ರಕ್ತದಾನ ಮಾಡಿದ ನಟ‌ ವಸಿಷ್ಠ ಸಿಂಹ ಫ್ಯಾನ್ಸ್; ವ್ಯಾಕ್ಸಿನೇಷನ್ ಪಡೆವ ಮೊದಲು ರಕ್ತದಾನ ಮಾಡಲು ವಸಿಷ್ಠ ಮನವಿ

ಕೊರೊನಾ ಹಾವಳಿ ಹೆಚ್ಚಾದ ದಿನಗಳಿಂದಲೂ ಹಲವು ಮಂದಿ ಟೊಂಕ ಕಟ್ಟಿ ಒಂದಷ್ಟು ಸೇವೆ ಮಾಡಲು ಮುಂದಾಗಿರುವುದು ಗೊತ್ತೇ ಇದೆ. ಕೊರೊನೊದಿಂದ ತಮ್ಮ ಬದುಕನ್ನೇ ಕಳೆದುಕೊಂಡ‌ ಅದೆಷ್ಟೋ ಜನ ಸಾವು-ಬದುಕಿನ ಜೊತೆ ಹೋರಾಡುತ್ತಿದ್ದಾರೆ. ಅಂತಹವರ ನೆರವಿಗೆ ಸಿನಿಮಾ ಮಂದಿ ಕೂಡ ಈಗಾಗಲೇ ನೆರವಿಗೆ ಧಾವಿಸಿದ್ದಾರೆ. ಅಗತ್ಯ ಸೇವೆಗಳ ಜೊತೆಗೆ ರಕ್ತದಾನ ಸೇವೆ ಕಡೆಗೂ ಗಮನ ಹರಿಸಿರುವುದು ನಿಜಕ್ಕೂ ಶ್ಲಾಘನೀಯ.

ಹೌದು, ಈಗ ವಸಿಷ್ಠ ಸಿಂಹ ಅವರ ಅಭಿಮಾನಿ ಬಳಗ ಕೂಡ ರಕ್ತದಾನ ಶಿಬಿರ ನಡೆಸಿದೆ.
ಅಖಿಲ ಕರ್ನಾಟಕ ವಸಿಷ್ಠ ಸಿಂಹ ಅಭಿಮಾನಿಗಳ ವತಿಯಿಂದ ಕೆಪಿಟಿಸಿಎಲ್ ನೌಕರರ ಸಹಯೋಗದೊಂದಿಗೆ ಭಾನುವಾರ ಬೆಂಗಳೂರಿನ ರಾಜಾಜಿನಗರದ ಕೆಇಬಿ ನೌಕರರ‌ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.


ನಟ ವಸಿಷ್ಠ ಸಿಂಹ ಕೂಡ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
ಈ‌ ರಕ್ತದಾನ ಶಿಬಿರದಲ್ಲಿ ಒಟ್ಟು 137 ಮಂದಿ ರಕ್ತದಾನ ಮಾಡಿದ್ದಾರೆ.

ಈ ಕುರಿತಂತೆ ಅಖಿಲ ಕರ್ನಾಟಕ ವಸಿಷ್ಠ ಸಿಂಹ ಅಭಿಮಾನಿ ಬಳಗದ ಅಧ್ಯಕ್ಷ ಕುಮಾರ ನಾಯ್ಡು ಮಾತನಾಡಿ, ‘ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಸರ್ಕಾರ, ವ್ಯಾಕ್ಸಿನೇಷನ್ ಹಾಕಲು ಮುಂದಾಗಿದೆ. ವ್ಯಾಕ್ಸಿನೇಷನ್‌ ಹಾಕಿಸಿಕೊಂಡವರು ಮೂರು ತಿಂಗಳ ಕಾಲ ರಕ್ತದಾನ ಮಾಡುವಂತಿಲ್ಲ. ಹಾಗಾಗಿ ಆ ಜಾಗೃತಿಯ ಜೊತೆಗೇ ರಕ್ತದಾನ ಮಾಡಿ ಒಂದಷ್ಟು ಜನರ ಸಹಾಯಕ್ಕೆ ನಿಲ್ಲುವ ಉದ್ದೇಶ ನಮ್ಮದು.

ಈ ನಿಟ್ಟಿನಲ್ಲಿ ನಮ್ಮ ವಸಿಷ್ಠ ಸಿಂಹ ಅವರು ಕೂಡ ರಕ್ತದಾನ ಮಾಡಿ, ಪ್ರೇರಣೆಯಾಗಿದ್ದಾರೆ. ಈ ಶಿಬಿರದಲ್ಲಿ ಪಾಲ್ಗೊಂಡ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಮುಖ್ಯವಾಗಿ ಆರೋಗ್ಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದಿದ್ದಾರೆ ಕುಮಾರ್ ನಾಯ್ಡು.

Related Posts

error: Content is protected !!