ಸೆಟ್ಟೇರಿತು ಬಂಧನ-2 ! ದಾದಾ ‘ಬಂಧನ’ ಮಹೂರ್ತ ನಡೆದಿದ್ದ ಸ್ಥಳದಲ್ಲೇ ಬಂಧನ-2 ಆರಂಭ !

'ಬಂಧನ'ಅದ್ಬುತ ಅಮರ ಪ್ರೇಮ ಕಾವ್ಯ.ಕನ್ನಡ ಸಿನಿಮಾ ಪ್ರೇಕ್ಷಕರು ಯಾವತ್ತಿಗೂ ಮರೆಯದ ಮಾಣಿಕ್ಯದಂತಹ ಸಿನಿಮಾ.ಈ ಚಿತ್ರ ಬಂದು ಹೋಗಿ 37 ವರ್ಷಗಳು ಕಳೆದಿವೆ.ಆದರೆ,‘ಬಂಧನ’ ದ ಜೊತೆಗೆ ಬೆರೆತು ಹೋಗಿರುವ ಚಿತ್ರ ಪ್ರೇಮಿಗಳ ಅನುಬಂಧವಿದೆಯಲ್ಲ ಅದು ಯಾವತ್ತಿಗೂ ಅಜರಾಮರ. ಬೆಳ್ಳಿತೆರೆ ಮಾತ್ರವಲ್ಲ ಟಿವಿ ಪರದೆಯನ್ನೂ ಬೆಳಗುತ್ತಾ ಪ್ರೇಮಿಗಳನ್ನು ಸದಾ ಕಾಡುವಂತಹ ಸಿನಿಮಾ ದಾದಾ ಅಭಿನಯದ ಎವರ್‌ಗ್ರೀನ್ ಬಂಧನ.ಅಷ್ಟಕ್ಕೂ,ನಾವ್ ಇವತ್ತು ಬಂಧನದ ಬಗ್ಗೆ ಮಾತನಾಡಲಿಕ್ಕೆ ಕಾರಣ ಬಂಧನ-2′ ಚಿತ್ರ ಸೆಟ್ಟೇರಿದೆ. ಬಂಧನ ನಿರ್ದೇಶಿಸಿದ್ದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರೇ ಸೀಕ್ವೆಲ್ ನಿರ್ದೇಶನ ಮಾಡ್ತಿದ್ದಾರೆ. ಅಚ್ಚರಿ ಅಂದರೆ,37 ವರ್ಷಗಳ ಹಿಂದೆ ದಾದ ಬಂಧನ ಚಿತ್ರ ಸೆಟ್ಟೇರಿದ್ದ ಸ್ಥಳದಲ್ಲೇ `ಬಂಧನ-2′ ಚಿತ್ರಕ್ಕೆ ಚಾಲನೆ ಕೊಡಲಾಗಿದೆ

ಅಶೋಕ್ ಹೋಟೆಲ್ ವಿಷ್ಣುದಾದರ ನೆಚ್ಚಿನ ತಾಣ.ಬಿಡುವಿದ್ದಾಗ ಹೆಚ್ಚು ಕಾಲ ಈ ಹೋಟೆಲ್‌ನಲ್ಲಿ ಕಾಲ ಕಳೆಯುತ್ತಿದ್ದರು.ಸ್ನೇಹಿತರ ಜೊತೆ ಕ್ವಾಲಿಟಿ ಟೈಮ್‌ನ ಸ್ಪೆಂಡ್ ಮಾಡುತ್ತಿದ್ದ ದಾದ,ಸ್ವಿಮ್ಮಿಂಗ್ ಮಾಡಿ-ಟೆನ್ನಿಸ್ ಆಡಿ ಮೈಂಡ್ ಫ್ರೀ ಮಾಡಿಕೊಳ್ತಿದ್ದರು.ಇದೇ ಹೋಟೆಲ್‌ನಲ್ಲಿ 37 ವರ್ಷಗಳ ಹಿಂದೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ-ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಬಂಧನ’ ಸಿನಿಮಾ ಮುಹೂರ್ತ ನೆರವೇರಿತ್ತು. ಇಂದು ಅದೇ ಜಾಗದಲ್ಲಿ ದಾದಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಂಧನ-2 ಮುಹೂರ್ತ ಮಾಡಿದ್ದಾರೆ. ‘ಬಂಧನ’ ದಲ್ಲಿ ಯಜಮಾನರಿಗೆ ಜೊತೆಯಾಗಿದ್ದ ಸುಹಾಸಿನಿ ಮೇಡಂ `ಬಂಧನ-2 ‘ ಟೀಮ್ ಸೇರಿಕೊಂಡಿದ್ದಾರೆ. ಹೀಗಾಗಿ, ಫ್ಲೈಟ್ ಏರಿ ಬೆಂಗಳೂರಿಗೆ ಬಂದಿದ್ದರು. ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು-ಜೈ ಜಗದೀಶ್-ಭಾರತಿ ವಿಷ್ಣುವರ್ಧನ್-ವಿಜಯಲಕ್ಷ್ಮಿ ಸಿಂಗ್-ಆದಿತ್ಯ ಜೊತೆ ಪಾಲ್ಗೊಂಡಿದ್ದರು.

ಕನ್ನಡ ಸಿನಿಮಾ ಮಾಡಿ ತುಂಬಾ ವರ್ಷಗಳು ಕಳೀತು ಇದೀಗ ಮತ್ತೆ ಬಂದಿದ್ದೇನೆ. ಹೀಗೆ ಮಾತು ಶುರುಮಾಡಿದ ಹಿರಿಯ ನಟಿ ಸುಹಾಸಿನಿ ಮಣಿರತ್ನಂ, ಮೊದಲು ವಿಷ್ಣುದಾದರನ್ನು ನೆನಪು ಮಾಡಿಕೊಂಡರು. ‘ಬಂಧನ'ಮಾಡುವಾಗ ಅಷ್ಟು ದೊಡ್ಡ ಸೂಪರ್‌ಸ್ಟಾರ್ ಆಗಿದ್ದರೂ ಕೂಡ ಕನ್ನಡಕ್ಕೆ ಹೊಸಬಳಾಗಿದ್ದ ನನಗೆ ತುಂಬಾ ಕೋ ಆಪರೇಟ್ ಮಾಡುತ್ತಿದ್ದರು ಹಾಗೇ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು.ವಿಷ್ಣು ಅವ್ರಂಥ ಹೃದಯವಂತ ವ್ಯಕ್ತಿ ಮತ್ತೊಬ್ಬರು ಸಿಕ್ಕಲ್ಲ.ದಾದ ಬಗ್ಗೆ ಹೇಳೋದಕ್ಕೆ ಪದಗಳು ಸಾಕಾಗಲ್ಲ.‘ಬಂಧನ’ ಮಾಡುವಾಗಲೂ ನಾನು ಸ್ಟುಡೆಂಟ್, ಈಗಲೂ ನಾನು ಸ್ಟುಡೆಂಟ್. ಯಾಕಂದ್ರೆ ಸಿನಿಮಾದಲ್ಲಿ ಕಲಿಯೋದು ಇನ್ನೂ ತುಂಬಾ ಇದೆ ಎಂದೇಳಿ ದೊಡ್ಡತನ ತೋರಿಸಿದರು. ಬಂಧನ-2 ಪಾರ್ಟ್ನಲ್ಲಿ ಭಾಗಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಅಂದ್ಹಾಗೇ, ‘ಬಂಧನ-2'ಮೊದಲ ಭಾಗದ ಮುಂದುವರೆದ ಭಾಗವಾ? ಅಸಲಿ ಕಥೆ ಏನು? ಎಲ್ಲಿಂದ ಆರಂಭವಾಗುತ್ತೆ? ಕಥೆ ಹೇಗೆ ಸಾಗುತ್ತೆ? ಇದ್ಯಾವ ಪ್ರಶ್ನೆಗೂ ನಿರ್ದೇಶಕರು ಉತ್ತರ ಕೊಟ್ಟಿಲ್ಲ.ಸದ್ಯಕ್ಕೆ,ಎಲ್ಲವನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿರುವ ನಿರ್ದೇಶಕ ಸಿಂಗ್ ಬಾಬು ಅವರು ಬಂಧನ-2 ಚಿತ್ರದಲ್ಲೂ ಯಜಮಾನರನ್ನು ಜ್ಞಾನಪಿಸುತ್ತೇವೆ ಎನ್ನುವ ಭರವಸೆಯನ್ನು ಕೊಟ್ಟಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಸಕಲ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಸಂತೃಪ್ತಿಗೊಂಡು ಎದ್ದು ಹೋಗುವಂತಹ ಸಿನಿಮಾ ಕೊಡಬೇಕು ಎನ್ನುವ ನಿಟ್ಟಿನಲ್ಲಿ ‘ಬಂಧನ-2'ಚಿತ್ರಕ್ಕೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.ಮೊದಲ ಭಾಗದಲ್ಲಿದ್ದಂತೆ ಇಲ್ಲೂ ಕೂಡ ಅಮರ-ಮಧುರ-ಪ್ರೇಮಕಾವ್ಯವಿರುತ್ತೆ.ಜೊತೆಗೆ ಇಲ್ಲಿವರೆಗೂ ಯಾರೂ ನೋಡಿರದ ಆಕ್ಷನ್‌ವೊಂದನ್ನು ಬಿಗ್‌ಸ್ಕ್ರೀನ್ ‌ನಲ್ಲಿ ತೋರಿಸುವುದಾಗಿ ತಿಳಿಸಿದ್ದಾರೆ. ‘ಬಂಧನ’ ದಲ್ಲಿದ್ದ ಸುಹಾಸಿನಿ ಮಣಿರತ್ನಂ ಹಾಗೂ ಜೈ ಜಗದೀಶ್ `ಬಂಧನ-2′ ಚಿತ್ರದಲ್ಲಿಯೂ ಇರಲಿದ್ದಾರೆ.

ಅಶೋಕ್ ಹೋಟೆಲ್‌ನಲ್ಲಿ ‘ಬಂಧನ'ಸಿನಿಮಾಗೆ ಮುಹೂರ್ತ ನಡೆಯುವಾಗ ನಂದಿನಿ ಪಾತ್ರಧಾರಿ ಸುಹಾಸಿನಿ ಡಾ.ಹರೀಶ್ ಪಾತ್ರಧಾರಿ ದಾದಾಗೆ ಕಪಾಳಮೋಕ್ಷ ಮಾಡುವ ದೃಶ್ಯ ಫಸ್ಟ್ ಶಾಟ್ ಆಗಿತ್ತು. ಈ ದೃಶ್ಯವನ್ನು ಹಾಗೂ ಆಕ್ಷನ್ ಕಟ್ ಹೇಳುತ್ತಿದ್ದ ತಂದೆ ರಾಜೇಂದ್ರ ಸಿಂಗ್ ಬಾಬು ಅವರನ್ನು ಮೂಲೆಯಲ್ಲಿ ನಿಂತು ನೋಡುತ್ತಿದ್ದ ಅಂದಿನ ಆರು ವರ್ಷದ ಆದಿತ್ಯ ಇವತ್ತು ಬಂಧನ-2 ಚಿತ್ರಕ್ಕೆ ಹೀರೋ.

ಹೌದು,ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ‘ಬಂಧನ-2’ ಸಿನಿಮಾಗೆ ಮಗನನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮಗನ ಇಮೇಜ್‌ನ ಬದಲಾಯಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೋ- ಇಲ್ಲವೋ ಗೊತ್ತಿಲ್ಲ. ಆದರೆ, ಆಕ್ಷನ್ ಹೀರೋ ಆಗಿ ಧಗಧಗಿಸುತ್ತಿದ್ದ ದಾದಾರನ್ನು ‘ಬಂಧನ'ಚಿತ್ರದಲ್ಲಿ ಅಮರ ಪ್ರೇಮಿಯಾಗಿಸಿ ಇಮೇಜ್‌ನ ಬದಲಾಯಿಸಿದರು.ಇದ್ರಿಂದ ವಿಷ್ಣುವರ್ಧನ್ ಲವ್ವರ್‌ಬಾಯ್ ಆಗಿಯೂ ಯಶಸ್ಸನ್ನು ಕಂಡರು.ಅದೇ ರೀತಿ ಡೆಡ್ಲಿಸೋಮ ಆದಿತ್ಯರ ಇಮೇಜ್ ಕೂಡ ‘ಬಂಧನ-2’ ಚಿತ್ರದಿಂದ ಬದಲಾಗುತ್ತಾ? ಮಾಸ್ ಆಡಿಯನ್ಸ್ ಗೆ ಕನೆಕ್ಟ್ ಆಗಿರುವ ಆದಿತ್ಯ, ಲವ್ವರ್‌ಬಾಯ್ ಆಗಿ ಕ್ಲಿಕ್ ಆಗ್ತಾರಾ ಕುತೂಹಲದಿಂದ ಕಾದು ನೋಡಬೇಕು.

ಸದ್ಯಕ್ಕೆ ‘ಬಂಧನ-2'ಚಿತ್ರದ ಮುಹೂರ್ತ ನೆರವೇರಿದೆ.ಮಾರ್ಚ್ ತಿಂಗಳಿಂದ ಚಿತ್ರೀಕರಣಕ್ಕೆ ಹೊರಡುವ‌ ಪ್ಲ್ಯಾನ್ ಚಿತ್ರತಂಡಕ್ಕಿದೆ.ಹಿಸ್ಟಿರಿ ರಿಪೀಟ್ ಮಾಡಬೇಕು ಎನ್ನುವ ಹುರುಪು ಇಡೀ ಸಿನಿಮಾ ತಂಡಕ್ಕಿದ್ದು,ಅಂಗಡಿ ಶಾಂತಪ್ಪನವರ ಕೈಯಲ್ಲಿ ಕಥೆ ಬರೆಸುತ್ತಿದ್ದಾರೆ.ಚಕ್ರವರ್ತಿ ಚಿಂತನ್ ‘ಬಂಧನ-2’ ಗೆ ಸಂಭಾಷಣೆ ಬರೆಯುತ್ತಿದ್ದಾರೆ.

ಧರ್ಮವಿಶ್ ಸಂಗೀತ ಸಂಯೋಜನೆ ಮಾಡುತ್ತಿದ್ದು ಒಟ್ಟು ಆರು ಹಾಡುಗಳು ಚಿತ್ರದಲ್ಲಿವೆ. ಅಣಜಿ ನಾಗರಾಜ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ತುಂಬಾ ವರ್ಷಗಳ ನಂತರ ಸಿನಿಮಾಟೋಗ್ರಫಿಗೆ ಮರಳಿರುವ ಅಣಜಿ ನಾಗರಾಜ್ ಅವರು `ಬಂಧನ-2′ ಗೆ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾವನ್ನು ಅದ್ದೂರಿಯಾಗಿ ತೆರೆ ಮೇಲೆ ತರಬೇಕು ಎನ್ನುವ ಕನಸು ಕಂಡಿದ್ದಾರೆ. ಸದ್ಯಕ್ಕಿಷ್ಟು ಮಾಹಿತಿ ಚಿತ್ರತಂಡ ಹಂಚಿಕೊಂಡಿದೆ. ತಾರಾಬಳಗ ಸೇರಿದಂತೆ ಇನ್ನಿತರ ಮಾಹಿತಿ ಮಾರ್ಚ್ ನಂತರವಷ್ಟೇ ಹೊರಬೀಳಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!