Categories
ಸಿನಿ ಸುದ್ದಿ

ಸಾಧು ನಿರ್ದೇಶನದಲ್ಲಿ ಮಹಾಯೋಗಿ ಸಿದ್ಧರೂಢ! ಇದು ಶ್ರೀಗಳಜೀವನ ಚರಿತ್ರೆ; ಪವರ್‌ ಟ್ರೇಲರ್‌ ರಿಲೀಸ್

‌ “ಮಹಾಯೋಗಿ ಸಿದ್ದರೂಢ” ಹೆಸರಿನ ಈ ಚಿತ್ರವನ್ನು ಸಂಗೀತ ನಿರ್ದೇಶಕ, ನಟ ಸಾಧುಕೋಕಿಲ ನಿರ್ದೇಶಿಸಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿ, ಶುಭ ಕೋರಿದರು. ಬಾಗಲಕೋಟೆಯ ಮುಧೋಳದ ಮಂಟೂರಿನ ಶ್ರೀ ಸದಾನಂದ ಮಹಾಸ್ವಾಮಿಗಳು ಈ ಚಿತ್ರ ನಿರ್ಮಾಣ ಮಾಡಿರುವುದು ವಿಶೇಷ.

“ನಮ್ಮ ಮನೆಗೂ, ಸಿದ್ದರೂಢ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪಾಜಿ ಅವರಾಗಲಿ, ನಮ್ಮ ಕುಟುಂಬದ ಯಾರೇ ಆಗಲಿ, ಹುಬ್ಬಳ್ಳಿಗೆ ಹೋದಾಗ ಸಿದ್ದರೂಢರ ಮಠಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ನಮ್ಮ ಅಜ್ಜಿ ಅವರು ಕೆಲವು ದಿನಗಳ ಕಾಲ ಈ ಮಠದಲ್ಲೇ ಇದ್ದರು ಎಂದು ಅಪ್ಪಾಜಿ ಹೇಳುತ್ತಿದ್ದರು. ಈ ಚಿತ್ರದ ಟ್ರೇಲರ್ ಬಿಡುಗಡೆಗೆ ಬರಬೇಕೆಂದು ಸಾಧುಕೋಕಿಲ ಅವರು ಕರೆದಾಗ ಸಂತೋಷವಾಯಿತು. ಟ್ರೇಲರ್ ತುಂಬಾ ಚೆನ್ನಾಗಿದೆ. ಸಿನಿಮಾ ನೋಡಲು ನಾನು ಕಾತುರನಾಗಿದ್ದೇನೆ ಎಂಬುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾತು.

ಶರಣ ಶ್ರೇಷ್ಠರಾದ ಸಿದ್ದರೂಢರ ಜೀವನಾಧಾರಿತ ಚಿತ್ರ ನಿರ್ದೇಶನ ಮಾಡಿದ್ದು ನನ್ನ ಪುಣ್ಯ. ಮಂಟೂರಿನ ಗುರುಗಳು ನನ್ನನ್ನ ಕರೆದು ಈ ರೀತಿಯ ಚಿತ್ರ ಮಾಡಿಕೊಬೇಕೆಂದು ಹೇಳಿದರು. ಈ ಸಲುವಾಗಿ ನನ್ನನ್ನು ದೆಹಲಿಗೆ ಕಳುಹಿಸಿ ಅಲ್ಲಿ ಸ್ವಾಮಿನಾರಾಯಣ ಆಶ್ರಮದಲ್ಲಿ ಗುರುಗಳ ಕುರಿತು ಚಿತ್ರ ಮಾಡಿದ್ದಾರೆ. ನೋಡಿ ಬನ್ನಿ ಎಂದರು. ನೋಡಿ ಬಂದೆ. ಎಲ್ಲರಿಗೂ ಸಾಧುಕೋಕಿಲ, ಇಂತಹ ಚಿತ್ರ ಮಾಡಿದ್ದಾರಾ? ಎಂಬ ಆಶ್ಚರ್ಯ. ನನಗೂ ಮೊದಲು ಹಾಗೆ ಅನಿಸಿತು.
ಹೆಚ್ಚಿನ ಜನ ಹುಬ್ಬಳ್ಳಿಯ ಸಿದ್ದರೂಢ ಮಠ ನೋಡಿರುತ್ತೀರಾ‌. ಆದರೆ ಮಂಟೂರಿನ ಸಿದ್ದರೂಢ ಮಠಕ್ಕೆ ಹೋಗಿ ಬನ್ನಿ. ಒಂದು ರೀತಿ ಸ್ವಾಮಿ ನಾರಾಯಣ ಮಂದಿರ ಇದ್ದ ಹಾಗೆ ಇದೆ. ನಮ್ಮ ಚಿತ್ರದಲ್ಲಿ ಸಿದ್ದರೂಢರ ಎಂಟು ವರ್ಷದಿಂದ ನಲವತ್ತೆಂಟು ವರ್ಷಗಳ ನಡುವೆ ನಡೆಯುವ ಮಹಿಮೆಗಳನ್ನು ತೋರಿಸಲಾಗಿದೆ.

ಮಂಟೂರು, ಹೈದರಾಬಾದ್, ಕಾಶ್ಮೀರ, ಸಕಲೇಶಪುರ ಹಾಗೂ ಕರ್ನಾಟಕದ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣ ನಡೆಯುವಾಗ ನನಗೂ ಕೆಲವು ವಿಶೇಷ ಅನುಭವಗಳಾದವು. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಈ ಚಿತ್ರ ನಿರ್ದೇಶನಕ್ಕೆ ನನಗೆ ನನ್ನ ಪುತ್ರ ಸುರಾಗ್ ಮಾಡಿದ ಸಹಾಯ ಮರೆಯುವಂತಿಲ್ಲ. ಇದೇ ನವೆಂಬರ್ 9ರಂದು ಮಂಟೂರಿನ ಚಿತ್ರಮಂದಿರದಲ್ಲಿ 55 ನಿಮಿಷಗಳ ಅವಧಿಯ ಈ ಚಿತ್ರ ಬಿಡುಗಡೆಯಾಗುತ್ತಿದೆ. ಅದೊಂದೆ ಕಡೆ ಮಾತ್ರ ಈ ಚಿತ್ರ ನಿರಂತರವಾಗಿ ಪ್ರದರ್ಶನವಾಗುತ್ತಿರುತ್ತದೆ ಎಂದರು ಸಾಧುಕೋಕಿಲ.

ಮಹಾಶರಣರಾದ ಸಿದ್ದರೂಢರ ಮಹಿಮೆ ಅಪಾರ. ಸುಮಾರು ಏಳುವರೆ ಸಾವಿರಕ್ಕೂ ಅಧಿಕ ಮಾರ್ಗವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದವರು ಅವರು. ಅಂತಹ ಮಹಿಮಾ ಪುರುಷರ ಬಗ್ಗೆ ನಮಗೆ ಚಿತ್ರವೊಂದನ್ನು ನಿರ್ಮಿಸುವ ಬಯಕೆಯಾಗಿ ಸಾಧುಕೋಕಿಲ ಅವರನ್ನು ಸಂಪರ್ಕಿಸಿದ್ದೆವು. ಅವರು ಉತ್ತಮವಾಗಿ ತೆಗೆದುಕೊಟ್ಟಿದ್ದಾರೆ. ನಮ್ಮ ಮಂಟೂರ್ ಪಾರ್ಕ್ ನಲ್ಲಿ ತ್ರಿಡಿ ಚಿತ್ರಮಂದಿರ, 7D ಚಿತ್ರಮಂದಿರ, ಸಿದ್ದರೂಢ ಥಿಯೇಟರ್, ಭೂತದಮನೆ, ಜುರಾಸಿಕ್‌ ಪಾರ್ಕ್‌, ಜಂಗಲ್ ಪಾರ್ಕ್, ವೈಷ್ಣೋದೇವಿ ಗುಹೆ, ವಿಜ್ಞಾನ ಲೋಕ, ಜಂಗಲ್ ಪಾರ್ಕ್, ಹೋಟೆಲ್ ಭೂಕಂಪ, ಗಾಜಿನ ಮನೆ ಹೀಗೆ ಹತ್ತು ಹಲವು ವಿಶೇಷಗಳಿವೆ.

ಸ್ವಾಮಿನಾರಾಯಣ ಆಶ್ರಮವನ್ನೇ ಹೋಲುವ ಹಾಗೆ ಪುಟ್ಟ ಊರಿನಲ್ಲಿ ಇದನೆಲ್ಲಾ ನಿರ್ಮಾಣ ಮಾಡಿದ್ದೇವೆ. ಎಲ್ಲರೂ ಈ ಸ್ಥಳಕ್ಕೆ ಭೇಟಿ ನೀಡಬೇಕು. ನಮ್ಮ ಊರಿನ ಚಿತ್ರಮಂದಿರದಲ್ಲಿ ಮಾತ್ರ ಈ ಚಿತ್ರ ಪ್ರದರ್ಶನವಾಗಲಿದೆ ಎಂದ ಸದಾನಂದ ಸ್ವಾಮಿಗಳು, ಡಾ||ರಾಜಕುಮಾರ್ ಅವರಿಗೆ ಮಠದೊಂದಿಗಿದ್ದ ಸಂಬಂಧವನ್ನು ನೆನಪಿಸಿಕೊಂಡರು. ಸಾಧುಕೋಕಿಲ ಪುತ್ರ ಸುರಾಗ್ ಚಿತ್ರ ಸಾಗಿ ಬಂದ ವಿಷಯವನ್ನು ವಿಸ್ತಾರವಾಗಿ ವಿವರಿಸಿದರು. ಕಲಾವಿದರಾದ ತೀರ್ಥೇಶ್ ಹಾಗೂ ಅರವಿಂದ್ ಕುಪ್ಲಿಕರ್ ಇದ್ದರು. ಜೈ ಆನಂದ್ ಛಾಯಾಗ್ರಹಣ, ಆನಂದ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಕಿರುತೆರೆ ಕ್ರಿಕೆಟ್! ಡಿಸೆಂಬರ್ ಎರಡನೇ ವಾರದಿಂದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ‌ ಶುರು ಗುರು!!

ವಾಸವಿ ವೆಂಚರ್ಸ್ ಸಂಸ್ಥೆ ಸಹಯೋಗದಲ್ಲಿ ಡಿಸೆಂಬರ್ ಎರಡನೇ ವಾರದಿಂದ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ನಡೆಯಲಿದ್ದು, ಇದರಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ. ಟಿಸಿಎಲ್ ನಲ್ಲಿ ತಂಡಗಳು ಈಗಾಗಲೇ ಅಭ್ಯಾಸದಲ್ಲಿ ತೊಡಗಿವೆ. ಈ ಪಂದ್ಯಾವಳಿಯಲ್ಲಿ ಕ್ರೇಜಿ ಕಿಲ್ಲರ್ಸ್, ಗ್ಯಾಂಗ್ ಗರುಡಾಸ್, ಗ್ರೌಂಡ್ ಹಂಟರ್ಸ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್, ಸರ್ಪ ಸ್ಟ್ರೈಕರ್ ಎಂಬ 6 ತಂಡಗಳಿರಲಿದ್ದು, ಕಿರುತರೆ ನಟ-ನಟಿಯರು ಭಾಗವಹಿಸಲಿದ್ದಾರೆ.

ದೀಪಕ್ ಹಾಗೂ ಮಂಜೇಶ್ ಸಾರಥ್ಯದಲ್ಲಿ ನಡೆಯುತ್ತಿರುವ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಬರೋಬ್ಬರಿ‌ 102 ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ. ಈಗಾಗಲೇ ಎರಡು ಸೀಸನ್ಸ್ ಯಶಸ್ವಿಯಾಗಿ ಪೂರೈಸಿರುವ ಟಿಸಿಎಲ್, ಮೂರನೇ ಸೀಸನ್ ಪಂದ್ಯಾವಳಿಗೆ ಸಜ್ಜಾಗಿದೆ.

ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಸ್ಟರ್ ಆನಂದ್, ಬಿಗ್ ಬಾಸ್ ಮಂಜು ಪಾವಗಡ, ಸಂಸ್ಥಾಪಕ ದೀಪಕ್, ಸಹ ಸಂಸ್ಥಾಪಕರಾದ ಮಂಜೇಶ್ ಮತ್ತು ವೈ ವಿ ಕಾರ್ತಿಕ್ ಸೇರಿದಂತೆ ಹಲವು‌ ಕಿರುತೆರೆ ಕಲಾವಿದರು ಭಾಗಿಯಾಗಿದ್ದರು.

ಕಿರುತೆರೆ ಕಲಾವಿದರೆಲ್ಲರೂ ಸೇರುವುದೇ ಒಂದು ಹಬ್ಬ. ಇಂತಹ ಹಬ್ಬಕ್ಕೆ ಟೆಲಿವಿಷನ್ ಕ್ರಿಕೆಟ್ ಲೀಗ್ ಸಜ್ಜಾಗಿದೆ. ಬರೋ ಡಿಸೆಂಬರ್ ಎರಡನೇ ವಾರದಿಂದ ಕಿರುತೆರೆ ಕಲಾವಿದರ ಕ್ರಿಕೆಟ್ ಹಂಗಾಮ ಶುರುವಾಗಲಿದೆ.

Categories
ಸಿನಿ ಸುದ್ದಿ

‘ಐ ಹೇಟ್ ಲವ್’ ಅಂತಿದ್ದಾರೆ ಧನ್ವೀರ್- 29ಕ್ಕೆ ಬೈ ಟು ಲವ್ ಸಾಂಗ್ ರಿಲೀಸ್

ಬಜಾರ್ ಹೀರೋ ಧನ್ವೀರ್.. ಭರಾಟೆ ಕ್ಯೂಟಿ ಶ್ರೀಲೀಲಾ ನಟನೆಯ ಬೈ ಟು ಲವ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹರಿ ಸಂತೋಷ ನಿರ್ದೇಶನದ ಈ ಸಿನಿಮಾ ಸೆಟ್ಟೇರಿದ ದಿನದಂದಲೂ ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಪೋಸ್ಟರ್..ಟೀಸರ್ ಹೀಗೆ ಪ್ರತಿ ಹಂತದಲ್ಲೂ ನಿರೀಕ್ಷೆಯ ಚಿಟ್ಟೆಯಾಗಿರುವ ಬೈ ಟು ಲವ್ ಸಿನಿಮಾ ಅಂಗಳದಿಂದ ಇದೇ 29ರಂದು ಐ ಹೇಟ್ ಲವ್ ಅನ್ನೋ ಹಾಡೊಂದು ರಿಲೀಸ್ ಆಗುತ್ತಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬೈ ಟು ಲವ್ ಸಿನಿಮಾಕ್ಕೆ ಸಾಥ್ ಕೊಟ್ಟಿದ್ದಾರೆ. ಅ. 29ರಂದು ಐ ಹೇಟ್ ಲವ್ ಹಾಡು ರಿಲೀಸ್ ಆಗಲಿದೆ. ಪ್ರತಿಯೊಬ್ಬರು ಸಪೋರ್ಟ್ ಮಾಡಿ ಎಂದಿದ್ದಾರೆ. ಅಂಜನೀಶ್ ಲೋಕನಾಥ್ ಮ್ಯೂಸಿಕ್ ಇರುವ ಐ ಹೇಟ್ ಲವ್ ಸಾಂಗ್ ನಲ್ಲಿ ಶ್ರೀಲೀಲಾ ಹಾಗೂ ಧನ್ವೀರ್ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಅಂದಹಾಗೇ ಬೈ ಟು ಲವ್ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಕಥಾಹಂದರ ಹೊಂದಿರುವ ಸಿನಿಮಾ. ಹರಿ ಸಂತೋಷ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಕೆವಿಎನ್‌ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣ, ಅಜನೀಶ್‌ ಲೋಕನಾಥ್‌ ಸಂಗೀತ ಹಾಗೂ ಯೋಗಾನಂದ್‌ ಸಂಭಾಷಣೆ ಈ ಚಿತ್ರಕ್ಕಿದೆ.

ಸಿನಿಮಾದ ಪೋಸ್ಟರ್ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಇತ್ತೀಚೆಗಷ್ಟೇ ಧನ್ವೀರ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದ್ದ ಟೀಸರ್ ಕೂಡ ಸಖತ್ ಸದ್ದು ಮಾಡಿತ್ತು. ಸದ್ಯ ಶೂಟಿಂಗ್ ಮುಗಿಸಿ ರಿಲೀಸ್ ಗೆ ಸನ್ನದ್ಧರಾಗಿರುವ ಬೈ ಟು ಲವ್ ಬಳಗದಿಂದ ಹೊಸ ಹಾಡು ಇದೇ 29ಕ್ಕೆ ರಿಲೀಸ್ ಆಗಲಿದೆ.

Categories
ಸಿನಿ ಸುದ್ದಿ

ವೇಲ್ಸ್ ಇನ್ನೋವೇಟಿವ್ ಫಿಲಂಸಿಟಿಯಾಗಿ ಬದಲಾದ ಇನ್ನೋವೇಟಿವ್ ಫಿಲಂ ಸಿಟಿ; ಫೆಬ್ರವರಿ ಹೊತ್ತಿಗೆ ಹೊಸರೂಪ

ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯನ್ನು ಚೆನ್ನೈನ ನಿರ್ಮಾಪಕ ನಟ ಹಾಗೂ ಉದ್ಯಮಿ ವೇಲ್ಸ್ ಗ್ರೂಪ್ ನ ಮುಖ್ಯಸ್ಥ ಡಾ||ಐಸಿರಿ ಕೆ. ಗಣೇಶ್ ಖರೀದಿಸಿದ್ದಾರೆ‌. ಇನ್ನು ಮುಂದೆ ವೇಲ್ಸ್‌ ಇನ್ನೋವೇಟಿವ್ ಫಿಲಂ ಸಿಟಿ ಎಂದು ಕರೆಸಿಕೊಳ್ಳಲಿದೆ. ಈ ವಿಷಯವನ್ನು ವೇಲ್ಸ್ ಇನ್ನೋವೇಟಿವ್ ಫಿಲಂ ಸಿಟಿಯ ಮ್ಯಾನೇಜರ್ ಬಶೀರ್ ಅಹ್ಮದ್ ತಿಳಿಸಿದ್ದಾರೆ‌.
ಕರ್ನಾಟಕದ ಮೇಲೆ ಅಪಾರ ಪ್ರೀತಿ ಹೊಂದಿರುವ ಗಣೇಶ್‌, ಈ ಜಾಗವನ್ನು ಖರೀದಿಸಿದ್ದಾರೆ. ಜೊತೆಗೆ ಅನೇಕ ಗ್ಲೋಬಲ್ ಶಾಲೆಗಳನ್ನು ತೆಗೆದುಕೊಂಡು, ವೇಲ್ಸ್ ರವೀಂದ್ರ ಭಾರತಿ ಶಾಲೆ ಎಂದು ನಾಮಕರಣ ಮಾಡಿದ್ದಾರೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನೂ ನೀಡುತ್ತಿದ್ದಾರೆ.

ಈ ಕುರಿತು ಮೈ ಮೂವೀ ಬಜಾರ್ ಹಾಗೂ ಶ್ರೇಯಸ್ಸ್ ಮೀಡಿಯಾ ಮುಖ್ಯಸ್ಥ ನವರಸನ್ ಹೇಳುವುದಿಷ್ಟು; “ನಾನು ಚೆನ್ನೈ ಗೆ ಹೋದಾಗಲೆಲ್ಲಾ ಗಣೇಶ್ ಸರ್ ಅವರನ್ನು ಭೇಟಿ ಮಾಡುತ್ತಿದ್ದೆ. ಅವರು ತಮಿಳಿನಲ್ಲಿ ಸುಮಾರು 20ಕ್ಕು ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ. ಈಗ ಇನ್ನೋವೇಟಿವ್ ಫಿಲಂ ಸಿಟಿಗೆ ನೂತನ ಕಾಯಕಲ್ಪ ನೀಡಲು ಸಜ್ಜಾಗಿದ್ದಾರೆ.
ಸದ್ಯ ಇನ್ನೋವೇಟಿವ್ ಫಿಲಂ ಸಿಟಿಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ನೀವು ಈ ಫಿಲಂ ಸಿಟಿಯನ್ನು ಹೊಸರೂಪದಲ್ಲಿ ನೋಡಬಹುದು. ಸದ್ಯದಲ್ಲೇ ಇದರ ಕಾರ್ಯ ಆರಂಭವಾಗಲಿದೆ.

ರೈಲ್ವೇ ನಿಲ್ದಾಣ ಸೇರಿದಂತೆ ಹಲವು ಬಗ್ಗೆಯ ಸೆಟ್ ಗಳನ್ನು ನಿರ್ನಿಸಲಾಗುತ್ತಿದೆ. ಇನ್ನು ಮುಂದೆ ಕನ್ನಡ ಸಿನಿಮಾ ಚಿತ್ರೀಕರಣಕ್ಕೆ ಬೇರೆ ಊರಿಗೆ ಹೋಗದೆ, ಅಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಈ ಫಿಲಂ ಸಿಟಿಯಲ್ಲಿ ನೀಡುವ ಉದ್ದೇಶವಿದೆ. ಚಿತ್ರದ ಮುಹೂರ್ತ ಸಮಾರಂಭದ ದಿನ ನಿರ್ಮಾಪಕರಿಂದ ಯಾವುದೇ ಹಣ ಪಡೆಯದೆ ಉಚಿತವಾಗಿ ನೀಡಬೇಕೆಂದು ತೀರ್ಮಾನವಾಗಿದೆ. ನಮ್ಮ ಸಂಸ್ಥೆ ವೇಲ್ಸ್ ಮ ಫಿಲಂ ಸಿಟಿಯೊಂದಿಗೆ ವರ್ಕಿಂಗ್ ಪಾರ್ಟ್ನರ್ ಆಗಿ ಕಾರ್ಯ ನಿರ್ವಹಿಸಲಿದೆ. ನಮ್ನ ಮೈ ಮೂವೀ ಬಜಾರ್ ಆಪ್ ಸಿದ್ದವಾಗುತ್ತಿದ್ದು, ಇದು ಸಹ ಚಿತ್ರರಂಗದ ಎಲ್ಲಾ ನಿರ್ಮಾಪಕರಿಗೆ ಅನುಕೂಲವಾಗಿರಲಿದೆ. ಈ ಎಲ್ಲಾ ಕಾರ್ಯಗಳಿಗೂ ನಿಮ್ಮ ಬೆಂಬಲವಿರಲಿ ಎಂಬುದು ನವರಸನ್ ಮಾತು.

Categories
ಸಿನಿ ಸುದ್ದಿ

ಭಜರಂಗಿಯ ಅಪ್ಪುಗೆ! ಅಕ್ಟೋಬರ್‌ 29ಕ್ಕೆ ಶಿವಣ್ಣ ಎಂಟ್ರಿ!!

ಕನ್ನಡದ ಬಹುನಿರೀಕ್ಷೆಯ ಚಿತ್ರ “ಭಜರಂಗಿ 2” ಅಕ್ಟೋಬರ್‌ 29ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾ ಸಾಕಷ್ಟು ಕ್ರೇಜ್‌ ಹೆಚ್ಚಿಸಿದೆ. ಬಿಡುಗಡೆಗೂ ಮುನ್ನ ಚಿತ್ರತಂಡ, ಪ್ರೀರಿಲೀಸ್‌ ಈವೆಂಟ್‌ ಆಯೋಜಿಸಿತ್ತು. ಅಂದು ಕನ್ನಡದ ಸ್ಟಾರ್‌ ನಟರು ಆ ಕಲರ್‌ಫುಲ್‌ ವೇದಿಕೆ ಮೇಲಿದ್ದರು. ತಾಜ್‌ವೆಸ್ಟೆಂಡ್‌ ಸಭಾಂಗಣ ಕೂಡ ಹೌಸ್‌ಫುಲ್‌ ಆಗಿತ್ತು. ಶ್ರೇಯಸ್‌ ಮೀಡಿಯಾ ಆಯೋಜಿಸಿದ್ದ ಈವೆಂಟ್‌ನಲ್ಲಿ “ಭಜರಂಗಿ”ಯದ್ದೇ ಭರ್ಜರಿ ಭರಾಟೆ!.

ಹೌದು, ಶಿವರಾಜಕುಮಾರ್‌ ಅಭಿನಯದ “ಭಜರಂಗಿ 2” ಚಿತ್ರ ಬಿಡುಗಡೆಯಾಗುತ್ತಿರುವ ಸುದ್ದಿಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈಗಾಗಲೇ ಚಿತ್ರದ ಪೋಸ್ಟರ್‌, ಟೀಸರ್‌, ಟ್ರೇಲರ್‌ ಮತ್ತು ಹಾಡುಗಳು ಜನಮನ ಗೆದ್ದಿವೆ. ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಬಂದಿವೆ. ಅಂದು ನಟ ಯಶ್‌, ಪುನೀತ್‌ ರಾಜಕುಮಾರ್‌ ಮುಖ್ಯ ಆಕರ್ಷಣೆಯಾಗಿದ್ದರು. ಅಂತೆಯೇ “ಭಜರಂಗಿ 2” ಸಿನಿಮಾ ಕುರಿತು ಸಾಕಷ್ಟು ಮಾತಾಡಿದರು.

“ನಾನು ಕೂಡ ಶಿವರಾಜಕುಮಾರ್‌ ಅವರ ಅಪ್ಪಟ ಅಭಿಮಾನಿ. ಇಡೀ ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ನಾವೆಲ್ಲರೂ ಒಂದೇ ಕುಟುಂಬದವರು. ಎಲ್ಲಾ ಸಿನಿಮಾಗಳು ಈಗಷ್ಟೇ ರಿಲೀಸ್‌ ಆಗುತ್ತಿವೆ. ಈ ಸಿನಿಮಾ ಬಿಡುಗಡೆಗೆ ನಾನು ಕೂಡ ಕಾಯುತ್ತಿದ್ದೇನೆ. ಶಿವರಾಜಕುಮಾರ್‌ ಅವರಲ್ಲಿ ಒಳ್ಳೆಯ ಮನಸ್ಸಿದೆ. ಚಿತ್ರರಂಗ ಅವರ ಜೊತೆಗಿದೆ. ಅವರು ಹಾಕಿಕೊಟ್ಟಂತೆ ನಾವೆಲ್ಲ ನಡೆಯುತ್ತಿದ್ದೇವೆ” ಅಂದರು ಯಶ್.‌
ನಾನು ಶಿವಣ್ಣ ಫ್ಯಾನ್ಸ್‌ ಅನ್ನುತ್ತಲೇ ಮಾತಿಗಿಳಿದ ಪುನೀತ್‌ ರಾಜಕುಮಾರ್‌, ನನಗೆ ಅವರ “ಮನ ಮೆಚ್ಚಿದ ಹುಡುಗಿ” , “ಜನುಮದ ಜೋಡಿ” ಮತ್ತು “ಕುರುಬನ ರಾಣಿ” ಪಾತ್ರಗಳು ಇಷ್ಟ. ಅವರು ಹಳ್ಳಿ ಲುಕ್‌ನಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾರೆ.

ಇನ್ನು ಭಜರಂಗಿ 2 ಸಿನಿಮಾ ಯಶಸ್ಸು ಕಾಣಲಿ. ನಿರ್ದೇಶಕ ಎ.ಹರ್ಷ ಅವರು ಸಾಕಷ್ಟು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಕೂಡ ಎಲ್ಲರಿಗೂ ಇಷ್ಟವಾಗುವಂತೆಯೇ ಮಾಡಿದ್ದಾರೆ. ಪ್ರತಿ ಹಂತದಲ್ಲೂ ಚಿತ್ರತಂಡ ಶ್ರಮವಹಿಸಿ ಕೆಲಸ ಮಾಡಿದೆ. ಎಲ್ಲರಿಗೂ ಈ ಚಿತ್ರ ಗೆಲುವು ತಂದುಕೊಡಲಿ ಎಂದರು ಪುನೀತ್.‌
ಹರ್ಷ ಕೂಡ ಶಿವರಾಜ್‌ ಕುಮಾರ್‌ ಅವರ ಸರಳತೆ ಮತ್ತು ಸಹಕಾರ ಕುರಿತು ಮಾತನಾಡಿದರು. ನಿರ್ಮಾಪಕರು ತೋರಿದ ಪ್ರೀತಿಗೆ ಭಾವುಕರಾದರು. ಅದೇ ವೇಳೆ ವೇದಿಕೆ ಏರಿದ ನಿರ್ಮಾಪಕ ಜಯಣ್ಣ ಕೂಡ ಕೆಲಹೊತ್ತು ಭಾವುಕತೆಗೆ ಜಾರಿದರು.

ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ. ಅದಕ್ಕೆ ಶಿವಣ್ಣ ಕೊಟ್ಟ ಸಹಕಾರ ದೊಡ್ಡದು. ನಮಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಈ ಚಿತ್ರಕ್ಕೆ ನಾನು ಎಲ್ಲವನ್ನೂ ನೀಡಿದ್ದೇನೆ. ಒಳ್ಳೆಯ ಚಿತ್ರವನ್ನು ಜನ ಕೈಬಿಡೋದಿಲ್ಲ ಎಂಬ ನಂಬಿಕೆ ನನಗಿದೆ” ಎಂದರು ಜಯಣ್ಣ.
ನಿರ್ದೇಶಕರಾದ ಸಂತೋಷ್‌ ಆನಂದರಾಮ್‌, ವೃಷಭ್‌ ಶೆಟ್ಟಿ, ದಿನಕರ್‌ ತೂಗುದೀಪ, ಶೃತಿ, ಭಾವನಾ, ಪ್ರಸನ್ನ, ಚೆಲುವರಾಜ್‌, ಗಿರೀಶ್‌ ಸೇರಿದಂತೆ ಹಲವರು ಮಾತನಾಡಿದರು.

ಇದೇ ವೇಳೆ “ಭಜರಂಗಿ 2” ಚಿತ್ರದ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿ ರಂಜಿಸಿದರು. ಕೊನೆಯಲ್ಲಿ ಶಿವರಾಜ್‌ ಕುಮಾರ್‌, ಯಶ್‌ ಹಾಗು ಪುನೀತ್‌ ಕೂಡ ಸಾಂಗ್‌ಗೆ ಸ್ಟೆಪ್‌ ಹಾಕಿದರು.

Categories
ಸಿನಿ ಸುದ್ದಿ

ಒಡೆಯರ್‌ ಮೂವೀಸ್‌ನ ಡೊಳ್ಳು ಸದ್ದು ಜೋರು! ಪವನ್‌ ಒಡೆಯರ್‌ ದಂಪತಿ ನಿರ್ಮಾಣದ ಫಸ್ಟ್‌ ಸಿನ್ಮಾ ಇದು!

ನಿರ್ದೇಶಕ ಪವನ್‌ ಒಡೆಯರ್‌ ಹಾಗು ಅವರ ಪತ್ನಿ ಅಪೇಕ್ಷಾ ಪುರೋಹಿತ್‌ ಅವರ ಒಡೆಯರ್‌ ಮೂವೀಸ್ ಸಂಸ್ಥೆಯಿಂದ ನಿರ್ಮಾಣ ಆಗಿರುವ ಮೊದಲ ಸಿನಿಮಾ “ಡೊಳ್ಳು” ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಸಿಕ್ಕಿದೆ. ಸಾಗರ್‌ ಪುರಾಣಿಕ್‌ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ೨೦೨೦ರಲ್ಲಿ ಸಿಬಿಎಫ್‌ಸಿಯಿಂದ ಯು ಸರ್ಟಿಫಿಕೆಟ್‌ ಪಡೆದು ಅಂತಾರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದೆ.

ಈಗಾಗಲೇ ಅಮೇರಿಕಾದ ಕಲೈಡೊಸ್ಕೋಪ್ ಇಂಡಿಯನ್ ಫಿಲಂ ಫೆಸ್ಟಿವಲ್ ಬಾಸ್ಟನ್ ನಲ್ಲಿ ಮೊದಲ ಪ್ರದರ್ಶನ ಕಂಡು, ಎಲ್ಲಾ ಪ್ರೇಕ್ಷಕರ ಗಮನ ಸೆಳೆಯುವುದರೊಂದಿಗೆ ಎಲ್ಲರ ಪ್ರಶಂಸೆಯನ್ನು ಪಡೆದಿದೆ. ಇನ್ನೂ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣಲಿದೆ. ಢಾಕಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಹಾಗೂ ಡಾಲಸ್ ಸೌತ್ ಏಶಿಯನ್ ಫಿಲಂ ಫೆಸ್ಟಿವಲ್ ಗಳಲ್ಲಿ ಈಗಾಗಲೇ ಆಯ್ಕೆಯಾಗಿದೆ.

ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಎಂಬ ಒಂದು ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ, ಸರಸ್ವತಿ ಪಿಂಪ್ಳೆ ಫೌಂಡೇಶನ್ ವತಿಯಿಂದ ದಾದಾಸಾಹೇಬ್ ಫಾಲ್ಕೆ ಬೆಸ್ಟ್ ಕನ್ನಡ ಫಿಲ್ಮ್ ಎಂಬ ಪ್ರಶಸ್ತಿ ಡೊಳ್ಳು ಚಿತ್ರಕ್ಕೆ ಲಭಿಸಿದೆ. ದಾದಾಸಾಹೇಬ್ ಫಾಲ್ಕೆ ಎಂ.ಎಸ್.ಕೆ ಟ್ರಸ್ಟ್ ವತಿಯಿಂದ 1 ಲಕ್ಷ ನಗದು ಬಹುಮಾನ ಕೂಡ ಸಿಕ್ಕಿದೆ. ಈ ಕುರಿತಂತೆ ಪವನ್‌ ಒಡೆಯರ್‌ ದಂಪತಿ ಖುಷಿ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಚಂದ್ರ ಮಯೂರ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಡಾ. ಪ್ರಭುದೇವ, ವರುಣ್ ಶ್ರೀನಿವಾಸ್, ಚಂದ್ರಮನು ಇತರರು ನಟಿಸಿದ್ದಾರೆ.
ಅಭಿಲಾಷ್ ಕಳತ್ತಿ ಕ್ಯಾಮೆರಾವಿದೆ. ಎಂ. ಅನಂತ್ ಕಾಮತ್ ಸಂಗೀತವಿದೆ. ಬಿ ಎಸ್ ಕೆಂಪರಾಜು ಸಂಕಲನ ಮಾಡಿದರೆ, ಶ್ರೀನಿಧಿ ಡಿ ಎಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ದೇವಿ ಪ್ರಕಾಶ್ ಕಲಾನಿರ್ದೇಶನವಿದೆ. ನಿತಿನ್ ಲೂಕೋಸ್ ಶಬ್ದ ವಿನ್ಯಾಸ ಮಾಡಿದ್ದಾರೆ.

Categories
ಸಿನಿ ಸುದ್ದಿ

ರಾಜ್ಯೋತ್ಸವದಂದು “ಕನ್ನಡಿಗ ನೀನಾಗು ಬಾ” ಆಲ್ಬಂ ಸಾಂಗ್ ಬಿಡುಗಡೆ

ಎಸ್.ಪಿ.ಬಿ ಕಂಠಸಿರಿಯಲ್ಲಿ ಮೂಡಿಬಂದಿದ್ದ “ಆಟೋ” ಚಿತ್ರದ ಅದ್ಭುತ ಗೀತೆಯ ಮರುಚಿತ್ರಣ ರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ

ಕನ್ನಡ ಹಾಗೂ ಗೋವಿನ ಬಗ್ಗೆ ಅಪಾರ ಅಭಿಮಾನವಿರುವ ಮಾರುತಿ ಮೆಡಿಕಲ್ಸ್‌ ನ ಮಹೇಂದ್ರ ಮಣೋತ್ 2009ರಲ್ಲಿ “ಆಟೋ” ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದಲ್ಲಿ ಗಾನಗಾರೂಡಿಗ ಎಸ್ ಪಿ ಬಾಲಸುಬ್ರಹ್ಮಣ್ಯಂ “ಶತಶತಮಾನಗಳೇ ಉರುಳಲಿ” ಎಂಬ ಹಾಡನ್ನು ಹಾಡಿದ್ದರು. ಈಗ ಅದೇ ಚಿತ್ರದ ಹಾಡನ್ನು ಮಹೇಂದ್ರ ಮಣೋತ್ ಮರು ನಿರ್ಮಾಣ ಮಾಡಿದ್ದಾರೆ ರಾಜ್ಯೋತ್ಸವದ ಸಲುವಾಗಿ ಬಿ.ಪಿ.ಹರಿಹರನ್ ಈ ಹಾಡನ್ನು ನಿರ್ದೇಶನ ಮಾಡಿ, ಬಿಡುಗಡೆ ಮಾಡಲಾಗುತ್ತಿದೆ.

ಮಲ್ಲಿಕಾರ್ಜುನ ಮುತ್ತಲಗೇರಿ ಈ ಹಾಡನ್ನು ಬರೆದಿದ್ದು, ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ. ನಾಗೇಂದ್ರ ರಂಗರಿ ಛಾಯಾಗ್ರಹಣ ಮಾಡಿದ್ದಾರೆ.ಕನ್ನಡ ರಾಜ್ಯೋತ್ಸವದ ಸಲುವಾಗಿ ಹಾಡನ್ನು ನಮ್ಮ ನಿರ್ದೇಶಕರಾದ ಬಿ.ಪಿ.ಹರಿಹರನ್ ನಿರ್ದೇಶಿಸಿದ್ದಾರೆ. ಬೆಂಗಳೂರು, ಮೈಸೂರಿನ ಸುಂದರತಾಣಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಿದ್ದೇವೆ. ಈ ಹಾಡನ್ನು ಹಾಡಿರುವ ಎಸ್ ಪಿ ಬಿ ಅವರಿಗೆ ಈ ಹಾಡನ್ನು ಅರ್ಪಣೆ ಮಾಡಿದ್ದೇವೆ. ಮುಂದೆ ನಾಡು, ನುಡಿಗೆ ಸಂಬಂಧಿಸಿದ ಅನೇಕ ಹಾಡುಗಳನ್ನು ಬಿಡುಗಡೆ ‌ಮಾಡುತ್ತೇವೆ ಎಂಬುದು ನಿರ್ಮಾಪಕ ಹಾಗೂ ನಟ ಮಹೇಂದ್ರ ಮಣೋತ್ ಅವರ ಮಾತು.

ಕಂಚಿನಕಂಠದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಹಾಡಿಗೆ ನಿರ್ದೇಶನ ಮಾಡಿರುವುದು ನನ್ನ ಸೌಭಾಗ್ಯ. ಇದಕ್ಕೆ ಅವಕಾಶ ನೀಡಿದ ಮಹೇಂದ್ರ ಮಣೋತ್ ಅವರಿಗೆ ಚಿರ ಋಣಿ. ಸಾಲುಮರದ ತಿಮ್ಮಕ್ಕ, ಸಾಹಿತಿ ದೊಡ್ಡರಂಗೇಗೌಡ‌‌ ಮುಂತಾದ ಗಣ್ಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ ಎಂದರು ನಿರ್ದೇಶಕ ಬಿ.ಪಿ.ಹರಿಹರನ್.

Categories
ಸಿನಿ ಸುದ್ದಿ

ಲಹರಿ ತೆಕ್ಕೆಗೆ ಬನಾರಸ್ ಆಡಿಯೋ – ಚೊಚ್ಚಲ ನಾಯಕ‌ ನಟರ ಸಿನಿಮಾಗಳ‌ಲ್ಲಿ ಇದು ದಾಖಲೆ !

ಲಹರಿ’ ತೆಕ್ಕೆಗೆ ‘ಬನಾರಸ್’ ಆಡಿಯೋ ರೈಟ್ಸ್ ಜಮೀರ್ ಪುತ್ರನ ಡೆಬ್ಯೂ ಚಿತ್ರ ಹೊಸ ದಾಖಲೆ- ಝೈದ್ ಖಾನ್- ಜಯತೀರ್ಥ ಜುಗಲ್ ಬಂಧಿ ಮೋಡಿ !

ನಾಯಕ‌‌ ನಟ ಹಾಗೂ‌ ನಿರ್ಮಾಣ ಸಂಸ್ಥೆಯೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ ಬನಾರಸ್ ‘ ಚಿತ್ರದ ಆಡಿಯೋ- ವಿಡಿಯೋ ಹಕ್ಕುಗಳು ಕನ್ನಡದ ಪ್ರತಿಷ್ಟಿತ ಆಡಿಯೋ ಸಂಸ್ಥೆ ಲಹರಿ ಪಾಲಾಗಿವೆ. ಈ ಚಿತ್ರವು ಕನ್ನಡ, ತೆಲುಗು,ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ‌ ಬರುತ್ತಿದ್ದು, ಆ ಎಲ್ಲಾ ಭಾಷೆಯ ಆಡಿಯೋ‌ ಮತ್ತು ವಿಡಿಯೋ ಹಕ್ಕುಗಳನ್ನು ಲಹರಿ‌ ಸಂಸ್ಥೆ ಖರೀದಿಸಿದೆ. ಸದ್ಯಕ್ಕೆ ಅದರ‌ ಮೊತ್ತ ರಿವೀಲ್ ಆಗಿಲ್ಲವಾದರೂ, ಚೊಚ್ಚಲ ನಾಯಕ‌ ನಟರೊಬ್ಬರ ಸಿನಿಮಾಗಳ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಲಹರಿ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ.

ಈ‌ ‌ಕುರಿತು‌ ಲಹರಿ ಸಂಸ್ಥೆಯೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ, ಹಲವು ಕಾರಣಕ್ಕೆ ಸುದ್ದಿಯಲ್ಲಿರುವ ಬನಾರಸ್ ಚಿತ್ರದ ಆಡಿಯೋ – ವಿಡಿಯೋ ಹಕ್ಕುಗಳನ್ನು ಖರೀದಿಸಿದ್ದಕ್ಕೆ ಹೆಮ್ಮೆ ಇದೆ ಎಂದಿದೆ. ಆಂದ ಹಾಗೆ, ‘ ಬನಾರಸ್’ ‘ ಒಲವೇ ಮಂದಾರ ಹಾಗೂ ಬೆಲ್ ಬಾಟಮ್ ಖ್ಯಾತಿಯ ನಿರ್ದೇಶಕ ಜಯತೀರ್ಥ ಡೈರೆಕ್ಟ್ ಮಾಡಿರುವ ಚಿತ್ರ. ಕಾಂಗ್ರೇಸ್ ಶಾಸಕರಾದ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ಈ‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿಕೊಡ್ತಿದ್ದಾರೆ. ಅಚ್ಚರಿ ಅಂದರೆ ಝೈದ್ ಡೆಬ್ಯೂ ಚಿತ್ರ ಹೊಸ ದಾಖಲೆ ಬರೆದಿದೆ. ಈ ನಯಾ ಹಿಸ್ಟ್ರಿಗೆ ಮೊದಲ ಕಾರಣ ಹಾಡುಗಳು, ಎರಡನೇ ಕಾರಣ ಲಹರಿ ಸಂಸ್ಥೆ.

ಲಹರಿ ಬರೀ ದೊಡ್ಡವರ ಸಿನಿಮಾಗಳಿಗಷ್ಟೇ ಸೀಮಿತವಾಗಿಲ್ಲ, ಸ್ಟಾರ್ ನಟರುಗಳಿಗಷ್ಟೇ ಮಣೆ ಹಾಕಲ್ಲ‌. ಕಲಾವಿದರು ಯಾರೇ ಇರಲಿ, ಸಿನಿಮಾ ಯಾವುದೇ ಇರಲಿ ಸಂಗೀತದಲ್ಲಿ ಹೊಸತನವಿದೆ, ಸಾಹಿತ್ಯ ಕೇಳುಗರನ್ನು‌ ಆಕರ್ಷಿಸುತ್ತದೆ, ಹಾಡುಗಾರನ ಕಂಠದಲ್ಲಿ ನಾವೀನ್ಯತೆಯಿದೆ ಎಂತಾದರೆ ಸ್ಟಾರ್ ಢಮ್ ನೋಡಲ್ಲ. ಬದಲಾಗಿ ಕಲೆಗೆ ಬೆಲೆಕೊಡ್ತಾರೆ, ದಾಖಲೆ‌ ಬೆಲೆ ಕೊಟ್ಟು ಪ್ರೋತ್ಸಾಹಿಸ್ತಾರೆ.ಇದಕ್ಕೆ ಹಲವಾರು ನಿದರ್ಶನಗಳಿವೆ. ಸದ್ಯ, ಬನಾರಸ್ ಚಿತ್ರ ತಾಜಾ ಉದಾಹರಣೆ’ ಬನಾರಸ್ ಚಿತ್ರ’

ಬನಾರಸ್ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು,
ಐದು ಭಾಷೆಯ ಆಡಿಯೋ ‌ಹಾಗೂ ವಿಡಿಯೋ ರೈಟ್ಸ್ ನ ದುಬಾರಿ ಮೊತ್ತ ಕೊಟ್ಟೆ ಲಹರಿ ಹಾಗೂ ಟಿ ಸೀರೀಸ್ ಜಂಟಿಯಾಗಿ ಖರೀದಿಸಿದೆ. ಹಿಂದೆಂದೂ ಕೂಡ‌ ಡೆಬ್ಯೂ ಹೀರೋನ ಸಿನಿಮಾದ ಎಲ್ಲಾ ಭಾಷೆಯ ಆಡಿಯೋ ಹಕ್ಕುಗಳ ರೈಟ್ಸ್ ಪಡೆದುಕೊಂಡಿರಲಿಲ್ಲ.

ಇದೇ ಮೊದಲ ಭಾರಿಗೆ ಪ್ರತಿಷ್ಠಿತ ಆಡಿಯೋ ಕಂಪೆನಿಗಳು
ಯುವನಟನ ಚೊಚ್ಚಲ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿವೆ. ಹೀಗಾಗಿ, ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಇಂಡಿಯನ್ ಸಿನ್ಮಾ ಇಂಡಸ್ಟ್ರಿಯಲ್ಲೇ ಹೊಸ ದಾಖಲೆ ಬರೆದಂತಾಗಿದೆ.

Categories
ಸಿನಿ ಸುದ್ದಿ

ಸೂಪರ್‌ಸ್ಟಾರ್ ರಜಿನಿಕಾಂತ್ ಮುಡಿಗೇರಿದ `ದಾದಾ ಸಾಹೇಬ್ ಫಾಲ್ಕೆ’; ಗುರು-ಅಣ್ಣ-ಸ್ನೇಹಿತನಿಗೆ ಪ್ರಶಸ್ತಿ ಅರ್ಪಿಸಿದ ತಲೈವಾ !

ದಾದಾ ಸಾಹೇಬ್ ಫಾಲ್ಕೆ' ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ. ೨೦೨೦ನೇ ಸಾಲಿನ ಈ ಹೆಮ್ಮೆಯ ಪ್ರಶಸ್ತಿ ಸೌತ್ ಸಿನಿಮಾ ಇಂಡಸ್ಟ್ರಿ ಕಂಡಂತಂಹ ಅತ್ಯದ್ಭುತ ನಟ, ವಲ್ಡ್ ವೈಡ್ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿರುವಂತಹ ತಲೈವಾ ಸೂಪರ್‌ಸ್ಟಾರ್ ರಜಿನಿಕಾಂತ್ ಮುಡಿಗೇರಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ದೆಹಲಿ ವಿಜ್ಞಾನ ಭವನದಲ್ಲಿ ನಡೆದ 67 ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿಪಡೆಯಪ್ಪ’ನಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.


ನಡೆದು ಬಂದ ಹಾದಿಯನ್ನು, ಕೈಹಿಡಿದು ಮೇಲಕ್ಕೆತ್ತಿದವರನ್ನು, ದಾರಿ ಮಾರ್ಗ ತೋರಿಸಿಕೊಟ್ಟವರನ್ನು, ಪ್ರತಿಭೆ ಗುರ್ತಿಸಿ ಅವಕಾಶ ಕಲ್ಪಿಸಿಕೊಟ್ಟವರನ್ನು ತಲೈವಾ ಮರೆತಿಲ್ಲ ಮತ್ತು ಮರೆಯೋದಿಲ್ಲ ಎನ್ನುವುದಕ್ಕೆ ಫಾಲ್ಕೆ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಸಾಕ್ಷಿಯಾಯ್ತು. ಹೌದು, ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಜಿನಿಕಾಂತ್, ಫಾಲ್ಕೆ ಪ್ರಶಸ್ತಿಯನ್ನ ಗುರು-ಅಣ್ಣ-ಸ್ನೇಹಿತನಿಗೆ ಹಾಗೂ ಅಭಿಮಾನಿ ದೇವರುಗಳಿಗೆ ಅರ್ಪಣೆ ಮಾಡಿದರು. ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮೆರಾ ಎದುರಿಸಲಿಕ್ಕೆ ಹಾಗೂ ಒಬ್ಬ ಕಲಾವಿದನಾಗಲಿಕ್ಕೆ ಅವಕಾಶ ಮಾಡಿಕೊಟ್ಟ ನಿರ್ದೇಶಕ ಕೆ. ಬಾಲಚಂದರ್ ಅವರನ್ನು ನೆನಪು ಮಾಡಿಕೊಂಡರು. ಇವರು ತಲೈವಾ ಪಾಲಿಗೆ ಗುರು ಹಾಗೂ ಮೆಂಟರ್ ಆಗಿದ್ದವರು. ಇವರ ಅಪೂರ್ವ ರಾಗಂಗಳ್ ಚಿತ್ರದ ಮೂಲಕವೇ ಪಡೆಯಪ್ಪ ಮಾಯಲೋಕಕ್ಕೆ ಪಾದಾರ್ಪಣೆ ಮಾಡಿದ್ದು. ಈ ಚಿತ್ರದಿಂದ ಶುರುವಾದ ಸಿನಿಜರ್ನಿ `ಅಣ್ಣಾತೆ’ವರೆಗೂ ಬಂದುನಿಂತಿದೆ. ಇವತ್ತು ಇಡೀ ಸಿನಿಮಾ ಜಗತ್ತು ರಜನಿಕಾಂತ್‌ರನ್ನು ಆರಾಧಿಸುವಂತೆ ಮಾಡಿದೆ.

ತಲೈವಾ ಕಲಾವಿದನಾಗುವ ಮೊದಲು ಬಸ್ ಕಂಡೆಕ್ಟರ್ ಆಗಿದ್ದವರು ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯ. ರಜಿನಿಕಾಂತ್ ಬಿಎಂಟಿಸಿ ಕಂಡೆಕ್ಟರ್ ಆಗಿದ್ದ ಕಾಲದಲ್ಲಿ ಸ್ನೇಹಿತನಾಗಿದ್ದ ಡ್ರೈವರ್ ವೃತ್ತಿಯನ್ನು ಮಾಡುತ್ತಿದ್ದ ವ್ಯಕ್ತಿಯ ಜೊತೆ ಈಗಲೂ ಅದೇ ಸ್ನೇಹ-ಬಾಂದವ್ಯವನ್ನು ಹೊಂದಿದ್ದಾರೆ. ಬೆಂಗಳೂರಿಗೆ ಬಂದಾಗೆಲ್ಲ ಆ ಸ್ನೇಹಿತನ ಮನೆಗೆ ಹೋಗ್ತಾರೆ ಮಾತ್ರವಲ್ಲ ಬಾಲ್ಯದಲ್ಲಿ ಆಡಿ ಬೆಳೆದ ಜಾಗ, ತಿಂಡಿತಿನಿಸು ತಿಂದ ಅಂಗಡಿಗಳು, ಹೋಟೆಲ್‌ಗಳು, ದೇವಸ್ತಾನಗಳು ಹೀಗೆ ಹಳೆಯ ಜಾಗಗಳಿಗೆ ಭೇಟಿ ಕೊಟ್ಟು ನೆನಪುಗಳನ್ನು ಮೆಲುಕು ಹಾಕ್ತಾರೆ. ಇಂತಿಪ್ಪ ರಜಿನಿಯ ಸ್ನೇಹಿತ ಮತ್ಯಾರು ಅಲ್ಲ ಒನ್ ಅಂಡ್ ಓನ್ಲೀ ರಾಜ್‌ ಬಹದ್ದೂರ್ ಅವರು. ಇವರೇ, ತಲೈವಾ ಬಣ್ಣದ ಲೋಕದ ಕಡೆ ಆಕರ್ಷಿತರಾಗಲಿಕ್ಕೆ ಮೊದಲ ಕಾರಣ. ಪಡೆಯಪ್ಪನೊಳಗಿದ್ದ ಕಲಾವಿದನನ್ನು ಮೊದಲು ಗುರ್ತಿಸಿದ್ದೇ ಗೆಳೆಯ ರಾಜ್‌ಬಹದ್ದೂರ್. ಹೀಗಾಗಿ, ಫಾಲ್ಕೆ ಪ್ರಶಸ್ತಿಯ ಪಾಲು ದೋಸ್ತನಿಗೂ ಸಲ್ಲಬೇಕು ಎಂದು ಗೆಳೆಯನನ್ನು ನೆನೆದರು.

ಗುರು ಹಾಗೂ ಗೆಳೆಯನೊಟ್ಟಿಗೆ ರಕ್ತಹಂಚಿಕೊಂಡು ಹುಟ್ಟಿದ ಸಹೋದರನನ್ನು ಸ್ಮರಿಸಿದರು. ತಂದೆಯ ಸ್ಥಾನದಲ್ಲಿ ನಿಂತುಕೊಂಡು ತಲೈವಾರನ್ನ ಸಾಕಿ ಬೆಳೆಸಿ ದೊಡ್ಡವನನ್ನಾಗಿ ಮಾಡಿದ್ದಾರೆ. ಜೊತೆಗೆ ಆಧ್ಯಾತ್ಮದೆಡೆಗೆ ವಾಲುವುದಕ್ಕೂ ಸ್ಪೂರ್ತಿಯಾಗಿದ್ದಾರಂತೆ. ಶುಭಕಾರ್ಯ-ಸಿನಿಮಾ ಬಿಡುಗಡೆಯ ಜೊತೆಗೆ ಮಾನಸಿಕ ನೆಮ್ಮದಿಯಾಗಿ ಪಡೆಯಪ್ಪ ಹಿಮಾಲಯಕ್ಕೆ ಭೇಟಿನೀಡುವುದು ನಿಮೆಗೆಲ್ಲ ಗೊತ್ತಿದೆ.

ಸೂಪರ್‌ಸ್ಟಾರ್ ಆಗಿ ಮೆರೆಯುವ ರಜಿನಿಕಾಂತ್ ಆಧ್ಯಾತ್ಮಿಕತೆಯಲ್ಲಿ ಧನ್ಯತೆಯನ್ನು ಕಾಣುತ್ತಿದ್ದಾರೆ. ಒಟ್ನಲ್ಲಿ ಸಾಮಾನ್ಯ ಶಿವಾಜಿ ರಾವ್ ಗಾಯಕ್‌ವಾಡ್ ಆಗಿದ್ದ ತಲೈವಾ ಇವತ್ತು ಇಂಡಿಯನ್ ಸಿನ್ಮಾ ಇಂಡಸ್ಟ್ರಿಯೇ ತಲೆ ಎತ್ತಿ ನೋಡುವಂತಹ ನಟನಾಗಿ ಬೆಳೆದಿದ್ದಾರೆ. ಕೋಟ್ಯಾಂತರ ಅಭಿಮಾನಿ ದೇವರುಗಳನ್ನು ಸಂಪಾದನೆ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ, ಬಾಷಾ ಕಲೆಯ ಮೇಲಿಟ್ಟಿರುವ ಶ್ರದ್ದಾ-ಭಕ್ತಿಯ ಜೊತೆಗೆ ಗುರುಗಳಾದ ಬಾಲಚಂದರ್, ಅಣ್ಣ ಸತ್ಯನಾರಾಯಣ್, ಸ್ನೇಹಿತ ರಾಜ್‌ಬಹದ್ದೂರ್ ದಾರಿಮಾರ್ಗ ಹಾಗೂ ಅಭಿಮಾನಿ ದೇವರುಗಳ ಆಶೀರ್ವಾದ ಮತ್ತು ಹಾರೈಕೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಖತ್‌ ಸೌಂಡ್‌ ಮಾಡ್ತಿದೆ ಸಖತ್‌ ಟೀಸರ್!‌ ಗಣಿ-ಸುನಿ ಜೋಡಿ ಕಾಮಿಡಿಗೆ ಪ್ರೇಕ್ಷಕ ಫುಲ್‌ ಖುಷ್


ಗೋಲ್ಡನ್ ಸ್ಟಾರ್ ಗಣೇಶ್‌ ಅಭಿನಯದ “ಸಖತ್‌ʼ ಸಿನಿಮಾ ಆರಂಭದಿಂದಲೂ ಸಖತ್‌ ಆಗಿಯೇ ಸುದ್ದಿ ಮಾಡುತ್ತಿದೆ. ಅದರಲ್ಲೂ ಇತ್ತೀಚೆಗಷ್ಟೇ ರಿಲೀಸ್‌ ಆದ ಟೀಸರ್ ಯೂಟ್ಯೂಬ್ ನಲ್ಲಿ ಇನ್ನೂ ಸಖತ್ ಆಗಿಯೇ ಸೌಂಡು ಮಾಡುತ್ತಿದೆ. ಹೌದು, “ಸಿಂಪಲ್” ಸುನಿ ನಿರ್ದೇಶನದ ಈ ಸಿನಿಮಾ ಪಕ್ಕಾ ಕಾಮಿಡಿ ಹೂರಣ ತುಂಬಿರುವ ಸಿನಿಮಾ ಅನ್ನುವುದನ್ನೇ ಟೀಸರ್ ಸಾರಿ ಹೇಳುತ್ತಿದೆ. ಟೀಸರ್‌ ನೋಡಿರುವ ಪ್ರೇಕ್ಷಕ ವರ್ಗ ನಗುವಿನ ಅಲೆಯಲ್ಲಿ ತೇಲುತ್ತಿದೆ. ಇದೇ ಮೊದಲ ಬಾರಿಗೆ ಗಣೇಶ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಅವರು ಅಂಧನ ಪಾತ್ರ ಮಾಡಿದ್ದು, ಅದೊಂದು ವಿಭಿನ್ನ ಪಾತ್ರವಂತೆ. ಇನ್ನು, ನಿರ್ದೇಶಕ ಸುನಿ ಅವರ ಕಥೆ ಮಾತುಗಳು ಅಂದಮೇಲೆ ಕಿಕ್‌ ಇದ್ದೇ ಇರುತ್ತದೆ. ಸಿನಿಮಾದಲ್ಲಿ ಕಚಗುಳಿ ಇಡುವ ಸಂಭಾಷಣೆಯೇ ಇಲ್ಲಿ ಹೈಲೈಟ್.‌ ಈಗಾಗಲೇ ಸುನಿ ಮತ್ತು ಗಣೇಶ್‌ ಜೋಡಿ ಹಿಟ್‌ ಸಿನಿಮಾ ಕೊಟ್ಟಿದ್ದು ಗೊತ್ತೇ ಇದೆ. ಅವರಿಬ್ಬರು‌ ಸೇರಿ ಕೊಟ್ಟ “ಚಮಕ್” ಸಾಕಷ್ಟು ಸುದ್ದಿ ಮಾಡಿತ್ತು. ಈಗ “ಸಖತ್”‌ ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿರುವ ಡೈಲಾಗ್ ಕೇಳುಗರಿಗೆ ಸಖತ್ ಮಜಾ ಕೊಡುತ್ತಿದೆ.


ಅದೇನೆ ಇರಲಿ, ಟೀಸರ್‌ ನೋಡಿದವರಿಗೆ ಒಂದು ಅನುಮಾನ ಕಾಡೋದು ಸಹಜ. ಅದೇನೆಂದರೆ, ಇಲ್ಲಿ ಹೀರೋ ನಿಜವಾಗಿಯೂ ಕುರುಡನಾ? ಅಥವಾ ನಾಟಕ ಮಾಡ್ತಾನಾ? ಗೊತ್ತಿಲ್ಲ. ಇದಕ್ಕೆ ಉತ್ತರ ಬೇಕಾದರೆ, ಸಿನಿಮಾ ನೋಡಬೇಕು. ಇದೊಂದು ಹಾಸ್ಯದ ಜೊತೆಗೆ ನ್ಯಾಯಾಲಯದ ವಿಷಯವನ್ನೂ ಹೊಂದಿದೆ. ಅಲ್ಲೊಂದು ರಿಯಾಲಿಟಿ ಶೋ ಸುತ್ತವೂ ಕಥೆ ಸಾಗಲಿದೆ.
ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇನ್ನು ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಧರ್ಮಣ್ಣ ಕಡೂರು ಸೇರಿದಂತೆ ಇತರರೂ ಇದ್ದಾರೆ.

ನಿಶ್ವಿಕಾ ನಾಯ್ಡು ಮತ್ತು ಸುರಭಿ ಗಣೇಶ್‌ಗೆ ನಾಯಕಿಯರು. ಈಗಾಗಲೇ ಟೀಸರ್ ಗೆ ಸಖತ್‌ ರೆಸ್ಪಾನ್ಸ್ ಸಿಕ್ಕಿದ್ದು, ಎರಡು ಮಿಲಿಯನ್ಸ್ ವೀವ್ಸ್ ನತ್ತ ಸಾಗಿದೆ. ಕೆವಿಎನ್ ಪ್ರೊಡಕ್ಷನ್ ನಡಿ ಸುಪ್ರೀತ್‌ ಅದ್ಧೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಜೊತೆಗೆ ನಿಶಾ ವೆಂಕಟ್ ಕೋನಾಂಕಿ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ 12ಕ್ಕೆ ಸಖತ್‌ ಆಗಿಯೇ ಬಿಡುಗಡೆಯಾಗಲಿದೆ.

error: Content is protected !!