Categories
ಸಿನಿ ಸುದ್ದಿ

ಅಪ್ಪು ನೋಡಿ ಭಾವುಕರಾದ ತೆಲುಗು ಸ್ಟಾರ್ಸ್‌ ; ಪುನೀತ್‌ ಸರಳತೆ ಗುಣಗಾನ ಮಾಡಿದ ಟಾಲಿವುಡ್ ಕಲಾವಿದರು

ಪುನೀತ್ ರಾಜ್‌ಕುಮಾರ್‌ ಅವರ ದರ್ಶನಕ್ಕೆ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಅದರಲ್ಲೂ ಸೌತ್‌ ಇಂಡಿಯ ಫಿಲ್ಮ್‌ ಇಂಡಸ್ಟ್ರಿಯಂತೂ ಅಪ್ಪು ನಿಧನವನ್ನು ಸಹಿಸಿಕೊಳ್ಳುತ್ತಿಲ್ಲ. ಜನಸಾಗರದ ನಡುವೆಯೇ ತೆಲುಗಿನ ಖ್ಯಾತ ನಟರಾದ ಚಿರಂಜೀವಿ, ಬಾಲಕೃಷ್ಣ, ಅರ್ಜುನ್‌ ಸರ್ಜಾ, ವೆಂಕಟೇಶ್‌, ಜೂನಿಯರ್‌ ಎನ್ ಟಿ ಆರ್, ಶ್ರೀಕಾಂತ್‌, ಅಲಿ, ರಾಣಾ ದಗ್ಗುಬಾಟಿ, ಪ್ರಭುದೇವ ಪುನೀತ್​ ಪಾರ್ಥಿವ ಶರೀರ ನೋಡಿ ಭಾವುಕರಾದರು. ಈ ವೇಳೆ ಎಲ್ಲರೂ ಕೂಡ ಪಕ್ಕದಲ್ಲೇ ನಿಂತಿದ್ದ ಶಿವರಾಜ್‌ಕುಮಾರ್‌ ಅವರನ್ನು ತಬ್ಬಿಕೊಂಡು ಸಂತೈಸಿದರು. ಜ್ಯೂ.ಎನ್​.ಟಿ.ಆರ್.​ ರಾಜ್​​ಕುಮಾರ್ ಅವರ ಕುಟುಂಬದೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು. ಅಲ್ಲದೇ ಪುನೀತ್​ ಅವರ ಚಕ್ರವ್ಯೂಹ ಸಿನಿಮಾದಲ್ಲಿ ನಟ ಎನ್​​ಟಿಆರ್​ ಅವರು ಗೆಳೆಯ ಗೆಳೆಯ ಹಾಡನ್ನು ಹಾಡಿದ್ದರು. ಈ ವೇಳೆ ಎಲ್ಲರೂ ಪುನೀತ್‌ ಅವರ ಸರಳತೆ ಕುರಿತು ಮಾತಾಡಿದರು.

“ಪುನೀತ್​ ಇಲ್ಲ ಅನ್ನೋದು ಕನ್ನಡ ಚಿತ್ರರಂಗಕ್ಕೆ ಮಾತ್ರ ನಷ್ಟವಲ್ಲ, ನನಗೆ ವೈಯಕ್ತಿಕ ನಷ್ಟ . ಹುಟ್ಟಿದ ಬಳಿಕ ಎಲ್ಲರೂ ಸಾಯಬೇಕು.. ಆದರೆ ಸಾಯೋ ವೇಳೆಗೆ ಜನರ ಮನಸ್ಸಿನಲ್ಲಿ ಉಳಿದು ಹೋಗುವಂತಹ ಕೆಲಸ ಮಾಡಬೇಕಾಗುತ್ತದೆ. ಯಾರು ತಾವು ಹುಟ್ಟಿದ ದೇಶ, ಊರು, ಕುಟುಂಬಕ್ಕೆ ಪ್ರತಿಷ್ಠೆಯನ್ನು ತಂದು ಕೊಡುತ್ತಾರೋ ಅವರ ಜನುಮ ಸಾರ್ಥಕವಾಗುತ್ತದೆ. ಕನ್ನಡ ಚಲನಚಿತ್ರ ರಂಗದಲ್ಲಿ ಪುನೀತ್ ಅವರ ಸ್ಥಾನವನ್ನು ಯಾರು ತುಂಬಲು ಆಗೋದಿಲ್ಲ. ಒಬ್ಬ ಕಲಾವಿದನಾಗಿ, ಅವರ ಸಾಮಾಜಿಕ ಕಾರ್ಯಗಳೊಂದಿಗೆ ಮೇರು ವ್ಯಕ್ತಿಯಾಗಿ ಅವರ ಮೂರ್ತಿಯನ್ನು ನನ್ನ ಹೃದಯದಲ್ಲಿ ಇರಿಸಿಕೊಳ್ಳುತ್ತೇನೆ.

-ಬಾಲಕೃಷ್ಣ, ತೆಲುಗು ನಟ

“ಪುನೀತ್ ಅಗಲಿಕೆ ನಮಗೂ ನೋವು ತಂದಿದೆ. ನಮ್ಮ ಅಪ್ಪು ಹೋದ ದೇವರು ಅನ್ಯಾಯ ಮಾಡಿಬಿಟ್ಟ. ಮಿಸ್ ಯೂ ಅಪ್ಪು. ರಾಜ್​​ಕುಮಾರ್ ಕುಟುಂಬದ ಜೊತೆಗೆ ಸುಮಧುರ ಬಾಂಧವ್ಯವಿದೆ. ಎರಡು ಕುಟುಂಬಗಳಲ್ಲಿ ಯಾವುದೇ ಸಮಾರಂಭ ನಡೆದರು ಪರಸ್ಪರ ಭಾಗಿಯಾಗುತ್ತಿದ್ದೆವು. ನಾನು ಬೆಂಗಳೂರಿಗೆ ಯಾವಾಗ ಬಂದ್ರೂ ರಾಜ್​ಕುಮಾರ್ ಅವರ ಮನೆಗೆ ಹೋಗ್ತಿದ್ದೆ. ಇತ್ತೀಚೆಗೂ ನಾನು ಪುನೀತ್ ಅವರನ್ನ ಭೇಟಿಯಾಗಿದ್ದೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಪುನೀತ್​ ರಾಜ್​ಕುಮಾರ್ ಅವರಿಗೆ ಸ್ವರ್ಗ ಲೋಕದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಪ್ರಾರ್ಥಿಸುತ್ತೇನೆ


ಚಿರಂಜೀವಿ, ತೆಲುಗು ನಟ

ಪುನೀತ್​ರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ನಮಗೆಲ್ಲ ಅತಿ ದೊಡ್ಡ ನಷ್ಟ. ರಾಜರತ್ನ ಅಪ್ಪುನಾ ಕಳೆದುಕೊಂಡ ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ.

ವಿಕ್ಟರಿ ವೆಂಕಟೇಶ್, ತೆಲುಗು ನಟ

“ಅಪ್ಪು ಸಾವಿನಿಂದ ನಮಗೆಲ್ಲ ತುಂಬಾ ನೋವಾಗ್ತಿದೆ. ಜೇಮ್ಸ್ ಚಿತ್ರದಲ್ಲಿ ನಾನು ಸ್ಕ್ರೀನ್ ಶೇರ್ ಮಾಡಿದ್ದೀನಿ. 45 ಒಟ್ಟಿಗೆ ಕೆಲಸ ಮಾಡಿದ್ದೇವೆ. ಯಾರು ಬಂದ್ರೂ ರೆಸ್ಪೆಕ್ಟ್ ಕೊಡ್ತಿದ್ರು. ಎಲ್ಲರಿಗೂ ರೆಸ್ಪೆಕ್ಟ್ ಕೊಟ್ಟು ಮಾತನಾಡಿಸ್ತಾರೆ. ತೆಲುಗಿನಲ್ಲಿ ಎಲ್ಲಾ ಹೀರೋಗಳೂ ಪುನೀತ್ ಅವರನ್ನ ರೆಸ್ಪೆಕ್ಟ್ ಮಾಡ್ತಿದ್ರು.

ಕಳೆದ ವಾರ ಅವರನ್ನು ಫೋನ್ ಮೂಲಕ ಮಾತಾಡಿಸಿದ್ದೆ. ಶಿವಣ್ಣ ನಾವೆಲ್ಲ 25 ವರ್ಷಗಳಿಂದ ಪರಿಚಿತರು. ಅಪ್ಪು ಕಳೆದುಕೊಂಡು ನೋವಲ್ಲಿರೋ ದೊಡ್ಮನೆ ಕುಟುಂಬಕ್ಕೆ ದುಃಖ ಬರಿಸೋ ಶಕ್ತಿ ಕೊಡಲಿ ದೇವರು.
ಶ್ರೀಕಾಂತ್‌, ತೆಲುಗು ನಟ.

Categories
ಸಿನಿ ಸುದ್ದಿ

ದೇವರ ದರ್ಶನಕ್ಕೆ ಕೊನೆಯುಂಟು, ಅಪ್ಪು ದರ್ಶನಕ್ಕೆ ಕೊನೆಯುಂಟೇ? ಪುನೀತ್‌ ದರ್ಶನ ಪಡೆದ ಲಕ್ಷಾಂತರ ಫ್ಯಾನ್ಸ್

ದೇವರ ದರ್ಶನಕ್ಕೆ ನಿಂತ ಭಕ್ತ ಸಮೂಹದ ಸಾಲು ಕೊನೆಯಾಗಬಹುದು ಆದರೆ ಅಪ್ಪು ಅಂತಿಮ ದರ್ಶನಕ್ಕೆ ಹರಿದು ಬಂದಿದ್ದ ಜನಸಾಗರದ ಸಾಲು ಮಾತ್ರ 48 ಗಂಟೆಗಳು ಕಳೆದರೂ ಇನ್ನೂ ಕಮ್ಮಿಯಾಗಿಲ್ಲ…

ಕನ್ನಡದ ಪವರ್‌ಫುಲ್‌ ನಟ ಪುನೀತ್‌ ರಾಜ್‌ಕುಮಾರ್‌ಗೆ ಅಭಿಮಾನಿಗಳೆಂದರೆ ದೇವ್ರು. ಆದರೆ, ಅಭಿಮಾನಿಗಳಿಗೆ ಪುನೀತ್‌ ಅಂದರೆ ದೇವ್ರು. ಆ ದೇವರನ್ನು ನೋಡಲು ನಿನ್ನೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಧಾವಿಸಿ ಬಂದಿದ್ದಾರೆ. ಈಗಲೂ ರಾಜ್ಯ, ಅಂತಾರಾಜ್ಯಗಳಿಂದಲೂ ಅಭಿಮಾನಿಗಳು ಆಗಮಿಸಿ, ಪ್ರೀತಿಯ ಹೀರೋನ ದರ್ಶನ ಪಡೆದು ಕಣ್ಣೀರು ಸುರಿಸುತ್ತಿದ್ದಾರೆ.


ಹೌದು, ಪುನೀತ್‌ರಾಜಕುಮಾರ್‌ ಅವರನ್ನು ಒಂದೊಮ್ಮೆ ನೋಡಬೇಕು, ಅವರ ಮುಂದೆ ನಿಂತು ಕೊನೆಯ ಸಲ ಕೈಮುಗಿಯಬೇಕು ಅಂತ ಸಾಲುಗಟ್ಟಿರುವ ಅಭಿಮಾನಿಗಳ ಸಂಖ್ಯೆಗೇನೂ ಲೆಕ್ಕವಿಲ್ಲ. ನಿನ್ನೆ ಪುನೀತ್‌ ಅವರ ನಿಧನದ ವಿಷಯ ತಿಳಿಯುತ್ತಿದ್ದಂತೆಯೇ ಅತ್ತ, ವಿಕ್ರಮ್‌ ಆಸ್ಪತ್ರೆ ಮುಂದೆ ಅಭಿಮಾನಿಗಳು ಜಮಾಯಿಸಿದರು. ನಂತರ ಕಂಠೀರವ ಸ್ಟೇಡಿಯಂಗೆ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದಂತೆಯೇ, ಎಲ್ಲಿಂದ ಹರಿದೋ ಬಂತೋ ಏನೋ, ಎತ್ತ ನೋಡಿದರೂ ಜನ ಜನ ಜನ. ಕಣ್ಣಾಯಿಸಿದ ಕಡೆಯೆಲ್ಲ ಅಭಿಮಾನಿಗಳದ್ದೇ ಗೋಳಾಟ.


ನಿನ್ನೆ ಮಧ್ಯಾಹ್ನದಿಂದ ಹಿಡಿದು, ರಾತ್ರಿ ಇಡೀ ಅಭಿಮಾನಿಗಳು ಸಾಲುಗಟ್ಟಿ ಬಂದು ಪುನೀತ್‌ ಅವರ ದರ್ಶನ ಪಡೆದಿದ್ದು ನಿಜಕ್ಕೂ ದುಃಖ ತರುವಂಥದ್ದು. ಶನಿವಾರವೂ ಸಹ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟೇಡಿಯಂನಲ್ಲಿ ಸೇರಿ ತಮ್ಮ ಪ್ರೀತಿಯ ನಾಯಕರನ್ನು ಕಣ್ತುಂಬಿಕೊಂಡರು. ಸಂಜೆ ಐದು ಆಗಿದ್ದರೂ, ಜನಸಾಗರ ಹರಿದುಬರುತ್ತಲೇ ಇತ್ತು. ನಿನ್ನೆಯಿಂದ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಪುನೀತ್‌ ಅವರನ್ನು ನೋಡಿ ಭಾವುಕರಾಗಿದ್ದಾರೆ.

ಡಾ.ರಾಜಕುಮಾರ್‌ ಅವರ ನಿಧನದ ಸಂದರ್ಭದಲ್ಲೂ ಇಷ್ಟೇ ಜನಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈಗ ಪುನೀತ್‌ ಅವರನ್ನು ನೋಡಬೇಕು ಅಂತಾನೇ, ರಾಜ್ಯದ ಮೂಲೆ ಮೂಲೆಗಳಿಂದಲೂ ಅಭಿಮಾನಿಗಳು ರಾತ್ರೋ ರಾತ್ರಿ ಬಂದಿದ್ದಾರೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಮ್ಮ ಪ್ರೀತಿಯ ಹೀರೋನನ್ನು ನೋಡಿ ಕಣ್ಣೀರಾಗಿದ್ದಾರೆ.

Categories
ಸಿನಿ ಸುದ್ದಿ

ಪುನೀತ್ ದರ್ಶನ ಪಡೆದ ರಮ್ಯಾ ; ಜೇಮ್ಸ್ , ದ್ವಿತ್ವ ಚಿತ್ರಕ್ಕೆ ನಾನೇ ನಾಯಕಿಯಾಗಬೇಕಿತ್ತು; ಕಮ್ ಬ್ಯಾಕ್ ಮಾಡಿದ್ದರೆ ಪವರ್ ಜೊತೆ ನಟಿಸೋ ಕನಸು ಕಂಡಿದ್ರು ಪದ್ಮಾವತಿ !

ದೊಡ್ಮನೆಯ ರಾಜಕುಮಾರನ ಅಗಲಿಕೆ‌ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮೂಲಕ ಭಾವುಕತೆಯನ್ನು ಹೊರಹಾಕಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ದುಃಖ ತಾಳಲಾರದೇ ಫ್ಲೈಟ್ ಹತ್ಕೊಂಡು ಬೆಂಗಳೂರಿಗೆ ಬಂದಿಳಿದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದುಕೊಂಡರು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ರಮ್ಯಾ, ಅಪ್ಪು ನನಗೆ
ಕೋಸ್ಟಾರ್ ಮಾತ್ರವಲ್ಲ ಒಳ್ಳೆಯ ಫ್ರೆಂಡ್ ಕೂಡ ಆಗಿದ್ದರು. ಅಭಿ, ಆಕಾಶ್, ಅರಸು ಸೇರಿ ಮೂರು ಚಿತ್ರ ಒಟ್ಟಿಗೆ ಮಾಡಿದ್ದೇನೆ. ಮೂರು ವಾರಗಳ ಹಿಂದಷ್ಟೇ ಅವರೊಟ್ಟಿಗೆ ಮಾತನಾಡಿದ್ದೆ ಈಗ ನೋಡಿದರೆ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೊರಟುಬಿಟ್ಟಿದ್ದಾರೆ. ಈ ಸತ್ಯವನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಬಿಗಿಹಿಡಿದ ಗಂಟಲಲ್ಲೇ ಮಾತನಾಡಿದ ಮೋಹಕತಾರೆ ರಮ್ಯಾ,
ದೊಡ್ಮನೆ ಬ್ಯಾನರ್ ಚಿತ್ರ ಬಂದಾಗ ನನಗೆ ಫಸ್ಟ್ ಪ್ರಿಪ್ರೆನ್ಸ್ ಕೊಡ್ತಿದ್ದರು. ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದ್ಮೇಲೂ ಕೂಡ ಅವರೊಟ್ಟಿಗೆ ನಿರಂತರ ಸಂಪರ್ಕದಲ್ಲಿದ್ದೆ. ಕಂಬ್ಯಾಕ್ ಮಾಡುವುದಾದರೆ ದೊಡ್ಮನೆಯ ರಾಜಕುಮಾರ ನೊಟ್ಟಿಗೆ ಮಾಡಬೇಕು ಅಂತ ನಿರ್ಧರಿಸಿದ್ದೆ ಎಂದರು.

ಕಂಬ್ಯಾಕ್ ವಿಚಾರದ ಬಗ್ಗೆ ಎಷ್ಟೋ ಭಾರಿ ಅಪ್ಪು ಜೊತೆ ಡಿಸ್ ಕಷನ್ ಕೂಡ ಮಾಡಿದ್ದೆ. ಅಭಿ, ಆಕಾಶ್, ಅರಸು ಜಾನರ್ ನಂಥ ಕಥೆಗಳು ಅರಸಿಕೊಂಡು ಬಂದರೆ ಇಬ್ಬರು ಒಟ್ಟಾಗಿ ಸಿನಿಮಾ ಮಾಡಬೇಕು ಎನ್ನುವುದು ನಮ್ಮಿಬ್ಬರ ಕನಸಾಗಿತ್ತು. ಅಭಿಮಾನಿಗಳು ಕೂಡ ಇದನ್ನೇ ಬಯಸ್ತಿದ್ದರು. ಪವರ್ ಸ್ಟಾರ್ ಹಾಗೂ ಪದ್ಮಾವತಿ ಜೊತೆಯಾಗಬೇಕು, ಬಿಗ್ ಸ್ಕ್ರೀನ್ ಮೇಲೆ ದಿಬ್ಬಣ ಹೊರಡಬೇಕು ಅಂತ ಆಸೆಪಟ್ಟಿದ್ದರು. ಆದರೆ, ಅದಕ್ಕೂ ಮೊದಲೇ ದೊಡ್ಮನೆಯ ಅರಸು, ಕೋಟ್ಯಾಂತರ ಭಕ್ತರ ನಾಯಕ ಅಪ್ಪು ಬಹುದೂರ ಹೋಗಿಬಿಟ್ಟರು. ಈ ಸುದ್ದಿ ಈ ಕ್ಷಣಕ್ಕೂ ಶಾಕಿಂಗ್ಗೇ. ಭಗವಂತ ಕರುಣಾಮಯಿ ಆಗಿ ಯುವರತ್ನನನ್ನು ಉಳಿಸಿಕೊಡಲಿ ಅಂತಾನೇ ಸಕಲರೂ ಪ್ರಾರ್ಥನೆ ಮಾಡಿಕೊಳ್ತಿದ್ದಾರೆ.


ಆದರೆ ವಾಸ್ತವ ಕಟುಸತ್ಯ ಅಲ್ಲವೇ ಅದನ್ನು ಎಲ್ಲರೂ ನಂಬಲೆಬೇಕು. ಅಪ್ಪು ಆತ್ಮಕ್ಕೆ ಶಾಂತಿ ಸಿಗುವ ಹಾಗೇ ಕಳುಹಿಸಿಕೊಡಬೇಕು.ಇದನ್ನೇ ದೊಡ್ಮನೆ ಕುಟುಂಬ ವರ್ಗ ಹೇಳ್ತಿದೆ. ಅದಕ್ಕೆ ಅಭಿಮಾನಿಗಳು ಕೂಡ ಸ್ಪಂಧಿಸುತ್ತಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಅಪ್ಪು ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಟ್ಟಿದ್ದು ಲಕ್ಷಾಂತರ ಜನರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

17ನೇ ತಾರೀಖು ಭೂಮಿಗೆ ಬಂದ ಧ್ರುವತಾರೆಗಳನ್ನು ಹೇಳದೇ ಕೇಳದೇ ಹೊತ್ತು ಹೊಯ್ಯುತ್ತಾನ್ಯಾಕೆ ಜವರಾಯ !? ಅಪ್ಪು-ಚಿರು- ಸಂಚಾರಿ ವಿಜಯ್ ಅರ್ಧ ವಯಸ್ಸಿಗೆ ಬದುಕು ಮುಗಿಸುವಂತಾಯ್ತು !

ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ ಎನ್ನುವ ಕಟುಸತ್ಯ ಇಡೀ ಮನುಕುಲಕ್ಕೆ ಗೊತ್ತಿದೆ. ಆದರೆ, ಹುಟ್ಟಿಗೆ ಒಂಭತ್ತು ತಿಂಗಳು ಟೈಮ್ ಕೊಡುವ ಬ್ರಹ್ಮ, ಉಸಿರು‌ ನಿಲ್ಲಿಸಿ ದೇಹ ಹೊತ್ತೊಯ್ಯುವಾಗ ಟೈಮ್ ಕೊಡದೇ ಬಾರದ ಲೋಕಕ್ಕೆ ಕಳುಹಿಸಿಬಿಡ್ತಾನೆ.
ಇದ್ಯಾವ ನ್ಯಾಯವೋ? ಇದ್ಯಾವ ಸೀಮೆ ತೀರ್ಮಾನವೋ ಗೊತ್ತಿಲ್ಲ ಜವರಾಯ ಬಲೆಬೀಸಿದಾಗ ಬಲಿಯಾಗಲೇಬೇಕು. ಹೀಗಾಗಿಯೇ, ದೊಡ್ಮನೆಯ ಅರಸು, ಕರ್ನಾಟಕದ ಜನರ ಪಾಲಿನ ರಾಜರತ್ನ ವಿಧಿಯ ಆಟಕ್ಕೆ ಶರಣಾಗಬೇಕಾಗಿ ಬಂತು. ಅರ್ಧಕ್ಕೆ ಬದುಕಿನ ಪಯಣ ಮುಗಿಸಿ ಮುರಳಿಬಾರದೂರಿಗೆ ಹೋಗಬೇಕಾಗಿ ಬಂತು.

ಅಪ್ಪುದು ಸಾಯೋ ವಯಸ್ಸಲ್ಲ. ಇನ್ನೂ 46 ಅಷ್ಟೇ. ಬಾಳಿ ಬದುಕಬೇಕಿದ್ದ, ಸುಂದರ ಜೀವನ‌ ನಡೆಸಬೇಕಿದ್ದ ಪುನೀತ್ ರಾಜ್ ಕುಮಾರ್
ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕವಾಗಿ ಅಗಲಿದ್ದು
ಆರೂವರೆ ಕೋಟಿ ಕನ್ನಡಿಗರನ್ನ ದುಃಖದ ಮಡಿಲಿಗೆ ನೂಕಿದೆ. ಹದಿನೇಳರಂದು ಭೂಮಿಗೆ ಬಂದ ಧ್ರುವತಾರೆಗಳನ್ನೇಕೆ ವಿಧಿ ಟಾರ್ಗೆಟ್ ಮಾಡ್ತಾನೆ ? ಅದ್ಯಾಕೆ ಅರ್ಧ ವಯಸ್ಸಿಗೆ ಬದುಕನ್ನು ಕೊನೆಗಾಣಿಸುತ್ತಾನೆ? ಏಕಾಏಕಿ ಅದ್ಯಾಕೆ ಕಿತ್ತುಕೊಳ್ತಾನೆ? ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಹೌದು, ಹದಿನೇಳನೇ ತಾರೀಖ್ ನಂದು ತಾಯಿ ಗರ್ಭದಿಂದ ಪೃಥ್ವಿಗೆ ಬಂದಂತಹ, ಬೆಳ್ಳಿತೆರೆ ಬೆಳಗಿದಂತಹ, ಕನ್ನಡಿಗರ ಮನೆಮನ ತಣಿಸಿದಂತಹ,
ಗಂಧದಗುಡಿಗೆ ಅಪಾರವಾದ ಕೊಡುಗೆಯನ್ನು ನೀಡಿದಂತಹ ಕನ್ನಡದ ಮೂವರು ಧ್ರುವತಾರೆಗಳಾದ ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ ಹಾಗೂ ಸಂಚಾರಿ ‌ವಿಜಯ್ ವಿಧಿಯಾಟಕ್ಕೆ ಬಲಿಯಾದರು. ಜವರಾಯನ ಅಣತಿಯಂತೆ ತಮ್ಮೆಲ್ಲಾ ಆಸೆ – ಕನಸು- ಬದುಕು- ಕುಟುಂಬ- ಅಭಿಮಾನಿ ದೇವರುಗಳು ಹೀಗೆ ಎಲ್ಲರನ್ನೂ ಬಿಟ್ಟು ಬಹುದೂರ ಹೋಗಿಬಿಟ್ಟರು.

ಅಷ್ಟಕ್ಕೂ, ಹದಿನೇಳಕ್ಕೂ, ಹದಿನೇಳರಂದು ಹುಟ್ಟಿದ ಕನ್ನಡ ಚಿತ್ರರಂಗದ ಧ್ರುವತಾರೆಗಳ ಅಕಾಲಿಕ ಮರಣಕ್ಕೂ ಕಂಟಕವೋ?
ಬ್ರಹ್ಮ ನಿರ್ಣಯವೋ, ವಿಧಿ ಲಿಖಿತವೋ ಗೊತ್ತಿಲ್ಲ? 1975 ಮಾರ್ಚ್ 17 ರಂದು ಹುಟ್ಟಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್,
1984 ಅಕ್ಟೋಬರ್ 17 ರಂದು ಜನಿಸಿದ ಚಿರಂಜೀವಿ ಸರ್ಜಾ, 1983 ಜುಲೈ 17 ರಂದು ಹುಟ್ಟಿದ ಸಂಚಾರಿ ವಿಜಯ್ ಮೂವರು ಸ್ಟಾರ್ ಗಳು ಹಠಾತ್ತನೇ ಉಸಿರು‌ ಚೆಲ್ಲಿದರು. ಕನ್ನಡ ಚಿತ್ರರಂಗ ಕಂಡ ಅಪರೂಪದ ಈ ಮೂವರು ನಟಸಾರ್ವಭೌಮರ ಸಾವಿಗೆ ಕಾರಣ ಜವರಾಯ.

ಸದಾ ಕ್ರೂರತ್ವ ಮೆರೆಯೋ ಯಮಧರ್ಮ ಕೊಂಚಕರುಣಾಮಯಿಯಾಗಿದ್ರೆ ದೊಡ್ಮನೆಯ ರಾಜಕುಮಾರ, ಸರ್ಜಾ ಕುಟುಂಬದ ಕುವರ ಹಾಗೂ ಸಂಚಾರಿ ವಿಜಯ್ ಅವರು ಗೋಣು ಚೆಲ್ಲುತ್ತಿರಲಿಲ್ಲ. ಕುಟುಂಬವನ್ನು ಕೋಟ್ಯಾನುಕೋಟಿ ಭಕ್ತರನ್ನು ಬಿಟ್ಟು ಅಗಲುತ್ತಿರಲಿಲ್ಲ. ಆದರೆ ಏನ್ಮಾಡೋದು ಭಗವಂತನ್ನ, ಜವರಾಯನನ್ನ, ವಿಧಿನಾ ಫೇಸ್ ಮಾಡುವ ಶಕ್ತಿ ? ಪ್ರಶ್ನೆ ಮಾಡುವ ಪವರ್ ಯಾರಿಗಿದೆ ಹೇಳಿ. ಅಸ್ತು ಎಂದಾಗ ಹುಟ್ಟಬೇಕು, ಸುಸ್ತಾಗುವ ಮೊದಲೇ ಇಹಲೋಕ ತ್ಯಜಿಸಬೇಕು

ವಿಶಾಲಾಕ್ಷಿ,
ಎಂಟರ್ ಟೈನ್ಮೆಂಟ್ ಬ್ಯೂರೋ‌ ಸಿನಿಲಹರಿ

Categories
ಸಿನಿ ಸುದ್ದಿ

ನಿಜ ಜೀವನದಲ್ಲೂ ಅಪ್ಪು ರಾಜಕುಮಾರ!


ಪುನೀತ್‌ ರಾಜಕುಮಾರ್‌ ಒಬ್ಬ ಸರಳ ವ್ಯಕ್ತಿತ್ವ ಹೊಂದಿದವರು. ಅವರು ಸ್ಟಾರ್‌ ನಟರಾಗಿದ್ದರೂ, ಎಂದಿಗೂ ಆ ಸ್ಟಾರ್‌ಗಿರಿ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಪುನೀತ್‌ ಅವರು ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ವೃದ್ಧರು, ಅನಾಥರು ಮತ್ತು ಹೆಣ್ಣುಮಕ್ಕಳನ್ನೂ ಗೌರವದಿಂದ ನೋಡುವ ಮೂಲಕ ಅವರಿಗೆ ಕಾಳಜಿಯಿಂದಲೇ ಸೇವೆ ಮಾಡಿಕೊಂಡು ಬಂದವರು. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ. ಗೋ ಶಾಲೆಗಳಿಗೆ ನೆರವು ನೀಡುತ್ತಿದ್ದರು. ಸಮಾಜ ಸೇವೆ ಬಗ್ಗೆ ಎಂದಿಗೂ ಹೇಳಿಕೊಂಡವರಲ್ಲ.

ಅವರ ವ್ಯಕ್ತಿತ್ವ ಆಕಾಶದೆತ್ತರಕ್ಕೆ ಇತ್ತು. 26ಕ್ಕೂ ಹೆಚ್ಚು ಅನಾಥಾಶ್ರಮಗಳು 16 ವೃದ್ಧಾಶ್ರಮಗಳು ಮತ್ತು 19 ಗೋಶಾಲೆಗಳಿಗೆ ನೆರವು ನೀಡುತ್ತಿದ್ದರು. ಅದು ನಿರಂತರವಾಗಿ. ಅಷ್ಟೇ ಅಲ್ಲ, ಅವರು ೪೫ಕ್ಕೂ ಹೆಚ್ಚು ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ಶಕ್ತಿಧಾಮ ಮೂಲಕ ಸುಮಾರು ೧೮೦೦ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಪತ್ನಿ ಕೂಡ ಪುನೀತ್‌ ಅವರಿಗೆ ಸಾಥ್‌ ನೀಡುತ್ತಿದ್ದರು. ಪುನೀತ್‌ ಎಂದಿಗೂ ಈ ಸೇವೆ ಬಗ್ಗೆ ಹೇಳಿಕೊಂಡವರಲ್ಲ. ಅವರಿಂದ ಸಹಾಯ ಪಡೆದವರೂ ಹೇಳುತ್ತಿರಲಿಲ್ಲ. ಬಲಗೈಯಲ್ಲಿ ಪಡೆದದದ್ದು ಎಡಗೈಗೆ ಗೊತ್ತಾಗಬಾರದು ಎಂಬ ಸಿದ್ಧಾಂತ ಪುನೀತ್‌ ಅವರದ್ದು.

Categories
ಸಿನಿ ಸುದ್ದಿ

ಅಪ್ಪ ಕೊಟ್ಟ ಮಾತು ಉಳಿಸಿಕೊಂಡ ಅಪ್ಪು! ನೇತ್ರದಾನ ಮಾಡಿ ಪುನೀತರಾದ ಪುನೀತ್



ಅಣ್ಣಾವ್ರು ನಿಧನದ ಬಳಿಕ ಕಣ್ಣುಗಳನ್ನು ದಾನ ಮಾಡಲಾಗಿತ್ತು. ಈಗ ಅಪ್ಪ ಕೊಟ್ಟ ಮಾತನ್ನು ಮಗ ಕೂಡ ಉಳಿಸಿಕೊಂಡಿದ್ದಾರೆ. ಹೌದು, ಪುನೀತ್‌ ರಾಜಕುಮಾರ್‌ ಅವರ ಕಣ್ಣುಗಳನ್ನು ಕುಟುಂಬ ದಾನ ಮಾಡಿದೆ. ಪುನೀತ್‌ ಅವರು ನಿಧನರಾದರು ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ಡಾ.ರಾಜಕುಮಾರ್‌ ಅವರ ಕುಟುಂಬದವರು ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ಭುಜಂಗ ಶೆಟ್ಟಿ ಅವರನ್ನು ಸಂಪರ್ಕಿಸಿ, ಪುನೀತ್‌ ಅವರ ನಿಧನದ ವಿಷಯ ತಿಳಿಸಿ, ಕಣ್ಣುಗಳನ್ನು ದಾನ ಮಾಡುವ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಡಾ.ಭುಜಂಗಶೆಟ್ಟಿ ಅವರು, ತಮ್ಮ ತಂಡದ ಜೊತೆ ವಿಕ್ರಮ್‌ ಆಸ್ಪತ್ರೆಗೆ ಧಾವಿಸಿ, ಅಲ್ಲಿ ಕಣ್ಣುಗಳನ್ನು ಪಡೆದಿದ್ದಾರೆ.

ಪುನೀತ್‌ ರಾಜಕುಮಾರ್‌ ಅವರು ಅಪ್ಪನಂತೆಯೇ ತಮ್ಮ ಕಣ್ಣುಗಳನ್ನೂ ಸಹ ದಾನ ಮಾಡಿದ್ದಾರೆ.
ನೇತ್ರಾಲಯ ಉದ್ಘಾಟನೆಯಲ್ಲಿ ಅಣ್ಣಾವ್ರು ಸ್ವತಃ ನನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, ನಮ್ಮ ಮನೆಯವರು, ಮಕ್ಕಳು ಸಹ ನೇತ್ರದಾನ ಮಾಡ್ತೀವಿ ಅಂದಿದ್ದರು. ಹಾಗೆಯೇ ಮಕ್ಕಳೆಲ್ಲರೂ ಅಪ್ಪನಂತೆಯೇ ನೇತ್ರದಾನ ಮಾಡುವುದಾಗಿ ಹೇಳಿದ್ದರು. ಈಗ ಪುನೀತ್‌ ಆ ಮಾತನ್ನು ಉಳಿಸಿಕೊಂಡಾಗಿದೆ. ಆದರೆ, ಇಷ್ಟು ಬೇಗ ಕಣ್ಣುಗಳನ್ನು ದಾನ ಮಾಡಬೇಕಾದ ಸ್ಥಿತಿ ಬಂದಿದ್ದು ದುರಂತ.

ಪುನೀತ್‌ ರಾಜಕುಮಾರ್‌ ಅವರ ಕಣ್ಣುಗಳನ್ನು, ಇಬ್ಬರಿಗೆ ದಾನ ಮಾಡಲಾಗುತ್ತದೆ ಎಂದು ಡಾ.ಭಜುಂಗಶೆಟ್ಟಿ ಅವರು ಹೇಳಿದ್ದಾರೆ. ಸದ್ಯ ಪುನೀತ್‌ ರಾಜಕುಮಾರ್‌ ಅವರ ನಾರಾಯಣ ನೇತ್ರಾಲಯಕ್ಕೆ ತರಲಾಗಿದ್ದು, ವೇಟಿಂಗ್‌ ಲಿಸ್ಟ್‌ ಇರುವುದರಿಂದ ಯಾರಿಗೆ ಅದು ಸೂಟ್‌ ಆಗುತ್ತೋ ನೋಡಿ, ಅವರಿಗೆ ನಾಳೆ, ಅಥವಾ ನಾಡಿದ್ದು ಅಳವಡಿಸಲಾಗುತ್ತದೆ. ಇಬ್ಬರಿಗೆ ಕಣ್ಣುಗಳನ್ನು ಅಳವಡಿಸುವ ಅವಕಾಶ ಇದೆ. ನೇತ್ರದಾನ ಮೇಲೆ ಅವರಿಗೆ ನಿಜವಾದ ಕಾಳಜಿ ಇತ್ತು. ಅಣ್ಣಾವ್ರು ನೇತ್ರದಾನ ಪವಿತ್ರವಾದದ್ದು ಅಂತ ಹೇಳೋರು. ಈಗ ಪುನೀತ್‌ ಅವರ ನಿಧನ ನಂಬಲು ಅಸಾಧ್ಯ ಎಂದಿದ್ದಾರೆ ಭುಜಂಗಶೆಟ್ಟಿ.

Categories
ಸಿನಿ ಸುದ್ದಿ

ದೊಡ್ಮನೆಯವರು ಅಂತ ಎಂದಿಗೂ ದೊಡ್ಡಸ್ತಿಕೆ ತೋರಿಸಿರಲಿಲ್ಲ ಅಪ್ಪು !



ದೊಡ್ಮನೆಯೇ ಹಾಗೆ. ಅದು ಬರೀ ಹೆಸರಷ್ಟೇ, ಹಾಗೆಂದು ಎಂದಿಗೂ ದೊಡ್ಡಸ್ತಿಕೆ ತೋರಿಸಿಲ್ಲ ಅಣ್ಣಾವ್ರ ಕುಟುಂಬ. ಒಂದ್ರೀತಿ ಅಣ್ಣಾವ್ರ ಮುಂದುವರೆಕೆಯೇ ವ್ಯಕ್ತಿತ್ವ ಆಗಿದ್ದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಎಂದಿಗೂ ತಾವೊಬ್ಬ ದೊಡ್ಡ ಸ್ಟಾರ್‌ ಅಂತ ಎಂದಿಗೂ ಮರೆದಿರಲಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎನ್ನುವಂತೆ ಎಲ್ಲಿಯೇ ಸಿಕ್ಕಾಗಲೂ ಅದೇ ವಿನಯತೆ, ಅದೇ ಸಿಂಪ್ಲಿಸಿಟಿ ಮೂಲಕವೇ ಮಾಧ್ಯಮದವರನ್ನು ಮಾತನಾಡಿಸುವ ಪರಿಯೇ ಅಚ್ಚರಿ ತರಿಸುತ್ತಿತ್ತು.

ಅಪ್ಪ ದೊಡ್ಡ ಸ್ಟಾರ್‌, ಅಮ್ಮ ದೊಡ್ಡ ನಿರ್ಮಾಪಕರು, ಹಾಗೆಯೇ ಅಣ್ಣಂದಿರೆಲ್ಲ ಸ್ಟಾರ್ ಗಳು, ಇಷ್ಟೆಲ್ಲ ಪ್ರಭಾವ ಇದ್ದರೂ ಸಾರ್ವಜನಿಕ ಕ್ಷೇತ್ರದಲ್ಲಿ ಅದೆಲ್ಲವನ್ನು ಎಂದಿಗೂ ತೋರಿಸಿರಲಿಲ್ಲ ಪುನೀತ್.‌ ಅನೇಕ ಸಿನಿಮಾ ಕಾರ್ಯಕ್ರಮಗಳಿಗೆ ಬಂದಾಗೆಲ್ಲ ವಿನಯ ವಿದ್ಯಾರ್ಥಿಯಂತೆ ವೇದಿಕೆಯಲ್ಲಿ ಕುಳಿತು, ಅಷ್ಟೇ ವಿನಯದಲ್ಲಿ ನಾಲ್ಕು ಮಾತನಾಡಿ, ಸಿನಿಮಾ ತಂಡದವರಿಗೆ ಶುಭ ಹಾರೈಸಿ ಹೋಗುತ್ತಿದ್ದ ಅವರ ಸರಳ ಮತ್ತು ವಿನಯತೆಯ ಮೂಲಕವೇ ಅವರೊಬ್ಬ ದೊಡ್ಡ ಸ್ಟಾರ್‌ ಆಗಿ ಮರೆದಿದ್ದರು.

ಅಭಿಮಾನಿಗಳ ಪಾಲಿಗೆ ಅವರೊಬ್ಬ ಪವರ್ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದರು, ಕನ್ನಡ ಚಿತ್ರರಂಗ ಪಾಲಿಗೆ ಪ್ರೀತಿಯ ಅಪ್ಪು ಆಗಿದ್ದರು. ಚಿತ್ರರಂಗದ ಯಾರೇ ಹಿರಿಯರು ಸಿಕ್ಕರೂ, ಅವರಿಗೆ ನಮಸ್ಕರಿಸಿ, ಗೌರವಿಸಿ, ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ಪರಿಯೇ ಮಾದರಿಯಾಗಿತ್ತು. ಸಿನಿಮಾ ರಂಗಕ್ಕೆ ಯಾರೇ ಹೊಸಬರು ಬಂದರೂ, ಅವರನ್ನು ಅಷ್ಟೇ ಗೌರವದಿಂದ ಸ್ವಾಗತಿಸುವ ರೀತಿ ಇನ್ನೂ ವಿಶೇಷ. ಸಾಮಾನ್ಯವಾಗಿ ಇತ್ತೀಚಿಗೆ ಸಿನಿಮಾ ರಂಗಕ್ಕೆ ಬಂದು ಆಕಸ್ಮಿಕವಾಗಿ ಗೆದ್ದು ಬೀಗಿದವರೆಲ್ಲ ಸ್ಟಾರ್‌ ಎಂಬ ಕೊಂಬು ಹೊದ್ದು ಮರೆದರು, ಪುನೀತ್‌ ಬಾಕ್ಸ್‌ ಆಫೀಸ್‌ ಸ್ಟಾರ್‌ ಆಗಿದ್ದರೂ, ಸ್ಟಾರ್‌ ಎಂಬ ಕೊಂಬು ಮೂಡಿಸಿಕೊಂಡಿರಲಿಲ್ಲ. ಅದು ಅವರ ಸರಳತೆಯ ಇನ್ನೊಂದು ವಿಶೇಷವೇ ಹೌದು.

Categories
ಸಿನಿ ಸುದ್ದಿ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ !



ಶುಕ್ರವಾರ ಶುಭ ಅಂತಾರೆ, ಆದ್ರೆ ಕನ್ನಡ ಚಿತ್ರರಂಗದ ಪಾಲಿಗೆ ಇದೇ ಶುಕ್ರವಾರ ಕರಾಳ ದಿನವಾಗಿ ಪರಿಣಮಿಸಿದೆ. ಬಹುಶ: ಕನ್ನಡ ಚಿತ್ರರಂಗ ಹಿಂದೂ-ಮುಂದೂ ಎಂದೆಂದಿಗೂ ಇಂತಹ ಘನಘೋರ ಆಘಾತವನ್ನು ಅನುಭವಿಸಲು ಸಾಧ್ಯವೇ ಇಲ್ಲ ಎನ್ನುವಂತಹ ದೊಡ್ಡ ಆಘಾತವೇ ನಡೆದು ಹೋಗಿದೆ. ದೊಡ್ಮನೆಯ ಮಹಾನ್‌ ಪ್ರತಿಭೆ, ಕನ್ನಡಿಗರ ಪ್ರೀತಿಯ ಅಪ್ಪು, ಅಭಿಮಾನಿಗಳ ನೆಚ್ಚಿನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಇನ್ನಿಲ್ಲ ಎನ್ನುವ ಅರಗಿಸಿಕೊಳ್ಳಲಾಗದ ಸುದ್ದಿಯನ್ನು ಅದೇಗೆ ನಂಬಬೇಕೋ ಗೊತ್ತಾಗುತ್ತಿಲ್ಲ…

ಆದರೂ ಸತ್ಯ. ತೀವ್ರ ಹೃದಯಘಾತದಲ್ಲಿ ಪುನೀತ್‌ ರಾಜ್‌ ಕುಮಾರ್‌ ಶುಕ್ರವಾರ ಬೆಳಗ್ಗೆ ವಿಧಿವಶರಾದರು. ಇಂತಹದೊಂದು ಕೆಟ್ಟ ದಿನವನ್ನು ಯಾರು ಕೂಡ, ಯಾವುದೇ ಕ್ಷಣವೂ ಕನಸಲ್ಲೂ ಕಂಡಿರಲು ಸಾಧ್ಯವೇ ಇಲ್ಲ. ಆದರೆ ವಿಧಿಯಾಟದ ಮುಂದೆ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸೋತು ಹೋಗಿದ್ದಾರೆ. ಇನ್ನು ಬಾಳಿ ಬದುಕಬೇಕಾದ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅವರಿಲ್ಲ ಎನ್ನುವುದು ಕನ್ನಡಿಗರ ದೌರ್ಬಾಗ್ಯವೋ, ದುರಾದೃಷ್ಟವೋ ಗೊತ್ತಿಲ್ಲ. ಅವರಿಲ್ಲದ ಈ ಕ್ಷಣಕ್ಕೆ ಕನ್ನಡ ನಾಡು, ಕನ್ನಡ ಚಿತ್ರರಂಗ ಎರಡು ಕೂಡ ಬಡವಾಗಿದೆ. ಅದು ಇಡೀ ಕರುನಾಡೇ ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ.


ಅವರಿಲ್ಲ ಎಂಬ ತಡೆಯಲಾಗದ ನೋವಿನ ಸಂಕಟಕ್ಕೆ ಅವರಿದ್ದಾರೆಯೇ ಅಂತ ನಾವೆಲ್ಲ ಸಮಾಧಾನಿಸಿಕೊಂಡರೂ, ವಾಸ್ತವದಲ್ಲಿ ಅವರಿಲ್ಲ. ನಿಮ್ಮೆಲ್ಲರ ಪ್ರೀತಿಯ ಅಪ್ಪು ಇನ್ನು ನೆನಪು ಮಾತ್ರ. ದೈಹಿಕವಾಗಿ ಅವರಿಲ್ಲ ಎನ್ನುವ ಸತ್ಯವನ್ನು ಸಂಕಟದ ನಡುವೆಯೂ ಒಪ್ಪಿಕೊಳ್ಳುತ್ತಲೇ ಪುನೀತ್‌ ಅವರು ನಡೆದು ಬಂದ ಹಾದಿ, ಅವರ ವ್ಯಕ್ತಿತ್ವ, ನಟನಾಗಿ ಮಿಂಚಿದ ಪರಿ, ಸಮಾಜಕ್ಕಾಗಿ ಮಿಡಿದ ರೀತಿ..ಹೀಗೆ ಎಲ್ಲವನ್ನು ಇಲ್ಲಿ ಅಕ್ಷರಗಳೊಂದಿಗೆ ಕಟ್ಟಿಕೊಡಲು ಹೊರಟರೆ ಅದೊಂದು ಬೃಹತ್‌ ಗ್ರಂಥವೇ ಆದೀತು. ಯಾಕಂದ್ರೆ ಪುನೀತ್‌ ಅಂದ್ರೆ ಬರೀ ಪುನೀತ್‌ ಅಲ್ಲ, ತಂದೆಯಂತೆಯೇ ಮಗ. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್‌ ಅವರೊಗಿನ ಆಗಾದ ಪ್ರತಿಭೆಯನ್ನು ಬಹುತೇಕ ತಮ್ಮೊಳಗೆ ಅವಗಾನಿಸಿಕೊಂಡ ಅಪರೂಪದ ನಟ ಪುನೀತ್‌ ರಾಜ್ ಕುಮಾರ್.‌

ಈ ಮಾತು ಈ ಕ್ಷಣ ಉತ್ಪ್ರೇಕ್ಷೆ ಎನಿಸಿದರೂ ಸತ್ಯವೂ ಹೌದು. ರಾಜಕುಮಾರ್‌ ಅವರೊಂದಿಗೆ ಪುನೀತ್‌ ಬಾಲ್ಯದಲ್ಲಿ ಅಭಿನಯಿಸಿದ ʼಬೆಟ್ಟದ ಹೂವುʼ, ʼಯಾರಿವನುʼ, ʼಭಕ್ತ ಪ್ರಹ್ಲಾದʼ ಸೇರಿದಂತೆ ಹಲವು ಚಿತ್ರಗಳಲ್ಲಿ ಚಿತ್ರಗಳಲ್ಲಿ ಅಪ್ಪ-ಮಗ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದೇ ಇದಕ್ಕೆ ಸಾಕ್ಷಿ. ದೊಡ್ಮನೆಯ ಕುಟುಂಬದಲ್ಲಿ ವರನಟ ರಾಜ್‌ಕುಮಾರ್‌ ನಟನೆಯ ಪ್ರಭಾವಳಿ ಕಂಡಿದ್ದೇ ಪುನೀತ್‌ ಅವರ ನಟನೆಯಲ್ಲಿಯೇ ಹೆಚ್ಚು. ಬಾಲ್ಯದಿಂದಲೇ ಪುನೀತ್‌ ನಟನೆಗೆ ಇಳಿದಿದ್ದು ಇದಕ್ಕೆ ಕಾರಣವೋ, ರಾಜಕುಮಾರ್‌ ಅವರ ರೂಪ ಪುನೀತ್‌ ಅವರ ಒಳಗಡೆಯೇ ಇತ್ತೋ ಗೊತ್ತಿಲ್ಲ, ನಟನೆಯ ಎಲ್ಲಾ ಪ್ರಕಾರಗಳಲ್ಲೂ ಸೈ ಎನಿಸಿಕೊಂಡ ಅಪರೂಪದ ಪ್ರತಿಭೆ ನಿಮ್ಮೆಲ್ಲರ ಪ್ರೀತಿಯ ಅಪ್ಪು.

ಅಣ್ಣಾವ್ರ ಕುಟುಂಬದಲ್ಲಿ ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌ ಬಣ್ಣ ಹಚ್ಚುವ ಮೊದಲೇ ನಟನಾಗಿ ಬೆಳ್ಳಿ ತೆರೆಯಲ್ಲಿ ಕಂಡವರು ಪುನೀತ್‌ ರಾಜ್‌ ಕುಮಾರ್.‌ ಬೆಟ್ಟದ ಹೂವು, ಯಾರಿವನು, ಸೇರಿದಂತೆ ಅವರ ಬಾಲ್ಯದಲ್ಲಿನ ಅಭಿನಯಸಿದ ಚಿತ್ರಗಳಲ್ಲಿ ಅಪ್ಪು ಅವರ ಅಭಿನಯ ಕಂಡರೆ ಮುಗ್ದ ಮಕ್ಕಳು ಕೂಡ ಎದ್ದು ನಟಿಸುವಂತೆಯೇ ಮಾಡುತ್ತದೆ. ಅದೇ ಕಾರಣಕ್ಕೆ ಅವರಿಗೆ ಬೆಟ್ಟದ ಹೂವು ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಬಂತು. ನಟನೆ ಎಂಬುದು ಅವರಿಗೆ ಅಲ್ಲಿಂದಲೇ ವರವಾಗಿ ಬಂತು. ಮುಂದೆ ದೊಡ್ಡ ಸ್ಟಾರ್‌ ಆಗಿ ಕರುನಾಡಿನ ಪ್ರೀತಿಯ ಅಪ್ಪು ಆಗಿ ಮೆರೆಯುವಂತೆ ಮಾಡಿತು.

ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಚಿತ್ರಗಳು ಒಂದೇ ಎರಡೇ ಅಭಿನಯಸಿದ ಚಿತ್ರಗಳೆಲ್ಲವೂ ಸೂಪರ್‌ ಹಿಟ್‌ ಅಂದ್ರೆ, ನಿರ್ಮಾಪಕರ ಪಾಲಿಗೆ ಅಪ್ಪು ರಿಸರ್ವ್‌ ಬ್ಯಾಂಕ್ನಂತೆಯೇ ಆಗಿದ್ದರು. ನಟನೆ, ನೃತ್ಯ, ಪೈಟ್ಸ್‌ ಹೀಗೆ ಎಲ್ಲದ್ದಕ್ಕೂ ಸೈ ಎನ್ನುವ ಅವರ ಕಲಾ ಪ್ರೌಡಿಮೆಗೆ ಪುಟಾಣಿಗಳು ಕೂಡ ಮನಸೋತಿದ್ದರು. ಕನ್ನಡ ಚಿತ್ರರಂಗದ ಪಾಲಿಗೆ ಅಂತಹ ಅಪರೂಪದ ನಟ ಪುನೀತ್‌ ರಾಜ್‌ ಕುಮಾರ್.‌ ನಾಯಕ ನಟನಾಗಿ ಸಿನಿಮಾ ರಂಗ ಪವೇಶಿದ ಆರಂಭದ ದಿನಗಳಲ್ಲಿ ಒಂದಷ್ಟು ವಿವಾದಗಳಲ್ಲಿ ಸುದ್ದಿಯಾಗಿದ್ದರೂ, ಒಟ್ಟಾರೆ ಅವರೊಬ್ಬ ಅನವಶ್ಯಕ ವಿವಾದಕ್ಕೆ ಸಿಲುಕದ ನಿರ್ವೀವಾದದ ವ್ಯಕ್ತಿ. ಅಗೇನೋ ಆಯಿತು, ಆದರೆ ಅಲ್ಲಿಂದ ವಾಪಾಸ್‌ ಬಂದು ಅವರು ಸ್ಟಾರ್‌ ಆಗಿ ಮೆರೆದಿದ್ದು ಒಂದು ಪವಾಡವೇ ಹೌದು.

ಕನ್ನಡ ಚಿತ್ರರಂಗದ ಪಾಲಿಗೆ ದೊಡ್ಮನೆ ಅನ್ನೋದು ಹೆಸರಷ್ಟೇ, ಅದರಾಚೆ ದೊಡ್ಮನೆ ಅಂತ ಎಂದಿಗೂ ಡೊಡ್ಡಸ್ತಿಕೆ ತೋರಿಸಿದ್ದೇ ಇಲ್ಲ. ಕುಟುಂಬದಂತೆಯೇ ಪುನೀತ್‌ ರಾಜ್‌ ಕುಮಾರ್‌ ಕೂಡ ಹಾಗೆಯೇ. ರಾಜಕುಮಾರ್‌ ಅವರ ಮಗ, ದೊಡ್ಡ ಸ್ಟಾರ್‌ ಎನ್ನುವ ಹಿನ್ನೆಲೆ ಇದ್ದರೂ ಎಂದಿಗೂ ಸಾರ್ವಜನಿಕ ಕ್ಷೇತ್ರದಲ್ಲಿ ಆ ನೇಮ್‌ ಹಾಕಿಕೊಂಡಿರಲಿಲ್ಲ. ಅಣ್ಣಾವ್ರ ಹಾಗೆಯೇ ವಿನಯದಲ್ಲಿಯೇ ಎಲ್ಲರ ಮನ ಗೆದಿದ್ದರು. ಹಾಗೆಯೇ ಯಾವುದೇ ಪ್ರಬಾವಳಿಯಲ್ಲೂ ಬದುಕಿರಲಿಲ್ಲ. ಎಲ್ಲವೂ ಇದ್ದರು ಇಲ್ಲದಂತೆಯೇ ಸರಳತೆಯ ಮೂಲಕ ಬದುಕಿದ್ದರು. ಹಾಗೆಯೇ ದೊಡ್ಡ ಮಾನವೀಯ ಗುಣ ಹೊಂದಿದ್ದ ವ್ಯಕ್ತಿತ್ವ ಅವರದು.

ಯಾರೇ ಕಷ್ಟ ಅಂತ ಮನೆ ಬಾಗಿಲಿಗೆ ಹೋದರೆ, ಇನ್ನಾವುದೋ ಕಡೆ ನೆರೆ ಹಾವಳಿ ಅಥವಾ ಇನ್ನಾವುದೋ ಪ್ರಕೃತಿ ವಿಕೋಪಗಳು ಆದವು ಅಂದಾಗ, ಕೊಡುಗೈ ದಾನಿಯಂತೆ ತಮ ಕೈಲಾದ ಸೇವೆ ಮಾಡಿ, ಅದು ಗೊತ್ತಾಗದಂತೆಯೇ ಇದ್ದವರು. ಅಣ್ಣಾವ್ರಂತೆಯೇ ಆರೋಗ್ಯದ ಕಡೆ ಅತೀ ಹೆಚ್ಚು ಗಮನ ಹರಿಸಿದ್ದರು. ಸದಾ ಜಿಮ್‌ ನಲ್ಲಿ ದೇಹ ದಂಡಿಸುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದರು. ಅದೇನಾಯಿತೋ ಗೊತ್ತಿಲ್ಲ, ಹೃದಯಾಘಾತ ಎನ್ನುವುದು ಅವರನ್ನು ತಿರುಗಿ ಬಾರದ ಲೋಕಕ್ಕೆ ಕರೆದುಕೊಂಡು ಹೋಗಿದೆ. ಈ ನೋವನ್ನು ಈ ಕರುನಾಡು ಅದೇಗೆ ಸಹಿಸಿಕೊಳ್ಳುತ್ತದೆಯೋ ಗೊತ್ತಿಲ್ಲ. ಆದರೂ ನೋವು ತಡೆದುಕೊಳ್ಳಲೇ ಬೇಕು.

Categories
ಸಿನಿ ಸುದ್ದಿ

ಗಣೇಶ್ ಜೊತೆ ಧ್ರುವ-ಪ್ರೇಮ್ ಸಾಥ್! ಅಭಿಮಾನಿ ನಡುವೆಯೇ ಸಖತ್ ಟೈಟಲ್ ಟ್ರ್ಯಾಕ್ ಲಾಂಚ್ ! ಅ.30ಕ್ಕೆ ಪ್ರಸನ್ನ ಥಿಯೇಟರ್ ಸಾಕ್ಷಿ…

ಸ್ಯಾಂಡಲ್ ವುಡ್ ಅಂಗಳದಲ್ಲೀಗ ಸಖತ್ ಸೌಂಡ್ ಮಾಡ್ತಿರೋದು ಸಖತ್ ಸಿನಿಮಾದ ಟೀಸರ್ ಝಲಕ್.. ಸಿಂಪಲ್ ಸುನಿ..ಗೋಲ್ಟನ್ ಸ್ಟಾರ್ ಗಣಿಯ ಜುಗಲ್ ಬಂಧಿಯ ಸಖತ್ ಟೀಸರ್ ಈ ವರ್ಷದ ಬೆಸ್ಟ್ ಎಂಟರ್ ಟ್ರೈನರ್ ಟೀಸರ್ ಅನ್ನೋ ಬ್ರ್ಯಾಂಡ್ ತನ್ನದಾಗಿಸಿಕೊಂಡಿದೆ. ಸಿಂಪಲ್ ಸುನಿ ಡೈರೆಕ್ಷನ್.. ಡೈಲಾಗ್ಸ್ ಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಮಳೆ ಹುಡ್ಗನ ಆಕ್ಟಿಂಗ್ ಗೆ ಹುಬ್ಬೇರಿಸಿದ್ದಾನೆ. ಟೀಸರ್ ಝಲಕ್ ಹೀಗಿರುವಾಗ ಸಾಂಗ್ ಹೇಗಿರುತ್ತೋ.. ಅದ್ರಲ್ಲೂ ಟೈಟಲ್ ಟ್ರ್ಯಾಂಕ್ ಹೇಗೆ ಮೂಡಿ ಬರುತ್ತೋ? ಅನ್ನೋ ಕುತೂಹಲಕ್ಕೆ ಇದೇ ತಿಂಗಳ 31ರಂದು ಫುಲ್ ಸ್ಟಾಪ್ ಬೀಳಲಿದೆ.

ಹೌದು..ಸಖತ್ ಟೀಸರ್ ಸಖತಾಗಿಯೇ ಸೌಂಡ್ ಮಾಡ್ತಿರುವ ಬೆನ್ನಲ್ಲೇ ಸಖತ್ ಬಳಗ ಸಖತ್ ಆಗಿರೋ ಐಡಿಯಾವೊಂದನ್ನು ಮಾಡಿದೆ. ಇದೇ ಅ.30ರಂದು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಈ ಟೈಟಲ್ ಟ್ರ್ಯಾಕ್ ನ್ನ ರಿಲೀಸ್ ಮಾಡ್ತಿರೋದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಶೋ ಮ್ಯಾನ್ ಪ್ರೇಮ್.

ಸಖತ್ ಸಿನಿಮಾಗೆ ಪ್ರೇಮ್ ಹಾಗೂ ಧ್ರುವ ಸಾಥ್ ನೀಡಲಿದ್ದಾರೆ. ಇದೇ 30ರಂದು ಅಭಿಮಾನಿಗಳ ಮಧ್ಯೆ ಥಿಯೇಟರ್ ಅಂಗಳದಲ್ಲಿ ಸಖತ್ ಸಿನಿಮಾದ ಸೆಕೆಂಡ್ ಸಾಂಗ್ ರಿಲೀಸ್ ಆಗಲಿದೆ. ಕೆವಿಎನ್ ಪ್ರೊಡಕ್ಷನ್ ನಡಿ ತಯಾರಾಗಿರುವ ಸಖತ್ ಸಿನಿಮಾದ ಟೈಟಲ್ ಟ್ರ್ಯಾಕ್ ಅನ್ನು ಅದ್ಧೂರಿಯಾಗಿ ಲಾಂಚ್ ಮಾಡಲು ನಿರ್ಮಾಪಕ ಸುಪ್ರಿತ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಅಮೃತ ಹಸ್ತದಿಂದ ಸಖತ್ ಸಿನಿಮಾದ ಟೈಟಲ್ ಟ್ರ್ಯಾಂಕ್ ಅನಾವರಣವಾಗಲಿದೆ.

ಸಖತ್ ಸಿನಿಮಾದ ಟೀಸರ್ ಜೊತೆಗೆ ಪ್ರೇಮಕ್ಕೆ ಕಣ್ಣಿಲ್ಲ ಹಾಡಿಗೆ ಪ್ರೇಕ್ಷಕ ತಲೆದೂಗಿದ್ದು, ಇದೀಗ ಟೈಟಲ್ ಟ್ರ್ಯಾಕ್ ಅನ್ನು ಬಿಗಿದಪ್ಪಿಕೊಳ್ಳಲು ರೆಡಿಯಾಗ್ತಿದ್ದಾನೆ. ಗೋಲ್ಟನ್ ಸ್ಟಾರ್ ಗಣೇಶ್ ಕಾಮಿಡಿ ಹೂರಣವನ್ನು ಸವಿಯೋದಿಕ್ಕೆ ಸಜ್ಜಾಗ್ತಿದ್ದಾನೆ.

ಗಣಿ ಜೊತೆಯಾಗಿ ನಿಶ್ವಿಕಾ-ಸುರಭಿಯ ಗ್ಲಾಮರ್ ರಂಗು..ಜೂಡಾ ಸ್ಯಾಂಡಿ ಮ್ಯೂಸಿಕ್ ಗುಂಗು ಸಖತ್ ಸಿನಿಮಾದಲ್ಲಿರಲಿದೆ. ಕಾಮಿಡಿ-ಕ್ರೈಮ್ ಥಿಲ್ಲರ್ ಕಥಾಹಂದರ ಹೊಂದಿರುವ ಸಖತ್ ಸಿನಿಮಾ ಬರುವ ನವೆಂಬರ್ 12ಕ್ಕೆ ಅದ್ಧೂರಿಯಾಗಿ ಬೆಳ್ಳಿಪರದೆಯಲ್ಲಿ ಬೆಳಗಲಿದೆ.

Categories
ಸಿನಿ ಸುದ್ದಿ

ನನ್ನ ಸಾವಿಗೆ ಬಹದ್ದೂರ್ ಚೇತನ್ ಕಾರಣ!? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಅಪ್ಪು ಫ್ಯಾನ್ ‌ಡೆತ್ ನೋಟ್ !‌

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಎಂದು ಹೇಳಿಕೊಂಡಿರುವ ರಾಜು ಹೆಸರಿನ ವ್ಯಕ್ತಿಯೊಬ್ಬ,
ನನ್ನ ಸಾವಿಗೆ ಬಹದ್ದೂರ್ – ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಹೊರೆತು ಬೇರಾರು ಅಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ.‌ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಸೂಸೈಡ್ ಪತ್ರ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಅಷ್ಟಕ್ಕೂ, ರಾಜು ಹೆಸರಿನ ವ್ಯಕ್ತಿ‌ ಅಪ್ಪು‌ಅವರ ಅಪ್ಪಟ ‌ಅಭಿಮಾನಿಯಾ ?‌ ಈತ ಸಾವನ್ನಪ್ಪಿದ್ದು ನಿಜವಾ ? ಈ ವ್ಯಕ್ತಿ ಉಸಿರು ಚೆಲ್ಲೋದಕ್ಕೆ ಚೇತನ್ ಹೇಗೆ ಕಾರಣ ಆಗ್ತಾರೆ ? ಹೀಗೆ ಹಲವು ಪ್ರಶ್ನೆಗಳು ಮೂಡುತ್ತವೆ.
ಈ ಎಲ್ಲಾ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ …

ಜೇಮ್ಸ್ ಪವರ್ ಸ್ಟಾರ್ ಪುನೀತ್ ನಟನೆಯ ಬಹುನಿರೀಕ್ಷೆಯ ಚಿತ್ರ. ಇದೇ ಮೊದಲ ಭಾರಿಗೆ ಅಪ್ಪು ಹಾಗೂ ಚೇತನ್ ಒಂದಾಗಿದ್ದಾರೆ. ಬಹದ್ದೂರ್, ಭರ್ಜರಿ, ಭರಾಟೆಯಂತಹ ಸೂಪರ್ ಡೂಪರ್ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕ ಚೇತನ್ ಕುಮಾರ್, ಜೇಮ್ಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ದೊಡ್ಮನೆ ಬಳಗ ಮಾತ್ರವಲ್ಲ ಇಡೀ‌ ಸಿನಿಮಾ ‌ಸಮೂಹವೇ ಕಾಯುವಂತೆ ಮಾಡಿದ್ದಾರೆ. ಹೀಗಿರುವಾಗ
ಪುನೀತ್ ಅಭಿಮಾನಿ ನಾನು ಎಂದು ಹೇಳಿಕೊಂಡಿರುವ ರಾಜು,
ಜೇಮ್ಸ್ ಟೀಸರ್ ಬಿಡುಗಡೆಯಾಗದಿರುವುದೇ ನಾನು ಸಾಯೋದಕ್ಕೆ ಕಾರಣ ಎಂದಿದ್ದಾರೆ. ಜೊತೆಗೆ ಬಹದ್ದೂರ್ ಚೇತನ್ ಅವರೇ ನಾನು ಉಸಿರು ಚೆಲ್ಲೋದಕ್ಕೆ ಕಾರಣ ಎಂದು ಸೂಸೈಡ್ ಪತ್ರದಲ್ಲಿ ನಮೂದಿಸಿದ್ದಾರೆ.

ಈ ಪತ್ರದ ಮೂಲಕ ಎಲ್ಲರಿಗೂ ತಿಳಿಸುವುದೇನೆಂದರೆ ಕಳೆದ ಎರಡು ವರ್ಷಗಳಿಂದ ಜೇಮ್ಸ್ ಚಿತ್ರದ ಟೀಸರ್‌ಗಾಗಿ ಕಾಯುತ್ತಿದ್ದೇನೆ. ಕಾದು ಕಾದು ತಲೆಯಲ್ಲಿ ಕೂದಲು ಬೆಳ್ಳಗಾಯಿತೆ ಹೊರೆತು ಟೀಸರ್ ಮಾತ್ರ ಬರಲಿಲ್ಲ. ಬಹುಷಃ ನಿರ್ದೇಶಕ ಚೇತನ್ ಕುಮಾರ್ ಅವರು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ ಅನಿಸುತ್ತೆ.

ತುಂಬಾ ಕಷ್ಟಪಟ್ಟು ಚೇತನ್ ಕುಮಾರ್ ಅವರ ಮೊಬೈಲ್ ನಂಬರ್ ಪಡೆದು ಟೀಸರ್ ಯಾವಾಗ ಎಂದು ಕೇಳಿದರೆ ವಿಲ್' ಎಂಬ ಉತ್ತರ ಬಿಟ್ಟು ಬೇರೆ ಏನು ಬರಲಿಲ್ಲ. ಇದರಿಂದ ನನಗೆ ಜೀವನವೇ ಬೇಸರವಾಗಿ ಆತ್ಮಹತ್ಯೆ’ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಮುಖ್ಯ ವಿಚಾರ ಏನೆಂದರೆ ನನ್ನ ಸಾವಿಗೆ ಕಾರಣ ಚೇತನ್‌ಕುಮಾರ್ ಹೊರೆತು ಬೇರೆ ಯಾರು ಅಲ್ಲ. ಪತ್ರದ ಹಿಂದೆ ಅವರ ನಂಬರ್ ಬರೆದಿದ್ದೇನೆ. ನನಗೆ ಆದ ಅನ್ಯಾಯ ಬೇರೆ ಯಾರಿಗೂ ಆಗದಿರಲಿ ಎನ್ನುವುದೇ ನನ್ನ ಆಸೆ. ಮುಂದಿನ ಜನ್ಮದಲ್ಲಾದರೂ ಜೇಮ್ಸ್ ಟೀಸರ್ ನೋಡುತ್ತೇನೆ ಎಂಬ ನಂಬಿಕೆ ನನಗಿದೆ.


ಐ ಲವ್ ಯೂ ಅಪ್ಪು ಇಂತಿ ನಿಮ್ಮ ರಾಜು

ಈ ರೀತಿಯಾಗಿ ಬರೆದಿರುವ ಲೆಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಷ್ಟಕ್ಕೂ, ರಾಜು ಹೆಸರಿನ ವ್ಯಕ್ತಿ‌ ಅಪ್ಪು‌ಅವರ ಅಪ್ಪಟ ‌ಅಭಿಮಾನಿಯಾ ?‌ ಈತ ಸಾವನ್ನಪ್ಪಿದ್ದು ನಿಜವಾ ? ಈ ವ್ಯಕ್ತಿ ಉಸಿರು ಚೆಲ್ಲೋದಕ್ಕೆ ಚೇತನ್ ಹೇಗೆ ಕಾರಣ ಆಗ್ತಾರೆ ? ಜೇಮ್ಸ್ ಟೀಸರ್ ರಿಲೀಸ್ ಮಾಡಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಎಷ್ಟು ಸರೀ?

ಕೊರೊನಾ ಲಾಕ್ ಡೌನ್ ಕಾರಣದಿಂದ ಸಂಕಷ್ಟದಲ್ಲಿದ್ದು ಈಗಷ್ಟೇ ಚೇತರಿಸಿಕೊಳ್ತಿರುವ ಚಿತ್ರತಂಡಗಳಿಗೆ ಈ ರೀತಿಯಾಗಿ ಎಮೋಷನಲ್ ಬ್ಲಾಕ್ ಮೇಲ್ ಮಾಡುವುದು ತಪ್ಪಲ್ಲವೇ ? ಅಷ್ಟಕ್ಕೂ, ಅಂದಾಭಿಮಾನ ಮೆರೆಯವುದೇಕೆ ? ಸ್ಟಾರ್ ಗಳನ್ನು ಸಂಕಷ್ಟಕ್ಕೆ ದೂಡುವುದೇಕೆ? ಒಂದ್ವೇಳೆ ರಾಜು ಹೆಸರಿನ ವ್ಯಕ್ತಿ ಸಾವಿಗೀಡಾಗಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಕೆಲಸ ಮುಂದೆ ಯಾವ ಅಭಿಮಾನಿಯೂ ಮಾಡದಿರಲಿ ಎನ್ನುವುದೇ ಸ್ಟಾರ್ಸ್ ಆಶಯ

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!