ಸದ್ಯ ಸಲಗ ಜೋರು ಸದ್ದು ಮಾಡುತ್ತಿದೆ. ಅದರ ಬಗೆಗಿನ ಸುದ್ದಿಯೂ ಸಹ ಸಾಕಷ್ಟು ಕಡೆ ಚರ್ಚೆಯಾಗುತ್ತಿದೆ. ಸಲಗ ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದಿರುವುದು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ, ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆಯೇ ಒಂದು ಸುದ್ದಿ ಜೋರಾಗಿ ಓಡುತ್ತಿದ್ದು, ಬಹಳಷ್ಟು ಮಂದಿ ಕನ್‌ಫ್ಯೂಷನ್ ಮಾಡಿಕೊಂಡಿದ್ದಾರೆ. ಹಾಗಾದರೆ, ಆ ಸುದ್ದಿ ಏನು ಗೊತ್ತಾ? ಸಲಗ ಸಿನಿಮಾ ಒಟಿಟಿಯಲ್ಲಿ ಬರಲಿದೆ ಎಂಬ ಸುದ್ದಿಯೇ ಆ ಗೊಂದಲಗಳಿಗೆ ಕಾರಣ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಸ್ವತಃ ದುನಿಯಾ ವಿಜಯ್ ಅವರೇ ಯಾವುದೇ ಕಾರಣಕ್ಕೂ ಸಿನಿಮಾ ಒಟಿಟಿಗೆ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಲಗ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದನ್ನ ಸಹಿಸಿಕೊಳ್ಳಲಾಗದ ಕೆಲ ಕಿಡಿಗೇಡಿಗಳು ಸಿನಿಮಾ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ದುನಿಯಾ ವಿಜಯ್ ಪ್ರತಿಕ್ರಿಯೆ ಹೀಗಿದೆ. “ಕಳೆದ ವಾರ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ. ಒಳ್ಳೆಯ ಕಲೆಕ್ಷನ್ ಕೂಡ ಆಗುತ್ತಿದೆ. ಇಷ್ಟಿದ್ದರೂ, ಸಿನಿಮಾ ಓಟಿಟಿಯಲ್ಲಿ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಯಾವುದೇ ಸಲಗ ಓಟಿಟಿಯಲ್ಲಿ ಬರುವುದಿಲ್ಲ. ಚಿತ್ರಮಂದಿರದಲ್ಲೇ ಸಿನಿಮಾ ಇರಲಿದೆ. ಅಲ್ಲೇ ಸಿನಿಮಾ ನೋಡಿ ಎಂದಿದ್ದಾರೆ ವಿಜಯ್.
“ನಾವು ಸಿನಿಮಾ ಮಾಡಿದ್ದು ಥಿಯೇಟರ್‌ನಲ್ಲಿ ರಿಲೀಸ್ ಮಾಡಲು. ಓಟಿಟಿಯಲ್ಲಿ ರಿಲೀಸ್ ಮಾಡೋದಾಗಿದ್ರೆ, ಇಷ್ಟು ದಿನ ಕಾಯುತ್ತಿರಲಿಲ್ಲ. ಓಟಿಟಿಯಲ್ಲಿ ಸಿನಿಮಾ ಬಿಡುಗಡೆಗೆ ಕೇಳಿದಾಗಲೂ ನಾವು ಕೊಡಲ್ಲ ಎಂದಿದ್ದೆವು. ಸಲಗ ಚಿತ್ರ ಥಿಯೇಟರ್‌ನಲ್ಲೆ ಪ್ರದರ್ಶನ ಕಾಣುತ್ತೆ. ಯಾರು ಕೂಡ ಈ ಸುದ್ದಿಗೆ ಕಿವಿ ಕೊಡಬೇಡಿ. ಹೀಗೆ ಸುಳ್ಳು ಸುದ್ದಿಯನ್ನು ಹರಡುವ ಹುಳಗಳು ಇದ್ದೇ ಇರುತ್ತವೆʼ ಎಂದಿರುವ ವಿಜಯ್, ನಾನು ಸಲಗ ಚಿತ್ರ ನಿರ್ದೇಶನ ಮಾಡಲು ತೀರ್ಮಾನಿಸಿದಾಗಲೇ ಒಂದು ಕನಸು ಕಂಡಿದ್ದೆ. ಸಲಗ ಚಿತ್ರಮಂದಿರದಲ್ಲೇ ರಿಲೀಸ್ ಆಗಬೇಕು ಅಂತ. ಆ ಆಸೆ ಈಡೇರಿದೆ. ಇಂತಹ ಸುಳ್ಳು ಸುದ್ದಿ ಬಗ್ಗೆ ನಾವು ಕೇರ್ ಮಾಡಲ್ಲ, ಪ್ರೇಕ್ಷಕರು ನಮ್ಮೊಂದಿಗೆ ಇದ್ದಾಗ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ ಅವರು.
ಇತಿಹಾಸ ಬರೆಯೋದು ಅಂದರೆ ಹಿಂದ್ಯಾರೋ ಮಹಾ ಪುರುಷರು ಬರೆದಿರುವ ಇತಿಹಾಸವನ್ನು ಬ್ರೇಕ್ ಮಾಡಿ ಬೀಗೋದಲ್ಲ. ಹಿಂದೆಂದೂ ಬೇರ‍್ಯಾರು ಕೆತ್ತಿರದ ಇತಿಹಾಸಕ್ಕೆ ಸಾಕ್ಷಿಯಾಗೋದು ನಯಾ ಇತಿಹಾಸ. ಇಂತಹದ್ದೊಂದು ಹಿಸ್ಟ್ರಿಯ ಸೃಷ್ಟಿಗೆ ಕನ್ನಡದ ಹೆಮ್ಮೆಯ ಲಹರಿ ಮ್ಯೂಸಿಕ್ ಸಂಸ್ಥೆ ಕಾರಣವಾಗಿದೆ. ಇಡೀ ಭಾರತದಲ್ಲಿ ಇಲ್ಲಿವರೆಗೂ ಯಾರೂ ಕೆತ್ತದ ಹಿಸ್ಟ್ರಿಯನ್ನು ಕೆತ್ತಿ, ಕನ್ನಡಿಗರು ಎದೆಯುಬ್ಬಿಸುವಂತೆ ಮಾಡಿದೆ. ಹಾಗಾದ್ರೆ ಮತ್ಯಾಕ್ ತಡ `ಲಹರಿ’ ಕಂಪೆನಿಯ ನಯಾ ಇತಿಹಾಸ ನಿಮ್ಮ ಮುಂದೆ ನೋಡಿ
ಕಳೆದ ನಾಲ್ಕುವರೆ ದಶಕಗಳ ಸಂಗೀತ ಸೇವೆಯಲ್ಲಿರುವ ಈ ಲಹರಿ ಸಂಸ್ಥೆ, ಕರುನಾಡಿನ ಆರೂವರೆ ಕೋಟಿ ಕನ್ನಡಿಗರ ನಾಡಿಮಿಡಿತ. ಕನ್ನಡ ನಾಡು-ನುಡಿ-ನೆಲ-ಜಲ ಹೇಗೆ ಕನ್ನಡಿಗರ ಪ್ರಾಣವೋ, ಹಾಗೆಯೇ ಲಹರಿ' ಮ್ಯೂಸಿಕ್ ಸಂಸ್ಥೆ ಕನ್ನಡಿಗರ ಉಸಿರು ಜೊತೆಗೆ ಹೃದಯಕ್ಕೆ ಹತ್ತಿರವಾಗಿರುವ, ಭಾವನೆಗಳೊಟ್ಟಿಗೆ ಬೆಸೆದುಕೊಂಡಿರುವ ಆಡಿಯೋ ಸಂಸ್ಥೆ. ಅಂದ್ಹಾಗೇ, ಈ ಸಂಸ್ಥೆ ಇವತ್ತು ಇಡೀ ಜಗತ್ತು ಹಿಂತಿರುಗಿ ನೋಡುವಂತೆ ಬೆಳೆದಿದೆ. ಇಂತಹ ಅತ್ಯದ್ಬುತ- ಅಮೋಘ-ಅವಿಸ್ಮರಣೀಯ ಸಾಧನೆಗೆ ಕರುನಾಡಿನ ಆರೂವರೆ ಕೋಟಿಯ ಜನತೆಯ ಪ್ರೀತಿ-ಪ್ರೋತ್ಸಾಹ-ಆಶೀರ್ವಾದ ಮತ್ತು ಹಾರೈಕೆಯೇ ಕಾರಣ ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆಲಹರಿ’ ಸಂಸ್ಥೆಯ ಸಂಸ್ಥಾಪಕರಾದ ಲಹರಿ ವೇಲು ಮತ್ತು ಅವರ ಸಹೋದರ ಮನೋಹರ ನಾಯ್ಡು.
ಲಹರಿ' ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿರುವಂತಹ ಸಂಗೀತ ಸಂಸ್ಥೆ. ಸಿನಿಮಾ ಸಂಗೀತ ಮಾತ್ರವಲ್ಲದೇ ಭಾವಗೀತೆ-ಜಾನಪದಗೀತೆಗಳ ಆಡಿಯೋದ ಮೂಲಕ ಮ್ಯೂಸಿಕ್ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ.ಲಹರಿ’ ಮ್ಯೂಸಿಕ್ ಕನ್ನಡಿಗರನ್ನು ಮಾತ್ರವಲ್ಲ ಜಗತ್ತಿನಾದ್ಯಂತ ಕೋಟಿ ಕೋಟಿ ಮಂದಿಯ ಹೃದಯ ತಲುಪಿರುವುದು ಒಂದು ರೀತಿಯ ಮೈಲುಗಲ್ಲೇ ಸರೀ. ಇತ್ತೀಚೆಗಷ್ಟೇ, ಲಹರಿ ಮುಡಿಗೆ ಯೂಟ್ಯೂಬ್ ಲೋಕ ವಜ್ರದ ಕಿರೀಟವನ್ನೇ ತೊಡಿಸಿ ಸಂಭ್ರಮಿಸಿತ್ತು. ಒಂದು ಕೋಟಿ 18 ಲಕ್ಷ ಚಂದದಾರರನ್ನು ಸಂಪಾದಿಸುವ ಮೂಲಕ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್' ಹೊಸ ದಾಖಲೆಯನ್ನು ಬರೆದಿತ್ತು. ಇದೀಗ ಮಗದೊಂದು ಮೈಲ್‌ಸ್ಟೋನ್‌ಗೆ ಲಹರಿ ಯೂಟ್ಯೂಬ್ ಲೋಕ’ ಕಾರಣವಾಗಿದೆ.
ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್' ಜೊತೆಗೆ ಲಹರಿ ಭಾವಗೀತೆಗಳು ಅಂಡ್ ಫೋಕ್’ ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾರೆ. ಚಿತ್ರಗೀತೆಗಳಿಗೆ ಸೀಮಿತವಾಗದೇ ಕನ್ನಡದ ಭಾವಗೀತೆಗಳು ಹಾಗೂ ಜಾನಪದ ಗೀತೆಗಳನ್ನು ಜನಮನಕ್ಕೆ ತಲುಪಿಸಿ ಕನ್ನಡದ ಕಲೆ ಮತ್ತು ಸಂಗೀತವನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಹೋಗುವಂತಹ ಕೆಲಸವನ್ನು ಲಹರಿ' ಆಡಿಯೋ ಕಂಪೆನಿ ಮಾಡ್ತಿದೆ.
ಕನ್ನಡದ ಹಿರಿಮೆ ಹಾಗೂ ಗರಿಮೆಯನ್ನು ಹೆಚ್ಚಾಗುವಂತೆ ಮಾಡ್ತಿರುವ ಲಹರಿ ಸಂಸ್ಥೆಯ ಈ ಕಾರ್ಯಕ್ಕೆ ದೇಶಿ ಹಾಗೂ ವಿದೇಶಿ ಕನ್ನಡಿಗರು ಕೂಡ ಸಪೋರ್ಟ್ ಮಾಡ್ತಿದ್ದಾರೆ.ಲಹರಿ ಭಾವಗೀತೆಗಳು ಅಂಡ್ ಫೋಕ್’ ಯೂಟ್ಯೂಬ್ ಚಾನೆಲ್‌ಗೆ ವಿಸಿಟ್ ಮಾಡಿ ಹಾಡುಗಳನ್ನು ಕೇಳೋದಲ್ಲದೇ ಸಬ್‌ಸ್ಕ್ರೈಬ್ ಕೂಡ ಮಾಡ್ತಿದ್ದಾರೆ. ಹೀಗಾಗಿಯೇ, ಚಂದದಾರರ ಸಂಖ್ಯೆ ಹೆಚ್ಚಾಗ್ತಿದೆ, ಇಲ್ಲಿಗೆ ೧೦ ಲಕ್ಷ ಜನ ಸಬ್‌ಸ್ಕ್ರೈಬ್ ಮಾಡಿದ್ದಾರೆ. ಯೂಟ್ಯೂಬ್ ಕಡೆಯಿಂದ ಚಿನ್ನದ ಹಾರ ಬರುವಂತೆ ಮಾಡಿದ್ದಾರೆ.
ಎಲ್ಲರಿಗೂ ನಾವು ಚಿರಋಣಿ ಹೌದು, ಲಹರಿ ಭಾವಗೀತೆಗಳು ಅಂಡ್ ಫೋಕ್' ಯೂಟ್ಯೂಬ್ ಚಾನೆಲ್‌ಗೆ 10 ಲಕ್ಷ ಜನ ಸಬ್‌ಸ್ಕ್ರೈಬರ್ಸ್ ಆಗಿರುವ ಹಿನ್ನಲೆಯಲ್ಲಿ ಯೂಟ್ಯೂಬ್ ಕಡೆಯಿಂದ ಚಿನ್ನದ ಕಿರೀಟ ಸಿಗುತ್ತಿದೆ. ಕನ್ನಡ ರಾಜ್ಯೋತ್ಸವದಂದು ಚಿನ್ನದ ಅವಾರ್ಡ್ ಕೊಡಲಿಕ್ಕೆ ಯೂಟ್ಯೂಬ್ ಲೋಕ ಕೂಡ ಸಕಲ ತಯ್ಯಾರಿ ಮಾಡಿಕೊಂಡಿದೆ. ಈ ಖುಷಿಯ ಸಂಗತಿಯ ಬಗ್ಗೆಸಿನಿಲಹರಿ’ ಜೊತೆ ಮಾಹಿತಿ ಹಂಚಿಕೊಂಡ ಲಹರಿ' ಸಂಸ್ಥೆಯ ಮಾಲೀಕರಾದ ವೇಲು ಅವರು, ಯೂಟ್ಯೂಬ್ ಕಡೆಯಿಂದ ಚಿನ್ನದ ಅವಾರ್ಡ್ ಸಿಕ್ತಿರುವುದು ಕನ್ನಡಿಗರಿಂದ, ಹೀಗಾಗಿ ನಾವು ಅದನ್ನುಕರ್ನಾಟಕದ ಹೆಮ್ಮೆಯ ಪ್ರಶಸ್ತಿ’ ಅಂತ ಕರೆಯಲಿಕ್ಕೆ ಇಷ್ಟಪಡುತ್ತೇವೆ ಎಂದರು.
45 ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಸಾರ್ಥಕತೆ ಸಿಗ್ತು. ಈ ಸಂದರ್ಭದಲ್ಲಿ, ಕುವೆಂಪು, ದ.ರಾ ಬೇಂದ್ರೆ, ನಿಸಾರ್ ಅಹಮ್ಮದ್, ದಿವಂಗತ ಕಾಳಿಂಗರಾಯರು, ದಿವಂಗತ ಅನಂತ್‌ಸ್ವಾಮಿಯವರು, ದಿವಂಗತ ಸಿ ಅಶ್ವತ್ಥ್, ರತ್ನಮಾಲ ಪ್ರಕಾಶ್, ಬಿ.ಕೆ ಸುಮಿತ್ರ, ಬಿ, ಆರ್ ಛಾಯ, ಎಂ.ಡಿ ಪಲ್ಲವಿ, ಅರ್ಚನ ಉಡುಪ, ನರಸಿಂಹ ನಾಯಕ್, ಯಶ್ವಂತ್ ಹಳಿಬಂಡಿ, ಅಬ್ಬಗೆರೆ ತಿಮ್ಮರಾಜು , ಪಿಚ್ಚಳ್ಳಿ ಶ್ರೀನಿವಾಸ್, ಮಂಜುಳ ಗುರುರಾಜ್, ಬಿಕೆ ಸುಮಿತ್ರ, ಗುರುರಾಜ್ ಹೊಸಕೋಟೆ, ಬಿ.ವಿ ಶ್ರೀನಿವಾಸ್ ಸೇರಿದಂತೆ ಕನ್ನಡಕ್ಕಾಗಿ ಶ್ರಮಿಸಿದ ಎಲ್ಲಾ ಕವಿಗಳು-ಕಾದಂಬರಿಕಾರರು-ಸಾಹಿತಿಗಳು-ಸಂಗೀತ ನಿರ್ದೇಶಕರು-ಗಾಯಕ-ಗಾಯಕಿಯರು ಎಲ್ಲರನ್ನೂ ನೆನೆಯುತ್ತೇವೆ, ಚಿರಋಣಿಯಾಗಿರುತ್ತೇವೆ ಎಂದರು.
ಇದು ಭಾರತದಲ್ಲೇ ದಾಖಲೆ! ಅಚ್ಚರಿ ಅಂದರೆ, ಕನ್ನಡದ ಭಾವಗೀತೆ ಮತ್ತು ಜಾನಪದ ಗೀತೆಗಳ ಇತಿಹಾಸದಲ್ಲಿ ಯೂಟ್ಯೂಬ್‌ಗೆ 10 ಲಕ್ಷ ಸಬ್‌ಸ್ಕ್ರೈಬ್ ಆಗಿರುವುದು ಇಡೀ ಭಾರತದ ದೇಶದಲ್ಲೇ ಇದೇ ಮೊದಲು. ಪ್ರಾದೇಶಿಕ ಭಾಷೆಯಲ್ಲಿ ಈ ತರಹದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಯಾವ ಯೂಟ್ಯೂಬ್‌ಗೂ ಕೂಡ ೧೦ ಲಕ್ಷ ಮಂದಿ ಚಂದದಾರರಿಲ್ಲ. ಆದರೆ, ನಮ್ಮ ಕನ್ನಡ ಭಾಷೆಯ ಜಾನಪದ ಹಾಗೂ ಭಾವಗೀತೆಯನ್ನು ಪ್ರಸಾರ ಮಾಡುವ ಲಹರಿ' ಯೂಟ್ಯೂಬ್‌ಗೆ 10 ಲಕ್ಷ ಮಂದಿ ಸಬ್‌ಸ್ಕ್ರೈಬ್ ಆಗಿದ್ದಾರೆ. ಅಂದ್ಹಾಗೇ ಇದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಆದಂತಹ ಸಾಧನೆ ಅಲ್ಲ. ಯೂಟ್ಯೂಬ್ ಲೋಕಕ್ಕಾಗಿಲಹರಿ’ ತಂಡ ಬರೋಬ್ಬರಿ ಹತ್ತು ವರ್ಷಗಳ ಕಾಲ ಬೆವರು ಸುರಿಸಿ ದುಡಿದಿದೆ.
ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡಿದ್ದರಿಂದಲೇ ಇಂತಹ ಪ್ರತಿಫಲ ಸಿಕ್ಕಿದೆ. ಆರುವರೆ ಕೋಟಿ ಕನ್ನಡಿಗರು ಲಹರಿ' ಆಡಿಯೋ ಕಂಪೆನಿಯನ್ನು ಎತ್ತಿಹಿಡಿದಿದ್ದಾರೆ. ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಇಲ್ಲಿಯವರೆಗೆ 36 ಕೋಟಿ ಜನ ಕೇಳಿದ್ದಾರೆ. ಇಷ್ಟು ದೊಡ್ಡ ಮಟ್ಟದ ವೀವರ್‌ಶಿಪ್ ಪ್ರೀತಿ ಮತ್ತು ಪ್ರೋತ್ಸಾಹದಿಂದ ಹೊಸ ಹುರುಪು ಸಿಕ್ಕಿದೆ. ಮತ್ತಷ್ಟು ಸಾಧನೆಗೆ ದಾರಿಯಾಗಿದೆ ಎಂದರು ಲಹರಿ ಮಾಲೀಕರಾದ ವೇಲು ಅವರು. ಎನಿವೇ, ಈ ಜಗತ್ತಿನಲ್ಲಿ ಹಿಸ್ಟ್ರಿನಾ ಫಾಲೋ ಮಾಡೋರು ಇದ್ದಾರೆ, ಹಿಸ್ಟ್ರಿನಾ ಬ್ರೇಕ್ ಮಾಡೋರು ಇದ್ದಾರೆ, ಹಿಸ್ಟ್ರಿನಾ ಸೃಷ್ಟಿ ಮಾಡೋರು ಇದ್ದಾರೆ. ಇವರುಗಳ ಪೈಕಿಲಹರಿ’ ಆಡಿಯೋ ಕಂಪೆನಿಯವರು ಹೊಸ ಹೊಸ ಹಿಸ್ಟ್ರಿಯ ಸೃಷ್ಟಿಕರ್ತರು. ಅವರುಗಳ ಸಾಧನೆ ಹಿಂಗೆ ಮುಂದುವರೆಯಲಿ ಅನ್ನೋದು “ಸಿನಿಲಹರಿ” ಅಶಯ.
ದುಬೈನ ಡೇರಾ ಪ್ರಾಂತ್ಯದಲ್ಲಿ ನಿರ್ದೇಶಕ ಸುಧೀರ್ ಅತ್ತಾವರ್ ಅವರ ಕನಸಿನ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ಶುರುವಾಗಿದೆ. ಇತ್ತೀಚೆಗೆ ದುಬೈ ನ ಖ್ಯಾತ ರೇಡಿಯೋ ವೈಬ್ FM 105.4ನ ಚಾನೆಲ್ ಹೆಡ್ ಸೈಯದ್ ಹರ್ಷದ್, ಅಂತಾರಾಷ್ಟ್ರೀಯ ಉರ್ದು ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ತಾರೀಕ್ ಫೈಜೀ ಮತ್ತು ಸಿನಿಮಾ ನಟ ಹುಸೇನ್ ದುಬೈನ ಖ್ಯಾತ ರಂಗ ಕರ್ಮಿ ಡಾ. ಫರ್ಹದ್ ಚೌಧರಿ ಅವರು ಆಗಮಿಸಿ “ಸಕ್ಸಸ್ ಫಿಲ್ಮ್ಸ್” ಸಂಸ್ಥೆಯ ನೂತನ ಕಚೇರಿಗೆ ಶುಭಕೋರಿದ್ದಾರೆ
ಸುಧೀರ್ ಅತ್ತಾವರ್… ಈ ಹೆಸರು ಕೇಳಿದಾಕ್ಷಣ ಥಟ್ಟನೆ ನೆನಪಾಗೋದೇ “ಮರಳಿ ಮರೆಯಾಗಿ…” ಎಂಬ ಅದ್ಭುತ ಗೀತೆ. ಹೌದು, ಇಂತಹ ಅದೆಷ್ಟೋ ಜನಪ್ರಿಯ ಹಾಡುಗಳನ್ನು ಗೀಚಿದ ಸುಧೀರ್ ಅತ್ತಾವರ್, ಬರೀ ಗೀತ ಸಾಹಿತಿಯಲ್ಲ, ಅವರೊಬ್ಬ ಸೂಕ್ಷ್ಮ ಸಂವೇದನೆಯ ನಿರ್ದೇಶಕ. ನೈಜತೆಗೆ ಹೆಚ್ಚು ಒತ್ತು ಕೊಡುವ ಸುಧೀರ್, ಕನ್ನಡ ಮಾತ್ರವಲ್ಲ, ಮರಾಠಿ ಮತ್ತು ಬಾಲಿವುಡ್ ಸಿನಿಮಾಗಳಿಗೂ ಆಕ್ಷನ್-ಕಟ್ ಹೇಳಿದ್ದಾರೆ. ಕನ್ನಡದ ಅಪ್ಪಟ ಪ್ರತಿಭೆ ಸುಧೀರ್ ಅತ್ತಾವರ್, ಬಾಲಿವುಡ್ ಅಂಗಳದಲ್ಲಷ್ಟೇ ಅಲ್ಲ, ಈಗ ಸಾಗರದಾಚೆಗೂ ತನ್ನ ಪ್ರತಿಭೆಯನ್ನು ವಿಸ್ತರಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ನತ್ತ ಪಯಣ ಬೆಳೆಸಿದ ಸುಧೀರ್ ಅತ್ತಾವರ್, ಅಲ್ಲೇ ಗಟ್ಟಿ ನೆಲೆ ಕಾಣಬೇಕು ಎಂಬ ಉದ್ದೇಶದಿಂದ ಮರಾಠಿ ಸಿನಿಮಾಗಳ ಜೊತೆ ಹಿಂದಿ ಸಿನಿಮಾಗಳ ಮೇಲೂ ಒಲವು ತೋರಿಸಿ ಅಲ್ಲಿ ನಿರ್ದೇಶನಕ್ಕಿಳಿದರು. ಜೊತೆ ಜೊತೆಯಲ್ಲಿ ಅವರು ಮುಂಬೈನಲ್ಲಿ ಸಕ್ಸಸ್ ಫಿಲ್ಮ್ಸ್ ಸಂಸ್ಥೆಯನ್ನೂ ಸ್ಥಾಪಿಸಿದರು. ಇಂಡಿಯಾಕ್ಕೆ ಸೀಮಿತವಾಗಿದ್ದ ಅವರ ಸಕ್ಸಸ್ ಫಿಲ್ಮ್ಸ್ ಇದೀಗ ತನ್ನ ಕಾರ್ಯ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿಕೊಂಡಿದೆ ಎನ್ನುವುದೇ ಹೆಮ್ಮೆಯ ವಿಷಯ.
ಸಹಜವಾಗಿಯೇ ಇದು ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗಷ್ಟೇ ಅಲ್ಲ, ಅವರ ಬಳಗ ಮತ್ತು ಗೆಳೆಯರಿಗೂ ಸಂಭ್ರಮದ ವಿಷಯವೇ ಸರಿ. ಸುಧೀರ್ ಅತ್ತಾವರ್ ಅವರ ಸಕ್ಸಸ್ ಕನಸು ಈಗ ದುಬೈನಲ್ಲೂ ನನಸಾಗಿದೆ ಅನ್ನೋದೇ ಹೆಮ್ಮೆ. ಯುಎಇಯ ದುಬೈನಲ್ಲಿ ಅವರು ತಮ್ಮ ಪ್ರೀತಿಯ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ದುಬೈನ ಡೇರಾ ಪ್ರಾಂತ್ಯದಲ್ಲಿ ಅವರು ಈ ತಮ್ಮ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ದುಬೈ ನ ಖ್ಯಾತ ರೇಡಿಯೋ ವೈಬ್ FM 105.4ನ ಚಾನೆಲ್ ಹೆಡ್ ಸೈಯದ್ ಹರ್ಷದ್, ಅಂತಾರಾಷ್ಟ್ರೀಯ ಉರ್ದು ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ತಾರೀಕ್ ಫೈಜೀ ಮತ್ತು ಸಿನಿಮಾ ನಟ ಹುಸೇನ್ ದುಬೈನ ಖ್ಯಾತ ರಂಗ ಕರ್ಮಿ ಡಾ. ಫರ್ಹದ್ ಚೌಧರಿ ಅವರು ಸುಧೀರ್ ಅತ್ತಾವರ್ ಅವರ ಪ್ರೀತಿಯ ಆಹ್ವಾನದ ಮೇರೆಗೆ, “ಸಕ್ಸಸ್ ಫಿಲ್ಮ್ಸ್” ಸಂಸ್ಥೆಯ ನೂತನ ಕಚೇರಿಗೆ ಆಗಮಿಸಿ, ಶುಭಕೋರಿದ್ದಾರೆ. ಈ ವೇಳೆ ಕನ್ನಡಿಗ ಸುಧೀರ್ ಅತ್ತಾವರ್ ಅವರೆಲ್ಲರನ್ನೂ ಅಷ್ಟೇ ಪ್ರೀತಿಯಿಂದ ಸ್ವಾಗತಿಸಿ, ತಮ್ಮ ಸಂಸ್ಥೆಯ ಕೆಲಸ ಕಾರ್ಯಗಳ ಕುರಿತು ತಿಳಿಸಿಕೊಟ್ಟರು.
ದುಬೈನಲ್ಲಿ ಮಹತ್ವಾಕಾಂಕ್ಷೆ ಯೋಜನೆ! ಇದೇ ಮೊದಲ ಬಾರಿಗೆ ಕನ್ನಡಿಗರೊಬ್ಬರೂ ಅದರಲ್ಲೂ ಸದಾ ಸಿನಿಮಾವನ್ನೇ ಧ್ಯಾನಿಸುವ ಸೂಕ್ಷ್ಮ ಸಂವೇದನೆಯ ನಿರ್ದೇಶಕರೊಬ್ಬರು ದುಬೈನಲ್ಲಿ ಸಿನಿಮಾ ಸ್ಟುಡಿಯೋ ಮತ್ತು ಪ್ರೊಡಕ್ಷನ್ ಹೌಸ್ ಆರಂಭಿಸಿರುವುದು ಹೆಮ್ಮೆಯ ವಿಷಯ. ಇನ್ನು, ಇದೇ ಸಂದರ್ಭದಲ್ಲಿ www.success films international.com ಎಂಬ ವೆಬ್‌ಸೈಟನ್ನೂ ಸಹ ದುಬೈನ ಖ್ಯಾತ ರಂಗಕರ್ಮಿ ಡಾ. ಫರ್ಹದ್ ಚೌಧರಿ ಅವರು ಸಕ್ಸಸ್ ಫಿಲ್ಮ್ಸ್‌ನ ವಿದ್ಯಾಧರ್ ಶೆಟ್ಟಿ ಅವರೊಂದಿಗೆ ಲೋಕಾರ್ಪಣೆ ಮಾಡಿದರು. ಇನ್ನು, ಸಕ್ಸಸ್ ಫಿಲ್ಮ್ಸ್‌ನ ದುಬೈ ಪಾಲುದಾರರಾದ ದೆಹಲಿ ಮೂಲದ ಮಿನ್ಹಾಜ್ ಖಾನ್ ಅವರು ಈ ವೇಳೆ ಧನ್ಯವಾದ ಅರ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುಧೀರ್ ಅತ್ತಾವರ್ ಅವರು, ಶೀಘ್ರದಲ್ಲೇ ದುಬೈನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅರಬ್ ಪಾಲುದಾರಿಕೆಯಲ್ಲಿ ಆರಂಭಿಸುವ ಬಗ್ಗೆ ಹೇಳಿಕೊಂಡಿದ್ದಾರೆ.
ಪ್ರತಿಭೆಗೆ ಸಂದ ಪ್ರಶಸ್ತಿ
ನಿರ್ದೇಶಕ ಸುಧೀರ್ ಅತ್ತಾವರ್ ಅವರು ಎಂದಿಗೂ ಪ್ರಶಸ್ತಿ, ಸನ್ಮಾನ ಬಯಸಿದವರಲ್ಲ. ಆದರೆ, ಅವರ ಸಿನಿಮಾಗಳು, ಸಾಧನೆ ಅವರಿಗೆ ಪ್ರಶಸ್ತಿ ಹುಡುಕಿ ಬಂದಿದೆ. ಸನ್ಮಾಗಳೂ ಲೆಕ್ಕವಿಲ್ಲದಷ್ಟು ನಡೆದಿವೆ. ಮೊದಲೇ ಹೇಳಿದಂತೆ ಅವರು ಸೂಕ್ಷ್ಮ ಸಂವೇದನೆಯ ನಿರ್ದೇಶಕ. ಅವರು ಇತ್ತೀಚೆಗೆ ನಿರ್ದೇಶಿಸಿದ್ದ “ಮಡಿʼ ಚಿತ್ರಕ್ಕೆ ರಿಫ್ಟ್ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಗ್ಲೋಬಲ್ ಸೋಶಿಯಲ್ ಅವೇರ್‌ನೆಸ್ ಚಿತ್ರ ಪ್ರಶಸ್ತಿ ಜೊತೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಿಕ್ಕಿದೆ. ಏಳನೇ ರಾಜಸ್ಥಾನ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ರಿಫ್ಟ್) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ “ಮಡಿ” ಅತ್ಯುತ್ತಮ ಗ್ಲೋಬಲ್ ಸೋಶಿಯಲ್ ಅವೇರ್‌ನೆಸ್ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಅದರ ಜೊತೆಯಲ್ಲಿ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸಂದಿರುವುದು ಅವರ ಕಥೆಯೊಳಗಿನ ಗಟ್ಟಿತನಕ್ಕೆ ಕಾರಣ.
“ಹಸಿವು ಮತ್ತು ದಾರಿದ್ರ್ಯ ಚಿತ್ರದ ಹೈಲೈಟ್. ಆಗಿತ್ತು. ಜಾತಿ ಕೂಡ ಮನುಕುಲದ ದುರಂತ ಎಂಬಂತಹ ಸೂಕ್ಷ್ಮ ವಿಷಯಗಳ ಅರ್ಥಪೂರ್ಣ ಕಥಾನಕವನ್ನು ಚಿತ್ರ ಹೊಂದಿತ್ತು. ಸೂಕ್ಷ್ಮ ಸಂವೇದನೆಗಳನ್ನು ಅಷ್ಟೇ ಮನಕಲಕುವ ರೀತಿ ಹಿಡಿದಿಟ್ಟು, ನೋಡುಗರ ಮನಸ್ಸನ್ನು ಕ್ಷಣಕಾಲ ಭಾವುಕತೆಗೂ ದೂಡುವಂತಹ ಚಿತ್ರ ಕಟ್ಟಿಕೊಟ್ಟಿದ್ದರು. “ಮಡಿ” ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ, ಬಾಲಿವುಡ್ ಜಗತ್ತಿನ ಅನೇಕ ಗಣ್ಯರು “ಮಡಿ” ಕುರಿತು ಮಾತಾಡಿದ್ದರು. ಈ ಚಿತ್ರಕ್ಕೆ “ಮಲಿನ ಮನಸ್ಸುಗಳ ಕ್ರೌರ್ಯ” ಎಂಬ ಅರ್ಥವೆನಿಸುವ ಅಡಿಬರಹವೂ ಇದೆ.
ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಪ್ರತಿ ಪಾತ್ರಗಳಲ್ಲೂ ವಿಶೇಷತೆ ಇದೆ. ಈ ಚಿತ್ರದಲ್ಲಿ ಎಂ.ಡಿ. ಪಲ್ಲವಿ, ರಂಗಭೂಮಿ ಕಲಾವಿದ ರಾಮಚಂದ್ರ ದೇವಾಡಿಗ, ಮಾಸ್ಟರ್ ಸಂತೋಷ್, ವೆಂಕಟ್ ರಾವ್, ವಿದ್ಯಾಧರ್ ಶೆಟ್ಟಿ, ರವೀಂದ್ರ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ.ಎಸ್. ಶಾಸ್ತ್ರಿ ಕ್ಯಾಮೆರಾ ಹಿಡಿದರೆ, ವಿದ್ಯಾಧರ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಆಕಾಶ್ ಪತುಲೆ ಸಂಗೀತವಿದೆ. ಸುಧೀರ್ ಅತ್ತಾವರ್ ಅವರೇ “ಮಡಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ಕಲಾ ನಿರ್ದೇಶನ, ವಸ್ತ್ರ ವಿನ್ಯಾಸವನ್ನೂ ಮಾಡಿದ್ದಾರೆ.
ಬಾನುಲಿ ಸರಣಿ ಸುಧೀರ್ ಅತ್ತಾವರ್ ಪರಿಕಲ್ಪನೆಯಲ್ಲಿ ಹೋರಾಟಗಾರರ ಪರಿಚಯಿಸೋ “ಹಮಾರೇ ಸ್ವತಂತ್ರ್ಯ ತಾ ಸೇನಾನಿʼ ಬಾನುಲಿ ಸರಣಿ ಕೂಡ ಬಂದಿದೆ. ಅದಕ್ಕೆ ಈಗಾಗಲೇ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವಂತಹ ಕೆಲಸ ಮಾಡಿದ ಸುಧೀರ್ ಬಗ್ಗೆ ಒಳ್ಳೇಯ ಮಾತುಗಳು ಕೇಳಿಬಂದಿದ್ದವು. ಮುಂಬೈನಲ್ಲಿರೋ ತಮ್ಮ ಸಕ್ಸಸ್ ಫಿಲ್ಮ್ಸ್ ಮೂಲಕ ಈ ಬಾನುಲಿ ಸರಣಿಯನ್ನು ನಿರ್ಮಾಣ ಮಾಡಿದ್ದರು.
ಡಿ.ಕೆ. ಫ್ಲ್ಯಾಗ್ ಫೌಂಡೇಷನ್ ನ ಡಾ. ರಾಕೇಶ್ ಬಕ್ಷಿ ಈ ಸರಣಿಯನ್ನು ನಡೆಸಿಕೊಟ್ಟಿದ್ದರು. ಖ್ಯಾತ ಹಿನ್ನೆಲೆ ಗಾಯಕರಾದ ಶಾನ್, ಶರೋನ್ ಪ್ರಭಾಕರ್, ಆರತಿ ಮುಖರ್ಜಿ, ಡಾ.ಸಂದೇಶ್ ಮಾಯೆಕರ್, ಹಾಕಿ ಪ್ಲೇಯರ್ ಧನರಾಜ್ ಪಿಳೈ, ಹಜ್ ಹೌಸ್ ಅಧ್ಯಕ್ಷ ಮಕ್ಸೂದ್ ಅಹ್ಮದ್ ಖಾನ್, ಬೀನಾ ಸಂತೋಷ್ ಸೇರಿದಂತೆ ಇತರರು ಭಾಗವಹಿಸಿದ್ದು ವಿಶೇಷ.
ದಸರಾ ಹಬ್ಬ ಈಗಷ್ಟೇ ಮುಗಿದಿದೆ. ಆದರೆ, ಸಿನಿಮಾ ಹಬ್ಬ ಜೋರಾಗಿದೆ. ಹೌದು, ಒಂದೊಂದೇ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಸಿನಿಮಾ ಪ್ರೇಮಿ ಈಗ ಆ ಚಿತ್ರಗಳನ್ನು ಒಪ್ಪಿ ಅಪ್ಪಿಕೊಂಡಿದ್ದಾನೆ. ಆ ಸಾಲಿಗೆ ‘ನಿನ್ನ ಸನಿಹಕೆ’ ಚಿತ್ರವೂ ಸೇರಿದೆ.
ದೊಡ್ಡ ಚಿತ್ರಗಳ ಅಬ್ಬರದ ನಡುವೆಯೂ ನಿನ್ನ ಸನಿಹಕೆ ಚಿತ್ರವನ್ನ ಪ್ರೇಕ್ಷಕರು ಕೈ ಬಿಡಲಿಲ್ಲ ಎಂಬುದು ಚಿತ್ರತಂಡದ ಖುಷಿ. ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲೂ ನಿನ್ನ ಸನಿಹಕೆ ಚಿತ್ರಕ್ಕೆ ಬೇಡಿಕೆ ಹೆಚ್ಚಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ ದಲ್ಲಿ ಫುಲ್ ಹೌಸ್ ಪ್ರದರ್ಶನ ಕಾಣುತ್ತಿದೆ. 10ರಲ್ಲಿ 7 ಸ್ಕ್ರೀನ್ ಹೌಸ್ ಫುಲ್. 3 ಸ್ಕ್ರೀನ್ 90% ಫಿಲ್ ಅಗಿರುವುದು ತಂಡದ ಉತ್ಸಾಹಕ್ಕೆ ಕಾರಣವಾಗಿದೆ. ಹಬ್ಬ, ವೀಕೆಂಡ್ ನಲ್ಲಿ ಚಿತ್ರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿ ಸ್ಕ್ರೀನ್ ಹೆಚ್ಚಿಸಲು ಕೆ.ಆರ್.ಜಿ ಸ್ಟುಡಿಯೋಸ್ ನಿರ್ಧರಿಸಿದೆ.
ರಾಜ್ಯದಾದ್ಯಂತ ಎಲ್ಲಾ ಮಲ್ಟಿಪ್ಲೆಕ್ಸ್ ನಲ್ಲೂ ನಿನ್ನ ಸನಿಹಕೆ ಪ್ರದರ್ಶನಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಪ್ರೇಕ್ಷಕ ಹಾಗೂ ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದುಕೊಂಡಿರೋ ಚಿತ್ರದ ವೇಗ ಇನ್ನಷ್ಟು ಹೆಚ್ಚಿದೆ.
ದೊಡ್ಡ ಚಿತ್ರಗಳ ಆಗಮನದಿಂದ ಥಿಯೇಟರ್ ಮತ್ತು ಸ್ಕ್ರೀನ್ಸ್ ಸಮಸ್ಯೆ ಎದುರಿಸಿದ್ದ ಚಿತ್ರತಂಡ. ಇದೀಗ ಪ್ರೇಕ್ಷಕರ ಒತ್ತಾಯ ನೋಡಿ ಪರದೆಗಳನ್ನು ಹೆಚ್ಚಿಸಲು ವಿತರಕರು ಮುಂದಾಗ್ತಿದ್ದಾರೆ. ಈ ಬೆಳವಣಿಗೆಯಿಂದ ಸಹಜವಾಗಿಯೇ ಚಿತ್ರತಂಡ ಖುಷಿಯಲ್ಲಿದೆ.
ತಾರಾಗಣ: ಸುದೀಪ್, ನವಾಬ್, ಮಡೋನ ಸೆಬಾಸ್ಟಿಯನ್, ರವಿಶಂಕರ್ ಇತರರು
ಅಭಿನವ ಭಾರ್ಗವನ ಮುಂದೆ ಹಲ್ಲಲ್ಲು ಕಡಿದ, ಸಾಹಸಸಿಂಹ ವಿಷ್ಣುದಾದಾ ವಿರುದ್ದ ಕತ್ತಿ ಮಸೆದ ಖಳನಾಯಕನಿಗೆ ಕಿಚ್ಚ ಸುದೀಪ್ ಆಯುಧಪೂಜೆ ದಿನದಂದೇ ಮಹೂರ್ತವಿಟ್ಟಿದ್ದರು.ಧೂರ್ತ ದೇವೇಂದ್ರನ ಸಾಮ್ರಾಜ್ಯವನ್ನು ಹೊಡೆದುರುಳಿಸಬೇಕು ಜೊತೆಗೆ ಒಡೆಯ ದೇವೇಂದ್ರನನ್ನು ಮುಗಿಸಬೇಕು ಅಂತ ಸ್ಕೆಚ್ ಹಾಕಿದ್ದರು. ಆದರೆ, ಆಯುಧಪೂಜೆಯ ದಿನದಂದು ಅಂದುಕೊಂಡ ಕೆಲಸ ನೆರವೇರಲಿಲ್ಲ. ಹಾಗಂತ, ಹಾಕಿದ್ದ ಸ್ಕೆಚ್ ಮರುದಿನ ಮಿಸ್ ಆಗಲೇ ಇಲ್ಲ.ಪ್ಲ್ಯಾನ್ ಪ್ರಕಾರ ಎಲ್ಲವೂ ನಡೀತು. ಕ್ಯಾನ್ಸಲ್ ಆದ ಶೋಗಳು ಮರುದಿನ ಬೆಳಗ್ಗೆಯಿಂದಲೇ ಪ್ರಾರಂಭಗೊಂಡವು. ಕಿಚ್ಚನ ಸೈನ್ಯ ಥಿಯೇಟರ್ ಗೆ ಮುತ್ತಿಗೆ ಹಾಕ್ತು. ಇತ್ತ ಕಿಚ್ಚ ಕಣ್ಣಲ್ಲೇ ಕೆಂಡ ಉಗುಳುತ್ತಾ, ಬಾಲಿವುಡ್ ಬಾದ್ ಷಾ ನಂತೆ ಎಂಟ್ರಿಕೊಟ್ಟರು. ನೋಡುಗರು ಏನಾಯ್ತು ಎನ್ನುವಷ್ಟರಲ್ಲಿ ದಾದಾ ವಿರುದ್ಧ ಕತ್ತಿಮಸೆದವನನ್ನು ಅಡ್ಡಡ್ಡ ಉದ್ದುದ್ದ ಮಲಗಿಸಿಬಿಟ್ಟರು. ಇಷ್ಟೆಲ್ಲಾ ಆಗಿದ್ದು ಕೋಟಿಗೊಬ್ಬ 3 ಚಿತ್ರ ಬೆಳ್ಳಿತೆರೆ ಮೇಲೆ ಧಗಧಗಿಸಿದಾಗ.
ಅಂದ್ಹಾಗೇ, ಜೇಷ್ಠ ಸಿನಿಮಾದಲ್ಲಿ ದಾದಾಗೆ ಬಿಟೌನ್ ನವಾಬ್ ಎದುರಾಳಿಯಾಗಿದ್ದರು. ಭರ್ತಿ ಹದಿನೇಳು ವರ್ಷಗಳು ಕಳೆದ ಮೇಲೆ ಕಿಚ್ಚನ ಕೋಟಿಗೊಬ್ಬ 3 ಗೆ ಖಳನಾಯಕನಾಗಿ ಮತ್ತೆ ಕನ್ನಡಕ್ಕೆ ಬಂದು ಕಮಾಲ್ ಮಾಡಿದ್ದಾರೆ. ಕೋಟಿಗೊಬ್ಬ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಎವರ್ ಗ್ರೀನ್ ಸಿನಿಮಾ. ಇದೇ ಸಿನಿಮಾದ ಟೈಟಲ್ ನ ಕೋಟಿಗೊಬ್ಬ 2 ಚಿತ್ರಕ್ಕೆ ಬಣ್ಣಹಚ್ಚಿದ ಕಿಚ್ಚ ದಾದಾ ಅಭಿಮಾನಿಗಳ ಹೃದಯ ಗೆದ್ದರು. ಯಜಮಾನನ ಭಕ್ತರು ಮಾಣಿಕ್ಯನನ್ನು ತಲೆಮೇಲೆ ಹೊತ್ಕೊಂಡು ಮೆರೆಸಿದರು. ಅಭಿಮಾನಿ ದೇವರುಗಳು ತೋರಿಸಿದ ಪ್ರೀತಿ ಹಾಗೂ ಪ್ರೋತ್ಸಾಹವೇ ಕೋಟಿಗೊಬ್ಬ 3 ಚಿತ್ರಕ್ಕೆ ಸ್ಪೂರ್ತಿಯಾಯ್ತು. ಫೈನಲೀ, ಕೋಟಿಗೊಬ್ಬ 3 ಚಿತ್ರ ಪ್ರೇಕ್ಷಕರನ್ನು ತಲುಪಿದೆ. ಬೆಳ್ಳಿತೆರೆ ಮೇಲೆ ಅಭಿನಯ ಚಕ್ರವರ್ತಿ ದರ್ಬಾರ್ ಜೋರಾಗಿದೆ. ಕೋಟಿಗೊಬ್ಬ ಅಂತ ಹೆಸರಿಟ್ಟುಕೊಂಡು ಎರಡನೇ ಭಾರಿ ಬಿಗ್ ಸ್ಕ್ರೀನ್ ಮೇಲೆ ಬಂದ ಕಿಚ್ಚನ ಸಿನಿಮಾ ಬರೀ ಮನರಂಜನೆ ನೀಡೋದಲ್ಲದೆ, ಒಂದೊಳ್ಳೆ ಸಂದೇಶ ನೀಡಿದೆ.
ಕೋಟಿಗೊಬ್ಬ 3 ಚಿತ್ರದಲ್ಲಿ ಅಂತದ್ದೇನಿದೆ? ಸತ್ಯ ಯಾರು ? ಶಿವ ಯಾರು ? ಸತ್ಯ ಹಾಗೂ ಶಿವ ಇಬ್ಬರು ಒಬ್ಬರೇನಾ ಅಥವಾ ಇಬ್ಬರು ಬೇರೆ ಬೇರೆನಾ? ಈ ರೀತಿಯ ಕನ್ಫೂಷನ್ ನ ಕೋಟಿಗೊಬ್ಬ 2 ಚಿತ್ರದಲ್ಲಿ ಕ್ರಿಯೇಟ್ ಮಾಡಿದ್ದರು. ಸಿನಿರಸಿಕರನ್ನು ಗೊಂದಲಕ್ಕೀಡು ಮಾಡಿದ್ರು. ಬಹುಷಃ ಆ ಕನ್ಫ್ಯೂಷನ್ ಗೆ ಕೋಟಿಗೊಬ್ಬ 3ನಲ್ಲಿ ಉತ್ತರ ಕೊಟ್ಟಿರ್ತಾರೆ ಅಷ್ಟೇ. ಹೀಗೆ ಅಂದುಕೊಂಡು ಚಿತ್ರಮಂದಿರಕ್ಕೆ ಬರುವವರಿಗೆ ಕ್ಲ್ಯಾರಿಟಿ ಕೊಡುವುದರ ಜೊತೆಗೆ ಕಾಸು ಕೊಟ್ಟು ಥಿಯೇಟರ್ ಒಳಗಡೆ ಬಂದ ಪ್ರೇಕ್ಷಕ ಮಹಾಷಯನಿಗೆ ಮನರಂಜನೆಯನ್ನು ಕೊಟ್ಟು ಬೀಳ್ಕೊಟ್ಟಿದ್ದಾರೆ. ಒಂದಂತೂ ನಿಜ ಕೊಟ್ಟ ಕಾಸಿಗೆ ಇಲ್ಲಿ ಮೋಸವಿಲ್ಲ.
ಆಟೋರಿಕ್ಷಾ ಏರಿ ಎಂಟ್ರಿ ತೆಗೆದುಕೊಳ್ಳುವ ಕೋಟಿಗೊಬ್ಬ ಕಿಚ್ಚ, ಬಿಗ್ ಬಿ ಅಮಿತಾಬ್ ರಂತೆ ಕಾಣ್ತಾರೆ. ಪಟಾಕಿ ಪೋರಿ ಆಶಿಕಾ ರಂಗನಾಥ್ ಜೊತೆ ಕುಣಿದು ಕುಪ್ಪಳಿಸ್ತಾರೆ, ಬೇಬಿಡಾಲ್ ಆದ್ಯಾ ಮುಂದೆ ಮಂಡಿಯೂರ್ತಾರೆ. ಸ್ಟೈಲಿಷ್ ಲುಕ್ ನಲ್ಲಿ ಕಿಕ್ಕೇರಿಸುತ್ತಾರೆ. ಕಾರ್ ಚೇಸಿಂಗ್ ಮಾಡಿ ಚಿತ್ರಪ್ರೇಮಿಗಳನ್ನು ಎಡ್ಜ್ ಆಫ್ ದಿ ಸೀಟ್ ನಲ್ಲಿ ಕೂರಿಸ್ತಾರೆ. ಎದುರಾಳಿಗಳ ಜೊತೆ ಹೊಡೆದಾಡಿ ಮೀಸೆ ತಿರುವುತ್ತಾರೆ. ಕೊನೆಗೆ ಹೆತ್ತ ತಾಯಿ ಸಾವಿಗೆ ಕಾರಣರಾದ ಧೂರ್ತನಂತಿರುವ ದೇವೇಂದ್ರ ಅಲಿಯಾಸ್ ನವಾಬ್ ಷಾರನ್ನು ಮುಗಿಸಿ ಮರೆಯಾಗುತ್ತಾರೆ. ಅಲ್ಲಿಗೆ, ಕೋಟಿಗೊಬ್ಬ 3 ಗೆ ತೆರೆಬೀಳುತ್ತೆ.
ಕೋಟಿಗೊಬ್ಬ 2 ಚಿತ್ರ ದಲ್ಲಿದ್ದ ಎರಡು ಕ್ಯಾರೆಕ್ಟರ್ ಗಳು ಮಾತ್ರ ಕೋಟಿಗೊಬ್ಬ 3 ನಲ್ಲಿ ಕಂಟಿನ್ಯೂ ಆಗಿವೆ. ಸತ್ಯ ಹಾಗೂ ಶಿವ ಎರಡು ಪಾತ್ರದಲ್ಲಿ ಪ್ರೇಕ್ಷಕರಿಗೆ ಕನ್ಫ್ಯೂಸ್ ಮಾಡಿದ್ದ ಸುದೀಪ್, ಭಾಗ 3 ರಲ್ಲೂ ಸತ್ಯ- ಶಿವ ಹಾಗೂ ಗೋಸ್ಟ್ ಅಂತ ಮತ್ತೆ ಕನ್ಫ್ಯೂಸ್ ಮಾಡಿದ್ದಾರೆ. ಜೈಲು ಹಕ್ಕಿ ಆಗಿದ್ದ ರವಿಶಂಕರ್ ಕೋಟಿಗೊಬ್ಬ 3 ನಲ್ಲೂ ಕಂಬಿಹಿಂದೆ ಹಲ್ಲಲ್ಲು ಕಡಿದು , ಕಿಚ್ಚನ ಮುಂದೆ ಬಂದಾಗ ಕಾಮಿಡಿ ಮಾಡುತ್ತಾ ಹಾಸ್ಯದ ರಸದೌತಣ ಉಣಬಡಿಸಿದ್ದಾರೆ. ನವಾಬ್ ಷಾ, ಅಫ್ತಾಬ್ ಶಿವದಾಸಿನಿ, ಶ್ರದ್ದಾದಾಸ್ ಕೋಟಿಗೊಬ್ಬನ ಜೊತೆ ಮೆರೆದಿದ್ದಾರೆ. ರಾಜೇಶ್ ನಟರಂಗ್, ಅಭಿರಾಮಿ,ತಾರಕ್ ಪಾತ್ರಗಳು ಗಮನ ಸೆಳೆಯುತ್ತವೆ. ರವಿಶಂಕರ್, ಶಿವರಾಜ್ ಕೆ. ಆರ್ ಪೇಟೆ ಅವರನ್ನು ಇನ್ನೂ ಚೆನ್ನಾಗಿ ಬಳಸಿಕೊಳ್ಳಬಹುದಿತ್ತು.ರಂಗಾಯಣ ರಘು ಹಾಗೂ ತಬಲನಾಣಿಯವರ ಪ್ರತಿಭೆಯನ್ನು ಇಲ್ಲಿ ಸರಿಯಾಗಿ ಬಳಸಿಕೊಂಡಿಲ್ಲ. ಕಿಚ್ಚನ ಜೊತೆ ಸ್ಕ್ರೀನ್ ಶೇರ್ ಮಾಡಿದರೂ ಕೇರಳದ ಕುಟ್ಟಿ ಮಡೋನ್ನ ಸೆಬಾಸ್ಟಿನ್ ಅಷ್ಟೇನು ಮೋಡಿ ಮಾಡಿಲ್ಲ ಅನ್ನೋದು ಬೇಸರದ ಸಂಗತಿ.
ಶೇಖರ್ ಚಂದ್ರ ಅವರ ಕ್ಯಾಮೆರಾ ಕೈಚಳಕ ಮೋಡಿ ಮಾಡಿದೆ. ಪೋಲ್ಯಾಂಡ್ ಕಾರ್ ಚೇಸಿಂಗ್ ದೃಶ್ಯಗಳು ರೋಮಾಂಚನಗೊಳಿಸುತ್ತವೆ. ಅರ್ಜುನ್ ಜನ್ಯಾ ಸಂಗೀತದ ಒಂದು ಹಾಡು ಹುಚ್ಚೆದ್ದು ಕುಣಿಸುತ್ತೆ, ಬ್ಯಾಗ್ರೌಂಡ್ ಸ್ಕೋರ್ ಕೊಂಚ ಸೊರಗಿದೆ. ಮೊದಲರ್ಧ ಮನರಂಜನೆಯಾಗಿ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ಗಂಭೀರವಾಗುತ್ತೆ. ಅಲ್ಲಲ್ಲಿ ಪಂಚಿಂಗ್ ಡೈಲಾಗ್ ಕೊರತೆ ಎದ್ದು ಕಾಣುತ್ತೆ.. ಕಿಚ್ಚ ಕೊಟ್ಟ ಒನ್ ಲೈನ್ ಸ್ಟೋರಿಗೆ ಸ್ಕ್ರೀನ್ ಪ್ಲೇ ಮಾಡಿಕೊಂಡ ನಿರ್ದೇಶಕ ಶಿವಕಾರ್ತಿಕ್ ಇನ್ನಷ್ಟು ಧಮ್ ಕಟ್ಟಬೇಕಿತ್ತು. ನಿರೂಪಣೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಎಲ್ಲೋ ಒಂದು ಕಡೆ ಟ್ರ್ಯಾಕ್ ಚೇಂಜ್ ಆಗುತ್ತೆ ಅನ್ನುವ ಹೊತ್ತಿಗೆ ಮದರ್ ಸೆಂಟಿಮೆಂಟ್ ಮೈನಸ್ ಪಾಯಿಂಟ್ ಗಳನ್ನ ಮರೆಸುತ್ತೆ. ಅಲ್ಲಲ್ಲಿ ಬಾಲಿವುಡ್ ರೇಂಜ್ ಗಿರುವ ಮೇಕಿಂಗ್ ಖುಷಿ ಕೊಡುತ್ತೆ. ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯಕ್ಕೆ ಇಂಟರ್ ನ್ಯಾಷನಲ್ ಕಿಲಾಡಿ ಕಿರೀಟ ಸಲ್ಲಬೇಕು. ಕೋಟಿಕೋಟಿ ಸುರಿದು ನಾಲ್ಕು ವರ್ಷ ಕೈಕಟ್ಟಿ ಕುಳಿತ ಅನ್ನದಾತ ನಿರ್ಮಾಪಕ ಸೂರಪ್ಪ ಬಾಬುಗೆ ಕಿಚ್ಚನ ಪಡೆ ಸೆಲ್ಯೂಟ್ ಹೊಡಿಲೇಬೇಕು. ಕಾರಣ ಅದ್ಧೂರಿತನ.
ಇಲ್ಲಿ ಸತ್ಯ- ಶಿವ ಬೇರೆ ಬೇರೆನಾ? ಅಥವಾ ಇಬ್ಬರು ಒಬ್ಬರೇನಾ? ಇದೊಂದು ಕೂತೂಹಲಕ್ಕೆ ಸಿನಿಮಾ ನೋಡಬೇಕಿಲ್ಲ. ಕ್ರಿಷ್ ಹಾಗೂ ಧೂಮ್ ಸಿನಿಮಾದಷ್ಟೇ ರೋಚಕ ಎನಿಸೋ ಕಾರ್ ಚೇಸ್ ನೋಡಿದ ನಂತರ ಕೋಟಿಗೊಬ್ಬನ ಮೇಲೆ ಮತ್ತಷ್ಟು ಪ್ರೀತಿ ಹೆಚ್ಚದೇ ಇರದು.ಇಲ್ಲೊಂದು ಮೆಡಿಕಲ್ ಮಾಫಿಯಾ ಇದೆ. ಜೊತೆಗೆ ರಿವೇಂಜ್ ಸ್ಟೋರಿ ಇಲ್ಲಿ ಹೈಲೆಟ್. ಉಳಿದಂತೆ, ಇಲ್ಲಿ ಸಣ್ಣ ಪ್ರೇಮ್ ಕಹಾನಿ ಇದೆ, ಅಮ್ಮನ ಸೆಂಟಿಮೆಂಟ್ ಕೂಡ ಇದೆ. ಭರ್ಜರಿ ಆಕ್ಷನ್ ಮತ್ತೊಂದು ಹೈಲೆಟ್.ಒಟ್ಟಾರೆ, ಇದು ಎಲ್ಲಾ ವರ್ಗಕ್ಕೂ ಸಲ್ಲುವ ಮನರಂಜನಾತ್ಮಕ ಸಿನಿಮಾ.
ಇಂತಹದ್ದೊಂದು ಸುದ್ದಿಗೋಸ್ಕರ ಸ್ಯಾಂಡಲ್‌ವುಡ್ ಯುವ ಸಾಮ್ರಾಟನ ಅಪ್ಪಟ ಅಭಿಮಾನಿಗಳು ಮಾತ್ರವಲ್ಲ, ನಟಿ ಮೇಘನಾ ರಾಜ್ ಅಭಿಮಾನಿಗಳು ಕೂಡ ಕಾತುರದಿಂದ ಕಾಯ್ತಿದ್ದರು. ಫೈನಲೀ ಅಭಿಮಾನಿ ದೇವರುಗಳ ಕಾಯುವಿಕೆಯ ಕೌತುಕಕ್ಕೆ ಬ್ರೇಕ್ ಬಿದ್ದಿದೆ. ಫ್ಯಾನ್ಸ್ ಆಸೆ-ಆಕಾಂಕ್ಷೆಯನ್ನು ಈಡೇರಿಸಿದ್ದಾರೆ. ವಿಐಪಿಗಳ ಕನಸಿನ ಕೋರಿಕೆಯಂತೆ, ಅವರ ಅಭಿಲಾಷೆಯಂತೆ ಬಣ್ಣದ ಜಗತ್ತಿಗೆ ಮರಳಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ.
ನಟಿ ಮೇಘನಾ ಚಿತ್ರರಂಗಕ್ಕೆ ಮರಳಬೇಕು, ಮಾಯಲೋಕದಲ್ಲಿ ಮಿನುಗಬೇಕು ಎನ್ನುವುದು ಅಭಿಮಾನಿ ದೇವರುಗಳ ಅಭಿಲಾಷೆಯಾಗಿತ್ತು. ಮನೆದೇವರ ಅಗಲಿಕೆಯಿಂದ ಮನನೊಂದಿರುವ ಮೇಘನಾ ಆದಷ್ಟು ಬೇಗ ಚೇತರಿಸಿಕೊಂಡು ಗಂಧದಗುಡಿಗೆ ವಾಪಾಸ್ ಆಗ್ಬೇಕು ಅಂತ ಫ್ಯಾನ್ಸ್ ಬಯಸಿದ್ದರು. ಅಭಿಮಾನಿಗಳ ಮಹದಾಸೆಯಂತೆ ನಟಿ ಮೇಘನಾ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಇವತ್ತು ಬೆಳಗ್ಗೆ ಸಂಥಿಂಗ್ ಎಕ್ಸೈಟಿಂಗ್ ನ್ಯೂಸ್ ಕೊಟ್ಟ ಮೇಘನಾ, ಸರ್ಜಾ ಕುಟುಂಬದ ವಿಐಪಿಗಳು ಹಾಗೂ ಆಟಗಾರನ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿದ್ದಾರೆ.
ಅಷ್ಟಕ್ಕೂ, ಯಾವ್ ಸಿನಿಮಾ? ಏನ್ ಕಥೆ? ಅದ್ಯಾವ ಚಿತ್ರತಂಡವನ್ನು ಸೇರಿಕೊಂಡರು? ಅದೆಂತಾ ಪಾತ್ರಕ್ಕೆ ಜೀವ ತುಂಬಿದರು? ಈ ಕೂತೂಹಲವನ್ನು ನಟಿ ಮೇಘನಾ ಹಾಗೇ ಉಳಿಸಿದ್ದಾರೆ. ಮಿಲ್ಟ್ರಿ ಮಾಸ್ಕ್ ಧರಿಸಿ, ಕೂಲಿಂಗ್ ಗ್ಲಾಸ್ ತೊಟ್ಟು ಕಾರು ಏರಿದ ಮೇಘನಾ, `ಶೂಟಿಂಗ್ ಫಾರ್ ಸಂಥಿಂಗ್ ರಿಯಲಿ ಎಕ್ಸೈಟಿಂಗ್ ಟುಡೇ’ ಅಂತ ಬ್ರಿಟಿಷರ ಭಾಷೆಯಲ್ಲಿ ಎರಡು ಲೈನ್ ಟೈಪ್ ಮಾಡಿ ಒಂದ್ ಫೋಟೋ ಸಮೇತ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೇಘನಾ ಪೋಟೋ ಅಂಡ್ ಪೋಸ್ಟ್ ನೋಡಿ ನಿಜಕ್ಕೂ ಫ್ಯಾನ್ಸ್ ಖುಷಿಯಾಗಿದ್ದಾರೆ. ಮೇಘನಾ ಕಮ್‌ಬ್ಯಾಕ್ ಪಯಣ ಭರ್ಜರಿಯಾಗಿ ಶುರುವಾಗಲಿ ಅಂತ ಆಶಿಸುತ್ತಿದ್ದಾರೆ.
ಅಂದ್ಹಾಗೇ, ಮೇಘನಾ ಕೈಯಲ್ಲಿ ಎರಡ್ಮೂರು ಸಿನಿಮಾಗಳಿವೆ. ಸೆಲ್ಫೀ ಮಮ್ಮಿ ಗೂಗಲ್ ಡ್ಯಾಡಿ ಹಾಗೂ ಬುದ್ದಿವಂತ-2 ಚಿತ್ರಗಳು ಚಿರು ಇದ್ದಾಗಲೇ ಒಪ್ಪಿಕೊಂಡಿದ್ದರು. ಚಿತ್ರೀಕರಣ ಕೂಡ ಶುರುವಾಗಿತ್ತು. ಈ ಮಧ್ಯೆ ವಿಧಿಯೆಂಬ ಆಟಗಾರನ ಆಟದಿಂದ ಯುವಸಾಮ್ರಾಟ ಚಿರು ಅರ್ಧಕ್ಕೆ ಜೀವನದ ಆಟ ಮುಗಿಸಬೇಕಾಗಿ ಬಂತು. ಜನ್ಮಕೊಟ್ಟ ಹೆತ್ತವರು, ರಕ್ತಹಂಚಿಕೊಂಡು ಹುಟ್ಟಿದ ಅಣ್ತಮ್ಮ, ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಪತ್ನಿಯನ್ನು ಬಿಟ್ಟು ಬಾರದ ಲೋಕಕ್ಕೆ ಹೊರಟೇ ಹೋದರು. ಚಿರು ಗೋಣು ಚೆಲ್ಲಿದ ಕ್ಷಣದಿಂದ ರಾಯನ್ ರಾಜ್ ಸರ್ಜಾ ಆಗಮನದವರೆಗೆ ಮನೆ-ಮನಸ್ಸು ಬರೀ ಕತ್ತಲೆಯಿಂದ ತುಂಬಿತ್ತು. ಆದ್ರೀಗ, ಎರಡು ಕುಟುಂಬದ ಮನೆ-ಮನಸ್ಸುಗಳಲ್ಲಿ ಪ್ರಕ್ಷುಬ್ಧ ಬೆಳಕಿನ ವಾತಾವರಣ.
ವಾಯುಪುತ್ರನನ್ನೇ ಹೋಲುವ, ಚಿರುನಾ ಕಣ್ಮುಂದೆ ತಂದು ನಿಲ್ಲಿಸುವ ರಾಯನ್ ರಾಜ್ ಸರ್ಜಾ ಇದೀಗ ಅಮ್ಮನನ್ನು ಶೂಟಿಂಗ್‌ಗೆ ಮರಳುವಂತೆ ಮಾಡಿದ್ದಾನೆ. `ಚಿರು ನನ್ನ ರಾಜ ನಮ್ಮ ರಾಯನ್ ನನ್ನ ಯುವರಾಜ’ ಹೀಗನ್ನುವ ಮೇಘನಾ ಮತ್ತೆ ಕಲಾಸರಸ್ವತಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಯನ್ ರಾಜ್ ಸರ್ಜಾಗೆ ಒಂಭತ್ತು ತಿಂಗಳು ತುಂಬಿದ ದಿನದಂದೇ ಜಾಹೀರಾತುಗೋಸ್ಕರ ಬಣ್ಣ ಹಚ್ಚಿದ್ದರು. ಇದಾದ್ಮೇಲೆ ಮಗನ ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನಡೀತು. ಇದೀಗ ಮತ್ತೆ ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ನಿರ್ದೇಶಕನ ಕಲ್ಪನೆಯಲ್ಲಿ ಅರಳಿದ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಪತ್ನಿ ಮೇಘನಾ ಕಲಾರಾಧನೆಗೆ ಬೆಳ್ಳಿಮೋಡಗಳಿಂದಲೇ ಚಿರು ಹಾರೈಸುತ್ತಿರುತ್ತಾರೆ. ಸೋ, ಸದ್ಯಕ್ಕೆ ಗುಟ್ಟಾಗಿರುವ ನಟಿ ಮೇಘನಾ ಸಿನಿಮಾ ಹಾಗೂ ಪಾತ್ರ ಆದಷ್ಟು ಬೇಗ ಅವರೇ ಹೇಳಿಕೊಳ್ಳಲಿ. ಫ್ಯಾನ್ಸ್ ಜೊತೆ ಬೆಳ್ಳಿಪರದೆಯನ್ನು ಖುಷಿಪಡಿಸಲಿ ಅನ್ನೋದೇ ನಮ್ಮ ಆಸೆ.
ಕನ್ನಡ ಚಿತ್ರರಂಗವನ್ನು ಪರಭಾಷಿಗರು ಅದ್ಯಾವತ್ತೋ ಒಪ್ಪಿ ಅಪ್ಪಿದ್ದಾಗಿದೆ. ಇಲ್ಲಿನ ಸಿನಿಮಾಗಳ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾಗಿದೆ. ಹಾಗಾಗಿಯೇ ಈಗ ಕನ್ನಡದ ಹೀರೋಗಳು, ನಿರ್ದೇಶಕರು ಅಷ್ಟೇ ಯಾಕೆ ತಾಂತ್ರಿಕ ವರ್ಗದವರಿಗೆ ಬೇಡಿಕೆ ಹೆಚ್ಚು. ಇಲ್ಲಿನ ಅನೇಕರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಹೊಸ ಸುದ್ದಿ ಅಂದರೆ, “ಉಗ್ರಂ” ಮತ್ತು “ಕೆಜಿಎಫ್” ಮೂಲಕ ಜೋರು ಸುದ್ದಿ ಮಾಡಿದ ಸಂಗೀತ ನಿರ್ದೇಶಕ ರವಿ ಬಸ್ರೂರು ಇದೀಗ ಮತ್ತೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.
ಹೌದು, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಾಣದಲ್ಲಿ ‘ಅಂತಿಮ್’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಈ ಬಗ್ಗೆ ರವಿ ಬಸ್ರೂರು ಅವರೇ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ”ಭಾರತದ ಬಾಯಿಜಾನ್ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿರುವುದು ಬಹಳ ಸಂತಸ ತಂದಿದೆ. ಸಲ್ಮಾನ್ ಖಾನ್ ಅವರ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದೇನೆ. ಈ ನನ್ನ ಜರ್ನಿಗೆ ನಿಮ್ಮ ಬೆಂಬಲ ಹೀಗೆ ಇರಲಿ” ಎಂದು ತಮ್ಮ ಸಂಭ್ರವನ್ನು ಹಂಚಿಕೊಂಡಿದ್ದಾರೆ ರವಿಬಸ್ರೂರು.
“ಅಂತಿಮ್” ದಿ ಫೈನಲ್ ಟ್ರೂತ್ ಚಿತ್ರವನ್ನು ಮಹೇಶ್ ಮಂಜ್ರೆಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರವಿಬಸ್ರೂರು ಸಂಗೀತ ನೀಡುತ್ತಿರುವುದು ವಿಶೇಷವಾದರೂ, ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ “ಕೆಜಿಎಫ್”. ಇದು ರವಿಬಸ್ರೂರು ಅವರಿಗೆ ಪರಭಾಷೆಯಲ್ಲಿ ಹೆಸರು ತಂದುಕೊಟ್ಟಿತು. ಕನ್ನಡದ ಜೊತೆ ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಿಗೂ ಸಂಗೀತ ನೀಡುತ್ತಿರುವ ರವಿಬಸ್ರೂರು, ಇನ್ನೂ ಒಂದು ಹಿಂದಿ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೌದು, ಸುಭಾಷ್ ಕಾಳೆ ಜೊತೆ ಕೈ ಜೋಡಿಸಿರುವ ಅಜಯ್ ಕಪೂರ್, ಅಫ್ಘಾನ್ ಬಿಕ್ಕಟ್ಟು ಕುರಿತು ಸಿನಿಮಾ ಮಾಡುತ್ತಿದ್ದು, ಆ ನೈಜ ಚಿತ್ರಕ್ಕೆ ‘ಗರುಡ್’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ ಎಂದು ಪೋಸ್ಟರ್ ಹೇಳುತ್ತಿದೆ. ಈಗಾಗಲೇ ರವಿ ಬಸ್ರೂರ್ ಹಿಂದಿಯ ಯುಧ್ರಾ. ‘ಗಲ್ಲಿ ಬಾಯ್’ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.
ದುನಿಯಾ ವಿಜಯ್ ಅಭಿನಯದ'ಸಲಗ'ಚಿತ್ರಕ್ಕೆ ಕರೆಂಟ್ ಶಾಕ್ ಎದುರಾಗಿದೆ. ಸಂತೋಷ್ ಚಿತ್ರಮಂದಿರದಲ್ಲಿ ‘ಸಲಗ’ ಚಿತ್ರಕ್ಕೆ ಸಂತೋಷವಿಲ್ಲದಂತಾಗಿದೆ. ಹಾಗಂತ, ಅಭಿಮಾನಿಗಳು ಬೇಸರಪಟ್ಟುಕೊಳ್ಳುವ ಹಾಗೂ ಆಘಾತಕ್ಕೆ ಒಳಗಾಗುವಂತಹದ್ದೇನ್ ಆಗಿಲ್ಲ. ಜಸ್ಟ್ ಥಿಯೇಟರ್ ಚೇಂಜ್ ಆಗಿದೆ ಅಷ್ಟೇ. ಸಂತೋಷ್ ಚಿತ್ರಮಂದಿರದಲ್ಲಿ ಧಗಧಗಿಸಬೇಕಿದ್ದ `ಸಲಗ'ಚಿತ್ರ ಕೆ.ಜಿ.ರಸ್ತೆಯಲ್ಲಿರುವ ತ್ರಿವೇಣಿ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ.ಇಷ್ಟಕ್ಕೆಲ್ಲಾ ಕಾರಣ ತಾಂತ್ರಿಕ ದೋಷ.ಹೌದು,ಸಂತೋಷ್ ಥಿಯೇಟರ್‌ನಲ್ಲಿ ತಾಂತ್ರಿಕ ಸಮಸ್ಯೆಯಿದೆ.
ಹೀಗಾಗಿ,’ಸಲಗ'ಚಿತ್ರತಂಡ ಥಿಯೇಟರ್ ಬದಲಾಯಿಸಿದ್ದಾರೆ.4ಕೆ ಡಾಲ್ಬಿ ಅಟ್ಮಾಸ್ ಸೌಂಡಿಂಗ್ ಸಿಸ್ಟಮ್‌ನ ಒಳಗೊಂಡಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ‘ಸಲಗ' ಪ್ರದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಹೀಗಾಗಿ,ಒಂಟಿಸಲಗನ ಸಕಲ ಅಭಿಮಾನಿ ಬಳಗವೆಲ್ಲವೂ ತ್ರಿವೇಣಿ ಚಿತ್ರಮಂದಿರಕ್ಕೆ ಬಂದು ಹಬ್ಬಮಾಡಿ ಸಂಭ್ರಮಿಸುವಂತೆ ಚಿತ್ರತಂಡ ಕೋರಿಕೊಂಡಿದೆ.ಕಳೆದ ಶುಕ್ರವಾರವಷ್ಟೇ ದೊಡ್ಮನೆ ಮೊಮ್ಮಗಳ ಚಿತ್ರಕ್ಕೆ ಕರೆಂಟ್ ಶಾಕ್ ಎದುರಾಗಿತ್ತು. ಸಂತೋಷ್ ಚಿತ್ರಮಂದಿರದಲ್ಲಿ ನಿನ್ನ ಸನಿಹಕೆ ಚಿತ್ರದ ಶೋ ಕ್ಯಾನ್ಸಲ್ ಆಗಿತ್ತು.
ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಪ್ರದರ್ಶನ ರದ್ದಾಯ್ತು. ಕೊನೆಗೆ ನಿನ್ನ ಸನಿಹಕೆ ಚಿತ್ರತಂಡ ಥಿಯೇಟರ್ ಬದಲಾಯಿಸಿದರು.ಇದೀಗಸಲಗ’ ಚಿತ್ರತಂಡ ಮೊದಲೇ ಹೆಚ್ಚೆತ್ತುಕೊಂಡ್ತಾ ಅಥವಾ ನಿಜವಾಗಲೂ ತಾಂತ್ರಿಕವಾಗಿ ಕೆಲಸ ನಡೆಯುತ್ತಿದೆಯೋ ಗೊತ್ತಿಲ್ಲ? ರಿಲೀಸ್‌ಗೂ ಮುನ್ನವೇ ‘ಸಲಗ'ಚಿತ್ರತಂಡ ಥಿಯೇಟರ್ ಬದಲಾಯಿಸಿದೆ.
ಇದರಿಂದ ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು.ಒಂದ್ವೇಳೆ ಅಭಿಮಾನಿಗಳೆಲ್ಲರೂ ಸೇರಿ ಹಬ್ಬ ಮಾಡೋದಕ್ಕೆ ಸಜ್ಜಾದಾಗ ಕರೆಂಟ್ ಶಾಕ್ ಎದುರಾಗಿದ್ದರೆ ನಿರಾಸೆಯಾಗ್ತಿತ್ತು. ಅದಕ್ಕಿಂತ ಚಿತ್ರಮಂದಿರವನ್ನೇ ಬದಲಾಯಿಸಿ ‘ಸಲಗ’ ಫ್ಯಾನ್ಸ್ಗೆ ಬೇರೆ ಥಿಯೇಟರ್ ಅರೆಂಜ್ ಮಾಡಿದ್ದು ಒಂದು ರೀತಿ ಒಳ್ಳೆಯದೇ ಆಯ್ತು.
ಇನ್ನೂ ಕೋಟಿಗೊಬ್ಬ-3 ಚಿತ್ರತಂಡ ಅನೌನ್ಸ್ ಮಾಡಿದಂತೆ ನರ್ತಕಿಯಲ್ಲೇ ತಮ್ಮ ಸಿನಿಮಾನ ರಿಲೀಸ್ ಮಾಡ್ತಿದ್ದಾರೆ. ಅಕ್ಟೋಬರ್ 14ರಂದು ನರ್ತಕಿಯಲ್ಲಿ ಕೋಟಿಗೊಬ್ಬ-3 ಚಿತ್ರ ಧಗಧಗಿಸಲಿದೆ. ಅಭಿನಯ ಚಕ್ರವರ್ತಿಯ ಫ್ಯಾನ್ಸ್ ಹಬ್ಬ ಮಾಡಿ ಸಂಭ್ರಮಿಸಲಿದ್ದಾರೆ.
ಗಂಧದಗಡಿಯ ಗೋಲ್ಡನ್‌ಸ್ಟಾರ್ ಗಣೇಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ದಸರಾ ಹಬ್ಬಕ್ಕೆ ವಿಶೇಷವಾಗಿ ನಟ ಗೋಲ್ಡನ್‌ಸ್ಟಾರ್ ಮನೆಗೆ ನ್ಯೂ ಗೆಸ್ಟ್ ನ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ಹೊಸ ಅತಿಥಿ ಬೇರಾರು ಅಲ್ಲ ಮರ್ಸಿಡೀಸ್ ಬೆನ್ಜ್ ಕಾರು
ಸಾಮಾನ್ಯವಾಗಿ ಹಬ್ಬ-ಹರಿದಿನಗಳಂದು ಹೊಸ ಮನೆ-ಕಾರು ಖರೀದಿ ಸೇರಿದಂತೆ ಇತ್ಯಾದಿ ವಸ್ತುಗಳ ಪರ್ಚೈಸ್ ಹಾಗೂ ಶುಭಕಾರ್ಯಗಳಿಗೆ ಚಾಲನೆ ಕೊಡ್ತಾರೆ. ಅದರಂತೇ, ಮುಂಗಾರುಮಳೆಯ ಪ್ರೀತಂ ದಸರಾ ಹಬ್ಬ ರಂಗೇರಿರುವಾಗ ಹೊಸ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.
ಗೋಲ್ಡನ್ ಸ್ಟಾರ್ ಅಂತನೇ ಕರೆಸಿಕೊಳ್ಳುವ ಗಣಿ ಬಳಿ ಕಾಸ್ಟ್ಲೀಯಸ್ಟ್ ಕಾರುಗಳಿವೆ. ಈಗ ಮತ್ತೊಂದು ದುಬಾರಿ ಕಾರು ನಟ ಗಣೇಶ್ ಮನೆಮುಂದೆ ಪಾರ್ಕ್ ಆಗಿದೆ. ಮಗ ವಿಹಾನ್ ಜೊತೆ ಶೋ ರೂಂಗೆ ಹೋಗಿ ಹೊಸ ಕಾರು ಪಡೆದಿದ್ದಾರೆ. ಸದ್ಯ, ಸೋಷಿಯಲ್ ಮೀಡಿಯಾದಲ್ಲಿ ನಟ ಗಣೇಶ್ ಪರ್ಚೈಸ್ ಮಾಡಿರುವ ನ್ಯೂ ಕಾರ್‌ನ ಫೋಟೋಗಳು ಸಖತ್ ವೈರಲ್ ಆಗುತ್ತಿವೆ .
ಚಮಕ್ ಕೊಟ್ಟಮೇಲೆ ಗೀತ ಹಾಗೂ ಗಿಮಿಕ್ ಚಿತ್ರಗಳು ನಿರೀಕ್ಷೆಯ ಮಟ್ಟಿಗೆ ಕಲೆಕ್ಷನ್ ಮಾಡಲಿಲ್ಲ. ಆದರೇನಂತೆ, ಪ್ರಯತ್ನ ನಮ್ಮದು ಪ್ರತಿಫಲ ಅಭಿಮಾನಿಗಳದ್ದು ಎನ್ನುತ್ತಾ ಗಣಿ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ತ್ರಿಬಲ್ ರೈಡಿಂಗ್, ಗಾಳಿಪಟ-2, ಸಖತ್, ದಿ ಸ್ಟೋರಿ ಆಫ್ ರಾಯಘಡ ಸೇರಿದಂತೆ ಹಲವು ಸಿನಿಮಾಗಳು ಮುಗುಳುನಗೆ ಹೀರೋ ಕೈಯಲ್ಲಿವೆ. ಗಾಳಿಪಟ ಚಾಪ್ಟರ್ 2 ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಮುಂಗಾರುಮಳೆಯಿಂದಾದ ಸೊಂಪಾದ ಬೆಳೆ ಗಾಳಿಪಟದಿಂದ ಆಗಬೇಕು ಎನ್ನುತ್ತಾ ಇಡೀ ಟೀಮ್ ಶ್ರಮವಹಿಸಿ ದುಡಿಯುತ್ತಿದೆ.
ಸದಾ ಸುದ್ದಿಯಲ್ಲಿರುತ್ತಿದ್ದ ಕೊಡಗಿನ ಬೆಡಗಿ ರಶ್ಮಿಕಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಅವರು ಕನ್ನಡದ ಹೊಸ ಸಿನಿಮಾದಲ್ಲೇನಾದ್ರೂ ನಟಿಸ್ತಾ ಇದಾರಾ ಅನ್ನೋ ಕುತೂಹಲದ ಪ್ರಶ್ನೆ ಸಹಜ. ಆದರೆ, ರಶ್ಮಿಕಾ ಸುದ್ದಿಯಲ್ಲಿರೋದು ಸತ್ಯ. ಆದರೆ, ಕನ್ನಡ ಸಿನಿಮಾ ಮಾಡ್ತಾ ಇಲ್ಲ ಅಷ್ಟೇ. ಬದಲಾಗಿ ಅವರು ಬೆಂಗಾಲಿ ಚಿತ್ರವೊಂದರಲ್ಲೂ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಹೌದು, “ಕಿರಿಕ್ ಪಾರ್ಟಿ” ಮೂಲಕ ಕಿರಿಕ್ ಮಾಡಿಕೊಂಡೇ ಬಂದ ಬೆಡಗಿ ರಶ್ಮಿಕಾ, ನೋಡ ನೋಡುತ್ತಿದ್ದಂತೆಯೇ ಅವರು, ಕನ್ನಡದಿಂದ ತೆಲುಗು, ತಮಿಳು ಚಿತ್ರರಂಗದಲ್ಲೊಮ್ಮೆ ಹವಾ ಎಬ್ಬಿಸಿಬಿಟ್ಟರು. ಅಲ್ಲೊಂದ ಒಮ್ಮೆಲೆ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದು ಗೊತ್ತೇ ಇದೆ. ಹಾಗಾಗಿ ರಶ್ಮಿಕಾ ಪಂಚಭಾಷಾ ನಟಿ ಅನ್ನೋ ಮಾತಿಗೂ ಕಾರಣರಾಗಿದ್ದಾರೆ. ಅವರು ಮಲಯಾಳಂ ಸಿನಿಮಾದಲ್ಲಿ ನಟಿಸಬೇಕು ಅಂದುಕೊಂಡಿದ್ದರು. ಅಲ್ಲಿನ್ನೂ ಅವಕಾಶದ ಬಾಗಿಲು ಓಪನ್ ಆಗಿಲ್ಲ. ಅದರ ನಡುವೆಯೇ ರಶ್ಮಿಕಾ ಈಗ ಬೆಂಗಾಲಿ ಸಿನಿಮಾರಂಗ ಕಡೆ ಒಲವು ತೋರಿದ್ದಾರೆ.
ರಶ್ಮಿಕಾ ಅವರ ಅಭಿಮಾನಿಯೊಬ್ಬರು ಬೆಂಗಾಲಿ ಸಂಸ್ಕೃತಿಯಲ್ಲಿರುವಂತಹ ಭಾವಚಿತ್ರವೊಂದನ್ನು ರಚಿಸಿ, ಅವರಿಗೆ ಶೇರ್ ಮಾಡಿದ್ದಾರೆ. ಅದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಶ್ಮಿ, “ಈಗ ನಿಜಕ್ಕೂ ನನಗೆ ಬೆಂಗಾಲಿ ಪಾತ್ರ ಮಾಡಬೇಕು ಎನಿಸುತ್ತಿದೆ. ಇದು ತುಂಬಾ ಚೆನ್ನಾಗಿದೆ. ಥ್ಯಾಂಕ್ ಯೂ ಸೋ ಮಚ್” ಎಂದು ಹೇಳಿಕೊಂಡಿದ್ದಾರೆ. ಅವರು ಬೆಂಗಾಲಿ ಸಿನಿಮಾ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಇಂಗಿತ ವ್ಯಕ್ತಪಡಿಸಿರುವುದಂತೂ ನಿಜ. ಸದ್ಯ, ರಶ್ಮಿಕಾ ಅವರು ‘ಪುಷ್ಪ’ ಚಿತ್ರದಲ್ಲಿ ‘ಶ್ರೀವಲ್ಲಿ’ ಪಾತ್ರಧಾರಿಯಾಗಿದ್ದಾರೆ.
ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಾಯಕರು. ಈಗಾಗಲೇ ಟೀಸರ್ ಮತ್ತು ಮೊದಲ ಹಾಡು ಜೋರು ಸೌಂಡು ಮಾಡಿದ್ದಾಗಿದೆ. ಅಲ್ಲು ಅರ್ಜುನ್ ಜೊತೆ ಮಲಯಾಳಂ ಖ್ಯಾತ ನಟ ಫಾಹದ್ ಫಾಸಿಲ್ ಹಾಗೂ ಕನ್ನಡದ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಅಂದಹಾಗೆ, ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಹೊರಬರಲಿದೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದು, ಡಿಸೆಂಬರ್ 17ಕ್ಕೆ ಚಿತ್ರ ಬರಲಿದೆ.
ಅತ್ತ ರಶ್ಮಿಕಾ ಅವರು “ಮಿಷನ್ ಮಜ್ನು” ಎಂಬ ಹಿಂದಿ ಸಿನಿಮಾದಲ್ಲೂ ನಟಿಸುತ್ತಿದ್ದು, ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇನೆ ಇರಲಿ, ರಶ್ಮಿಕಾ ಕನ್ನಡದಲ್ಲಿ ಕಾಣಿಸಿಕೊಂಡು ಸುದ್ದಿ ಮಾಡಿದ್ದಕ್ಕಿಂತ ಪರಭಾಷೆಯ ಚಿತ್ರಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುವುದಂತೂ ನಿಜ.