆನಪು

ಫೆ.13ಕ್ಕೆ ವರದಪ್ಪ ಪ್ರಶಸ್ತಿ

ಡಾ.ರಾಜಕುಮಾರ್‌ ಕಲಾ ಬದುಕಿನ ಮುಖ್ಯ ವಿನ್ಯಾಸಕಾರರೊಲ್ಲಬ್ಬರು ಅಂದರೆ ಅದು ಅವರ ಪ್ರೀತಿಯ ಸಹೋದರ ಎಸ್‌.ಪಿ.ವರದರಾಜು. ಅವರೊಬ್ಬ ನಿರ್ಮಾಪಕರೂ ಹೌದು. ವೃತ್ತಿರಂಗಭೂಮಿ ಪ್ರತಿಭೆಯಾದ ಅವರಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ಸಂದಿದೆ. ವರದಪ್ಪನವರ ಅಗಲಿಕೆಯ ನಂತರ ಅವರ ಹೆಸರಿನಲ್ಲಿ ಪ್ರತೀ ವರ್ಷ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಇಬ್ಬರು ಸಾಧಕರಿಗೆ ಪ್ರಶಸ್ತಿ ಕೊಡಲಾಗುತ್ತಿದೆ.

ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ

ಅಂತೆಯೇ ಈ ಬಾರಿಯೂ ಕೂಡ ರಂಗಭೂಮಿಯಿಂದ ಕುಕನೂರು ಬಾಬಣ್ಣ ಮತ್ತು ಸಿನಿಮಾ ಕ್ಷೇತ್ರದಿಂದ ಸುರೇಖಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಫೆಬ್ರವರಿ 13ರ ಶನಿವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ನಟರಾದ ಶಿವರಾಜ್‌ಕುಮಾರ್, ಪುನೀತ್‌ ಮತ್ತು ರಾಘವೇಂದ್ರ ರಾಜ್‌ಕುಮಾರ್‌ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಾಹಿತಿ ಮತ್ತು ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ ಆಶಯ ಮಾತುಗಳನ್ನಾಡಲಿದ್ದಾರೆ. ನಟ ದೊಡ್ಡಣ್ಣ ಮತ್ತು ನಟಿ ಸುಧಾರಾಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂಬುದು ವಿಶೇಷ.

ಕುಕನೂರು ಬಾಬಣ್ಣ – ಸುರೇಖಾ

ಡಾ.ರಾಜ್‌ಕುಮಾರ್‌ ಅವರ ಕಿರಿಯ ಸಹೋದರ ವರದರಾಜು ಅವರಿಗೆ ಸಿನಿಮಾದ ವಿವಿಧ ವಿಭಾಗಗಳಲ್ಲಿ ಅಪಾರ ಪರಿಣತಿಯಿತ್ತು. ರಾಜ್ ಅವರಂತೆಯೇ ಅವರು ಕೂಡ ವೃತ್ತಿರಂಗಭೂಮಿಯ ಬದುಕಲ್ಲಿ ಬೆರೆತು ಬೆಳೆದವರು. ರಂಗಭೂಮಿ ಮೇಲೆ ಮತ್ತು ತೆರೆಯ ಹಿಂದೆ ಸಮಾನ ಕ್ರಿಯಾಶೀಲತೆ ಮೂಲಕವೇ ಸದಭಿರುಚಿಯನ್ನು ಕಟ್ಟುವ ಪ್ರಬುದ್ಧ ಸಾಂಸ್ಕೃತಿಕ ಪ್ರೇರಕರಾದರು ವರದಪ್ಪ. ಡಾ.ರಾಜ್‌ ಚಿತ್ರರಂಗ ಪ್ರವೇಶ ಮಾಡಿ ಪ್ರಸಿದ್ಧರಾದ ಮೇಲೆ ಕಥೆ ಆಯ್ಕೆ, ಚಿತ್ರಕಥೆಯ ಚರ್ಚೆ ಮತ್ತು ಚಿತ್ರದ ಒಟ್ಟು ವಿನ್ಯಾಸಕ್ಕೆ ಒತ್ತಾಸೆಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ನೇಪಥ್ಯದ ನೆರವು ನೀಡಿದರು.

ಪಾರ್ವತಮ್ಮನವರು ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿದ ಮೇಲೆ ಆ ಸಂಸ್ಥೆಯಿಂದ ನಿರ್ಮಾಣಗೊಂಡ ಎಲ್ಲ ಚಿತ್ರಗಳ ವಸ್ತು ವಿನ್ಯಾಸದ ಪ್ರಮುಖ ಶಕ್ತಿಯಾಗಿದ್ದರು ವರದಪ್ಪ. ವರದಪ್ಪ ಪಾಲುದಾರಿಕೆಯಲ್ಲಿ ನಿರ್ಮಿಸಿದ ಚಿತ್ರಗಳು ಸಹ ಕನ್ನಡ ಚಿತ್ರರಂಗದ ಮೌಲ್ಯಕ್ಕೆ ಕಾರಣವಾಗಿವೆ. ವರದಪ್ಪ 2006ರ ಫೆಬ್ರವರಿ 8ರಂದು ಅಗಲಿದರು. ಅಲ್ಲಿಂದ ಪ್ರತೀ ವರ್ಷ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಇಬ್ಬರು ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 28 ಸಾಧಕರಿಗೆ ಎಸ್‌.ಪಿ.ವರದರಾಜು ಪ್ರಶಸ್ತಿ ಸಂದಿದೆ ಎಂಬುದು ವಿಶೇಷತೆಗಳಲ್ಲೊಂದು.

 

Categories
ಸಿನಿ ಸುದ್ದಿ

ಬಿಟೌನ್‌ಲ್ಲಿ ಹವಾ ಎಬ್ಬಿಸ್ತಾರಾ ಕಿರಿಕ್‌ ಹುಡುಗಿ

 ಟೀಚರಮ್ಮನ ಹೊಸ ಕ್ಲಾಸು ಶುರು ಗುರು…

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸುದ್ದಿಯಲ್ಲಿರುವ ಹುಡುಗಿ. ಕನ್ನಡದ ಈ ಹುಡುಗಿ ಕನ್ನಡ ಚಿತ್ರರಂಗದ ಮೂಲಕ ಇದೀಗ ಇಡೀ ಭಾರತ ಚಿತ್ರರಂಗದಲ್ಲೇ ಒಂದು ರೌಂಡ್‌ ಸುತ್ತಿದ್ದಾರೆ. ಹೌದು, ಕೇವಲ ಸ್ಯಾಂಡಲ್‌ವುಡ್‌ ಮಾತ್ರವಲ್ಲ, ಟಾಲಿವುಡ್‌, ಕಾಲಿವುಡ್‌ ಜೊತೆಗೆ ಬಾಲಿವುಡ್‌ನಲ್ಲೂ ರಶ್ಮಿಕಾ ಮಂದಣ್ಣ ಸಖತ್‌ ಸೌಂಡ್‌ ಮಾಡುತ್ತಿದ್ದಾರೆ. “ಕಿರಿಕ್‌ ಪಾರ್ಟಿ” ಚಿತ್ರದ ಮೂಲಕ ಕನ್ನಡ ಸಿನಿಲೋಕಕ್ಕೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್‌ ಕ್ರಶ್‌ ಅಂದರೆ ತಪ್ಪಿಲ್ಲ. ಇವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.

ಅದರಲ್ಲೂ ಪಡ್ಡೆಗಳಿಗೆ ಹಾಟ್‌ ಫೇವರೇಟ್‌ ಈ ಕೊಡಗಿನ ಬೆಡಗಿ. ಗೀತಾ, ಸಾನ್ವಿ, ಖುಷಿ… ಹೀಗೆ ಇವರ ಪಾತ್ರಗಳು ತಮ್ಮ ಸಿನಿಬದುಕಿನ ದಿಕ್ಕನ್ನೇ ಬದಲಿಸಿದ್ದು ನಿಜ. ಮೆಲ್ಲನೆ, ಸ್ಟಾರ್‌ ನಟರ ಜೊತೆಯಲ್ಲೇ ಪರದೆ ಮೇಲೆ ರಾರಾಜಿಸುವ ಅವಕಾಶ ಪಡೆದು ಸೈ ಎನಿಸಿಕೊಂಡಿರುವ ರಶ್ಮಿಕಾ ಈಗ ಬಾಲಿವುಡ್‌ನಲ್ಲೂ ಒಂದಷ್ಟು ಸೌಂಡು ಮಾಡೋಕೆ ಹೊರಟಿದ್ದಾರೆ. ಅಂದಹಾಗೆ, ಫೆಬ್ರವರಿ ೧೯ರಂದು ಧ್ರುವಸರ್ಜಾ ಅಭಿನಯದ “ಪೊಗರು” ರಿಲೀಸ್‌ ಆಗುತ್ತಿದೆ.

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಹಾಗೆ ನೋಡಿದರೆ, ಈ ಚಿತ್ರ, ಲಾಕ್ ಡೌನ್ ಮುಂಚೆಯೇ ಬಿಡುಗಡೆಯಾಗಬೇಕಿತ್ತು. ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಚಿತ್ರ ತಡವಾಗಿದ್ದು, ಈಗ ಬಿಡುಗಡೆಗೆ ದಿನ ಎಣಿಸುತ್ತಿದೆ ಚಿತ್ರತಂಡ. ಅಂದಹಾಗೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಟೀಚರ್ ಪಾತ್ರ ಮಾಡಿದ್ದಾರೆ. ಅದೊಂದು ಹಳ್ಳಿ ಹುಡುಗಿಯಾಗಿ, ಟ್ರೆಡಿಶನಲ್ ಲುಕ್ನಲ್ಲಿ ತೆರೆ ಮೇಲೆ ಕಾಣಿಸ್ಕೊತಿದ್ದಾರೆ.

ಪುರೋಹಿತರ ಮಗಳಾಗಿ ನಟಿಸುತ್ತಿರುವ ಅವರು, ಒಂದು ಪ್ರೀತಿಗೆ ಸಿಲುಕುತ್ತಾರೆ. ನಂತರ ಅವರಿಗೆ ಆಗುವಂತಹ ಸಮಸ್ಯೆ ಏನು ಎಂಬುದೇ ಚಿತ್ರದ ಕಥಾಹಂದರ. ಸದ್ಯಕ್ಕೆ ಜೋರು ಸುದ್ದಿಯಲ್ಲಿರುವ ರಶ್ಮಿಕಾ ಅವರಿಗೂ “ಪೊಗರು” ಮೇಲೆ ಎಲ್ಲಿಲ್ಲದ ಭರವಸೆ ಇದೆ. ಸಿನಿಮಾ ದೊಡ್ಡ ಹಿಟ್‌ ಕೊಡುತ್ತದೆ ಎಂಬ ವಿಶ್ವಾಸವೂ ಅವರಿಗಿದೆ. ಇನ್ನು, ಅವರಿಗೆ ಹೊಸ ತಂಡದವರ ಜೊತೆ ಕೆಲಸ ಮಾಡುವುದು ಸಿಕ್ಕಾಪಟ್ಟೆ ಖುಷಿಯಂತೆ. “ಪೊಗರು” ಚಿತ್ರದಲ್ಲಿ ಸಾಕಷ್ಟು ಕಲಿತ ಬಗ್ಗೆ ಹೇಳುವ ರಶ್ಮಿಕಾ ಮಂದಣ್ಣ, ಒಂದೊಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಹೆಮ್ಮೆ ನನ್ನದು ಎನ್ನುತ್ತಾರೆ.

Categories
ಸೌತ್‌ ಸೆನ್ಸೇಷನ್

ಲವ್ ಮೂಡ್‌ನಲ್ಲಿ ‘ಬಾಹುಬಲಿ’ ಹೀರೋ!

ಪ್ರಭಾಸ್ ‘ರಾಧೆ ಶ್ಯಾಮ್‌’ ಪ್ರೀ-ಟೀಸರ್‌ ಔಟ್‌

ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್‌’ ತೆಲುಗು, ಹಿಂದಿ ಚಿತ್ರದ ಪ್ರೀ-ಟೀಸರ್ ವೀಡಿಯೋ ಬಿಡುಗಡೆಯಾಗಿದೆ. ರಾಧಾಕೃಷ್ಣ ಕುಮಾರ್ ನಿರ್ದೇಶನದ ಈ ದ್ವಿಭಾಷಾ ಸಿನಿಮಾದ ಟೀಸರ್ ಇದೇ ಫೆಬ್ರವರಿ 14ರ ವ್ಯಾಲೆಂಟೇನ್‌ ದಿನ ಬಿಡುಗಡೆಯಾಗಲಿದೆ.‌

ಇದಕ್ಕೆ ಪೂರಕವಾಗಿ ಇಂದು ಚಿತ್ರತಂಡ ಪ್ರೀ-ಟೀಸರ್ ವೀಡಿಯೋ ಬಿಡುಗಡೆ ಮಾಡಿದೆ. ವೀಡಿಯೋದಲ್ಲಿ “ಬಾಹುಬಲಿ” ಮತ್ತು “ಸಾಹೋ” ಚಿತ್ರಗಳ ವೀಡಿಯೋ ಕ್ಲಿಪಿಂಗ್‌ಗಳು ಹಾದು ಹೋಗುತ್ತವೆ. ಅಲ್ಲಿ ಆಕ್ಷನ್ ಹೀರೋ ಆಗಿ ಪ್ರಭಾಸ್‌ರನ್ನು ನೋಡಿದ್ದ ಪ್ರೇಕ್ಷಕರು ‘ರಾಧೆ ಶ್ಯಾಮ್‌’ ಚಿತ್ರದಲ್ಲಿ ಬೇರೆಯದ್ದೇ ರೀತಿ ನೋಡಲಿದ್ದಾರೆ ಎನ್ನುವ ಸಂದೇಶ ವೀಡಿಯೋದಲ್ಲಿದೆ.

ಮಂಜುಮುಸುಕಿದ ತಿಳಿ ಬೆಳಕು, ಹಿನ್ನಲೆಯಲ್ಲಿ ಮಧುರ ಸಂಗೀತದೊಂದಿಗೆ ನಡೆದು ಹೋಗುವ ಪ್ರಭಾಸ್‌ ವೀಡಿಯೋ ತುಣುಕು ಕಾಣಿಸುತ್ತದೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಸಿನಿಮಾ ಎನ್ನುವುದು ಸ್ಪಷ್ಟವಾಗುತ್ತದೆ. ಈ ಸಿನಿಮಾ 2021ರ ಕೊನೆಯಲ್ಲಿ ಬಿಡುಗಡೆಯಾಗಲಿದ್ದು, ರಿಲೀಸ್ ಡೇಟ್ ಇನ್ನೂ ಪಕ್ಕಾ ಆಗಿಲ್ಲ.

ಹಿಂದಿ ಮತ್ತು ತೆಲುಗು ಎರಡೂ ಭಾ‍ಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ಇದ್ದಾರೆ ಎನ್ನುವುದು ವಿಶೇಷ. ‘ಸಾಹೋ’ ಚಿತ್ರದಲ್ಲಿ ಪ್ರಭಾಸ್ ಉತ್ತರ ಭಾರತದ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಲಿಲ್ಲ. ‘ರಾಧೆ ಶ್ಯಾಮ್‌’ ಮತ್ತು ಪ್ರಶಾಂತ್ ನೀಲ್‌ ನಿರ್ದೇಶನದ ‘ಸಲಾರ್‌’ ಚಿತ್ರಗಳು ಅವರಿಗೆ ಉತ್ತರ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ದೊರಕಿಸಿಕೊಡಲಿವೆ ಎನ್ನಲಾಗುತ್ತಿದೆ.

error: Content is protected !!