ಓಕೆ, ಇದನ್ನು ಕಳಂಕ ತೊಳೆದುಕೊಳ್ಳುವ ಪ್ರಯತ್ನವೇ ಅನ್ನೋಣ, ಅದಕ್ಕೆಲ್ಲ ಜೀವದ ಹಂಗು ತೊರೆದು ಈ ರೀತಿ ಫೀಲ್ಡಿಗಿಳಿದು ಕೆಲಸ ಮಾಡುವ ಧೈರ್ಯ ಮೆಚ್ಚಲೇಬೇಕು. ಆದರೂ ಈ ನಟಿ ಫೀಲ್ಡಿಗಿಳಿದಿದ್ದಾರೆ. ಕೊರೊನಾ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ನಿಂತಿದ್ದಾರೆ. ದಿನವಿಡೀ ರಸ್ತೆ ಮೇಲೆ ನಿಂತು ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಆಹಾರ ಸೌಲಭ್ಯ, ಸ್ಮಶಾನಗಳ ಸಿಬ್ಬಂದಿಗೆ ದಿನಸಿ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಷ್ಟು ಮಾತ್ರವಲ್ಲ ಅವರ ಅಡುಗೆ ಮನೆಯೇ ಈಗ ಸಹಾಯಕರ ಹೊಟ್ಟೆ ತುಂಬಿಸುವ ಅಕ್ಷಯ ಪಾತ್ರೆ ಆಗಿದೆ.
ಕೆಲಸವಿಲ್ಲದೆ ಒಂದೂತ್ತಿನ ಊಟಕ್ಕೂ ಪರದಾಡುತ್ತಿರುವ ಕೊಳೆಗೇರಿ ಪ್ರದೇಶಗಳಲ್ಲಿನ ಜನರಿಗೆ ಅಲ್ಲಿಂದ ಆಹಾರ ರೆಡಿಯಾಗಿ ಸರಬರಾಜು ಆಗುತ್ತಿದೆ. ಯಾವುದೋ ಆರೋಪದಲ್ಲಿ ಕೆಲವರು ತನ್ನನ್ನು ಏನೇನೋ ಅಂತ ಜರಿದರೂ, ಆ ನಟಿ ಮಾತ್ರ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಅಸಹಾಯಕ ಜನರ ನೆರವಿಗೆ ಮಿಡಿದಿದ್ದಾರೆಂದರೆ ಇದನ್ನು ಮೆಚ್ಚಲು ಇರಲಾದೀತೆ? ಅಂದಹಾಗೆ, ಆ ನಟಿಯ ಹೆಸರು ರಾಗಿಣಿ ಅಲಿಯಾಸ್ ರಾಗಿಣಿ ದ್ವಿವೇದಿ.
ಕಳೆದ ವರ್ಷ ಕೊರೊನಾ ಕಾರಣಕ್ಕೆ ಲಾಕ್ ಡೌನ್ ಆದಾಗಲೂ ನಟಿ ರಾಗಿಣಿ ಹೀಗೆಯೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕನ್ನಡದ ಬಹುತೇಕ ನಟರು, ನಟಿಯರು ಲಾಕ್ ಡೌನ್ ದಿನಗಳನ್ನು ರುಚಿ ರುಚಿಯಾದ ಅಡುಗೆ ಮಾಡುವುದಕ್ಕೂ, ಮನೆಯವರ ಜತೆಗೆ ಹಾಯ್ ಆಗಿ ಕಾಲ ಕಳೆಯುವುದಕ್ಕೂ ಮೀಸಲಿಟ್ಟಿದ್ದ ದಿನಗಳಲ್ಲಿ ನಟಿ ರಾಗಿಣಿ ಕಾಲಿಗೆ ಚಕ್ರ ಕಟ್ಟಕೊಂಡು ನಗರದ ಗಲ್ಲಿ ಗಲ್ಲಿಗಳಿಗೆ ಹೋಗಿ, ಅಸಹಾಯಕರ ನೆರವಿಗೆ ನಿಂತಿದ್ದರು.
ಇದಾಗಿ ಒಂದಷ್ಟು ದಿನಕ್ಕೆ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ರಾಗಿಣಿ ಹೆಸರು ಕೂಡ ಕೇಳಿ ಬಂತು. ಆ ಹೊತ್ತಿಗೆ ರಾಗಿಣಿ ಹೆಸರು ದೊಡ್ಡದಾಗಿಯೇ ಸೌಂಡ್ ಮಾಡಿತು. ಒಂದು ಹಂತದಲ್ಲಿ ಅವರು ಜೈಲಿಗೂ ಹೋಗಬೇಕಾಗಿತು ಬಂತು. ಹಾಗಂತ ಅವರೇನು ಜೈಲಿಗೆ ಹಾಗೆ ಹೋಗಿ ಹೀಗೆ ಬರಲಿಲ್ಲ, ಬರೋಬ್ಬರಿ ಎರಡೂವರೆ ತಿಂಗಳೆ ಆಗಿ ಹೋದವು.
ಸೆಲಿಬ್ರಿಟಿಯಾಗಿ ಜಾಲಿ ಲೈಫ್ ಕಳೆದಿದ್ದ ರಾಗಿಣಿ, ಜೈಲಿಗೆ ಹೋಗಿ ಕಡು ಕಷ್ಟದ ದಿನಗಳನ್ನೇ ಕಳೆದು ಬಂದರು. ಹಾಗೆ ಬಂದವರು ಇನ್ನಾವುದೋ ಉಸಾಬರಿಗೆ ಹೋಗದೆ ತಾವಾಯಿತು ತಮ್ಮ ಪಾಡಾಯಿತು ಅಂತಲೇ ಇರಬಹುದು ಅಂತಲೇ ಅಂದುಕೊಂಡಿದ್ದರು. ಆದರೆ ರಾಗಿಣಿ ಅದೊಂದು ಕೆಟ್ಟ ಕನಸು ಅಂತ ಅದೆಲ್ಲ ಮರೆತು ಬಿಟ್ಟು, ಮತ್ತೆ ಸಾಮಾಜಿಕ ಕಾರ್ಯಕ್ಕೆ ನಿಂತಿರುವುದನ್ನು ಶ್ಲಾಘಿಸದೆ ಬಿಟ್ಟರೆ ಅದೊಂದು ಅಪರಾಧವೇ ಆದೀತು.
ಅದಕ್ಕೂ ಕಾರಣ ಇದೆ. ತಾವೆಲ್ಲ ತುಂಬಾ ಸಾಚಾಗಳು, ಅಂತಹ ಯಾವುದೇ ಅಪರಾಧದ ಆರೋಪ ಹೊತ್ತಿಲ್ಲ ಅಂತೆಲ್ಲ ಫೋಸು ಕೊಡುವ ಕನ್ನಡದ ಅದೆಷ್ಟೋ ನಟರು, ನಟಿಯರು ಈ ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ನಿಂತಿದ್ದಾರೆ ? ಅದು ಬಿಡಿ, ತಾವೆಲ್ಲ ಕನ್ನಡದ ವೀರರು, ಕನ್ನಡಕ್ಕಾಗಿಯೇ ಹುಟ್ಟಿ ಬಂದವರು, ಕನ್ನಡದ ಜನಕ್ಕೆ ತೊಂದರೆಯಾದರೇ ಸುಮ್ಮನೆ ಕೂರಲಾರೆವೂ ಅಂದವರೆಲ್ಲ ಎಷ್ಟು ಜನ ಈ ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ಬಂದಿದ್ದಾರೆನ್ನುವುದು ನಿಮಗೂ ಗೊತ್ತಿದೆ. ಹೋಗ, ಅಭಿಮಾನಿಗಳೇ ನಮ್ಮ ಆಸ್ತಿ ಅಂದವರಾದರೂ ಎಷ್ಟು ನಟರು ಅಭಿಮಾನಿಗಳ ನೆರವಿಗೆ ನಿಂತಿದ್ದಾರೆ ? ಇವರ ವೀರಾವೇಷಗಳೆಲ್ಲವೂ ರೀಲ್ ಮೇಲೆಯೇ ಅನ್ನೋದು ಈಗ ಮತ್ತೊಮ್ಮೆ ಜಗ್ಗಜಾಹ್ಹೀರು.
ಇಂತಹ ಸಂದರ್ಭದಲ್ಲಿ ಒಬ್ಬ ನಟಿ ತನ್ನ ಜೀವವನ್ನೇ ಪಣಕ್ಕಿಟ್ಟು ಅಸಹಾಯಕ ಜನರಿಗೆ ಆಹಾರ ಧಾನ್ಯ ವಿತರಿಸುತ್ತಾ ನಿಜವಾದ ಮಾನವೀಯತೆ ಮೆರೆಯುತ್ತಿದ್ದಾರೆಂದರೆ, ನಿಜಕ್ಕೂ ಅದು ಮೆಚ್ಚಲೇಬೇಕಾದ ಕೆಲಸ.
ನಟಿ ರಾಗಿಣಿ ನಿಜಕ್ಕೂ ಕೊರೊನಾ ವಾರಿಯರ್ಸ್ ಆಗಿದ್ದಾರೆ. ಜಿನೆಕ್ಸ್ಟ್ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ಮೊನ್ನೆ ಕಾಕ್ಸ್‌ಟೌನ್ ಹತ್ತಿರ ಕಲ್ಪಹಳ್ಳಿ ಹಾಗೂ ಭಾರತಿ ನಗರ ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ ಮಾಡಿದರು. ಅದಕ್ಕೂ ಮುಂಚೆ, ಯಲಹಂಕ
ಸಮೀಪದ ಅಳ್ಳಾಲ್ ಸಂದ್ರ ಕೊಳಗೇರಿ ಪ್ರದೇಶದಲ್ಲಿನ ಜನರಿಗೆ ಫುಡ್ ಕಿಡ್ ನೀಡಿದ್ದರು. ರೈಲ್ವೆ ಕಾರ್ಮಿಕರಿಗೂ ರೇಷನ್ ವಿತರಣೆ ಮಾಡಿದ್ದರು. ಬಾಬು ಸಾಬ್ ಪಾಳ್ಯ ದಲ್ಲೂ ಸಾಕಷ್ಟು ಕುಟುಂಬಗಳಿಗೆ ಇಂತಹದೇ ನೆರವು ನೀಡಿದ್ದರು. ಅಷ್ಟು ಮಾತ್ರವಲ್ಲ, ಹೆಬ್ಬಾಳ, ಗೋವಿಂದಪುರ ಜತೆಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿನ ಜನರಿಗೂ ತಮ್ಮ ಕೈಲಾದ ಸೇವೆ ಮಾಡಿದ್ದಾರೆ. ಇಷ್ಟಕ್ಕೂ ಇದೆಲ್ಲವನ್ನು ಅವರು ಯಾಕೆ ಮಾಡುತ್ತಿದ್ದಾರೆ ಗೊತ್ತಾ? ”
ಕೊರೊನಾ ಅಸಾಹಯಕ ಜನರನ್ನು ಬೀದಿಗೆ ತಳ್ಳಿದೆ. ಎಷ್ಟೋ ಜನರಿಗೆ ಈಗ ಕೂಲಿ ಇಲ್ಲ. ಕೂಲಿ ಇಲ್ಲ ಅಂದ್ರೆ ಅವರಿಗೆ ಒಂದೂತ್ತಿನ ಊಟ ಕೂಡ ಸಿಗುವುದಿಲ್ಲ. ಈ ಸಮಯದಲ್ಲಿ ನಾವು ಕಷ್ಟದಲ್ಲಿರುವವರಿಗೆ ನೆರವಿಗೆ ನಿಲ್ಲಬೇಕಿದೆ. ಅದೇ ಕಾರಣಕ್ಕೆ ನಾವೀಗ ಈ ಕೆಲಸ ಶುರು ಮಾಡಿದ್ದೇವೆ. ಇದನ್ನು ನಾನು ಯಾವುದೇ ಉದ್ದೇಶಕ್ಕೂ ಮಾಡುತ್ತಿಲ್ಲ. ಕಷ್ಟವೋ ಸುಖವೋ ಹಂಚಿ ತಿನ್ನೋಣ ಅನ್ನೋದು ನನ್ನ ಪಾಲಿಸಿʼ ಎಂದು ರಾಗಿಣಿ ಹೇಳುವಾಗ ಅವರ ಮುಖದಲ್ಲಿ ಕಂಡಿದ್ದು ಮುಗ್ದತೆ ಮಾತ್ರ.