ಕಷ್ಟ ಅಂತ ಬಂದರೆ ಒಂದಷ್ಟು ಮಂದಿ ಅಂತಹವರ ನೆರವಿಗೆ ಬರೋದು ಗೊತ್ತೇ ಇದೆ. ಅಂತಹವರ ಸಾಲಿಗೆ ಈಗಾಗಲೇ ಗುರುತಿಸಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಪ್ಪ ಈ ಕೊರೊನಾ ಸಂಕಷ್ಟದಲ್ಲಿ ಸಿಲುಕಿದ ಅದೆಷ್ಟೋ ಜನರಿಗೆ ನೆರವಾಗಿದ್ದಾರೆ. ಹೌದು, ಕಳೆದ ವರ್ಷ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಜನರಿಗೆ ಹರ್ಷಿಕಾ ಮತ್ತು ಭುವನ್ ಅವರು ತಮ್ಮ ಸಮಾನ ಮನಸ್ಕರ ಜೊತೆಗೂಡಿ ಒಂದಷ್ಟು ಸಹಾಯ ಹಸ್ತ ಚಾಚಿದ್ದರು. ಕೊರೊನಾ ಮಾತ್ರವಲ್ಲ, ಹಿಂದೆ ಕೊಡಗು ಮಳೆಯಿಂದ ಸಂಪೂರ್ಣ ಜಲಾವೃತಗೊಂಡಾಗಲೂ ಇವರು ಕಾರ್ಯ ನಿರ್ವಹಿಸಿದ್ದರು.
ಈಗ ಕೊರೊನಾದ ಎರಡನೇ ಅಲೆ ಜೋರಾಗಿರುವುದರಿಂದ ಮತ್ತಷ್ಟು ಜಾಗೃತಗೊಂಡ ಹರ್ಷಿಕಾ ಮತ್ತು ಭುವನ್, ಯಶಸ್ವಿ “ಫೀಡ್ ಕರ್ನಾಟಕ” ಯೋಜನೆ ನಂತರ ಭುವನಂ ಫೌಂಡೇಶನ್ ಮೂಲಕ ಹೊಸ ಯೋಜನೆಗಳ ಮೂಲಕ ಅಗತ್ಯ ಸೇವೆ ಕಲ್ಪಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಅವರು”ಶ್ವಾಸ” ಆಕ್ಸಿಜನ್ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಅಳವಡಿಸಿ ಆ ಮೂಲಕ ಕೊರೊನಾ ಸೋಂಕಿತರ ನೆರವಿಗೆ ಧಾವಿಸುತ್ತಿದ್ದಾರೆ. ಅದಕ್ಕೆ ಈಗಾಗಲೇ ಚಾಲನೆಯೂ ದ ಉಚಿತ ಸೇವೆ ಇದಾಗಿದ್ದು, ಮನೆಯ ಬಾಗಿಲಿಗೇ, ಆಟೋ ಸೇವೆಯನ್ನೂ ಮಾಡುತ್ತಿದೆ.
ಕೋವಿಡ್ ರೋಗಿಗಳು ಮತ್ತು ಪ್ರತ್ಯೇಕವಾಗಿ ರೋಗಿಗಳಿಗೆ ಉಚಿತ ಪಡಿತರ, ಆಹಾರ, ಆಮ್ಲಜನಕ ವಿತರಣೆ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಮೇ.14ರಂದು ಫ್ರೀಡಂ ಪಾರ್ಕ್ ನಲ್ಲಿ ಚಾಲನೆ ನೀಡಿದ್ದಾರೆ.
ಈ ಸೇವೆ ಉಚಿತವಾಗಿದ್ದು, ಅಗತ್ತ ಇರುವರು ಪಡೆಯಬಹುದಾಗಿದೆ ಎಂಬುದು ಹರ್ಷಿಕಾ ಹಾಗೂ ಭುವನ್ ಮಾತು.
ನಟ ದರ್ಶನ್ ತಮ್ಮ ತವರೂರು ಮೈಸೂರಿನಲ್ಲಿದ್ದಾರೆ. ಸದ್ಯಕ್ಕೆ ಲಾಕ್ ಡೌನ್ ದಿನಗಳನ್ನು ಅಲ್ಲಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಿರುವ ಅವರು, ಮಂಗಳವಾರ ಅಲ್ಲಿನ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಶ್ರೀಗಳ ಜತೆಗೆ ಮಾತುಕತೆ ನಡೆಸಿದ್ದಾರೆ.
ಸದ್ಯಕ್ಕೆ ಈ ಭೇಟಿಯ ಉದ್ದೇಶ ಗೊತ್ತಾಗಿಲ್ಲ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ದರ್ಶನ್, ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದರ ಕುರಿತೇ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿರುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.
ಈ ಸಂದರ್ಭದಲ್ಲಿ ಶ್ರೀ ಗಳಿಂದ ದರ್ಶನ್ ಮುದ್ದಿನ ಹಸಿರು ಗಿಳಿಯನ್ನು ಪಡೆದು, ತಮ್ಮ ಫಾರ್ಮ್ ಹೌಸ್ ಗೆ ತಂದಿದ್ದಾರೆ.
ಓಕೆ, ಇದನ್ನು ಕಳಂಕ ತೊಳೆದುಕೊಳ್ಳುವ ಪ್ರಯತ್ನವೇ ಅನ್ನೋಣ, ಅದಕ್ಕೆಲ್ಲ ಜೀವದ ಹಂಗು ತೊರೆದು ಈ ರೀತಿ ಫೀಲ್ಡಿಗಿಳಿದು ಕೆಲಸ ಮಾಡುವ ಧೈರ್ಯ ಮೆಚ್ಚಲೇಬೇಕು. ಆದರೂ ಈ ನಟಿ ಫೀಲ್ಡಿಗಿಳಿದಿದ್ದಾರೆ. ಕೊರೊನಾ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ನಿಂತಿದ್ದಾರೆ. ದಿನವಿಡೀ ರಸ್ತೆ ಮೇಲೆ ನಿಂತು ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಆಹಾರ ಸೌಲಭ್ಯ, ಸ್ಮಶಾನಗಳ ಸಿಬ್ಬಂದಿಗೆ ದಿನಸಿ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಷ್ಟು ಮಾತ್ರವಲ್ಲ ಅವರ ಅಡುಗೆ ಮನೆಯೇ ಈಗ ಸಹಾಯಕರ ಹೊಟ್ಟೆ ತುಂಬಿಸುವ ಅಕ್ಷಯ ಪಾತ್ರೆ ಆಗಿದೆ.
ಕೆಲಸವಿಲ್ಲದೆ ಒಂದೂತ್ತಿನ ಊಟಕ್ಕೂ ಪರದಾಡುತ್ತಿರುವ ಕೊಳೆಗೇರಿ ಪ್ರದೇಶಗಳಲ್ಲಿನ ಜನರಿಗೆ ಅಲ್ಲಿಂದ ಆಹಾರ ರೆಡಿಯಾಗಿ ಸರಬರಾಜು ಆಗುತ್ತಿದೆ. ಯಾವುದೋ ಆರೋಪದಲ್ಲಿ ಕೆಲವರು ತನ್ನನ್ನು ಏನೇನೋ ಅಂತ ಜರಿದರೂ, ಆ ನಟಿ ಮಾತ್ರ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಅಸಹಾಯಕ ಜನರ ನೆರವಿಗೆ ಮಿಡಿದಿದ್ದಾರೆಂದರೆ ಇದನ್ನು ಮೆಚ್ಚಲು ಇರಲಾದೀತೆ? ಅಂದಹಾಗೆ, ಆ ನಟಿಯ ಹೆಸರು ರಾಗಿಣಿ ಅಲಿಯಾಸ್ ರಾಗಿಣಿ ದ್ವಿವೇದಿ.
ಕಳೆದ ವರ್ಷ ಕೊರೊನಾ ಕಾರಣಕ್ಕೆ ಲಾಕ್ ಡೌನ್ ಆದಾಗಲೂ ನಟಿ ರಾಗಿಣಿ ಹೀಗೆಯೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕನ್ನಡದ ಬಹುತೇಕ ನಟರು, ನಟಿಯರು ಲಾಕ್ ಡೌನ್ ದಿನಗಳನ್ನು ರುಚಿ ರುಚಿಯಾದ ಅಡುಗೆ ಮಾಡುವುದಕ್ಕೂ, ಮನೆಯವರ ಜತೆಗೆ ಹಾಯ್ ಆಗಿ ಕಾಲ ಕಳೆಯುವುದಕ್ಕೂ ಮೀಸಲಿಟ್ಟಿದ್ದ ದಿನಗಳಲ್ಲಿ ನಟಿ ರಾಗಿಣಿ ಕಾಲಿಗೆ ಚಕ್ರ ಕಟ್ಟಕೊಂಡು ನಗರದ ಗಲ್ಲಿ ಗಲ್ಲಿಗಳಿಗೆ ಹೋಗಿ, ಅಸಹಾಯಕರ ನೆರವಿಗೆ ನಿಂತಿದ್ದರು.
ಇದಾಗಿ ಒಂದಷ್ಟು ದಿನಕ್ಕೆ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ರಾಗಿಣಿ ಹೆಸರು ಕೂಡ ಕೇಳಿ ಬಂತು. ಆ ಹೊತ್ತಿಗೆ ರಾಗಿಣಿ ಹೆಸರು ದೊಡ್ಡದಾಗಿಯೇ ಸೌಂಡ್ ಮಾಡಿತು. ಒಂದು ಹಂತದಲ್ಲಿ ಅವರು ಜೈಲಿಗೂ ಹೋಗಬೇಕಾಗಿತು ಬಂತು. ಹಾಗಂತ ಅವರೇನು ಜೈಲಿಗೆ ಹಾಗೆ ಹೋಗಿ ಹೀಗೆ ಬರಲಿಲ್ಲ, ಬರೋಬ್ಬರಿ ಎರಡೂವರೆ ತಿಂಗಳೆ ಆಗಿ ಹೋದವು.
ಸೆಲಿಬ್ರಿಟಿಯಾಗಿ ಜಾಲಿ ಲೈಫ್ ಕಳೆದಿದ್ದ ರಾಗಿಣಿ, ಜೈಲಿಗೆ ಹೋಗಿ ಕಡು ಕಷ್ಟದ ದಿನಗಳನ್ನೇ ಕಳೆದು ಬಂದರು. ಹಾಗೆ ಬಂದವರು ಇನ್ನಾವುದೋ ಉಸಾಬರಿಗೆ ಹೋಗದೆ ತಾವಾಯಿತು ತಮ್ಮ ಪಾಡಾಯಿತು ಅಂತಲೇ ಇರಬಹುದು ಅಂತಲೇ ಅಂದುಕೊಂಡಿದ್ದರು. ಆದರೆ ರಾಗಿಣಿ ಅದೊಂದು ಕೆಟ್ಟ ಕನಸು ಅಂತ ಅದೆಲ್ಲ ಮರೆತು ಬಿಟ್ಟು, ಮತ್ತೆ ಸಾಮಾಜಿಕ ಕಾರ್ಯಕ್ಕೆ ನಿಂತಿರುವುದನ್ನು ಶ್ಲಾಘಿಸದೆ ಬಿಟ್ಟರೆ ಅದೊಂದು ಅಪರಾಧವೇ ಆದೀತು.
ಅದಕ್ಕೂ ಕಾರಣ ಇದೆ. ತಾವೆಲ್ಲ ತುಂಬಾ ಸಾಚಾಗಳು, ಅಂತಹ ಯಾವುದೇ ಅಪರಾಧದ ಆರೋಪ ಹೊತ್ತಿಲ್ಲ ಅಂತೆಲ್ಲ ಫೋಸು ಕೊಡುವ ಕನ್ನಡದ ಅದೆಷ್ಟೋ ನಟರು, ನಟಿಯರು ಈ ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ನಿಂತಿದ್ದಾರೆ ? ಅದು ಬಿಡಿ, ತಾವೆಲ್ಲ ಕನ್ನಡದ ವೀರರು, ಕನ್ನಡಕ್ಕಾಗಿಯೇ ಹುಟ್ಟಿ ಬಂದವರು, ಕನ್ನಡದ ಜನಕ್ಕೆ ತೊಂದರೆಯಾದರೇ ಸುಮ್ಮನೆ ಕೂರಲಾರೆವೂ ಅಂದವರೆಲ್ಲ ಎಷ್ಟು ಜನ ಈ ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ಬಂದಿದ್ದಾರೆನ್ನುವುದು ನಿಮಗೂ ಗೊತ್ತಿದೆ. ಹೋಗ, ಅಭಿಮಾನಿಗಳೇ ನಮ್ಮ ಆಸ್ತಿ ಅಂದವರಾದರೂ ಎಷ್ಟು ನಟರು ಅಭಿಮಾನಿಗಳ ನೆರವಿಗೆ ನಿಂತಿದ್ದಾರೆ ? ಇವರ ವೀರಾವೇಷಗಳೆಲ್ಲವೂ ರೀಲ್ ಮೇಲೆಯೇ ಅನ್ನೋದು ಈಗ ಮತ್ತೊಮ್ಮೆ ಜಗ್ಗಜಾಹ್ಹೀರು.
ಇಂತಹ ಸಂದರ್ಭದಲ್ಲಿ ಒಬ್ಬ ನಟಿ ತನ್ನ ಜೀವವನ್ನೇ ಪಣಕ್ಕಿಟ್ಟು ಅಸಹಾಯಕ ಜನರಿಗೆ ಆಹಾರ ಧಾನ್ಯ ವಿತರಿಸುತ್ತಾ ನಿಜವಾದ ಮಾನವೀಯತೆ ಮೆರೆಯುತ್ತಿದ್ದಾರೆಂದರೆ, ನಿಜಕ್ಕೂ ಅದು ಮೆಚ್ಚಲೇಬೇಕಾದ ಕೆಲಸ. ನಟಿ ರಾಗಿಣಿ ನಿಜಕ್ಕೂ ಕೊರೊನಾ ವಾರಿಯರ್ಸ್ ಆಗಿದ್ದಾರೆ. ಜಿನೆಕ್ಸ್ಟ್ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ಮೊನ್ನೆ ಕಾಕ್ಸ್‌ಟೌನ್ ಹತ್ತಿರ ಕಲ್ಪಹಳ್ಳಿ ಹಾಗೂ ಭಾರತಿ ನಗರ ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ ಮಾಡಿದರು. ಅದಕ್ಕೂ ಮುಂಚೆ, ಯಲಹಂಕ
ಸಮೀಪದ ಅಳ್ಳಾಲ್ ಸಂದ್ರ ಕೊಳಗೇರಿ ಪ್ರದೇಶದಲ್ಲಿನ ಜನರಿಗೆ ಫುಡ್ ಕಿಡ್ ನೀಡಿದ್ದರು. ರೈಲ್ವೆ ಕಾರ್ಮಿಕರಿಗೂ ರೇಷನ್ ವಿತರಣೆ ಮಾಡಿದ್ದರು. ಬಾಬು ಸಾಬ್ ಪಾಳ್ಯ ದಲ್ಲೂ ಸಾಕಷ್ಟು ಕುಟುಂಬಗಳಿಗೆ ಇಂತಹದೇ ನೆರವು ನೀಡಿದ್ದರು. ಅಷ್ಟು ಮಾತ್ರವಲ್ಲ, ಹೆಬ್ಬಾಳ, ಗೋವಿಂದಪುರ ಜತೆಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿನ ಜನರಿಗೂ ತಮ್ಮ ಕೈಲಾದ ಸೇವೆ ಮಾಡಿದ್ದಾರೆ. ಇಷ್ಟಕ್ಕೂ ಇದೆಲ್ಲವನ್ನು ಅವರು ಯಾಕೆ ಮಾಡುತ್ತಿದ್ದಾರೆ ಗೊತ್ತಾ? ”
ಕೊರೊನಾ ಅಸಾಹಯಕ ಜನರನ್ನು ಬೀದಿಗೆ ತಳ್ಳಿದೆ. ಎಷ್ಟೋ ಜನರಿಗೆ ಈಗ ಕೂಲಿ ಇಲ್ಲ. ಕೂಲಿ ಇಲ್ಲ ಅಂದ್ರೆ ಅವರಿಗೆ ಒಂದೂತ್ತಿನ ಊಟ ಕೂಡ ಸಿಗುವುದಿಲ್ಲ. ಈ ಸಮಯದಲ್ಲಿ ನಾವು ಕಷ್ಟದಲ್ಲಿರುವವರಿಗೆ ನೆರವಿಗೆ ನಿಲ್ಲಬೇಕಿದೆ. ಅದೇ ಕಾರಣಕ್ಕೆ ನಾವೀಗ ಈ ಕೆಲಸ ಶುರು ಮಾಡಿದ್ದೇವೆ. ಇದನ್ನು ನಾನು ಯಾವುದೇ ಉದ್ದೇಶಕ್ಕೂ ಮಾಡುತ್ತಿಲ್ಲ. ಕಷ್ಟವೋ ಸುಖವೋ ಹಂಚಿ ತಿನ್ನೋಣ ಅನ್ನೋದು ನನ್ನ ಪಾಲಿಸಿʼ ಎಂದು ರಾಗಿಣಿ ಹೇಳುವಾಗ ಅವರ ಮುಖದಲ್ಲಿ ಕಂಡಿದ್ದು ಮುಗ್ದತೆ ಮಾತ್ರ.
ಕೊೊರೊನಾ ಎರಡನೇ ಅಲೆಯ ಭೀಕರತೆ ಚಿತ್ರೋದ್ಯವನ್ನು ಕಂಗಾಲಾಗಿಸಿದೆ. ಸಿನಿಮಾ ಚಟುವಟಿಕೆಗಳ ಕತೆ ಇರಲಿ, ಉದ್ಯಮದ ಜನ ಜೀವ ಉಳಿಸಿಕೊಳಸಳುವುದಕ್ಕಾಗಿಯೇ ಈಗ ಹೋರಾಡಬೇಕಿದೆ. ಅಪಾರ ಸಾವು-ನೋವುಗಳು ಸಿನಿಮಾ ಮಂದಿಯನ್ನು ತೀವ್ರ ಆತಂಕಕ್ಕೆ ದೂಡಿದೆ. ಆಸ್ಪತ್ರೆಗಳಲ್ಲಿ ಸಕಾಲಕ್ಕೆ ವೈದ್ಯಕೀಯ ಸೌಲಭ್ಯ ಸಿಗದ ಹಿನ್ನೆಲೆಯಲ್ಲಿ , ಈಗ ಸಿನಿಮಾ ಮಂದಿ ಸಿನಿಮಾ ಕಾರ್ಮಿಕರಿಗಾಗಿಯೇ ಸರ್ಕಾರ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಗಳನ್ನು ಆರಂಭಿಸುವಂತೆ ಸರ್ಕಾರದ ಮುಂದೆ ಬೇಡಿಕೆ ಇಡುತ್ತಿದ್ದಾರೆ.
ಈ ನಿಟ್ಟಿನಲ್ಲೀಗ ನಿರ್ಮಾಪಕ ಭಾ.ಮ. ಹರೀಶ್ ಕೂಡ ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದು, ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡ, ಬಿಗ್‌ಬಾಸ್ ಮನೆ ಹಾಗೂ ಕಂಠೀರವ ಸ್ಟುಡಿಯೋ ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಬೇಕೆಂದು ಒತ್ತಾಯಿಸಿದ್ದಾರೆ. ಸಿನಿಮಾ ರಂಗದಲ್ಲಿ ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಕಾಲಕ್ಕೆ ವೈದ್ಯಕೀಯ ಸೌಲಭ್ಯಗಳು ಬೇಕಿದೆ.
ಈ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಮೂರು ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದರೆ, ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರು ಹಾಗೂ ಅವರ ಕುಟುಂಬದವರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಕೊರೊನಾದಿಂದ ಚಿತ್ರರಂಗ ನಿಜಕ್ಕೂ ತತ್ತರಿಸಿ ಹೋಗಿದೆ. ಎಲ್ಲವೂ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಚಿತ್ರೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದ ಅನೇಕ ಕುಟುಂಬಗಳು ಇಂದು ಅಕ್ಷರಶಃ ನಲುಗಿವೆ. ಕೈಯಲ್ಲಿ ಕೆಲಸವಿಲ್ಲ, ಅತ್ತ ಕೂಲಿಯೂ ಇಲ್ಲ ಬದುಕು ಬೀದಿಪಾಲಾಗುವ ಪರಿಸ್ಥಿತಿ ಇದೆ. ಸ್ವಾಭಿಮಾನದಿಂದ ಬೇರೆಯವರ ಬಳಿ ಸಹಾಯ ಕೇಳೋಕೆ ಸಂಕೋಚ ಪಡುವ ಅದೆಷ್ಟೋ ಮಂದಿ ಸಂಕಷ್ಟದಲ್ಲೇ ದಿನ ಸವೆಸುತ್ತಿದ್ದಾರೆ. ಕೊರೊನಾ ಎರಡನೇ ಅಲೆ ಹೆಚ್ಚಾದ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಅಂತಹವರ ನೆರವಿಗೆ ಧಾವಿಸಲು “ಕರ್ನಾಟಕ ಚಿತ್ರೋದ್ಯಮ”ನಿರ್ಮಾಪಕ ನಾಗೇಶ್ ಕುಮಾರ್ ಯು .ಎಸ್, ನಿರ್ದೇಶಕ ನಾಗೇಂದ್ರ ಅರಸ್, ಜೆ.ಜೆ.ಶ್ರೀನಿವಾಸ್ , “ಕುಮಾರ್ ಎಸ್, ಅವರ ನೇತೃತ್ವದಲ್ಲಿ ಒಂದಷ್ಟು ಸಮಾನ ಮನಸ್ಕ ಗೆಳೆಯರನ್ನ ಒಟ್ಟುಗೂಡಿಸಿ, ಅವರ ಸಹಾಯವನ್ನು ಪಡೆದು ಕಳೆದೊಂದು ವರ್ಷದಿಂದ ಅತಿ ಸಂಕಷ್ಟದಲ್ಲಿರುವ ಚಿತ್ರೋದ್ಯಮದವರಿಗೆ “ಮೆಡಿಸಿನ್ ಕಿಟ್” ಕೊರೊನಾ ಪೀಡಿತರ ಉಸಿರಾಟದ ತೊಂದರೆ ಆದವರಿಗೆ “ಆಕ್ಸಿಜನ್ ಕಿಟ್” “ದಿನಸಿ ಕಿಟ್” ಮತ್ತು ದೂರದ ಊರುಗಳಿಗೆ ಹೋಗಲಾಗದ ಪರಿಸ್ಥಿತಿ ಬಂದಾಗ ಅವರಿಗೆ ಧನಸಹಾಯ ಮಾಡುತ್ತಾ ಬರುತ್ತಿದ್ದಾರೆ.
ಅದರಂತೆ ಈ ಕೊರೊನಾ ಎರಡನೆ ಅಲೆಯಲ್ಲಿಯೂ ಸಹ ಸಂಕಷ್ಟದಲ್ಲಿರುವ ಚಿತ್ರೋದ್ಯಮ ಬಂಧುಗಳಿಗೆ 1000 ( ಒಂದು ಸಾವಿರ ) ದಿನಸಿ ಕಿಟ್ ಗಳನ್ನು ಕೊಡುವ ಗುರಿ ಹೊಂದಿದ್ದಾರೆ. ಈಗಾಗಲೇ ಈ ಕಾರ್ಯ ಶುರುವಾಗಿದ್ದು, ನೇರ ಸಂತ್ರಸ್ಥರಿಗೆ ಕರೆ ಮಾಡಿ ಅವರಿಗೆ ಕಿಟ್ ತಲುಪಿಸುವ ವ್ಯವಸ್ಥೆ ಆಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಸಂಕಷ್ಟ ಸಮಯದಲ್ಲಿ ಈ ನಾಲ್ವರ ನಿಸ್ವಾರ್ಥ ಸೇವೆಯನ್ನು ಚಿತ್ರೋದ್ಯಮದ ಮೆಚ್ಚಿದ್ದಾರೆ.
ಆದರೆ, ಇದು ಪ್ರಚಾರದ ಉದ್ದೇಶದಿಂದ ಕೈಗೆತ್ತಿಕೊಂಡ ಕಾರ್ಯವಲ್ಲ, ಮನುಷ್ಯತ್ವ ಇಟ್ಟುಕೊಂಡು ರೂಪಿಸಿದ ಕೆಲಸ ಅನ್ನೋದನ್ನು ಅರಿಯಲೇಬೇಕು. ಅಂದಹಾಗೆ, ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಚಿತ್ರೋದ್ಯಮದ ಮೂಲಕ ಸೇವೆ ಸಲ್ಲಿಸುತ್ತಿರುವವರ ಈ 9845208000 ಸಂಖ್ಯೆ ಮೂಲಕ ಅಗತ್ಯ ಇರುವ ಸಿನಿಮಾ ಮಂದಿ ಸಹಾಯ ಪಡೆಯಬಹುದು.
ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್ ಡೌನ್ ಸಿನಿಮಾ ಕಾರ್ಮಿಕರನ್ನು ಮತ್ತೆ ಆತಂಕಕ್ಕೆ ತಳ್ಳಿದೆ. ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪರಿಸ್ಥಿತಿ ತಿಳಿಯಾಗುವುದು ಯಾವಾಗವೋ, ಅನಿಶ್ವಿತತೆಯ ಆತಂಕ ಸಿನಿಮಾ ಕಾರ್ಮಿಕ ವಲಯವನ್ನು ಕಾಡುತ್ತಿದೆ. ಈ ನಡುವೆಯೇ ನಟ ಉಪೇಂದ್ರ , ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.
ಕಾರ್ಮಿಕರ ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ವಿತರಿಸಲು ಮುಂದಾಗಿದ್ದಾರೆ. ಅಭಿಮಾನಿಗಳ ಆಶೀರ್ವಾದಿಂದಲೇ ಇದನ್ನು ನಡೆಸುವುದಾಗಿ ಅವರು ಹೇಳಿಕೊಂಡಿದ್ದಾರೆ. “ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೆ ಕೋವಿಡ್ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಆ ಕಾರಣ ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ತಸ್ಥರನ್ನು ಸಂಪರ್ಕಿಸಬಹುದುʼ ಅಂತ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಚಿತ್ರರಂಗದ ಪರವಾಗಿ ಈಗಾಗಲೇ ನಟ ಕಿಚ್ಚ ಸುದೀಪ್ ಸೇರಿದಂತೆ ವಸಿಷ್ಟ ಸಿಂಹ, ಭುವನ್ ಪೊನ್ನಣ್ಣ, ರಾಗಿಣಿ, ಸಂಜನಾ ಸೇರಿದಂತೆ ಹಲವರು ಅಸಹಾಯಕರ ನೆರವಿಗೆ ಧಾವಿಸಿದ್ದಾರೆ. ಆದರೆ, ಈಗ ನಟ ಉಪೇಂದ್ರ ಚಿತ್ರರಂಗದ ಅಷ್ಟು ಕಾರ್ಮಿಕರ ನೆರವಿಗೆ ಧಾವಿಸಿದ್ದು ವಿಶೇಷ.
ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳು ಕೊರೊನಾ ಸೋಂಕಿತರ ಸೇವೆ ಮಾಡುತ್ತಿರುವ ಬೆಂಗಳೂರಿನ 5 ಸರಕಾರಿ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಊಟದ ವ್ಯವಸ್ಥೆ ಮಾಡಿದ್ದಾರೆ.
ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆ, ರಾಜಾಜಿನಗರದ ಇಎಸ್ಐ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಜಯನಗರದ ಜನರಲ್ ಆಸ್ಪತ್ರೆ ಮತ್ತು ಸಿವಿ ರಾಮನ್ ಜನರಲ್ ಆಸ್ಪತ್ರೆ ಸಿಬ್ಬಂದಿಗೆ
ಊಟದ ವ್ಯವಸ್ಥೆ ಮಾಡುವ ಮೂಲಕ ಕೊರೊನಾ ವಾರಿಯರ್ಸ್ ಗೆ ಧನ್ಯವಾದ ಅರ್ಪಿಸಿದ್ದಾರೆ.
ಕೊರೊನಾ ಹಾವಳಿ ಹೆಚ್ಚಾದ ದಿನಗಳಿಂದಲೂ ಹಲವು ಮಂದಿ ಟೊಂಕ ಕಟ್ಟಿ ಒಂದಷ್ಟು ಸೇವೆ ಮಾಡಲು ಮುಂದಾಗಿರುವುದು ಗೊತ್ತೇ ಇದೆ. ಕೊರೊನೊದಿಂದ ತಮ್ಮ ಬದುಕನ್ನೇ ಕಳೆದುಕೊಂಡ ಅದೆಷ್ಟೋ ಜನ ಸಾವು-ಬದುಕಿನ ಜೊತೆ ಹೋರಾಡುತ್ತಿದ್ದಾರೆ. ಅಂತಹವರ ನೆರವಿಗೆ ಸಿನಿಮಾ ಮಂದಿ ಕೂಡ ಈಗಾಗಲೇ ನೆರವಿಗೆ ಧಾವಿಸಿದ್ದಾರೆ. ಅಗತ್ಯ ಸೇವೆಗಳ ಜೊತೆಗೆ ರಕ್ತದಾನ ಸೇವೆ ಕಡೆಗೂ ಗಮನ ಹರಿಸಿರುವುದು ನಿಜಕ್ಕೂ ಶ್ಲಾಘನೀಯ.
ವಸಿಷ್ಠ ಜೊತೆ ಸಂಘದ ಅಧ್ಯಕ್ಷ ಕುಮಾರ್ ನಾಯ್ಡು
ಹೌದು, ಈಗ ವಸಿಷ್ಠ ಸಿಂಹ ಅವರ ಅಭಿಮಾನಿ ಬಳಗ ಕೂಡ ರಕ್ತದಾನ ಶಿಬಿರ ನಡೆಸಿದೆ. ಅಖಿಲ ಕರ್ನಾಟಕ ವಸಿಷ್ಠ ಸಿಂಹ ಅಭಿಮಾನಿಗಳ ವತಿಯಿಂದ ಕೆಪಿಟಿಸಿಎಲ್ ನೌಕರರ ಸಹಯೋಗದೊಂದಿಗೆ ಭಾನುವಾರ ಬೆಂಗಳೂರಿನ ರಾಜಾಜಿನಗರದ ಕೆಇಬಿ ನೌಕರರ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ವಸಿಷ್ಠ ಸಿಂಹ
ನಟ ವಸಿಷ್ಠ ಸಿಂಹ ಕೂಡ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಈ ರಕ್ತದಾನ ಶಿಬಿರದಲ್ಲಿ ಒಟ್ಟು 137 ಮಂದಿ ರಕ್ತದಾನ ಮಾಡಿದ್ದಾರೆ.
ಈ ಕುರಿತಂತೆ ಅಖಿಲ ಕರ್ನಾಟಕ ವಸಿಷ್ಠ ಸಿಂಹ ಅಭಿಮಾನಿ ಬಳಗದ ಅಧ್ಯಕ್ಷ ಕುಮಾರ ನಾಯ್ಡು ಮಾತನಾಡಿ, ‘ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಸರ್ಕಾರ, ವ್ಯಾಕ್ಸಿನೇಷನ್ ಹಾಕಲು ಮುಂದಾಗಿದೆ. ವ್ಯಾಕ್ಸಿನೇಷನ್ ಹಾಕಿಸಿಕೊಂಡವರು ಮೂರು ತಿಂಗಳ ಕಾಲ ರಕ್ತದಾನ ಮಾಡುವಂತಿಲ್ಲ. ಹಾಗಾಗಿ ಆ ಜಾಗೃತಿಯ ಜೊತೆಗೇ ರಕ್ತದಾನ ಮಾಡಿ ಒಂದಷ್ಟು ಜನರ ಸಹಾಯಕ್ಕೆ ನಿಲ್ಲುವ ಉದ್ದೇಶ ನಮ್ಮದು.
ಈ ನಿಟ್ಟಿನಲ್ಲಿ ನಮ್ಮ ವಸಿಷ್ಠ ಸಿಂಹ ಅವರು ಕೂಡ ರಕ್ತದಾನ ಮಾಡಿ, ಪ್ರೇರಣೆಯಾಗಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಂಡ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಮುಖ್ಯವಾಗಿ ಆರೋಗ್ಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದಿದ್ದಾರೆ ಕುಮಾರ್ ನಾಯ್ಡು.
ಸಿನಿಮಾ ನಂತರ ಈಗ ಸೀರಿಯಲ್ ಜತೆಗೆ ರಿಯಾಲಿಟಿ ಶೋಗಳಿಗೂ ಚಿತ್ರೀಕರಣ ಇಲ್ಲ. ಲಾಕ್‌ಡೌನ್ ಮಾರ್ಗಸೂಚಿಯ ಅನ್ವಯ ನಾಳೆಯಿಂದಲೇ ಕನ್ನಡದ ಎಲ್ಲಾ ಕಿರುತೆರೆಯ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳ್ಳುತ್ತಿದೆ. ಹಾಗಂತ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅನೌನ್ಸ್‌ಮಾಡಿದೆ.
ಅಷ್ಟೇ ಅಲ್ಲ, ಅಸೋಷಿಯೇಷನ್ ಕರೆಗೂ ಬೆಲೆ ಕೊಡದೆ ಯಾವುದಾದರೂ ಸೀರಿಯಲ್ ಅಥವಾ ರಿಯಾಲಿಟಿ ಶೋ ಗೆ ಚಿತ್ರೀಕರಣ ನಡೆದಿದ್ದಾದಲ್ಲಿ ಅದಕ್ಕೆ ಅದೇ ತಂಡದವರೇ ಹೊಣೆಗಾರರು. ಕೋವಿಡ್‌ಮಾರ್ಗಸೂಚಿ ಅನ್ವಯ ಮುಂದೆ ಪೊಲೀಸರು ಕೈಗೊಳ್ಳುವ ಕ್ರಮಗಳಿಗೆ ತಾವು ಜವಾಬ್ದಾರಿ ಅಲ್ಲ ಅಂತಲೂ ಅಸೋಷಿಯೇಷನ್ ಅಧ್ಯಕ್ಷ ಶಿವಕುಮಾರ್ ಎಚ್ಚರಿಸಿದ್ದಾರೆ. ಅಲ್ಲಿಗೆ ನಾಳೆಯಿಂದ ಎಲ್ಲಾ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಟಾಪ್ ಆಗುವುದಂತೂ ಖಚಿತ. ಹಾಗಾದರೆ, ಕನ್ನಡದ ಎಲ್ಲಾ ಸೀರಿಯಲ್‌ಹಾಗೂ ರಿಯಾಲಿಟಿ ಶೋಗಳ ಕಥೆ ಏನು?
ಸದ್ಯಕ್ಕೆ ಇದು ಕನ್ನಡದ ಎಲ್ಲಾ ಕಿರುತೆರೆ ವೀಕ್ಷಕರ ಮುಂದಿರುವ ಪ್ರಶ್ನೆ. ಅದಕ್ಕೆ ಇರುವುದೊಂದೆ ಉತ್ತರ ರಿಪೀಟ್ ಪ್ರಸಾರ. ಅಂದರೆ, ಈಗಾಗಲೇ ಪ್ರಸಾರವಾದ ಎಪಿಸೋಡ್‌ಗಳ ಪುನಾರಾವರ್ತನೆ. ಸದ್ಯಕ್ಕೆ ಕನ್ನಡದ ಅಷ್ಟು ಮಜರಂಜನಾ ವಾಹಿನಿಗಳಲ್ಲೂ ಮುಂದೆ ರಿಪೀಟ್ ಕಥೆಯಂತೂ ಗ್ಯಾರಂಟಿ. ಕನ್ನಡದಲ್ಲೀಗ ಉದಯ, ಸ್ಟಾರ್ ಸುವರ್ಣ, ಜೀ ಕನ್ನಡ, ಕಲರ್ಸ್ ಕನ್ನಡ, ಕಸ್ತೂರಿ, ದಂಗಲ್ ಕನ್ನಡ ವಾಹಿನಿಗಳಲ್ಲಿ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ವಿಶೇಷವಾಗಿ ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಚಾನೆಲ್‌ನ ಕೆಲವು ಧಾರಾವಾಹಿಗಳು ಬಹು ಜನಪ್ರಿಯತೆ ಪಡೆದಿರುವುದು ನಿಮಗೂ ಗೊತ್ತು.
ಅದರಲ್ಲೂ ಜೀ ಕನ್ನಡದ ಮಹಾ ನಾಯಕ, ಜೊತೆ ಜೊತೆಯಲಿ, ಸತ್ಯ, ಗಟ್ಟಿಮೇಳ ಧಾರಾವಾಹಿಗಳು ಮನೆ ಮಾತಾಗಿವೆ. ಅದೇ ಕಾರಣಕ್ಕೆ ಸೀರಿಯಲ್ ಜಗತ್ತಿನಲ್ಲಿ ಝೀ ಕನ್ನಡ ನಂಬರ್ ಒನ್ ಟಿಆರ್‌ಪಿ ಪಡೆದಿರುವುದು ಕೂಡ ಹಳೇ ಸುದ್ದಿಯೇ. ಇವಿಷ್ಟು ಧಾರಾವಾಹಿಗಳ ಪೈಕಿ ಮಹಾ ನಾಯಕ ಧಾರವಾಹಿಯೂ ಹಿಂದಿಯಿಂದ ಡಬ್ ಆಗಿ ಕನ್ನಡಕ್ಕೆ ಬರುತ್ತಿದೆ. ಚಿತ್ರೀಕರಣ ನಿಲ್ಲುವುದರಿಂದ ಅದಕ್ಕೇನು ತೊಂದರೆ ಆಗದು. ಉಳಿದ ಸೀರಿಯಲ್‌ಗಳೆಲ್ಲ ಇಲ್ಲಿಯೇ ಚಿತ್ರೀಕರಣಗೊಳ್ಳುತ್ತಿವೆ. ಸದ್ಯಕ್ಕೆ ಅವೆಲ್ಲವೂ ಒಂದಷ್ಟು ದಿನಗಳ ಮಟ್ಟಿಗೆ ಫ್ರೆಶ್ ಎಪಿಸೋಡ್ಸ್‌ಗಳ ಮೂಲಕ ವೀಕ್ಷಕರ ಮುಂದೆ ಬರಬಹುದು. ಮುಂದೆ ರಿಪೀಟ್ ಎಪಿಸೋಡ್ಸ್‌ಗಳನ್ನೇ ಜನರ ನೋಡಬೇಕಾಗುವುದು ಅನಿವಾರ್ಯ.
ಮತ್ತೊಂದೆಡೆ, ಕಲರ್ಸ್ ಕನ್ನಡದ ಸಾಕಷ್ಟು ಧಾರಾವಾಹಿಗಳಿಗೂ ಬಾರೀ ಬೇಡಿಕೆ ಇದೆ. ಸದ್ಯ ಕನ್ನಡತಿ ಮನೆ ಮಾತಾಗಿದೆ. ಹಾಗೆಯೇ ʼನಮ್ಮನೆ ಯುವರಾಣಿ,ʼ ನನ್ನರಸಿ ರಾಧೆʼ, ʼಮಂಗಳ ಗೌರಿʼ ಧಾರಾವಾಹಿಗಳ ಪ್ರಸಾರಕ್ಕಾಗಿಯೇ ದಿನ ನಿತ್ಯ ಸಂಜೆ ವೀಕ್ಷಕರು ಕಾದು ಕುಳಿತಿರುತ್ತಾರೆನ್ನುವುದು ನಿಮಗೂ ಗೊತ್ತು. ಈಗ ಇವೆಲ್ಲ ಧಾರವಾಹಿಗಳಿಗೂ ಟೆಲಿವಿಷನ್ ಅಸೋಸಿಯೇಷನ್ ನಿರ್ಧಾರ ಪೆಟ್ಟು ನೀಡುವುದು ಖಚಿತವಾಗಿದೆ. ಇವುಗಳಿಗೂ ರಿಪೀಟ್ ಎಪಿಸೋಡ್ಸ್ ಹಾಕುವುದು ಅನಿವಾರ್ಯ. ಇನ್ನು ಕಲರ್ಸ್ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ಬಿಗ ಬಾಸ್ ಇದೇ ಕಾರಣಕ್ಕೆ ನಿಂತು ಹೋಗಿದೆ. ಸ್ಟಾರ್ ಸುವರ್ಣ ದಲ್ಲೂ ಹಲವು ಜನಪ್ರಿಯ ಧಾರಾವಾಹಿಗಳಿವೆ. ಸದ್ಯಕ್ಕೆ ಅಲ್ಲೂ ಕೆಲವು ಡಬ್ ಆದ ಧಾರಾವಾಹಿಗಳೇ ಬರುತ್ತಿವೆ. ಅವುಗಳಿಗೇನು ಚಿತ್ರೀಕರಣದ ಸ್ಥಗಿತದ ನಿರ್ಧಾರದಿಂದ ಯಾವುದೇ ತೊಂದರೆ ಅಗದು.
ಆದರೆ ಚಿತ್ರೀಕರಣಗೊಳ್ಳುವ ಧಾರಾವಾಹಿಗಳದ್ದು ಇನ್ನೇನು ರಿಪೀಟ್ ಎಪಿಸೋಡ್ ಪ್ರಸಾರ ಮಾಡುವುದಷ್ಟೇ ಅನಿವಾರ್ಯ. ಉಳಿದಂತೆ ರಿಯಾಲಿಟಿ ಶೋಗಳನ್ನು ಇದೇ ಹಣೆಬರಹ.
ಕಲರ್ಸ್ ಕನ್ನಡದ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋ ಗೆ ಕಂಟಕ ಎದುರಾಗಿದೆ. ಈಗಾಗಲೇ ಅಲ್ಲಿನ ಒಬ್ಬ ಕಂಟೆಸ್ಟೆಂಟ್ ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬಂದಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲೇ ಇದೇ ಮೊದಲು ಅಂತಹದೊಂದು ಘಟನೆ ನಡೆದಿದೆ. ಅವರು ಮತ್ತೆ ಮನೆಗೆ ವಾಪಾಸ್ ಹೋಗುವ ಬಗ್ಗೆ ಅನುಮಾನ ಇದೆ. ಅದರ ನಡುವೆಯೇ ಬಿಗ್ ಬಾಸ್ ಚಿತ್ರೀಕರಣದ ಕಥೆ ಏನು ಎನ್ನುವ ಪ್ರಶ್ನೆ ಎದುರಾಗಿದೆ. ಕೋರೋನಾ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದ ಲಾಕ್ ಡೌನ್ ಮಾರ್ಗಸೂಚಿಗೆ ಬೆಂಬಲಿಸಿ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಮೇ 10 ರಿಂದ ಮೇ 24ರವರೆಗೂ ಕನ್ನಡ ಕಿರುತೆರೆಯ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಚಿತ್ರೀಕರಣ ಸ್ಥಗಿತಗೊಳಿಸಲು ತೀರ್ಮಾನಿಸಿದೆ.
ಸಹಜವಾಗಿಯೇ ಈ ನಿಯಮವೂ ಕಲರ್ಸ್ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಗೂ ಅನ್ವಯಿಸುತ್ತದೆ. ಹಾಗಾಗಿ ಬಿಗ್ ಬಾಸ್ ಕಥೆ ಮುಂದೆ ಹೇಗೆ ಎನ್ನುವ ಪ್ರಶ್ನೆ ಸಹಜವಾಗಿಯೇ ಶುರುವಾಗಿದೆ. ಧಾರಾವಾಹಿಗಳ ಹಾಗೆ ಬಿಗ್ ಬಾಸ್ ಎಪಿಸೋಡ್ ಗಳನ್ನು ಮೊದಲೇ ಶೂಟ್ ಮಾಡಿ ಇಟ್ಟುಕೊಳ್ಳುವಂತಿಲ್ಲ. ಹಿಂದಿನ ದಿನ ಏನೆಲ್ಲ ಅಲ್ಲಿ ಬೆಳವಣಿಗೆ ಆಗುತ್ತವೆಯೋ ಅದನ್ನು ಅವತ್ತೇ ಹಿಡಿದಿಟ್ಟುಕೊಂಡ ಕ್ಯಾಮೆರಾ ಪುಟೇಜ್ ಸಂಗ್ರಹಿಸಿ, ಎಡಿಟ್ ಮಾಡಿ ಅದನ್ನು ಮರು ದಿವಸ ಜನರಿಗೆ ತೋರಿಸಲಾಗುತ್ತಿದೆ. ಟಿವಿಗಳಲ್ಲಿ ಅದು ಸಂಜೆ ಬಂದರೆ, ವೂಟ್ ಆಪ್ ನಲ್ಲಿ ಅದು ಬೆಳಗ್ಗೆಯಿಂದಲೇ ಲಭ್ಯವಿರುತ್ತದೆ. ಆದರೆ ಈಗ ಚಿತ್ರೀಕರಣವೇ ಸ್ಟಾಪ್ ಆದರೆ ಎಡಿಟ್ ಕಥೆ ಎನ್ನುವ ಪ್ರಶ್ನೆಯೂ ಇದೆ. ಹಾಗೆ ನೋಡಿದರೆ ಬಿಗ್ ಬಾಸ್ ಗೆ ಇದು ಯಾವುದೇ ತೊಂದರೆ ಆಗದು. ಅಲ್ಲಿ ಫಿಕ್ಸ್ ಕ್ಯಾಮೆರಾಗಳೇ ಆಗಿರುವುದರಿಂದ ಪ್ರತಿ ದಿನದ ಪ್ರಸಾರದ ಸರುಕಿಗೆ ಯಾವುದೇ ಅಡಚಣೆ ಇಲ್ಲ. ಆದರೆ ವಾರದ ಕೊನೆಯ ಚಿತ್ರೀಕರಣಕ್ಕೆ ಮಾತ್ರ ಸ್ವಲ್ಪ ತೊಂದರೆ ಆಗಲಿದೆ. ಅದನ್ನು ಕೂಡ ಹ್ಯಾಗೋ ಮ್ಯಾನೇಜ್ ಮಾಡಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ.