Categories
ಸಿನಿ ಸುದ್ದಿ

ಅನಾರೋಗ್ಯ ಮಗುವಿಗೆ ನೆರವಾದ ಶಿವಸೈನ್ಯ! ಫ್ಯಾನ್ಸ್‌ ಮಾಡಿದ ಕೆಲಸಕ್ಕೆ ಶಿವಣ್ಣ ಹೆಮ್ಮೆ

ಶಿವರಾಜಕುಮಾರ್‌ ಹೇಗೋ ಅವರ ಅಭಿಮಾನಿಗಳು ಕೂಡ ಹಾಗೆಯೇ. ಹೌದು, ಶಿವರಾಜಕುಮಾರ್‌ ಈಗಾಗಲೇ ಹಲವಾರು ಸಾಮಾಜಿಕ ಕೆಲಸ ಮಾಡಿದ್ದಾರೆ. ಅದೆಷ್ಟೋ ನೊಂದ ಜೀವಗಳಿಗೂ ಸಹಾಯಕ್ಕೆ ನಿಂತಿದ್ದಾರೆ. ಅವರಂತೆಯೇ, ಅವರ ಅಭಿಮಾನಿಗಳೂ ಸಹ ಹಲವು ಸಾಮಾಜಿಕ ಕಾರ್ಯ ಮಾಡುತ್ತಲೇ ಇದ್ದಾರೆ. ಈಗ ಶಿವರಾಜಕುಮಾರ್‌ ಅವರ ಶಿವಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಫ್ಯಾನ್ಸ್‌ ಸೇರಿ ಖಾಯಿಲೆಯಿಂದ ಬಳಲುತ್ತಿದ್ದ ಮಗುವೊಂದರ ಪೋಷಕರಿಗೆ ಧನಸಹಾಯ ಮಾಡಿದ್ದಾರೆ.


ಇಷ್ಟಕ್ಕೂ ಆ ಅಭಿಮಾನಿಗಳು ಸಹಾಯ ಮಾಡಿದ್ದು, ಇತ್ತೀಚೆಗೆ ಶಿವಣ್ಣ ಪ್ರೀಮಿಯರ್‌ ಕ್ರಿಕೆಟ್‌ ಲೀಗ್‌ನಿಂದ ಸಂಗ್ರಹಿಸಿದ ಹಣ ಎಂಬುದು ವಿಶೇಷ. ಶಿವರಾಜಕುಮಾರ್‌ ಅಭಿಮಾನಿಗಳು, ಇತ್ತೀಚೆಗೆ ಶಿವರಾಜಕುಮಾರ್‌ ಅವರ ಮನೆಗೆ ತೆರಳಿ, ಶಿವರಾಜಕುಮಾರ್‌ ಅವರಿಂದಲೇ ಆ ಮಗುವಿನ ತಾಯಿಗೆ ಧನ ಸಹಾಯ ಮಾಡಿದೆ.

ಶಿವಣ್ಣ ಪ್ರೀಮಿಯರ್ ಕ್ರಿಕೆಟ್ ಲೀಗ್ (SPL) ನಿಂದ ಸಂಗ್ರಹಿಸಿದ ಹಣವನ್ನು ಖಾಯಿಲೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ನೀಡಿದ್ದು, ಖುಷಿ ಇದೆ ಎಂದು ಶಿವಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಶಿವರಾಜಕುಮಾರ್‌ ಅವರೂ ಸಹ ಅಭಿಮಾನಿಗಳ ಈ ಕೆಲಸವನ್ನು ಮೆಚ್ಚಿದ್ದಾರೆ.

Categories
ಸಿನಿ ಸುದ್ದಿ

ಸಿಗದ ಮೋಕ್ಷ! ಕೊರೊನಾ ಹಾವಳಿ; ಹೊಸಬರ ಸಸ್ಪೆನ್ಸ್ ಥ್ರಿಲ್ಲರ್ ಬಿಡುಗಡೆ ಸದ್ಯಕ್ಕಿಲ್ಲ…

ಕನ್ನಡದಲ್ಲಿ ಹೊಸಬರೇ ಸೇರಿ ಮಾಡಿದ “ಮೋಕ್ಷ” ಚಿತ್ರ ಈಗಾಗಲೇ ಬಿಡುಗಡೆಯ ದಿನವನ್ನು ಘೋಷಿಸಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಏಪ್ರಿಲ್‌ ೧೬ರಂದು ರಾಜ್ಯಾದ್ಯಂತ ಬಿಡುಗಡೆ ಕಾಣಬೇಕಿತ್ತು. ಆದರೆ, ಕೊರೊನಾ ಭಯ ಹೆಚ್ಚಾಗಿದ್ದರಿಂದ ಚಿತ್ರತಂಡ, “ಮೋಕ್ಷ” ಚಿತ್ರದ ಬಿಡುಗಡೆಯನ್ನು ಸ್ವಲ್ಪ ದಿನಗಳ ಕಾಲ ಮುಂದಕ್ಕೆ ಹಾಕಿದೆ.

ಹೌದು, ಈಗಾಗಲೇ ಟ್ರೇಲರ್ ಮೂಲಕ ಜೋರು ಸದ್ದು ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ “ಮೋಕ್ಷ” ಚಿತ್ರ ಏಪ್ರಿಲ್ 16 ರಂದು ಬಿಡುಗಡೆ ಮಾಡಲು ನಿರ್ದೇಶಕ ಸಮರ್ಥ್‌ ನಾಯಕ್‌ ಅವರು ತಯಾರಾಗಿದ್ದರು. ರಾಜ್ಯದಲ್ಲಿ ಪುನಃ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ತೋರಿಸುತ್ತಿರುವುದರಿಂದ ಚಿತ್ರವನ್ನು ಸ್ವಲ್ಪ ದಿನಗಳ ಕಾಲ ಕಾದು ಆ ನಂತರ ಬಿಡುಗಡೆ ಮಾಡಲು ಯೋಚಿಸಿದ್ದಾಗಿ ಹೇಳಿದ್ದಾರೆ ನಿರ್ಮಾಪಕ ಕಮ್ ನಿರ್ದೇಶಕ ಸಮರ್ಥ್ ನಾಯಕ್.‌ ಚಿತ್ರದ ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ.

ಹಿನ್ನೆಲೆ ಸಂಗೀತ ಕಿಶನ್ ಮೋಹನ್‌ ಮಾಡಿದ್ದಾರೆ. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ವರುಣ್ ಕುಮಾರ್ ಅವರ ಸಂಕಲನವಿದೆ. ಚಿತ್ರದಲ್ಲಿ ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಉಳಿದಂತೆ ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಮದಗಜ ಶೂಟಿಂಗ್‌ ವೇಳೆ ಅವಘಡ: ಶ್ರೀಮುರಳಿ ಕಾಲಿಗೆ ಪೆಟ್ಟು- ಅಪಾಯದಿಂದ ಪಾರಾದ ರೋರಿಂಗ್‌ ಸ್ಟಾರ್

‌ಸಿನಿಮಾ ಅಂದರೆ ಬೆಳಕಲ್ಲಿ ಚಿತ್ರೀಕರಿಸಿ, ಕತ್ತಲಲ್ಲಿ ತೋರಿಸುವ ಪ್ರಕ್ರಿಯೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇಲ್ಲಿ ನಗುವಿನಷ್ಟೇ ನೋವು ಇದೆ. ಗೆಲುವಿನಷ್ಟೇ ಸೋಲು ಇದೆ. ಇಲ್ಲೀಗ ಹೇಳಹೊರಟಿರುವ ವಿಷಯ, ಹಲವು ನಟರು ಸಿನಿಮಾಗಳಲ್ಲಿ ಸಾಕಷ್ಟು ರಿಸ್ಕ್‌ ತೆಗೆದುಕೊಳ್ಳಲೇಬೇಕು. ಒಂದಷ್ಟು ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚೆಗಷ್ಟೇ, ನಟ ಉಪೇಂದ್ರ ಅವರು “ಕಬ್ಜ” ಚಿತ್ರದ ಸಾಹಸ ಚಿತ್ರೀಕರಣದಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಫೈಟ್‌ ಸೀನ್‌ ವೇಳೆ, ಖಳನಾಯಕರ ಜೊತೆ ಹೊಡೆದಾಡುವಾಗ, ಆಕಸ್ಮಿಕವಾಗಿ ತಲೆಗೆ ಪೆಟ್ಟು ಬಿದ್ದಿತ್ತು. ಕ್ಷಣಾರ್ಧದಲ್ಲೇ ಅವರು ಚೇತರಿಸಿಕೊಂಡಿದ್ದರು. ಈಗ ನಟ ಶ್ರೀಮುರಳಿ ಅವರೂ ಕೂಡ ಸ್ಟಂಟ್‌ ಮಾಡುವ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

ಹೌದು, “ಮದಗಜ” ಚಿತ್ರದ ಚಿತ್ರೀಕರಣ ವೇಳೆ ಈ ಅವಘಡ ನಡೆದಿದೆ. ಕಂಠೀರವ ಸ್ಟುಡಿಯೋದಲ್ಲಿ “ಮದಗಜ” ಚಿತ್ರದ ಚಿತ್ರೀಕರಣ ಕಳೆದ ಎರಡು ದಿನಗಳಿಂದಲೂ ಜೋರಾಗಿಯೇ ನಡೆಯುತ್ತಿತ್ತು. ನಿರ್ದೇಶಕ ಮಹೇಶ್‌ ಕುಮಾರ್‌ ಅವರು, ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಸಾಹಸ ನಿರ್ದೇಶಕ ಅರ್ಜುನ್ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದರು. ರಾತ್ರಿ ವೇಳೆ ಚಿತ್ರೀಕರಣವಾಗಿದ್ದರಿಂದ ಮೊದಲ ದಿನದ ಚಿತ್ರೀಕರಣವಂತೂ ಜಾತ್ರೆಯೇ ಆಗಿತ್ತು. ಅಷ್ಟೊಂದು ಜೂನಿಯರ್‌ ಕಲಾವಿದರೊಂದಿಗೆ ಶ್ರೀಮುರಳಿ ಅವರು ಹೊಡೆದಾಡಿದ್ದರು.

ಎರಡನೇ ದಿನದ ಚಿತ್ರೀಕರಣ ಕೂಡ ಬಿರುಸಾಗಿಯೇ ನಡೆದಿತ್ತು. ಈ ವೇಳೆ ಅವರ ಕಾಲಿಗೆ ಪೆಟ್ಟು ಬಿದ್ದಿದೆ.‌ ರಾತ್ರಿಯೇ ಈ ಘಟನೆ ನಡೆದಿದ್ದರಿಂದ ತಕ್ಷಣವೇ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶ್ರೀಮುರಳಿ ಅವರಿಗೆ ವೈದ್ಯರು ಸುಮಾರು ಹದಿನೈದು ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಸುಮಾರು 30 ಜನ ಖಳರೊಂದಿಗೆ ಫೈಟ್‌ ಮಾಡುವಾಗ ಈ ಘಟನೆ ಸಂಭವಿಸಿದೆ. ಫೈಟರ್‌ ಜಂಪ್‌ ಹೈಟ್‌ ಮಾಡಿದ್ದರಿಂದ ಮಂಡಿಯ ಕೆಳಗೆ ಜೋರಾಗಿ ಪೆಟ್ಟು ಬಿದ್ದಿದೆ.

ಈ ಘಟನೆ ನಂತರ ನಿರ್ದೇಶ ಮಹೇಶ್‌ ಕುಮಾರ್‌ ಅವರು, ತಕ್ಷಣವೇ ಶೂಟಿಂಗ್‌ ಪ್ಯಾಕಪ್‌ ಮಾಡಿದ್ದಾರೆ. ಅದೇನೆ ಇರಲಿ, ಶ್ರೀಮುರಳಿ ಅವರು, ತುಂಬಾನೇ ಶಿಸ್ತಿನ ನಟ, ಅಷ್ಟೇ ಶ್ರದ್ಧೆಯಿಂದಲೇ ಕೆಲಸ ಮಾಡುವವರು. ಆದಷ್ಟು ಬೇಗ ಚೇತರಿಸಿಕೊಂಡು ಪುನಃ “ಮದಗಜ” ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದೇ “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಕೊರೊನಾ ಲಸಿಕೆ ಹಾಕಿಸಿಕೊಂಡ ಪವರ್‌ಸ್ಟಾರ್;‌ ಕೊರೊನೊ ವಿರುದ್ಧ ಎಲ್ಲರೂ ಹೋರಾಡಿ, ಜಾಗೃತರಾಗಿರಿ ಎಂಬ ಸಂದೇಶ ಕೊಟ್ಟ ಪುನೀತ್

‌ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರೀಗ “ಯುವರತ್ನ” ಚಿತ್ರದ ಯಶಸ್ಸಿನಲ್ಲಿದ್ದಾರೆ. ಆ ಸಂಭ್ರಮದಲ್ಲಿರುವಾಗಲೇ ಅವರೀಗ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೌದು, ಸರ್ಕಾರ ೪೫ ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಹೇಳಿದ ಬೆನ್ನಲ್ಲೇ ಹಲವು ಗಣ್ಯರು ಕೂಡ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ವಿರುದ್ಧ ಎಲ್ಲರೂ ಜಾಗೃತರಾಗಿ ಹೋರಾಡಬೇಕು ಎಂದು ಮನವಿ ಮಾಡಿದ್ದರು. ಈಗಾಗಲೇ ಹಲವು ಸಿನಿಮಾ ನಿರ್ದೇಶಕರು, ನಿರ್ಮಾಪಕರು ಸಹ ಲಸಿಕೆ ಹಾಕಿಸಿಕೊಂಡು ಜಾಗೃತಿ ಮೂಡಿಸಿಕೊಳ್ಳುತ್ತಿದ್ದಾರೆ. ಈಗ ಪುನೀತ್‌ ರಾಜಕುಮಾರ್‌ ಅವರೂ ಕೂಡ ಸದಾಶಿವನಗರದ ಪಿಎಚ್‌ಸಿಯಲ್ಲಿ (ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ) ಕೊರೊನೊ ಲಸಿಕೆ ಹಾಕಿಸಿಕೊಂಡಿದ್ದಾರೆ.

ಈ ಮೂಲಕ ೪೫ ವರ್ಷ ಮೇಲ್ಪಟ್ಟವರೆಲ್ಲರೂ ಕೊರೊನೊ ಲಸಿಕೆ ಹಾಕಿಸಿಕೊಂಡು ಜಾಗೃತರಾಗಿರಿ ಎಂದು ಪುನೀತ್‌ ಮನವಿ ಮಾಡಿದ್ದಾರೆ.
ಪುನೀತ್‌ ಅಭಿನಯದ “ಯುವರತ್ನ” ಚಿತ್ರ ಸದ್ಯ ಹೌಸ್‌ಫುಲ್‌ ಪ್ರದರ್ಶನ ನಡೆಯುತ್ತಿದೆ. ಏಪ್ರಿಲ್‌ ೧ರಂದು ತೆರೆಕಂಡ ಸಿನಿಮಾಗೆ ಮರುದಿನವೇ ಶೇ.೫೦ರಷ್ಟು ಭರ್ತಿಗೆ ಸರ್ಕಾರ ಆದೇಶಿಸಿತ್ತು. ಇದನ್ನು ವಿರೋಧಿಸಿದ ಪುನೀತ್‌, ಶೇ.೧೦೦ರಷ್ಟು ಭರ್ತಿಗೆ ಮನವಿ ಮಾಡಿಕೊಂಡಿದ್ದರು. ಸಿಎಂ ಅವರನ್ನು ಭೇಟಿ ಮಾಡಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಕೂಡ ಮುಂಜಾಗ್ರತೆ ವಹಿಸಿಕೊಂಡೇ ಬರುತ್ತಿದ್ದಾರೆ.

ಚಿತ್ರಮಂದಿರಗಳಲ್ಲೂ ಕೂಡ ಎಚ್ಚರಿಕೆ ವಹಿಸಲಾಗಿದೆ. ಒಳ್ಳೆಯ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಯಾವುದೇ ಸಮಸ್ಯೆ ಇಲ್ಲದಂತೆ ಚಿತ್ರಮಂದಿರಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ದಯವಿಟ್ಟು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಸರ್ಕಾರ, ಪುನಃ ಶೇ.೧೦೦ರಷ್ಟು ಭರ್ತಿಗೆ ಅವಕಾಶ ಕಲ್ಪಿಸಿತ್ತು.

Categories
ಸಿನಿ ಸುದ್ದಿ

ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರ ತಾಯಿ ಹಿರಿಯ ನಟಿ ಪ್ರತಿಮಾ ದೇವಿ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ (88) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಸರಸ್ವತಿಪುರಂ ನಿವಾಸದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡದ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು, ನಟಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ತಾಯಿಯಾಗಿರುವ ಪ್ರತಿಮಾ ದೇವಿ ಅವರು, 1947ರಲ್ಲಿ “ಕೃಷ್ಣಲೀಲಾ” ಚಿತ್ರದಲ್ಲಿ ನಟಿಸುವ ಮೂಲಕ ವೃತ್ತಿ ಜೀವನ ಶುರುಮಾಡಿದರು. 1951ರಲ್ಲಿ ತೆರೆಕಂಡ ‘ಜಗನ್ಮೋಹಿನಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಜನಪ್ರಿಯಗೊಂಡರು. ಈ ಚಿತ್ರ ಕನ್ನಡದಲ್ಲಿ ಮೊದಲ ಶತದಿನ ಪೂರೈಸಿದ ಸಿನಿಮಾ ಎಂಬ ದಾಖಲೆ ಪಡೆದಿದೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿ ನಟಿಸಿದ್ದರು.

“ಶ್ರೀ ಶ್ರೀನಿವಾಸ ಕಲ್ಯಾಣ”, “ಚಂಚಲ ಕುಮಾರಿ”, “ಮುಟ್ಟಿದ್ದೆಲ್ಲಾ ಚಿನ್ನ”, “ಶಿವಶರಣೇ ನಂಬಿಯಕ್ಕ”, “ಮಂಗಳ ಸೂತ್ರ”, “ಧರ್ಮಸ್ಥಳ ಮಹಾತ್ಮೆ”, “ಪಾತಳಾ ಮೋಹಿನಿ”, “ನಾಗರಹಾವು”, “ರಾಮ ಶಾಮಾ ಭಾಮಾ” ಸೇರಿದಂತೆ ಸುಮಾರು 60 ಚಿತ್ರಗಳಲ್ಲಿ ಪ್ರತಿಮಾ ದೇವಿ ನಟಿಸಿದ್ದಾರೆ. ಮಹಾತ್ಮೆ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರನ್ನು ವಿವಾಹವಾಗಿದ್ದ ಪ್ರತಿಮಾ ದೇವಿ ಅವರಿಗೆ ಎಸ್.‌ವಿ. ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್‌ ಸಿಂಗ್‌, ಜಯರಾಜ್‌ ಸಿಂಗ್‌, ವಿಜಯಲಕ್ಷ್ಮಿ ಸಿಂಗ್ ಮಕ್ಕಳು.
ಸಂತಾಪ: ಮೃತರ ಸುದ್ದಿ ತಿಳಿದು ನಟಿ, ಸಂಸದೆ, ಸುಮಲತಾ ಅಂಬರೀಶ್‌, ಪುನೀತ್‌ ರಾಜಕುಮಾರ್‌ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು, ನಿರ್ಮಾಪಕ, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್‌ ಅವರು ಕೂಡ “ಕನ್ನಡ ಚಿತ್ರರಂಗಕ್ಕೆ ‌ಕಲಾವಿದೆಯಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದ, ಖ್ಯಾತ ನಟಿ ಪ್ರತಿಮಾದೇವಿ ಅವರ ಪತಿ ಶಂಕರ್ ಸಿಂಗ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ವರ್ಷವಿದು. ಇದೇ ಸಮಯದಲ್ಲಿ ಅವರು ನಿಧನರಾಗಿದ್ದು, ದುಖದ ಸಂಗತಿ.‌ ಕನ್ನಡ ಚಿತ್ರರಂಗಕ್ಕೆ ಇವರ ಕುಟುಂಬ ನೀಡಿರುವ ಕೊಡುಗೆ ಅಪಾರ. ಕನ್ನಡ ‌ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ನಾಲ್ಕು ಮಕ್ಕಳನ್ನು ಪ್ರತಿಮಾ ದೇವಿ ಅವರು ಅಗಲಿದ್ದಾರೆ. ‌ಅವರ ನಿಧನದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ‌ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಹೇಳಿದ್ದಾರೆ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ನಲ್ಲಿ ಗೆಲುವಿನ “ನಿಧಿ” ಹುಡುಕಲು ಹೊರಟ ಚಂದ್ರಚೂಡ್‌; ಆ ಮನೇಲಿ ಇವರಿಗೆ ಸ್ವಾಗತಕ್ಕಿಂತ ವಿರೋಧವೇ ಹೆಚ್ಚಿತ್ತು… !

ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರ ಬಂಡವಾಳ ಬಯಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಕಿರುತೆರೆ ವೀಕ್ಷಕರ ಪಾಲಿಗೆ ಚಂದ್ರಚೂಡ್ ಪ್ರಮುಖ ಆಕರ್ಷಣೆ ಆಗಿದ್ದಾರೆ. ಅವರ ಆಟದಿಂದಲೇ ಬಿಗ್ ಬಾಸ್ ಈಗ ಇಂಟರೆಸ್ಟಿಂಗ್ ಆಗಿದೆ. ಕಳೆದ ಎರಡು ದಿನಗಳಿಂದ ಬದಲಾದ ಅವರ ಹೊಸ ವರಸೆ ಕಂಡು ವೀಕ್ಷಕರೇ ಗಾಬರಿ ಆಗಿದ್ದಾರೆ. ಚಂದ್ರ ಚೂಡ್‌ ಅಂದ್ರೆ ಹೀಗೂ ಇದ್ದಾರೆಯೇ? ಹಾಗೊಂದು ಪ್ರಶ್ನೆ ಕಿರಿತೆರೆ ವೀಕ್ಷಕರ ತಲೆಯಲ್ಲಿ ಗಿರಕಿ ಹಾಕುತ್ತಿದೆ. ಅಷ್ಟೇ ಯಾಕೆ, ಬಿಗ್‌ ಬಾಸ್‌ ಕ್ಯಾಮೆರಾಗಳ ಫೋಕಸ್‌ ಕೂಡ ಈಗ ಚಂದ್ರಚೂಡ್‌ ಮೇಲೆಯೇ ಇದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಅದೊಂಥರ ಥ್ರಿಲ್‌, ಇನ್ನೊಂದೆಡೆ ಅನುಮಾನ !

ಹೌದು ಮತ್ತೆ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ಮನೆಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಕೇಳಿಬಂದ ಮಾತುಗಳೇ ಬೇರೆ. ಓಹೋ, ಪ್ರಶಾಂತ್‌ ಸಂಬರಗಿ ಅವರಿಗೆ ಇದೇನು ಕೌಂಟರ್‌ ಇರಬಹುದಾ ಅಂತ ಒಂದಷ್ಟು ಮಂದಿ ಸೋಷಲ್‌ ಮೀಡಿಯಾದಲ್ಲಿ ಕೊಂಕು ಕಾಮೆಂಟ್‌ ಹಾಕಿದ್ದರು. ಇನ್ನು ಕೆಲವರು ಕಲರ್ಸ್‌ ಕನ್ನಡದವರಿಗೆ ಬೇರಾರು ಸಿಗಲಿಲ್ಲವೇ ಅಂತ ಹೊಟ್ಟೆ ಉರಿ ತೋಡಿಕೊಂಡಿದ್ದರು. ಹಾಗೆಯೇ ಒಂದಷ್ಟು ಮಂದಿ, ಬಿಗ್‌ ಬಾಸ್‌ ಮನೆಯಲ್ಲಿ ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ಅಂತ ಭವಿಷ್ಯ ನುಡಿದಿದ್ದರು. ಅದೇನೋ ಗೊತ್ತಿಲ್ಲ. ಚಂದ್ರ ಚೂಡ್‌ ಈಗ ತಮ್ಮ ವಿರೋಧಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ಅಸಲಿ ಆಟ ಇನ್ಮೇಲೆ ಶುರುವಾಗುತ್ತೆ ನೋಡಿ ಅಂದವರಿಗೆ ಖುಷಿ ಕೊಟ್ಟಿದ್ದಾರೆನ್ನುವುದು ಸದ್ಯದ ಸುದ್ದಿ.

ರಿಯಲ್‌ ಲೈಫ್‌ ನಲ್ಲಿ ಚಂದ್ರಚೂಡ್‌ ಅಂದ್ರೆ ಒಂದು ವಿಶಿಷ್ಟ ವ್ಯಕ್ತಿತ್ವದ ಮನುಷ್ಯಾಕೃತಿಅನ್ನೋದು ಎಲ್ಲರಿಗೂ ಗೊತ್ತು . ವೃತ್ತಿಯಲ್ಲಿ ಪತ್ರಕರ್ತ ಅಂತ ಗುರುತಿಸಿಕೊಂಡರೂ, ಅವರು ಮಾಡದ ಕೆಲಸ ಇಲ್ಲ. ಎಲ್ಲರಿಗೂ ಗೊತ್ತಿರುವಂತೆ ಅವರೀಗ ಸಿನಿಮಾ ನಿರ್ದೇಶಕ, ಲೇಖಕ, ಬರಹಗಾರರೂ ಹೌದು. ಆದರಾಚೆ ಅವರೊಬ್ಬ ಹೋರಾಟಗಾರ. ನೊಂದ ಜೀವಗಳ ಪರ ಮಿಡಿಯುವ ಮನುಷ್ಯ. ಇದೇ ಕಾರಣಕ್ಕೆ ಅವರು ವಿರೋಧಿಗಳನ್ನು ಸಂಪಾದಿಸಿಕೊಂಡಷ್ಟೇ ಸ್ನೇಹಿತರ ಬಳಗವನ್ನು ಹೊಂದಿದ್ದಾರೆನ್ನುವುದು ವಿಶೇಷ. ಇಷ್ಟಾಗಿಯೂ ಮೇಲ್ನೋಟಕ್ಕೆ ಚಂದ್ರಚೂಡ್‌ ಕೆಲವು ವಿವಾದಗಳಿಂದ ದೊಡ್ಡ ಸುದ್ದಿ ಆಗಿದ್ದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಚಂದ್ರಚೂಡ್‌ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಬಾಸ್‌ ಗೆ ಎಂಟ್ರಿ ಆಗುತ್ತಿದ್ದಾರೆಂದಾಗ ಅವರನ್ನು ಸ್ವಾಗತಿಸಿದವರಿಗಿಂತ ವಿರೋಧಿಸಿದವರ ಸಂಖ್ಯೆಯೇ ಹೆಚ್ಚಿತ್ತು.

ಪ್ರಶಾಂತ್‌ ಸಂಬರಗಿ ಅವರಿಗೆ ಕೌಂಟರ್‌ ಆಗಿ ಚಂದ್ರಚೂಡ್‌ ಅವರನ್ನು ಕಳುಹಿಸಲಾಗುತ್ತಿದೆ. ಆದರೆ ಸಂಬರಗಿ ಅವರ ವಿರುದ್ಧ ಚಂದ್ರಚೂಡ್‌ ಆಟ ನಡೆಯೋದಿಲ್ಲ. ಅವರು ಎಂಟ್ರಿ ಅದಷ್ಟೇ ವೇಗದಲ್ಲಿ ವಾಪಾಸ್‌ ಬರುವುದು ಗ್ಯಾರಂಟಿ ಅಂತ ಕೆಲವರು ಸೋಷಲ್‌ ಮೀಡಿಯಾದಲ್ಲಿ ಕಾಮೆಂಟ್‌ ಹಾಕಿದ್ದರು. ಮತ್ತೆ ಕೆಲವರು ಮೊದಲ ವಾರವೇ ಚಂದ್ರಚೂಡ್‌ ಔಟ್‌ ಅಂತಲೂ ಭವಿಷ್ಯ ನುಡಿದ್ದರು. ಇವೆಲ್ಲವನ್ನು ಅವರು ಯಾವ ಲೆಕ್ಕಚಾರದಲ್ಲಿ ಹೇಳಿದ್ದರು ಅಂತ ವಿವರಿಸಬೇಕಿಲ್ಲ. ಇದೆಲ್ಲ ಚಂದ್ರಚೂಡ್‌ ವಿರೋಧಿಸುವವರ ಮನಸ್ಥಿತಿ ಆಗಿತ್ತು. ಅದರಾಚೆ ಬಿಗ್‌ ಬಾಸ್‌ ಲೆಕ್ಕಚಾರಗಳೇ ಬೇರೆ ಇರುತ್ತೆ, ಅದು ನಮ್ಮೆಲ್ಲರ ನಿಯಂತ್ರಣದಲ್ಲಿ ಇರೋದಿಲ್ಲ ಅನ್ನುವ ಸತ್ಯ ಅವರಿಗೆ ಬೇಕಾಗಿರಲಿಲ್ಲ. ಬದಲಿಗೆ ಒಂದಷ್ಟು ವಿರೋಧಿಸಬೇಕಿತ್ತು, ವಿರೋಧಿಸಿದರು ಅಷ್ಟೆ. ಅದರಾಚೆ ಇವತ್ತು ಬಿಗ್‌ ಬಾಸ್‌ ಮನೆಯಲ್ಲಿ ಆಗಿದ್ದೇನು ಗೊತ್ತಾ?

ಪ್ರಶಾಂತ್‌ ಹಾಗೂ ಚಂದ್ರಚೂಡ್‌ ಕಾರಣಕ್ಕೆ ಬಿಗ್‌ ಬಾಸ್‌ ಇಂಟರೆಸ್ಟಿಂಗ್‌ ಆಗಿದೆ. ನೋಡೋದಿಕ್ಕೂ ಒಂದಷ್ಟು ಥ್ರಿಲ್‌ ಇದೆ. ಹಾಗಂತ ಈ ಮಾತುಗಳನ್ನು ನಾವು ಹೇಳ್ತಿಲ್ಲ. ಕಲರ್ಸ್‌ ಕನ್ನಡ ಫೇಜ್‌ ನಲ್ಲಿ ವೀಕ್ಷಕರು ಕಾಮೆಂಟ್‌ ಹಾಕಿದ್ದಾರೆ. ಒಂದಲ್ಲ ಎರಡಲ್ಲ ಇಂತಹ ಸಾವಿರಾರು ಕಾಮೆಂಟ್‌ ಇವೆ. ಹಾಗಾದ್ರೆ ಚಂದ್ರಚೂಡ್‌ ವಿರೋಧಿಸಿದವರೆಲ್ಲ ಯಾರು? ಆ ಕತೆ ಬಿಡಿ, ಚಂದ್ರಚೂಡ್‌ ನಿಜಕ್ಕೂ ಗ್ಲಾಮ್‌ ಪ್ಲಾನ್‌ ಮಾಡುತ್ತಿದ್ದಾರೆ. ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ ಒಂದೆರೆಡು ದಿನಗಳಲ್ಲಿ ಅವರು ಎಲ್ಲರನ್ನು ಅನುಮಾನಿಸಿಯೇ ನೋಡಿದ್ದರು. ಅಲ್ಲಿದ್ದವರಿಗೂ ಹಾಗೆಯೇ ಇತ್ತೇನೋ, ಅವರು ತಂಟೆಗೆ ಬಹಳಷ್ಟು ಬರಲೇ ಇಲ್ಲ. ಆದರೆ ಈಗ ಫುಲ್‌ ಚೇಂಜ್.‌ ಚಂದ್ರಚೂಡ್‌ ಅವರ ಕಂದ, ಚಿನ್ನ, ರನ್ನ ಎನ್ನುವ ಮಾತುಗಳು ಅಲ್ಲಿ ಸಖತ್‌ ವರ್ಕೌಟ್‌ ಆಗಿವೆ. ಬಹುತೇಕರು ಅವರು ಹೇಳಿದಂತೆ ಕೇಳುತ್ತಿದ್ದಾರೆ. ತಾನೇ ಕಿಂಗ್‌ ಎನ್ನುತ್ತಿದ್ದ ಪಾವಗಡ ಮಂಜು ಕೂಡ ಡರ್‌ ಆಗಿದ್ದಾರೆ. ಪ್ರಶಾಂತ್‌ ಸಂಬರಗಿ ಬಾಲ ಮುದುಡಿಕೊಂಡಿದ್ದಾರೆ. ಅಷ್ಟೊಂದು ಹವಾ ಎಬ್ಬಿಸಿರುವ ಚಂದ್ರಚೂಡ್‌ ಸಾಮಾನ್ಯರೇನಲ್ಲ, ಬಿಗ್‌ ಬಾಸ್‌ ಮನೆಯ ಆಳಕ್ಕೆ ಇಳಿದು ʼನಿಧಿʼ ಹುಡುಕುವ ಕಿರಾತಕ ಅವರು. ಅಂತಹದೊಂದು ಆಟ ಈಗ ಬಿಗ್‌ ಬಾಸ್‌ ನಲ್ಲಿ ಶುರುವಾಗಿದೆ. ನೋಡ್ಬೇಕು ಇದು ಎಷ್ಟು ದಿನ ಅಂತ. ಒಟ್ಟಿನಲ್ಲೀಗ ಚಂದ್ರಚೂಡ್‌ ಬಿಗ್‌ ಬಾಸ್‌ ಮನೆಯ ಪ್ರಮುಖ ಆಕರ್ಷಣೆಯ ಆಟಗಾರ ಅನ್ನೋದೇ ವಿಶೇಷ.

Categories
ಸಿನಿ ಸುದ್ದಿ

ಎರಡನೇ ಹಂತ ಯಶಸ್ವಿಯಾಗಿ ಮುಗಿಸಿದ ರೂಮ್‌ಬಾಯ್‌; ಬಿಡುಗಡೆ ಮುನ್ನವೇ ಬೇಡಿಕೆ ಹೆಚ್ಚಿಸಿಕೊಂಡ ಹೊಸಬರು!

ಕನ್ನಡದಲ್ಲಿ “ರೂಮ್‌ ಬಾಯ್”‌ ಸಿನಿಮಾ ಶುರುವಾಗಿದ್ದು ಗೊತ್ತೇ ಇದೆ. ಆ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆದು ಈಗ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಇನ್ನೂ ಮೂರನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿರುವ ಚಿತ್ರತಂಡ, ಸಾಕಷ್ಟು ಉತ್ಸಾಹದಲ್ಲೇ ಕೆಲಸ ಮಾಡುತ್ತಿದೆ. ಅದಕ್ಕೆ ಕಾರಣ, ಸಿನಿಮಾ ಕಂಪ್ಲೀಟ್‌ ಆಗುವ ಮೊದಲೇ ಒಂದಷ್ಟು ಮಂದಿ ಪರಭಾಷೆ ಡಬ್ಬಿಂಗ್‌ ರೈಟ್ಸ್‌ ಕೇಳುತ್ತಿರುವುದು.

ಆ ಕುರಿತು ಮಾತುಕತೆ ನಡೆಸುತ್ತಿರುವ ಚಿತ್ರತಂಡ, ಕಂಪ್ಲೀಟ್‌ ಮಾಡಿದ ಬಳಿಕ ಆ ಬಗ್ಗೆ ಯೋಚಿಸುವ ಮಾತನಾಡುತ್ತಿದೆ. ಇನ್ನು, ಈಗಾಗಲೇ ಶೇ.೮೦ ರಷ್ಟು ಚಿತ್ರೀಕರಣ ಮುಗಿಸಿದೆ. ಲಿಖಿತ್‌ ಸೂರ್ಯ ಇಲ್ಲಿ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತಮ್ಮ “ಐ ಕ್ಯಾನ್”‌ ಪ್ರೊಡಕ್ಷನ್‌ನಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ರವಿ ನಾಗಡದಿನ್ನಿ ನಿರ್ದೇಶನ ಮಾಡುತ್ತಿದ್ದಾರೆ.

ಲಿಖಿತ್‌ ಸೂರ್ಯ ಅವರಿಗೆ “ರೂಮ್‌ ಬಾಯ್‌” ನಾಲ್ಕನೇ ಚಿತ್ರ. ಈ ಹಿಂದೆ “ಲೈಫ್‌ ಸೂಪರ್‌ʼ, ʼಆಪರೇಷನ್‌ ನಕ್ಷತ್ರʼ ಹಾಗೂ ತೆಲುಗಿನ “ರಾಮಾಪುರಂ” ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಅವರೀಗ “ರೂಮ್‌ ಬಾಯ್‌” ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ ಎಂಬುದು ವಿಶೇಷ.

ತಾರಾಗಣದಲ್ಲಿ ಲಿಖಿತ್‌ ಅವರ ಜೊತೆಗೆ ಯಶ್‌ ಶೆಟ್ಟಿ, ವರ್ಧನ್‌ ತೀರ್ಥಹಳ್ಳಿ, ವಜ್ರಾಂಗ್ ಶೆಟ್ಟಿ ಹಾಗೂ ರೋಶನ್‌ ಕೊಡಗು ಸೇರಿದಂತೆ ನಾಯಕಿ ರಕ್ಷಾ, ಪದ್ಮಿನಿ, ಚಂದನಾ, ಪ್ರಗ್ಯಾ ಹಾಗೂ ಜನನಿ, ರಜನಿ, ಭಾನುಪ್ರಕಾಶ್ ಅಭಿನಯಿಸಿದ್ದಾರೆ. ವಿಶೇಷವಾಗಿ ಇಲ್ಲಿ ರಘುಶಿವಮೊಗ್ಗ ಅವರು ಕೂಡ ಸ್ಪೆಷಲ್‌ ಪಾತ್ರದ ಮೂಲಕ ಎಂಟ್ರಿಯಾಗಿದ್ದಾರೆ.

ಐವರು ನಾಯಕರು ಹಾಗೂ ಅಷ್ಟೇ ಸಂಖ್ಯೆಯ ನಾಯಕಿಯರ ಸುತ್ತ ನಡೆಯುವ ಒಂದೊಳ್ಳೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇಲ್ಲಿದೆ. ಇನ್ನು, ಯುವ ಪ್ರತಿಭೆ ರವಿ ನಾಗಡದಿನ್ನಿ ನಿರ್ದೇಶಿಸುತ್ತಿದ್ದು, ಇವರಿಗೆ ಇದು ಮೊದಲ ಚಿತ್ರ. ಸಿನಿಮಾ ಮೇಲಿನ ಪ್ರೀತಿ ಮತ್ತು ಆಸಕ್ತಿಯಿಂದಾಗಿ ಎಂಜಿನಿಯರ್‌ ವೃತ್ತಿ ಬಿಟ್ಟು ಬಂದು ನಿರ್ದೇಶಕರಾಗಿದ್ದಾರೆ.

ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನದ ಪಟ್ಟು ಕಲಿತುಕೊಂಡು ಈಗ ತಾವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ನಾಯಕ ನಟ ಲಿಖಿತ್‌ ಅವರಿಗೂ ಇಂತಹದೇ ವೃತ್ತಿ ಬದುಕಿನ ಹಿನ್ನೆಲೆ ಇದೆ. ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ, ಕೈ ತುಂಬಾ ಸಂಪಾದನೆ ಮಾಡಿಕೊಂಡಿದ್ದ ಲಿಖಿತ್‌ ಈಗ ನಟ ಆಗಿದ್ದು ಕೂಡ ಸಿನಿಮಾದ ಮೇಲಿನ ಪ್ರೀತಿಗಾಗಿಯೇ. ಇವರಿಬ್ಬರು ಹಣ ಮಾಡುವುದಕ್ಕಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ ಎನ್ನುವುದನ್ನು ಅವರ ವೃತ್ತಿಯ ಹಿನ್ನೆಲೆಯೇ ಹೇಳುತ್ತೆ. ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಮೇಲಿನ ಪ್ರೀತಿ, ಕಾಳಜಿ, ಮೋಹಕ್ಕಾಗಿಯೇ ಒಂದಾಗಿ ಈಗ “ರೂಮ್‌ ಬಾಯ್‌” ಚಿತ್ರ ಶುರು ಮಾಡಿ ಯಶಸ್ವಿಯಾಗಿ ಎರಡನೇ ಹಂತವನ್ನು ಮುಗಿಸಿದೆ.

ಇನ್ನು, “ರೂಮ್‌ ಬಾಯ್‌” ಚಿತ್ರಕ್ಕೆ ಕಿರಣ ಕುಮಾರ್‌ ಸಂಕಲನವಿದೆ. ಧನ್‌ ಪಾಲ್‌ ಅವರು ಕ್ಯಾಮೆರಾ ಹಿಡಿದಿದ್ದಾರೆ. ರೋಣದ ಬಕ್ಕೇಶ್‌ ಸಂಗೀತವಿದೆ. ಈಗಾಗಲೇ ನಂದಿಬೆಟ್ಟ ಬಳಿಯ ರೆಸಾರ್ಟ್‌ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಹಾಗೂ ವಿಶೇಷ ಮನೆಯಲ್ಲಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ. “ರೂಮ್‌ ಬಾಯ್‌” ಅಂದಾಕ್ಷಣ ಹಲವರಿಗೆ ಒಂದೊಂದು ನೆನಪಾಗುತ್ತೆ.

ಇಲ್ಲಿ ಟೈಟಲ್‌ ಎಷ್ಟು ವಿಭಿನ್ನ ಎನಿಸುತ್ತೋ, ಅಷ್ಟೇ ವಿಭಿನ್ನವಾಗಿಯೇ ಕಥೆ ಹೆಣೆದು ಸಿನಿಮಾ ಮಾಡಲು ಹೊರಟಿದೆ ಚಿತ್ರತಂಡ. ” ಇದೊಂದು ಸೈಕಾಲಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಸಾಮಾನ್ಯವಾಗಿ ರೂಮ್‌ ಬಾಯ್‌ ಅಂದ್ರೆ ಒಂದು ಹೊಟೇಲ್‌ ಅಥವಾ ರೆಸಾರ್ಟ್‌ ನಲ್ಲಿ ನಡೆಯುವ ಕತೆ ಎನ್ನುವುದು ಎಲ್ಲರಿಗೂ ಗೊತ್ತಾಗುವ ವಿಚಾರ. ಇಷ್ಟಾದರೂ ರೆಸಾರ್ಟ್‌ನಲ್ಲಿ ಒಂದು ಘಟನೆ ನಡೆಯುತ್ತೆ. ಅದೇನು ಅನ್ನೋದು ಸಸ್ಪೆನ್ಸ್.‌

Categories
ಸಿನಿ ಸುದ್ದಿ

ಹೊಸಬರ ಬ್ರೇಕ್‌ ಫೇಲ್ಯೂರ್‌;‌ ಮತ್ತೊಂದು ಹಾರರ್‌ ಸಿನಿಮಾ ರೆಡಿ

ಕನ್ನಡದಲ್ಲಿ ಹಾರರ್‌ ಸಿನಿಮಾಗಳಿಗೇನೂ ಕೊರತೆ ಇಲ್ಲ. ಅದರಲ್ಲೂ ಇಲ್ಲಿ ಹೊಸಬರೇ ಹಾರರ್‌ ಅಂಶಗಳೊಂದಿಗೆ ಬರುತ್ತಿದ್ದಾರೆ. ಅಂತಹವರ ಸಾಲಿಗೆ ಈಗ “ಬ್ರೇಕ್‌ ಫೇಲ್ಯೂರ್‌” ಸಿನಿಮಾ ಕೂಡ ಸೇರಿದೆ. ಹೌದು, ಇದು ಬಹುತೇಕ ಹೊಸಬರ ಚಿತ್ರ. ರಾಣಿಗಜ್ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ “ಬ್ರೇಕ್ ಫೇಲ್ಯೂರ್”‌ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ.

ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಒಂದು ಅಂಶ ಮಾಮೂಲಾಗಿರುತ್ತೆ. ಹುಡುಗರ ತಂಡವೊಂದು ಭಯಾನಕ ಕಾಡಿಗೆ ಹೋಗೋದು, ಅಲ್ಲಿ ಒಬ್ಬೊಬ್ಬರೇ ನಾಪತ್ತೆಯಾಗೋದು ಸಹಜ. ಅಲ್ಲಿ ಕಾಣದ ಕೈಯೊಂದು ಕೆಲಸ ಮಾಡುತ್ತೆ ಅನ್ನುವ ಸೂಚನೆ ಕೂಡ ಸಿಗುತ್ತಾ ಹೋಗುತ್ತೆ. ಇಂತಹ ಅಂಶವಿರುವ ಚಿತ್ರ “ಬ್ರೇಕ್‌ ಫೇಲ್ಯೂರ್‌”. ಬದುಕಿನ ದಾರಿಯಲ್ಲಿ ಭವಿಷ್ಯ ಎಂಬ ಬ್ರೇಕ್‌ ಫೇಲ್ಯೂರ್‌ ಆದಾಗ ಏನೆಲ್ಲಾ ಆಗಿಬಿಡುತ್ತೆ ಎಂಬ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ.

ಚಿತ್ರದುದ್ದಕ್ಕೂ ಕುತೂಹಲ ಸಾರವಿದೆ. ಪ್ರತಿ ದೃಶ್ಯದಲ್ಲೂ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳಿವೆ. ಬೆಚ್ಚಿ ಬೀಳಿಸುವ ಮುಖಗಳೂ ಇಲ್ಲುಂಟು. ಮುಖ್ಯವಾಗಿ, ಕಾಡು ಮೇಡು ಅಲೆಯುವ ತಂಡದ ಶ್ರಮ ವೀಡಿಯೋ ಸಾಂಗ್‌ನಲ್ಲಿ ನೋಡಬಹುದು. ಅದಿತ್ ನವೀನ್ ನಿರ್ದೇಶಕರು. ಅವರು ನಿರ್ದೇಶನದ ಜೊತೆಯಲ್ಲಿ ತೆರೆ ಮೇಲೂ ನಟಿಸಿದ್ದಾರೆ. ಅಬ್ದುಲ್ ಗಣಿ ತಾಳಿಕೋಟೆ ಅವರು ನಿರ್ಮಾಪಕರು. ಅವರ ಪ್ರಕಾರ ಹಣ ಇದ್ದಾಕ್ಷಣ ಸಿನಿಮಾ ಆಗೋದಿಲ್ಲ. ಒಗ್ಗಟ್ಟು, ಪ್ರೀತಿ, ಶ್ರಮ ಇದ್ದರೆ ಮಾತ್ರ ಒಂದೊಳ್ಳೆಯ ಚಿತ್ರ ಆಗುತ್ತೆ. ಅದು ಇಲ್ಲಾಗಿದೆ. ಸಣ್ಣ ಬಜೆಟ್‌ನಲ್ಲೇ ಅಚ್ಚುಕಟ್ಟಾದ ಚಿತ್ರ ಮಾಡಿದ್ದಾಗಿ ಹೇಳುತ್ತಾರೆ ಅವರು.

ಇಡೀ ಚಿತ್ರತಂಡ ಕಾಡು ಮನುಷ್ಯರಂತೆ ಕಾಡು ಅಲೆದು ಶ್ರಮಿಸಿದ್ದಾರೆ. ಬಹುತೇಕ ದಾಂಡೇಲಿ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ‌. ಮುಖ್ಯವಾಗಿ ನೀರಿಲ್ಲದೆ ಅಂತಹ ಕಾಡಿನಲ್ಲಿ ಬದುಕೋದೆ ಕಷ್ಟ ಅನ್ನೋದನ್ನು ತಿಳಿದು ಕೊಂಡೆವು‌. ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ಹೀರೋ ಅದಿತ್ ನವೀನ್. ಉಗ್ರಂ ರವಿ ಕೂಡ ಈ ವೇಳೆ ಮಾತನಾಡಿ, “ಕಾಡಲ್ಲಿ ಚಿತ್ರೀಕರಣ ಮಾಡುವ ಸಂದರ್ಭ ತುಂಬಾನೇ ಭಯವಾಗುತ್ತಿತ್ತು. ಕಾರಣ, ಕಾಡು ಪ್ರಾಣಿಗಳು ರಾತ್ರಿ ವೇಳೆ ನೀರು ಕುಡಿಯಲು ಬರುತ್ತಿದ್ದವು. ಅದನ್ನು ಕಂಡು ಭಯವಾಗಿದ್ದು ನಿಜ. ಒಟ್ಟಾರೆ ಒಳ್ಳೆಯ ಸಿನಿಮಾ ಮಾಡಿದ್ದೇವೆʼ ಎಂಬುದು ಉಗ್ರಂ ರವಿ ಮಾತು.

Categories
ಸಿನಿ ಸುದ್ದಿ

ನಂದಕಿಶೋರ್ ಹೊಸ ಚಿತ್ರಕ್ಕೆ ಶ್ರೇಯಸ್‌ ಹೀರೋ; ಹೆಸರಿಡದ ಚಿತ್ರದಲ್ಲಿ ಕೆ.ಮಂಜು ಪುತ್ರ

ನಿರ್ದೇಶಕ ನಂದಕಿಶೋರ್ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ನಂದಕಿಶೋರ್‌ ಅವರಿಗೆ ಸ್ಟಾರ್‌ ಸಿನಿಮಾಗಳನ್ನು ಮಾಡೋದು ಗೊತ್ತು. ಗೆಲ್ಲೋದು ಗೊತ್ತು. ಹಾಗೆಯೇ ಹೊಸಬರ ಸಿನಿಮಾಗಳ ಮೂಲಕ ಸದ್ದು ಮಾಡೋದು ಕೂಡ ಗೊತ್ತು. ಈಗಾಗಲೇ ಸಾಬೀತು ಮಾಡಿದ್ದಾರೆ ಕೂಡ. ಅವರೀಗ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ.

ಶ್ರೇಯಸ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಚಿತ್ರ ಅನೌನ್ಸ್‌ ಮಾಡಲಾಗಿದೆ. ಆದರೆ, ಈ ಸಿನಿಮಾ ಯಾವಾಗ ಅನ್ನೋದು ಗೊತ್ತಿಲ್ಲ. ಈಗ ಸದ್ಯ ಶ್ರೇಯಸ್‌ “ವಿಷ್ಣುಪ್ರಿಯ” ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅತ್ತ ನಂದಕಿಶೋರ್‌ ಕೂಡ “ಪೊಗರು” ಸಿನಿಮಾ ನಂತರ ಧ್ರುವ ಸರ್ಜಾ ಅವರಿಗೆ ಮತ್ತೊಂದು ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಆದರೆ, ಈ ಸಿನಿಮಾ ಯಾವಾಗ ಸೆಟ್ಟೇರುತ್ತೇ ಅನ್ನೋದು ಮಾತ್ರ ಗೌಪ್ಯ.

ಯುಗಾದಿ ಹಬ್ಬದ ಬಳಿಕ ಈ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಗುಜ್ಜಲ್ ಟಾಕೀಸ್ ಬ್ಯಾನರ್‌ನಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡುತ್ತಿದ್ದಾರೆ. ಇವರು ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ “ಟಗರು” ಚಿತ್ರದಲ್ಲಿ ‌ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರವಿದು. ಸದ್ಯಕ್ಕೆ “ಪ್ರೊಡಕ್ಷನ್ ನಂ ೧” ಹೆಸರಲ್ಲಿ ಚಿತ್ರದ ಚಟುವಟಿಕೆಗಳು ಆರಂಭವಾಗಿದ್ದು, ಸದ್ಯದಲ್ಲೇ ಶೀರ್ಷಿಕೆ ಅನಾವರಣಗೊಳಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಧರ್ಮವಿಶ್ ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌.

Categories
ಸಿನಿ ಸುದ್ದಿ

ಕಣ್ಣೇ ಅಧಿರಿಂದಿ ಅಂತ ಹಾಡಿದ ಗಾಯಕಿ ಮಂಗ್ಲಿ ಕನ್ನಡಕ್ಕೆ ಬಂದ್ರು ; ಕರಿಯ ಐ ಲವ್‌ ಯು ಸಿನಿಮಾಗೆ ಧ್ವನಿ ಕೊಟ್ರು…

“ಕಣ್ಣೇ ಅಧಿರಿಂದಿ…
ಬಹುಶಃ ಈ ಹಾಡು ಕೇಳದವರಿಲ್ಲ. ಇಂಥದ್ದೊಂದು ಸೂಪರ್‌ ಹಿಟ್‌ ಹಾಡಿಗೆ ಧ್ವನಿಯಾಗಿದ್ದು ಗಾಯಕಿ ಮಂಗ್ಲಿ. ದರ್ಶನ್‌ ಅಭಿನಯದ “ರಾಬರ್ಟ್”‌ ಚಿತ್ರದ ತೆಲುವು ಅವರತಣಿಕೆಗೆ “ಕಣ್ಣೇ ಅಧಿರಿಂದಿ..” ಹಾಡು ಹಾಡಿ ಕನ್ನಡಿಗರ ಮನವನ್ನೂ ಗೆದ್ದಿದ್ದ ಮಂಗ್ಲಿ, ಕನ್ನಡದಲ್ಲಿ ಹಾಡೋದು ಯಾವಾಗ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮಂಗ್ಲಿ ಒಳ್ಳೆಯ ಗಾಯಕಿ. ಇವರ ಈ ಗಾಯನದ ಹಿಂದೆ ದೊಡ್ಡ ಕಥೆಯೇ ಇದೆ. ತಮ್ಮ ಕಂಠದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಂಗ್ಲಿ, “ರಾಬರ್ಟ್” ಚಿತ್ರಕ್ಕೆ ಹಾಡಿದ ಆ ಹಾಡು, ನಿಜಕ್ಕೂ ದೊಡ್ಡ ಹೆಸರು ತಂದುಕೊಟ್ಟಿದೆ. ಇನ್ನು, “‘ರಾಬರ್ಟ್” ಸಿನಿಮಾದ ತೆಲುಗು ವರ್ಷನ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲೂ ಮಂಗ್ಲಿ ವೇದಿಕೆಯಲ್ಲಿ “ಕಣ್ಣೇ ಅಧಿರಿಂದಿ” ಹಾಡು ಹಾಡುವ ಮೂಲಕ ಮೆಚ್ಚುಗೆ ಪಡೆದಿದ್ದರು.

ಈಗಲೂ ಈ ಹಾಡು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇಂಥದ್ದೊಂದು ಹಾಡು ಹಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಮಂಗ್ಲಿ, ಕನ್ನಡದಲ್ಲೊಂದು ಹಾಡು ಹಾಡಿದ್ದಾರೆ. “ಕರಿಯಾ ಐ ಲವ್ ಯು” ಎಂಬ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ ಕೂಡ.

ಅಂದಹಾಗೆ, ಚಿತ್ರದ “ಬಿಟ್ ಬಂದ್ ಹಳ್ಳಿಯಿಂದ ಬಿಟ್ಯಾಕ್ ಬಂದೆ…” ಎನ್ನುವ ಹಾಡನ್ನು ಹಾಡಿದ್ದಾರೆ. ಲೋಕೇಶ್‌ ಸಂಗೀತ ನೀಡಿರುವ ಈ ಹಾಡಿಗೆ ಗಾಯಕ ನವೀನ್ ಸಜ್ಜು ಕೂಡ ಸಾಥ್‌ ನೀಡಿದ್ದಾರೆ. ಚಿತ್ರದ ನಾಯಕ ಮಂಜುನಾಥ್‌, ಈ ಗಾಯಕಿಯನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಈಗಾಗಲೇ ಸಾಂಗ್‌ ರೆಕಾರ್ಡಿಂಗ್ ಮುಗಿದಿದೆ. ಹಾಡು ಕೂಡ ಚೆನ್ನಾಗಿ ಮೂಡಿಬಂದಿರುವ ಖುಷಿ ಚಿತ್ರತಂಡಕ್ಕಿದೆ.

error: Content is protected !!