ಅದ್ದೂರಿ ಜೋಡಿ ಮತ್ತೆ ಒಂದಾಗಬೇಕು ಅನ್ನೋದು ಆಕ್ಷನ್ ಪ್ರಿನ್ಸ್ ಅಭಿಮಾನಿಗಳ ಬಹುದೊಡ್ಡ ಕನಸು. ಆ ಮಹಾಕನಸು ಕೊನೆಗೂ ಈಡೇರಿದೆ. ಧ್ರುವ ಹಾಗೂ ಎ.ಪಿ ಅರ್ಜುನ್ ಮತ್ತೆ ಒಂದಾಗಿದ್ದಾರೆ. ಒಂಭತ್ತು ವರ್ಷಗಳ ನಂತರ ಇಬ್ಬರು ಕೈ ಜೋಡಿಸಿದ್ದಾರೆ. ಅಭಿಮಾನಿ ದೇವರುಗಳ ಕನಸನ್ನ ಈಡೇರಿಸಿದ್ದಾರೆ.
ಅದ್ದೂರಿ ಧ್ರುವ ಡೆಬ್ಯೂ ಚಿತ್ರ. ನಾಯಕ ನಟನಾಗಿ ಬೆಳ್ಳಿ ಭೂಮಿ ಮೇಲೆ ಮೆರವಣಿಗೆ ಹೊರಟ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿ ನಾಯಕನಟನ ಪಟ್ಟಕ್ಕೇರಿದ, ಸ್ಟಾರ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬೆಳ್ಳಿ ತೆರೆಮೇಲೆ ಗುಡುಗಿ ಸ್ಟಾರ್ ನಟ ಎನಿಸಿಕೊಳ್ಳೋಕೆ ಸಾಧ್ಯವಾಗಿಸಿದ ಮೊದಲ ಸಿನಿಮಾ.
ಇಂತಹ ಅದ್ಬುತ ಚಿತ್ರದ ಸಾರಥಿ ಎ. ಪಿ ಅರ್ಜುನ್. ಧ್ರುವ- ಅರ್ಜುನ್ ಕಾಂಬೋ ಮತ್ತೆ ಒಂದಾಗಿದೆ ಅಂದರೆ ನಿರೀಕ್ಷೆಗಳು ಗರಿಗೆದರುತ್ತವೆ.
ಅಭಿಮಾನಿ ವಲಯದಲ್ಲಿ ಮಾತ್ರವಲ್ಲ ಗಾಂಧಿ ನಗರದ ಮಂದಿ ಕೂಡ ಇವರಿಬ್ಬರ ಜುಗಲ್ ಬಂಧಿಯ ಮೇಲೆ ಕೂತೂಹಲ ಕೆರಳಿರುತ್ತೆ. ಬೆಳ್ಳಿತೆರೆ ಮಾತ್ರವಲ್ಲ ಬಾಕ್ಸ್ ಆಫೀಸ್ ಕೂಡ ಇವರಿಬ್ಬರು ಜೊತೆಯಾಗಿರುವ ಸುದ್ದಿಕೇಳಿ ಥ್ರಿಲ್ಲಾಗಿರುತ್ತೆ. ಆಕ್ಷನ್ ಪ್ರಿನ್ಸ್ ದುಬಾರಿಯಾಗೋದಕ್ಕೆ ಹೊರಟ್ದಿದ್ದರು. “ಪೊಗರು” ಡೈರೆಕ್ಟರ್ ಜೊತೆ ಮತ್ತೆ ಖದರ್ ತೋರಿಸುವುದಕ್ಕೆ ಹೊರಟಿದ್ದರು.
ಈ ನಡುವೆ ದುಬಾರಿಗೆ ಬ್ರೇಕ್ ಹಾಕಿ ಅದ್ದೂರಿ ಸಾರಥಿಯ ಜೊತೆ ಹೊರಟಿದ್ದಾರೆ. ಅಂದ್ಹಾಗೇ ಮತ್ತೆ ಒಂದಾಗಿರೋ ಅದ್ದೂರಿ ಜೋಡಿಗೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡುತ್ತಿದ್ದಾರೆ. ಇವತ್ತು ಸಿನಿಮಾದ ಮುಹೂರ್ತ ನೆರವೇರಿದೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗ, ಚಿತ್ರದ ತಂತ್ರಜ್ಞರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ರಾಕಿಭಾಯ್ ದರ್ಶನ ಯಾವಾಗ ? ಇದು ಕೆಜಿಎಫ್ ಪಾರ್ಟ್ -2 ಗಾಗಿ ಕಾದು ಕುಳಿತವರ ಮಿಲಿಯನ್ ಡಾಲರ್ ಪ್ರಶ್ನೆ. ಆ ಪ್ರಶ್ನೆಗೆ ಕೆಜಿಎಫ್ ಸಾರಥಿ ಉತ್ತರ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್- 2 ರಿಲೀಸ್ ಯಾವಾಗ ಎನ್ನುವ ಮಹಾನ್ ಕೌತುಕಕ್ಕೆ ಸಣ್ಣ ತೆರೆ ಎಳೆಯೋ ಕೆಲಸ ಮಾಡಿದ್ದಾರೆ. ಕೆಜಿಎಫ್ ಚಾಪ್ಟರ್- 2 ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಕಾದು ಕುಳಿತಿರುವ ಚಿತ್ರ. ರಾಕಿಯ ಅಬ್ಬರ ಆರ್ಭಟದ ಜೊತೆಗೆ ಅಧೀರನೊಟ್ಟಿಗಿನ ಕಾದಾಟವನ್ನು ನೋಡಲಿಕ್ಕೆ, ಚಿನ್ನದ ಸಾಮ್ರಾಜ್ಯದ ವೈಭೋಗವನ್ನು ಕಣ್ತುಂಬಿಕೊಳ್ಳೋದಕ್ಕೆ ಪ್ರೇಕ್ಷಕ ಮಹಾಷಯರು ಕಣ್ಣರಳಿಸಿ ಕಾಯ್ತಿದ್ದಾರೆ. ಅದರಂತೇ, ಜಗತ್ತಿನ ಎಲ್ಲಾ ಕೆಜಿಎಫ್ ಪ್ರೇಕ್ಷಕರಿಗೆ ನರಾಚಿಯ ದರ್ಶನ ಮಾಡಿಸಿ, ಚಿನ್ನದ ಸಾಮ್ರಾಜ್ಯಕ್ಕೆ ಕೊಂಡೊಯ್ಯಲಿಕ್ಕೆ ಸಿನಿಮಾ ಟೀಮ್ ಕೂಡ ಸಿದ್ದತೆ ಮಾಡಿಕೊಂಡಿದೆ. ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ರಾಕಿ ಅಖಾಡಕ್ಕೆ ಇಳಿಯೋದು ಗ್ಯಾಂಗ್ ಸ್ಟರ್ ಗಳಿಂದ ಆ ಜಾಗ ತುಂಬಿದಾಗ ಮಾತ್ರ.. ಶೀಘ್ರದಲ್ಲೇ ರಾಕಿ ದರ್ಶನದ ದಿವ್ಯ ದಿನವನ್ನ ಘೋಷಣೆ ಮಾಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ರಾಕಿಭಾಯ್ ಹೇಳಿಕೇಳಿ ಮಾನ್‌ಸ್ಟರ್. ಗ್ಯಾಂಗ್ ಕಟ್ಟಿಕೊಂಡು ಬರೋದಿಲ್ಲ. ಸಿಂಗಲ್ಲಾಗಿ ಅಖಾಡಕ್ಕಿಳಿಯೋ ಮಾನ್ ಸ್ಟರ್ ನ ಸ್ವಾಗತಿಸೋಕೆ ಗ್ಯಾಂಗ್ ಸ್ಟರ್ ಗಳು ರೆಡಿಯಿರಬೇಕು. ನೀಲ್ ಅವರ ಟ್ವೀಟ್ ನ ಸೂಕ್ಷ್ಮವಾಗಿ ಗಮನಿಸಿದರೆ ಅರ್ಥ ಆಗುತ್ತೆ. ಗ್ಯಾಂಗ್ ಸ್ಟರ್ಸ್ ಅಂತ ಕರೆದಿರುವುದು ಯಾರಿಗೆ ಅಂತ. ಮಾನ್ ಸ್ಟರ್ ರಾಕಿಭಾಯ್ ಗಾಗಿ ಕಾದಿರುವ ಇಡೀ ಪ್ರೇಕ್ಷಕ ವಲಯಕ್ಕೆ ಪ್ರಶಾಂತ್ ಗ್ಯಾಂಗ್ ಸ್ಟರ್ಸ್ ಕಿರೀಟ ತೊಡಿಸಿದ್ದಾರೆ. ಹೀಗಾಗಿ, ಸಿನಿಮಾ ಹಾಲ್ ಯಾವಾಗ ಗ್ಯಾಂಗ್ ಸ್ಟಾರ್ಸ್ ಗಳಿಂದ ತುಂಬಿ ತುಳುಕುತ್ತೋ ಆಗ ರಾಕಿಭಾಯ್ ದರ್ಶನ ಆಗುತ್ತೆ ಎಂಬ ಸೂಚನೆ ಕೊಟ್ಟಿದ್ದಾರೆ.
ಚಿತ್ರಮಂದಿರ ಹೌಸ್ ಫುಲ್ ಆಗಬೇಕು ಅಂದರೆ ಸರ್ಕಾರ ದೊಡ್ಡ ಮನಸ್ಸು ಮಾಡಬೇಕು. 100 ಅಕ್ಯೂಪೆನ್ಸಿಗೆ ಅನುಮತಿ ಕೊಡಬೇಕು. ಅಷ್ಟಕ್ಕೂ, ಇನ್ನೂ ಚಿತ್ರಮಂದಿರ ಓಪನ್ ಮಾಡಲಿಕ್ಕೆ ಅವಕಾಶ ಸಿಕ್ಕಿಲ್ಲ. ಮೂರನೇ ಅನ್ ಲಾಕ್ ಪ್ರಕ್ರಿಯೆಯಲ್ಲಿ ಥಿಯೇಟರ್ ಆರಂಭಕ್ಕೆ ಅವಕಾಶ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಸಿನಿಮಾಮಂದಿ ಕಾತುರದಿಂದ ಕಾಯ್ತಿದ್ದಾರೆ.
ಒಂದು ವೇಳೆ ಥಿಯೇಟರ್ ಆರಂಭಿಸಲು ಅವಕಾಶ ಕೊಟ್ಟು 100% ಆಸನ ವ್ಯವಸ್ಥೆಗೆ ಅವಕಾಶ ನೀಡಿದರೆ ‘ಕೆಜಿಎಫ್ 2’ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಆ ಬಿಡುಗಡೆ ದಿನಾಂಕವನ್ನು ಪ್ರಶಾಂತ್ ನೀಲ್ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರೆ. ಅಲ್ಲಿವರೆಗೂ ವೇಯ್ಟ್ ಆಂಡ್ ಸೀ…
ಸಿನಿಮಾ ಅಂದರೇನೆ ಹಾಗೆ. ಅದೊಂದು ರಂಜಿಸುವ ಮಾಧ್ಯಮ. ಅದಕ್ಕೆ ನಗಿಸುವುದು ಗೊತ್ತು, ಅಳಿಸುವುದೂ ಗೊತ್ತು. ಹಾಗೆ ಒಮ್ಮೊಮ್ಮೆ ಭಾವುಕತೆಗೆ ದೂಡುವುದೂ ಗೊತ್ತು. ಕೆಲ ಸಿನಿಮಾಗಳು ಮನಸ್ಸಿಗೆ ಆಪ್ತವಾಗಿಬಿಡುತ್ತಿವೆ. ಅಂತಹ ಆಪ್ತ ಸಿನಿಮಾಗಳ ಸಾಲಿಗೆ ಈಗ “ಸಿನಿಮಾ ಬಂಡಿ” ಕೂಡ ಸೇರಿದೆ. ಹೌದು, “ಸಿನಿಮಾ ಬಂಡಿ” ಈಗ ಇತ್ತೀಚೆಗೆ ಜೋರು ಸದ್ದು ಮಾಡುತ್ತಿರುವ ಚಿತ್ರ. ದೇಶ ಮಾತ್ರವಲ್ಲ, ವಿದೇಶಿಗರು ಕೂಡ ಮೆಚ್ಚಿಕೊಳ್ಳುತ್ತಿರುವ ಚಿತ್ರ ಅನ್ನೋದು ವಿಶೇಷ. “ಸಿನಿಮಾ ಬಂಡಿ” ತೆಲುಗು ಚಿತ್ರ. ಅರೇ, ತೆಲುಗು ಚಿತ್ರದ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ. “ಸಿನಿಮಾ ಬಂಡಿ” ಚಿತ್ರದ ಹೈಲೈಟ್.
ಇದಕ್ಕೆ ಕಾರಣ, ಈ ಚಿತ್ರದಲ್ಲಿ ಕನ್ನಡದ ಪ್ರತಿಭಾವಂತರಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. “ಸಿನಿಮಾ ಬಂಡಿ” ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾಗಿದ್ದೇ ತಡ, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ. ಈ ಸಿನಿಮಾಗೆ ಪ್ರವೀಣ್ ಕಂದ್ರೆಗುಲ ನಿರ್ದೇಶಕರು. ರಾಜ್ ಮತ್ತು ಡಿಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ತೆಲುಗು ಸಿನಿಮಾ ಆಗಿದ್ದರೂ, ಈ ಚಿತ್ರದ ಹೈಲೈಟ್ ಕನ್ನಡದ ನಟ. ಹೆಸರು ವಿಕಾಸ್ ವಸಿಷ್ಠ ಇವರೊಂದಿಗೆ ಉಮಾ ಮತ್ತು ಸಿಂಧು ಎಂಬ ಕನ್ನಡದ ನಟಿಯರೂ ನಟಿಸಿದ್ದಾರೆ. ಈ ಕುರಿತಂತೆ ನಟ ವಿಕಾಸ್ ಸಿಂಹ, “ಸಿನಿಲಹರಿ” ಜೊತೆ ಒಂದಷ್ಟು ಮಾತಾಡಿದ್ದಾರೆ.
ಓವರ್ ಟು ವಿಕಾಸ್ ವಸಿಷ್ಠ… “2012 ರಲ್ಲಿ ನನ್ನ ಸಿನಿಮಾ ಜರ್ನಿ ಶುರುವಾಯ್ತು. ಈ ರಂಗಿನ ಲೋಕಕ್ಕೆ ಬರುವ ಮೊದಲು, ಒಂದು ಕಡೆ ಕೆಲಸ ಮಾಡುತ್ತಿದ್ದೆ. ಆ ಬಳಿಕ ನನಗೂ ನಟಿಸೋ ಆಸೆ ಹೆಚ್ಚಾಯ್ತು. ಆಸಕ್ತಿ ಇದ್ದುದರಿಂದ ನಾನು ಮೊದಲು “ಪಂಚರಂಗಿ ಪೊಂವ್ ಪೊಂವ್” ಸೀರಿಯಲ್‌ನಲ್ಲಿ ನಟಿಸಿದೆ. ಅದು ದಿನದ ಪಾತ್ರವಾಗಿತ್ತು. ಆ ಬಳಿಕ “ಪರಿಣಿತ”, “ಕೋಗಿಲೆ”, “ಚಕ್ರವ್ಯೂಹ”, “ಅಮ್ಮ”, “ಅವಳು”, “ಮನಸಾರೆʼ ಹೀಗೆ ಧಾರಾವಾಹಿಗಳಲ್ಲಿ ನಟಿಸುತ್ತಾ ಹೋದೆ. ಅದರ ನಡುವೆಯೇ ನನಗೆ ಸಿನಿಮಾದಲ್ಲೂ ನಟಿಸೋ ಭಾಗ್ಯ ಸಿಕ್ಕಿತು.”ಕರಾಲಿ”, “ಅರನೇ ಮೈಲಿ”, “ರಾಂಧವ” ಸಿನಿಮಾದಲ್ಲಿ ನಟಿಸಿದೆ.
ಹೀಗೆ ಮೆಲ್ಲನೆ ಕನ್ನಡ ಚಿತ್ರರಂಗದ ಜರ್ನಿ ಶುರುವಾಯ್ತು. ಹೀಗಿರುವಾಗಲೇ ನನಗೆ ತೆಲುಗಿನ “ಸಿನಿಮಾ ಬಂಡಿ”ಯಲ್ಲಿ ನಟಿಸೋ ಆವಕಾಶ ಬಂತು. ಆ ಸಿನಿಮಾ ನಿರ್ದೇಶ ಪ್ರವೀಣ್ ಕಂದ್ರೆಗುಲ ಅವರು ಮೊದಲೇ ಪರಿಚಯವಿದ್ದರು. ಅವರೊಂದಿಗೆ ತಮಿಳು ಜಾಹಿರಾತಿನಲ್ಲಿ ಕೆಲಸ ಮಾಡಿದ್ದೆ. ಹೀಗಿರುವಾಗ ಅವರು, “ಸಿನಿಮಾ ಬಂಡಿ” ಕಥೆ ಹೇಳಿದ್ದರು. ಮಾಡೋಣ ಸರ್ ಅಂದೆ. ನಿರ್ಮಾಪಕರ ಬಳಿ ಕಥೆ ಹೇಳಿದಾಗ, ಒಂದು ವಿಡಿಯೋ ಮಾಡಿಕೊಂಡು ಬನ್ನಿ ಅಂದರು. ಸರಿ, ಅಂತ, ನಿರ್ದೇಶಕರು ನಾವು ಸೇರಿ ಒಂದು ವಿಡಿಯೋ ಶೂಟ್ ಮಾಡಿಕೊಂಡು ಅವರ ಬಳಿ ಹೋದೆವು. ನೋಡಿದ ನಿರ್ಮಾಪಕರು, ಖುಷಿಯಾದರು. ಇದರಲ್ಲಿರೋ ಆರ್ಟಿಸ್ಟ್ ಇಟ್ಟುಕೊಂಡೇ ಸಿನಿಮಾ ಮಾಡಿ ಅಂದರು. ಅಲ್ಲಿಂದಲೇ “ಸಿನಿಮಾ ಬಂಡಿ” ಶುರುವಾಯ್ತು. ತೆಲುಗಿನಲ್ಲಿ ತಯಾರಾದ ಈ ಚಿತ್ರವನ್ನು ಥಿಯೇಟರ್‌ನಲ್ಲೇ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೆವು. ಆದರೆ, ಕೊರೊನಾ ಸಮಸ್ಯೆ ಹಿನ್ನೆಲೆಯಲ್ಲಿ ಎಲ್ಲವೂ ಸಾಧ್ಯವಾಗಲಿಲ್ಲ. ನೆಟ್‌ಫ್ಲಿಕ್ಸ್ ನಲ್ಲಿ ಸಿನಿಮಾ ಬಿಡುಗಡೆಯಾಯ್ತು. ಎಲ್ಲೆಡೆ ಸುದ್ದಿಯಾಯ್ತು” ಎನ್ನುತ್ತಾರೆ ವಿಕಾಸ್ ವಸಿಷ್ಠ.
“ಸಿನಿಮಾ ಬಂಡಿ” ಕುರಿತ ಅನುಭವ ಹಂಚಿಕೊಳ್ಳುವ ಅವರು, ನಿಜಕ್ಕೂ ಚಿತ್ರೀಕರಣದ ವೇಳೆ ಸಾಕಷ್ಟು ಅನುಭವ ಆಯ್ತು. ಸಾಮಾನ್ಯವಾಗಿ ಸಿನಿಮಾ ಅಂದರೆ, ದೊಡ್ಡ ಯೂನಿಟ್, ಗಜಿಬಿಜಿ ಓಡಾಟ ಕಾಮನ್. ಆದರೆ, ನಮ್ಮ ಶೂಟಿಂಗ್ ಟೈಮ್‌ನಲ್ಲಿ ಈ ರೀತಿ ಇರಲೇ ಇಲ್ಲ. ಕೇವಲ 13 ರಿಂದ 15 ಜನರನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಅದು. ಟೆಕ್ನಿಕಲಿ ಸ್ಟ್ರಾಂಗ್ ಇತ್ತು. ದೊಡ್ಡ ಕ್ಯಾಮೆರಾವನ್ನೇ ಇಲ್ಲಿ ಬಳಸಿದ್ದೆವು. ಆದರೆ, ಸಿನಿಮಾ ಡಿಮ್ಯಾಂಡ್ ಮಾಡಿದ್ದೆಲ್ಲವನ್ನೂ ನಿರ್ಮಾಪಕರು ಕೊಟ್ಟಿದ್ದರು. ನಮಗೂ ಇಷ್ಟೇ ಬೇಕು, ಇಷ್ಟು ಸಾಕು ಅಂತಂದುಕೊಂಡೇ ಕೆಲಸ ಮಾಡಿದೆವು. ಕಥೆಗಿಂತ ಹೆಚ್ಚು ಮಾಡಿದರೆ, ವೈಭವೀಕರಣ ಆಗುತ್ತೆ. ನಮಗೆ ಅಂತಹ ವೈಭವೀಕರಣ ಬೇಕಿರಲಿಲ್ಲ. ಎಲ್ಲವೂ ನ್ಯಾಚುರಲ್ ಆಗಿರಬೇಕು. ಇಲ್ಲಿ ಎಲ್ಲವೂ ನ್ಯಾಚುರಲ್ ಆಗಿಯೇ ಇತ್ತು. ದೊಡ್ಡ ಲೈಟಿಂಗ್ ಬೇಡವಾಗಿತ್ತು, ಹೆಲಿಕ್ಯಾಮ್ ಕೂಡ ಬೇಕಿರಲಿಲ್ಲ. ಒಂದೊಳ್ಳೆಯ ಸಿನಿಮಾ ಆಗೋಕೆ ಏನೆಲ್ಲಾ ಬೇಕಿತ್ತೋ ಅದನ್ನು ಇಟ್ಟುಕೊಂಡು ಸಿನಿಮಾ ಮಾಡಿದೆವು. ಒಳ್ಳೇ ಚಿತ್ರವಾಯ್ತು. ಆದರೆ, ಈ ಮಟ್ಟಕ್ಕೆ ರೀಚ್ ಆಗುತ್ತೆ ಅಂತ ಗೊತ್ತಿರಲಿಲ್ಲ. ನಿಜಕ್ಕೂ ನಮ್ಮ ಪರಿಶ್ರಮ ಈಗ ಸಾರ್ಥಕವಾಗಿದೆ. ಸುಮಾರು ೩೫ ದಿನಗಳ ಕಾಲ ಮುಳಬಾಗಿಲು ಸುತ್ತಮುತ್ತ ಶೂಟಿಂಗ್ ಮಾಡಿದ್ದೇವೆ. ಸಮೀಪದ ಉತ್ತನೂರು, ಗೊಲ್ಲಹಳ್ಳಿ, ಸುತ್ತಮುತ್ತ ಚಿತ್ರೀಕರಣ ನಡೆದಿದೆ ಎಂಬುದು ವಿಕಾಸ್ ವಸಿಷ್ಠ ಅವರ ಮಾತು.
“ಸಿನಿಮಾ ಬಂಡಿ” ಕ್ಲಿಕ್ ಆಗುತ್ತಿದ್ದಂತೆಯೇ ಅತ್ತ, ವಿಕಾಸ್ ವಸಿಷ್ಠ ಅವರಿಗೂ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿವೆ. ಸದ್ಯ ಈಗ ತೆಲುಗಿನಲ್ಲೇ ಇನ್ನೊಂದು ಸಿನಿಮಾ ಸಿಕ್ಕಿದ್ದು, ಚಿತ್ರೀಕರಣ ನಡೆಯುತ್ತಿದೆ. ಅತ್ತ, ಒಂದಷ್ಟು ವೆಬ್‌ಸೀರೀಸ್ ಕೂಡ ಪ್ಲಾನ್ ಆಗುತ್ತಿದೆಯಂತೆ. ಕನ್ನಡದಲ್ಲೂ ಎರಡು ಚಿತ್ರಗಳ ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ಅವರು. “ಸಿನಿಮಾ ಬಂಡಿ” ಚಿತ್ರಕ್ಕೆ ಮುಂಬೈ ಮೂಲದ ಅಪೂರ್ವ, ಹೈದರಾಬಾದ್‌ನ ಸಾಗರ್ ಛಾಯಾಗ್ರಹಣ ಮಾಡಿದ್ದಾರೆ. ಶರೀಶ್ ಸತ್ಯಗೋಲು ಸಂಗೀತ ನೀಡಿದರೆ, ರವಿತೇಜ, ಧರ್ಮ ಸಂಕಲನ ಮಾಡಿದ್ದಾರೆ. ವಸಂತ್ ಮರಗಂಟಿ ಕಥೆ ಬರೆದಿದ್ದಾರೆ.
ನಿರ್ದೇಶಕ ಅರವಿಂದ್ ಕೌಶಿಕ್ ಅವರು ಈಗ ಮತ್ತೊಂದು ಹೊಸ ಕಥೆಯೊಂದಿಗೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಅವರು ಒಂದಷ್ಟು ಹೊಸ ಪ್ರಯೋಗಗಳನ್ನು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಹೊಸ ಪ್ರತಿಭೆಗಳ ಹಿಂದೆಯೇ ಹೋಗಿ, ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಬಗ್ಗೆ ಇಲ್ಲಿ ಹೇಳಬೇಕಿಲ್ಲ. ಅರವಿಂದ್ ಕೌಶಿಕ್ ಅವರ ಗರಡಿಯಿಂದ ಬಂದ ಪ್ರತಿಭಾವಂತ ನಟರು ಈಗ ಸ್ಟಾರ್ ಆಗಿರುವುದುಂಟು. ಈಗ ಮತ್ತೊಂದು ಹೊಸ ಚಿತ್ರಕ್ಕೆ ಹೊಸ ಪ್ರತಿಭೆಯನ್ನು ಗಾಂಧಿನಗರಕ್ಕೆ ಪರಿಚಯಿಸುತ್ತಿದ್ದಾರೆ.
ಸ್ನೇಹಿತ್ ಗೌಡ, ಹೀರೋ
ಅಂದಹಾಗೆ, ಅರವಿಂದ್ ಕೌಶಿಕ್ ಈ ಬಾರಿ ಪಕ್ಕಾ ಪ್ಲಾನಿಂಗ್ ಮಾಡಿಕೊಂಡು ಬಂದಿದ್ದಾರೆ. ಅವರೀಗ ಸೀರಿಯಲ್ ಕಿಲ್ಲರ್ ಕಥೆ ಹೇಳೋಕೆ ಅಣಿಯಾಗಿದ್ದಾರೆ ಎಂಬುದು ವಿಶೇಷ. ಅವರ ಹೊಸ ಚಿತ್ರಕ್ಕೆ “ಗಾನ್ ಕೇಸ್” ಎಂದು ನಾಮಕರಣ ಮಾಡಲಾಗಿದೆ. ಶೀರ್ಷಿಕೆಯೇ ಒಂದು ರೀತಿ ಮಾಸ್ ಫೀಲ್ ಕೊಡುತ್ತದೆ ಅಂದಮೇಲೆ ಅವರು ಹೆಣೆದಿರುವ ಕಥೆ ಕೂಡ ಅಷ್ಟೇ ಮಜವಾಗಿರುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರದ ಮೂಲಕ ಹೊಸ ಪ್ರತಿಭೆ ಸ್ನೇಹಿತ್ ಗೌಡ ಪರಿಚಯವಾಗುತ್ತಿದ್ದಾರೆ.
ಅರವಿಂದ್ ಕೌಶಿಕ್, ನಿರ್ದೇಶಕ
ಚಿತ್ರದ ಹೀರೋ ಅವರೇ. ನಿರ್ದೇಶಕ ಅರವಿಂದ್ ಕೌಶಿಕ್ ಹೇಳುವ ಪ್ರಕಾರ, “ಸ್ನೇಹಿತ್ ಗೌಡ ಒಳ್ಳೇ ಹುಡುಗ. ತಂಬಾನೇ ನಿರೀಕ್ಷೆ ಇಟ್ಟುಕೊಳ್ಳಬಹುದಾದ ಪ್ರತಿಭೆ. ಅವರಲ್ಲಿ ಸಂಯಮ, ಶ್ರದ್ಧೆ ಇದೆ. ಎರಡು ವರ್ಷಗಳ ಕಾಲ ಸಿನಿಮಾಗೆ ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಂಡೇ ಅವರೀಗ ಹೀರೋ ಆಗೋಕೆ ಹೊರಟಿದ್ದಾರೆ. ಇನ್ನು, ಚಿತ್ರದಲ್ಲಿ ಹೀರೋನಷ್ಟೇ ಇನ್ನೊಂದು ಪ್ರಮುಖವಾದ ಪಾತ್ರವೂ ಇದೆ. ಆ ಪಾತ್ರವನ್ನು ಚಕ್ರವರ್ತಿ ಚಂದ್ರಚೂಡ ಮಾಡುತ್ತಿದ್ದಾರೆ. ಸದ್ಯಕ್ಕೆ ಚಕ್ರವರ್ತಿ ಚಂದ್ರಚೂಡ ಬಿಗ್‌ಬಾಸ್ ಮನೆಯಲ್ಲಿದ್ದಾರೆ. ಅವರು ಹೊರ ಬಂದ ಬಳಿಕವೇ, ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎಂದು ವಿವರ ಕೊಡುವ ನಿರ್ದೇಶಕ ಅರವಿಂದ್ ಕೌಶಿಕ್, ಸಿನಿಮಾ ಕುರಿತು ಹೇಳುವುದಿಷ್ಟು.
“ಇದೊಂದು ಸೀರಿಯಲ್ ಕಿಲ್ಲರ್ ಸುತ್ತ ನಡೆಯೋ ಕಥೆ. ಇಲ್ಲಿ ಸ್ನೇಹಿತ್ ಗೌಡ ಅವರು ಸೀರಿಯಲ್ ಕಿಲ್ಲರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಕ್ರವರ್ತಿ ಚಂದ್ರಚೂಡ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಹೀರೋ ಇಲ್ಲಿ ಸೀರಿಯಲ್ ಕಿಲ್ಲರ್ ಆಗೋದು ಯಾಕೆ ಅನ್ನೋದೇ ಸಸ್ಪೆನ್ಸ್. ಅವರು ಯಾಕೆ ಆ ರೀತಿ ಮಾಡ್ತಾನೆ. ಅವನ ಲೈಫಲ್ಲಿ ನಡೆದ ಆ ಘಟನೆ ಏನು ಎಂಬುದು ವಿಶೇಷ. ಒಬ್ಬ ಸೀರಿಯಲ್ ಕಿಲ್ಲರ್ ಮತ್ತು ಪೊಲೀಸ್ ಅಧಿಕಾರಿ ಮಧ್ಯೆ ನಡೆಯೋ ಜಟಾಪಟಿ ಇಲ್ಲಿ ಹೈಲೈಟ್. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್. ಸಾಮಾನ್ಯವಾಗಿ ಸೈಕಲಾಜಿಕಲ್ ಥ್ರಿಲ್ಲರ್ ಅಂದಾಕ್ಷಣ, ಎಲ್ಲರೂ ಡಾರ್ಕ್ ಆಗಿ ತೋರಿಸ್ತಾರೆ.
ಅಲ್ಲಿ ವೈಲೆಂಟು ಇರುತ್ತೆ. ಆದರೆ, ಇಲ್ಲಿ ಸೀರಿಯಲ್ ಕಿಲ್ಲರ್ ಇದ್ದರೂ, ನಾರ್ಮಲ್ ಆಗಿರುತ್ತಾನೆ. ಅವನ ಬದುಕಲ್ಲಿ ನಡೆದ ಘಟನೆಗಳಿಂದ ಅವನು ಆ ರೀತಿ ಆಗಿರುತ್ತಾನೆ. ಆ ಘಟನೆಗಳು ಏನು ಅನ್ನೋದು ಇಲ್ಲಿ ಕಥೆ. ಅಂದಹಾಗೆ, ಇದನ್ನು ಮೊದಲು ಹಿಂದಿಯಲ್ಲಿ ಚಿತ್ರೀಕರಿಸುವ ಯೋಚನೆ ಇತ್ತು. ಕೊನೆಗೆ ಕನ್ನಡ ಸೇರಿಯೂ ಮಾಡಬೇಕು ಎಂದು ನಿರ್ಧಿರಿಸಿ, ಕನ್ನಡ ಹಿಂದಿ ಭಾಷೆಯಲ್ಲಿ ತಯಾರು ಮಾಡುತ್ತಿದ್ದೇವೆ.
ಸದ್ಯಕ್ಕೆ ನಾಯಕಿಯ ಆಯ್ಕೆ ನಡೆಯಬೇಕಿದೆ. ಆ ಆಯ್ಕೆಯನ್ನು ಆಡಿಷನ್ ಮೂಲಕವೇ ಮಾಡಲಾಗುತ್ತದೆ. ಇಲ್ಲಿ ಹೊಸ ಪ್ರತಿಭೆಗೆ ಹುಡುಕಾಟ ನಡೆಯುತ್ತಿದೆ. ಚಿತ್ರದ ಕಥೆ ಹೊಸ ಮುಖವನ್ನೇ ಡಿಮ್ಯಾಂಡ್ ಮಾಡುತ್ತಿದೆ. ಬೆಂಗಳೂರಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಹಾಗಾಗಿ, ಇಲ್ಲಿಯವರನ್ನೇ ಹುಡುಕಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದು ಅರವಿಂದ್ ಕೌಶಿಕ್ ಮಾತು.
ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ “ಲಂಕೆ” ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಜುಲೈ ೬ ಯೋಗೇಶ್ ಅವರ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ “ಲಂಕೆ” ಚಿತ್ರದ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ. ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಅವರದೇ. ರಾಮ್ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.
ದಿ ಗ್ರೇಟ್ ಎಂಟರ್ ಟೈನರ್ ಬ್ಯಾನರ್‌ನಲ್ಲಿ ಪಟೇಲ್ ಶ್ರೀನಿವಾಸ್ (ನಾಗವಾರ) ಹಾಗು ಸುರೇಖ ರಾಮಪ್ರಸಾದ್ ಅವರು ನಿರ್ಮಿಸಿರುವ ಈ ಚಿತ್ರ, ಚಿತ್ರಮಂದಿರ ಆರಂಭಕ್ಕೆ ಅನುಮತಿ ಸಿಕ್ಕ ಬಳಿಕ ತೆರೆಗೆ ಅಪ್ಪಳಿಸಲಿದೆ. ಕಾರ್ತಿಕ್ ಶರ್ಮಾ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ಸ್ ಗಳಿವೆ. ರಮೇಶ್ ಬಾಬು ಛಾಯಾಗ್ರಹಣ ಮಾಡಿದ್ದಾರೆ.
ಶಿವರಾಜ್ ಮೇಹು ಸಂಕಲನವಿದೆ. ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಮಾಡಿದ್ದಾರೆ. ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕೃಷಿ ತಾಪಂಡ, ಕಾವ್ಯಾಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಇತರರು ನಟಿಸಿದ್ದಾರೆ.
ಕನ್ನಡ ಚಿತ್ರರಂಗದ ನಟ “ದುನಿಯಾ” ವಿಜಯ್ ಅವರ ತಾಯಿ ಅನಾರೋಗ್ಯದಲ್ಲಿದ್ದ ವಿಷಯ ಎಲ್ಲರಿಗೂ ಗೊತ್ತೇ ಇತ್ತು. ಈಗ ಅವರ ಸ್ಥಿತಿ ಕೊಂಚ ಗಂಭೀರವಾಗಿದೆ. ಅವರ ತಾಯಿ ನಾರಾಯಣಮ್ಮ ಅವರಿಗೆ ಕಳೆದ ಕಳೆದ 20 ದಿನಗಳಿಂದಲೂ ನಟ ವಿಜಯ್ ಅವರು ತಮ್ಮ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಬ್ರೇನ್ ಸ್ಟ್ರೋಕ್ ಆದ ಕಾರಣ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಪ್ರತಿದಿನವೂ ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೋವಿಡ್‌ನಿಂದ ದುನಿಯಾ ವಿಜಯ್ ಪೋಷಕರು ಚೇತರಿಸಿಕೊಂಡಿದ್ದರು. ಚಿಕಿತ್ಸೆ ಪಡೆದು, ಎಲ್ಲವೂ ಸರಿಹೋಯ್ತು ಎನ್ನುವ ಹೊತ್ತಲ್ಲೇ ಈಗ ವಿಜಯ್ ಅವರ ತಾಯಿ ಅವರ ಆರೋಗ್ಯ ಪುನಃ ಹದಗೆಟ್ಟಿದೆ.
ಈ ಕುರಿತಂತೆ ಹೇಳಿಕೊಂಡಿರುವ “ದುನಿಯಾ” ವಿಜಯ್ ಅವರು, “ನನ್ನ ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದೇನೆ. ನೋಡಿಕೊಳ್ಳಬೇಕು ಅನ್ನೋದಷ್ಟೇ ನನ್ನಾಸೆ. ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದ್ದರಿಂದ ಚಲನವಲನ ಇಲ್ಲದೆ, ಎಲ್ಲವೂ ಹಾಸಿಗೆಯಲ್ಲೇ ಆಗುತ್ತಿದೆ.
ಇದರಿಂದ ದಿನ ಕಳೆದಂತೆ ಅವರ ಆರೋಗ್ಯ ಹದಗೆಡುತ್ತಿದೆ. ಅವರ ಸ್ಥಿತಿ ನೋಡಿದರೆ, ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೇನೋ ಎಂಬ ಬೇಸರವಾಗುತ್ತೆ. ತಾಯಿ ನಿಜಕ್ಕೂ ಮತ್ತೆ ಸಿಗಲ್ಲ. ಇದ್ದಾಗ, ಇರೋವಾಗ ಕಣ್ಣಿಗಿನ ಜಾಸ್ತಿ ನೋಡಿಕೊಳ್ಳಬೇಕಿದೆ. ಅದೇನೆ ಇದ್ದರೂ ಅವರ ಆರೋಗ್ಯ ಮತ್ತೆ ಸರಿಯಾಗುತ್ತೆ ಎಂಬ ವಿಶ್ವಾಸ ನನಗಿದೆ” ಎಂದಿದ್ದಾರೆ ವಿಜಯ್.
ಪಶ್ಚಿಮ ಬಂಗಾಳದ ಟ್ಯಾಗೂರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಾಲಚಕ್ರಕ್ಕೆ ಜ್ಯೂರಿ ಪ್ರಶಸ್ತಿ
ನಟ ವಸಿಷ್ಠ ಸಿಂಹ ನಾಯಕರಾಗಿ ಅಭಿನಯಿಸಿರುವ ‘ಕಾಲಚಕ್ರ’ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ತೆರಡಗೆ ಬರುವ ಮೊದಲೇ ಪಶ್ಚಿಮ ಬಂಗಾಳದ ಟ್ಯಾಗೂರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ನ್ಯೂಯಾರ್ಕ್, ಪ್ಯಾರಿಸ್ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಈ ಚಿತ್ರ ಆಯ್ಕೆಯಾಗಿದ್ದು, ಸದ್ಯದಲ್ಲೇ ಪ್ರದರ್ಶನವಾಗಲಿದೆ. ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸುಮಾರು 3500 ಸಾವಿರಕ್ಕೂ ಅಧಿಕ ಚಿತ್ರಗಳು ಬಂದಿದ್ದವು . ಆ ಪೈಕಿ100 ಚಿತ್ರಗಳು ಮಾತ್ರವೇ ಆಯ್ಕೆಯಾಗಿದ್ದು, ಅದರಲ್ಲಿ ಕನ್ನಡದ “ಕಾಲಚಕ್ರ” ಚಿತ್ರ ಸಹ ಸೇರಿದೆ ಎಂದು ಹೇಳಿಕೊಂಡಿರುವ ನಿರ್ದೇಶಕ ಸುಮಂತ್ ಕ್ರಾಂತಿ, ನಮ್ಮ ಚಿತ್ರಕ್ಕೆ ಪ್ರಶಸ್ತಿ ದೊರಕುವ ಭರವಸೆ ಇದೆ ಅನ್ನುತ್ತಾರೆ.
ಸುಮಾರು 25ಕ್ಕೂ ಹೆಚ್ಚು ದೇಶಗಳ ಚಿತ್ರೋತ್ಸವಗಳಿಗೆ “ಕಾಲಚಕ್ರ” ಚಿತ್ರವನ್ನು ಕಳುಹಿಸುವ ಯೋಜನೆ ಕೂಡ ಅವರಿಗಿದೆ. ಇತ್ತೀಚೆಗೆ ಈ ಚಿತ್ರದ ರಿಮೇಕ್ ಹಕ್ಕು ಮಲಯಾಳಂ ಭಾಷೆಗೆ ಮಾರಾಟವಾಗಿದ್ದು, ಅಲ್ಲಿನ ಖ್ಯಾತ ನಿರ್ಮಾಪಕರೊಬ್ಬರು ‘ಕಾಲಚಕ್ರ’ವನ್ನು ಮಲಯಾಳಂ ನಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ವಸಿಷ್ಠ ಸಿಂಹ ನಾಲ್ಕು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ದೇಶಕ ಸುಮಂತ್ ಕ್ರಾಂತಿ ಅವರೇ ನಿರ್ಮಾಣವನ್ನು ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್, ಕವಿರಾಜ್, ಸಂತೋಷ್ ನಾಯಕ್ ಬರೆದಿದ್ದಾರೆ. ಸಂಚಿತ್ ಹೆಗ್ಡೆ, ಕೈಲಾಷ್ ಖೇರ್, ಪಂಚಮ್ ಜೀವ ಹಾಡಿದ್ದಾರೆ.
ಎಲ್ ಎಂ ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಚಿತ್ರದಲ್ಲಿದ್ದಾರೆ.
ಕನ್ನಡದಲ್ಲಿ ವರ್ಷ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಕಪೋ ಕಲ್ಪಿತ” ಚಿತ್ರವೂ ಸೇರಿದೆ. ಇದು ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಸೆನ್ಸಾರ್ ಅಂಗಳದಲ್ಲಿರುವ ಚಿತ್ರ ಸೆನ್ಸಾರ್ ಬಳಿಕ ರಿಲೀಸ್ ಆಗಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು.
ಈ ಚಿತ್ರಕ್ಕೆ ಸುಮಿತ್ರಾ ರಮೇಶ್‌ಗೌಡ ನಾಯಕಿ ಮತ್ತು ನಿರ್ದೇಶಕಿ. ತಮ್ಮ ಚೊಚ್ಚಲ ಅನುಭವ ಕುರಿತು ಹೇಳಿಕೊಂಡ ಸುಮಿತ್ರಾ, “ನಾನಿಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ. ಸ್ವಯಂ ಕಲ್ಪನೆ ಎಂಬುದು ಇದರ ಅರ್ಥ ಕೊಡುತ್ತದೆ. ಅಂದರೆ ಒಂದು ವಿಷಯವು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಇನ್ನೇನೋ ಸೇರಿಕೊಂಡಾಗ ಅದು ಸಂಶಯಕ್ಕೆ ಆಸ್ಪದ ಮಾಡಿಕೊಡುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಹಾಗೆ, ಹೀಗೆ ಅಂತೆಲ್ಲಾ ಸುದ್ದಿಗಳು ಹರಿದಾಡುತ್ತವೆ. ಆ ಕುರಿತಂತೆ ಇರುವ ಶೀರ್ಷಿಕೆ ಇದು.
ಅಂದಹಾಗೆ, ಇದೊಂದು ಹಾರರ್ ಕಥೆ ಹೊಂದಿರುವ ಸಿನಿಮಾ. ಯುವಕರ ತಂಡವೊಂದು ದೂರದ ಮನೆಗೆ ಹೋಗುತ್ತೆ. ಅಲ್ಲಿ ಭೂತವಿದೆ ಅಂತ ತಿಳಿದು ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ ಎನ್ನುವುದು ಚಿತ್ರದ ಕಥಾಹಂದರ. ಮಂಡ್ಯ ಮೂಲದ ಸುಮಿತ್ರಾ ರಮೇಶ್‌ಗೌಡ, ಈ ಹಿಂದೆ ’ಜಿಷ್ಣು’ ಸಿನಿಮಾದಲ್ಲಿ ಪಾತ್ರ ಮಾಡುವ ಜೊತೆಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆ ಅನುಭವ ಪಡೆದು ಈಗ ನಿರ್ದೇಶಕಿಯಾಗಿದ್ದಾರೆ.
ಕಿರುತೆರೆ ನಟ ಮತ್ತು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂ ಮಕ್ಕಿಹಾಲಿ ನಾಯಕರಾಗಿದ್ದಾರೆ. ನಿವೃತ್ತ ಪೋಲೀಸ್ ಅಧಿಕಾರಿಯಾಗಿ ಸಂದೀಪ್ ಮಲಾನಿ, ನಿರೂಪಕರಾಗಿ ಗೌರೀಶ್ ಅಕ್ಕಿ. ಉಳಿದಂತೆ ಶಿವರಾಜ್ ಕರ್ಕೆರ, ರಾಜೇಶ್ ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ ದೀಕ್ಷಿತ್‌ಗೌಡ ಇತರರು ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ಮಾಣದಲ್ಲಿ ಮಂಗಳೂರಿನ ಗಣಿದೇವ್ ಕಾರ್ಕಳ ಸಾಥ್ ನೀಡಿದ್ದಾರೆ.
ಬಾತುಕುಲಾಲ್ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇತರೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಗಳ ಮೇಲಿನ ಪ್ರೀತಿಗೆ ಅವರ ಪ್ರತಿಭೆ ಹೊರಸೂಸಲು ರಮೇಶ್‌ಚಿಕ್ಕೆಗೌಡ ಸವ್ಯಾಚಿ ಕ್ರಿಯೇಶನ್ಸ್ ಮೂಲಕ ಅಕ್ಷರ ಪ್ರೊಡಕ್ಷನ್ ಸಹಯೋಗದೊಂದಿಗೆ ಹಣ ಹಾಕಿದ್ದಾರೆ. ಇವರ ಜೊತೆ ಕವಿತಾ ಕನ್ನಿಕಾ ಪೂಜಾರಿ ಸಾಥ್ ಕೊಟ್ಟಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇಂದು (ಜುಲೈ ೨) ಹುಟ್ಟುಹಬ್ಬದ ಸಂಭ್ರಮ. ಹಾಗಂತ ಅವರು ಎಂದಿನಂತೆ ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿಲ್ಲ. ಕಾರಣ, ಕೊರೊನಾ. ಕೊರೊನಾ ಹಿನ್ನೆಲೆಯಲ್ಲಿ ಅವರು ಸರಳವಾಗಿಯೇ, ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೇ ಅವರು, ತಮ್ಮ ಫೇಸ್‌ಬುಕ್ ಖಾತೆ ಹಾಗೂ ಟ್ವಿಟ್ಟರ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿ, ಈ ಬಾರಿ ಹುಟ್ಟುಹಬ್ಬದ ಸಂಭ್ರಮ ಸರಳವಾಗಿರಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳು ಇದ್ದಲ್ಲೇ ಶುಭಾಶಯಗಳನ್ನು ತಿಳಿಸಿ ಎಂದು ಮನವಿ ಮಾಡಿದ್ದರು. ಅದರಂತೆಯೇ, ಅವರ ಅಪಾರ ಅಭಿಮಾನಿಗಳು, ಫೇಸ್‌ಬುಕ್ ಮೂಲಕ ಶುಭಕೋರಿದ್ದಾರೆ.
ಇನ್ನು, ಗಣೇಶ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ “ತ್ರಿಬಲ್ ರೈಡ್”, “ಗಾಳಿಪಟ ೨” ಚಿತ್ರಗಳು ಪೋಸ್ಟರ್ ರಿಲೀಸ್ ಮಾಡಿದರೆ, ಸಿಂಪಲ್ ಸುನಿ ಅವರು “ದಿ ಸ್ಟೋರಿ ಅಫ್ ರಾಯಗಢ” ಚಿತ್ರದ ಪೋಸ್ಟರ್ ರಿಲೀಸ್ ಮಾಡಲು ಅಣಿಯಾಗಿದ್ದಾರೆ. ಈ ನಡುವೆ ಗಣೇಶ್ ಅವರನ್ನು ಹೊಸ ಗೆಪಟ್‌ನಲ್ಲಿ ಕಾಣಬೇಕು ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ತಕ್ಕಂತೆಯೇ ನಿರ್ದೇಶಕ ಪ್ರಶಾಂತ್ ರಾಜ್ ಕೂಡ ಸರ್ಪ್ರೈಸ್ ಸುದ್ದಿ ನೀಡಿದ್ದಾರೆ. ಗಣೇಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಹೊಸ ಚಿತ್ರ ಘೋಷಣೆ ಮಾಡಿದ್ದಾರೆ. ಅದೊಂದು ಕ್ರೈಂ-ಥ್ರಿಲ್ಲಿಂಗ್ ಸ್ಟೋರಿ ಹೊಂದಿದ್ದು, ಗಣೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಗಣೇಶ್ ಅವರ ಸಿನಿಮಾಗಳೆಂದರೆ, ಲವ್ ಸ್ಟೋರಿ ಹೆಚ್ಚು. ಬಹುತೇಕ ರೊಮ್ಯಾಂಟಿಕ್ ಕಾಮಿಡಿ ಕಥೆಗಳಲ್ಲಿ ಕಾಣಿಸಿಕೊಂಡಿರುವ ಅವರು, ಈಗ ಕ್ರೈಂ ಥ್ರಿಲ್ಲರ್ ಕಥೆ ಹಿಂದೆ ಬರಲು ಸಜ್ಜಾಗಿದ್ದಾರೆ. ಇದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಪ್ರೊಡಕ್ಷನ್ ನಂ 7 ಹೆಸರಿನಲ್ಲಿ ಹುಟ್ಟು ಹಬ್ಬದ ವಿಶೇಷವಾಗಿ ಪೋಸ್ಟರ್ ಮಾತ್ರ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರದ ಟೈಟಲ್ ಸೇರಿದಂತೆ ಇನ್ನುಳಿದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರಂತೆ. ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ಗಣೇಶ್ ಕಾಂಬಿನೇಷನ್‌ನಲ್ಲಿ ಈಗಾಗಲೇ ಎರಡು ಸಿನಿಮಾ ಬಂದಿದೆ. ಇದು ಮೂರನೇ ಚಿತ್ರ. 2016ರಲ್ಲಿ ‘ಜೂಮ್’ ಹಾಗೂ 2018ರಲ್ಲಿ ‘ಆರೆಂಜ್’ ಚಿತ್ರ ಮಾಡಿದ್ದರು. ಈಗ ಕ್ರೈಮ್ ಥ್ರಿಲ್ಲರ್. ಜೊತೆಗೆ ಮಾಸ್ ಎಲಿಮೆಂಟ್ಸ್ ಕೂಡ ಇರಲಿದೆ.
ಒಂದು ಸಿನಿಮಾ ಅಂದಮೇಲೆ ಒಂದಲ್ಲ ಒಂದು ಸ್ಫೂರ್ತಿ ಇದ್ದೇ ಇರುತ್ತೆ. ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಬೇರೆ ಬೇರೆ ಚಿತ್ರರಂಗದಲ್ಲಿ ಬಂದು ಹೋಗಿರುವ ಅದೆಷ್ಟೋ ಕಥೆಯ ಎಳೆ ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಮಾಡಿರುವ ಉದಾಹರಣೆಗಳಿವೆ. ಇನ್ನೂ ಕೆಲವರು ಗೊತ್ತಾಗದಂತೆ ಹಾಲಿವುಡ್ ಕಥೆಗಳನ್ನೇ ಕದ್ದು ಕನ್ನಡದಲ್ಲಿ ಸಿನಿಮಾ ಮಾಡಿರುವುದೂ ಗೊತ್ತಿದೆ. ಇಲ್ಲಿ ಕಥೆ ಮಾತ್ರವಲ್ಲ, ಬೇರೆ ಭಾಷೆಯ ಪೋಸ್ಟರ್‌ಗಳನ್ನೂ ನಕಲಿ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ. ಈಗ ಇಲ್ಲೇಕೆ “ನಕಲಿ” ಪೋಸ್ಟರ್‌ಗಳ ಬಗ್ಗೆ ಮಾತು ಅಂತೀರಾ. ಪುನೀತ್ ರಾಜಕುಮಾರ್ ಅವರಿಗೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ದೇಶಕ ಲೂಸಿಯಾ ಪವನ್‌ಕುಮಾರ್ ಅವರು, “ದ್ವಿತ್ವ” ಸಿನಿಮಾ ಮಾಡುತ್ತಿರುವ ಬಗ್ಗೆ ತಮ್ಮ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲಿ ವಿಶೇಷ ಎನಿಸುವ ಪೋಸ್ಟರ್ ಕೂಡ ಹಾಕಿದ್ದರು. ಆ ವಿಭಿನ್ನ ಎನಿಸುವ ಪೋಸ್ಟರ್ ನೋಡಿದವರಿಗೂ ಒಂದು ರೀತಿ ಖುಷಿಯಾಗಿತ್ತು. ಪವನ್‌ಕುಮಾರ್, ಸದಾ ಹೊಸದೇನನ್ನೋ ಮಾಡುತ್ತಾರೆ ಎಂದು ಹೇಳುವ ಮಂದಿಗೆ, ಆ ಪೋಸ್ಟರ್ ನೋಡಿದೊಡನೆ, ಇಲ್ಲೇನೋ ಹೊಸದು ಇದ್ದೇ ಇರುತ್ತೆ ಎಂದೆನಿಸಿದ್ದು ಸುಳ್ಳಲ್ಲ.
ಪುನೀತ್ ರಾಜಕುಮಾರ್ ಅಭಿನಯದ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದೇನೋ ನಿಜ. “ದ್ವಿತ್ವ” ಚಿತ್ರದ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿರುವ ನಿರ್ದೇಶಕ ಪವನ್ ಕುಮಾರ್, ಒಂದು ಪೋಸ್ಟರ್ ಡಿಸೈನ್ ಮಾಡಿ, ಆ ಬಗ್ಗೆ ಬರೆದುಕೊಂಡಿದ್ದರು. ಅಲ್ಲದೆ, ಪೋಸ್ಟರ್ ಡಿಸೈನ್ ಬಗ್ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಬಂದಿದ್ದರಿಂದ, ಪವನ್ ಕುಮಾರ್ ಅವರು, ಆ ಡಿಸೈನ್ ಮಾಡಿದ್ದರ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. “ದ್ವಿತ್ವ” ಚಿತ್ರದ ಪೋಸ್ಟರ್ ಡಿಸೈನ್ ಮಾಡಿದ್ದು, ಆದರ್ಶ್ ಅಂತ. ಅವರು ಲೂಸಿಯಾ ಟೈಮ್‌ನಿಂದಲೂ ಜೊತೆಗಿದ್ದಾರೆ. ಒಂದೊಳ್ಳೆಯ ಡಿಸೈನ್ ಮಾಡಿದ್ದಾರೆ. ಅವರು ಯು ಟರ್ನ್, ಒಂದು ಮೊಟ್ಟೆಯ ಕಥೆ ಚಿತ್ರಗಳಲ್ಲೂ ಜೊತೆಯಾಗಿದ್ದರು ಈಗ “ದ್ವಿತ್ವ” ಪೋಸ್ಟರ್ ಮಾಡಿದ್ದಾರೆ ಅಂತ ಡಿಸೈನರ್ ಆದರ್ಶ್ ಅವರ ಕ್ರಿಯೇಟ್ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ, ಅಸಲಿಗೆ, ಆ ಪೋಸ್ಟರ್ ಡಿಸೈನರ್ ಆದರ್ಶ್ ಮಾಡಿದ್ದು ಕೂಡ ಕಾಪಿ! ಹೌದು, ಈಗಾಗಲೇ ಎಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ ಇದು.
ಯಾರೋ ಮಾಡಿದ ಡಿಸೈನ್ ಇಟ್ಟುಕೊಂಡು ಆದರ್ಶ, ಪುನೀತ್ ಅವರ ಫೋಟೋ ಬಳಸಿ ಮಾಡಿದ್ದಾರೆ. ಮೂಲ ಪೋಸ್ಟರ್ ಹಾಕಿ ಪೋಸ್ಟ್ ಮಾಡಿರುವ ನೆಟ್ಟಿಗರು, ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್ ಯಾವುದು ಗೊತ್ತಾ?
ದ್ವಿತ್ವ ಪೋಸ್ಟರ್ ಹೋಲುವಂತೆ ವೈರಲ್ ಆಗಿರುವ ಫೋಟೋ ಸೌಂಡ್‌ಕ್ಲೌಡ್ ಎಂಬ ಪಾಡ್‌ಕಾಸ್ಟ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಇದೊಂದು ಮ್ಯೂಸಿಕ್ ಮತ್ತು ಆಡಿಯೋ ಪ್ಲಾಟ್‌ಫಾರ್ಮ್ ಆಗಿದ್ದು, ಇದರಲ್ಲಿ ನೀಡಿರುವ ಜಾಹೀರಾತಿನಲ್ಲಿ ಈ ಫೋಟೋ ಡಿಸೈನ್ ಇದೆ. ಥೇಟ್ ದ್ವಿತ್ವ ಚಿತ್ರದ ಪೋಸ್ಟರ್‌ನಂತೆ ಇದೆ. ಸದ್ಯಕ್ಕೆ ಈ ಪೋಸ್ಟರ್ ಸಾಕಷ್ಟು ಸುದ್ದಿಯಾಗಿದೆ.
ಫೇಸ್‌ಬುಕ್‌ನಲ್ಲಿ ಸಿನಿಪ್ರೇಮಿ ಹರೀಶ್ ಗೌಡ ಎನ್ನುವವರು, “ಡಿಸೈನ್ ಕಾಪಿ ಆದ್ರೂ ಪರವಾಗಿಲ್ಲ, ಸಿನಿಮಾ ಒರಿಜಿಲ್ ಆಗಿರ್ಲಿ” (ಡೈರೆಕ್ಟ್ರು ಬುದ್ಧಿವಂತಿಕೆಯಿಂದ ನಿನ್ನೆನೆ ಪೋಸ್ಟರ್ ಡಿಸೈನ್ ಪೂರ್ತಿ ಕ್ರೆಡಿಟ್‌ನ ಡಿಸೈನರ್‌ಗೆ ಕೊಟ್ಟಿದ್ದಾರೆ) ಎಂದು ಬರೆದುಕೊಂಡಿದ್ದಾರೆ. ಅದೇನೆ ಇರಲಿ, ಕಾಪಿ ಮಾಡೋದು ತಪ್ಪೋ, ಸರಿನಾ ಗೊತ್ತಿಲ್ಲ. ಪವನ್‌ಕುಮಾರ್ ಕಥೆ ಚೆನ್ನಾಗಿ ಕಟ್ಟಿಕೊಟ್ಟರೆ ಸಾಕು ಅನ್ನೋದು ಅಪ್ಪು ಫ್ಯಾನ್ಸ್ ಮಾತು. ಅಂದಹಾಗೆ, ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನುಳಿದಂತೆ ಬೇರೆ ಕಲಾವಿದರು, ತಾಂತ್ರಿಕ ವರ್ಗದವರ ಆಯ್ಕೆ ಪ್ರಕ್ರಿಯ ನಡೆಯಬೇಕಿದೆ. ಸೆಪ್ಟೆಂಬರ್‌ನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.