ಪುನೀತ್ ರಾಜಕುಮಾರ್ ಈಗಿಲ್ಲ. ಆದರೆ, ಅವರ ಸಿನಿಮಾಗಳ ಮೂಲಕ ಸದಾ ಜೊತೆಗಿದ್ದಾರೆ. ರಾಜ್ ಫ್ಯಾಮಿಲಿ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದು ಗೊತ್ತೇ ಇದೆ. ಈಗ ಪುನೀತ್ ರಾಜಕುಮಾರ್ ಅವರ ಪ್ರೇರಣೆಯಿಂದ ರಾಜ್ಯದಲ್ಲಿ ನೇತ್ರದಾನದ ದೊಡ್ಡ ಆಂದೋಲನ ಶುರುವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿತ್ರದುರ್ಗ ಜಿಲ್ಲೆಯ ದಾಸಯ್ಯನಹಟ್ಟಿ ಗ್ರಾಮದ 150 ಕ್ಕೂ ಹೆಚ್ಚು ಜನರು ನೇತ್ರದಾನ ಮಾಡುವ ಮೂಲಕ ಇಡೀ ನಾಡಿಗೆ ಮಾದರಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿರುವ ದಾಸಯ್ಯ ಹಟ್ಟಿಯು 150 ಕ್ಕೂ ಹೆಚ್ಚು ಮನೆಗಳಿರುವ ಪುಟ್ಟ ಗ್ರಾಮ. ಹಾಗೆಯೇ ಇದು ಬಹುತೇಕ ಪರಿಶಿಷ್ಟ ಜಾತಿಯ ಜನರಿರುವ ಅಭಿವೃದ್ದಿಗೆ ಕಾಯುತ್ತಿರುವ ಪುಟ್ಟ ಹಳ್ಳಿಯೂ ಹೌದು. ಅಚ್ಚರಿ ಅಂದ್ರೆ ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಅಂದ್ರೆ ಈಗ್ರಾಮದ ಯುವ ಜನರಿಗೆ ಅಚ್ಚು ಮೆಚ್ಚು.
ಸೋಮವಾರ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವಿತ್ತು. ಅದರ ಅಂಗವಾಗಿ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಪುನೀತ್ ಅವರ ಪ್ರೇರಣೆಯಿಂದ ಈ ಗ್ರಾಮದ 150ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಿದ್ದಾರೆ. ಅಷ್ಟು ಜನರು ಸ್ವಯಂ ಪ್ರೇರಣೆಯಿಂದ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಮಹಿಳೆಯರು, ಯುವಕರು ಸೇರಿದಂತೆ ಗ್ರಾಮದ ಹಿರಿಯರು ಇದ್ದಾರೆ.
‘ ನಮಗೆ ನಟ ಪುನೀತ್ ಅವರ ಅಕಾಲಿಕ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಪುನೀತ್ ಅಂದ್ರೆ ನಮಗೆ ಅಚ್ಚು ಮೆಚ್ಚು. ಅವರ ಸಿನಿಮಾ ಪಯಣದ ಜತೆಗೆ ಅವರ ಸಾಮಾಜಿಕ ಕೆಲಸಗಳಿಂದ ಪ್ರೇರಣೆಯಾದವರು ನಾವು. ಅದೇ ಕಾರಣಕ್ಕೆ ನಾವು ಮೊದಲಿನಿಂದಲು ಅವರನ್ನು ಅನುಸರಿಸುತ್ತಾ ಬಂದವರು. ಆದರೆ ಅವರ ಅಕಾಲಿಕ ಸಾವನ್ನು ನಾವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೆ ಈಗ ಅವರಿಲ್ಲ ಎನ್ನುವ ವಾಸ್ತವ ವನ್ನುನಾವು ಒಪ್ಪಿಕೊಳ್ಳಲೇ ಬೇಕಿದೆ.
ಅದರೆ ಅವರನ್ನು ಜೀವಂತವಾಗಿಸಲು ಅವರು ನಮಗೆ ಅನೇಕ ಸಾಮಾಜಿಕ ಕೆಲಸಗಳನ್ನು ಬಿಟ್ಟು ಹೋಗಿದ್ದಾರೆ. ಅದರಲ್ಲಿ ನೇತ್ರದಾನವು ಒಂದು. ಅದನ್ನು ಮುಂದುವರೆಸಿಕೊಂಡು ಹೋಗುವುದಕ್ಕಾಗಿ ನಾವೀಗ ನೇತ್ರದಾನ ಮಾಡಿದ್ದೇವೆ. ಇದು ನಮ್ಮ ಅಳಿಲು ಸೇವೆ ಮಾತ್ರ ಎನ್ನುತ್ತಾರೆ ದಾಸಯ್ಯನಹಟ್ಟಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ್.